ಭಾರತರತ್ನ,ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಸಂದೇಶ

ಜಯಂತಿ

ಭಾರತರತ್ನ,ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಸಂದೇಶ 

ಮುಕ್ಕಣ್ಣ ಕರಿಗಾರ

ಎಪ್ರಿಲ್ 14,2025 ರಂದು ದೇಶದಾದ್ಯಂತ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಸಡಗರ,ಸಂಭ್ರಮಗಳಿಂದ ಆಚರಿಸಲಾಗುತ್ತಿದೆ,ಆಧುನಿಕ ಭಾರತದ ನಿರ್ಮಾತೃಗಳಲ್ಲೊಬ್ಬರಾಗಿರುವ,ವಿಶ್ವದ ಮಹಾನ್ ನಾಯಕರ ಸಾಲಿನಲ್ಲಿ ವಿರಾಜಮಾನರಾಗಿರುವ ಅಂಬೇಡ್ಕರರವರ 134 ನೆಯ ಜಯಂತಿಯ ಶುಭಸಂದರ್ಭದಲ್ಲಿ ನಾನು ನಾನು ಅಂಬೇಡ್ಕರ್ ಅವರ ಹೈಮಾಚಲೋಪಮ ವ್ಯಕ್ತಿತ್ವ,ಅವರ ಜೀವನ,ಸಾಧನೆ – ಸಿದ್ಧಿಗಳ ಬಗ್ಗೆ ಬರೆಯದೆ ವರ್ತಮಾನ ಭಾರತಕ್ಕೆ ಪ್ರಸ್ತುತವಾಗಬಲ್ಲ ಮತ್ತು ದಲಿತ ಯುವಜನತೆಯು ಆತ್ಮಾವಲೋಕನ ಮಾಡಿಕೊಂಡು ದಲಿತವಿಮೋಚನೆಯ ಪಥದಲ್ಲಿ ಮುನ್ನಡೆಯಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಮತ್ತು ದಲಿತ ಯುವಜನತೆ ಅಂಬೇಡ್ಕರವರ ಕನಸನ್ನು ಸಾಕಾರಗೊಳಿಸುವ ಪಥದಲ್ಲಿ ಮುನ್ನಡೆಯಲು ಪ್ರೇರಣೆಯಾಗಬಲ್ಲ ಬಾಬಾಸಾಹೇಬರ ಕೊನೆಯ ಸಂದೇಶವನ್ನು ಈ ಲೇಖನದಲ್ಲಿ ಚರ್ಚಿಸುವೆ.

ಬಾಬಾಸಾಹೇಬ್ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಕೊನೆಯ ಸಂದೇಶವನ್ನು ಅವರ ಆಪ್ತಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ ” Last few years of Dr.Ambedkar” ಕೃತಿಯಲ್ಲಿ ದಾಖಲಿಸಿದ್ದಾರೆ.ನಾನಕ್ ಚಂದ್ ರತ್ತು ದಾಖಲಿಸಿದ ಈ ದಾಖಲೆ ಅಂಬೇಡ್ಕರ್ ಅವರು ದಲಿತ ಜನಾಂಗಕ್ಕೆ ಕೊಟ್ಟ ಸಂದೇಶ ಮಾತ್ರವಾಗಿರದೆ ಜಗತ್ತಿನ ಶೋಷಿತ ಸಮುದಾಯಗಳಿಗೆಲ್ಲ ಅವರು ಇತ್ತ ದಿವ್ಯ ಸಂದೇಶ ಎನ್ನುವಂತೆ ಇದೆ.ಅಂದು ಮಂಗಳವಾರ,1956 ರ ಜುಲೈ 31ರ ಸಂಜೆ 5.30 ರ ಸಮಯ.ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಬಾಬಾಸಾಹೇಬರು ಇದ್ದಕ್ಕಿದ್ದಂತೆ ಭಾವೋದ್ವೇಗಕ್ಕೆ ಒಳಗಾದರು,ಖಿನ್ನತೆಗೆ ಈಡಾದರು.ಕೆಲವು ಕ್ಷಣ ಮಾತನಾಡದೆ ಮಾನಸಿಕವಾಗಿ ದುಃಖ,ಆಘಾತವನ್ನು ಅನುಭವಿಸುತ್ತಿದ್ದರು.ಬಾಬಾಸಾಹೇಬರ ಈ ಅನಿರೀಕ್ಷಿತ ವರ್ತನೆಯನ್ನು ಗಮನಿಸಿದ ರತ್ತು ಗಾಬರಿಗೊಂಡರಾದರೂ ತಕ್ಷಣ ಕರ್ತವ್ಯ ಪ್ರಜ್ಞೆಯಿಂದ ಎಚ್ಚೆತ್ತುಕೊಂಡು ಅಂಬೇಡ್ಕರ್ ಅವರ ತಲೆಯನ್ನು ನೇವರಿಸುತ್ತ,ಕಾಲನ್ನು ಒತ್ತುತ್ತ,ಅವರ ಹಾಸಿಗೆಯ ಒಂದು ಕಡೆ ಸ್ಟೂಲ್ ಮೇಲೆ ಕುಳಿತುಕೊಂಡು, ಭಯದಿಂದ ನಡುಗುತ್ತ ” ಸರ್,ಕ್ಷಮಿಸಿ,ನನಗೆ ಸತ್ಯ ತಿಳಿಯಬೇಕು.ಇತ್ತೀಚಿನ ದಿನಗಳಲ್ಲಿ ತಾವು ತುಂಬಾ ದುಃಖಿತರಾಗುತ್ತಿದ್ದೀರಿ,ಖಿನ್ನರಾಗುತ್ತಿದ್ದೀರಿ,ಅಳುತ್ತಿದ್ದೀರಿ.ಯಾಕೆ ಹೀಗೆ?” ಎಂದು ಪ್ರಶ್ನಿಸಿದರು.

ರತ್ತುರವರ ಭಯ,ಆತಂಕವನ್ನು ಅರ್ಥಮಾಡಿಕೊಂಡ ಬಾಬಾಸಾಹೇಬರು ಅಂದು ತಮ್ಮ ದುಃಖದ ಹಿಂದಿನ ಕಾರಣವನ್ನು ತೆರೆದಿಟ್ಟರು.ಬಾಬಾಸಾಹೇಬರು ಹೇಳುತ್ತಾರೆ –” ನನ್ನ ದುಃಖಕ್ಕೆ ಕಾರಣ,ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ.ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತಾವಧಿಯಲ್ಲಿ ನನ್ನ ಜೀವನದಲ್ಲಿ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು.ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನಾನು ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ.ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ.ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ”.

” ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ” ಎನ್ನುತ್ತ ತಮ್ಮ ದುಃಖದ ಮೂಲಕಾರಣವನ್ನು ಬಿಚ್ಚಿಟ್ಟ ಬಾಬಾ ಸಾಹೇಬರು ತಮ್ಮ ಮಾತುಗಳನ್ನು ಮುಂದುವರೆಸುತ್ತಾರೆ ” ಹಾಗೆ ಹೇಳುವುದಾದರೆ ನಾನು ಇದುವರೆಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ.ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ,ಕಾಳಜಿ ತೋರುತ್ತಿಲ್ಲ.ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ ಅವರು ಅಯೋಗ್ಯರಾಗಿದ್ದಾರೆ.ವೈಯಕ್ತಿಕ ಹಿತಾಸಕ್ತಿಯನ್ನಷ್ಟೇ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.ಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ,ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕೆಂದಿದ್ದೇನೆ “.

” ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು!” ಎಂದು ಆತಂಕವ್ಯಕ್ತಪಡಿಸುವ ಡಾಕ್ಟರ್ ಅಂಬೇಡ್ಕರ್ ಅವರು ತಮ್ಮ ಮಾತನ್ನು ಮುಂದುವರೆಸುವರು ” ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ.” ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ” , ” ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” ಮತ್ತು ” ಹಿಂದೂ ಧರ್ಮದ ಒಗಟುಗಳು ” ಎಂಬ ಆ ನನ್ನ ಮಹೋನ್ನತ ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ. ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ.ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದುಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ.ನನ್ನ ಚಿಂತೆಗೆ ಇದು ಕೂಡ ಪ್ರಮುಖ ಕಾರಣ ” ಎಂದು ತಮ್ಮ ಅಮೂಲ್ಯ ಕೃತಿಗಳು ಪ್ರಕಟವಾಗದೆ ಇರುವುದಕ್ಕೆ ವ್ಯಥಿಸುವ ಬಾಬಾಸಾಹೇಬರು ಮುಂದುವರೆದು ಹೇಳುವ ಮಾತುಗಳು ಗಂಭೀರವಾಗಿ ಆಲೋಚಿಸಬೇಕಾದ,ದಲಿತ ಯುವಜನತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಮಾತುಗಳು ; ” ನನ್ನ ನಂತರ ನನ್ನ ಜೀವಿತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ.ಆದರೆ ಈ ಸಂದರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೋ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನಹರಿಸುತ್ತಿಲ್ಲ.ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ.ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅದಮ್ಯ ಆಸೆ ನನಗೆ ಇನ್ನೂ ಇದೆ”
“ಆದರೆ ? ಪೂರ್ವಗ್ರಹಪೀಡಿತ,ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ ನನ್ನಂತಹವರು ಜನಿಸುವುದು ಮಹಾಪಾಪ.ಹಾಗೆಯೇ ಈಗಿರುವ ಈ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಂಧಪಟ್ಟಂತೆ ಯಾರಾದರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ.ಏಕೆಂದರೆ ಇಲ್ಲಿಯೂ ಜನರು ಈ ದೇಶದ ಪ್ರಧಾನಿ ( ನೆಹರು) ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ.ಹೀಗೆ ಆದರೆ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!” ಎಂದು ಗದ್ಗದಿತರಾಗುವ ನಿಜ ರಾಷ್ಟ್ರಾಭಿಮಾನಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಮುಂದುವರೆದು ಹೇಳುವುದು ; ” ಅದೇನೇ ಇರಲಿ.ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ,ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ.ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ” ಎನ್ನುತ್ತ ಮತ್ತೊಮ್ಮೆ ಗದ್ಗದಿತರಾಗುವ ಬಾಬಾ ಸಾಹೇಬರು ಗಳಗಳನೆ ಅಳುತ್ತಾರೆ.ಅಳುತ್ತಲೆ ತಮ್ಮ ಆಪ್ತಕಾರ್ಯದರ್ಶಿ ನಾನಕ್ ಚಂದು ರತ್ತು ಅವರತ್ತ ಒಮ್ಮೆ ನೋಡುತ್ತಾರೆ. ಸಹಜವಾಗಿಯೇ ಆ ಸಂದರ್ಭದಲ್ಲಿ ರತ್ತು ಬಾಬಾಸಾಹೇಬರ ದುಃಖದಲ್ಲಿ ಭಾಗಿಯಾಗಿ ಅವರೂ ಅಳುತ್ತಿರುತ್ತಾರೆ.ರತ್ತು ಅವರನ್ನು ಸಮಾಧಾನ ಪಡಿಸುತ್ತ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಮೆಲ್ಲನೆ ನುಡಿಯುತ್ತಾರೆ ” ಧೈರ್ಯ ತಂದುಕೋ ರತ್ತು.ಎದೆಗುಂದಬೇಡ.ಎಂದಾದರೊಂದು ದಿನ ಈ ಜೀವನ ಕೊನೆಗೊಳ್ಳಲೇಬೇಕು!”

ಬಾಬಾ ಸಾಹೇಬರ ಬಾಯಿಂದ ಬಂದ ಈ ಮಾತುಗಳನ್ನು ಕೇಳಿದ ರತ್ತು ತೀವ್ರ ಆಘಾತಕ್ಕೊಳ್ಳಗಾದರು.ಅಂಬೇಡ್ಕರ್ ಅವರ ಮಾತಿನ ಅರ್ಥವಾದರೂ ಏನು ಎಂದು ರತ್ತು ಅವರಿಗೆ ಅರ್ಥವಾಗಲಿಲ್ಲ.” ಜೀವನ…ಕೊನೆ” ಎನ್ನುವ ಬಾಬಾ ಸಾಹೇಬರ ಮಾತುಗಳು ಕರ್ಣಕಠೋರವಾಗಿದ್ದವು.ಅಧೀರರಾಗಿ ಕಣ್ಣೀರು ತುಂಬಿಕೊಂಡು ನಿಂತಿದ್ದ ರತ್ತು ಅವರಿಗೆ ಬಾಬಾಸಾಹೇಬರೇ ತಮ್ಮ ಕಣ್ಣೀರನ್ನು ಒರೆಸಿಕೊಂಡು,ಕೈಯನ್ನು ಸ್ವಲ್ಪ ಎತ್ತಿ ಹೇಳುತ್ತಾರೆ ;

” ನಾನಕ್ ಚಂದ್ ,ನನ್ನ ಜನರಿಗೆ ಹೇಳು,ನಾನು ಇದುವರೆಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನ ಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ,ಅನಿಯಮಿತ ಸಮಸ್ಯೆಗಳನ್ನು ಎದುರಿಸುತ್ತಾ,ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ.ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ.ಏನೇ ಅಡೆತಡೆ ಬರಲಿ,ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲಿ,ತೊಂದರೆಗಳಾಗಲಿ,ಆ ಹೋರಾಟದ ರಥ ಮುನ್ನಡೆಯಲೇಬೇಕು‌.ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು.ಯಾವುದೇ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು.ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ.ಬಹುಶಃ ನನ್ನ ಸಂದೇಶ.ಇದನ್ನು ನೀನು ಅವರಿಗೆ ಹೇಳು” ” ಹೋಗು..ಅವರಿಗೆ ಹೇಳು” ” ಹೋಗು ಅವರಿಗೆ ಹೇಳು” ಎನ್ನುತ್ತಾ ಬಾಬಾ ಸಾಹೇಬರು ನಿತ್ರಾಣರಾಗಿ ನಿದ್ರೆಗೆ ಜಾರುತ್ತಾರೆ.

ಭಾರತರತ್ನ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 134 ನೆಯ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ದಲಿತ ಯುವ ಜನತೆ ಬಾಬಾ ಸಾಹೇಬರ ಈ ಕೊನೆಯ ಸಂದೇಶವನ್ನು ಓದಿ,ಅರ್ಥೈಸಿಕೊಳ್ಳಬೇಕು; ಆತ್ಮಾವಲೋಕನ ಮಾಡಿಕೊಳ್ಳಬೇಕು.ಬಾಬಾಸಾಹೇಬರ ದುಃಖದ ಕಾರಣವಾವುದು,ಅದಕ್ಕೆ ನಾವು ಮಾಡಬೇಕಾದುದು ಏನು ಎಂದು ಚಿಂತಿಸಬೇಕು.ಸುಮ್ಮನೆ ” ಜೈ ಭೀಮ್ ” ಘೋಷಣೆ‌ ಕೂಗುವುದರಿಂದಾಗಲಿ ಇತರರಿಗೆ “ಧಿಕ್ಕಾರ” ಕೂಗುವುದರಿಂದಾಗಲಿ ಏನನ್ನೂ ಸಾಧಿಸಲಾಗದು.ಬಾಬಾಸಾಹೇಬರ ಕನಸಿನಂತೆ ರಾಜಕೀಯ ಅಧಿಕಾರ ಪಡೆಯುವ ಗುರಿಯೊಂದಿಗೆ ಮುನ್ನುಗ್ಗಬೇಕು.ರಾಜಕೀಯ ಅಧಿಕಾರ ಪಡೆಯುವತ್ತ ದೃಢವಾದ ಹೆಜ್ಜೆಗಳನ್ನಿಡಬೇಕು.ಅವರಿವರ ಅನುಯಾಯಿಗಳಾಗದೆ ತಾವೇ ನಾಯಕರಾಗುವತ್ತ ದಿಟ್ಟ ಹೆಜ್ಜೆಗಳನ್ನಿಡಬೇಕು.ಸರಕಾರಿ ನೌಕರಿ,ಸೌಕರ್ಯಗಳನ್ನು ಪಡೆದ ದಲಿತ ಜನತೆ ‘ ನನ್ನ ಸಮುದಾಯಕ್ಕೆ ನಾನು ಏನನ್ನಾದರೂ ಮಾಡುವುದೇ ಬಾಬಾಸಾಹೇಬರಿಗೆ ನಾನು ಸಲ್ಲಿಸುವ ಗೌರವ’ ಎಂದು ತಿಳಿಯಬೇಕು.ದೇವಸ್ಥಾನಗಳ ಪ್ರವೇಶಕ್ಕೆ ಹೋರಾಡುವುದಲ್ಲ, ರಾಜಕೀಯ ಅಧಿಕಾರ ಪಡೆಯುವುದಕ್ಕೆ ಹೋರಾಡುವುದು ತನ್ಮೂಲಕ ದ್ವನಿ ಇಲ್ಲದ ದಲಿತರಿಗೆ ಧ್ವನಿ,ಬಲ,ಹಕ್ಕು ಅಧಿಕಾರ ನೀಡುವುದು ದಲಿತವಿಮೋಚನೆಯ ನಿಜ ಸಾರ್ಥಕತೆ ಎಂದು ಅರ್ಥಮಾಡಿಕೊಳ್ಳಬೇಕು.

‌ ೧೩.೦೪.೨೦೨೫.