ಭಾಷಾಬೆಡಗು
ಸೂಕ್ತ ಮತ್ತು ‘ಒಳ್ಳೆಯದು’ ಸಮನಾರ್ಥಕ ಪದಗಳಲ್ಲ
ಮುಕ್ಕಣ್ಣ ಕರಿಗಾರ
ಪ್ರಜಾವಾಣಿ ದಿನಪತ್ರಿಕೆಯ ನವೆಂಬರ್ 21,2024 ರ ಸ್ಪರ್ಧಾವಾಣಿಯಲ್ಲಿ ಯು.ಟಿ.ಆಯಿಷಾ ಫರ್ಝಾನ ಅವರು ಸ್ಪರ್ಧಾರ್ಥಿಗಳಿಗಾಗಿ ಬರೆದ ‘ ಲೋಕ ಕಂಡ ಮೇರು ದಾರ್ಶನಿಕ ಬುದ್ಧ’ ಲೇಖನ ಓದಿದೆ.ಲೇಖನವೇನೋ ಚೆನ್ನಾಗಿದೆ.ಆದರೆ ಲೇಖನದಲ್ಲಿ ಬುದ್ಧ ಬೋಧಿಸಿದ ‘ ಅಷ್ಟಾಂಗಮಾರ್ಗ’ದ ಅನುವಾದ ಸರಿಯಾದುದಲ್ಲ.ಬುದ್ಧರ ಅಷ್ಟಾಂಗಮಾರ್ಗ ‘ ಸತ್’ ನಿಂದ ಆರಂಭವಾಗುತ್ತದೆ.ಸತ್ ಎಂದರೆ ಒಳ್ಳೆಯದು ಎಂದರ್ಥ.ಒಳ್ಳೆಯ ನಡೆ ನುಡಿಗಳಿಂದ ನಾವು ಒಳ್ಳೆಯವರಾಗಬಹುದು ಎಂದು ಬುದ್ಧರು ಅಷ್ಟಾಂಗ ಮಾರ್ಗ ಬೋಧಿಸಿದರು.
ಲೇಖನದಲ್ಲಿ ಅಷ್ಟಾಂಗ ಮಾರ್ಗವನ್ನು
1.ಸೂಕ್ತವಾದ ನಂಬಿಕೆ.2.ಸೂಕ್ತವಾದ ಯೋಚನೆ.3. ಸೂಕ್ತವಾದ ಮಾತು.4. ಸೂಕ್ತವಾದ ನಡತೆ.5. ಸೂಕ್ತವಾದ ಜೀವನ 6. ಸೂಕ್ತವಾದ ಪ್ರಯತ್ನ 7. ಸೂಕ್ತ ವಿಚಾರಗಳ ಗ್ರಹಿಕೆ 8. ಸೂಕ್ತರೀತಿಯ ಧ್ಯಾನ ಎಂದು ಅನುವಾದಿಸಲಾಗಿದೆ.
ಬುದ್ಧರು ಒಳ್ಳೆಯತನಕ್ಕೆ ಮಹತ್ವನೀಡಿದ್ದರು.ಒಳ್ಳೆಯ ಗುಣಗಳಿಂದ ಒಳ್ಳೆಯ ಮನುಷ್ಯರಾಗಲು ಸಾಧ್ಯ ಎನ್ನುವುದು ಬುದ್ಧರ ‘ಅಷ್ಟಾಂಗಮಾರ್ಗ’ ದ ಸಾರ.ಸೂಕ್ತ ಎನ್ನುವ ಶಬ್ದವು ಉಚಿತ,ಯೋಗ್ಯ ಎನ್ನುವ ಅರ್ಥಗಳನ್ನು ಹೊರಹೊಮ್ಮಿಸುತ್ತದೆಯೇ ಹೊರತು ಅದು ಒಳ್ಳೆಯತನವನ್ನು ಧ್ವನಿಸದು.’ ಸರಿಕಂಡುದುದು’ ಸೂಕ್ತವಾಗಬಹುದು ಆದರೆ ಸರಿಕಂಡುದುದೆಲ್ಲ ‘ಒಳ್ಳೆಯದು’ ಆಗಿರಲು ಸಾಧ್ಯವಿಲ್ಲ ! ಹಾಗಾಗಿ ‘ ಒಳ್ಳೆಯದು’ ಎನ್ನುವುದನ್ನು ಸೂಕ್ತ ಎಂದು ಅರ್ಥೈಸುವುದು ಬುದ್ಧರ ತತ್ತ್ವವನ್ನು ಅಪಾರ್ಥಗೊಳಿಸಿದಂತೆ.’ಒಳ್ಳೆಯತನ’ವು ನೈತಿಕ ಮೌಲ್ಯವಾದರೆ ‘ ಸೂಕ್ತ’ ವು ಪರಿಸ್ಥಿತಿಗಳಲ್ಲಿನ ಆಯ್ಕೆಯಾಗುತ್ತದೆ.ಸನ್ನಡತೆಯು ಒಳ್ಳೆಯತನವಾದರೆ ಸೂಕ್ತನಡತೆಯು ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆ ಆಗುತ್ತದೆ.ಆದ್ದರಿಂದ ಬುದ್ಧರು ಬೋಧಿಸಿದ ಅಷ್ಟಾಂಗಮಾರ್ಗವನ್ನು ೧. ಒಳ್ಳೆಯ ನಂಬಿಕೆ ೨.ಒಳ್ಳೆಯ ಯೋಚನೆ ೩. ಒಳ್ಳೆಯ ಮಾತು ೪. ಒಳ್ಳೆಯ ನಡತೆ ೫. ಒಳ್ಳೆಯ ಜೀವನ ೬. ಒಳ್ಳೆಯ ಪ್ರಯತ್ನ ೭. ಒಳ್ಳೆಯ ವಿಚಾರಗಳ ಗ್ರಹಿಕೆ ೮. ಒಳ್ಳೆಯ ರೀತಿಯ ಧ್ಯಾನ ಎಂದು ಅನುವಾದಿಸುವುದೇ ಉಚಿತವಾದುದು,ಅರ್ಥಪೂರ್ಣವಾದುದು.
೨೧.೧೧.೨೦೨೪