ಬಸವ ಜಯಂತಿಯಂದು ಇತರರ ಜಯಂತಿಯನ್ನು ತಳುಕುಹಾಕುವ ವಿಕೃತಿ ಬೇಡ : ಮುಕ್ಕಣ್ಣ ಕರಿಗಾರ

ವಿಚಾರ

ಬಸವ ಜಯಂತಿಯಂದು ಇತರರ ಜಯಂತಿಯನ್ನು ತಳುಕುಹಾಕುವ ವಿಕೃತಿ ಬೇಡ : ಮುಕ್ಕಣ್ಣ ಕರಿಗಾರ

ಬಸವಜಯಂತಿ ಮತ್ತು ರೇಣುಕ ಜಯಂತಿಯನ್ನು ಒಂದೇ ದಿನ ಆಚರಿಸುವಂತೆ ಅಖಿಲಭಾರತ ವೀರಶೈವ ಲಿಂಗಾಯತ ಸಂಸ್ಥೆಯ ರಾಜ್ಯಘಟಕದ ಅಧ್ಯಕ್ಷ ಶಂಕರಬಿದರಿಯವರು ಆದೇಶ ಹೊರಡಿಸಿದ್ದನ್ನು ಆಕ್ಷೇಪಿಸಿ’ ಬಸವಜಯಂತಿಯಂದು ಬೇರೆಯವರ ಜಯಂತಿ ಆಚರಣೆ ಬೇಡ’ ಎಂದು ಆಗ್ರಹಿಸಿದ್ದಾರೆ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು( ಪ್ರಜಾವಾಣಿ ಎಪ್ರಿಲ್ 12,2025).ಪಂಡಿತಾರಾಧ್ಯ ಶಿವಾಚಾರ್ಯರ ಅಭಿಮತಕ್ಕೆ ನನ್ನ ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತ ಪಂಡಿತಾರಾಧ್ಯಶಿವಾಚಾರ್ಯರಂತೆ ನಾನು ಕೂಡ ಶಂಕರಬಿದರಿಯವರನ್ನು ಕೆಲವು‌ ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

ಬಸವಣ್ಣನವರು ಲಿಂಗಾಯತರ ನಾಯಕರು ಮಾತ್ರವಲ್ಲ; ಕರ್ನಾಟಕದ ಜನಸಮಷ್ಟಿಯ ಆರಾಧ್ಯರು,ಪೂಜ್ಯರು ಆಗಿದ್ದಾರೆ.ಆಧುನಿಕ ಭಾರತ, ಆಧುನಿಕ ಕರ್ನಾಟಕವನ್ನು ರೂಪಿಸುವಲ್ಲಿ ಪ್ರೇರಣಾಶಕ್ತಿಯಾಗಿದ್ದಾರೆ.ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವವನ್ನು ಒಪ್ಪಿಕೊಂಡು ಕರ್ನಾಟಕ ಸರಕಾರವು ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಒಪ್ಪಿಕೊಂಡು,ಗೌರವಿಸಿದೆ.ಆದರೆ ರೇಣುಕರು?

ರೇಣುಕಾಚಾರ್ಯ ಎನ್ನುವ ವ್ಯಕ್ತಿ ಜೀವಿಸಿದ್ದರು ಎನ್ನುವುದಕ್ಕೆ ಐತಿಹಾಸಿಕ ಪುರಾವೆಗಳಿಲ್ಲ.ಅಪಕ್ವಮತಿಗಳು ಬರೆದ ಅಸಂಗತಬರಹಗಳು ಇತಿಹಾಸವಾಗುವುದಿಲ್ಲ.ಆದರೆ ಬಸವಣ್ಣನವರು ಜಗತ್ತು ಕಂಡ ಅತ್ಯಪೂರ್ವ ಸಮಾಜೋ ಧಾರ್ಮಿಕ ಸುಧಾರಕರಾಗಿ ಹೆಸರುವಾಸಿಯಾಗಿರುವ ಐತಿಹಾಸಿಕ ವ್ಯಕ್ತಿಗಳಾಗಿದ್ದಾರೆ.ಹನ್ನೆರಡನೆಯ ಶತಮಾನದಲ್ಲಿ ಅರಸೊತ್ತಿಗೆ ಕಾಲದಲ್ಲಿಯೇ ಬಿಜ್ಜಳನ ಪ್ರಧಾನಿಯಾಗಿದ್ದುಕೊಂಡು ಅರಸು ಪ್ರಭುತ್ವಕ್ಕೆ ವಿರುದ್ಧವಾಗಿ ಪ್ರಜಾಪ್ರಭುತ್ವದ ಆಶಯಗಳನ್ನು ಬಿತ್ತರಿಸುವ ಅನುಭವ ಮಂಟಪ ಎನ್ನುವ ಜಗತ್ತಿನ ಮೊದಲ ಸಂಸತ್ತನ್ನು ರೂಪಿಸಿದ ಶ್ರೇಯಸ್ಸು ಬಸವಣ್ಣನವರಿಗಿದೆ.ಕೇವಲ ಕಾಲ್ಪನಿಕ ಪವಾಡಗಳ ರೇಣುಕರಿಗೆ ಅಂತಹ ಯಾವ ಮಹತ್ವವಿದೆ?ಬಸವಣ್ಣನವರು ಸಮಾಜದ ದಲಿತರನ್ನು,ಶೋಷಿತರನ್ನು,ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆತಂದು ಅವರೆಲ್ಲರಿಗೂ ಗೌರವದ ಬದುಕನ್ನು ಕಲ್ಪಿಸಿಕೊಟ್ಟರು.ಅಸಮಾನತೆಯ ವಿರುದ್ಧ ಅಸ್ತ್ರಪ್ರಯೋಗಿಸಿದರು.ಮೌಢ್ಯ- ಶೋಷಣೆಯ ವಿರುದ್ಧ ಕ್ರಾಂತಿ ಕಹಳೆ ಮೊಳಗಿಸಿದರು.ಸಂಕರವೆಂದು ಶತಮಾನಗಳಿಂದ ಗೊಣಗುತ್ತಬಂದಿದ್ದ ಕರ್ಮಠರ ನಡುವೆಯೇ ಬ್ರಾಹ್ಮಣ ಮಧುವರಸನ ಮಗಳನ್ನು ಮಾದಾರ ಹರಳಯ್ಯನ ಮಗನಿಗೆ ಮದುವೆ ಮಾಡಿಸಿದರು.ಇಂತಹ ಯಾವ ಕ್ರಾಂತಿಕಾರಿ ಸುಧಾರಣೆ ಮಾಡಿದ್ದಾರೆ ಕಾಲ್ಪನಿಕ ರೇಣುಕರು? ‘ ಮಾದಾರ ಚೆನ್ನಯ್ಯನವರು ನನ್ನ ತಂದೆ’ ‘ ಡೋಹಾರ ಕಕ್ಕಯ್ಯನವರು ನನ್ನ ಚಿಕ್ಕಪ್ಪ’ ಎನ್ನುವ ಮೂಲಕ ಸಮಾಜವು ನಿಕೃಷ್ಟಜಾತಿಯವರು,ಅಂತ್ಯಜರು ಎಂದು ಹೊರಗಿಟ್ಟವರಲ್ಲಿ ಶಿವಜ್ಯೋತಿಯನ್ನು,ಶಿವಾಂಶವನ್ನು‌ಕಂಡರು,ಗೌರವಿಸಿದರು.’ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಉಗ್ಗಡಿಸುತ್ತಿದ್ದ ಧರ್ಮದಸ್ವರೂಪವನ್ನರಿಯದ ಅವಿವೇಕಿಗಳ ನಡುವೆ ಅಕ್ಕಮಹಾದೇವಿಯವರಂತಹ ಮಹಿಳಾರತ್ನರುಗಳು ಬೆಳಕಿಗೆ ಬರಲು,ಅನುಭವ ಮಂಟಪದಲ್ಲಿ ಅಗ್ರಮನ್ನಣೆ ಪಡೆಯಲು ಕಾರಣರಾದರು.ಇಂತಹ ಯಾವ ಅಗ್ಗಳಿಕೆ ಇದೆ ಕಾಲ್ಪನಿಕ ರೇಣುಕರಲ್ಲಿ?

ಬಸವಣ್ಣನವರನ್ನು ಕರ್ನಾಟಕದಲ್ಲಿ ಮಾತ್ರವಲ್ಲ,ನೆರೆಯ ಮಹಾರಾಷ್ಟ್ರ,ಆಂಧ್ರಪ್ರದೇಶ,ತೆಲಂಗಾಣ ರಾಜ್ಯಗಳಲ್ಲಿ ಜನಸಾಮಾನ್ಯರು ‘ ದೇವರು’ ಎಂದು ‌ಪೂಜಿಸಿ,ಗೌರವಿಸುತ್ತಿದ್ದಾರೆ.ಕೇವಲ ವೀರಶೈವರ ಆರಾಧ್ಯರಾಗಿರುವ ಕಾಲ್ಪನಿಕ ರೇಣುಕರನ್ನು ಜನಸಾಮಾನ್ಯರ ಭಕ್ತಿ ಗೌರವಗಳ ಮೇಲೆ ಹೇರುವ ಕುತ್ಸಿತವೇಕೆ? ಜನಸಾಮಾನ್ಯರ ದೇವರಾಗಿರುವ ಬಸವಣ್ಣನವರು ಸರ್ವಜನಾದರಣೀಯ ವಿಶ್ವಮಾನ್ಯರು.

‌‌ ಶಂಕರಬಿದರಿಯವರು ಭಾರತೀಯ ಪೋಲೀಸ್ ಸೇವೆಯಲ್ಲಿದ್ದು ನಿವೃತ್ತರಾದವರು.ಅವರಿಗೆ ಭಾರತದ ಸಂವಿಧಾನದ ಬಗ್ಗೆ ಗೌರವಾದರಗಳು ಇರಬೇಕು.ಸತ್ಯವನ್ನು,ಸಮಾನತೆಯನ್ನು,ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ನಮ್ಮ ಸಂವಿಧಾನವು ಜನಸಾಮಾನ್ಯರ ನಂಬಿಕೆಗಳ ಮೇಲೆ ಪ್ರಹಾರಮಾಡುವ ಹಕ್ಕನ್ನು ಯಾರಿಗೂ ನೀಡಿಲ್ಲ.ಹಾಗಿದ್ದೂ ಶಂಕರ ಬಿದರಿಯವರು ನಿವೃತ್ತಿ ಜೀವನದಲ್ಲಿ ಕುಳಿತಿರುವ ಯಾವುದೋ ಮತೀಯ ರಾಜ್ಯಾಧ್ಯಕ್ಷಸ್ಥಾನಬಲದಿಂದ ಜನಸಾಮಾನ್ಯರ ನಂಬಿಕೆಗಳ ಮೇಲೆ ಪ್ರಹಾರವನ್ನುಂಟು ಮಾಡುತ್ತಿರುವ ಕೃತ್ಯಗಳನ್ನು ಪ್ರೋತ್ಸಾಹಿಸುತ್ತಿರುವುದೇಕೆ? ಕುರುಬರ ಕುಲಗುರು ರೇವಣಸಿದ್ಧರನ್ನೇ ರೇಣುಕಾಚಾರ್ಯರನ್ನಾಗಿ ಪರಿವರ್ತಿಸಿದ್ದಾರೆ ಎನ್ನುವ ಸತ್ಯ ಶಂಕರಬಿದರಿಯವರಿಗೆ ಗೊತ್ತಿಲ್ಲವೆ? ಯಾರೋ ಕೆಲವರು ಅಪ್ರಬುದ್ಧರು ರೇವಣಸಿದ್ಧರೇ ಬೇರೆ,ರೇಣುಕರೆ ಬೇರೆ ಎಂದು ಸುಳ್ಳನ್ನು ಗಳಹಿದರೆ ಅದು ಇತಿಹಾಸವಾಗುತ್ತದೆಯೆ ಬಿದರಿಯವರೆ? ಭಾರತೀಯ ಪೋಲಿಸ್ ಸೇವೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ನಿಮಗೆ ಸಾಕ್ಷ್ಯಾಧಾರಗಳ ಮೂಲಕವೇ ನ್ಯಾಯವು ನಿರ್ಣಯಿಸಲ್ಪಡಬೇಕು ಎನ್ನುವ ಭಾರತದ ಸಾಕ್ಷ್ಯ ಅಧಿನಿಯಮವು ಚೆನ್ನಾಗಿ ಗೊತ್ತಿರಬೇಕಲ್ಲ! ಕಾಲ್ಪನಿಕ ರೇಣುಕರ ಬಗ್ಗೆ ಎಷ್ಟು ಶಿಲಾಶಾಸನಗಳಲ್ಲಿ ಉಲ್ಲೇಖವಿದೆ? ಭಾರತದ ಯಾವ ಇತಿಹಾಸಕಾರರು ರೇಣುಕಾಚಾರ್ಯರ ಬಗ್ಗೆ ಉಲ್ಲೇಖಿಸಿದ್ದಾರೆ?ಯಾವುದಾದರೂ ವೇದ,ಉಪನಿಷತ್ತು,ಶಾಸ್ತ್ರಗಳಲ್ಲಿ ರೇಣುಕರ ಉಲ್ಲೇಖ ಇದೆಯೆ?

ವೀರಶೈವರು ಆಚರಿಸಿಕೊಳ್ಳುತ್ತಿದ್ದ ರೇಣುಕ ಜಯಂತಿಯನ್ನು ಕರ್ನಾಟಕ ಸರಕಾರವು ಒಂದು ಸರಕಾರಿ ಜಯಂತಿ ಎಂದು ಘೋಷಿಸುವ ಮೂಲಕ ಔದಾರ್ಯಮೆರೆದಿದೆ.ಹಾಗಿದ್ದೂ ಬಸವ ಜಯಂತಿಯೊಂದಿಗೆ ರೇಣುಕಜಯಂತಿಯನ್ನು ಆಚರಿಸಬೇಕೆನ್ನುವ ಸಲ್ಲದ ವಿಚಾರ ಏಕೆ ಶಂಕರಬಿದರಿಯವರೆ?ಅಷ್ಟಕ್ಕೂ ಶಂಕರಬಿದರಿಯವರೆ,ಭಾರತೀಯ ಪೋಲೀಸ್ ಸೇವೆಯಲ್ಲಿ ನಿವೃತ್ತರಾದ ನಿಮ್ಮಂತಹವರು ನಿವೃತ್ತರಾದ ಬಳಿಕವೂ ಜಾತ್ಯಾತೀತ ನಿಲುವನ್ನು ಎತ್ತಿಹಿಡಿಯಬೇಕಾದವರು.ಜಾತಿ ಮತ ಆಧಾರಿತ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಸಹ್ಯವಲ್ಲ ; ಅದರಲ್ಲೂ ಈಗ ಬಸವ ಜಯಂತಿಯೊಂದಿಗೆ ರೇಣುಕಜಯಂತಿಯನ್ನು ಆಚರಿಸಲು ಕರೆನೀಡಿದ್ದಂತೂ ಸಂವಿಧಾನಬಾಹಿರ ಕೃತ್ಯವೆ ! ನಿವೃತ್ತಿಯ ನಂತರವೂ ಪಿಂಚಣಿಯಂತಹ ಸರಕಾರಿ ಸೌಲಭ್ಯಗಳನ್ನು ಪಡೆಯುವವರು ಸಂವಿಧಾನಕ್ಕೆ ಬದ್ಧರಾಗಿಯೇ‌ನಡೆದುಕೊಳ್ಳಬೇಕು.ನಿಮಗೆ ಸಂವಿಧಾನದತ್ತ ಉಪಾಸನಾ ಸ್ವಾತಂತ್ರ್ಯ ಇರಬಹುದು; ಸಮಷ್ಟಿ ನಂಬಿಕೆಯನ್ನು ಕೆದಕುವ,ಸಮಾಜದ ಸ್ವಾಸ್ಥ್ಯವನ್ನು ಕದಡುವ ಸ್ವಾತಂತ್ರ್ಯ ಖಂಡಿತ ಇಲ್ಲ.

೧೨.೦೪.೨೦೨೫