ಪರಬ್ರಹ್ಮೆಯಾದ ಪಾರ್ವತಿಗೆ ಸಾವುಂಟೆ ?

ಅನುಭಾವ ಚಿಂತನೆ

ಪರಬ್ರಹ್ಮೆಯಾದ ಪಾರ್ವತಿಗೆ ಸಾವುಂಟೆ ?

ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದೊಂದಿಗೆ ನಿಕಟ ಸಂಪರ್ಕದಲ್ಲಿರುವ ನಮ್ಮ ಆತ್ಮೀಯರಾಗಿರುವ ವಿಜಯಪುರದ ಹೆಸರಾಂತ ರೆಡಿಯಾಲಿಜಿಸ್ಟ್ ಡಾಕ್ಟರ್ ವಿಶಾಲ್ ನಿಂಬಾಳ ಅವರು’ ಗಣೇಶನಿಗೆ ಕತ್ತರಿಸಿದ ತಲೆಯನ್ನು ಏಕೆ ಇಡಲಿಲ್ಲ?’ ಎನ್ನುವ ಲೇಖನವನ್ನು ಓದಿ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಾರೆ.’ ಹೇಗೆ ಜನ್ಮಪಡೆದ ಗಣೇಶನ ಸಾವು ಅನಿವಾರ್ಯವೋ ಹಾಗೆಯೇ ಪಾರ್ವತಿಯ ಸಾವು ಕೂಡ ಅನಿವಾರ್ಯವೆ,ಸತಿಯ ಹಾಗೆ ?’ ಈ ಪ್ರಶ್ನೆಯನ್ನು ಅವರು ಬಹುದಿನಗಳ ಹಿಂದೆಯೇ ಕೇಳಿದ್ದರು.ಆದರೆ ಸಮಯಾಭಾವದಿಂದ ಉತ್ತರಿಸಲು ಆಗಿರಲಿಲ್ಲ.ಇಂದು ಪುನಃ ನೆನಪಿಸಿದ್ದರಿಂದ ಈ ಚಿಂತನೆಯ ರೂಪದಲ್ಲಿ ಉತ್ತರಿಸುತ್ತಿದ್ದೇನೆ ಡಾಕ್ಟರ್ ವಿಶಾಲ್ ನಿಂಬಾಳ ಅವರಿಗೆ.

ಡಾಕ್ಟರ್ ವಿಶಾಲ್ ನಿಂಬಾಳ ಅವರ ಪ್ರಶ್ನೆಗೆ ಉತ್ತರಿಸುವ ಮೊದಲು ಧಾರ್ಮಿಕ ಸಾಹಿತ್ಯದ ಇತಿಮಿತಿಯ ಕುರಿತು ಪ್ರಸ್ತಾಪಿಸಿ ವಿಷಯ ಸ್ಪಷ್ಟಪಡಿಸುವೆ.ದಕ್ಷಯಜ್ಞಧ್ವಂಸ ಪ್ರಕರಣದಲ್ಲಿ ಶಿವನ‌ಪತ್ನಿಯಾದ ಸತಿಯು ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ.ಈ ಪ್ರಸಂಗವನ್ನು ಪುರಾಣಗಳಲ್ಲಿ ವಿವರಿಸಲಾಗಿದೆ.ಆದರೆ ಪ್ರಸಂಗವು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಂತೆಯೇ ನಡೆದಿರಬೇಕಿಲ್ಲ.ಆಧ್ಯಾತ್ಮಿಕ ತತ್ತ್ವಗಳು, ಸಂಗತಿಗಳು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲವಾದ್ದರಿಂದ ಕಥೆಯ ರೂಪದಲ್ಲಿ ಹೇಳಲಾಗುತ್ತದೆ.ಆದರೆ ಆಧ್ಯಾತ್ಮಿಕ ಸಂಗತಿಗಳು ಕಥೆಯರೂಪ ಪಡೆಯುವುದರಲ್ಲಿ ತಮ್ಮ ಮೂಲಸ್ವರೂಪ ಕಳೆದುಕೊಂಡಿರುತ್ತವೆ .ಇದನ್ನು ಮತ್ತಷ್ಟು ಸ್ಪಷ್ಟಪಡಿಸುವುದಾದರೆ ಭಾರತದ ಅಮೂಲ್ಯಜ್ಞಾನನಿಧಿಯಾದ ವೇದ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ.ಆ ಕಾರಣದಿಂದ ವೇದ ಕಾಲದ ನಂತರದ ಋಷಿಗಳು ತಮ್ಮ ದಾರ್ಶನಿಕ ದೃಷ್ಟಿಕೋನದಿಂದ ಉಪನಿಷತ್ತುಗಳನ್ನು ರಚಿಸಿ ವೇದಾರ್ಥವನ್ನು ಪ್ರಕಟಿಸಿದರು.ಈಶೋಪನಿಷತ್ತನ್ನು‌ ಒಳಗೊಂಡಂತೆ ಮೊದಲು ‘ ದಶೋಪನಿಷತ್ತುಗಳು’ ಎಂದು ಪ್ರಸಿದ್ಧಿಯಾದ ಹತ್ತು ಉಪನಿಷತ್ತುಗಳಿದ್ದವು.ಬಳಿಕ ಅವುಗಳ ಸಂಖ್ಯೆ ಹನ್ನೆರಡು,ಹದಿನಾರು,ಇಪ್ಪತ್ನಾಲ್ಕಕ್ಕೆ ಏರಿ ಈಗ ೧೦೮ ಉಪನಿಷತ್ತುಗಳಿವೆ.ದಶೋಪನಿಷತ್ತುಗಳ ವಿಚಾರವೇ ಬೇರೆ, ನಂತರದ ಉಪನಿಷತ್ತುಗಳ ವಿಚಾರವೇ ಬೇರೆ.ಭಗವದ್ಗೀತೆಯಲ್ಲಿ ಶ್ರೀಕೃಷ್ಣನು : ದಶೋಪನಿಷತ್ತುಗಳೇ ಗೋವುಗಳು.ತಾನು ಅವುಗಳ ಸಾರವನ್ನು ಕಡೆದ ಗೋಪಾಲಕನು’ ಎಂದು ಗೀತೆಯು ದಶೋಪನಿಷತ್ತುಗಳ ಸಾರ ಎಂದು ಸ್ಪಷ್ಟಪಡಿಸಿರುವುದರಿಂದ ಶ್ರೀಕೃಷ್ಣ ಮತ್ತು ವೇದವ್ಯಾಸರ ಕಾಲಕ್ಕೆ ದಶೋಪನಿಷತ್ತುಗಳು ಮಾತ್ರ ರಚನೆಗೊಂಡಿದ್ದವು ಎಂದು ಊಹಿಸಬಹುದು.ಮೊದಲು ಒಂದೇ ಇದ್ದ ವೇದವನ್ನು ವ್ಯಾಸರು ಅದರ ಋಕ್ಕು,ಮಂತ್ರ,ಸೂಕ್ತಗಳಿಗನುಗುಣವಾಗಿ ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವಣವೇದ ಎನ್ನುವ ನಾಲ್ಕು ಭಾಗಗಳಲ್ಲಿ ವಿಂಗಡಿಸಿ ವೇದವ್ಯಾಸ ಎನ್ನಿಸಿಕೊಂಡರು.ವೇದದ ಅರ್ಥವನ್ನು ಜನಸಾಮಾನ್ಯರಿಗೆ ತಿಳಿಸಲೆಂದು ವೇದವ್ಯಾಸರು ಅಷ್ಟಾದಶ ಅಂದರೆ ಹದಿನೆಂಟು ಪುರಾಣಗಳನ್ನು ಬರೆದರು.ವೇದವ್ಯಾಸರ ಉದ್ದೇಶ ಒಳ್ಳೆಯದೆ ಆಗಿದ್ದರೂ ಅವರು ಬರೆದ ಪುರಾಣಗಳು ಜನಸಮೂಹದಲ್ಲಿ ಗೊಂದಲ,ಕ್ಷೋಭೆ,ಸಂಘರ್ಷವನ್ನುಂಟು ಮಾಡಿದವು.ಶಿವಮಹಾಪುರಾಣದಲ್ಲಿ ಶಿವನೇ ಪರಬ್ರಹ್ಮನು,ಶ್ರೇಷ್ಠನು ಎಂದರೆ,ವಿಷ್ಣು ಪುರಾಣದಲ್ಲಿ ವಿಷ್ಣುವೇ ಶ್ರೇಷ್ಠ ಎನ್ನುತ್ತಾರೆ.ವಾಯು ಪುರಾಣದಲ್ಲಿ ವಾಯು ಶ್ರೇಷ್ಠನಾದರೆ ಗರುಡ ಪುರಾಣದಲ್ಲಿ ಗರುಡನೇ ಸರ್ವೋತ್ತಮನು.ಸ್ಕಂದ ಮಹಾಪುರಾಣದಲ್ಲಿ ಸ್ಕಂದನು ಪರಬ್ರಹ್ಮಸ್ವರೂಪಿಯಾದರೆ ನಾರದ ಪುರಾಣದಲ್ಲಿ ನಾರದನೇ ಶ್ರೇಷ್ಠನು.ಹೀಗೆ ಆಯಾ ಪುರಾಣದಲ್ಲಿ ಪುರಾಣದ ಕಥಾ ನಾಯಕರೇ ಶ್ರೇಷ್ಠರು ಎಂದು ವಾದಿಸಿದ್ದು ಜನರ ಗೊಂದಲಕ್ಕೆ ಕಾರಣವಾದರೆ ಪುರಾಣಗಳ ದೇವತೆಗಳು ಮನುಷ್ಯರಂತೆಯೇ‌ಪರಸ್ಪರ ಕಚ್ಚಾಡುತ್ತಾರೆ,ಯುದ್ಧ ಮಾಡುತ್ತಾರೆ ಮನುಷ್ಯರಂತೆ.ಇದು ವೇದದ ವಿಪರೀತಾರ್ಥ.ವೇದದ ಮುವ್ವತ್ತುಮೂರು ದೇವತೆಗಳು‌ ಪರಸ್ಪರ ಪೂರಕರಾಗಿ ಸೃಷ್ಟಿಸಂತುಲನೆಯ ಕಾರ್ಯ ಮಾಡುತ್ತಿದ್ದಾರೆ ಮತ್ತು ಅವರು ಒಬ್ಬರಿಗೆ ಮತ್ತೊಬ್ಬರು ಪೂರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಆದರೆ ಪುರಾಣದ ದೇವತೆಗಳು ತಮ್ಮ ಪ್ರತಿಷ್ಠೆಯ ಪ್ರತಿಷ್ಠಾಪನೆಗೆ ತಮ್ಮ ತಮ್ಮೊಳಗೇ ಕಚ್ಚಾಡುತ್ತಾರೆ! ಉಪನಿಷತ್ತುಗಳು’ ಏಕಮೇವಾದ್ವಿತೀಯ ಪರವಸ್ತು’ ವಿನ ಅನ್ವೇಷಣೆಯಲ್ಲಿದ್ದರೆ ಪುರಾಣಗಳು ತಮ್ಮ ಮತದ ದೇವರುಗಳ ಪಾರಮ್ಯಕ್ಕೆ ಬಡಿದಾಡುತ್ತಿವೆ.ಇದರಲ್ಲಿ ಯಾವುದು ಸತ್ಯ? ವೇದವಂತೂ ಹಾಗೆಯೇ ಇದೆ.ಅದನ್ನು ಋಷಿಗಳು ಒಂದರ್ಥದಲ್ಲಿ ಪರಿಭಾವಿಸಿದರು,ವ್ಯಾಸರು ತಮ್ಮ ಸಮಕಾಲೀನ ಸಮಾಜದ ಜನಜೀವನದೊಂದಿಗೆ ಅರ್ಥೈಸಿದರು.ಮಹಾಭಾರತವು ವೇದಾರ್ಥದ ಪ್ರತಿಪಾದನೆಗೆ ಹುಟ್ಟಿದರೂ ಅದರ ಓದುಗರು ವೇದಾರ್ಥಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.ತಪ್ಪು ವೇದದಲ್ಲಿ ಇಲ್ಲ,ಅದನ್ನು ಅರ್ಥೈಸುವ ಮನುಷ್ಯರ ಮನಸ್ಸಿನಲ್ಲಿದೆ.ತತ್ತ್ವವು ಜನಸಾಮಾನ್ಯರ ಬಳಿ ತಲುಪುವಾಗ ಅರ್ಥಕ್ಕಿಂತ ಹೆಚ್ಚು ಅನರ್ಥಕಾರಿ ವೇಷವನ್ನು ಧರಿಸುತ್ತದೆ.ದಕ್ಷಯಜ್ಞಧ್ವಂಸ ಪ್ರಕರಣ,ಪಾರ್ವತಿಯ ಜನನ ಪ್ರಸಂಗಗಳಲ್ಲಿಯೂ ಇದೇ ಆಗಿದೆ,ತತ್ತ್ವ ಮರೆಯಾಗಿ ರಂಜನೆಯ ಇಲ್ಲವೆ ಹೊತ್ತುಗಮನದ ಕಥೆ ಪ್ರಾಮುಖ್ಯತೆ ಪಡೆದಿದೆ.

ಶಿವ ಮಹಾಪುರಾಣ,ಸ್ಕಂದ ಮಹಾಪುರಾಣಗಳಲ್ಲಿ ದಕ್ಷಯಜ್ಞಧ್ವಂಸ ಪ್ರಕರಣವು ವಿಸ್ತೃತವಾಗಿ ವಿವರಿಸಲ್ಪಟ್ಟಿದೆ.ತನ್ನ‌ ಪತಿಯಾದ ಶಿವನ ನಿಂದನೆಯನ್ನು ಕೇಳಿ, ಸಹಿಸದೆ ಸತಿಯು’ ಯೋಗಾಗ್ನಿ’ಯಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ.ಆದರೆ ಜನರು ಸತಿಯು ದಕ್ಷನಯಜ್ಞಕುಂಡದಲ್ಲಿ ಆತ್ಮಾಹುತಿ ಮಾಡಿಕೊಂಡಳು ಎಂದು ಭಾವಿಸಿದ್ದಾರೆ.ದಕ್ಷನ ಯಜ್ಞಕುಂಡದಲ್ಲಿ ಉರಿಯುತ್ತಿರುವ ಅಗ್ನಿ ಅದು ಸಾಮಾನ್ಯ ಬೆಂಕಿಯಾಗಿದ್ದು ಅದು ಸತಿಯನ್ನು ಸುಡುತ್ತಿರಲಿಲ್ಲ! ಆ ಕಾರಣಕ್ಕಾಗಿಯೇ ಸತಿದೇವಿಯು ‘ ಯೋಗಾಗ್ನಿ’ ಯಲ್ಲಿ ಆತ್ಮಾರ್ಪಣೆ ಮಾಡಿಕೊಂಡಳು.ಯೋಗಾಗ್ನಿಯು ಯೋಗಶಕ್ತಿಯ ಪ್ರಚಂಡ ಪ್ರವಾಹವೇ ಹೊರತು ಅದು ಉರಿಯುವ ಅಗ್ನಿಯಲ್ಲ.ಹಿಂದೆ ತಪಸ್ವಿಗಳು ಉಗ್ರ ತಪಸ್ಸನ್ನು ಕೈಕೊಂಡಾಗ ಅವರ ದೇಹದಿಂದ ಹೊರಹೊಮ್ಮುವ ಯೋಗಾಗ್ನಿಯು ಸ್ವರ್ಗ,ಸತ್ಯಲೋಕ,ವೈಕುಂಠ ಮತ್ತು ಕೈಲಾಸಗಳಿಗೂ ಆವರಿಸಿ ತಪಸ್ವಿಯ ಇಷ್ಟದೇವತೆಯ ಸಾಕ್ಷಾತ್ಕಾರ ಮತ್ತು ವರಪಡೆಯುವ ಕಾರ್ಯಕ್ಕೆ ನೆರವಾಗುತ್ತಿದ್ದ ಪ್ರಸಂಗಗಳೇನಕ ಪುರಾಣಗಳಲ್ಲಿವೆ.ಇಲ್ಲಿ ನಾವು ಸತಿಯ ಸಾವನ್ನು ಆ ಅರ್ಥದಲ್ಲಿ ಪರಿಗ್ರಹಿಸಬೇಕು.’ ಯೋಗಾಗ್ನಿ’ ಎಂದರೆ ಯೋಗಸಾಮರ್ಥ್ಯದಿಂದ ಯೋಗಿಯು ಭವಬಂಧನವನ್ನು ಕಳಚಿಕೊಳ್ಳುವ,ಹುಟ್ಟು ಸಾವುಗಳ ಚಕ್ರವನ್ನು ಸುಟ್ಟು ಬೂದಿ ಮಾಡಿ ತನ್ಮೂಲಕ ಮೋಕ್ಷವನ್ನು ಅನುಗ್ರಹಿಸುವ ಸಾಧನ,ಸಿದ್ಧಿ.ಪರಶಿವನ ಶಕ್ತಿಯೂ ಸ್ವಯಂ ಪರಾಶಕ್ತಿಯೂ ಆದ ಸತಿಯು ಸಾಯುವುದುಂಟೆ ? ಯೋಗಶಕ್ತಿಯಿಂದ ತನ್ನ ಅವತರಣವನ್ನು ಸಮಾಪ್ತಗೊಳಿಸಿದಳು,ಮೂಲಮಹಾ ಪ್ರಕೃತಿಯಾಗಿ ಅನಂತದಲ್ಲಿ ಲೀನಗೊಂಡಳು,ತನ್ನ ಪ್ರಾಕೃತಿಕ ರೂಪವನ್ನು ಹೊಂದಿದಳು ಎಂದು ಅರ್ಥೈಸಬೇಕೇ ಹೊರತು ಅದನ್ನು ಸತಿಯಸಾವು ಎಂದು ಪರಿಗಣಿಸಬಾರದು.

ಸತಿಯು ಸತ್ತಳೆಂದೇ ಭಾವಿಸಿ ಜನರು ನಾನಾ ಕಥೆಗಳನ್ನು ಕಟ್ಟಿದ್ದರಿಂದ ವೇದವ್ಯಾಸರೋ ಅಥವಾ ಮತ್ತಾರೋ ಪುರಾಣಿಕರಿಗೆ ತತ್ತ್ವಾರ್ಥವನ್ನು ಪುನಃ ಪ್ರತಿಪಾದಿಸಬೇಕಿದ್ದರಿಂದ ಅವರು ಪಾರ್ವತಿಯ ಜನನ ಪ್ರಸಂಗ,ಶಿವ ಪಾರ್ವತಿಯರ ವಿವಾಹ,ಕಾರ್ತಿಕೇಯನ ಜನನ,ಷಣ್ಮುಖನಿಂದ ತಾರಕಾಸುರನ ವಧೆ ಎಂಬಿತ್ಯಾದಿ ಪ್ರಸಂಗಗಳನ್ನು ಕಲ್ಪಿಸಿದರು.ಸತಿಯ ಪ್ರಸಂಗವು ಭೂಮಿಯ ಮೇಲೆ ಗಂಗಾನದಿ ತೀರದಲ್ಲಿ ನಡೆದಂತೆ ಚಿತ್ರಿಸಿದ್ದರೆ ಪಾರ್ವತಿಯ ಜನನವನ್ನು ಹಿಮಾಲಯದಲ್ಲಿ ಘಟಿಸಿದಂತೆ ಚಿತ್ರಿಸಲಾಗಿದೆ.ಸತಿಯ ಆತ್ಮಾರ್ಪಣೆಯಿಂದ ಬೇಸರಗೊಂಡ ಶಿವನು ಹಿಮಾಲಯಕ್ಕೆ ತೆರಳಿ ತಪೋನಿರತನಾಗುವನು.ಇದೇ ಸಂದರ್ಭದಲ್ಲಿ ತಾರಕಾಸುರನು ಹುಟ್ಟಿ ಬ್ರಹ್ಮನನ್ನು ಕುರಿತು ಘೋರ ತಪಸ್ಸನ್ನಾಚರಿಸಿ ಶಿವಪುತ್ರನಿಂದಲ್ಲದೆ ಮತ್ತಾರಿಂದಲೂ ಸಾವು ಬಾರದಂತಹ ವರವನ್ನು ಪಡೆಯುವನು.ಶಿವನ ಹೆಂಡತಿಯಾದ ಸತಿಯು ಯೋಗಾಗ್ನಿಯಲ್ಲಿ ಆತ್ಮಾರ್ಪಣೆ ಮಾಡಿಕೊಂಡಿದ್ದು,ಶಿವನು ಹಿಮಾಲಯದಲ್ಲಿ ಘೋರ ತಪಸ್ಸನ್ನಾಚರಿಸುತ್ತಿದ್ದುದನ್ನು ಬಲ್ಲ ತಾರಕಾಸುರನು ಪತ್ನಿಯಿಲ್ಲದ ತಪೋನಿರತ,ವೈರಾಗ್ಯ ಮೂರ್ತಿ ಶಿವನಿಗೆ ಮಗನು ಹುಟ್ಟುವುದು ಅಸಂಭವವೆಂದೆಣಿಸಿಯೇ ಶಿವಪುತ್ರನಿಂದ ತನಗೆ ಸಾವು ಬರುವ ವರವನ್ನು ಪಡೆದಿದ್ದ.ಸ್ವರ್ಗ,ಮರ್ತ್ಯ ಮತ್ತು ಪಾತಾಳಲೋಕಗಳ ಮೇಲೆ ಅಧಿಪತ್ಯಸ್ಥಾಪಿಸಿ ಲೋಕಕಂಟಕನಾಗಿ ಮೆರೆಯುವನು.ಬ್ರಹ್ಮನ ಸಲಹೆಯಂತೆ ದೇವತೆಗಳು ಆದಿಶಕ್ತಿಸ್ವರೂಪಿಣಿಯಾದ ಸತಿದೇವಿಯನ್ನು ಲೋಕಕಲ್ಯಾಣಕ್ಕಾಗಿ ಅವತರಿಸುವಂತೆ ಪ್ರಾರ್ಥಿಸುವರು.ಇತ್ತ ಪರ್ವತಗಳ ರಾಜನಾದ ಹಿಮಾಲಯನು ಸಹ ಆದಿಶಕ್ತಿಯೇ ತನ್ನ ಮಗಳಾಗಿಹುಟ್ಟಬೇಕೆಂದು ಪತ್ನಿ ಮೈನಾದೇವಿಯ ಜೊತೆಗೂಡಿ ತಪಸ್ಸನ್ನಾಚರಿಸುವನು.ಇಂದ್ರಾದಿ ದೇವತೆಗಳ ಪ್ರಾರ್ಥನೆ ಮತ್ತು ಮೈನಾದೇವಿ ಹಿಮವಂತನ ತಪಸ್ಸಿಗೆ ಒಲಿದ ಆದಿಶಕ್ತಿಯು ಪರ್ವತರಾಜನ ಮಗಳಾಗಿ ಅವತರಿಸುವಳು.ಹಿಮಾಲಯನ ಮಗಳಾದ್ದರಿಂದ ಹೈಮಾವತಿ ಎನ್ನುವ ಹೆಸರನ್ನು,ಪರ್ವತನ ಮಗಳಾದ್ದರಿಂದ ಪಾರ್ವತಿ ಎನ್ನುವ ಹೆಸರನ್ನು ಪಡೆಯುವಳು.ಮುಂದೆ ಶಿವನೇ ತನ್ನ ಗಂಡನಾಗಬೇಕೆಂದು ತಪಸ್ಸಿಗೆ ಹೋರಟಾಗ ‘ ಬೇಡ,ನಿಲ್ಲು ಮಗಳೆ ಉ–ಮಾ ‘ ಎಂದ ಮೈನಾದೇವಿಯ ಮಾತಿನಿಂದ ಉಮಾದೇವಿ ಎನ್ನುವ ಹೆಸರಿನಿಂದ,ಶಿವನನ್ನು ಪತಿಯನ್ನಾಗಿ ಪಡೆಯಲು ಒಣಗಿದ ಎಲೆಗಳನ್ನು ಸೇವಿಸುತ್ತಾ ಕಾಲಾಂತರದಲ್ಲಿ ಅವುಗಳ ಸೇವನೆಯನ್ನು ಸಹ ಬಿಟ್ಟು ನಿರಾಹಾರವ್ರತಳಾಗಿ ಶಿವನನ್ನು‌ಕುರಿತು ಉಗ್ರತಪಸ್ಸು ಕೈಗೊಂಡಿದ್ದರಿಂದ ‘ ಅಪರ್ಣಾ’ ಎಂದು ಖ್ಯಾತಳಾದಳು. ಶಿವಪಾರ್ವತಿಯರ ವಿವಾಹವಾಗಿ ,ಸ್ಕಂದ- ಸುಬ್ರಹ್ಮಣ್ಯನು ಹುಟ್ಟಿ ತಾರಕಾಸುರನನ್ನು ಸಂಹರಿಸುತ್ತಾನೆ.

ಇಲ್ಲಿ ಪಾರ್ವತಿಯ ಹುಟ್ಟು ಗಮನಾರ್ಹವಾದುದು.ಪಾರ್ವತಿಯು ಪರ್ವತಗಳರಾಜ ಹಿಮವಂತನ ಮಗಳಾಗಿ ಹುಟ್ಟುತ್ತಾಳೆ.ಹಿಮಾಲಯವು ಅತ್ಯಂತ ಎತ್ತರದ ಋಷಿಮುನಿಗಳ ತಪಸ್ಸಿಗೆ ಪ್ರಶಸ್ತವಾದ ಸ್ಥಳ.ಹಿಮಾಲಯದ ಕೆಳಭಾಗದಲ್ಲಿ ವಾಸಿಸುವವರು ದೀರ್ಘಾಯುಗಳಾದರೆ ಮೇಲುಸ್ತರದ ಋಷಿಗಳು,ಸಿದ್ಧರುಗಳು ತಮ್ಮ ಸಾಧನೆಯ ಬಲದಿಂದ ಮೃತ್ಯುವನ್ನು ಗೆದ್ದ,ಮರಣಮುಕ್ತರುಗಳು.ಹಿಮಾಲಯದ ಅತ್ಯಂತ ಎತ್ತರದಲ್ಲಿ ಗುಪ್ತಸ್ಥಳ ಸಿದ್ಧಾಶ್ರಮ ಅಥವಾ ಜ್ಞಾನಗಂಜಾಶ್ರಮ ಇದೆ.ಅಲ್ಲಿರುವ ಋಷಿಗಳು ಅಮರರು,ಇಚ್ಛಾನುಸಾರಿಗಳಾಗಿ ಲೋಕಲೋಕಗಳನ್ನು ಸಂಚರಿಸಬಲ್ಲ ಯೋಗಸಾಮರ್ಥ್ಯ ಉಳ್ಳವರು.ಆ ಸಿದ್ಧಾಶ್ರಮ ಪ್ರದೇಶದಲ್ಲಿ ತಪಸ್ಸು ಗೈದು ವಶಿಷ್ಠ ವಿಶ್ವಾಮಿತ್ರರುಗಳು ಬ್ರಹ್ಮರ್ಷಿಗಳಾದದ್ದು,ಆ ಸಿದ್ಧಾಶ್ರಮದಲ್ಲಿಯೇ ವಿಷ್ಣುವು ಶಿವನನ್ನು ಕುರಿತು ಉಗ್ರತಪಸ್ಸನ್ನಾಚರಿಸಿ ಶಿವನಿಂದ ವರವಾಗಿ ಸುದರ್ಶನ ಚಕ್ರವನ್ನು ಪಡೆದದ್ದು,ಅದೇ ಸಿದ್ಧಾಶ್ರಮದಲ್ಲಿಯೇ ಸಪ್ತರ್ಷಿಗಳಿರುವುದು,ಸಿದ್ಧಾಶ್ರಮದಲ್ಲಿಯೇ ಪರಶುರಾಮನ ಆಶ್ರಮ ಇರುವುದು.ಈ ಸಿದ್ಧಾಶ್ರಮದಲ್ಲಿಯೇ ಪಾರ್ವತಿಯು ಜನಿಸಿದ್ದು ಎಂದರೆ ಅವಳು ಮರಣಮುಕ್ತಳೆಂದೇ ತಾನೆ ಅರ್ಥ ? ಶಿವನು ಪಾರ್ವತಿಯನ್ನು ಮದುವೆಯಾದ ಬಳಿಕ ಕೈಲಾಸಕ್ಕೆ ಕರೆದೊಯ್ಯುತ್ತಾನೆ ಅವಳನ್ನು.ಕೈಲಾಸವು ನಿತ್ಯಾನಂದದ ಮೋಕ್ಷಸ್ಥಳವಾಗಿದ್ದು ಅಲ್ಲಿ ಮರಣಭಯವಿಲ್ಲ,ಹುಟ್ಟು ಸಾವುಗಳಿಲ್ಲ.ಇಂದಿನ ಚೀನಾದ ವ್ಯಾಪ್ತಿಯಲ್ಲಿರುವ ಕೈಲಾಸ ಪರ್ವತವನ್ನೇ ಭಕ್ತರು ಕೈಲಾಸ ಎಂದು ಭಾವಿಸಿದ್ದು ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಇಂದಿಗೂ ಕೈಲಾಸಪರ್ವತವನ್ನು ಆರೋಹಣ ಮಾಡಲು ಆಗಲಿ ಅಥವಾ ಅದರ ರಹಸ್ಯವನ್ನು ಭೇದಿಸಲು ಆಗಲು ಶಕ್ಯರಾಗಿಲ್ಲವೆಂದಬಳಿಕ ಈಗಿನ ಮಟ್ಟಿಗಂತೂ ಕೈಲಾಸಪರ್ವತವು ಮನುಷ್ಯರ ಕಲ್ಪನೆ- ಊಹೆಗಳಿಗೆ ಎಟುಕದ ದಿವ್ಯಪರ್ವತ,ದಿವ್ಯಲೋಕ ಎಂದಿಟ್ಟುಕೊಂಡರೆ ಸಾಕು.ಕೈಲಾಸದಲ್ಲಿ ಪರಶಿವನ ಸತಿಯಾಗಿ ವಾಸಿಸುವ ಪಾರ್ವತಿಗೆ ಸಾವು ಉಂಟೆ ? ಖಂಡಿತವಾಗಿಯೂ ಪಾರ್ವತಿಗೆ ಸಾವು ಇಲ್ಲ.

ಪಾರ್ವತಿಯು ಸಾಕ್ಷತ್ ಪರಬ್ರಹ್ಮೆಯು,ಹುಟ್ಟು ಸಾವುಗಳಿಗೆ ಅತೀತಳಾದ ಪರಾಶಕ್ತಿಯು.ಶಿವ ಮತ್ತು ಶಕ್ತಿಯರು‌ ಪರಸ್ಪರ ಅಭಿನ್ನರು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರರು ಎನ್ನುವ ಆಧ್ಯಾತ್ಮಿಕ ರಹಸ್ಯವೇ ಶಿವಪಾರ್ವತಿಯರ ವಿವಾಹ ಪ್ರಸಂಗವು.ಪ್ರಕೃತಿ ಮತ್ತು‌ಪುರುಷರ ಸಮಾಗವೇ ಶಿವ ಪಾರ್ವತಿಯರ ಕಲ್ಯಾಣಮಹೋತ್ಸವವು.ಶಿವಪಾರ್ವತಿಯರ ಸಮಾಗಮದಿಂದ ಕುಮಾರನು ಹುಟ್ಟುವುದೇ ಸೃಷ್ಟಿಯ ಗುಟ್ಟು,ಲೋಕಕಲ್ಯಾಣಕಾರ್ಯ.

‌ಯೌಗಿಕವಾಗಿ ಇದನ್ನು ಅರ್ಥೈಸಬೇಕು.ಪಾರ್ವತಿಯ ಜನನ ಆಜ್ಞಾಚಕ್ರದಲ್ಲಿ.ಆಜ್ಞಾಚಕ್ರವು ಹಿಮಾಲಯಪರ್ವತ.ಆಜ್ಞಾಚಕ್ರದಲ್ಲಿ ಯೋಗಸಾಧಕನು ಶಿವನಿಂದ ಸಂದೇಶಗಳನ್ನು ಸ್ವೀಕರಿಸುತ್ತಾನೆ,ಶಿವಪ್ರೇರಣೆಯಂತೆ ತನ್ನ ಬಾಳಗತಿಯನ್ನು ನಿರ್ಧರಿಸುತ್ತಾನೆ.ಆಜ್ಞಾಚಕ್ರದ ಒಳಭಾಗದಲ್ಲಿ ಈತರಲಿಂಗವಿದ್ದು ಆ ಲಿಂಗವೇ ಮುಕ್ಕಣ್ಣ ಶಿವನು.ಆಜ್ಞಾಚಕ್ರದಲ್ಲಿ ಶಿವನ ಆಜ್ಞಾನುವರ್ತಿಯಾಗಿರುವ ದೇವತೆಗಳಿದ್ದಾರೆ,ಋಷಿಮುನಿಗಳಿದ್ದಾರೆ.ಅವರೆಲ್ಲರು ಶಿವ ಪಾರ್ವತಿಯರ ವಿವಾಹ ಮಾಡುತ್ತಾರೆ.ಅಲ್ಲಿ ಕೆಲಕಾಲ ತಂಗಿದ ಶಿವನು ಸಹಸ್ರಾರಚಕ್ರವಾದ ತನ್ನ ನಿವಾಸ ಕೈಲಾಸಕ್ಕೆ ಶಕ್ತಿ ಪಾರ್ವತಿಯೊಡನೆ ತೆರಳುತ್ತಾನೆ.ಯೋಗಿಯು ಕೂಡ ತನ್ನ ಸಾಧನಾಪಥದಲ್ಲಿ ಕೆಲವು ಕಾಲ ಆಜ್ಞಾಚಕ್ರದಲ್ಲಿ ನೆಲೆನಿಂದು ಬ್ರಹ್ಮಾನಂದವನ್ನು ಅನುಭವಿಸುತ್ತಾನೆ.

  • ‌ ‌ ‌ ೦೮.೦೯.೨೦೨೪

About The Author