ಮಹಾತಪಸ್ವಿಯವರ ಮಹೋಪದೇಶಗಳು –೦೩ : “ತನುವಳಿದು ಮಹಾತನುವಾಗಬೇಕು,ಮನವಳಿದು ಘನಮನವಾಗಬೇಕು; ಭಾವವಳಿದು ನಿರ್ಭಾವವಾಗಬೇಕು : ಮುಕ್ಕಣ್ಣ ಕರಿಗಾರ

 

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಸಂತರು,ಶರಣರು,ಮಹಾಂತರು ಆಗುವ ಬಗೆ ಹೇಗೆ,ಪರಮಾತ್ಮನ ಸಾಕ್ಷಾತ್ಕಾರದ ಬೆಡಗು ಆವುದು ಎಂಬುದನ್ನು ಸೊಗಸಾಗಿ ವಿವರಿಸಿದ ಮಾತಿದು,ಮಹೋಪದೇಶವಿದು –” ತನುವಳಿದು ಮಹಾತನುವಾಗಬೇಕು,ಮನವಳಿದು ಘನಮನವಾಗಬೇಕು; ಭಾವವಳಿದು ನಿರ್ಭಾವವಾಗಬೇಕು”.ಕರಣೇಂದ್ರಿಯಗಳ ಗುಣಗಳನ್ನು ಅಲ್ಲಗಳೆದು ಇಲ್ಲವೆ ಕರಗಿಸಿಕೊಂಡು ಹರನ ಪಥದಿ ನಡೆಯುವವನೇ ಶರಣ ಅವನೇ ಮಹಾಂತ ಅವನೇ ಮೋಕ್ಷಕ್ಕೆ ಅಧಿಕಾರಿ ಎನ್ನುವುದು ಈ ಮಾತಿನ ಅರ್ಥ.ಮನುಷ್ಯರು ದೇಹ ಮನ ಮತ್ತು ಭಾವಗಳ ಬಂಧನಕ್ಕೆ ಸಿಲುಕಿ ಕೆಡುತ್ತಾರೆ.ಇವುಗಳನ್ನು ಮೀರಿನಿಂತರೆ ಅವರೇ ಬಂಧಮುಕ್ತರಾಗುತ್ತಾರೆ,ಮಹಾಂತರು ಆಗುತ್ತಾರೆ.

ತನು ಮನ ಮತ್ತು ಭಾವಗಳಿಗೆ ಸಂಸ್ಕಾರನೀಡುತ್ತ ನಾವು ಪರಮಾತ್ಮನ ಪಥದಲ್ಲಿ ನಡೆದು,ಯಶಸ್ಸನ್ನು ಸಂಪಾದಿಸಬಹುದು ಎನ್ನುವುದು ಗುರುಗಳ ಉಪದೇಶವಾಕ್ಕು.ನಾವು ಹುಟ್ಟಿದಾಗ ನಮಗೊಂದು ದೇಹ ಆ ದೇಹಕ್ಕೆ ಒಪ್ಪುವ ಮನಸ್ಸು ಮತ್ತು ಆ ದೇಹ ಮನಸ್ಸುಗಳೆರಡರನ್ನೂ ಪ್ರಚೋದಿಸಿ,ಪ್ರೇರೇಪಿಸಬಲ್ಲ ಭಾವ ನಮ್ಮೊಂದಿಗೆ ಬಂದಿರುತ್ತದೆ.ಮನುಷ್ಯರು ದೇಹದೌರ್ಬಲ್ಯವಶರಾಗಿ ಕೆಡುತ್ತಾರೆ,ಮನಸ್ಸಿನ ಆಧೀನರಾಗಿ ಮಂಗನಂತೆ ಎಗರಾಡುತ್ತಾರೆ,ಭಾವಾವೇಶಕ್ಕೆ ಒಳಗಾಗಿ ಆತಂಕಿತರಾಗುತ್ತಾರೆ.ಆದರೆ ದೇಹ,ಮನಸ್ಸು ಮತ್ತು ಭಾವಗಳನ್ನು ನಿರಾಕರಿಸಲಾಗದು ಇಲ್ಲವೆ ಬೇಡವೆಂದು ಸುಟ್ಟುಬಿಡಲಾಗದು.ಪರಮಾತ್ಮನು ಇಲ್ಲಿಯೇ ಇದ್ದಾನೆ,ಈ ದೇಹದಲ್ಲಿಯೇ ಇದ್ದಾನೆ.ದೇಹದೊಳಗಿನ ಪರಮಾತ್ಮನನ್ನು ಕಾಣಲು ದೇಹವನ್ನು ಶುದ್ಧೀಕರಿಸಿಕೊಳ್ಳಬೇಕು,ಮನಸ್ಸನ್ನು ತಿಳಿಗೊಳಿಸಿಕೊಳ್ಳಬೇಕು ಭಾವವನ್ನು ಅನುಭಾವವನ್ನಾಗಿಸಬೇಕು.ದೇಹ,ಮನಸ್ಸು ಮತ್ತು ಭಾವಗಳ ಅವಗುಣಗಳನ್ನು ಕಳೆದುಕೊಂಡು ಅವುಗಳಿಗೆ ಸಂಸ್ಕಾರನೀಡಿ,ಶುದ್ಧೀಕರಿಸಿಕೊಂಡು ನಡೆದರೆ ಸಿದ್ಧಿಪ್ರಾಪ್ತಿಯಾಗುತ್ತದೆ.ಶುದ್ಧಾತ್ಮರೇ ಸಿದ್ಧಾತ್ಮರು.ಸಿದ್ಧರಾಗಲು ನಾವು ಮೊದಲು ಶುದ್ಧರಾಗಬೇಕು.

‘ ತನುವಳಿದು ಮಹಾತನುವಾಗಬೇಕು’– ಎಂದರೆ ಈ ದೇಹದ ಅವಗುಣಗಳನ್ನು ಕಳೆದುಕೊಂಡು ಈ ದೇಹವನ್ನೇ ದಿವ್ಯದೇವಾಲಯವನ್ನಾಗಿ ಪರಿವರ್ತಿಸಿಕೊಳ್ಳಬೇಕು.ಈ ದೇಹವೇ ಮಹಾದೇವನ ಮನೆಯಾಗಬೇಕು.ಈ ದೇಹವೇ ವಿಶ್ವೇಶ್ವರ ಶಿವನ ಕ್ಷೇತ್ರವಾಗಬೇಕು.ರಕ್ತ,ಎಲುವು- ಮಾಂಸಗಳ ಮುದ್ದೆಯಾದ ಈ ದೇಹ ರಕ್ತ,ಮಾಂಸಗಳ ಗುಣ- ಸ್ವಭಾವಗಳಿಗನುಗುಣವಾಗಿಯೇ ವರ್ತಿಸುತ್ತದೆ.ರಾಗ- ದ್ವೇಷಗಳು,ಮೋಹ- ಮಮಕಾರಗಳು,ಎಳೆತ- ಸೆಳೆತಗಳು ರಕ್ತ ಮಾಂಸಗಳ ದೇಹವನ್ನುಳ್ಳ ಮನುಷ್ಯರ ಸಹಜ ದೌರ್ಬಲ್ಯಗಳು.ಈ ಅವಗುಣಗಳಿಂದಾಗಿ ಮನುಷ್ಯರು ಶವ ಆಗುತ್ತಾರೆ; ಈ ಅವಗುಣಗಳಿಂದ ಮುಕ್ತರಾದರೆ ‘ ಶಿವ’ ಆಗುತ್ತಾರೆ.ಅವಗುಣಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸಿಕೊಳ್ಳುವವನೇ ಧೀರ,ಮಹಾಂತ.ಅವಗುಣಗಳನ್ನು ಸುಟ್ಟುರುಹಿ ಗಟ್ಟಿಗೊಂಡವನೇ ಶಿವಯೋಗಿ,ಮಹಾಂತ.ಅವನೇ ಗುರು.ತನುವಳಿದು ಮಹಾತನುವಾದವನೇ ಗುರು.

‘ ಮನವಳಿದು ಘನಮನವಾಗಬೇಕು’– ಎಂದರೆ ಚಂಚಲವಾದ ಮನಸ್ಸನ್ನು ಸ್ಥಿರಗೊಳಿಸಿ,ಸ್ತಬ್ಧಗೊಳಿಸಿ ಮಹಾಮನವನ್ನಾಗಿ ಪರಿವರ್ತಿಸಿಕೊಳ್ಳಬೇಕು.ಮನಸ್ಸು ಚಂಚಲವಾದದ್ದು,ವಿಷಯಾಸಕ್ತವಾದುದು.ಒಂದು ವಿಷಯದಿಂದ ಮತ್ತು ವಿಷಯಕ್ಕೆ ಸದಾ ಓಡಾಡುತ್ತಲೇ ಇರುತ್ತದೆ.ಮನಸ್ಸಿನಿಂದಾಗಿಯೇ ನಾವು ಮನುಷ್ಯರಾಗಿದ್ದೇವೆ ಎನ್ನುವುದು ನಿಜವಾದರೂ ಈ ಮನಸ್ಸಿನ ಮಿತಿಯಿಂದಾಗಿಯೇ ನಾವು ಸಂಸಾರ ಬಂಧನದಲ್ಲಿ ಸಿಲುಕಿ ಪರಮಾತ್ಮನಿಂದ ದೂರವಾಗುತ್ತಿದ್ದೇವೆ.ಮನಸ್ಸು ವಿಷಯಸುಖಗಳತ್ತಲೇ ಹರಿಯುತ್ತಿದೆ.ಹೆಣ್ಣು,ಹೊನ್ನು,ಮಣ್ಣುಗಳ ಮಾಯಾ ಪ್ರಪಂಚದಲ್ಲಿಯೇ ಆಸಕ್ತವಾಗುವ ಮನಸ್ಸು ಮನುಷ್ಯರನ್ನು ಅಲ್ಲಿಯೇ ಬಂಧಿಗಳನ್ನಾಗಿಸುತ್ತದೆ.ಹೆಣ್ಣು,ಹೊನ್ನು,ಮಣ್ಣುಗಳು ಬೇಡವೆಂದಲ್ಲ,ಬೇಕು; ಆದರೆ ಅವುಗಳನ್ನು ಅನುಭವಿಸಿ ಹೊರಬರಬೇಕು,ಅವುಗಳಲ್ಲಿಯೇ ಸಿಕ್ಕುಬೀಳಬಾರದು.ಸಂಸಾರಬೇಕು, ಹೆಂಡತಿ ಇರಬೇಕು ಆದರೆ ಪರಸ್ತ್ರೀ ವ್ಯಾಮೋಹ ಸಲ್ಲದು,ಜೀವನ ನಿರ್ವಹಣೆಗೆ,ಮಡದಿ ಮಕ್ಕಳಿಗೆ ಸಾಕಾಗುವಷ್ಟು ಹೊನ್ನು ಇಲ್ಲವೆ ಸಂಪಾದನೆ ಮಾಡಬೇಕು; ಆದರೆ ತನ್ನ ಸಂಪಾದನೆಯ ನೆಪದಲ್ಲಿ ಇತರರ ಮನೆ- ಆಸ್ತಿಗಳನ್ನು ನುಂಗಬಾರದು,ನೂರಾರು ತಲೆಮಾರುಗಳಿಗೆ ಆಗುವಷ್ಟು ಸಂಪಾದಿಸುವ ದುರಾಶೆ ಸಲ್ಲದು.ಬದುಕಿಗೆ ಆಸರೆಯಾಗುವಷ್ಟು ಹೊಲ- ಮನೆ,ತೋಟ- ಗದ್ದೆಗಳಿರಲಿ; ಆದರೆ ನೂರಾರು,ಸಾವಿರಾರು ಎಕರೆಗಳಷ್ಟು ಭೂಮಿ ಸಂಪಾದಿಸಿ ಬಡವರ ಬದುಕುವ ಹಕ್ಕುಗಳ ಮೇಲೆ ಆಕ್ರಮಣ ಮಾಡಬಾರದು.ಹೆಣ್ಣು,ಹೊನ್ನು,ಮಣ್ಣುಗಳ ಬಳಕೆಯಲ್ಲಿ ಹಿತ- ಮಿತಗಳಿರಬೇಕು.ಅತಿಯಾಸೆ ಸಲ್ಲದು.ಎಷ್ಟುಬೇಕೋ ಅಷ್ಟನ್ನು ಇಟ್ಟುಕೊಂಡು ಮಿಕ್ಕುದುದನ್ನು ಇತರರಿಗೆ ದಾನ ಮಾಡಬೇಕು.ಅಲ್ಲಮಪ್ರಭುದೇವರು ಮಾಯೆಯ ನಿಜಸ್ವರೂಪವನ್ನು ಸೊಗಸಾಗಿ ಬಣ್ಣಿಸಿದ್ದಾರೆ ಒಂದು ವಚನದಲ್ಲಿ,

ಹೆಣ್ಣು ಮಾಯೆಯೆಂಬರು,ಹೆಣ್ಣು ಮಾಯೆಯಲ್ಲ
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ
ಮಣ್ಣು ಮಾಯೆಯೆಂಬರು,ಮಣ್ಣು ಮಾಯೆಯಲ್ಲ
ತನ್ನ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಹೆಣ್ಣು,ಹೊನ್ನು ಮತ್ತು ಮಣ್ಣುಗಳು ಮಾಯೆಯಲ್ಲ ,ಅವುಗಳಿಗೆ ಸಿಕ್ಕಿಬೀಳುವ ಮನಸ್ಸು ಇಲ್ಲವೆ ಮನೋಬಯಕೆಯೇ ಮಾಯೆ ಎನ್ನುವುದು ಅಲ್ಲಮಪ್ರಭುದೇವರ ಲೋಕೋಪದೇಶ.ಹೆಣ್ಣು,ಹೊನ್ನು ಮತ್ತು ಮಣ್ಣುಗಳು ನಮ್ಮ ಮನಸ್ಸನ್ನು ಕೋರೈಸಿ,ಕಾಡುವಂತಾಗಲು ಬಿಡದೆ ಅವುಗಳ ಇತಿ ಮಿತಿಗಳನ್ನರಿತು ಅವುಗಳಿಗೆ ಅಂಟಿಕೊಳ್ಳದೆ ಮುನ್ನಡೆಯುವವರೇ ಬಂಟರು,ಅವರೇ ಧೀರೋದಾತ್ತಯೋಗಿಗಳು.ಮನಸ್ಸು ಸ್ತಬ್ಧವಾದಡೆ,ಸ್ಥಿರವಾದಡೆ ಅದುವೇ ಲಿಂಗ.ಸ್ಥಿರಮನಸ್ಕರೇ ಲಿಂಗ,ಲಿಂಗದೇಹಿಗಳು.

‘ ಭಾವವಳಿದು ನಿರ್ಭಾವವಾಗಬೇಕು’– ಎಂದರೆ ಭಾವವನ್ನು ಮಹಾಭಾವವನ್ನಾಗಿ,ಅನುಭಾವವನ್ನಾಗಿ ಪರಿವರ್ತಿಸಿಕೊಂಡು ಭಾವಮುಕ್ತರಾಗಬೇಕು.ಭಾವದಿಂದಾಗಿಯೇ ಮನುಷ್ಯರು ಬಂಧನಕ್ಕೆ ಒಳಗಾಗುತ್ತಾರೆ.ಭಾವವು ರಕ್ತಗುಣ.ಭಾವದಿಂದಾಗಿಯೇ ಮಡದಿ- ಮಕ್ಕಳು, ಬಂಧು- ಬಾಂಧವರು,ಹತ್ತಿದವರು- ಹೊಂದಿದವರು,ಬೇಕಾದವರು – ಬೇಡವಾದವರು ಎನ್ನುವ ಸಂಬಂಧಗಳು ಉಂಟಾಗುವುದು.ಭಾವದಿಂದಾಗಿಯೇ ಸುಖ-ದುಃಖ,ನೋವು- ನಲಿವು,ಇಷ್ಟ- ಅನಿಷ್ಟಗಳು.ಸುಖವಾದಾಗ ಸಂತೋಷಿಸುತ್ತೇವೆ,ಕೆಟ್ಟದಾದಾಗ ದುಃಖಿಸುತ್ತೇವೆ.ಬೇಕಾದವರು ಬಂದರೆ ಸಂಭ್ರಮಿಸುತ್ತೇವೆ,ಬೇಡವಾದವರು ಬಂದರೆ ಮುಖ ಸಿಂಡರಿಸಿಕೊಳ್ಳುತ್ತೇವೆ.ಇದೆಲ್ಲ ‘ ಭಾವ’ ದಿಂದ ಹುಟ್ಟುವ ‘ ಭಾವಪ್ರಪಂಚ’. ವಾಸ್ತವವಾಗಿ ಇದು ಸತ್ಯವಲ್ಲ.ಹೆಂಡತಿ ಮಕ್ಕಳನ್ನು ಎಷ್ಟೇ ಪ್ರೀತಿಸಿದರೂ ಒಂದು ದಿನ ಸತ್ತು ಹೋಗುತ್ತೇವೆ.ನಮ್ಮೊಂದಿಗೆ ನಮ್ಮ ಇಷ್ಟದ ಮಡದಿ,ಪ್ರೀತಿ ಪಾತ್ರರಾದ ಮಕ್ಕಳು,ಆತ್ಮೀಯ ಸ್ನೇಹಿತರು ಸಾಯುವುದಿಲ್ಲ.ಇದೇ ಪ್ರಪಂಚ! ಸಂಸಾರದಲ್ಲಿ ಇರಬೇಕು ಆದರೆ ಸಂಸಾರಕ್ಕೆ ಸಿಕ್ಕಿ ಬೀಳಬಾರದು.ಹೆಂಡತಿ ಮಕ್ಕಳನ್ನು ಸಾಕಿ,ಸಲಹುವುದು,ಸಂಬಂಧಗಳನ್ನು ಪೋಷಿಸಿ,ಪೊರೆಯುವುದು ಸಂಸಾರಿಗಳ ಕರ್ತವ್ಯವಾದರೂ ಕೊನೆಗೊಂದುದಿನ ನಾನು ಇವರೆಲ್ಲರನ್ನು ಬಿಟ್ಟು ಒಬ್ಬನೇ ಹೋಗುತ್ತೇನೆ ಎನ್ನುವ ಅರಿವು ಇರಬೇಕು.ಈ ಒಂಟಿತನದ ಅರಿವಿದ್ದವರೇ ಪರಮಾತ್ಮನೊಂದಿಗೆ ಜಂಟಿಖಾತೆ ತೆರೆಯುತ್ತಾರೆ.ಜಗತ್ತಿನಲ್ಲಿ ಯಾರೂ ನಮ್ಮ ವೈರಿಗಳಿಲ್ಲ,ನಾವು ಹಾಗೆಂದು ಭಾವಿಸಿದ್ದೇವಷ್ಟೇ.ಈ ಸಂಕುಚಿತಭಾವ ಬದಲಾದರೆ ಜಗತ್ತೇ ಸುಂದರವಾಗಿ ಕಾಣಿಸುತ್ತದೆ,ನಂದನವನವಾಗಿ ಮಾರ್ಪಡುತ್ತದೆ.ಜಗತ್ತಿನಲ್ಲಿ ಸುಖ,ದುಃಖಗಳ ದ್ವಂದ್ವ ಇಲ್ಲ,ನಾವು ಹಾಗೆ ಭಾವಿಸುತ್ತೇವಷ್ಟೆ.ನಮ್ಮ ಭಾವವನ್ನು ಎತ್ತರಕ್ಕೇರಿಸಿಕೊಂಡು ಮಹಾಭಾವವನ್ನಾಗಿ ಪರಿವರ್ತಿಸಿಕೊಂಡರೆ ಮರ್ತ್ಯವೇ ಮಹಾದೇವನ ನೆಲೆಯಾಗಿ ಕಾಣಿಸುತ್ತದೆ.ಭಾವವನ್ನು ಅನುಭಾವವನ್ನಾಗಿ ಪರಿವರ್ತಿಸಿಕೊಳ್ಳಬೇಕು; ಅಲ್ಪಭಾವವನ್ನು ಸುಟ್ಟುರುಹಿಕೊಂಡು ನಿರ್ಭಾವದಲ್ಲಿ ನೆಲೆಯಾಗಬೇಕು.ಭಾವಮುಕ್ತರೇ ನಿರ್ಭಾವಿಗಳು; ಭವಮುಕ್ತರು.ಭಾವವನ್ನು ಅಲ್ಲಗಳೆದು ನಿರ್ಭಾವವನ್ನು ಅಳವಡಿಸಿಕೊಳ್ಳಬೇಕು.

ಭಾವ ಇರುವವರೆಗೆ ಭವ ಇರುತ್ತದೆ.ಭವ ಇರುವವರೆಗೆ ಅಭವಶಿವನ ದರ್ಶನ ಸಾಧ್ಯವಿಲ್ಲ.ಆದ್ದರಿಂದ ಭವಮುಕ್ತರಾಗಬೇಕು ಎಂದರೆ ಭಾವಮುಕ್ತರಾಗಬೇಕು.ಭಾವವನ್ನು ಸುಟ್ಟುಕೊಂಡು ಗಟ್ಟಿಗರಾಗಬೇಕು.ಭಾವವನ್ನು ಸುಟ್ಟುಕೊಂಡರೆ ಹರಿಯುತ್ತದೆ ಭವದ ಬಳ್ಳಿ.ಭವದ ತೊಡುಕಿಗೆ ಸಿಲುಕದವನೇ ಮುಕ್ತ.ಭಾವಸುಟ್ಟುಕೊಂಡು ನಿರ್ಭಾವಿಯಾದಾಗಲೇ ನಿತ್ಯನೂ ನಿರವಯವನೂ ನಿರಂಜನನೂ ನಿಶೂನ್ಯನೂ ಆದ ನಿರಾಕಾರಪರಬ್ರಹ್ಮ- ಪರಶಿವನನ್ನು ಕಾಣಲು ಸಾಧ್ಯ.ಭಾವರಹಿತ,ಭವವಿರಹಿತ ನಿರ್ಭಾವಿಯೇ ಜಂಗಮ.ಒಂದನ್ನು ಅಳಿದುಕೊಂಡು ಮತ್ತೊಂದನ್ನು ಕೂಡಿಕೊಳ್ಳುವ ಆತ್ಮನ ಈ ವಿಕಾಸವನ್ನು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಅರ್ಥವತ್ತಾಗಿ ಉಪದೇಶಿಸಿದ್ದಾರೆ –” ತನುವಳಿದು ಮಹಾತನುವಾದುದೇ ಗುರು.ಮನವಳಿದು ಘನಮನವಾದುದೇ ಲಿಂಗ.ಭಾವ ( ಪ್ರಾಣ) ವಳಿದು ನಿರ್ಭಾವ( ನಿಃಪ್ರಾಣ) ವಾದುದೇ ಜಂಗಮ.

28.05.2022

About The Author