ಚಿಂತನೆ
ಯುಗಾದಿಯ ‘ ಹೊಸತನ’ ದ ಸಂದೇಶ
ಮುಕ್ಕಣ್ಣ ಕರಿಗಾರ
ವಿಶ್ವಾವಸು ಸಂವತ್ಸರದ ಹೊಸವರ್ಷಯುಗಾದಿ ಪ್ರಾರಂಭವಾಗಿದೆ ಇಂದು.ಚೈತ್ರಮಾಸವು ಪ್ರಕೃತಿಯಲ್ಲಿ ನವೋಲ್ಲಾಸವನ್ನು ತುಂಬಿದೆ. ಬೇವು -ಮಾವು ಮೊದಲಾದ ಮರಗಳು ಹಳೆಯ ಎಲೆಗಳನ್ನು ಕಳಚಿಕೊಂಡು ಹೊಸ ಚಿಗುರಿನಿಂದ ಸಿಂಗರಿಸಿಕೊಂಡು ನಳನಳಿಸುತ್ತವೆ.ಕಲಿಯುಗದ ಪ್ರಾರಂಭದ ದಿನವಾದ್ದರಿಂದ ಇದನ್ನು ಯುಗಾದಿ ಎಂದು ಕರೆಯಲಾಗುತ್ತದೆ.
ಯುಗಾದಿ ಎಲ್ಲರಲ್ಲಿಯೂ ಹೊಸಭಾವದ ಉಗಮಕ್ಕೆ ಕಾರಣವಾಗುವ,ಹೊಸಸ್ಫೂರ್ತಿಯನ್ನುಂಟು ಮಾಡುವ ದಿನ.ಪ್ರಕೃತಿಯಲ್ಲಿ ಗಿಡಮರಗಳು ಹಳೆಯ ಎಲೆಗಳನ್ನು ಕಳಚಿಕೊಂಡು ಹೊಸ ಎಲೆಗಳನ್ನು ಮೈತುಂಬ ಮುಡಿದುಕೊಂಡು ಸಂಭ್ರಮಿಸುವ ಸಂಗತಿ ನಮ್ಮಲ್ಲಿ ನವೋಲ್ಲಾಸವನ್ನುಂಟು ಮಾಡುತ್ತದೆ.ವರ್ಷಕ್ಕೊಮ್ಮೆ ನಾವೂ ಹೀಗೆ ಹೊಸತನ್ನು ಮೈಗೂಡಿಸಿಕೊಂಡು ‘ಹೊಸಬರು’ ಆಗಬೇಕು.ಹಳೆಯ ವಿಚಾರ,ಅರ್ಥಹೀನ ಮೌಢ್ಯ,ನಿರುಪಯುಕ್ತ ವಾದ- ಸಂಘರ್ಷಗಳ ಕ್ಷುದ್ರಭಾವನೆಗಳಿಂದ ಹೊರಬಂದು ಪ್ರಕೃತಿಯಲ್ಲಿ ಅರಳಿನಿಂತ ಹೊಸತನವನ್ನು ಎದುರುಗೊಳ್ಳಬೇಕು, ಹೊಸತು ಹೊಸತನ್ನು ಆವಾಹಿಸಿಕೊಳ್ಳಬೇಕು.ಸದಾ ಹೊಸತನಕ್ಕೆ ತುಡಿಯುವಪ್ರಕೃತಿತತ್ತ್ವವನ್ನು ಅಂಗವಿಸಿಕೊಳ್ಳಬೇಕು.ಜಡನಲ್ಲ ನಾನು ಚೇತನ ಎನ್ನುವ ಜಂಗಮತ್ವವನ್ನು,ವಿಶ್ವಾತ್ಮಭಾವವನ್ನು ಅಳವಡಿಸಿಕೊಳ್ಳಬೇಕು.
ಗಿಡ ಮರಗಳು ತಮ್ಮ ಹಣ್ಣೆಲೆ,ಒಣ ಎಲೆಗಳನ್ನು ಉದುರಿಸಿಕೊಂಡು ಹೊಸಚಿಗುರನ್ನು ಪಡೆದು ನವತನದ ನವೋಲ್ಲಾಸವನ್ನು ಅನುಭವಿಸುತ್ತವೆ.ನಾವುಕೂಡ ನಮ್ಮ ವ್ಯಕ್ತಿತ್ವವಿಕಸನಕ್ಕೆ,ಆತ್ಮಶಕ್ತಿಯ ಜಾಗೃತಿಗೆ ಅಡ್ಡಿಯಾದ ಅಲ್ಪಭಾವನೆಗಳನ್ನು ಕೊಡವಿ ಮೇಲೇಳಬೇಕು.ನಾನು ಅಲ್ಪನಲ್ಲ,ನಾನೇ ಮಹತ್ ಇರುವೆ,ನಾನು ಕ್ಷುದ್ರನಲ್ಲ,ನಾನು ಭದ್ರನಿರುವೆ ; ನಾನು ಜಡದೇಹಿಯಲ್ಲ,ಚೈತನ್ಯಾತ್ಮನು ಎನ್ನುವ ಭಾವ ಮೊಳೆಯಿಸಿಕೊಳ್ಳಬೇಕು.ನಾನು ದುರ್ಬಲನಲ್ಲ,ಸಬಲನು ಎನ್ನುವ ಆತ್ಮತತ್ತ್ವವನ್ನು ಅಂಗವಿಸಿಕೊಳ್ಳಬೇಕು.ನಮ್ಮಲ್ಲಿ ಯಾರೂ ಪಾಪಿಗಳಿಲ್ಲ,ಎಲ್ಲರೂಪುಣ್ಯಾತ್ಮರೆ.ನಮ್ಮಲ್ಲಿ ಯಾರೂ ಕಿರಿಯರಿಲ್ಲ,ಎಲ್ಲರೂ ಹಿರಿಯರೆ.ನಮ್ಮಲ್ಲಿ ಯಾರೂ ಕನಿಷ್ಟರಿಲ್ಲ,ಎಲ್ಲರೂ ಶ್ರೇಷ್ಠರೆ.ನಮ್ಮ ಬಂಧನಕ್ಕೆ, ಅಜ್ಞಾನಕ್ಕೆ ಕಾರಣವಾದ ಮೌಢ್ಯ,ಹುಸಿ ಶಾಸ್ತ್ರ ಪುರಾಣ ಕಟ್ಟು ಕಟ್ಟಲೆಗಳ ಸಂಕೋಲೆಗಳನ್ನು ಹರಿದುಕೊಂಡು ಹೊರಬರಬೇಕು.ಬೆಳಗುವ ಸೂರ್ಯನಿಗೆ ಬಂಧನವಿಲ್ಲ,ಬೀಸುವ ಗಾಳಿಗೆ ಬಂಧನವಿಲ್ಲ,ಹರಿವ ನೀರಿಗೆ ಪರಿಮಿತಿ ಇಲ್ಲ.ಹೀಗಿರುವಾಗ ವಿಶ್ವಾತ್ಮನ ಪ್ರತಿರೂಪವಾಗಿರುವ ನಾವು ಏಕೆ ಬಂಧನಕ್ಕೆ ಒಳಗಾಗಬೇಕು? ಅನಂತಶಕ್ತಿಯ ಪ್ರತೀಕವೇ ಆದ ನಾವು ಯಾಕೆ ಪರಿಮಿತಿಯ ಚೌಕಟ್ಟಿನಲ್ಲಿ ಸಿಲುಕಬೇಕು? ನಾನು ದೇಹಿಯಲ್ಲ,ಆತ್ಮನು ಎನ್ನುವ ಆತ್ಮಭಾವವನ್ನು ಎಚ್ಚರಿಸಿಕೊಂಡು ಮುನ್ನಡೆಯುವುದೇ ಮಹಾನ್ ಸಾಧನೆಯ,ಯಶಸ್ಸಿನ ಮೂಲ.ಚೈತನ್ಯತತ್ತ್ವವನ್ನು ಅಂಗವಿಸಿಕೊಂಡು ಮುನ್ನಡೆಯಿರಿ ಎನ್ನುವುದೇ ಯುಗಾದಿಯ ಸಂದೇಶ.
೩೦.೦೩.೨೦೨೫