ನಶಾ ಮುಕ್ತ ಮಾದಕ ವಸ್ತುಗಳ ವಿರೋಧಿ ದಿನಾಚರಣೆ : ವ್ಯಸನ ಮುಕ್ತ ಸಮಾಜ ನರ‍್ಮಾಣದ ಗುರಿ ನಮ್ಮದಾಗಲಿ : ದಿವ್ಯಾರಾಣಿ ನಾಯಕ

ಶಹಾಪುರ : ಜೀವ ಸಂಕುಲಕ್ಕೆ ಅಪಾಯವನ್ನು ತಂದೊಡ್ಡುವ ನಶೆಯ ಅಮಲಿನ ಮಾದಕ ವಸ್ತುಗಳನ್ನು ಯುವಕರು ಸೇವಿಸಬಾರದು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಏನೆಲ್ಲವನ್ನು ಸಾಧಿಸಲು ಸಾಧ್ಯ ಎಂಬುವುದು ಯುವಕರು ಹಾಗೂ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣದ ಗುರಿ ನಮ್ಮದಾಗಲಿ ಎಂದು ಸರಕಾರಿ ಅಭಿಯೋಜಕಿ(ಎಪಿಪಿ) ದಿವ್ಯಾರಾಣಿ ನಾಯಕ ತಿಳಿಸಿದರು.
ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ನಶಾ ಮುಕ್ತ ಭಾರತ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಯುವಕರು ಸಿಗರೇಟ್ ನಲ್ಲಿ ಗಾಂಜಾವನ್ನು ಬೇರೆಯಿಸಿ ಸೇವಿಸುತ್ತಿರುವುದು ಹೆಚ್ಚಿಗೆ ಬೆಳಕಿಗೆ ಬರುತ್ತಲಿದೆ. ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಬೇಕಾಗಿದೆ. ಮುಗ್ದ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.ಅದರಲ್ಲಿ ಮದ್ಯ ಸೇವಿಸಿದ ಯುವಕರು ವಾಹನ ಚಲಾಯಿಸಬಾರದು. ಕುಡಿದ ವ್ಯಕ್ತಿ ವಾಹನ ಚಲಾಯಿಸಿದರೆ ಹತ್ತು ಸಾವಿರ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.ಯುವಕರು ಮೊದಲು ಖುಷಿಗಾಗಿ ಮಾದಕ ವಸ್ತುಗಳನ್ನು ಸೇವಿಸಿ ನಂತರ ಅದರ ವ್ಯಸನಿಗಳಾಗುತ್ತಿದ್ದಾರೆ. ಮಹಿಳಾ ಕೂಲಿ ಕಾರ್ಮಿಕರು ಸಮುದಾಯದವರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಗುಟುಕಾ ಸೇವಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಗುಟುಕಾ ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತೇವೆ ಎಂಬ ಎಚ್ಚರಿಕೆ ಗಂಟೆ ಸದಾ ನಮ್ಮನ್ನು ಬಾರಿಸುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಜೈಲಾಲ ತೋಟದಮನೆ, ಶಹಾಪುರ ಠಾಣೆಯ ಪಿ.ಎಸ್.ಐ ಶ್ಯಾಮಸುಂದರ ನಾಯಕ, ಶಾಲೆಯ ಮುಖ್ಯಗುರು ಟಿ.ಪಿ. ಧೋತ್ರೆ, ಪ್ಯಾನಲ್ ವಕೀಲರಾದ ಮಲ್ಲಪ್ಪ ಕುರಿ, ಸಿದ್ದಪ್ಪ ಪಸ್ಪೂಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.