ಮುಖ್ಯಮಂತ್ರಿ ಹುದ್ದೆಗೆ ತಕ್ಕುದಲ್ಲದ ಹಿಮವಂತ ಬಿಸ್ವಾ ಶರ್ಮಾ ಅವರ ಮಾತುಗಳು

ಮೂರನೇ ಕಣ್ಣು

ಮುಖ್ಯಮಂತ್ರಿ ಹುದ್ದೆಗೆ ತಕ್ಕುದಲ್ಲದ ಹಿಮವಂತ ಬಿಸ್ವಾ ಶರ್ಮಾ ಅವರ ಮಾತುಗಳು

   ಮುಕ್ಕಣ್ಣ ಕರಿಗಾರ

 

ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವ ಶರ್ಮಾ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ ಟಿ ಬಿ ಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಕೆಟ್ಟ ಪದಗಳನ್ನು ಬಳಸುವ ಮೂಲಕ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ.ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಂದು ರಾಜ್ಯದ ಜಬ್ದಾರಿಯುತ ಸಂಪುಟ ಸಚಿವರ ಬಗ್ಗೆ ಮಾತನಾಡುವಾಗ ಸಂಸದೀಯ ಎಲ್ಲೆಗಳನ್ನು ಮೀರಬಾರದು ಎನ್ನುವ ಕನಿಷ್ಟ ಸೌಜನ್ಯವೂ ಹಿಮವಂತ ಬಿಸ್ವಾ ಶರ್ಮಾ ಅವರಿಗೆ ಇಲ್ಲದೆ ಇರುವುದು ಬೇಸರದ ಸಂಗತಿ.ಪ್ರಿಯಾಂಕ್ ಖರ್ಗೆಯವರು ಅಸ್ಸಾಮಿನ ಯುವಕರಿಗೆ ಅವಮಾನಿಸಿದ್ದಾರೆ ಎಂದು ಅರ್ಥೈಸುವ ಹಿಮವಂತ ಬಿಸ್ವಾ ಶರ್ಮಾ ಅವರು ಸಂಸದೀಯ ಮೌಲ್ಯಗಳನ್ನು ಧಿಕ್ಕರಿಸಿದ್ದಾರೆ,ಜಬಾಬ್ದಾರಿಯುತ ಜನಪ್ರತಿನಿಧಿಗಳು ನಡೆದುಕೊಳ್ಳಬಾರದ ರೀತಿಯಲ್ಲಿ ಮಾತನಾಡಿದ್ದಾರೆ.

 

ರಾಜ್ಯದ ಐ ಟಿ ಬಿ ಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಆಡಿದ ಮಾತಿನಲ್ಲಿ ಏನಾದರೂ ಆಕ್ಷೇಪಾರ್ಹ ಸಂಗತಿಗಳು ಇದ್ದರೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಪ್ರಿಯಾಂಕ್ ಖರ್ಗೆಯವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿ ವಿವರಣೆ ಕೇಳಬಹುದಿತ್ತು ಅಥವಾ ಹೀಗೆ ಮಾತನಾಡುವುದು ಸರಿಯಲ್ಲ ಎನ್ನಬಹುದಿತ್ತು.ಅದನ್ನು ಬಿಟ್ಟು ‘ ಪ್ರಿಯಾಂಕ್ ಖರ್ಗೆ ಒಬ್ಬ ಫಸ್ಟ್ ಕ್ಲಾಸ್ ಇಡಿಯಟ್’ ಎಂದು ಮಾತನಾಡಿರುವುದು ಅವರ ವ್ಯಕ್ತಿತ್ವದ ಒರಟುತನಕ್ಕೆ,ಅಸಂಸ್ಕೃತ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ.ಪ್ರಿಯಾಂಕ್ ಖರ್ಗೆಯವರ ಬಗ್ಗೆ ಕೇಸ್ ದಾಖಲಿಸಲು ಆಲೋಚಿಸುವ ಹಿಮವಂತ ಬಿಸ್ವಾ ಶರ್ಮ ಅವರಾಡಿದ ಮಾತುಗಳ ವಿರುದ್ಧವೇ ಪ್ರಿಯಾಂಕ್ ಖರ್ಗೆಯವರು ಕೇಸ್ ದಾಖಲಿಸಬಹುದು ಎನ್ನುವ ಪ್ರಜ್ಞೆ ಇದ್ದಂತೆ ಇಲ್ಲ.ಕರ್ನಾಟಕ ರಾಜ್ಯದ ಜವಾಬ್ದಾರಿಯುತ ಮಂತ್ರಿಯಾದ ತಮ್ಮ ಹುದ್ದೆಯನ್ನು ಅವಹೇಳನ ಮಾಡಿ ಹಿಮಂತ್ ಬಿಸ್ವ ಶರ್ಮಾ ಮಾತನಾಡಿದ್ದಾರೆ ಎಂದು ‌ಪ್ರಿಯಾಂಕ್ ಖರ್ಗೆಯವರು ಪೋಲಿಸ್ ಕೇಸು ದಾಖಲಿಸಬಹುದು.ಮಾನನಷ್ಟ ಮೊಕದ್ದಮೆ ಹೂಡಬಹುದು,ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಲೂ ಬಹುದು.ಇದಲ್ಲದೆ ಅವರಿಗೆ ಕಾನೂನಿನ ಹಲವು ರಕ್ಷಣೆಗಳಿವೆ.

 

ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅವಕಾಶಕೊಡದೆ ಇರುವ ಕಾರಣಕ್ಕೆ ಮತ್ತು ಆರ್ ಎಸ್ ಎಸ್ ನ ಚಟುವಟಿಕೆಗಳನ್ನು ಸರಕಾರಿ ಶಾಲೆ ಕಾಲೇಜುಗಳಲ್ಲಿ ಕೈಗೊಳ್ಳದೆ ಇರುವಂತೆ ನಿರ್ಬಂಧಿಸಲು ಕೋರಿ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ‌ ಪತ್ರ ಬರೆದದ್ದನ್ನು ದೊಡ್ಡ ಸಂಗತಿ ಮಾಡಿಕೊಂಡು ಕೆಲವರು ಪ್ರಿಯಾಂಕ್ ಖರ್ಗೆಯವರ ವಿರುದ್ಧ ಅವಹೇಳನಕಾರಿ ಮಾತನಾಡುತ್ತಿದ್ದಾರೆ.ಪ್ರಿಯಾಂಕ್ ಖರ್ಗೆಯವರು ರಾಜ್ಯದ ಕಾನೂನಿನಂತೆ ಕ್ರಮವಹಿಸಲು ಮುಖ್ಯಮಂತ್ರಿಯವರನ್ನು ಕೋರಿದ್ದಾರೆಯೇ ಹೊರತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ.ಅಲ್ಲದೆ ಪ್ರಿಯಾಂಕ್ ಖರ್ಗೆಯವರು ಎತ್ತಿರುವುದು ಸೈದ್ಧಾಂತಿಕ ಭಿನ್ನಾಭಿಪ್ರಾಯದ ವಿಷಯವೇ ಹೊರತು ಯಾವುದೇ ಸಂಘಟನೆಯ ವಿರುದ್ಧವಾದ ವೈಯಕ್ತಿಕ ದ್ವೇಷವಲ್ಲ.ಪ್ರಿಯಾಂಕ್ ಖರ್ಗೆಯವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವುದು ಸನ್ನಡತೆಯಲ್ಲ.

 

ಪ್ರಿಯಾಂಕ್ ಖರ್ಗೆಯವರು ಐ ಟಿ ಬಿ ಟಿ ಸಚಿವರಾಗಿ ವಿಶ್ವದ ಗಮನಸೆಳೆದಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಗ್ರಾಮೀಣಾಭಿವೃದ್ಧಿಯಲ್ಲಿ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಚಿವಸಂಪುಟದ ಸಮರ್ಥ ಮತ್ತು ಕ್ರಿಯಾಶೀಲ ಸಚಿವರಲ್ಲಿ ಒಬ್ಬರಾಗಿದ್ದಾರೆ.ಸಿದ್ಧರಾಮಯ್ಯನವರ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತ ಆಗಾಗ ಪ್ರಿಯಾಂಕ್ ಖರ್ಗೆಯವರು ಆಡುತ್ತಿರುವ ಮಾತುಗಳನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪ್ರಿಯಾಂಕ್ ಖರ್ಗೆಯವರ ಮಾತುಗಳಲ್ಲಿ ಆವೇಶ ಇರಬಹುದೇ ಹೊರತು ಆಕ್ಷೇಪಾರ್ಹ ಸಂಗತಿಗಳು ಯಾವುದೂ ಇರುವುದಿಲ್ಲ.ಅಲ್ಲದೆ ಪ್ರಿಯಾಂಕ್ ಖರ್ಗೆಯವರು ತಮ್ಮ ನಡೆ ನುಡಿಗಳಲ್ಲಿ ಸಂವಿಧಾನದ ಬದ್ಧತೆಯನ್ನು ಎತ್ತಿ ಹಿಡಿಯುತ್ತಿದ್ದಾರೆ.ಸಂವಿಧಾನಕ್ಕೆ ಬದ್ಧರಾಗಿರುವ ಪ್ರಿಯಾಂಕ್ ಖರ್ಗೆಯವರು ಆ ವಿಷಯದಲ್ಲಿ ‌ಇತರರಿಗೆ ಆದರ್ಶರಾಗಿದ್ದಾರೆ.ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿ ರಾಜಕೀಯ ಪದವಿಗಳನ್ನು ಅಲಂಕರಿಸಿ,ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುವ ರಾಜಕಾರಣಿಗಳಿಗೆ ಪ್ರಿಯಾಂಕ್ ಖರ್ಗೆಯವರ ಸಂವಿಧಾನ ಬದ್ಧತೆಯ ರಾಜಕೀಯ ಜೀವನ ಇಷ್ಟವಾಗುವುದಿಲ್ಲ. ಸಂವಿಧಾನ ವಿರೋಧಿ ಮನಸ್ಸುಗಳು ಆಗಾಗ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿವೆ.

 

ಇತರ ಜನರನ್ನು ‘ ಅವಿವೇಕಿಗಳು’ ಎಂದು ಬಗೆದು ಸುಮ್ಮನಾಗಬಹುದು.ಆದರೆ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿ ಹಿಮಂತ್ ಬಿಸ್ವ ಶರ್ಮಾ ಆಡಿದ ಮಾತುಗಳು ತೀವ್ರ ಖಂಡನಾರ್ಹ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಮಾತನಾಡಿ ಅವರ ಮಾತುಗಳನ್ನು ಖಂಡಿಸಬೇಕು.ಜೊತೆಗೆ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ‌ಪತ್ರ ಬರೆದು ಅಸ್ಸಾಂ ಮುಖ್ಯಮಂತ್ರಿಯವರ ಅಸಂಸದೀಯ ನಡುವಳಿಯ ಬಗ್ಗೆ ಆಕ್ಷೇಪಿಸಬೇಕು.ರಾಜ್ಯದ ಸಚಿವ ಸಂಪುಟ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿಯವರ ಪದಬಳಕೆಯನ್ನು ಖಂಡಿಸಿ ನಿರ್ಣಯ ಒಂದನ್ನು ಅಂಗೀಕರಿಸಬೇಕು.ದಲಿತ ಸಮುದಾಯದಿಂದ ಬಂದಿರುವ ಪ್ರಿಯಾಂಕ್ ಖರ್ಗೆಯವರನ್ನು ಬೆಂಬಲಿಸಿ ಇಂತಹ ಕಾರ್ಯಗಳನ್ನು ಮಾಡುವುದು ಅಹಿಂದ ವರ್ಗಗಳ ಹಿತರಕ್ಷಕರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರದ ತುರ್ತು ಕರ್ತವ್ಯ.

 

 

೨೯.೧೦.೨೦೨೫