ತಲೆ ‘ ಕೆಡಿಸಿಕೊಂಡಲ್ಲದೆ’ ಪರಮಾತ್ಮನ ‘ಹೊಳಹು ‘ ದಕ್ಕದು.

ತಲೆ ‘ ಕೆಡಿಸಿಕೊಂಡಲ್ಲದೆ’ ಪರಮಾತ್ಮನ ‘ಹೊಳಹು ‘ ದಕ್ಕದು.

        ಮುಕ್ಕಣ್ಣ ಕರಿಗಾರ

ಕೆಲವರು ‘ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳುತ್ತಿರುವುದನ್ನು ಆಗಾಗ ಕೇಳುತ್ತಿರುತ್ತೇವೆ.ಅಂದರೆ ನಾನು ಯಾವುದರ ಬಗ್ಗೆಯೂ ಚಿಂತಿತನಲ್ಲ ಎನ್ನುವುದು ಅವರಾಡುವ ಮಾತಿನ ಅರ್ಥ.ಎಲ್ಲ ಅನುಕೂಲ ಇದ್ದವರು ಯಾವುದಾದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಾದರೂ ಏನಿರುತ್ತದೆ? ಇಲ್ಲದವರೇ ಬೇಕಾದ ವಸ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ.ಇಲ್ಲದವರಲ್ಲಿ ಪಡೆಯಬೇಕಾದ ವಸ್ತುವಿನ ಬಗ್ಗೆ ‘ ಆಸಕ್ತಿ’ ಇರುತ್ತದೆ.ಪಡೆಯಬೇಕು ಎನ್ನುವ ಈ ಆಸಕ್ತಿಯು ‘ತಲೆಕೆಡಿಸಿ’ ಕೊಳ್ಳಯವಂತೆ ಮಾಡುತ್ತದೆ.’ ತಲೆಕೆಡಿಸಿಕೊಳ್ಳುವುದು’ ಎಂದರೆ ಇಚ್ಛಿತವಸ್ತುವನ್ನು ಪಡೆಯುವ ಆಲೋಚನೆ ಎಂದು ಇದರಿಂದ ಸ್ಪಷ್ಟವಾಯಿತು.ಉಳ್ಳವರಿಗೆ ಎಲ್ಲವೂ ಇರುವುದರಿಂದ ,ಸಂಪತ್ತು – ಸಲಕರಣೆಗಳ ಮಾಧ್ಯಮದಿಂದ ಅವರು ಬೇಕಾದುದನ್ನು ಸುಲಭವಾಗಿ ಪಡೆಯಬಲ್ಲರಾದ್ದರಿಂದ ಅವರಿಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ.ತಲೆಕೆಡಿಸಿಕೊಳ್ಳಬೇಕಾದವರು ಬಡವರು,ಇಲ್ಲದವರು ಮಾತ್ರ,ಶ್ರೀಮಂತರು,ಉಳ್ಳವರು ಅಲ್ಲ ಎನ್ನುವುದು ದೃಢಪಟ್ಟಿತು.

 

ಕೆಲವೊಮ್ಮೆ ಬಯ್ಯುವಾಗಲೋ ಅಥವಾ ಒಬ್ಬ ವ್ಯಕ್ತಿ ವಿಚಿತ್ರವರ್ತನೆಯನ್ನು ತೋರಿದಾಗಲೋ ‘ ನಿನಗೆ ತಲೆಕೆಟ್ಟಿದೆಯೋ’ ಎಂದು ಹೀಗಳೆಯುತ್ತಾರೆ.’ ತಲೆ ನೆಟ್ಟಗಿರುವುದು’ ಜಗತ್ತು ಮತ್ತು ಜನರಿಗೆ ಒಪ್ಪಿಗೆಯಾಗುವ ಸಂಗತಿ ಆದರೆ ‘ ತಲೆಕೆಟ್ಟಿರುವುದು’ ‘ ತಲೆಕೆಡುವುದು’ ಜಗತ್ತು ಮತ್ತು ಜನರಿಗೆ ಒಪ್ಪಿಗೆಯಾಗದ ಸಂಗತಿ.ತಲೆನೆಟ್ಟಗಿದ್ದವರ ವರ್ತನೆಯೇ ಬೇರೆ,ತಲೆಕೆಟ್ಟವರ ವರ್ತನೆಯೇ ಬೇರೆ.ತಲೆನೆಟ್ಟಗಿದ್ದವರದ್ದು ಸಹಜವರ್ತನೆಯಾದರೆ ತಲೆಕೆಟ್ಟವರದ್ದು ಅಸಹಜವರ್ತನೆ.ತಲೆ ಕೆಟ್ಟವನಿಗೆ ಊಟದ ಪರಿವೆ ಇಲ್ಲ,ಉಡುವ ಬಟ್ಟೆಗಳ ಪರಿವೆ ಇಲ್ಲ,ಎಲ್ಲಿ ಅಂದರೆ ಅಲ್ಲಿ ಬೀಳುತ್ತಾನೆ,ಏಳುತ್ತಾನೆ.ಅಸ್ವಚ್ಛತೆಯ ಅಶುಚಿ ವ್ಯಕ್ತಿತ್ವ.ಜನರು ‘ ಗಲೀಜು’ ಎಂದು ಮೂಗುಮುಚ್ಚಿಕೊಳ್ಳುವ,ಮೂಗುಮುರಿಯುವ ನಡತೆ ತಲೆಕೆಟ್ಟವನದ್ದು ಆಗಿರುತ್ತದೆ.ಅದು ಅವನ ತಪ್ಪಲ್ಲ,ಅವನ ಬುದ್ಧಿ ಸರಿ ಇರುವುದಿಲ್ಲ. ತಲೆನೆಟ್ಟಗಿರುವುದು ಸಾಮಾಜಿಕ ಜೀವನದ ಅವಶ್ಯಕತೆಯಾದರೆ ತಲೆಕೆಟ್ಟವರು ಸಮಾಜಜೀವನದಿಂದ ಬಹಿಷ್ಕೃತರಾಗಿ ಹೊರ ಉಳಿಯಬೇಕಾಗುತ್ತದೆ.ನೆಟ್ಟಗಿರುವ ಜನರ ಪ್ರಪಂಚದಲ್ಲಿ ಸೊಟ್ಟಗಿರುವುದಾಗಲಿ,ವಕ್ರವಾಗಿರುವುದಾಗಲಿ ಸರಿ ಎನ್ನಿಸುವುದಿಲ್ಲ.

 

‘ ಹುಚ್ಚನಾಗಲಾರದೆ ಶಿವ ಮೆಚ್ಚಲಾರ’ ಎನ್ನುತ್ತದೆ ಒಂದು ಗಾದೆ.ಇದು ವಿಪರೀತವೇ ಆಯಿತಲ್ಲ ! ಜಗತ್ತು ಮತ್ತು ಜನರು ತಲೆಕೆಟ್ಟವರನ್ನು ಮೆಚ್ಚುವುದಿಲ್ಲ,ಆದರೆ ಜಗದೀಶ್ವರನಾದ ಶಿವನು ‘ ಹುಚ್ಚರಾಗದವರನ್ನು’ ಮೆಚ್ಚನಂತೆ! ಅಂದರೆ ಜಗತ್ತು ಮತ್ತು ಜನರಿಗೆ ಬೇಡವಾದವರೇ ಜಗದೀಶ್ವರನಾದ ಶಿವನಿಗೆ ಬೇಕಾಗುತ್ತಾರೆ ಎಂದರ್ಥವಾಯಿತು.ಹಾಗಾದರೆ ಹುಚ್ಚರೆಲ್ಲರೂ ಶಿವನಿಗೆ ಬೇಕಾದವರೆ? ಹಾಗೆ ಹೇಳುವಂತೆಯೂ ಇಲ್ಲ.ಬುದ್ಧಿಭ್ರಮಿತರೆಲ್ಲರೂ ಪರಶಿವನಿಗೆ ಬೇಕಾದವರಲ್ಲ,ಅದು ಅವರ ಆರೋಗ್ಯ ಸಮಸ್ಯೆ ಅಷ್ಟೆ.ಹಾಗಾದರೆ ಶಿವನಿಗೆ ಬೇಕಾಗುವ ‘ಹುಚ್ಚರು ‘ ಯಾರು ? ಹೇಳಿಕೇಳಿ ಶಿವನೂ ಕೂಡ ‘ ಮರುಳಶಂಕರ’ ,’ ಬೋಳೇಶಂಕರ’ ಎಂದು ಬಿರುದುಗೊಂಡ ಹುಚ್ಚ.ಹುಚ್ಚರಿಗೆ ಹುಚ್ಚರೇ ಬೇಕಾಗುತ್ತಾರೆ ! ಹಾಗಾಗಿ ಹುಚ್ಚಶಿವನಿಗೆ ಹುಚ್ಚಭಕ್ತರೇ ಬೇಕು,ಹುಚ್ಚರೇ ಶಿವನಿಗೆ‌ಮೆಚ್ಚು.

ತಲೆ ಇದ್ದೂ ತಲೆಕೆಡಿಸಿಕೊಳ್ಳುವವರೇ ಶಿವನಿಗೆ ಬೇಕಾಗುವ ಹುಚ್ಚರು.ತಲೆನೆಟ್ಟಗಿದ್ದವರಿಗೆ ಶಿವನ ಅವಶ್ಯಕತೆ ಇಲ್ಲ.ಭೋಗೋಪಭೋಗಗಳುಳ್ಳವರಿಗೆ ಶಿವನ ಅವಶ್ಯಕತೆಯಾದರೂ ಎಲ್ಲಿರುತ್ತದೆ? ಯಾಕಿರುತ್ತದೆ? ಆದರೂ ಎಲ್ಲ ಉಳ್ಳ ಕೆಲವರಲ್ಲಿಯೂ ಶಿವನ ಹುಚ್ಚು ಅಂಕುರಿಸುತ್ತದೆ.ಅಂಥವರು ಇದ್ದುದೆಲ್ಲವನ್ನು ತೊರೆದು ಇಲ್ಲದ ಯಾವುದೋ ಒಂದನ್ನು ‘ ಹುಡುಕತ್ತ’ ಹೋಗುತ್ತಾರೆ.ಸಿದ್ಧಾರ್ಥ ಮಧ್ಯರಾತ್ರಿಯಲ್ಲಿ ಎದ್ದು ಹೋದದ್ದು ಎಲ್ಲ ಇದ್ದೂ ಇಲ್ಲದ ವಸ್ತುವಿನ ಅನ್ವೇಷಣೆಗಾಗಿಯೇ ! ಇದ್ದುದರಲ್ಲಿಯೇ ಆನಂದಿಸುವುದು ನೂರಕ್ಕೆ ತೊಂಬತ್ತೊಂಬತ್ತು ಜನರ ಸ್ವಭಾವ ; ಇದ್ದುದನ್ನು ಒದ್ದು ಇಲ್ಲದುದರ ಆನಂದ ಅರಸುವುದು ನೂರರಲ್ಲಿ ಒಬ್ಬರ ಸ್ವಭಾವ.ಸುಖಿಗಳಿಗೆ ದುಃಖಬೇಡ.ಸುಖ ಇದ್ದೂ ದುಃಖ ಬಯಸುತ್ತಾನೆ ಎಂದರೆ ಅವನು‌ ಮೂರ್ಖನೇ ಇರಬೇಕು.ಅಂಥಹ ಮೂರ್ಖರೇ ಶಿವನಿಗೆ ಬೇಕಾಗುತ್ತಾರೆ!

ತಲೆ ನೆಟ್ಟಗಿದ್ದವರು ಪ್ರಪಂಚ ಸರಿಯಾಗಿದೆ,ಹೆಂಡಿರು ಮಕ್ಕಳ ಸಂಸಾರ ಸುಖವೇ ನಿಜ ಸುಖ ಎಂದು ಭಾವಿಸುತ್ತಾರೆ.ಆದರೆ ಶಿವನ ಹಂಬಲಕ್ಕೆ ಬಿದ್ದ ವ್ಯಕ್ತಿ ಪ್ರಪಂಚಸುಖದಲ್ಲಿ ಏನೋ ‘ ಕೊರತೆ’ ಕಾಣುತ್ತಾನೆ.ಈ ಕೊರತೆಯೇ ಅವನನ್ನು ‘ಚಿರಂತನತೆಯ ಒರತೆ’ ಯ ಅನ್ವೇಷಣೆಗೆ‌ ಪ್ರೇರಣೆಯಾಗುತ್ತದೆ.ತಲೆಕೆಡಿಸಿಕೊಳ್ಳುವ ವ್ಯಕ್ತಿಗೆ ಸಂಸಾರ ಸುಖವಾಗಿದ್ದರೆ ನನಗೇಕೆ ಅನಾರೋಗ್ಯ ಬರುತ್ತದೆ? ನನಗೇಕೆ ಮುಪ್ಪು ಆವರಿಸುತ್ತದೆ? ಕೊನೆಗೆ ನಾನು ಏಕೆ ಸಾಯುತ್ತೇನೆ ? ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ.ಈ‌ ಪ್ರಶ್ನೆಗಳೇ ಅವನನ್ನು ತಲೆಕೆಡಿಸಿಕೊಳ್ಳುವಂತೆ ಮಾಡುತ್ತವೆ,ಹುಚ್ಚನನ್ನಾಗಿಸುತ್ತವೆ.ಹುಟ್ಟುವುದು,ರೋಗಪೀಡಿತರಾಗುವುದು,ಮುಪ್ಪಡರುವುದು ಮತ್ತು ಕೊನೆಗೆ ಸಾಯುವುದು ಎಲ್ಲರ ಅನುಭವ.ಹಾಗಾಗಿ ಬಹಳಷ್ಟು ಜನರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.ಅದು ಸಹಜ ಸಂಗತಿಯಾಗಿ ಕಾಣಿಸುತ್ತದೆ ಬಹುಪಾಲು ಜನರಿಗೆ.ಆದರೆ ಎಲ್ಲೋ ಕೆಲವರಿಗೆ ಇದರ ಕಾರಣ ಏನು? ಇದಕ್ಕೆ ಪರಿಹಾರ ಇಲ್ಲವೆ ಎನ್ನುವ ಚಿಂತೆ ಕಾಡುತ್ತದೆ.ಆ ಚಿಂತೆಯೇ ಅವರನ್ನು ಜನರಿಂದ,ಜಗತ್ತಿನಿಂದ ಪ್ರತ್ಯೇಕರನ್ನಾಗಿಸುತ್ತದೆ.ಆ ಚಿಂತೆಯೇ ಅವರನ್ನು ‘ ಹುಚ್ಚ’ ರನ್ನಾಗಿಸುತ್ತದೆ! ಎಲ್ಲರಂತೆ ಹುಟ್ಟಿ ಉಂಡುಟ್ಟು ಸುಖವಾಗಿ ಬಾಳುವುದನ್ನು ಬಿಟ್ಟು ಹುಟ್ಟು- ಸಾವು,ರೋಗ- ಮುಪ್ಪುಗಳ ಬಗ್ಗೆ ಚಿಂತಿಸುವುದು ಎಂದರೆ ಮೂರ್ಖತನವಲ್ಲವೆ? ಹುಚ್ಚಲ್ಲವೆ?

‘ ತಲೆಕೆಡಿಸಿಕೊಂಡ’ ವರೇ ಮಹಾಪುರುಷರು,ಮಹಾತ್ಮರು ಆಗುತ್ತಾರೆ ಎನ್ನುವುದು ವಿಚಿತ್ರವಾದರೂ ಸತ್ಯ.ತಲೆಯ ಬೆಲೆ ತಲೆಕೆಡಿಸಿಕೊಳ್ಳುವವರಿಗೆ ಮಾತ್ರ ತಿಳಿದಿರುತ್ತದೆ,ತಲೆಕೆಡಿಸಿಕೊಳ್ಳದವರಿಗೆ ತಲೆ ದೇಹದ ಒಂದು ಅವಯವ ಮಾತ್ರ.ಇದ್ದವಸ್ತುಪ್ರಪಂಚದ ಸುಖ ಶಾಶ್ವತವಲ್ಲವಲ್ಲವೆಂದು ಪ್ರಪಂಚಾತೀತವಸ್ತು ಒಂದು ಇದೆಯೆಂದು ಆ ‘ಅತೀತವಸ್ತು’ ವೇ ‘ ಆನಂದ’ ದ ಮೂಲವೆಂದು ಅದರ ಅನ್ವೇಷಣೆಗೆ ತೊಡಗುವುದೇ ತಲೆಕೆಡಿಸಿಕೊಳ್ಳುವುದು.ಹೀಗೆ ‘ ತಲೆಕೆಡಿಸಿಕೊಂಡವರಿ’ ಗೆ ಮಾತ್ರ ಆನಂದ ದೊರಕುತ್ತದೆ. ತಲೆಇದ್ದವರು ‘ ಸುಖಿ’ ಗಳಾಗಬಹುದು ತಲೆಕೆಡಿಸಿಕೊಂಡವರು ‘ ಆನಂದದಸುಧೆಯ ಸೊಬಗನ್ನು ಸವಿಯುತ್ತಾರೆ.

ಶಿವನು ಹುಚ್ಚರನ್ನು ಮೆಚ್ಚುತ್ತಾನೆ ಎನ್ನುವ ಮಾತಿನ ಹೆಚ್ಚುಗಾರಿಕೆಯನ್ನು ನಾವು ಇಲ್ಲಿ ಮನಗಾಣಬಹುದು.ಯಾರಿಗೆ ಪ್ರಪಂಚದ ಹುಚ್ಚು ಹಿಡಿದಿದೆಯೋ ಅವರಿಗೆ ಪರಮಾರ್ಥದ ಹುಚ್ಚು ಹಿಡಿಸದು,ಪರಮಾತ್ಮನ ಹುಚ್ಚು ಹಿಡಿಯದು.ಹೆಂಡತಿ ಮಕ್ಕಳು,ಬಂಧು ಬಾಂಧವರು,ಸಿರಿ – ಸಂಪತ್ತುಗಳ ಸಮೃದ್ಧ ಜೀವನ ಇರುವಾಗ ಪರಮಾತ್ಮನಿಗಾಗಿ ಪರಿತಪಿಸುವುದೇಕೆ? ಪರಮಾತ್ಮ ಇದ್ದಾನೋ ಇಲ್ಲವೋ ? ಆ ಚಿಂತೆ ನಮಗೇಕೆ? ಪರಮಾತ್ಮ ಇದ್ದರೆ ನಮಗೇನು ತೊಂದರೆ ಇಲ್ಲ,ಪರಮಾತ್ಮನು ಇರದಿದ್ದರೆ ನಮಗೇನೂ ನಷ್ಟವಿಲ್ಲ.ನಮಗೆ ಬೇಕಾದ ಎಲ್ಲವೂ ಇದೆಯಲ್ಲ ಎನ್ನುವುದು ತಲೆಕೆಡಿಸಿಕೊಳ್ಳದ ಉಳ್ಳವರ ಜೀವನಧೋರಣೆ.ಈ ಕಾರಣದಿಂದ ಅವರು ಪ್ರಪಂಚದಲ್ಲೇ ಆಸಕ್ತರಾಗುತ್ತಾರೆ,ಸಂಸಾರ ಸುಖವನ್ನೇ ನಿಜವೆಂದು ಭ್ರಮಿಸುತ್ತಾರೆ.ಆದರೆ ತಲೆಕೆಡಿಸಿಕೊಳ್ಳುವವರು ತನ್ನ ತಂದೆ- ತಾಯಿ,ಬಂಧುಗಳ ಮರಣ, ಆಪ್ತ ಮಿತ್ರರ ಮನೆಗಳಲ್ಲಿ ಘಟಿಸುವ ಸಾವು,ಅನಿಷ್ಟಕರ ಪ್ರಸಂಗಗಳಿಂದ ವಿಚಲಿತರಾಗುತ್ತಾರೆ.ಈ ವಿಚಲಿತ ಚಿತ್ತವೇ ಅವರನ್ನು ಅಚಲಾನಂದದತ್ತ ಕರೆದೊಯ್ಯುತ್ತದೆ. ಸಂಸಾರದಲ್ಲಿ ಆಸಕ್ತಿ ಕಳೆದುಕೊಂಡು ಪರಶಿವನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.ಪರಶಿವನಲ್ಲಿ ಆಸಕ್ತಿ ಭಕ್ತಿಯಾಗಿ,ಧ್ಯಾನವಾಗಿ,ಯೋಗವಾಗಿ ಕೊನೆಗೆ ಪರಶಿವನನ್ನು ಕಾಣುವುದೇ ಜೀವನದ ಸಾರ್ಥಕತೆ,ಪರಶಿವನನ್ನು ಕಂಡಲ್ಲದೆ ಬಿಡೆನು ಎನ್ನುವ ದೃಢನಿಶ್ಚಯಕ್ಕೆ ಬರುತ್ತಾರೆ.ಈ ದೃಢನಿಶ್ಚಯವೇ ಶಿವನ ಹುಚ್ಚಾಗಿ ಪರಿಣಮಿಸಿ ನಿಂತಲ್ಲಿ ಕುಳಿತಲ್ಲಿ,ಉಂಬುವಲ್ಲಿ ಉಡುವಲ್ಲಿ,ನಡೆವಲ್ಲಿ ನುಡಿವಲ್ಲಿ ಎಲ್ಲೆಲ್ಲೂ ಶಿವನನ್ನೇ ಕಾಣುತ್ತಾರೆ.ಪ್ರಪಂಚವೆಲ್ಲವೂ ಶಿವಮಯವಾಗುತ್ತದೆ,ಜನರಲ್ಲೆರೂ ಶಿವಸ್ವರೂಪಿಗಳಾಗಿ ಕಾಣುತ್ತಾರೆ.ಶಿವನ ಹುಚ್ಚು ಹಚ್ಚಿಸಿಕೊಂಡವರಿಗೆ ಜಗತ್ತೆಲ್ಲವೂ ಶಿವಮಯವಾಗಿ ಕಾಣುತ್ತದೆ.ಜಗತ್ತಿನ ಎಲ್ಲದರ ಹಿಂದೆಯೂ ಶಿವನಿದ್ದಾನೆ,ಎಲ್ಲದರ ಕಾರಣನೂ ಶಿವನೇ ಎನ್ನುವ ಸತ್ಯವು ಹೊಳೆಯುತ್ತದೆ.ಜಗತ್ತು,ಜನರಿಗೆ ವಿಚಿತ್ರವೆನ್ನಿಸಬಹುದಾದ,ವಿಭಿನ್ನವಾದ ನಡೆ ನುಡಿಗಳನ್ನು ರೂಢಿಸಿಕೊಳ್ಳುತ್ತಾರೆ ಶಿವಸಾಕ್ಷಾತ್ಕಾರದ ಹುಚ್ಚು ಹಚ್ಚಿಸಿಕೊಂಡವರು.ಮೈಮೇಲೆ ಬಟ್ಟೆ ಇದ್ದರೇನು,ಬಟ್ಟೆ ಇರದೆ ಬೆತ್ತಲೆ ಇದ್ದರೇನು ವ್ಯತ್ಯಾಸ ಕಾಣಿಸುವುದಿಲ್ಲ.ಅನ್ನವೇನು ಅಮೇಧ್ಯವೇನು ಎರಡೂ ಒಂದೇ ಶಿವಸಂತರಿಗೆ.ಶಿವಸಾಕ್ಷಾತ್ಕಾರದ ಹುಚ್ಚು ಉನ್ಮಾದಕ್ಕೆ ಒಳಗಾದವರನ್ನು ಜಗತ್ತು ಹುಚ್ಚರು ಎಂದು ಭ್ರಮಿಸುತ್ತದೆ.ಶಿವನ ಹುಚ್ಚು ಹಚ್ಚಿಸಿಕೊಂಡವರೇ ಅವಧೂತರು,ಪರಮವಿರಾಗಿಗಳು.

‌ ಹೊಸತೊಂದನ್ನು ‘ ಕಟ್ಟುವುದು’ ಎಂದರೆ ಇದ್ದುದನ್ನು ‘ಒಡೆಯುವುದು’ ‘ ಕೆಡಹುವುದು’. ಇದ್ದುದನ್ನು ಕೆಡವದೆ ಹೊಸತನ್ನು ಕಟ್ಟಲು ಸಾಧ್ಯವಿಲ್ಲ.ಇದ್ದ ಸ್ಥಳದಲ್ಲೇ ಹೊಸತನ್ನು ಕಟ್ಟಬೇಕಾಗುತ್ತದೆ.ಇದ್ದ ಸ್ಥಳದಲ್ಲಿ ಹೊಸತನ್ನು ಕಟ್ಟುವಹಂಬಲವೇ ‘ ತಲೆಕೆಡಿಸಿಕೊಳ್ಳುವುದು’ .ಹೀಗೆ ತಲೆಕೆಡಿಸಿಕೊಂಡವರೇ ದಾರ್ಶನಿಕರು,ಮುಮುಕ್ಷುಗಳು,ಮಹಾತ್ಮರುಗಳು.

೧೫.೦೬.೨೦೨೫