ಕಥೆ
ಹೆಸರು’ ಇರದ ಮರ
ಮುಕ್ಕಣ್ಣ ಕರಿಗಾರ
‘ ಪ್ರಪಂಚದ ಅಸ್ತಿತ್ವವು ಕಾರಣ ಕಾರ್ಯ ಸಂಬಂಧದ ಮೇಲೆ ನಿಂತಿದೆ. ಈ ಪ್ರಪಂಚಕ್ಕೆ ಒಂದು ಕಾರಣವಿದೆ,ಆ ಕಾರಣದ ಕಾರ್ಯಸಂಬಂಧದಿಂದ ಪ್ರಪಂಚದ ಆಗು ಹೋಗುಗಳು ನಡೆಯುತ್ತಿವೆ.ಪ್ರಪಂಚದ ಕಾರಣವೇನು ಎಂಬುದನ್ನು ನಾವರಿಯೆವು.ಪರಮಾತ್ಮನು ಪ್ರಪಂಚಕಾರಣನು ಎನ್ನುವುದೊಂದು ನಂಬಿಕೆಯಾದರೆ ತನ್ನ ವಿನೋದಕ್ಕಾಗಿ ಪರಮಾತ್ಮನು ಪ್ರಪಂಚವನ್ನು ಸೃಷ್ಟಿಸಿದನು ಎನ್ನುವುದು ಉಪನಂಬಿಕೆ ಇಲ್ಲವೆ ಪ್ರಪಂಚತತ್ತ್ವ ಪೋಷಕಭಾವ.ಈ ಪ್ರಪಂಚದಲ್ಲಿ ಎಲ್ಲದಕ್ಕೂ ಅರ್ಥವಿದೆ,ಎಲ್ಲದಕ್ಕೂ ಮಹತ್ವವಿದೆ.ನಿರುದ್ದಿಶ್ಯವಾದ,ನಿರುಪಯುಕ್ತವಾದ ಯಾವುದೂ ಈ ಪ್ರಪಂಚದಲ್ಲಿ ಇಲ್ಲ.ಆದರೆ ಮನುಷ್ಯ ತನ್ನ ಸ್ವಾರ್ಥಬುದ್ಧಿಯಿಂದ ಪ್ರೇರಿತನಾಗಿ ತನಗೆ ಉಪಯುಕ್ತವಾದ ವಸ್ತು,ಸಂಗತಿಗಳಲ್ಲಷ್ಟೇ ಆಸಕ್ತಿ ತಳೆಯುತ್ತಾನೆ’ ಮನಸ್ಸಿನ ಪ್ರಪಂಚಾರ್ಥ ಮಥನಕ್ಕೆ ಕಾರಣವಾಗಿತ್ತು ನನ್ನೆದುರು ಇದ್ದ ಒಂದು ಮರ.
ಇಂದು ರವಿವಾರವಾಗಿದ್ದರಿಂದ ಕಛೇರಿಗೆ ರಜೆ.ಬಿಡುವು ಇದ್ದುದರಿಂದ ಓದುತ್ತ ಕುಳಿತಿದ್ದೆ ಮನೆಯಲ್ಲಿ. ಮನೆ ಎಂದರೆ ನಮ್ಮೂರು ಗಬ್ಬೂರಿನ ನನ್ನ ಮನೆಯಲ್ಲ.ನಾನೀಗ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದು ಬೀದರಿನ ಬಾಡಿಗೆ ಮನೆ ಇದು.ಮನೆಯ ಮಾಲೀಕರಾದ ಶ್ರೀಕಾಂತ ಕುಲಕರ್ಣಿಯವರು ‘ ಆಶೀರ್ವಾದ’ ಎನ್ನುವ ಅರ್ಥಪೂರ್ಣ ಹೆಸರನ್ನಿಟ್ಟಿದ್ದಾರೆ ಈ ಮನೆಗೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ನಿವೃತ್ತರಾಗಿರುವ ಶ್ರೀಕಾಂತ ಕುಲಕರ್ಣಿಯವರು ಜಾತಿಯಿಂದ ಬ್ರಾಹ್ಮಣರು ಆಗಿದ್ದರಿಂದ ತಮ್ಮ ಮನೆಯನ್ನು ಬ್ರಾಹ್ಮಣರಿಗೇ ಬಾಡಿಗೆ ಕೊಡಬೇಕೆಂದು ಮೂರು ವರ್ಷಗಳಿಂದ ಖಾಲಿ ಇಟ್ಟಿದ್ದರಂತೆ. ಬೆಂಗಳೂರಿನಂತಹ ಮಹಾನಗರಗಳಲ್ಲಿಯೂ ಜಾತಿ ಕೇಳಿ ಮನೆಬಾಡಿಗೆ ಕೊಡುವ ಕುಬ್ಜಮನೋಸ್ಥಿತಿಯೊಂದು ಇಂದಿಗೂ ಇದೆಯಲ್ಲ. ಶ್ರೀಕಾಂತ ಕುಲಕರ್ಣಿಯವರು ತಮ್ಮ ಮನೆಯನ್ನು ಬ್ರಾಹ್ಮಣರಿಗೇ ಬಾಡಿಗೆ ಕೊಡಬೇಕು ಎಂದು ನಿರ್ಧರಿಸಿದ್ದರೆ ಅದೇನೂ ತಪ್ಪಲ್ಲ,ಅದು ಅವರ ಆಯ್ಕೆ.
ನಾನು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯವರದಿ ಮಾಡಿಕೊಂಡ ಬಳಿಕ ನಾಲ್ಕು ತಿಂಗಳುಗಳ ಕಾಲ ಹೆಬ್ಸಿಕೋಟೆ ಗೆಸ್ಟ್ ಹೌಸಿನಲ್ಲೇ ಉಳಿದುಕೊಂಡಿದ್ದೆ.ಹಾಗಂತ ನನಗೆ ಮನೆ ಸಿಕ್ಕಿರಲಿಲ್ಲ ಎಂದರ್ಥವಲ್ಲ,ಆದರೆ ನನಗೆ ಮೆಚ್ಚುಗೆಯಾಗುವ ಮನೆ ಒಂದರ ಅನ್ವೇಷಣೆಯಲ್ಲಿ ಇದ್ದೆ.ನನ್ನ ಆಪ್ತಸಹಾಯಕ ಶ್ರೀನಿವಾಸ,ಜಿಲ್ಲಾ ಪಂಚಾಯತಿಯ ಅಧಿಕಾರಿ,ಸಿಬ್ಬಂದಿಯವರಾದ ಜಯಪ್ರಕಾಶ ಚೌಹಾಣ, ಹಣುಮಂತ ಚಿದ್ರಿ,ನನ್ನ ಡ್ರೈವರ್ ರಮೇಶ ಮೊದಲಾದವರು ನನಗೊಂದು ಮನೆಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದರು.ವಾರಕ್ಕೆ ನಾಲ್ಕೈದು ಮನೆಗಳು ತೋರಿಸುತ್ತಿದ್ದರು.ಅದರಲ್ಲಿ ನನ್ನ ಅಧಿಕಾರದ ಸ್ಟೇಟಸ್ ಗೆ ತಕ್ಕಂತಹ ಮನೆಗಳೇ ಇದ್ದವು.ಕೆಲವು ಮನೆಗಳು ಚಿಕ್ಕವಿದ್ದರೆ ಮತ್ತೆ ಕೆಲವು ಮನೆಗಳು ತುಂಬ ದೊಡ್ಡವಿದ್ದವು.ನಾನು ಚಿಕ್ಕ ಮನೆಯನ್ನು ‘ಇದು ತೀರ ಚಿಕ್ಕದು,ನನಗೆ ಸಾಲದು’ ಎನ್ನುತ್ತ ದೊಡ್ಡ ಮನೆಯನ್ನು ಇದು ‘ ನನಗೆ ತೀರ ದೊಡ್ಡದು,ನಾನು, ಹೆಂಡತಿ ಸಾಧನಾ ಮತ್ತು ಇಬ್ಬರು ಪುಟ್ಟ ಮಕ್ಕಳು, ಹೀಗೆ ನಾಲ್ಕೇ ಜನರು ಇರೋದು’ ಎಂದು ತಿರಸ್ಕರಿಸುತ್ತ ಬಂದೆ. ನಾನು ಹಾಗೆ ಮನೆಗಳನ್ನು ತಿರಸ್ಕರಿಸುವ ಕಾರಣ ನನಗೆ ಪ್ರತ್ಯೇಕವಾದ ವಿಶಾಲವಾದ ಒಂದು ಮನೆಯ ಅಗತ್ಯ ಇದ್ದುದು.ನಾನು ಎಲ್ಲ ಸರಕಾರಿ ಅಧಿಕಾರಿಗಳಂತೆ ಒಬ್ಬ ಅಧಿಕಾರಿ ಮಾತ್ರವಾಗಿರದೆ ಅಧ್ಯಾತ್ಮಿಕ ಸಾಧಕ ಮತ್ತು ಸಾಹಿತಿ ಆಗಿದ್ದುದರಿಂದ ನನ್ನ ಮನೋಭಾವನೆಗೆ ತಕ್ಕಂತಹ ಒಂದು ‘ಪ್ರತ್ಯೇಕಮನೆ’ ಯ ಅಗತ್ಯವಿತ್ತು.ನನ್ನ ಧ್ಯಾನ,ಆಧ್ಯಾತ್ಮಿಕ ಸಾಧನೆಗೆ ಅನುಕೂಲಕರ ಮತ್ತು ಅಧ್ಯಯನ,ಬರವಣಿಗೆಗೆಪೂರಕವಾದ ವಾತಾವರಣದಲ್ಲಿರುವ ಪ್ರಶಸ್ತ ಮನೆಯೊಂದರ ಅನ್ವೇಷಣೆಯಲ್ಲಿ ಇದ್ದೆ.
ನನ್ನ ಡ್ರೈವರ್ ರಮೇಶ ತಾನು ನೋಡಿದ್ದ ಒಂದೆರಡು ಮನೆಗಳಲ್ಲಿ ನಾನು ಇರಬೇಕು ಎಂದು ಬಯಸಿದ್ದ.ನನ್ನ ಪಿಎ ಶ್ರೀನಿವಾಸ ನಾನೊಂದು ಅರಮನೆಯಂತಹ ಮನೆಯಲ್ಲಿ ಇರಬೇಕು ಎಂದು ಬಯಸುತ್ತಿದ್ದ.ನಮ್ಮ ಸಿಬ್ಬಂದಿಯವರು ಬೀದರಿನ ಮೂಲೆಮೂಲೆಗಳಲ್ಲಿ ನನಗಾಗಿ ಮನೆಯನ್ನು ಹುಡುಕುತ್ತಿದ್ದರು.ಜಿಲ್ಲಾ ಪಂಚಾಯತಿಯ ಆಧೀನ ಇಲಾಖೆಯಾದ ಗ್ರಾಮೀಣಕುಡಿಯುವ ನೀರು ಇಲಾಖೆಯಲ್ಲಿ ಮ್ಯಾನೇಜರ್ ಆಗಿರುವ ಮಕರಂದ ಕುಲಕರ್ಣಿಯವರು ನನಗೆ ‘ ಆಶೀರ್ವಾದ’ ವನ್ನು ತೋರಿಸಿದರು.ಮೊದಲ ನೋಟಕ್ಕೆ ನನಗೆ ಇದು ಸೂಕ್ತ ಮನೆ ಎನ್ನಿಸಿತ್ತಾದರೂ ಮನೆ ಸ್ವಲ್ಪ ಹಳತು ಆಗಿದ್ದರಿಂದ ಹೊಸಮನೆಗಳು ಸಿಗಬಹುದೆ ಎಂದು ಹುಡುಕುತ್ತಿದ್ದೆ.
ಮಕರಂದ ಕುಲಕರ್ಣಿಯವರು ಬ್ರಾಹ್ಮಣರೆ.ಅವರೇ ಶ್ರೀಕಾಂತ ಕುಲಕರ್ಣಿಯವರಿಗೆ ತಮ್ಮ ಮನೆಬಾಡಿಗೆ ಕೊಡಲು ಹೇಳಿ,ಒಪ್ಪಿಸಿದ್ದರು.ನಾನು ಬ್ರಾಹ್ಮಣರ ಕಣ್ಣಲ್ಲಿ ಶೂದ್ರನಾಗಿದ್ದರೂ ಅನುಭಾವಿಯಾಗಿದ್ದುದು,ಮಠಾಧೀಶನಾಗಿದ್ದುದು ಮಕರಂದ ಅವರಿಗೆ ಇಷ್ಟವಾಗಿತ್ತು.ಶುದ್ಧಸಸ್ಯಾಹಾರಿ ಹಾಗೂ ಸಾತ್ವಿಕಮನುಷ್ಯನಾಗಿದ್ದ ನನಗೆ ಮನೆಕೊಡಲು ಶ್ರೀಕಾಂತ ಕುಲಕರ್ಣಿಯವರಿಗೆ ನನ್ನ ಶೂದ್ರತ್ವ ಅಡ್ಡಿ ಬರಲಿಲ್ಲ. ಎರಡುಸಾವಿರದ ಇಪ್ಪತ್ನಾಲ್ಕರ ನವೆಂಬರ ಏಳನೇ ತಾರೀಖಿನಂದು ನಾನು ‘ಆಶೀರ್ವಾದ’ ವನ್ನು ಪ್ರವೇಶಿಸಿದೆ.ಶಾಸ್ತ್ರ ಸಂಪ್ರದಾಯಗಳ ವಿರೋಧಿಯಾದ ನಾನು ಯಾವುದೇ ಗೃಹಶಾಂತಿ,ಹೋಮ ಹವನಗಳನ್ನು ನೆರವೇರಿಸದೆ ನಮ್ಮ ಸಿಬ್ಬಂದಿಯವರಿಗೆ ಸಿಹಿಊಟ ಉಣಬಡಿಸುವ ಮೂಲಕ ಮನೆಪ್ರವೇಶಿಸಿದ್ದೆ.ಮನೆಗೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಮಡದಿ ಸಾಧನಾ ಮತ್ತು ಪುತ್ರಿದ್ವಯರಾದ ವಿಂಧ್ಯಾ,ನಿತ್ಯಾರನ್ನು ಕರೆದುಕೊಂಡು ಬಂದಿದ್ದೆ.ನನ್ನ ತಾಯಿ ಮಲ್ಲಮ್ಮನವರು ಕೂಡ ಅವರು ಇಹಲೋಕ ತ್ಯಜಿಸುವ ಎರಡುಮೂರು ವಾರಗಳ ಮುಂಚಿನ ದಿನಗಳವರೆಗೆ ನನ್ನೊಂದಿಗೆ ಇದ್ದರು.
‘ ಆಶೀರ್ವಾದ’ ವು ಹದಿನೆಂಟು ಇಪ್ಪತ್ತು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಮನೆಯಾದರೂ ಮೂರು ಕುಟುಂಬಗಳು ಪ್ರತ್ಯೇಕವಾಗಿ ವಾಸಿಸಬಹುದಾದಷ್ಟು ವಿಶಾಲ ಮನೆಯಾದ್ದರಿಂದ ನನಗೆ ಹಿಡಿಸಿತ್ತು.ಈ ಮನೆ ನನಗೆ ಹಿಡಿಸಲು ಸಾಕಷ್ಟು ಕೋಣೆಗಳು ಇದ್ದುದರ ಜೊತೆಗೆ ಇದು ಈ ಓಣಿಯ ಕೊನೆಯ ಮನೆಯಾಗಿತ್ತು.ಅಂದರೆ ಮನೆಯ ಉತ್ತರಕ್ಕೆ ಹೊಂದಿಕೊಂಡು ಯಾವ ಮನೆಗಳೂ ಇರಲಿಲ್ಲ, ಇದೇ ಕೊನೆಯ ಮನೆಯಾಗಿತ್ತು.ಮನೆಯ ಉತ್ತರ ಭಾಗದಲ್ಲಿ ಸಾಕಷ್ಟು ಖಾಲಿ ಜಾಗ ಎನ್ನುವ’ ಬಯಲು’ ಇತ್ತು.ನನ್ನ ಮನೆಯೆದುರು ಅತ್ಯಾಧುನಿಕ ಶೈಲಿಯ ಹಲವು ಮನೆಗಳಿವೆ.ಹಿಂದೆಯೂ ಮನೆಗಳಿವೆ.ಬೀದರ ನಗರದ ಶಿವನಗರದ ಉತ್ತರಭಾಗದ ಪಾಪನಾಶ ಗೇಟಿನ ಮುಂಭಾಗದ ಎರಡನೇ ರಸ್ತೆಯ ಕೊನೆಯಲ್ಲಿ ಇದೆ ನಾನು ವಾಸಿಸುವ, ಬೀದರಿನ ನನ್ನ ನಿವಾಸ ‘ ಆಶೀರ್ವಾದ’
ನಾನು ‘ಆಶೀರ್ವಾದ’ ಕ್ಕೆ ಬಂದು ಆರು ತಿಂಗಳುಗಳಾಗಿವೆ.ಶಾಸ್ತ್ರವಿರೋಧಿಯಾದ ನಾನು ಈ ಮನೆಯಲ್ಲಿ ನನ್ನ ಇಬ್ಬರು ಮಕ್ಕಳ ಹುಟ್ಟುಹಬ್ಬ ಆಚರಿಸಿದೆ.ಜನೆವರಿ ಹದಿನಾಲ್ಕರಂದು ದೊಡ್ಡ ಮಗಳು ವಿಂಧ್ಯಾಳ ಏಳನೇ ಹುಟ್ಟುಹಬ್ಬವನ್ನು ನನ್ನ ಮಡದಿ ಸಾಧನಾ,ಇಬ್ಬರು ಅಳಿಯಂದಿರಾದ ಸುನಿಲಕುಮಾರ ಮತ್ತು ಅನಿಲಕುಮಾರ ಅವರಿಬ್ಬರನ್ನು ಒಳಗೊಂಡು ಕೇವಲ ಐದಾರು ಜನ ಆತ್ಮೀಯರೊಂದಿಗೆ ಆಚರಿಸಿದ್ದೆ.ಇತ್ತೀಚೆಗೆ ಮೇ ಇಪ್ಪತ್ತೇಳರಂದು ನನ್ನ ಎರಡನೇ ಮಗಳು ನಿತ್ಯಾಳ ಐದನೇ ಹುಟ್ಟುಹಬ್ಬವನ್ನು ಸ್ವಲ್ಪ ಗ್ರ್ಯಾಂಡ್ ಆಗಿ ಒಂದೈವತ್ತು ಜನ ಆಪ್ತ ಅಧಿಕಾರಿಗಳು ಸಿಬ್ಬಂದಿಯವರನ್ನು ಆಹ್ವಾನಿಸಿ ಆಚರಿಸಿದ್ದೆ. ದಾಸೋಹ ಸಂಸ್ಕೃತಿಯಲ್ಲಿ ಬೆಳೆದ ನನಗೆ ಇತರರಿಗೆ ಊಟಮಾಡಿಸುವುದು ಆನಂದದ ಸಂಗತಿಯಾಗಿದ್ದರಿಂದ ನಿತ್ಯಾಳ ಹುಟ್ಟುಹಬ್ಬದಂದು ನಮ್ಮ ಅಧಿಕಾರಿಗಳು,ಸಿಬ್ಬಂದಿಯವರಿಗೆ ಸಿಹಿಊಟದ ಭೋಜನಕೂಟವನ್ನು ಏರ್ಪಡಿಸಿದ್ದೆ.ನಮ್ಮ ಅಧಿಕಾರಿಮಿತ್ರರುಗಳನೇಕರು ಖಾಸಗಿ ಹೋಟೆಲ್ ನಲ್ಲಿ ನನ್ನ ಮಗಳ ಹುಟ್ಟುಹಬ್ಬ ಆಚರಿಸೋಣ ಎಂದು ಆಗ್ರಹಿಸಿದ್ದ ಸಲಹೆಯನ್ನು ನಾನು ನಯವಾಗಿ ತಿರಸ್ಕರಿಸಿದ್ದೆ.ಕೆಲವರು ತಾವಾಗಿಯೇ ಹೋಟೆಲ್ ಬುಕ್ ಮಾಡುವ,ಊಟದ ವ್ಯವಸ್ಥೆ ಮಾಡುವ ಆಲೋಚನೆಯೊಂದಿಗೆ ನನ್ನ ಬಳಿ ಬಂದಿದ್ದರು.’ ಇದಾವುದೂ ಬೇಡ’ ಎಂದು ಸ್ಪಷ್ಟವಾಗಿಯೇ ತಿರಸ್ಕರಿಸಿದೆನಾದರೂ ಅವರೆಲ್ಲರನ್ನು ಕರೆದು ಉಣ್ಣಿಸಬೇಕು ಎನ್ನುವ ವಿಚಾರದಿಂದ ನಿತ್ಯಾಳ ಹುಟ್ಟುಹಬ್ಬವನ್ನು ಸ್ವಲ್ಪ ಸಡಗರದಿಂದ ಆಚರಿಸಿದ್ದೆ. ಉಡುಗೊರೆಗಳ ಋಣಭಾರದಿಂದ ಕುಬ್ಜನಾಗಬಾರದು ಎನ್ನುವ ಕಾರಣದಿಂದಲೇ ನಾನು ನನ್ನ ಮಕ್ಕಳಿಬ್ಬರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ.ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿರುವ ನಾನು ನನ್ನ ಹುದ್ದೆಯ ಬಲದಿಂದ ಉನ್ನತ ಅಧಿಕಾರಿ ಆಗಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲೂಕಾ ಪಂಚಾಯತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಗಳ ಪಿಡಿಒಗಳನ್ನು ಆಹ್ವಾನಿಸಬೇಕಾಗುತ್ತದೆ ಖಾಸಗಿ ಹೋಟೆಲ್ ನಲ್ಲಿ ನನ್ನ ಮಕ್ಕಳ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದರೆ.ನನ್ನ ಮಕ್ಕಳ ಹುಟ್ಟುಹಬ್ಬಕ್ಕೆ ಬರುವ ಆಹ್ವಾನಿತ ಅಧಿಕಾರಿ ಸಿಬ್ಬಂದಿಯವರಾರೂ ಬರಿ ಕೈಯಲ್ಲಿ ಬರುವುದಿಲ್ಲವಲ್ಲ.’ ನಮ್ಮ ಸಾಹೇಬರ ಮಕ್ಕಳು’ ಎಂದು ಏನನ್ನಾದರೂ ಉಡುಗೊರೆ- ಕಾಣಿಕೆಗಳನ್ನು ತಂದೇ ತರುತ್ತಾರೆ.ಉಡುಗೊರೆ- ಕಾಣಿಕೆಗಳನ್ನು ಸ್ವೀಕರಿಸಿದ ನಾನು ಉಡುಗೊರೆ ಕಾಣಿಕೆಗಳನ್ನಿತ್ತವರಿಗೆ ಕೃತಜ್ಞನಾಗಿರಬೇಕಾದದ್ದು ಮನುಷ್ಯ ಸಹಜವರ್ತನೆ ತಾನೆ? ಆದರೆ ನಾನು ಕುಳಿತಿರುವ ಉಪಕಾರ್ಯದರ್ಶಿ ಖುರ್ಚಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುವಂತಹ ಹುದ್ದೆಯೇನಲ್ಲವಲ್ಲ.ಸಾಕಷ್ಟು ದಂಡನಾಧಿಕಾರ ಇರುವ ಅಧಿಕಾರಸ್ಥಾನದಲ್ಲಿ ಕುಳಿತಿರುವ ನಾನು ಎಲ್ಲರಿಗೂ ಒಳ್ಳೆಯವನು ಆಗಲು ಸಾಧ್ಯವಿಲ್ಲ. ಜೊತೆಗೆ ಉಡುಗೊರೆ ಕೊಡುಗೆಗಳ ಮುಲಾಜು ಕಾಡುತ್ತದಲ್ಲ.ಹಂಗು- ಅಭಿಮಾನಪೀಡಿತ ಮನುಷ್ಯ ಸ್ವತಂತ್ರನಾಗಿರಲು,ನಿರ್ಭೀತನಾಗಿರಲು,ನಿಷ್ಠುರ ನಿಲುವನ್ನು ಹೊಂದಿರಲು ಸಾಧ್ಯವಿಲ್ಲ.ನನ್ನ ಈ ನಿಲುವಿನಿಂದಾಗಿ ನನ್ನ ಕಛೇರಿಗೆ ಬರುವವರಿಗೆ ನಾನೇ ಚಹಾಕುಡಿಸಿ ಕಳಿಸುತ್ತೇನೆ.ಹಾಗಂತ ನಾನೇನು ಮಹಾತ್ಮಗಾಂಧೀಜಿಯವರ ಮೊಮ್ಮಗನೆಂದು ಕೊಚ್ಚಿಕೊಳ್ಳುತ್ತಿಲ್ಲ.ವ್ಯವಸ್ಥೆಗೆ ಅನಿವಾರ್ಯವಾದ ‘ ಕೊಳೆ’ ಯನ್ನು ಮಾತ್ರ ಮೈಗಂಟಿಸಿಕೊಂಡು ಉಳಿದಂತೆ ಶುಭ್ರವಾಗಿರಬಯಸುವ ಸಾತ್ವಿಕ ಮನೋಭಾವದ ಅಧಿಕಾರಿ.ನಮ್ಮ ಅಧಿಕಾರಿಗಳನೇಕರು ನನ್ನ ಇಂತಹ ಒಲವು- ನಿಲುವುಗಳಿಂದಾಗಿ ‘ ನಮ್ಮ ಸಾಹೇಬರದ್ದು ಒಂದು ತರಹದ ವಿಶೇಷ,ವಿಚಿತ್ರ ವರ್ತನೆ’ ಎಂದಾಡಿಕೊಳ್ಳುತ್ತಾರೆ.ಕಛೇರಿ ಅವಧಿ ಮುಗಿದೊಡನೆ ಮನೆ ಸೇರುವ ನನಗೆ ಇತರ ಅಧಿಕಾರಿಗಳಿಗೆ ಇರುವಂತಹ ಯಾವುದೇ ‘ಅಭ್ಯಾಸಗಳು’ ಇಲ್ಲವಾದ್ದರಿಂದ ನೇರವಾಗಿ ಮನೆಗೆ ಬರುತ್ತೇನೆ.ಕಛೇರಿಯಿಂದ ಮನೆಗೆ ಬಂದವನು ಮತ್ತೆ ಮರುದಿನ ಕಛೇರಿಗೆ ಹೊರಟಾಗಲೇ ಹೊರಬರುವುದು.
ಮನೆಗೆ ಬಂದವನು ನಾನು ಶುದ್ಧ ಸಾಮಾಜಿಕ ವ್ಯಕ್ತಿಯ ಜೀವನ ನಡೆಸುವೆ.ಅಂದರೆ ಮನೆಯಲ್ಲಿ ನಾನು ‘ಅಧಿಕಾರಿ’ ಆಗಿರುವುದಿಲ್ಲ.ಮನೆಯಲ್ಲಿ ನನ್ನ ಹೆಂಡತಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗುವ ಉತ್ತಮಗಂಡನಾಗಿರುವೆ,ಇಬ್ಬರು ಪುಟ್ಟ ಮಕ್ಕಳೊಂದಿಗೆ ಅವರ ಆಟೋಟಗಳಲ್ಲಿ ವಿನೋದಿಸುವ ಉತ್ತಮ ತಂದೆಯಾಗಿರುವೆ.ಇದರಾಚೆ ಧ್ಯಾನ ಪೂಜೆ- ಅಧ್ಯಯನ- ಬರವಣಿಗೆಯಲ್ಲಿ ತೊಡಗಿಕೊಳ್ಳುವೆ.ಹಿರಿಯ ಅಧಿಕಾರಿಯಾದ ನನಗೂ ‘ ಗೃಹಕಛೇರಿ’ ಸೌಲಭ್ಯ ಇದೆಯಾದರೂ ನಾನು ಕಛೇರಿಯನ್ನು ಮನೆಗೆ ಹೊತ್ತು ತರುವುದಿಲ್ಲ.ಕಛೇರಿಯ ಕಡತಗಳ ರಾಶಿಯನ್ನು ಮನೆಗೆ ತರುವ ಅಭ್ಯಾಸ ನನಗೆ ಇಲ್ಲವೇ ಇಲ್ಲ.ಇಪ್ಪತ್ತಾರು ವರ್ಷಗಳ ಸೇವಾ ಅವಧಿಯಲ್ಲಿ ದೇವದುರ್ಗ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಮತ್ತು ರಾಯಚೂರು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿದ್ದ ದಿನಗಳ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ನಾನು ಕಡತಗಳನ್ನು ಮನೆಗೆ ಒಯ್ದದ್ದು ಬಿಟ್ಟರೆ ಇಪ್ಪತ್ತಾರು ವರ್ಷಗಳ ಅಧಿಕಾರಿ ಜೀವನದಲ್ಲಿ ಹೋಮ್ ಆಫೀಸ್ ಸೌಲಭ್ಯವನ್ನು ಎಂಜಾಯ್ ಮಾಡಿಲ್ಲ.ಕಡತಗಳನ್ನು ಮನೆಗೆ ಹೊತ್ತು ತರುವುದು ಕೂಡ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸುತ್ತದೆ ಎಂದು ನಾನು ಚೆನ್ನಾಗಿ ಬಲ್ಲೆನಾದ್ದರಿಂದ ಕಡತಗಳನ್ನು ಮನೆಗೆ ತರುವ ಅಭ್ಯಾಸ ಇಟ್ಟುಕೊಂಡಿಲ್ಲ.ನಾವು ಪ್ರಪಂಚಕ್ಕೆ, ಜನರಿಗೆ ಪೂರ್ಣ ಆದರ್ಶರಾಗದೆ ಇದ್ದರೂ ನಮ್ಮ ಕೈಯಲ್ಲಿ ಆಗುವ ಸಣ್ಣ ಪುಟ್ಟ ಆದರ್ಶಗಳನ್ನು ಎತ್ತಿಹಿಡಿಯಬಹುದಲ್ಲ ?
ಎರಡುಸಾವಿರದ ಇಪ್ಪತ್ತೈದನೇ ವರ್ಷದ ಜೂನ್ ತಿಂಗಳ ಹದಿನೈದನೇ ದಿನದ ರವಿವಾರ. ತಲೆಗೆ ಕರಿಬಣ್ಣ ಬಳಿದುಕೊಂಡಿದ್ದರಿಂದ ತಲೆ ಆರುವವರೆಗೆ ಹೊರಗೆ ಕುಳಿತುಕೊಳ್ಳಬೇಕಿತ್ತು.ನನ್ನ ಇಬ್ಬರು ಮಕ್ಕಳಿಗೆಂದು ಖರೀದಿಸಿ ತಂದಿದ್ದ ಕಬ್ಬಿಣದ ತೂಗುಯ್ಯಾಲೆಯಲ್ಲಿ ಕುಳಿತು ಹಿಂದೆ ಮುಂದೆ ತೂಗಿಕೊಳ್ಳುತ್ತ ನನ್ನೆದುರಿನ ಮರವನ್ನು ನೋಡುತ್ತಿದ್ದೆ.ಆ ಮರ ಯಾವುದೋ ! ಅದರ ಹೆಸರು ಏನೋ! ಅಂತೂ ಒಂದು ಮರ.ಅಷ್ಟುಬೃಹತ್ ವೃಕ್ಷವೂ ಅಲ್ಲದ ಮಧ್ಯಮ ಗಾತ್ರದ ಒಂದು ಮರ ಅದು.’ಆಶೀರ್ವಾದ’ದ ಉತ್ತರ ದಿಕ್ಕಿನಬಯಲು ಜಾಗದಲ್ಲಿ ಕೆಲವು ಸಣ್ಣ ಸಣ್ಣಮರಗಳಿವೆ,ಕುರುಚಲು ಗಿಡಗಳಿವೆ.ನನ್ನ ಅಧ್ಯಯನ ಕೋಣೆಯ ಎದುರು ನಾನು ಬಂದ ಬಳಿಕ ಒಂದು ಸೀತಾಫಲ ಗಿಡವೂ ಬೆಳೆದಿದೆ.ಬಿಳಿ ಎಕ್ಕೆ,ಬಾರೆಹಣ್ಣಿನ ಗಿಡಗಳ ಜೊತೆಗೆ ಒಂದು ನೇರಳೆ ಹಣ್ಣಿನ ಮರವೂ ಇದೆ.ಬಾರೆಗಿಡ ಮತ್ತು ನೇರಳೆ ಮರಗಳು ಕಪ್ಪುಕೋತಿಗಳ ಆಶ್ರಯಸ್ಥಾನವಾಗಿವೆ.ಆಹಾರವನ್ನು ಹುಡುಕಿ ಹಿಂಡು ಹಿಂಡಾಗಿ ಬರುವ ಕಪ್ಪುಕೋತಿಗಳು ಅಥವಾ ಕೊಂಡ ಮುಸವಗಳಿಗೆ ಈ ಬಯಲು ಮತ್ತು ಅಲ್ಲಿ ಬೆಳೆದಿರುವ ಬಾರೆಹಣ್ಣು ಮತ್ತು ನೇರಳೆ ಮರ ಆವಾಸಸ್ಥಾನವಾಗಿದೆ.ನಾನು ಹೇಳುತ್ತಿರುವ ಈ ಹೆಸರಿಲ್ಲದ ಮರವೂ ಬೇಸಿಗೆಯಲ್ಲಿ ಕರಿಕೋತಿಗಳಿಗೆ ಅನ್ನವನ್ನು ನೀಡುತ್ತಿದೆ.
ಮನುಷ್ಯರ ಸ್ವಾರ್ಥ,ದುರಾಸೆಯಿಂದ ಪ್ರಕೃತಿ ಹಾಳಾಗಿದೆ.ಗಿಡಮರಗಳನ್ನು ಕಡಿದು ಕಾಂಕ್ರೀಟ್ ಕಾಡು ನಿರ್ಮಿಸುತ್ತಿದ್ದಾನೆ ನಾಗರಿಕ ಮನುಷ್ಯ.ಅತ್ತ ರೈತರು ನೀರಾವರಿಯ ಭಾಗ್ಯದ ಸೆಳವಿನ ಮೋಹಕ್ಕೆ ಸಿಕ್ಕು ತಮ್ಮ ಹೊಲಗಳಲ್ಲಿದ್ದ ಗಿಡ ಮರಗಳನ್ನು ಕಡಿದು ಗದ್ದೆಗಳನ್ನಾಗಿ ಮಾರ್ಪಡಿಸುತ್ತಿದ್ದಾರೆ.ಊರೂರಿಗೆ ಹೊಂದಿಕೊಂಡಿದ್ದ ಬೆಟ್ಟ ಗುಡ್ಡಗಳು ಧನದಾಹಿಗಳ ವಕ್ರಗಣ್ಣುಗಳಿಗೆ ಸಿಕ್ಕು ಕಲ್ಲುಕ್ವಾರಿಗಳಾಗಿ ಮಾರ್ಪಟ್ಟು ಬಿಂಚೆಯ ರಾಶಿಯಾಗಿವೆ.ಗಿಡಮರಗಳು ನೀಡುತ್ತಿದ್ದ ಹಣ್ಣುಗಳನ್ನು ನಂಬಿ ಬದುಕಿದ್ದ ಮಂಗಗಳಿಗೆಆಹಾರ ಇಲ್ಲದಂತಾಗಿ ಅವು ಊರುಗಳಲ್ಲಿ ಬರುತ್ತಿವೆ.ಗುಡಿ ಗುಂಡಾರಗಳಲ್ಲಿ ಒಳ ನುಗ್ಗುತ್ತಿವೆ.ಮಕ್ಕಳ ಕೈಯಲ್ಲಿದ್ದ ಬಿಸ್ಕಿತ್ ,ಹಣ್ಣು,ಸಿಹಿಯಪೊಟ್ಟಣಗಳನ್ನು ಕಸಿದುಕೊಂಡು ಹೋಗುತ್ತಿವೆ.ಒಮ್ಮೊಮ್ಮೆ ಯಾರೂ ಇಲ್ಲದ್ದನ್ನು ಕಂಡು ಮನೆಗಳಲ್ಲಿ ನುಗ್ಗಿ ಅನ್ನ ಆಹಾರ ತಿನ್ನುತ್ತವೆ.ಮಂಗಗಳ ಈ ವರ್ತನೆ ಮನುಷ್ಯರಿಗೆ ದುರ್ವರ್ತನೆಯಾಗಿ ಕಾಣಿಸುತ್ತದೆ. ಮಂಗಗಳನ್ನು ಹೊಡೆಯುವುದು,ಅಟ್ಟುವುದು ಮಾಡುವುದರ ಜೊತೆಗೆ ಜನರು ಗ್ರಾಮಗಳ ಗ್ರಾಮ ಪಂಚಾಯತಿಗಳಿಗೆ,ಪಟ್ಟಣಗಳ ನಗರಸಭೆಗಳಿಗೆ ‘ ಮಂಗಗಳ ಹಾವಳಿ ನಿಯಂತ್ರಿಸಿ’ ಎಂದು ದೂರು ನೀಡುತ್ತಿದ್ದಾರೆ.ನಾಗರಿಕರ ಹಕ್ಕುಗಳ ರಕ್ಷಣೆಗಾಗಿಯೇ ಹುಟ್ಟಿಕೊಂಡ ಗ್ರಾಮ ಪಂಚಾಯತಿಗಳು,ನಗರಸಭೆಗಳು ಜನರ ಹಿತ ಕಾಪಾಡುವುದಕ್ಕಾಗಿ ಮಂಗಗಳ ಹತೋಟಿಗೆ ಮುಂದಾಗುತ್ತಿವೆ.ಈ ಹತೋಟಿಯ ಜವಾಬ್ದಾರಿ ಹೊತ್ತ ಮಹಾನುಭಾವರುಗಳು ಮಂಗಗಳ ಸಾವಿಗೂ ಕಾರಣರಾಗುತ್ತಾರೆ.ನೂರಾರು ,ಸಾವಿರಾರು ಮಂಗಗಳ ಮಾರಣಹೋಮವಾದದ್ದನ್ನು ಆಗಾಗ ಪತ್ರಿಕೆಗಳಲ್ಲಿ ಓದುತ್ತೇವೆ.ತನ್ನ ಸುಖವನ್ನಷ್ಟೇ ಅಪೇಕ್ಷಿಸುವ ಮನುಷ್ಯ ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ಮರೆತಿದ್ದಾನೆ.ಭೂಮಿ ತನ್ನದಲ್ಲ,ಅದು ಪ್ರಕೃತಿಯ ಕೊಡುಗೆ.ಆದರೂ ಅದನ್ನು ತನ್ನ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡ ಮನುಷ್ಯ ಪ್ರಕೃತಿಯು ಪಶು ಪಕ್ಷಿಗಳ ಪೋಷಣೆಗಾಗಿ ಬೆಳೆಸಿದ್ದ ಗಿಡ ಮರಗಳನ್ನು ಕಡಿದು ಜೀವಸಂಕುಲಕ್ಕೆ ಅಪಾಯವನ್ನುಂಟು ಮಾಡಿದ್ದಾನೆ.ಗುಡ್ಡ ಗುಹೆ,ಗಿಡ ಮರಗಳಿದ್ದರೆ ಮಂಗಗಳು ಏಕೆ ಊರುಗಳಲ್ಲಿ ಬರುತ್ತಿದ್ದವು? ಕಾಡಾನೆಗಳು ಹೊಲಗದ್ದೆಗಳಿಗೆ ನುಗ್ಗಿ ಹಾಳು ಗೆಡಹುವುದನ್ನು ಆಕ್ಷೇಪಿಸುವ ಮನುಷ್ಯ ತಾನು ಕಾಡು ಕಡಿದು ವನ್ಯಜೀವಿಗಳ ಬದುಕನ್ನು ಅತಂತ್ರಗೊಳಿಸಿದ ಬಗ್ಗೆ ಆಲೋಚಿಸುವುದೇ ಇಲ್ಲ.
ಈ ಹೆಸರಿಲ್ಲದ ಮರ ಹಸಿರಾದ ಉದ್ದುದ್ದನೆಯ ಎಲೆಗಳನ್ನು ಮೈತುಂಬ ತುಂಬಿಕೊಂಡಿದೆ.ನನ್ನ ಸರಕಾರಿ ಕಾರು ಸೇರಿದಂತೆ ನನ್ನ ನೆರೆಹೊರೆಯವರ ಕಾರುಗಳಿಗೆ ನೆರಳಿನ ಭಾಗ್ಯವನ್ನು ಒದಗಿಸಿದೆ.ಅಳಿಲುಗಳಿಗೆ ವಾಸಸ್ಥಾನವಾಗಿದೆ.ಈ ಮರ ಹಣ್ಣು ಬಿಡುವ ಮರವಲ್ಲ.ಆದರೆ ಗೊಂಚಲು ಗೊಂಚಲು ಬಿಡುವ ಇದರ ಬಿಳಿಯ ಹೂವುಗಳು ಮಂಗಗಳ ಆಹಾರವಾಗಿದೆ.ಒಬ್ಬ ಆಡು ಕಾಯುವವನು ತನ್ನ ಆಡು ಮರಿಗಳೊಂದಿಗೆ ಆಗಾಗ ಇಲ್ಲಿಗೆ ಬರುತ್ತಾನೆ.ಮೊನ್ನೆ ಕುತೂಹಲದಿಂದ ‘ ಈ ಮರದ ಹೆಸರೇನು ?’ ಎಂದು ಕೇಳಿದ್ದೆ ಆತನನ್ನು.’ ಏನೋ ರಿ ಸರ್,ನನಗೆ ಗೊತ್ತಿಲ್ಲ,ಈ ಗಿಡಕ್ಕೆ ಏನಂತಾರೆ ಅಂತ’ ಎಂದು ಉತ್ತರಿಸಿದ್ದ ಆಡುಕಾಯುವ ವ್ಯಕ್ತಿ. ಆಡು ಕಾಯುವ ವ್ಯಕ್ತಿಗೆ ಗೊತ್ತಿರದ ಈ ಮರದ ಹೆಸರು ಇತರರಿಗೆ ಗೊತ್ತಿರುವ ಸಾಧ್ಯತೆ ಇಲ್ಲವೆನ್ನಿಸಿ ಆ ಬಗ್ಗೆ ಪ್ರಶ್ನಿಸುವುದನ್ನೇ ಬಿಟ್ಟಿದ್ದೇನೆ.ಆದರೂ ಈ ಮರದ ಬಗೆಗಿನ ಕುತೂಹಲ ಮಾತ್ರ ಕಡಿಮೆಯಾಗಿಲ್ಲ.ಬಿಡುವು ಇದ್ದಾಗಲೆಲ್ಲ ತೂಗುಮಂಚದ ಮೇಲೆ ಕುಳಿತು ಈ ಮರವನ್ನು ನೋಡುತ್ತಿರುತ್ತೇನೆ,ಚಿಂತಿಸುತ್ತಿರುತ್ತೇನೆ.ಹೆಸರಿರದ ಈ ಮರವೂ ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡಿದೆಯೋ ಎಂಬಂತೆ ನನ್ನೊಂದಿಗೆ ವರ್ತಿಸುತ್ತದೆ.ನಾನು ತನ್ನನ್ನು ನೋಡುತ್ತಿದ್ದಂತೆ ನನ್ನೆದರು ಏನೇನೋ ಸೃಷ್ಟಿ ರಹಸ್ಯವನ್ನು ತೆರೆದಿಡುತ್ತಿದೆ.ನಾನು ಅರಿಯದ ಭಾವ ಪ್ರಪಂಚವನ್ನು ನನ್ನೆದುರು ತೆರೆದಿಡುತ್ತಿದೆ.ಒಮ್ಮೊಮ್ಮೆ ಅದು ‘ನಾನು ಬರಿಯ ಮರವಲ್ಲ,ಮರ ಮಾತ್ರವಲ್ಲ’ ಎಂದು ಕೂಗಿದಂತೆ ಕೇಳಿಸುತ್ತದೆ.ತಣ್ಣನೆಯ ಗಾಳಿಗೆ ಮೈಯನ್ನೆಲ್ಲ ಹರಡಿ ಬೀಸಿ ನನಗೆ ತಂಗಾಳಿಯನ್ನೆರಚುತ್ತ ಸೃಷ್ಟಿರಹಸ್ಯವನ್ನು ಬೋಧಿಸುವಂತೆ ಮಾತನಾಡುತ್ತದೆ.
ಇಂದು ಮರವನ್ನೇ ದಿಟ್ಟಿಸುತ್ತ ಕುಳಿತಿದ್ದೆ.ಯಾರೋ ಹೆಣ್ಣೊಂದು ನಕ್ಕ ಸದ್ದು ಕೇಳಿಸಿತು.ಸುತ್ತಮುತ್ತ ಯಾರೂ ಇರಲಿಲ್ಲ.ಮತ್ತೆ ಮತ್ತೆ ನಕ್ಕ ಮಂಜುಳ ನಗು ಅದು.ನೋಡಿದೆ.ಮರದಿಂದ ಬರುತ್ತಿದೆ ಆ ನಗು.ಮರಮಾತನಾಡುತ್ತಿದೆ ! ಆಶ್ಚರ್ಯ! ‘ ನನ್ನ ಹೆಸರನ್ನು ಹುಡುಕುವ ಹುಚ್ಚುಹಂಬಲ ನಿನಗೇಕೆ?’ಪ್ರಶ್ನಿಸಿತು ಮರ.
‘ ಹೆಸರಿನಿಂದ ಅಸ್ತಿತ್ವ ಗುರುತಿಸುವ ಮನುಷ್ಯ ಪ್ರಯತ್ನ’ ಎಂದೆ ನಾನು.
‘ನಿನ್ನ ಹೆಸರೇನು ?’ ಪ್ರಶ್ನಿಸಿತು ಮರ.
‘ ಮುಕ್ಕಣ್ಣ ಕರಿಗಾರ’ ಹೆಮ್ಮೆಯಿಂದ ಉತ್ತರಿಸಿದೆ.
‘ ಅದು ನಿನ್ನ ಹೆಸರೆ ?’ ಪ್ರಶ್ನಿಸಿತು ಹೆಸರಿಲ್ಲದ ಮರ.
ಒಂದು ಕ್ಷಣ ತಬ್ಬಿಬ್ಬಾದೆ.ಬೇರೆಯವರಾಗಿದ್ದರೆ ‘ ಹೌದು, ಅದು ನನ್ನದೇ ಹೆಸರು’ ಎಂದು ಗಟ್ಟಿಯಾಗಿ ಕಿರುಚುತ್ತಿದ್ದರು.ಆದರೆ ಅನುಭಾವಿಯಾದ ,ಅಧ್ಯಾತ್ಮ ಸಾಧಕನಾದ ನಾನು ‘ ಮುಕ್ಕಣ್ಣ ಕರಿಗಾರ’ ಎನ್ನುವುದು ನನ್ನ ನಿಜಹೆಸರಲ್ಲ ಎಂದು ಬಲ್ಲವನಾದ್ದರಿಂದ ಸ್ವಲ್ಪ ಹೊತ್ತು ನಿರುತ್ತರನಾದೆ.
ನಗುತ್ತ ಮತ್ತೆ ಮರ ಪ್ರಶ್ನಿಸಿತು ‘ ನಿನ್ನ ಹೆಸರು ಏನು?’
‘ ಜನರು ನನ್ನನ್ನು ಮುಕ್ಕಣ್ಣ ಕರಿಗಾರ ಎಂದು ಕರೆಯುತ್ತಾರೆ’ ಏನೋ ಒಂದು ಸಮಾಧಾನದ ಉತ್ತರ ನೀಡಿದೆ.
‘ಜನರು ಕರೆಯುವ ಹೆಸರು ನೀನೋ’ ಮರುಪ್ರಶ್ನಿಸಿತು ಹೆಸರಿಲ್ಲದ ನನ್ನೆದುರಿನ ಮರ.
‘ ಅಲ್ಲ’ ಎಂದೆ
‘ ಹಾಗಾದರೆ ಯಾರು ನೀನು? ನಿನ್ನ ಹೆಸರೇನು?’ ಕೇಳಿತು ಮರ.
ಏನು ಉತ್ತರಿಸಬೇಕೆಂದು ತೋಚದೆ ಕುಳಿತೆ ಕ್ಷಣಹೊತ್ತು.
ನಗುನಗುತ್ತಲೇ ಪ್ರಶ್ನಿಸಿತು ಮರ
‘ ಎಲ್ಲಿಂದ ಬಂದೆ ನೀನು?’
‘ ಗಬ್ಬೂರಿನಿಂದ.ನಮ್ಮೂರು ಗಬ್ಬೂರುನಿಂದ ಬಂದಿದ್ದೇನೆ ಇಲ್ಲಿಗೆ’ ಮತ್ತಾವ ಪ್ರಶ್ನೆ ಕೇಳುವುದೋ ಈ ಮರ ಎಂದು ಅಳುಕುತ್ತಲೇ ಉತ್ತರಿಸಿದೆ.
‘ಗಬ್ಬೂರು ನಿನ್ನ ಊರೇ? ನೀನು ನಿಜವಾಗಿಯೂ ಅಲ್ಲಿಂದಲೇ ಬಂದಿದ್ದಿಯಾ?’ ಮರದ ಪ್ರಶ್ನೆ.ಉತ್ತರಿಸಲು ತಡಕಾಡುತ್ತಿದ್ದೆ.
‘ಸರಿ ,ಇಲ್ಲಿಗೇಕೆ ಬಂದೆ?’
‘ ಸರಕಾರಿ ಅಧಿಕಾರಿ ,ವರ್ಗಾವಣೆ ಆಯಿತು,ಬಂದೆ’ ನನ್ನ ಉತ್ತರ
‘ ಸರಕಾರ ನಿನ್ನನ್ನು ವರ್ಗಾಯಿಸಿತೆ?’
ವಿಚಿತ್ರ ಪ್ರಶ್ನೆ ಹೆಸರಿರದ ಮರದ್ದು
‘ ಹೌದಲ್ಲವೆ? ಸರಕಾರ ವರ್ಗಾಯಿಸಿದ್ದರಿಂದಲೇ ನಾನಿಲ್ಲಿಗೆ ಬಂದಿದ್ದೇನೆ’.
‘ ಎಲ್ಲರಂತೆ ನೀನು ವರ್ಗಾವಣೆಗೊಂಡು ಬರಲಿಲ್ಲ.ನೀನಾಗಿಯೇ ಬರಲಿಲ್ಲ. ಬರಬೇಕಾಗಿತ್ತು ಬಂದೆ’ ತತ್ತ್ವಜ್ಞಾನ ಹೇಳತೊಡಗಿತು ಎದುರಿದ್ದ ಹೆಸರಿರದ ಮರ.
‘ ನಿನಗೆ ಜನರು ಗುರುತಿಸುವ ಒಂದು ಹೆಸರು ಇದೆ,ಒಂದು ಅಧಿಕಾರಸ್ಥಾನ ಇದೆ,ಸರಕಾರ ಇದೆ,ಬಂದೆ ಎನ್ನುತ್ತಿ.ಹಾಗೆಯೇ ನಾನು ಕೂಡ.ನಾನು ಇಲ್ಲಿಗೆ ಬರಬೇಕು ಎಂದು ಬರಲಿಲ್ಲ.ನನ್ನನ್ನು ಹುಟ್ಟಿಸಿದಾತನ ಸಂಕಲ್ಪ ಅದಾಗಿತ್ತು.ನಾನು ಬೀಜರೂಪದಲ್ಲಿ ಹಕ್ಕಿಯ ಮುಕುಳಿಯಿಂದ ಉದುರಿ ಇಲ್ಲಿ ಬಿದ್ದೆ.ನೀವೆಲ್ಲ ಮನುಷ್ಯರು ತಾಯಿ ಗರ್ಭದಿಂದ ಹೊರಬರುವಂತೆ ನಾವು ಮರಗಳು ಹಕ್ಕಿಗಳ ಮುಕುಳಿಗಳಿಂದ ಉದುರಿ ಬೀಳುತ್ತೇವೆ.ಪರಮಾತ್ಮನ ಸಂಕಲ್ಪ ನಾನು ಇಲ್ಲಿ ಬಿದ್ದು,ಬೆಳೆಯುವುದು ಇತ್ತು.ಬಿದ್ದೆ ಬೀಜವಾಗಿ,ಎದ್ದೆ ಮರವಾಗಿ.ಈಗ ಕೆಲವರಿಗೆ ಆಹಾರವಾಗಿದ್ದೇನೆ,ಕೆಲವರಿಗೆ ನೆರಳಾಗಿದ್ದೇನೆ,ಕೆಲವರಿಗೆ ಆಸರೆಯೂ ಆಗಿದ್ದೇನೆ.ಪರಮಾತ್ಮನ ಉದ್ದೇಶ ಏನಿತ್ತೋ ಅದನ್ನು ಈಡೇರಿಸುತ್ತ ನಿಂತಿದ್ದೇನೆ.ಮತ್ತೆ ಎಂದು ಯಾರು ಕೊಡಲಿ ಹಚ್ಚುತ್ತಾರೋ ಗೊತ್ತಿಲ್ಲ.ಕೊಡಲಿಯ ಏಟು ಬೀಳುವವರೆಗೆ ನಾನಿಲ್ಲಿ ಬದುಕಿರುತ್ತೇನೆ ಮರವಾಗಿ.ಪರರಿಗೆ ಆಸರೆಯಾಗುವುದೇ ನನ್ನ ಜೀವನದ ಉದ್ದೇಶ.ನನ್ನ ಹೆಸರು ಏನು ಎಂದು ನಾನು ಪರಮಾತ್ಮನನ್ನು ಕೇಳಲಿಲ್ಲ; ಪರಮಾತ್ಮನು ನನಗೆ ಒಂದು ಹೆಸರು ಇದೆ ಎಂದು ಹೇಳಲಿಲ್ಲ.ಆದರೆ ‘ಇಂತಹ ನೆಲದಲ್ಲಿ ಬಿದ್ದು ಬಾಳು,ಬಾಳುಗಳಿಗೆ ಆಸರೆಯಾಗು’ ಎಂದಿಷ್ಟೆ ಪರಮಾತ್ಮನು ನನಗೆ ಹೇಳಿದ್ದು.ಪರಮಾತ್ಮನ ಆಣತಿಯಂತೆ ಬದುಕುವ ನನಗೆ ಒಂದು ಹೆಸರಿನ ಹಂಗು ಏಕೆ? ಪರೋಪಕಾರಕ್ಕಾಗಿ ಬದುಕುತ್ತಿರುವ ನನಗೆ ಹೆಸರಿನ ಅಭಿಮಾನವಾದರೂ ಏಕೆ ?ಪರಮಾತ್ಮನ ಉದ್ದೇಶ ಸಾಧಿಸಿದರಷ್ಟೆ ಸಾಲದೆ?’ ನಗುತ್ತ ಮಾತು ಮುಗಿಸಿ,ಮೌನವಾಯಿತು ಮರ.ಮರ ಈಗ ಶಾಂತವಾಗಿ ನಿಂತಿತ್ತು.ಎಲೆಗಳು ಸಣ್ಣಗೆ ಅಲುಗಾಡುವುದನ್ನು ಬಿಟ್ಟರೆ ಹೆಸರಿರದ ಮರ ಪೂರ್ಣಯೋಗಿಯ ಸಾರ್ಥಕತೆಯಲ್ಲಿ,ಧ್ಯಾನಮಗ್ನ ಭಂಗಿಯಲ್ಲಿ ನಿಂತಿತ್ತು ನನ್ನೆದುರು.
೧೫.೦೬.೨೦೨೫