ಜಯಂತಿ : ದಲಿತಹಕ್ಕುಗಳ ಅಗ್ರಪ್ರತಿಪಾದಕ,ರಾಷ್ಟ್ರನಾಯಕ ಬಾಬು ಜಗಜೀವನ್ ರಾಮ್ : ಮುಕ್ಕಣ್ಣ ಕರಿಗಾರ

ಜಯಂತಿ

ದಲಿತಹಕ್ಕುಗಳ ಅಗ್ರಪ್ರತಿಪಾದಕ,ರಾಷ್ಟ್ರನಾಯಕ ಬಾಬು ಜಗಜೀವನ್ ರಾಮ್

ಮುಕ್ಕಣ್ಣ ಕರಿಗಾರ

ಭಾರತದ ‘ ಹಸಿರು ಕ್ರಾಂತಿಯ ಹರಿಕಾರ’ ಎಂದು ಬಣ್ಣಿಸಲ್ಪಡುವ,ಬಾಬೂಜಿ ಎಂದು ಗೌರವಿಸಲ್ಪಟ್ಟ ಜಗಜೀವನ್ ರಾಂ ಅವರು ಭಾರತದ ಮಹಾನ್ ರಾಷ್ಟ್ರನಾಯಕರಲ್ಲೊಬ್ಬರು.ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ,ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಮತ್ತು ಉನ್ನತ ನಾಯಕರಾಗಿ,ಉತ್ತಮ ಸಂಸದೀಯ ಪಟುವಾಗಿ,ಅದ್ವಿತೀಯ ವಾಗ್ಮಿಯಾಗಿ ಅವರು ಹೆಸರುವಾಸಿಯಾಗಿದ್ದಾರೆ.ಎಲ್ಲಕ್ಕಿಂತ ಹೆಚ್ಚಾಗಿ ಅಸ್ಪೃಶ್ಯ ದಲಿತ ಜಾತಿಯಿಂದ ಬಂದ ವ್ಯಕ್ತಿಯೊಬ್ಬರು ಕೇಂದ್ರಸರ್ಕಾರದಲ್ಲಿ ಅತಿದೀರ್ಘ ಅವಧಿಯಕಾಲ ಕೇಂದ್ರಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲದೆ ಉಪಪ್ರಧಾನ ಮಂತ್ರಿಹುದ್ದೆಯನ್ನು ಅಲಂಕರಿಸುವವರೆಗೆ ಬೆಳೆದದ್ದು ಅವರ ವೈಶಿಷ್ಟ್ಯ, ಅದ್ಭುತ ಸಾಧನೆ.

ಬಾಬು ಜಗಜೀವನ್ ರಾಂ ಅವರು ಬಿಹಾರದ ಇಂದು ಭೋಜಪುರ ಜಿಲ್ಲೆ ಎಂದು ಗುರುತಿಸಲ್ಪಡುವ ಅಂದಿನ ಶಹಾಬಾದ್ ಜಿಲ್ಲೆಯ ಚಾಂದ್ವಾ ಎನ್ನುವ ಸಣ್ಣಹಳ್ಳಿಯಲ್ಲಿ ಎಪ್ರಿಲ್ 05,1908 ರಲ್ಲಿ ಜನಿಸಿದರು. ತಂದೆ ಶೋಭಿರಾಮ್ ತಾಯಿ ಬಾಸಂತಿದೇವಿ.ಜಗಜೀವನ್ ರಾಮ್ ಅವರ ತಂದೆ ಶೋಭಿರಾಮ್ ಅವರು ಧಾರ್ಮಿಕ ವ್ಯಕ್ತಿಗಳಾಗಿದ್ದು ಶಿವನಾರಾಯಣಿ ಪಂಥದ ಅನುಯಾಯಿಗಳಾಗಿ ಆ ಪಂಥದ ಮಹಾಂತರಾಗಿದ್ದರು.ಅವರ ಧಾರ್ಮಿಕ ವ್ಯಕ್ತಿತ್ವದ ಪ್ರಭಾವ ಬಾಲಕ ಜಗಜೀವನ್ ರಾಂ ಅವರ ಮೇಲಾಗಿತ್ತು.ಜಗಜೀವನ್ ರಾಂ ಅವರು ವಿದ್ಯಾರ್ಥಿಯಾಗಿದ್ದಾಗಲೇ ಅವರ ತಂದೆ ಶೋಭಿರಾಮ್ ನಿಧನರಾದರು.ತಾಯಿಯವರ ಆರೈಕೆಯಲ್ಲಿ ಬೆಳೆದ ಜಗಜೀವನ್ ರಾಂ ಅವರು ಜಾತಿ ತಾರತಮ್ಯದ ಉಸಿರುಗಟ್ಟುವ ವಾತಾವರಣದಲ್ಲಿಯೇ ಅರ್ರ್ಹಾ ಪಟ್ಟಣದ ಶಾಲೆಯಲ್ಲಿ ಪ್ರಥಮದರ್ಜೆಯೊಂದಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಪಾಸಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.

ಮನೆಯಲ್ಲಿ ಅವರ ತಂದೆಯವರು ಉಂಟುಮಾಡಿದ್ದ ಧಾರ್ಮಿಕ ವಾತಾವರಣದ ಸಹಜ ಕಾರಣದಿಂದ ತಾರುಣ್ಯದ ದಿನಗಳಲ್ಲಿ ಸಂತರವಿದಾಸರ ಪ್ರಭಾವಕ್ಕೆ ಒಳಗಾಗಿ ಹಲವಾರು ರವಿದಾಸ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದರು. ಗುರು ರವಿದಾಸ ಜಯಂತಿಯನ್ನು ಆಚರಿಸಿದರು.1934 ರಲ್ಲಿ ‘ ಅಖಿಲ ಭಾರತೀಯ ರವಿದಾಸ ಮಹಾಸಭಾ’ ಮತ್ತು ಅಖಿಲ ಭಾರತೀಯ ತುಳಿತಕ್ಕೊಳಗಾದ ಸಮುದಾಯಗಳ ಲೀಗ್ ಅನ್ನು ಸ್ಥಾಪಿಸಿ ಈ ಎರಡು ಸಂಘಟನೆಗಳ ಮೂಲಕ ದಲಿತರ ಹಕ್ಕುಗಳಿಗಾಗಿ ಹೋರಾಡತೊಡಗಿದರು.

ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ಭಾರತದ ಸ್ವಾತಂತ್ರ್ಯ ಸಮರಕ್ಕೆ ಧುಮುಕಿದರು ದಲಿತ ಯುವಕರ ಪಡೆಯೊಂದಿಗೆ.ತಾರುಣ್ಯದ ದಿನಗಳಲ್ಲಿಯೇ ‘ ದಲಿತರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಜೊತೆಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿಯೂ ಹೋರಾಡಬೇಕು’ ಎಂದು ಕರೆನೀಡಿದ್ದರು. ರಾಂಚಿಯಲ್ಲಿ 1935 ರಲ್ಲಿ ಹಾಮಂಡ್ ಆಯೋಗದೆದುರು ಹಾಜರಾಗಿ’ ದಲಿತರಿಗೆ ಮತದಾನದ ಹಕ್ಕುಬೇಕು’ ಎಂಬ ಆಗ್ರಹವನ್ನು ಮಂಡಿಸುವ ಮೂಲಕ ದಲಿತರ ಹಕ್ಕುಗಳ ಮೊದಲ ಪ್ರತಿಪಾದಕರು ಎನ್ನಿಸಿಕೊಂಡರು.

‌ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರಿಂದ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಹಲವು ಬಾರಿ ಸೆರೆಮನೆವಾಸ ಅನುಭವಿಸಿದರು.1940 ರಲ್ಲಿ ಮೊದಲ ಬಾರಿಗೆ ಬಂಧನಕ್ಕೆ ಒಳಗಾದ ಜಗಜೀವನ್ ರಾಂ ಅವರು ಕ್ವಿಂಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕೆ 19 ನೆಯ ಅಗಸ್ಟ್ 1942 ರಲ್ಲಿ ಮತ್ತೆ ಬಂಧನಕ್ಕೆ ಒಳಗಾದರು.

ಬಾಬು ಜಗಜೀವನ್ ರಾಂ ಐವತ್ತು ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿದ್ದು 31 ವರ್ಷಗಳ ದೀರ್ಘ ಅವಧಿಗೆ ಕೇಂದ್ರ ಸಚಿವರಾಗುವ ಮೂಲಕ ಸುದೀರ್ಘವಾದ ರಾಜಕೀಯ ಅನುಭವವನ್ನು ಹೊಂದಿದ್ದ ಅಪರೂಪದ ಮುತ್ಸದ್ದಿ ರಾಜಕಾರಣಿಗಳಾಗಿದ್ದರು.ತಮ್ಮ ತಾರುಣ್ಯದ 28 ನೆಯ ವರ್ಷಕ್ಕೆ 1936 ರಲ್ಲಿ ಬಿಹಾರ ಅಸೆಂಬ್ಲಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡರು. ನಂತರ 1946 ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಹಾರದ ಸೆಂಟ್ರಲ್ ಈಸ್ಟರ್ನ್ ವಿದಾನಸಭಾಕ್ಷೇತ್ರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ತಮ್ಮ‌ಜನಪ್ರಿಯತೆಯನ್ನು ಪ್ರದರ್ಶಿಸಿದರು.ಮುಂದೆ ಸ್ವಾತಂತ್ರ್ಯಾನಂತರ ಭಾರತೀಯ ಕಾಂಗ್ರಸ್ ಪಕ್ಷದ ಸದಸ್ಯರಾಗಿ ಕೇಂದ್ರ ಸರಕಾರದಲ್ಲಿ ವಿವಿಧ ಮಂತ್ರಿಯ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ‘ಸುದೀರ್ಘ ಅವಧಿಗೆ ಕೇಂದ್ರಮಂತ್ರಿಯಾದ ರಾಜಕಾರಣಿ’ ಎನ್ನುವ ಅಗ್ಗಳಿಕೆಗೂ ಪಾತ್ರರಾದರು. ಜಗಜೀವನ್ ರಾಂ ಅವರು ಕೇಂದ್ರ ಶಿಕ್ಷಣ ಮತ್ತು ಅಭಿವೃದ್ಧಿ ಮಂತ್ರಿಯಾಗಿದ್ದ ಅವಧಿಯಲ್ಲಿ 1974 ರಲ್ಲಿ ದೇಶವು ತೀವ್ರ ಬರಗಾಲಕ್ಕೆ ತುತ್ತಾಗಿತ್ತು.ಆಗ ಅವರು ಕೃಷಿಕ್ಷೇತ್ರವನ್ನು ಆಧುನೀಕರಣಗೊಳಿಸಿ’ ಹಸಿರು ಕ್ರಾಂತಿ’ ಯನ್ನುಂಟು ಮಾಡುವ ಮೂಲಕ ಬರನಿವಾರಣೋಪಾಯಗಳನ್ನು ಕಂಡುಕೊಂಡು ಸಮರ್ಥವಾಗಿ ಬರನಿರ್ವಹಣೆ ಮಾಡಿದರು. ಕೇಂದ್ರ ರಕ್ಷಣಾ ಮಂತ್ರಿಯಾಗಿದ್ದಾಗ ಅಸಾಧಾರಣ ಸಾಮರ್ಥ್ಯ ತೋರಿಸಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ವಿಜಯಿಗಳಾದರು.1979 ರ ಜನೆವರಿ 24 ರಿಂದ ಜುಲೈ 28 ರ ವರೆಗೆ ಉಪಪ್ರಧಾನ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದರು.

ಭಾರತೀಯ ಕಾಂಗ್ರೆಸ್ ಪಕ್ಷದ ಅಗ್ರ ನೇತಾರರಲ್ಲೊಬ್ಬರಾಗಿದ್ದ ಬಾಬು ಜಗಜೀವನ್ ರಾಂ ಅವರು ಬಹುದೀರ್ಘ ಅವಧಿಯವರೆಗೆ ಕಾಂಗ್ರಸ್ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.ಭಾರತೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ 1940–1977 ರವರೆಗೆ ಸೇವೆ ಸಲ್ಲಿಸಿದ ಬಾಬು ಜಗಜೀವನ್ ರಾಂ ಅವರು 1948 ರಿಂದ 1977 ರವರೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿದ್ದರು.ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ಸದಸ್ಯರಾಗಿ 1950 ರಿಂದ 1977 ರವರೆಗೆ ಸೇವೆ ಸಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಮಹತ್ವದ ಪಾತ್ರವಹಿಸಿದರು.

ವಿರೋಧ ಪಕ್ಷದ ನಾಯಕರಾಗಿ 1979 ರಲ್ಲಿ ತಮ್ಮ ಅಸಾಧಾರಣ ಸಂಸದೀಯ ಪಟುವಿನ ವ್ಯಕ್ತಿತ್ವವನ್ನು ರಾಷ್ಟ್ರಕ್ಕೆ ಪರಿಚಯಿಸಿದ್ದ ಬಾಬು ಜಗಜೀವನ್ ರಾಂ ಅವರು ತಮ್ಮಂತೆಯೇ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಇಂದ್ರಾಣಿದೇವಿಯವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದರು.ಮೀರಾಕುಮಾರ ಮತ್ತು ಸುರೇಶಕುಮಾರ ಎನ್ನುವ ಇಬ್ಬರು ಮಕ್ಕಳನ್ನು ಹೊಂದಿದ್ದ ಬಾಬು ಜಗಜೀವನ್ ರಾಂ ಅವರು ನವದೆಹಲಿಯ ನಿವಾಸದಲ್ಲಿ ತಮ್ಮ 78ನೆಯ ವರ್ಷದಲ್ಲಿ ಜುಲೈ 06,1986ರಲ್ಲಿ ನಿಧನಹೊಂದಿದರು.ಭಾರತದ ಸ್ವಾಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಬಾಬು ಜಗಜೀವನ್ ರಾಂ ಅವರು ತಮ್ಮ ವಾಕ್ ಪ್ರೌಢಿಮೆಯಿಂದ ಅಪ್ರತಿಮ ಸಂಸದೀಯ ಪಟುವೆಂದು ಗೌರವಿಸಲ್ಪಟ್ಟವರು.

04.04.2025