ಚಿಂತನೆ
ಆತ್ಮಜ್ಯೋತಿಯ ಪ್ರಜ್ವಲನವೇ ನಿಜವಾದ ದೀಪಾವಳ ಮುಕ್ಕಣ್ಣ ಕರಿಗಾರ
ಬೆಳಕಿನ ಹಬ್ಬ ದೀಪಾವಳಿಯು ಭಾರತದಾದ್ಯಂತ ಆಚರಿಸುವ ಭಾರತೀಯ ಸಂಸ್ಕೃತಿಯ ಸತ್ತ್ವ ತತ್ತ್ವಗಳನ್ನು ಬಿತ್ತರಿಸುವ ಹಬ್ಬ.ಭಾರತದ ಹಬ್ಬಗಳ ಹಿಂದೆ ಒಂದು ತತ್ತ್ವ ಇರುತ್ತದೆ,ಒಂದು ದರ್ಶನ ಇರುತ್ತದೆ.ಆದರೆ ಆಚರಣೆಗೆ ಬಂದಾಗ ತತ್ತ್ವ ಮರೆಯಾಗಿ ಸಂಪ್ರದಾಯ ಮಹತ್ವ ಪಡೆಯುತ್ತದೆ.ದೀಪಾವಳಿಯು ರಂಜನೆಗಾಗಿ ಆಚರಿಸುವ ಹಬ್ಬವಲ್ಲ,ಅದು ಆತ್ಮೋದ್ದೀಪಕ ಹಬ್ಬ.ಜನಸಾಮಾನ್ಯರಿಗೆ ಅಧ್ಯಾತ್ಮಿಕ ಪಥದಲ್ಲಿ ಆಸಕ್ತಿ ಇರುವುದಿಲ್ಲವಾದ್ದರಿಂದ ಅವರು ಹೊರಗಣ ಬೆಳಕಿನ ಆನಂದದಲ್ಲಷ್ಟೇ ಸಂಭ್ರಮಿಸುತ್ತಾರೆ.ಶಾಸ್ತ್ರಿ ಪುರಾಣಿಕರು ಸಹ ಕಟ್ಟಿದ ಕಥೆಗಳನ್ನು ಒಣಗುಟ್ಟಿಯೇ ಸಾರ್ಥಕತೆ ಕಾಣುತ್ತಾರೆ.
ದಟ್ಟಕತ್ತಲೆಯ ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿಯನ್ನು ಕೆಲವರು ಐದು ದಿನಗಳ ಕಾಲ ಆಚರಿಸಿದರೆ ಮತ್ತೆ ಕೆಲವರು ಮೂರು ದಿನಗಳ ಕಾಲ ಆಚರಿಸುತ್ತಾರೆ.ಬಲಿಪಾಡ್ಯದ ಒಂದು ದಿನ ಮಾತ್ರ ದೀಪಾವಳಿಯನ್ನು ಆಚರಿಸುವವರೂ ಇದ್ದಾರೆ.ಹಿಂದೆ ಬಲಿಪಾಡ್ಯದಂದು ಮಾತ್ರ ದೀಪಾವಳಿ ಹಬ್ಬ ಆಚರಿಸುತ್ತಿದ್ದರು. ಧನತ್ರಯೋದಶಿ,ನರಕ ಚತುರ್ದಶಿಗಳು ಈಗೀಗ ದೀಪಾವಳಿಯ ಭಾಗವಾಗಿ ಸೇರಿಕೊಂಡಿವೆ.ಶಿವರಾತ್ರಿ,ಯುಗಾದಿಗಳಂತೆ ದೀಪಾವಳಿಯು ಒಂದೇ ದಿನ ಆಚರಿಸಬೇಕಾದ ಸಾಂಸ್ಕೃತಿಕ ಉತ್ಸವ,ಅಧ್ಯಾತ್ಮಿಕ ಹಬ್ಬ.ಶರನ್ನವರಾತ್ರಿಯ ದಿನಗಳಲ್ಲಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿಯರ ರೂಪದಲ್ಲಿ ಪೂಜೆಗೊಳ್ಳುವ ದುರ್ಗಾದೇವಿಯು ದೀಪಾವಳಿಯಲ್ಲಿ ಮಹಾಲಕ್ಷ್ಮಿ ರೂಪದಲ್ಲಿ ಪೂಜೆಗೊಳ್ಳುತ್ತಾಳೆ.ದೀಪಾವಳಿಯು ಲಕ್ಷ್ಮೀ ಪೂಜೆಯ ಹಬ್ಬ.ಲಕ್ಷ್ಮೀ ಎಂದರೆ ಆಕೆ ಕೇವಲ ಸಂಪತ್ತಿನ ದೇವಿ ಮಾತ್ರವಲ್ಲ, ಮೋಕ್ಷಕಾರಕಳಾದ ‘ಪರಶಿವಮಯಿ’ ಯಾದ ಪರಾಶಕ್ತಿಯೂ ಹೌದು.
ಋಗ್ವೇದದ ಖಿಲಭಾಗವಾದ ಶ್ರೀಸೂಕ್ತದಲ್ಲಿ ಲಕ್ಷ್ಮೀದೇವಿಯ ಪರಾಶಕ್ತಿ,ಪರಾಮಾತೆಯ ದರ್ಶನವಿದೆ.ಋಗ್ವೇದದಲ್ಲಿ ಇದ್ದದ್ದು ಹದಿಮೂರು ಋಕ್ಕುಗಳ ಶ್ರೀಸೂಕ್ತ.ನಂತರ ವಿಷ್ಣುಭಕ್ತರುಗಳು ಆಕೆಯನ್ನು ವಿಷ್ಣುಪತ್ನಿಯಾಗಿಸಿ,ವಿಷ್ಣುವಿನ ದಾಸಿಯನ್ನಾಗಿಸಿ ಇತರ ಋಕ್ಕುಗಳನ್ನು ಸೇರಿಸಿದ್ದಾರೆ. ಲಕ್ಷ್ಮೀ ಗಾಯತ್ರಿ ಮಂತ್ರವು ಸಹ ಮೂಲತಃ ಅವಳು ಪರಾಶಕ್ತಿಯು,ಪರಬ್ರಹ್ಮೆಯು ಎನ್ನುವುದನ್ನು ಸಾರುತ್ತದೆ.
ಓಂ ಮಹಾಲಕ್ಷ್ಯೈ ಚ ವಿದ್ಮಹೇ
ವಿಷ್ಣು ಪತ್ನೈ ಚ ಧೀಮಹಿ
ತನ್ನೋ ಲಕ್ಷ್ಮೀ ಪ್ರಚೋದಯಾತ್
ಎನ್ನುವ ಲಕ್ಷ್ಮೀ ಗಾಯತ್ರಿ ಮಂತ್ರದಲ್ಲಿ ಲಕ್ಷ್ಮೀಯು ಮೂಲತಃ ಮಹತ್ ತತ್ತ್ವವನ್ನು ಒಳಕೊಂಡ ಮಹಾಲಕ್ಷ್ಮಿಯು,ಮಹಾದೇವಿಯು.ಅವಳು ಜಗದಹಿತಾರ್ಥವಾಗಿ ವಿಷ್ಣು ಪತ್ನಿಯಾಗುತ್ತಾಳೆ,ತನ್ನಲ್ಲಿ ಆಶ್ರಿತರಾದರವರಿಗೆ ಸಂಪತ್ತನ್ನು ಕರುಣಿಸಲು ಲಕ್ಷ್ಮೀಯಾಗುತ್ತಾಳೆ.ನಾವು ಆರಾಧಿಸಬೇಕಾದುದು ಮೋಕ್ಷಕಾರಕಳಾದ ಪರಾಶಕ್ತಿ ಮಹಾಲಕ್ಷ್ಮಿಯನ್ನು,ವಿಷ್ಣುವಿನ ಪಾದಗಳನ್ನು ಒತ್ತುವ ವಿಷ್ಣುದಾಸಿ ಲಕ್ಷ್ಮೀಯನ್ನಲ್ಲ !
ಲಕ್ಷ್ಮೀ ದೇವಿಯು ಸ್ವಾಭಿಮಾನಕ್ಕೆ ಹೆಸರಾದ ದೇವಿಯು.ಪುರಾಣಗಳಲ್ಲಿ ಬಣ್ಣಿಸಲ್ಪಟ್ಟಂತೆ ಅಹಂಕಾರಮತ್ತನಾದ ಭೃಗು ಮಹರ್ಷಿಯು ವಿಷ್ಣುವಿನ ಎದೆಗೆ ಒದ್ದಾಗ ವಿಷ್ಣುವು ಭೃಗುವನ್ನು ನಿಗ್ರಹಿಸಲಿಲ್ಲ ಎನ್ನುವ ಕಾರಣದಿಂದ ಅವಳು ವೈಕುಂಠವನ್ನು ತ್ಯಜಿಸಿ ಭೂಲೋಕಕ್ಕೆ ಬರುತ್ತಾಳೆ.ವಿಷ್ಣುವಿನ ಎದೆಯು ಲಕ್ಷ್ಮೀ ದೇವಿಯ ವಾಸಸ್ಥಾನವಾದ್ದರಿಂದ ಭೃಗುವು ವಿಷ್ಣುವಿನ ಎದೆಗೆ ಒದೆಯುವ ಮೂಲಕ ತನಗೆ ಅವಮಾನ ಮಾಡಿದ ಎಂದು ಭಾವಿಸುವ ಲಕ್ಷ್ಮೀ ದೇವಿಯು ತನಗಾದ ಅವಮಾನಕ್ಕೆ ಪ್ರತೀಕಾರ ತೆಗೆದುಕೊಳ್ಳದ ತನ್ನ ಪತಿ ವೈಕುಂಠಾಧಿಪತಿ ವಿಷ್ಣುವನ್ನು ತ್ಯಜಿಸಿ ಭೂಲೋಕಕ್ಕೆ ಬರುತ್ತಾಳೆ.ವಿಷ್ಣು ಹೃದಯನಿವಾವಾಸಿಯಾದ ಲಕ್ಷ್ಮೀ ತತ್ತ್ವವನ್ನು ಅರ್ಥಮಾಡಿಕೊಳ್ಳದ ಅಲ್ಪಮತಿಗಳು ಅವಳನ್ನು ಸದಾ ವಿಷ್ಣುವಿನ ಪಾದಗಳನ್ನು ಒತ್ತುವ ವಿಷ್ಣುದಾಸಿಯನ್ನಾಗಿ ಚಿತ್ರಿಸುತ್ತಾರೆ! ಪುರುಷಪ್ರಧಾನ ಸಮಾಜವನ್ನು ಪ್ರತಿಷ್ಠಾಪಿಸ ಬಯಸಿದವರ ವಿಕೃತ ಆಲೋಚನೆ ಇದು.ಲಕ್ಷ್ಮೀ ಇಲ್ಲದೆ ವಿಷ್ಣುವಿನ ವೈಕುಂಠವು ಬಣಗುಟ್ಟುತ್ತದೆ,ಬರಿದಾಗುತ್ತದೆ.ಲಕ್ಷ್ಮೀದೇವಿಯನ್ನು ಹುಡುಕಿಕೊಂಡು ವಿಷ್ಣುವು ಭೂಲೋಕಕ್ಕೆ ಬರುತ್ತಾನೆ.ಸ್ವಾಭಿಮಾನದ ಸಂಕೇತವಾದ ಲಕ್ಷ್ಮೀಯನ್ನು ಆರಾಧಿಸಬೇಕು ಅನುಭಾವಿಗಳು ,ದಾಸಿ ಲಕ್ಷ್ಮಿಯನ್ನಲ್ಲ.
‘ ಶ್ರೀಂ’ ಕಾರವು ಲಕ್ಷ್ಮೀ ದೇವಿಯ ಬೀಜಾಕ್ಷರವಾಗಿದ್ದು ಸದಾ ಇದನ್ನು ಜಪಿಸುತ್ತಿದ್ದರೆ ದಾರಿದ್ರ್ಯದಿಂದ ಮುಕ್ತರಾಗಬಹುದು.ದಾರಿದ್ರ್ಯ ಎಂದರೆ ಕೇವಲ ಧನ ಕನಕಗಳ ಕೊರತೆಯಾದ ಭೌತಿಕ ದಾರಿದ್ರ್ಯವಲ್ಲ; ಅಧ್ಯಾತ್ಮಿಕ ಪಥದಲ್ಲಿ ಸೋಲಲು ಕಾರಣವಾಗುವ ಅವಗುಣಗಳೇ ಆತ್ಮದಾರಿದ್ರ್ಯ.ಆತ್ಮದಾರಿದ್ರ್ಯದಿಂದ ಮುಕ್ತರನ್ನಾಗಿಸಿ ಮೋಕ್ಷ ಪಥದತ್ತ ಕರೆದೊಯ್ಯುತ್ತಾಳೆ ಮೋಕ್ಷಲಕ್ಷ್ಮಿಯು.ಅಜ್ಞಾನ,ಅಂಧಕಾರ,ಆಲಸ್ಯ,ಅವಿಚಾರಗಳು ಆತ್ಮಪಥದಿಂದ ಸಾಧಕರುಗಳನ್ನು ವಿಮುಖರನ್ನಾಗಿಸುತ್ತವೆ.ಸಾಧಕರುಲಕ್ಷ್ಮೀದೇವಿಯ ಉಪಾಸನೆ ಮಾಡುತ್ತ ತಮ್ಮೊಳಗಣ ದೀಪ ಪ್ರಜ್ವಲಿಸಿಕೊಳ್ಳಬೇಕು.ಮನೆಯಂಗಳದಲ್ಲಿ ಹೊತ್ತಿಸುವ ಸಾಲು ದೀಪಗಳು ಹೊರಗಣ ಕತ್ತಲೆಯನ್ನು ಕಳೆದು ಬೆಳಕು,ಸೌಂದರ್ಯ,ಸೊಬಗನ್ನು ಉಂಟು ಮಾಡಬಹುದು.ಆದರೆ ಸಾಧಕರು ಕಳೆದುಕೊಳ್ಳಬೇಕಾದುದು ತಮ್ಮೊಳಗಣ ಕತ್ತಲೆಯನ್ನು. ಆತ್ಮಜ್ಯೋತಿಸ್ವರೂಪಳಾದ ಮಹಾಲಕ್ಷ್ಮಿಯ ಸಾಕ್ಷಾತ್ಕಾರ ಅಂತರಂಗದಲ್ಲಿ ಆಗುವ ಅನುಭೂತಿ.ಬಹಿರಂಗದ ಅರ್ಚನೆ ಆರಾಧನೆಗಳು ಶುಷ್ಕ ಆಚರಣೆಯಷ್ಟೆ.
‘ ವಂದೇ ಪರಶಿವಮಯಿಂ’ ಎಂದು ಲಕ್ಷ್ಮೀಯನ್ನು ಸ್ತುತಿಸಲಾಗುತ್ತದೆ.ಪರಶಿವಮಯಿಯಾದ ಪರಾಶಕ್ತಿ ಲಕ್ಷ್ಮೀ ದೇವಿಯು ಸಹಸ್ರಾರದಲ್ಲಿ ನೆಲೆಗೊಂಡಿರುವಳು.ಸಹಸ್ರದೀಪಗಳನ್ನು ಹೊತ್ತಿಸುವ ಮೂಲಕ ಸಹಸ್ರಾರ ಕಮಲದಲ್ಲಿ ಪವಡಿಸಿರ್ಪ ಪರಶಿವಮಯಿ ಮಹಾಲಕ್ಷ್ಮಿಯ ದರ್ಶನ ಪಡೆಯಬೇಕು.ಶ್ರೀಸೂಕ್ತವು ಸಹಸ್ರದೀಪಗಳನ್ನು ಉದ್ದೀಪನಗೊಳಿಸುವ ಮಹಾಸಾಧನ.ಲಕ್ಷ್ಮೀ ಸಹಸ್ರನಾಮ ಪಠಣೆಯಿಂದಲೂ ಸಹಸ್ರ ಬೆಳಕಿನಕಮಲದಳಗಳನ್ನು ಅರಳಿಸಬಹುದು.ಸಹಸ್ರಪ್ರಭಾಪುಂಜಗಳು ಅರಳಿದಾಗ ಸಾಧಕನು ಸ್ವಯಂ ಲಕ್ಷ್ಮೀ ಸ್ವರೂಪನಾಗುತ್ತಾನೆ,ಪರಬ್ರಹ್ಮೆಯ ಸ್ವರೂಪವನ್ನೈದುತ್ತಾನೆ.ಇದು ಲಕ್ಷ್ಮೀ ದೇವಿಯ ನಿಜ ಉಪಾಸನೆ,ಬೆಳಕಿನನಿಜ ಆರಾಧನೆ.
೨೦.೧೦.೨೦೨೫