ಶಹಾಪುರ,,
ವಿಶ್ವದಲ್ಲಿಯೇ ಜ್ಞಾನದ ಸಂಕೇತ ಎಂದು ಕರೆಯಿಸಿಕೊಂಡಿರುವ ಡಾ|| ಬಿ.ಆರ್. ಅಂಬೇಡ್ಕರ್ ಜನ್ಮದಿನದ ಆಚರಣೆ ಏಪ್ರೀಲ್ 14 ಬಾಬಸಾಹೇಬರ ಜಯಂತಿ ಕಾರ್ಯಕ್ರಮವಿದೆ.ಈ ಹಿನ್ನಲೆಯಲ್ಲಿ ಏರ್ಪಡಿಸುವ ಅಭಿಮಾನದ ಅದ್ದೂರಿ ಜಯಂತಿ, ವೈಚಾರಿಕತೆ ಚಿಂತನೆಗಳು ವಿಚಾರ ಗೋಷ್ಠಿ , ಸಂವಾದ ಸಭೆಯಲ್ಲಿ ಆತ್ಮಾವಲೋಕನ ಮಾಡಿಕೊಂಡಾಗ ಅವರ ಅನುಯಾಯಿಗಳಾಗಿ ನಾವು ಏನನ್ನು ಅಳವಡಿಸಿಕೊಂಡೆವು, ಎಷ್ಟರಮಟ್ಟಿಗೆ ಅವರ ಚಿಂತನೆಗಳು ಆದರ್ಶಗಳು ಪಾಲಿಸುತ್ತಿದ್ದೇವೆ ಎಂಬುದರ ಉತ್ತರ ನಮ್ಮ ಕಣ್ಮುಂದೆ ಸ್ಪಷ್ಟವಾಗಿ ಕಾಣದಿದ್ದರೂ ಮುಜುಗರ ಪಡುವಂತ ಉತ್ತರ ಕಾಣುತ್ತದೆ. ನಿರೀಕ್ಷಿಸಿದಷ್ಟು ಆಗದಿದ್ದರೂ ಕನಿಷ್ಠ ಶೇಕಡಾವಾರರು ಪ್ರಮಾಣದಲ್ಲಿ ಆದ್ರೂ ಅಂಬೇಡ್ಕರ್ ರವರು ಅನುಯಾಯಿಗಳಾಗಿ ಬದಲಾಗಿದ್ದೇವಾ ಅಥವಾ ಭಾರತ ದೇಶವನ್ನು ಅವರ ಚಿಂತನೆ ಅಳವಡಿಸಿಕೊಂಡಿದೆನಾ ಅಂತಾ ಯೋಚಿಸಬೇಕಿದೆ. 25-30 ವರ್ಷಗಳಿಂದೀಚೆಗೆ ನೋಡಿದಾಗ ಸಮುದಾಯವನ್ನು ಸಂಘಟಿಸಿ ಇತರೆ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಅದ್ದೂರಿಯಾಗಿ ಜಯಂತಿ ಕಾರ್ಯಕ್ರಮ ಆಯೋಜಿಸಿ ನಾವು ಅಂಬೇಡ್ಕರ್ ರವರ ಜೀವನ ಚರಿತ್ರೆ, ಅವರಿಗೆ ಆಗಿರುವ ಅವಮಾನ, ವಿದ್ಯಾಭ್ಯಾಸ, ಭಾರತಕ್ಕೆ ಅವರು ನೀಡಿರುವ ಕೊಡುಗೆ ಮುಂತಾದ ವಿಚಾರಗಳ ಬಗ್ಗೆ ನಿಪುಣರಿಂದ, ವಾಗ್ಮೀಯರಿಂದ, ರಾಜಕೀಯ ನಾಯಕರಿಂದ, ಧಾರ್ಮಿಕ ಮುಖಂಡರಿಂದ ಭಾಷಣ ಮಾಡಿಸಿ ಚಪ್ಪಾಳೆ ಹೊಡಿದು ಕೇಕೆ, ಜೈಕಾರ ಹಾಕಿ ಕೈತೊಳೆದುಕೊಳ್ಳುತ್ತಿದ್ದೇವೆ ಹೊರತು, ಅವರ ವಿಚಾರದ ನೆರಳಲ್ಲಿ ನಡಯುತ್ತಿಲ್ಲಾ ಎನ್ನುವುದೆ ಕಹಿಯಾದ ಸತ್ಯ ಎಂದೆನಿಸುತ್ತದೆ.
ಇನ್ನೋಂದು ವಿಚಾರ ಅಂದ್ರೆ 80 ರ ದಶಕದಲ್ಲಿ ಬೆಳದಂತ ವ್ಯಕ್ತಿಗಳಲ್ಲಿನ ಹೋರಾಟದ ಗಟ್ಟಿಧ್ವನಿ, ಸೈದ್ದಾಂತಿಕ ವಿಚಾರಕ್ಕೆ ಕಟ್ಟು ನಿಟ್ಟಾಗಿರುವವರ ಸಂಖ್ಯೆ ಇಂದು ಸಿಗುವುದು ವಿರಳ.ಇದು ಸಮಾಜಿಕ ಮೌಲ್ಯಗಳ ಕುಸಿತ ಕಾರಣ.
ಇತ್ತೀಚಿನ ದಿನಗಳಲ್ಲಿ ಮಹಾಪುರುಷರ ಜಯಂತಿಗಳ ಆಚರಣೆ ಹಾಗೂ ಮೂರ್ತಿಗಳ ಸ್ಥಾಪನೆ ಹೆಚ್ಚಾಗುತ್ತಿವೆ. ಅದು ಹೆಮ್ಮೆಯ ವಿಷಯ ಹಾಗೂ ಅವರ ನೆರಳಲ್ಲಿ ಓಡಾಡಬೇಕು ಎಂಬ ಆಸೆಯಿಂದ ಅಭಿಮಾನದಿಂದ ಸಂಕೇತವೆಂದು ಪ್ರತಿಬಿಂಬಿಸುತ್ತೇವೆ.ಆದರೆ ಆ ಮಹಾನ್ ವ್ಯಕ್ತಿಗಳ ಆಶಯದಂತೆ ಆಚಾರ – ವಿಚಾರ, ಅವರ ನಡೆದ ದಾರಿಯಲ್ಲಿ ನಾವು ನಡೆಯಬೇಕು ಎನ್ನುತ್ತೇವೆ.ಆದರೆ ಈ ನಿಯಮಗಳ ಪಾಲನೆ ಮಾಡುವುದಾಗಲಿ ಅವರ ದಾರಿಯಲ್ಲಿ ನಡೆಯುವರ ಸಂಖ್ಯೆ ತೀರಾ ಕಡಿಮೆ.
ಈ ದೇಶದಲ್ಲಿ ಮಹಾತ್ಮರ, ಮಹಾನಾಯಕರ, ಸಂತರನ್ನು ಸೇರಿದಂತೆ ಡಾ|| ಬಿ.ಆರ್. ಅಂಬೇಡ್ಕರ್ ರವರ ಮೂರ್ತಿಗೆ, ಭಾವಚಿತ್ರಕ್ಕೆ ಕಿಡಿಗೆಡಿಗಳಿಂದ ಆಗುವ ವಿಗ್ನ, ವಿರೂಪ ಮತ್ತು ಅವಮಾನ ಕೃತ್ಯ ಎಸಗುತ್ತಿರುವ ಘಟನೆಗಳು ಆಗಾಗ ನಡೆಯುತ್ತಿರುವುದು ಅವಿವೇಕಿಗಳ ಕೃತ್ಯ ಎಂದು ವಿಷಾದಿಸುತ್ತೆವೆ. ಇತ್ತೀಚೆಗೆ ಸಂಸತ್ತಿನಲ್ಲಿ ಅಂಬೇಡ್ಕರ್ ಅನ್ನುವ ಪದ ಪ್ಯಾಷನ್ ಆಗಿದೆ ಅಂತಾ ಹೇಳಿದ ವಿಚಾರದಿಂದಿಡಿದು ಹಳ್ಳಿಯಲ್ಲಿರುವ ದೇವಸ್ಥಾನ,ನೀರಿನ ಮೂಲಗಳನ್ನು ಮುಟ್ಟುವಂತಿಲ್ಲಾ ಎನ್ನುವ ಕಟ್ಟಪ್ಪಣೆ ಇರುವ ಈ ಅನಿಷ್ಟ ಆಚರಣೆಯ ಕುರಿತು ವರದಿಯಾಗುತ್ತಿರುವುದು ಖಂಡನೀಯ.
ಇದೆಲ್ಲವನ್ನು ಅವಲೋಕಿಸಿದಾಗ ಅಂಬೇಡ್ಕರ್ ಎಂದರೆ ಯಾರು. ದೇಶಕ್ಕೆ ಅವರ ಕೊಡುಗೆ ಎಂತಹದು ಎಂದು ಅರ್ಥವಾಗಬೇಕಿದೆ.ಈ ಮಹಾತ್ಮರ ಕುರಿತು ಅವರಿಗೆ ಇರುವ ತಿಳುವಳಿಕೆ ಆದರು ಏನು ? ಎನ್ನುವ ಚಿಂತೆ.ಆದರೆ Ambedkar is Universal ಅಂಬೇಡ್ಕರ್ ಸರ್ವವ್ಯಾಪ್ತಿ.
ಅಂಬೇಡ್ಕರ್ ಅಂದರೆ ಕೇವಲ ಪಜಾ/ಪ.ಪಂಗಡದ ಜನರಿಗೆ ಮೀಸಲಾತಿ ಕಲ್ಪಿಸಿದ ನಾಯಕ ಎಂದು ಕೆಲವರು ಭಾವಿಸಿದ್ರಾ ? SC/ST ಜನಾಂಗಕ್ಕೆ 18% ಮೀಸಲಾತಿ ಪಡೆದರೆ ಇನ್ನುಳಿದ 32 % ಮೀಸಲಾತಿ ಇತರೆ ಹಿಂದುಳಿದ ಅಲ್ಪಸಂಖ್ಯಾತ ವರ್ಗ, ಇತರೆ ಜನಾಂಗ ಪಡೆದಿರುವುದೂ ಇದೆ. ಶೇ50% ಸಾಮಾನ್ಯವಾಗಿ ಸ್ಫರ್ಧಿಸಲು ಅವಕಾಶಗಳಿವೆ. ಇದು ಅವರಿಗೆ ಗೌಣವಾಗಿ ಕಾಣುತ್ತಿದೆ.
ಕೇವಲ ಒಂದು ಧರ್ಮ, ಜಾತಿ, ಜನಾಂಗಕ್ಕೆ ಮಾತ್ರ ಸೀಮಿತವಾಗಿ ಅಂಬೇಡ್ಕರ್ ರವರು ಕಾನೂನು, ರಾಜನೀತಿ, ನಿಯಮಗಳು ಮಾಡಲಿಲ್ಲ. ಸರ್ವಜನಾಂಗದ ಶಾಂತಿಯ ತೋಟಕ್ಕೆ, ಭಾರತದ ಐಕ್ಯತೆಗಾಗಿ ಅವಕಾಶ ವಂಚಿತರಾಗಿರುವ ಜನರಿಗೆ ಆದ್ಯತೆಯ ಮೇಲೆ ಅವಕಾಶ ಮತ್ತು ಹಕ್ಕುಗಳನ್ನು ನೀಡಿ ಸಮಾಜದಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆ ತರಲು ವಿಶ್ವದಲ್ಲಿ ಶ್ರೇಷ್ಠ ಸಂವಿಧಾನ ನೀಡಿದರು.
ಅಂಬೇಡ್ಕರ್ ನೀಡಿದ ಕೆಲವು ಹಕ್ಕುಗಳು
ನಾಗರಿಕರ ಹಕ್ಕು ಮತ್ತು ಕರ್ತವ್ಯಗಳು : ಈ ದೇಶದಲ್ಲಿರುವ ಎಲ್ಲರಿಗೂ ಜೀವಿಸಲು ಮೂಲಭೂತ ಹಕ್ಕುಗಳನ್ನು ನೀಡಿ ಪ್ರತಿಯೊಬ್ಬ ಪ್ರಜೆಯು ಕೂಡಾ ಕರ್ತವ್ಯಗಳನ್ನು ಪಾಲಿಸಬೇಕು. ಈ ನಿಯಮ ಯಾವುದೆ ಜಾತಿ ಧರ್ಮಕ್ಕಲ್ಲದೆ ದೇಶದಲ್ಲಿನ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ.
ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು:
ಪುರುಷರಷ್ಠೆ ಮಹಿಳೆಯರು ಸರಿ ಸಮಾನರು.ಮಹಿಳೆಯರು ಕೂಡಾ ಆಸ್ತಿಯಲ್ಲಿನ ಹಕ್ಕಿಗೆ ಪಾಲುದಾರರು ಎಂದು ಕಾನೂನು ಮಾಡಿದರು. ಮಹಿಳೆಯರಿಗೆ ಲಿಂಗ ಆಧಾರಿತ ತಾರತಮ್ಯ ಮಾಡದೆ ಪುರುಷರಷ್ಟೆ ಸಮಾನರು ಎನ್ನುವ ಹಕ್ಕುಗಳನ್ನು ನೀಡಿದರು.ಇದು ಕೇವಲ SC/ST ಜನಾಂಗದ ಮಹಿಳೆಯರಿಗೆ ಮಾತ್ರವಲ್ಲ. ಎಲ್ಲಾ ಜಾತಿಯ ಧರ್ಮದ ಮಹಿಳೆಯರಿಗೆ ಅವಕಾಶ ನೀಡಿ ಸ್ಥಳೀಯ ಪಂಚಾಯತಿಗಳಿಂದಿಡಿದು ಪಾರ್ಲಿಮೆಂಟಿನವರೆಗೆ ಸ್ಪರ್ಧಿಸುವ ಹಕ್ಕನ್ನು ನೀಡಿದರು.
ಮತದಾನ ಮತ್ತು ಶಿಕ್ಷಣದ ಹಕ್ಕು :
ಈ ದೇಶದ ಪ್ರತಿಯೊಬ್ಬ ವಯಸ್ಕ ಪ್ರಜೆಗೆ ಧರ್ಮ, ಜಾತಿ,ಲಿಂಗ,ರಾಜ- ಮಹಾರಾಜ, ಶ್ರೀಮಂತ, ಬಡವ, ಬಿಕ್ಷುಕ ಎಂದು ಗುರುತಿಸದೆ ಪ್ರತಿಯೊಬ್ಬರಿಗೂ ಒಂದು ಮತ ಎಂದು ಮತದಾನದ ಹಕ್ಕನ್ನು ಡಾ|| ಬಿ.ಆರ್. ಅಂಬೇಡ್ಕರ್ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದಲ್ಲಿ ಮಹಿಳೆಯರು ಹೆರಿಗೆಗೆ ಮತ್ತು ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದರು. ಅವರಿಗೆ ಸಂವಿಧಾನದಲ್ಲಿ ಶಿಕ್ಷಣ, ರಾಜಕೀಯ ಇತರೆ ರಂಗದಲ್ಲಿಯೂ ಪಾಲ್ಗೊಳ್ಳುವ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದ್ದರಿಂದ ಇಂದು ತೊಟ್ಟಿಲು ತೂಗುವ ಮಹಿಳೆಯರು ದೇಶವನ್ಮು ಮುನ್ನಡೆಸುತ್ತಿದ್ದಾರೆ. ಇದು ಎಲ್ಲಾ ಜಾತಿ ಧರ್ಮದ ಮಹಿಳೆಯರಿಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಕೊಡುಗೆ. ಇದು ಕೇವಲ SC/ST ಮಹಿಳೆಯರಿಗಲ್ಲ.
ಈ ರೀತಿಯ ಹಲವು ಕಾನೂನುಗಳಿಂದ ಪ್ರತಿಯೊಂದು ಮನೆಯಲ್ಲಿಯೂ ಅಂಬೇಡ್ಕರ್ ಕಾನೂನಿನ ಫಲಾನುಭವಿಯಾಗಿದ್ದಾರೆ.ಆದರೆ ಅನುಯಾಯಿಗಳ ಸಂಖ್ಯೆ ಎಷ್ಠು ಎಂಬುದು ಪ್ರಶ್ನೆ ! ಇಂತಹ ಜಯಂತಿಯ ಕಾರ್ಯಕ್ರಮದಂದು “ಹರ್ ಘರ್ ಮೇ ಅಂಬೇಡ್ಕರ್ ಅಜೇಂಡಾ” ಎಂಬ ವಿಚಾರಗಳ ದೀಕ್ಷೆ ಪಡೆಯಬೇಕು. ಕೇವಲ ಜಯಂತಿಯ ದಿನದಂದು ಜಂಡಾ, ಜೈಕಾರಕ್ಕೆ ಮಾತ್ರ ಸೀಮಿತವಾಗಬಾರದು.
ಇಂತಹ ಅನೇಕ ಕಾಯ್ದೆ ಕಾನೂನು ಒಳಗೊಂಡಂತೆ ವಿಶ್ವದಲ್ಲಿಯೇ ಅತೀ ದೊಡ್ಡ ಸಂವಿಧಾನವನ್ನು ಭಾರತಕ್ಕೆ ಬಾಬಾ ಸಾಹೇಬರು ಸಂವಿಧಾನ ನೀಡಿದ್ದಾರೆ ಎಂದು ಇತರೆ ದೇಶಗಳು ಕೊಂಡಾಡಿ ಬೇರೆ ದೇಶದವರೂ ಕೂಡಾ ಅಂಬೇಡ್ಕರ್ ಅವರನ್ನು ಜ್ಞಾನದ ಸಂಕೇತ ಎಂದು ಒಪ್ಪಿಕೊಂಡಿವೆ. ಆದರೆ ಭಾರತದಲ್ಲಿ ಯಾಕೇ ಒಂದು ಜಾತಿಯ/ ವರ್ಗದ ನಾಯಕ ಎಂದು ಸೀಮಿತಿಗೊಳಿಸಿರುವುದು ಎಂಬ ಪ್ರಶ್ನೆ ಹಾಗಾಗ ಕಾಡುತ್ತದೆ ! ಅವರ ಜಯಂತಿಗೆ ಕೇವಲ ಆ ಸಮುದಾಯದ ನಾಗರಿಕರು ಮಾತ್ರ ಸೀಮಿತ ಎಂಬ ವಾತವರಣ ಸೃಷ್ಟಿಯಾಗುತ್ತಿದೆಯಾ ಎಂಬುದು ಸೂಕ್ಷ್ಮತೆಯಾಗಿದೆ.ಈ ದೇಶದ ಪ್ರತಿಯೊಬ್ಬ ನಾಗರಿಕರೂ ಡಾ|| ಬಿ.ಆರ್. ಅಂಬೇಡ್ಕರ್ ರವರ ಜಯಂತಿಯ ಆಚರಿಸಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಸಂವಿಧಾನ ಗೌರವಿಸಬೇಕಿದೆ.
ಈ ನಿಟ್ಟಿನಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಯುವಕರಿಗೆ ಅಂಬೇಡ್ಕರ್ ಅಂದರೆ ಯಾರೆಂದು ಪರಿಚಯಿಸಿದ್ದೇವೆ. ನಾವು ಎಷ್ಟರ ಮಟ್ಟಿಗೆ ಅಂಬೇಡ್ಕರ ಅವರನ್ನು ಅರ್ಥಮಾಡಿಕೊಂಡು ಅವರ ವೈಚಾರಿಕತೆಯ ಚಿಂತನೆಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ.
ಈ ಭವ್ಯ ಭಾರತಕ್ಕೆ ಸಂವಿಧಾನ ಎಂಬ ಜ್ಯೋತಿಯ ಮೂಲಕ ಪ್ರತಿದಿನ ಬೆಳಕರಿಸೋಣ.ಎಲ್ಲರಿಗೂ 134 ನೇ ಅಂಬೇಡ್ಕರ ಅವರ ಜಯಂತಿಯ ಶುಭಾಷಯಗಳು…
ಲೇಖನ :
ಶಿವಕುಮಾರ ಬಿ ಮುದಕನ್
ಶಹಾಪುರ.