ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ : ಪತ್ರಕರ್ತರು ಮತ್ತು ಪತ್ರಿಕಾ ವಿತರಕ ಸೇರಿ 11 ಜನ ಸಾಧಕರಿಗೆ ಸನ್ಮಾನ : ಜುಲೈ 26 ರಂದು ಪ್ರಶಸ್ತಿ ಪ್ರದಾನ  : ಮಲ್ಲಪ್ಪ ಸಂಕೀನ್

ಯಾದಗಿರಿ,,

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 26ರಂದು ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ 10ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಉದ್ಘಾಟಿಸುವರು. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ, ಡಿಡಿಯು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಭೀಮಣ್ಣ ಮೇಟಿ, ಸಂಘದ ರಾಜ್ಯ ಉಪಾಧ್ಯಕ್ಷ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಭವಾನಿಸಿಂಗ್ ಠಾಕೂರ್, ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಾಘವೇಂದ್ರ ಕಾಮನಟಗಿ, ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ ಆಗಮಿಸಲಿದ್ದಾರೆ ಎಂದು ತಿಳಿಸಿದರು.

*11ಜನ ಸಾಧಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ*

ಪತ್ರಿಕೋದ್ಯಮದಲ್ಲಿ ಸಾಧನೆಗೈದ ಪತ್ರಕರ್ತರಾದ ಮಲ್ಲಿಕಾರ್ಜುನ ಕಾಡಂನೋರ್, ಆನಂದ ಗೊರ್ಕಲ್, ಬಾಲಪ್ಪ ಕುಪ್ಪಿ, ಬಸವರಾಜ ಕರೇಗಾರ, ದಯಾನಂದ ಹಿರೇಮಠ, ಖಾಜಾ ಕಲಿಮುದ್ದೀನ್ ಫರೀದಿ, ಮಹೇಶ್ ಗಣೇರ್, ಡಾ.ಮಲ್ಲಿಕಾರ್ಜುನ ಆಶನಾಳ, ಛಾಯಾಗ್ರಾಹಕ ಮಂಜುನಾಥ ಬಿರಾದಾರ ಸಗರ ಸೇರಿ ಒಟ್ಟು 9 ಜನರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಜೊತೆಗೆ ತಲಾ 2 ಸಾವಿರ ರೂಪಾಯಿ ನಗದು ನೀಡಿ ಗೌರವಿಸಲಾಗುವುದು. ಇದಲ್ಲದೇ ಪತ್ರಕರ್ತ ಹನುಮಂತು ಪಿ., ಮತ್ತು ಪತ್ರಿಕಾ ವಿತರಕ ಸಾಹೇಬಗೌಡ ಕಲಾಲ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವ ಜೊತೆಗೆ ಉಭಯರಿಗೆ ತಲಾ 5 ಸಾವಿರ ರೂಪಾಯಿ ನಗದು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.