ಶಹಾಪುರ : ತಾಲೂಕಿನ ಭೀಮರಾಯನಗುಡಿಯ ಬಾಪುಗೌಡ ಸರ್ಕಲ್ ನಲ್ಲಿ ರೈತ ಪರ ಸಂಘಟನೆಗಳು ಕನ್ನಡಪರ ಸಂಘಟನೆಗಳಿಂದ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ಏಪ್ರಿಲ್ 15 ರವರೆಗೆ ನೀರು ಹರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಬೀಗುಡಿಯ ಕೆಬಿಜೆಎನ್ ಮುಖ್ಯ ಇಂಜಿನಿಯರಿಂಗ್ ಕಚೇರಿಗೆ ಮುತ್ತಿಗೆ ಹಾಕಿ ನಂತರ ಬಾಪುಗೌಡ ವೃತ್ತದಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಮತ್ತು ವಾಹನಗಳು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿಯ ಮಾಜಿ ಸಚಿವರಾದ ನರಸಿಂಹ ನಾಯಕ್ (ರಾಜುಗೌಡ) ಮಾತನಾಡಿ, ಇದು ರೈತಪರ ಹೋರಾಟವಾಗಿದ್ದು ಯಾವ ಪಕ್ಷದ ಪರ ಹೋರಾಟವಲ್ಲ. ಏಪ್ರಿಲ್ 15ರವರೆಗೆ ನಾರಾಯಣಪುರ ಜಲಾಶಯದಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸದಿದ್ದರೆ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಚ್ಚರವಹಿಸಿ ಜಲಾಶಯಗಳಿಗೆ ನೀರು ಬಿಡಬೇಕು ಎಂದು ಮನವಿ ಮಾಡಿಕೊಂಡರು. ಈ ಸಂಜೆ ನಾಲ್ಕು ಗಂಟೆಯವರೆಗೆ ಕ್ರಮ ಕೈಗೊಳ್ಳದಿದ್ದರೆ ನಾಳೆ ಯಾದಗಿರಿ ಬಂದ್ ಕರೆ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾತೋ ರಾತ್ರಿ ತೆಲಾಂಗಣಕ್ಕೆ 10tmc ನೀರು ಬಿಟ್ಟಿದೆ. ನಮ್ಮ ರೈತರಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲವೇ.ಈಗಾಗಲೇ ಎರಡು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ನಮ್ಮ ಜಿಲ್ಲೆಯವರಾಗಿದ್ದು ಮುಖ್ಯಮಂತ್ರಿಗಳ ಮನವೊಲಿಸಿ ನೀರು ಬಿಡಿಸಲು ಸಾಧ್ಯವಿಲ್ಲವೆಂದರೆ ಹೇಗೆ. ರೈತರಿಗಾಗಿ ನೀರು ಬಿಡದಿದ್ದರೆ ನಮ್ಮ ಭಾಗದ ಸಚಿವರು ಶಾಸಕರು ರಾಜೀನಾಮೆ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಹೇಳಿ,ಕೂಡಲೇ ಕಾಲುವೆಗಳಿಗೆ ನೀರು ಬಿಡುತ್ತಾರೆ ಎಂದರು.
ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಶಹಾಪುರ ಮಂಡಲ ಬಿಜೆಪಿ ಅಧ್ಯಕ್ಷ ತಿರುಪತಿ ಹತ್ತಿಕಟಗಿ, ಮಹೇಶಗೌಡ ಸುಬೇದಾರ, ಭೀಮು ನಾಯಕ, ಭೀಮಣ್ಣ ಶಖಾಪುರ ಮಾತನಾಡಿದರು. ಮುಖಂಡರಾದ ರಾಜಾ ಹನುಮಂತ ನಾಯಕ, ಸುರೇಶ ಸಜ್ಜನ್, ಚಂದ್ರಶೇಖರಗೌಡ ಮಾಗನೂರ, ಗುರು ಕಾಮಾ, ರಾಜುಗೌಡ ಉಕ್ಕಿನಾಳ ಸೇರಿದಂತೆ ಇತರರು ಇದ್ದರು.
ಎಮ್ಮೆ ಚರ್ಮದ ಕಾಂಗ್ರೆಸ್ ಸರ್ಕಾರ. ಜನಪ್ರತಿನಿಧಿಗಳು ಕೋಣ ಇದ್ದಂತೆ. ಆರಾಮವಾಗಿ ಮಲಗಿದ್ದಾರೆ.ನೀರಿಲ್ಲದೆ ರೈತರು ಬೀದಿಗಿಳಿದಿದ್ದಾರೆ. ರೈತರ ಶಾಪ ತಟ್ಟದೇ ಬಿಡುವುದಿಲ್ಲ. 2028ಕ್ಕೆ ನೀವು ಮನೆ ಸೇರುವುದು ಗ್ಯಾರಂಟಿ. ವಿನಾಶಕಾಲ ವಿಪರೀತ ಬುದ್ಧಿ. ರೈತರ ಜಮೀನುಗಳಿಗೆ ನೀರು ಬಿಡದಿದ್ದರೆ ರೈತರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ ಎಂದು ಸರ್ಕಾರವನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ ವಿಭೂತಿಹಳ್ಳಿ ತರಾಟೆಗೆ ತೆಗೆದುಕೊಂಡರು.
********************
ಕಳೆದ 15 ದಿನಗಳಿಂದ ರೈತರ ಪರ ಹೋರಾಟ ಮಾಡುತ್ತಿದ್ದೇವೆ. ಏಪ್ರಿಲ್ 15ರವರೆಗೆ ಕಾಲುವೆಗಳಿಗೆ ನೀರು ಹರಿಸಿ ಎಂದು ಬೇಡಿಕೊಳ್ಳುತ್ತಿದ್ದೇವೆ.ಸರಕಾರ ಕಣ್ಮುಚ್ಚಿದೆ. ಕೆಲ ಶಾಸಕರು ಇನ್ನೂ ಮೂರು ವರ್ಷ ಅಧಿಕಾರವಿದೆ ಕೊನೆಯ ವರ್ಷದಲ್ಲಿ ನೀರು ಬಿಟ್ಟರೆ ಆಯಿತು ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಮಗೆ ನೀವು ಜನಪ್ರತಿನಿಧಿಗಳಾ!. ಸಚಿವರು ಶಹಪುರಕ್ಕೆ,ಸುರಪುರಕ್ಕೆ ಶಾಸಕರು, ಯಾದಗಿರಿಗೆ ಅಲ್ಲಿನ ಶಾಸಕರು ಸೀಮಿತವಾಗಿ ಬಿಟ್ಟಿದ್ದಾರೆ. ರೈತರ ಸ್ಥಿತಿ ಹೇಳುವವರು ಇಲ್ಲದಂತಾಗಿದೆ ಎಂದು ಸ್ಥಳೀಯ ಜನ ಪ್ರತಿನಿಧಿಗಳ ವಿರುದ್ಧವೇ ಕರವೇ ಜಿಲ್ಲಾಧ್ಯಕ್ಷರಾದ ಭೀಮುನಾಯಕ್ ಕಿಡಿಕಾರಿದರು.
**************
ಹೋಟೆಲ್, ಪೆಟ್ರೋಲ್ ಬಂಕ್ ನಂತಹ ಕಾರ್ಯಕ್ರಮಗಳ ಉದ್ಘಾಟನೆಗೆ ಹೋಗುವ ಸಚಿವರಿಗೆ ರೈತರ ಪ್ರತಿಭಟನೆ ಕಣ್ಣಿಗೆ ಕಾಣುತ್ತಿಲ್ಲ. ರೈತರು ಜಮೀನುಗಳಿಗೆ ನೀರಿಲ್ಲದೆ ಕಣ್ಣೀರು ಇಡುತ್ತಿದ್ದಾರೆ. ರೈತರನ್ನು ಮರೆತರೆ ಪರಿಣಾಮ ಎದುರಿಸಬೇಕಾಗುತ್ತದೆ. ಒಂದು ಟಿಎಂಸಿ ನೀರು ಕೊಡಲು ಸಲಹಾ ಸಮಿತಿ ಸಲಹೆ ಬೇಕು.ಆದರೆ ರಾತೋರಾತ್ರಿ ತೆಲಾಂಗಣ ರಾಜ್ಯಕ್ಕೆ 10tmc ನೀರು ಬಿಟ್ಟಿದ್ದೀರಿ. ಆಗ ಸಲಹಾ ಸಮಿತಿ ಸಲಹೆ ಬೇಕಿರಲಿಲ್ಲವೇ. ಏಪ್ರಿಲ್ 15ರವರೆಗೆ ನೀರು ಬಿಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘಟನೆ ಮುಖಂಡ ಮಹೇಶಗೌಡ ಸುಬೇದಾರ್ ಎಚ್ಚರಿಸಿದರು.
*************
ರೈತ ದೇಶದ ಬೆನ್ನೆಲುಬು ಎನ್ನುವ ನೀವು ಬೆನ್ನೆಲುಬನ್ನೆ ಮುರಿಯುವ ಕೆಲಸ ಮಾಡುತ್ತಿದ್ದೀರಿ. ಇಲ್ಲಿಯವರೆಗೆ ರೈತರಿಗೆ ನೀಡುವ ಸಹಾಯಧನ ರಾಜ್ಯ ಸರ್ಕಾರ ನಿಲ್ಲಿಸಿದೆ. ಜಿಲ್ಲೆಯಲ್ಲಿ ಎರಡು ನದಿಗಳಿದ್ದರೂ ನಮಗೆ ನೀರು ಸಿಗುತ್ತಿಲ್ಲ. ನೀರು ಬಿಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಸರ್ಕಾರಕ್ಕೆ ಎಚ್ಚರಿಸಿದರು.