ಬೀದರ (ನವೆಂಬರ್ ೧೮,೨೦೨೪) :: ಕನಕದಾಸರು ಕರ್ನಾಟಕದ ಮಹಾನ್ ಚೇತನರಲ್ಲಿ ಒಬ್ಬರು.ಕವಿಯಾಗಿ ಕಲಿಯಾಗಿ ಗುರುತಿಸಲ್ಪಡುವ ವಿಶೇಷ ವ್ಯಕ್ತಿಗಳವರು.ನೂರಾರು ಕೀರ್ತನೆಗಳನ್ನು ರಚಿಸಿ ಸಂಗೀತ ಸಾಹಿತ್ಯ ಲೋಕಕ್ಕೆ ತಮ್ಮದೆ ಆದ ಕೊಡುಗೆಯನ್ನು ಕೊಟ್ಟ ಮಹಾಪುರುಷರು.ಕನಕದಾಸರು ಕೀರ್ತನೆಗಳನ್ನಲ್ಲದೆ ‘ ಮೋಹನತರಂಗಿಣಿ,ನಳಚರಿತೆ,ಹರಿಭಕ್ತಿಸಾರ ಮತ್ತು ರಾಮಧಾನ್ಯ ಚರಿತೆ’ ಎನ್ನುವ ಕಾವ್ಯಕೃತಿಗಳನ್ನು ರಚಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ.ಭಕ್ತಿಯಿಂದ ಪರಮಾತ್ಮನನ್ನು ಒಲಿಸಬಹುದು ಎನ್ನುವುದಕ್ಕೆ ಭಕ್ತಶ್ರೇಷ್ಠ ಕನಕದಾಸರು ಉತ್ತಮ ಉದಾಹರಣೆಯಾಗಿದ್ದಾರೆ.ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆಯುವ ಮೂಲಕ ಹರಿಭಕ್ತರಲ್ಲಿ ಹಿರಿಯರು ಎನ್ನಿಸಿಕೊಂಡಿದ್ದಾರೆ.ತಮ್ಮಕೀರ್ತನೆಗಳ ಮೂಲಕ ಸಮಾಜದಲ್ಲಿ ರೂಢಿಯಲ್ಲಿದ್ದ ಜಾತಿಯತೆ,ಅಸಮಾನತೆ ಮತ್ತು ಅಂಧನಂಬಿಕೆಗಳ ವಿರುದ್ಧ ಹೋರಾಡಿ ಜನರಲ್ಲಿ ಜಾಗೃತಿಯನ್ನುಂಟುಮಾಡಿದ ಮಹಾಪುರುಷರು ಕನಕದಾಸರು.ಇಂತಹ ಮೇರುವ್ಯಕ್ತಿಯ ಸಾಧನೆಯ ಕಿರಿಯ ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಮುಕ್ಕಣ್ಣ ಕರಿಗಾರ ಅವರು. ಮುಕ್ಕಣ್ಣ ಕರಿಗಾರ ಅವರ ಈ ಪ್ರಯತ್ನ ಅಭಿನಂದನಾರ್ಹವಾದುದು’ ಎಂದು ಮುಕ್ತಕಂಠದಿಂದ ಶ್ಲಾಘಿಸಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ಬೆನ್ನುತಟ್ಟಿದರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆಯವರು.ಅವರಿಂದು ಸಂತ ಕನಕದಾಸರ ಜಯಂತಿಯ ಅಂಗವಾಗಿ ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಕ್ತಶ್ರೇಷ್ಠ ಕನಕದಾಸರ ಜಯಂತಿಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ‘ ಸಮಾಜಸುಧಾರಕ ಕನಕದಾಸರು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಮ್ಮ ಮಾತುಗಳನ್ನು ಮುಂದುವರೆಸಿದ ಡಾ.ಗಿರೀಶ ಬದೋಲೆಯವರು ‘ ಸರಕಾರಿ ಕೆಲಸ ಕಾರ್ಯಗಳ ನಡುವೆಯೂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಇದುವರೆಗೆ 48 ಪುಸ್ತಕಗಳನ್ನು ಪ್ರಕಟಿಸಿದ್ದು ‘ ಸಮಾಜಸುಧಾರಕ ಕನಕದಾಸರು’ ಅವರ 49 ನೆಯ ಕೃತಿಯಾಗಿದೆ.ಇನ್ನೂ ಹತ್ತಾರು ಕೃತಿಗಳು ಅವರಿಂದ ಹೊರಬರಲಿ’ ಎಂದು ಹಾರೈಸಿ ‘ಸರಕಾರಿ ಅಧಿಕಾರಿಗಳಾದ ನಾವು ನಮ್ಮ ಬಿಡುವಿನ ವೇಳೆಯನ್ನು ವ್ಯರ್ಥವಾಗಿ ಹಾಳುಮಾಡದೆ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜಕ್ಕೆ ನಮ್ಮದೆ ಕೊಡುಗೆ ನೀಡಬಹುದು ‘ ಎಂದರು.ಈ ಸಂದರ್ಭದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆಯವರು ಸಾಹಿತಿ ಮುಕ್ಕಣ್ಣ ಕರಿಗಾರ ಅವರನ್ನು ಬೀದರ ಜಿಲ್ಲಾ ಪಂಚಾಯತಿಯ ಪರವಾಗಿ ಶಾಲುಹೊದಿಸಿ,ಆತ್ಮೀಯವಾಗಿ ಸನ್ಮಾನಿಸಿದರು.ಎನ್ ಆರ್ ಎಲ್ ಎಮ್ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗೇಂದ್ರ ಧರಿ ಅವರು ಕನಕದಾಸರ ವ್ಯಕ್ತಿಚಿತ್ರಣವನ್ನು ಸುಂದರವಾಗಿ ತೆರೆದಿಟ್ಟರು.ಜಿಲ್ಲಾ ಪಂಚಾಯತಿಯ ಅಭಿವೃದ್ಧಿ ವಿಭಾಗದ ಅಧೀಕ್ಷಕ ಮಹಮ್ಮದ್ ಬಶೀರ ಅವರು ಸ್ವಾಗತ ಮತ್ತು ಪ್ರಸ್ತಾವನೆಯನ್ನು ನಿರ್ವಹಿಸಿ ಮಾತನಾಡಿ ಉಪಕಾರ್ಯದರ್ಶಿಯಂತಹ ಕಾರ್ಯಬಾಹುಳ್ಯದ ಹುದ್ದೆಯಲ್ಲಿದ್ದೂ ಮುಕ್ಕಣ್ಣ ಕರಿಗಾರ ಅವರು ಸತತ ಸಾಹಿತ್ಯರಚನೆಯಲ್ಲಿ ತೊಡಗಿಸಿಕೊಂಡು ದುಡಿಯುತ್ತಿರುವುದು ವಿಶೇಷಗಮನಾರ್ಹ ಸಂಗತಿ ಎಂದರು.ಕೃತಿಕಾರ ಮುಕ್ಕಣ್ಣ ಕರಿಗಾರ ಕೃತಿ ರಚನೆಯ ನೆಲೆ ಹಿನ್ನೆಲೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸ್ವರೂಪಾರಾಣಿಯವರು ಪ್ರಾರ್ಥನೆ ಸಲ್ಲಿಸಿದರು.ಕಾರ್ಯಕ್ರಮ ನಿರ್ವಹಿಸಿದ ಪ್ರವೀಣ ಸ್ವಾಮಿಯವರು ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರರ ಕಾರ್ಯವಿಶೇಷ ಮತ್ತು ಕೃತಿವಿಶೇಷದ ಬಗ್ಗೆ ಮಾತನಾಡಿ ‘ ಕನಕದಾಸರ ಜಯಂತಿಯ ಸಂದರ್ಭದಲ್ಲಿಯೇ ಮುಕ್ಕಣ್ಣ ಕರಿಗಾರ ಅವರ ಕನಕದಾಸರ ಕುರಿತಾದ ಪುಸ್ತಕವು ಪ್ರಕಟಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಅಭಿಪ್ರಾಯಿಸಿದರು.ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಲೆಕ್ಕಾಧಿಕಾರಿ ಶ್ರೀಕಾಂತ,ಯೋಜನಾನಿರ್ದೇಶಕ ಜಗನ್ನನಾಥ ಮೂರ್ತಿ,ಪಂರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತತರಾದ ಶಿವಾಜಿ ಡೋಣಿ,ಸಹಾಯಕ ಕಾರ್ಯದರ್ಶಿಗಳಾದ ಬೀರೇಂದ್ರ ಸಿಂಗ್,ಜಯಪ್ರಕಾಶ ಚೌಹಾಣ ಮತ್ತು ಜಿಲ್ಲಾ ಪಂಚಾಯತಿಯ ಎಲ್ಲ ಶಾಖೆಗಳ ಅಧಿಕಾರಿಗಳು,ಸಿಬ್ಬಂದಿಯವರು ಹಾಗೂ ಪಿಆರ್ ಇಡಿ ಮತ್ತು ಇತರ ಇಲಾಖೆಗಳ ಅಧಿಕಾರಿ,ಸಿಬ್ಬಂದಿಯವರು ಉಪಸ್ಥಿತರಿದ್ದರು.