ಮರಿಗೌಡ, ಜನರ ಹೃದಯದಲ್ಲಿ ಹಾಡಾಗಿ ಅಜರಾಮರ

ಲೇಖನ :: ಸೋಮಶೇಖರ ಕಿಲಾರಿ

ಇಷ್ಟು ಬೇಗ… ! ಮರಿಗೌಡ ಎಂಬ ಮಹಾನ್ ಶಕ್ತಿ ಮರೆಯಾಗಿ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ನಾಡು ‘ಮಹಾ ಶೂನ್ಯ’ ಅನುಭವಿಸಿದೆ. ಎಲ್ಲರ ನಿತ್ಯದ ಸುಖದುಃಖಕ್ಕೆ ಮಿಡಿಯುತ್ತಿದ್ದ ಕರುಣಾಮಯಿ. ಬದುಕಿದ್ದ ಆರು ದಶಕ ಶಿಖರದಂತೆ ಸಂತೋಷ ನೀಡಿದರು ಈ ನಾಡಿಗೆ. ನೊಂದ ಜೀವಗಳಿಗೆ ನೆರಳಾಗಿದ್ದರು, ಆಸರೆ ಹುಡುಕುವವರಿಗೆ ಊರುಗೋಲಾಗಿದ್ದರು, ವಿದ್ಯಾರ್ಥಿಗಳಿಗೆ ಮಿತ್ರರಾಗಿದ್ದರು, ರೈತರಿಗೆ ಬಂಧುವಾಗಿದ್ದರು, ಬೆಳೆಯುವ ಹಂಬಲವುಳ್ಳ ಛಲಗಾರರಿಗೆ ಏಣಿಯಾಗಿದ್ದರು, ರಾಜಕೀಯ ಮಹತ್ವಕಾಂಕ್ಷಿಗಳಿಗೆ ವೋಟ್ ಬ್ಯಾಂಕಿನ ತಿಜೋರಿಯಾಗಿದ್ದರು… ಏನೆಲ್ಲ ತ್ಯಾಗ ಆ ನಿಸ್ವಾರ್ಥಿ ನಾಯಕನದ್ದು?

ಮನೆಮಂದಿಯನ್ನು ಮರೆತು ಸಮಾಜದ ಒಳಿತಿಗಾಗಿ ದುಡಿದರು. ಇದೇ ಕಾರಣಕ್ಕೆ ಅವರಿಲ್ಲದ ಈ ಒಂದು ವರ್ಷ ನಮ್ಮನ್ನು ಕಾಡಿದ್ದು ಶೂನ್ಯ ಭಾವ.ಅದು ಎಂಬತ್ತರ ದಶಕದ ಮಾತು. ಅದೇ ತಾನೆ ಡಿಗ್ರಿ ಮುಗಿಸಿದ್ದರು ಮರಿಗೌಡರು. ದುಡ್ಡಿರದ ಬಡ ಗೌಡರ ಮನೆಯ ಕನಸುಗಾರ.ಓದು ಸಾಕೆನಿಸಿತು. ರಾಜಕೀಯ ಕೈಬೀಸಿ ಕರೆಯಿತು. ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ರಾಮ ಮನೋಹರ್ ಲೋಹಿಯಾ ಅವರಂಥ ಮಹನೀಯರ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅಂದಿನ ಹರೆಯದ ಮರಿಗೌಡರಿಗೆ ತಾನಂದುಕೊಂಡದ್ದನ್ನು ಸಾಧಿಸಲು ರಾಜಕೀಯ ಸರಿಯಾದ ಅಖಾಡ ಎನ್ನಿಸಿತು. ಅದೇ ಹೊತ್ತಿಗೆ ತಾಲೂಕಿನಲ್ಲಿ ಹೊಸ ವಿಚಾರಧಾರೆಯೊಂದಿಗೆ ಬಾಪುಗೌಡರು ರಾಜಕೀಯ ಪಾರಮ್ಯ ಸಾಧಿಸಿದ್ದರು. ಅದು ಜನತಾ ಪಕ್ಷದ ಅಬ್ಬರದ ಕಾಲಘಟ್ಟ. ಆಗ ಅದನ್ನೇ ತಮ್ಮರಾಜಕೀಯ ಪ್ರವೇಶಕ್ಕೆ ಆಯ್ದುಕೊಂಡರು ಮರಿಗೌಡರು. ಬಾಪುಗೌಡರ ಪಾಲಿಟಿಕಲ್ ಫಿಲಾಸಫಿ ಇಷ್ಟವಾಯಿತು. ಅವರ ಜತೆ ಹೆಜ್ಜೆ ಹಾಕಿದರು. ಹಳ್ಳಿಹಳ್ಳಿಗೆ ಸುತ್ತಿ ದರ್ಶನಾಪುರರ ಪರ ಪ್ರಚಾರ ಮಾಡಿದರು. ಅದರಿಂದ ಅವರಿಗೆ ಗೆಲುವು ದಕ್ಕಿತು. ಕೆಲವು ಬಾರಿ ಸೋಲೂ ಕಂಡರು. ಎಲ್ಲವನ್ನೂ ಕಲಿಕೆ ಹಾಗೂ ಅನುಭವದ ಭಾಗವೆಂದು ಭಾವಿಸಿ ಮುಂದೆ ನಡೆದರು.

ಓದು, ಮನೆ, ಮಾರು ಸಂಪೂರ್ಣ ಮರೆತ ಮರಿಗೌಡರು, ರಾಜಕೀಯದಲ್ಲಿ ಏಳ್ಗೆ ಸಾಧಿಸುವ ಹಟಕ್ಕೆ ಬಿದ್ದರು. ಅಂದಿಗೆ ಹುಲಕಲ್ ಗ್ರಾಮ ಅಗಸಿ ಪಶ್ಚಿಮ ದಿಬ್ಬದ ಮೇಲೆ ಮೂರಂಕಣದ ಮನೆ ಇತ್ತು ಇವರಿಗೆ. ಗೌಡಿಕೆ ಮನೆತನ. ಆದರೆ, ಆರ್ಥಿಕ ಶ್ರೀಮಂತಿಕೆ ಇರಲಿಲ್ಲ. ಹೃದಯಶ್ರೀಮಂತಿಕೆಗೆ ಕೊರತೆ ಇರಲಿಲ್ಲ.

ಮನೆಯ ಕುಂದುಕೊರತೆಯ ಬಗ್ಗೆ ಒಂದಿನಿತೂ ತಲೆಕೆಡಿಸಿಕೊಳ್ಳದ ಗೌಡರು, ಲವಲವಿಕೆಯಿಂದಲೇ ಬಾಪೂಗೌಡರ ಜತೆ ಅಂಬಾಸಿಡರ್ ಕಾರು ಹತ್ತಿ ಬೆಂಗಳೂರು ತಲುಪಿದ್ದರು. ಅಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಸ್ಟೇಟ್ ಲೀಡರ್ ಗಳ ಜತೆ ಸಂಪರ್ಕ ಸಾಧಿಸಿದರು. ಸಿದ್ದರಾಮಯ್ಯ ತುಂಬಾ ಇಷ್ಟವಾದರು. ಸ್ವಲ್ಪ ಕಾಲದಲ್ಲೇ ‘ಅವರಿಗೆ ಇವರು ಇವರಿಗೆ ಅವರು’ ಅನಿವಾರ್ಯ ಎನ್ನುವಷ್ಟು ಸಂಪರ್ಕ ಬೆಳೆಯಿತು. ಬಾಪುಗೌಡರಿಗೂ ಮರಿಗೌಡ ಎಂದರೆ ಇಷ್ಟ. ನಂಬಿಕೆ ಮತ್ತು ಪ್ರಭಾವ ಎರಡರ ವಿಷಯದಲ್ಲಿ ದೊಡ್ಡ ವ್ಯಕ್ತಿ ಎನ್ನುವುದು ಸ್ಪಷ್ಟವಾಗಿತ್ತು. ಸ್ಥಳೀಯ ಸಂಘಟನಾ ಜವಾಬ್ದಾರಿ ನೀಡಿದಾಗ ಮೈಮೇಲೆ ಹಾಕಿಕೊಂಡು ಆ ಕೆಲಸ ಮಾಡಿ ಸೈ ಎನಿಸಿಕೊಂಡರು. ಬಾಪುಗೌಡರಿಗೆ ಇವರ ಬಗ್ಗೆ ಅಪಾರ ನಂಬಿಕೆ ಬೆಳೆದು ಫಲ ನೀಡುವ ಹಂತ ಮುಟ್ಟಿತ್ತು. ಅಂತಹ ಸಮಯದಲ್ಲೇ ಬಾಪುಗೌಡರ ಅಕಾಲಿಕ‌ ನಿರ್ಗಮನವಾಗಿ ದಿಕ್ಕುತೋಚದ ಸ್ಥಿತಿ ನಿರ್ಮಾಣವಾಯಿತು. ಪುನಃ ಅಲ್ಲಿಂದ ರಾಜಕೀಯ ಮರು ಹೋರಾಟ ಶುರುವಾಯಿತು. ಬಾಪುಗೌಡರ ಪುತ್ರ ಶರಣಬಸಪ್ಪ ದರ್ಶನಾಪುರ ಅವರು ರಂಗ ಪ್ರವೇಶಿಸಿದಾಗ ಅವರ ಜತೆಗೂ ಹೆಗಲು ನೀಡಿದರು. ಜೆಎಚ್ ಪಟೇಲ್ ನೇತೃತ್ವದ ಸರಕಾರದ ಅವಧಿಯಲ್ಲಿ ಮೊದಲ ಬಾರಿ ಕುರಿ ಬೋರ್ಡ್ ಚೇರ್ಮನ್ ಆದರು. ಸಿದ್ದರಾಮಯ್ಯ ಮುತುವರ್ಜಿಯಿಂದ ಇವರಿಗೆ ಆ ಸ್ಥಾನ ದಕ್ಕಿತು.

ಅದಾಗಿ ಸ್ವಲ್ಪ ಕಾಲಕ್ಕೆ ಸಿದ್ದರಾಮಯ್ಯ ಜನತಾ ದಳ ತೊರೆದು ಕಾಂಗ್ರೆಸ್ ಸೇರಿದಾಗ ಮರಿಗೌಡರೂ ಅವರ ಜತೆ ಪಕ್ಷ ಬದಲಿಸಿದರು. ಶರಣಬಸಪ್ಪ ದರ್ಶನಾಪುರ ಅವರೂ ಶಿಫ್ಟ್ ಆದರು.

ಕಾಂಗ್ರೆಸ್ ಪಕ್ಷದೊಂದಿಗೆ ಹೊಸ ಜರ್ನಿ. ಸಿದ್ದರಾಮಯ್ಯ ಹೇಳಿದಂತೆ ಸಾಗತೊಡಗಿದರು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸಿದರು. ಇದೇ ವೇಳೆಗೆ ಯಾದಗಿರಿ ಹೊಸ ಜಿಲ್ಲೆಯಾಗಿ ಉದಯವಾದಾಗ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಥಮ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸತತ ಮೂರು ಅವಧಿಗೆ ಹದಿನೈದು ವರ್ಷ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದರು. ಏತನ್ಮಧ್ಯೆ ಸಿದ್ದರಾಮಯ್ಯ ಪ್ರಥಮ ಬಾರಿ ಸಿಎಂ ಆದಾಗ ಮರಿಗೌಡರು ಕಾಡಾ ಚೇರ್ಮನ್ ಆದರು.

ಎಂಎಲ್ಎ ಆಗುವ ಕನಸಿತ್ತು ಅವರಿಗೆ. ಯಾದಗಿರಿ ಕ್ಷೇತ್ರದ ಟಿಕೆಟಿಗೆ ಪ್ರಯತ್ನಿಸಿದರು. ಆದರೆ, ಅದೃಷ್ಟ ಕೈಹಿಡಿಯಲಿಲ್ಲ.

ನಾಲ್ಕುವರೆ ದಶಕ ರಾಜಕೀಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದರು. ಮನೆ ಮಾರು ಯಾವುದನ್ನೂ ಅವರು ಲೆಕ್ಕಿಸಿರಲಿಲ್ಲ. ಬರೀ ರಾಜಕೀಯ ಗುಂಗು. ಜನರ ಸೇವೆಯೇ ದೇವರೆಂದು ನಂಬಿದ್ದರು.

ಎರಡು ಬಾರಿ ಬೋರ್ಡ್ ಚೇರ್ಮನ್, ಮೂರು ಅವಧಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಕೆಪಿಸಿಸಿ ಉಪಾಧ್ಯಕ್ಷ ಆಗಿದ್ದರೂ ಕೈ ಖಾಲಿ ಇಟ್ಟುಕೊಂಡಿದ್ದರು.

ಜಿಲ್ಲೆಯ ನೂರಾರು ಪದವೀಧರರಿಗೆ ಸರಕಾರಿ ನೌಕರಿ ಗಿಟ್ಟಿಸಲು ನೆರವಾದರೂ ಕೂಡ ಒಂದು ಪೈಸೆಯನ್ನೂ ಅಕ್ರಮವಾಗಿ ಜೇಬಿಗಿಳಿಸಲಿಲ್ಲ. ದುಡ್ಡು ಕೂಡಿಡಬೇಕೆಂಬ ಕಿಂಚಿತ್ತೂ ಅಪೇಕ್ಷೆಯೂ ಅವರಲ್ಲಿ ಇರಲಿಲ್ಲ. ಕೈ ನಿಂತಾಗ ಸಾಲ ಮಾಡಿ ರಾಜಕೀಯಕ್ಕೆ ವಿನಿಯೋಗಿಸಿದರು. ದೊಡ್ಡದೊಡ್ಡ ಹುದ್ದೆಯ ಜತೆಗೆ ಹಣದ ಥೈಲಿ ಪಕ್ಕದಲ್ಲಿದ್ದಾಗಲೂ ಅವರು ಪ್ರಾಮಾಣಿಕತೆಗೇ ಅಂಟಿಕೊಂಡರು. “ಏನ್ ಗೌಡ್ರೆ ಇದು, ಇರೋಕೆ ಮನೆನಾದ್ರು ಕಟ್ಸಿ” ಎಂದು ಜತೆಗಾರರು ಹೇಳಿದಾಗ ಜಮೀನು ಮಾರಿ ಊರ ಮಗ್ಗಲಿನ ಹೆದ್ದಾರಿಯಲ್ಲೊಂದು ಮನೆ ಕಟ್ಟಿಸಿದರು.

“ಕೊನೆ ಪಕ್ಷ ಎಂಎಲ್ಸಿನಾದ್ರೂ ಆಗ್ಲಿ ಗೌಡ್ರು” ಎಂದು ಅವರ ಅಭಿಮಾನಿಗಳು ಹಂಬಲಿಸಿದರು. ಅದಕ್ಕೆ ಕಾಲ‌ ಕೂಡಿಬಂತಿತ್ತು. ಸೆಕೆಂಡ್ ಟೈಮ್ ಸಿದ್ದರಾಮಯ್ಯ, ಇವರನ್ನುತೊಗರಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ರು. ಆದ್ರೆ, ಇವರು ಅಧಿಕಾರ ವಹಿಸಿಕೊಳ್ಳಲಿಲ್ಲ. “ಯಾಕೆ ಮಾರಾಯ, ಬಂದಿರೋ ಅವಕಾಶ ಬಿಟ್ಕೊಡ್ತಿಯಾ” ಎಂದು ನಾನು ಕೇಳಿದಾಗ, “ಆ ಅಧಿಕಾರ ವಹಿಸಿಕೊಂಡ್ರೆ ನನ್ನ ಸಾಲ ಇನ್ನಷ್ಟು ದೊಡ್ದಾಗ್ತದ. ಅಲ್ಲಿ ಬರೋ ಪಗಾರದಾಗ ಏನೂ ಮಾಡಲು ಸಾಧ್ಯ ಇಲ್ಲ. ಬರೋರು ಹೋಗೋರು, ಟೀ ಕಾಫಿ, ಪೆಟ್ರೋಲು ಖರ್ಚಿಗೆ ಸಾಲ ಮಾಡ್ಬೇಕಾಗ್ತದ” ಅಂದಿದ್ರು. ಇವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಬುದ್ಧಿ ಇರಲೇ ಇಲ್ಲ. “ಸಾಯೋ ಟೈಮಲ್ಲಿ ಏನೂ ತಗೊಂಡೋಗಲ್ಲ. ಒಳ್ಳೆದ್ದು ಕೆಟ್ಟುದ್ದು ಎರಡೇ ಉಳಿಯೋದು. ಇರೋತನ್ಕಾ ಒಳ್ಳೇದ್ ಮಾಡೋಣ” ಎಂದು ಉಪದೇಶ ಹೇಳ್ತಿದ್ರು. ಕೊನೆಗೆ ಯಾರ ಜಪ್ತಿಗೂ ಸಿಗದಂತೆ ಎದ್ದು ಹೋದಾಗ ಅವರ ಜೇಬು ಖಾಲಿ ಇತ್ತು. ಹೃದಯ ಮಾತ್ರ ಸಾಗರದಷ್ಟು ಪ್ರೀತಿ ಹಿಡಿದಿಟ್ಟುಕೊಂಡಿತ್ತು.

ಮಕ್ಕಳ ಭವಿಷ್ಯದ ಬಗ್ಗೆ ಅವರು ಎಂದೂ ಅವಸರ ತೋರಲಿಲ್ಲ. “ಅವರು ನನ್ನಂಥೆ ಒಳ್ಳೆಯವರಾದ್ರೆ ಜನ ಕೈಹಿಡಿತಾರೆ” ಎಂದು ನಂಬಿದ್ರು. ಇಪ್ಪತ್ತು ಲಕ್ಷ ರೂ. ಸಾಲ ಬಿಟ್ಟು ಅವರು ನಿರ್ಗಮಿಸಿದರು. ಈಗ ಅವರ ಮಗ ಅದನ್ನು ಸಾಲ ಎಂದು ಭಾವಿಸಿಲ್ಲ. “ಅದು ನಮ್ಮಪ್ಪನ ಪ್ರಾಮಾಣಿಕತೆಯ ಗಳಿಕೆ” ಎಂದೇ ಹೇಳುತ್ತಿದ್ದಾನೆ. ಹೌದು, ದುಡ್ಡು ಗಳಿಸುವುದು ಸುಲಭ. ಕೀರ್ತಿ ಗಳಿಕೆ ದುಸ್ತರ. ಅಂಥ ಕೀರ್ತಿ ಗಳಿಸಿದ ಮರಿಗೌಡ ಈಗ ಜನರ ಹೃದಯದಲ್ಲಿ ಹಾಡಾಗಿ ಅಜರಾಮರ. ಇದು ನಿಜವಾದ ಪುಣ್ಯ ಸ್ಮರಣೆ.

**********************

ಇಂದು ಮರಿಗೌಡ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ದಿನ. ತ್ಯಾಗದ ಮಹಾದಿನ. ನಾವೆಂದೂ ಮರೆಯದ ದಿನ…. ಮಹಾಭಾರತದಲ್ಲಿ ತುಂಬಾ ಆಕರ್ಷಕವಾದದ್ದು ಕರ್ಣನ ವ್ಯಕ್ತಿತ್ವ. ಆ ವ್ಯಕ್ತಿತ್ವದ ಜತೆ ಮರಿಗೌಡ ಅವರ ಗುಣಶೀಲತೆ ತಾಳೆಯಾಗುವಂತದ್ದು. ಸ್ವಂತಕ್ಕೆ ಸಾಮ್ರಾಜ್ಯವನ್ನೇ ಕಟ್ಟುವ ಸಾಮರ್ಥ್ಯ ಇದ್ದ ನಾಯಕ, ನಂಬಿದವರಿಗಾಗಿ ಹೋರಾಡಿ ಕೊನೆಗೆ ಬರಿಗೈಯಲ್ಲಿ ನಿರ್ಗಮಿಸುವುದು ಸಾಂಕೇತಿಕ ಸದ್ಗುಣ.
ಕರ್ಣ ಧೈರ್ಯಶಾಲಿ, ಧೀರ. ದಾನ ಧರ್ಮದಲ್ಲಿ ದಯಾಳು. ದೊಡ್ಡ ಬಂಧು ಬಳಗ ಹೊಂದಿದ್ದರೂ ಒಬ್ಬಂಟಿಯಾಗಿಯೇ ಕಾದಾಡಿ ಕಣ್ಮರೆಯಾದ ನಾಯಕ. ತನಗಾಗಿ ಏನನ್ನೂ ಪಡೆಯಲಿಲ್ಲ. ತನ್ನನ್ನು ನಂಬಿದವರಿಗೆ ಕೈಲಾದ ನೆರವು ನೀಡಿದ. ದೊಡ್ಡಶಕ್ತಿ ಇದ್ದರೂ ಅಧಿಕಾರ ಬೇಕೆಂದು ಹಪಹಪಿಸಲಿಲ್ಲ. ಕೊನೆಗೆ ಕೇಳಿದವರಿಗೆ ಕರ್ಣಕುಂಡಲವನ್ನೇ ದಾನ ಮಾಡಿ ‘ದಾನಶೂರ’ ಎನಿಸಿದ. ಯುದ್ಧದಲ್ಲೂ ನ್ಯಾಯದ ದಾರಿಯನ್ನೇ ತುಳಿದು ಎದುರಾಳಿಗಳ ತಂತ್ರಕ್ಕೆ ಜೀವ ತೆತ್ತ. ಅದಕ್ಕಾಗಿಯೇ ಇವತ್ತಿಗೂ ಕರ್ಣ ಎಂದರೆ; ನ್ಯಾಯ, ನಿಷ್ಠೆ, ದಯೆ, ಧರ್ಮ ಎಂದು ಸ್ಮರಿಸುತ್ತದೆ ಭಾರತ. ಸೀಮಿತ ಅರ್ಥದಲ್ಲಿ ಅಂಥದ್ದೊಂದು ಸಿಮಿಲಾರಿಟಿ ಇರುವ ವ್ಯಕ್ತಿತ್ವ ಮರಿಗೌಡ ಅವರದ್ದು. ನಂಬಿದ ಬಾಂಧವರಿಗಾಗಿ ನಿಸ್ವಾರ್ಥದಿಂದ ದುಡಿದು ನಿರ್ಗಮಿಸಿದ ಪುಣ್ಯವಂತ. ಆತನ ಹೆಸರಲ್ಲಿ  ನಾವು ಎರಡು ಹನಿ ರಕ್ತದಾನ ಮಾಡುವುದು ತುಂಬಾ ಅರ್ಥಪೂರ್ಣ. ದಾನ ನೀಡಿದ ಆ ಪರಿಶುದ್ಧರಕ್ತದಿಂದ ಮತ್ತೊಬ್ಬ ತ್ಯಾಗಪುರುಷ ಹುಟ್ಟಿಬರಲಿ ಎಂದು ಆಶಿಸೋಣ.

ಸೋಮಶೇಖರ್ ಕೀಲಾರಿ
ರಾಜಕೀಯ ವಿಶ್ಲೇಷಕ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತರು