ಮೂರನೇ ಕಣ್ಣು
ಮುಸ್ಲಿಮರಿಗೆ ಸರಕಾರಿ ಗುತ್ತಿಗೆಗಳಲ್ಲಿಶೇ 4% ಮೀಸಲಾತಿ ಮತ್ತು ಸಂವಿಧಾನದ ಅವಕಾಶಗಳ ಸಮತೆಯ ಸರ್ವೋದಯ ತತ್ತ್ವ
ಮುಕ್ಕಣ್ಣ ಕರಿಗಾರ
ಕರ್ನಾಟಕದ ಮುಸ್ಲಿಂ ಸಮುದಾಯದ ಆರ್ಥಿಕ ಉನ್ನತಿಯ ಸದುದ್ದೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಮುಸ್ಲಿಂ ಸಮುದಾಯಕ್ಕೆ ಸರಕಾರಿ ಗುತ್ತಿಗೆಗಳಲ್ಲಿ 4% ಮೀಸಲಾತಿಗೆ ಅವಕಾಶ ಕಲ್ಪಿಸಿರುವ ಕ್ರಮವನ್ನು ಸಂಸತ್ತಿನಲ್ಲಿ ಬಿಜೆಪಿ ಸಂಸದರು ವಿರೋಧಿಸಿದ್ದಾರೆ.ಗಮನಸೆಳೆಯುವ ಸೂಚನೆ ವೇಳೆ ಜಾರ್ಖಂಡ್ ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ವಿಷಯ ಪ್ರಸ್ತಾಪಿಸುತ್ತ’ ಕಾಂಗ್ರೆಸ್ ಸರಕಾರವು ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ.ಮುಸ್ಲಿಮರಿಗೆ ಈಗಾಗಲೇ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ.ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿರುವುದು ಕಾನೂನುಬಾಹಿರ.ಇತರ ಹಿಂದುಳಿದ ವರ್ಗಗಳ ( ಒಬಿಸಿ) ಮೀಸಲಾತಿ ಕಡಿತ ಮಾಡಿ ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ’ ಎಂದಿದ್ದಾರೆ. ನಿಶಿಕಾಂತ್ ದುಬೆ ಅವರ ಮಾತಿಗೆ ಧ್ವನಿಗೂಡಿಸಿದ ಕರ್ನಾಟಕದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ‘ ಸರ್ಕಾರಿ ಟೆಂಡರ್ ಗಳಲ್ಲಿ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರಕಾರ ಮುಸ್ಲಿಮರ ಅತಿಯಾದ ತುಷ್ಟೀಕರಣಕ್ಕೆ ಮುಂದಾಗಿದೆ’ ಎಂದಿರುವುರಲ್ಲದೆ ‘ಸಿದ್ಧರಾಮಯ್ಯ ಸರ್ಕಾರ ಮುಸ್ಲಿಂ ಮೀಸಲಾತಿ ಮಸೂದೆ ಅಸಾಂವಿಧಾನಿಕ.ಅದನ್ನು ಕೂಡಲೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ತೇಜಸ್ವಿ ಸೂರ್ಯ ಅವರಿಬ್ಬರು ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಮುಸ್ಲಿಂ ಸಮುದಾಯಕ್ಕೆ ನೀಡಿದ ಸರಕಾರಿ ಗುತ್ತಿಗೆಗಳಲ್ಲಿ ಶೇ 4% ಮೀಸಲಾತಿ ಹೇಗೆ ಸಂವಿಧಾನಬಾಹಿರವಾಗುತ್ತದೆ? ಸಂವಿಧಾನದ ಯಾವ ಅನುಚ್ಛೇದಗಳಡಿ ಇದು ಅಸಂವಿಧಾನಿಕವಾಗುತ್ತದೆ ಎನ್ನುವುದನ್ನು ವಿವರಿಸಬೇಕಿತ್ತು.
ಕರ್ನಾಟಕ ಸರಕಾರವು ಮುಸ್ಲಿಮರಿಗೆ ನೀಡಿದ ಸರಕಾರಿ ಗುತ್ತಿಗೆಗಳಲ್ಲಿ ಶೇ4% ಮೀಸಲಾತಿ ನೀಡಿದ್ದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ವಾದಿಸುವವರು ಭಾರತದ ಸಂವಿಧಾನವನ್ನು ಒಮ್ಮೆ ಓದಿ,ಅರ್ಥೈಸಿಕೊಳ್ಳಬೇಕು.ಸಂವಿಧಾನದ ಪೀಠಿಕೆಯಲ್ಲಿ ಬರುವ ” ಭಾರತದ ಪ್ರಜೆಗಳಾದ ನಾವು,ಭಾರತವನ್ನು ಸಾರ್ವಭೌಮ,ಸಮಾಜವಾದಿ,ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ; ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ವಿಚಾರ,ಅಭಿವ್ಯಕ್ತಿ,ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ” ಎನ್ನುವ ಪದಗುಚ್ಛಗಳು ಧ್ವನಿಸುವ ಅರ್ಥ ಏನು ಎನ್ನುವುದನ್ನು ವಿಚಾರಿಸಬೇಕು.ಸಂವಿಧಾನದ ಹೃದಯವೇ ಆಗಿರುವ, ಸಂವಿಧಾನವನ್ನು ಅರ್ಥೈಸಲು ನೆರವಾಗುವ ಪೀಠಿಕೆಯೇ ಭಾರತದ ಪ್ರಜೆಗಳನ್ನು ಮತ-ಧರ್ಮ,ನಂಬಿಕೆಗಳ ಆಧಾರದಲ್ಲಿ ಪ್ರತ್ಯೇಕಿಸದೆ ‘ಸರ್ವವರಿಗೂ ಸಮಪಾಲು,ಸರ್ವರಿಗೂ ಸಮಬಾಳು’ ಎಂದು ಸರ್ವೋದಯ ತತ್ತ್ವವನ್ನು ಎತ್ತಿ ಹಿಡಿದಿರುವಾಗ ಮುಸ್ಲಿಮರನ್ನು ಪ್ರತ್ಯೇಕ ಜನಸಮುದಾಯ ಎನ್ನುವಂತೆ ನೋಡುವ ಕುಟಿಲವೇಕೆ ? ಪೀಠಿಕೆಯ ‘ ಭಾರತದ ಪ್ರಜೆಗಳಾದ ” ನಾವು” ಪದಸಮೂಹದಲ್ಲಿ ಮುಸ್ಲಿಮರೂ ಒಳಗೊಳ್ಳುತ್ತಾರಲ್ಲವೆ ?ಜಾತ್ಯತೀತ ರಾಷ್ಟ್ರ (secular state) ಎಂದರೆ ಜಾತಿ,ಧರ್ಮಾಧಾರಿತವಲ್ಲದ ಧರ್ಮನಿರ್ಲಿಪ್ತ ರಾಷ್ಟ್ರ ಎಂದು ಅರ್ಥವಲ್ಲವೆ? ‘ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು’ ಒದಗಿಸುವುದು ಎಂದರೆ ಮುಸ್ಲಿಮರು ಕೂಡ ಹಿಂದೂಗಳಂತೆಯೇ ಆರ್ಥಿಕ ಉನ್ನತಿಯ ಅವಕಾಶಗಳನ್ನು ಪಡೆಯಲು ಹಕ್ಕು ಉಳ್ಳವರು ಎಂದರ್ಥವಲ್ಲವೆ?’ ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು’ ಎನ್ನುವ ಪದಗಳು ಹಿಂದೂಗಳಂತೆ ಮುಸ್ಲಿಮರು ಕೂಡ ಸರಕಾರಿ ಅವಕಾಶಗಳನ್ನು ಪಡೆಯಲು ಸಮಾನ ಹಕ್ಕುಳ್ಳವರು ಎಂದು ಅರ್ಥವಲ್ಲವೆ? ಸಂವಿಧಾನದ ಪೀಠಿಕೆಯ ವಾಕ್ಯಗಳನ್ನೆ ಅರ್ಥೈಸಿಕೊಳ್ಳದವರು ಸಂವಿಧಾನವನ್ನು ಓದಿ,ಅರ್ಥೈಸಿಕೊಳ್ಳಬಲ್ಲರೆ?
ಭಾರತ ಸಂವಿಧಾನದ ಅನುಚ್ಛೇದ 14 ಭಾರತದ ಎಲ್ಲ ಪ್ರಜೆಗಳು ಕಾನೂನು ಮತ್ತು ಕಾನೂನಾತ್ಮಕ ರಕ್ಷಣಾ ಕ್ರಮಗಳನ್ನು ಅನುಭವಿಸಲು ಸಮಾನ ಹಕ್ಕುಳ್ಳವರು ಎನ್ನುತ್ತದೆ.ಸಂವಿಧಾನದ 15ನೆಯ ಅನುಚ್ಛೇದವು ರಾಜ್ಯವು ಪ್ರಜೆಗಳಲ್ಲಿ ಕೇವಲ ಧರ್ಮ,ವರ್ಣ,ಜಾತಿ,ಲಿಂಗ,ಜನ್ಮಸ್ಥಳ ಅಥವಾ ಇತರ ಯಾವುದೇ ಕಾರಣಗಳಿಂದ ಭೇದಮಾಡಕೂಡದು ಎಂದು ವಿಧಿಸಿದೆ.ಸಂವಿಧಾನದ 16 ನೆಯ ಅನುಚ್ಛೇದ ಉದ್ಯೋಗ ಮತ್ತು ಅವಕಾಶಗಳನ್ನು ಅನುಭವಿಸಲು ಭಾರತೀಯ ಪ್ರಜೆಗಳೆಲ್ಲರೂ ಸಮಾನ ಹಕ್ಕುಳ್ಳವರು ಎನ್ನುತ್ತದೆ.ಅನುಚ್ಛೇದ 16(2) ಕೇವಲ ಧರ್ಮ,ಜನಾಂಗ,ಜಾತಿ,ಲಿಂಗ,ವಂಶ,ಜನ್ಮಸ್ಥಳ ಮತ್ತು ಇಂತಹ ಯಾವುದೇ ಕಾರಣಗಳಿಂದ ಅವಕಾಶಗಳ ಸಮಾನತೆಯನ್ನು ನಿರಾಕರಿಸುವುದನ್ನು ನಿರ್ಬಂಧಿಸಿದೆ.ವಾಸ್ತವ ಹೀಗಿರುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಸ್ಲಿಂಸಮುದಾಯಕ್ಕೆ ಸರಕಾರಿ ಗುತ್ತಿಗೆಗಳಲ್ಲಿ ಶೇ 4% ಮೀಸಲಾತಿ ನೀಡಿದ್ದು ಹೇಗೆ ಕೇವಲ ಮುಸ್ಲಿಂ ತುಷ್ಟೀಕರದ, ಸಂವಿಧಾನಬಾಹಿರ ಕ್ರಿಯೆಯಾಗುತ್ತದೆ ?
ಸಂಸದ ನಿಶಿಕಾಂತ್ ದುಬೆ ಅವರು ‘ ಮುಸ್ಲಿಮರಿಗೆ ಈಗಾಗಲೇ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ’ ಎಂದು ವಾದಿಸಿದ್ದಾರೆ. ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಶೇಷ ಆಸಕ್ತಿಯಿಂದಾಗಲಿ ಅಥವಾ ಮುಸ್ಲಿಮರನ್ನು ಓಲೈಸುವ ಕಾರಣದಿಂದಾಗಿ ನೀಡಿಲ್ಲ ;ಬದಲಿಗೆ ಅವರು ಸಂವಿಧಾನದ ಆಶಯಗಳಂತೆ ನಡೆದುಕೊಂಡಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಸಂವಿಧಾನದ ಅನುಚ್ಛೇದ 29 ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಕಾಪಾಡುತ್ತದೆ.ಈ ಅನುಚ್ಛೇದವು ಭಾರತದ ಯಾವುದೇ ಭೂಪ್ರದೇಶದಲ್ಲಿ ವಾಸಿಸುವ ಭಾಷೆ,ಲಿಪಿ,ಮತ್ತು ಸ್ವಯಂ ಸಂಸ್ಕೃತಿಯನ್ನುಳ್ಳ ಜನಾಂಗಗಳಲ್ಲಿ ಭೇದವೆಣಿಸಲಾಗದು ಎಂದು ವಿಧಿಸಿದೆಯಲ್ಲದೆ ರಾಜ್ಯವು ಸ್ಥಾಪಿಸಿದ ಅಥವಾ ರಾಜ್ಯದಿಂದ ಪೋಷಿಸಲ್ಪಡುವ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಾತಿಯನ್ನು ಅಲ್ಪಸಂಖ್ಯಾತರಿಗೆ ನಿರಾಕರಿಸಕೂಡದು ಎನ್ನುತ್ತದೆ. ಸಂವಿಧಾನದ 30 ನೆಯ ಅನುಚ್ಛೇದವು ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸುವ ಹಕ್ಕು ನೀಡಿದೆ.ವಸ್ತುಸ್ಥಿತಿ ಹೀಗಿದ್ದಾಗ ಸಿದ್ಧರಾಮಯ್ಯನವರು ಮುಸ್ಲಿಂ ತುಷ್ಟೀಕರಣಕ್ಕೆ ತೊಡಗಿದ್ದಾರೆ ಎನ್ನುವುದು ಸರಿಯೆ? ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ತಮ್ಮ ಜೀವನಧ್ಯೇಯವನ್ನಾಗಿ ಸ್ವೀಕರಿಸುವ ಸಂವಿಧಾನದಲ್ಲಿ ನಿಜನಿಷ್ಠೆಯನ್ನುಳ್ಳ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಸ್ಲಿಂ ಸಮುದಾಯಕ್ಕೆ ಸರಕಾರಿ ಗುತ್ತಿಗೆಗಳಲ್ಲಿ ಶೇ 4ಮೀಸಲಾತಿ ನೀಡಿರುವುದು ಅವರ ಸಂವಿಧಾನ ಬದ್ಧತೆಯೇ ಹೊರತು ಆಕ್ಷೇಪಾರ್ಹ ನಿಲುವಲ್ಲ,ಅಸಂವಿಧಾನಿಕ ನಡೆಯಲ್ಲ.
20.03.2025