ಗಣೇಶನಿಗೆ ಕತ್ತರಿಸಿದ ತಲೆಯನ್ನು ಏಕೆ ಇಡಲಿಲ್ಲ ?

ಅನುಭಾವ ಚಿಂತನೆ

‌ ‌ಗಣೇಶನಿಗೆ ಕತ್ತರಿಸಿದ ತಲೆಯನ್ನು ಏಕೆ ಇಡಲಿಲ್ಲ ?

ಮುಕ್ಕಣ್ಣ ಕರಿಗಾರ

ಗಣೇಶಚತುರ್ಥಿಯ ದಿನವಾದ ನಿನ್ನೆ ಅಂದರೆ ಸೆಪ್ಟೆಂಬರ್ 07,2024 ರಂದು ನಾನು ಬರೆದು ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿದ್ದ ‘ ಗೌರಿ ಗಣೇಶ ಹಬ್ಬದ ಆಧ್ಯಾತ್ಮಿಕ ಮಹತ್ವ’ ಚಿಂತನೆಯನ್ನು ಓದಿ ವಿಜಯಪುರದ ಪ್ರಸಿದ್ಧ ರೇಡಿಯೋಲಾಜಿಸ್ಟ್ ಮತ್ತು ನಮ್ಮ ಆತ್ಮೀಯರಾಗಿರುವ ಡಾಕ್ಟರ್ ವಿಶಾಲ್ ನಿಂಬಾಳ ಅವರು ‘ ಗಣೇಶನಿಗೆ ಶಿವನು ಕತ್ತರಿಸಿದ ತಲೆಯನ್ನು ಏಕೆ ಇಡಲಿಲ್ಲ? ಆನೆಯ ತಲೆಯನ್ನು ಏಕೆ ಇಟ್ಟರು ? ಎಂದು ಪ್ರಶ್ನಿಸಿದ್ದಾರಲ್ಲದೆ ಈ ಕುರಿತ ಪುರಾಣಗಳ ವಿವರಣೆ ತಮಗೆ ಸಮ್ಮತವಿಲ್ಲ ಎಂದೂ ಹೇಳಿದ್ದಾರೆ. ವಿಚಾರಪ್ರಚೋದಕ ಉತ್ತಮ ಪ್ರಶ್ನೆಯನ್ನೇ ಕೇಳಿದ್ದಾರೆ ಡಾಕ್ಟರ್ ವಿಶಾಲ್ ನಿಂಬಾಳ ಅವರು.

‌ ಗೌರಿತನಯನ ಶಿರ ಹರಿದಿದ್ದು ಪರಮೇಶ್ವರ ಶಿವನು.ಶಿವ ತನ್ನ ಎಡಗೈಯ ಕಿರಿಬೆರಳ ಉಗುರಿನಿಂದ ಬಾಲಕನ ಶಿರವನ್ನು ಹರಿದು ಎಸೆಯುತ್ತಾನೆ.ಶಿವನ ರೌದ್ರಾವೇಶದ ಆರ್ಭಟಕ್ಕೆ ಬಾಲಕನ ಶಿರ ಎಲ್ಲಿ ಹೋಯಿತೊ? ಯಾವ ಕಾಡು ಪಾಲಾಯಿತೊ ? ಅಥವಾ ಸಮುದ್ರಸೇರಿತೊ ? ಬಲ್ಲವರಾರು ? ಪುರಾಣಕರ್ತೃರುಗಳಂತೂ ಶಿವನಿಂದ ಛೇದಿಸಲ್ಪಟ್ಟ ಗೌರಿಪುತ್ರನ ತಲೆ ಏನಾಯಿತು ಎಂದು ವಿವರಿಸಿಲ್ಲ.ನಾವು ವಿಚಾರಿಸಬೇಕಿದೆ.

‌ ಇದಕ್ಕೆ ಪೂರಕವಾಗಿ ಇನ್ನೂ ಎರಡು ಪ್ರಸಂಗಗಳನ್ನು ಗಮನಿಸೋಣ.ದಕ್ಷಯಜ್ಞಧ್ವಂಸ ಪ್ರಸಂಗದಲ್ಲಿ ವೀರಭದ್ರನು ಮದೋನ್ಮತ್ತ,ಶಿವದ್ವೇಷಿ ದಕ್ಷನ ಶಿರವನ್ನು ಹರಿದು ಯಜ್ಞಕುಂಡದಲ್ಲಿ ಎಸೆಯುತ್ತಾನೆ.ಶಿವ ದಕ್ಷನಿಗೆ ಮರುಜೀವದಾನ ಗೈಯುವಾಗ ಕುರಿಯ ತಲೆಯನ್ನ ತರಿದು ತಂದು ದಕ್ಷನ ಮುಂಡಕ್ಕೆ ಜೋಡಿಸಲಾಗುತ್ತದೆ.ಶಿವನ ಆಗ್ರಹಕ್ಕೆ ತುತ್ತಾಗಿ ನಿಗ್ರಹಿಸಲ್ಪಟ್ಟ ದಕ್ಷನು ಶಿವನ ಅನುಗ್ರಹದಿಂದ ಕುರಿತಲೆಯವನಾಗಿ ಮರುಹುಟ್ಟು ಪಡೆಯುತ್ತಾನೆ.ಮನ್ಮಥದಹನವು ಮತ್ತೊಂದು ಪ್ರಸಂಗವು.ಸತಿಯ ವಿರಹದಿಂದ ಬೆಂದ ಶಿವನು ಹಿಮಾಲಯದಲ್ಲಿ ತಪಸ್ಸನ್ನಾಚರಿಸುತ್ತಿರುತ್ತಾನೆ.ತಾರಕಾಸುರನ ಉಪದ್ರವ -ಉಪಟಳದಿಂದ ಬೇಸತ್ತ ದೇವತೆಗಳು ಪರಿಹಾರ ಕೇಳಲಾಗಿ ಬ್ರಹ್ಮನು ಶಿವಪುತ್ರನಿಂದ ಮಾತ್ರ ತಾರಕನವಧೆಯಾಗುತ್ತದೆ ಎಂದು ಉಪಾಯ ಹೇಳುವನು.ದೇವತೆಗಳು ಹಿಮಾಲಯದಲ್ಲಿ ತಪೋನಿರತನಾಗಿದ್ದ ಶಿವನ ತಪೋಭಂಗಕ್ಕೆ ಮನ್ಮಥನನ್ನು ಕಳುಹಿಸುವರು. ಮನ್ಮಥನು ಗೆಳೆಯ ವಸಂತನೊಡನೆ ಹಿಮಾಲಯಕ್ಕೆ ತೆರಳಿ ಶಿವನ ತಪಸ್ಸಿಗೆ ಭಂಗವನ್ನುಂಟು ಮಾಡುವನು.ಕೋಪೋದ್ರಿಕ್ತನಾದ ಶಿವನು ತನ್ನ ಮೂರನೆಯ ಕಣ್ಣನ್ನು ತೆರೆಯೆ ಕಾಮನು ಸುಟ್ಟು ಬೂದಿಯಾಗುವನು.ಮನ್ಮಥನ ಪತ್ನಿ ಪರಿಪರಿಯಾಗಿ ತನ್ನ ಪತಿಯನ್ನು ಬದುಕಿಸಿಕೊಡು ಎಂದು ಪ್ರಾರ್ಥಿಸಲು ಶಿವನು ಕಾಮನ ಬೂದಿಯನ್ನು ಸಂಗ್ರಹಿಸಿಟ್ಟುಕೊ,ಕಾಲ ಬಂದಾಗ ಮನ್ಮಥನನ್ನು ಬದುಕಿಸುವೆ,ಅಲ್ಲಿಯವರೆಗೆ ಮನ್ಮಥನು ಅನಂಗನಾಗಿರಲಿ ಎಂದು ವರವನ್ನೀಯುವನು.ದಕ್ಷ ಮತ್ತು ಮನ್ಮಥರ ಪ್ರಸಂಗಗಳಲ್ಲಿ ದಕ್ಷನತಲೆ,ಮನ್ಮಥನ ಇಡೀ ಶರೀರ ಸುಟ್ಟುಹೋಗಿವೆ.ಸುಟ್ಟದ್ದರ ಮರುಹುಟ್ಟು ಆಗಬೇಕಾದರೆ ಮರುಸೃಷ್ಟಿ ಆಗಬೇಕು.ಈ ಸಂದರ್ಭಗಳಲ್ಲಿ ಮರುಸೃಷ್ಟಿಯ ಕಾಲ ಪಕ್ವವಾಗಿರಲಿಲ್ಲ.ಶಿವನು‌ಪ್ರಪಂಚ ಪ್ರಳಯಕಾಲದಲ್ಲಿ ಸುಟ್ಟು ಬೂದಿಯಾದ ಜೀವರುಗಳ ಬೂದಿಯನ್ನು ತನ್ನ ಮೈಗೆ ಬಡಿದುಕೊಂಡು ಮುಂದೆ ಅದೇ ಬೂದಿಯಿಂದ ಪ್ರಪಂಚವನ್ನು ಸೃಷ್ಟಿಸುತ್ತಾನೆ.ಬೂದಿಯಿಂದ ಭೂತ( ಪಂಚಭೂತಗಳ) ಗಳನ್ನು ಹುಟ್ಟಿಸಬಲ್ಲವನಾದ್ದರಿಂದ ಶಿವನನ್ನು ‘ ಭೂತನಾಥ’ ಎಂದು ಕರೆಯುತ್ತಾರೆ.

ಗೌರಿಕುಮಾರನ ಪ್ರಸಂಗದಲ್ಲಿಯೇ ಇದೇ ಘಟಿಸಿರಬೇಕು.ಬಾಲಕನನ್ನು ಕೊಲ್ಲುವಾಗ ಶಿವನು ರೌದ್ರಾವತಾರ ತಾಳಿದ್ದ.ಶಿವನ ರುದ್ರಾವತಾರವೆಂದರೆ ಅದು‌ಪ್ರಳಯಾಗ್ನಿಯನ್ನು ಹೊರಸೂಸುವ ಸಮಯವೆ.ಶಿವನ ಮೈಯೆಲ್ಲ ತೀವ್ರ ಉಷ್ಣತೆಯಿಂದ ಅಗ್ನಿಯ ಕಿರಣಗಳನ್ನು ಹೊರಸೂಸುತ್ತಿತ್ತು,ಅವನ ಅಂಗಾಂಗವೆಲ್ಲ ಬೆಂಕಿಮಯವಾಗಿತ್ತು.ಶಿವನ ಎಡಗೈಯ ಕಿರಿಬೆರಳುಕೂಡ ಅಗ್ನಿಅಸ್ತ್ರವಾಗಿ ಪರಿವರ್ತನೆಗೊಂಡಿತ್ತು.ಶಿವನ ಎಡಗೈ ಕಿರಿಬೆರಳಿನಿಂದ ಕತ್ತರಿಸಲ್ಪಟ್ಟ ಬಾಲಕನ ಶಿರವು ಶಿವಾಗ್ನಿಜ್ವಾಲೆಗೆ ಸಿಕ್ಕು ಬೂದಿಯಾಗಿರಬೇಕು.ಆ ಕಾರಣದಿಂದಲೇ ಆನೆಯ ತಲೆಯನ್ನು ತರಿದು ತಂದಿಡಲಾಯಿತು ಬಾಲಕನ ಮುಂಡಕ್ಕೆ.

‌ಮತ್ತೊಂದು ಸಾಧ್ಯತೆಯೂ ಇದೆ.ಶಿವನಿಂದ ಕತ್ತರಿಸಲ್ಪಟ್ಟ ಗೌರಿಸುತನ ತಲೆ ಚಿಮ್ಮಿ ಬಹುದೂರ ಹೋಗಿ ಬಿದ್ದಿರಬೇಕು.ಪುತ್ರನ ಅಗಲಿಕೆಯಿಂದ ಕ್ರೋಧೋನ್ಮತ್ತಳಾದ ಗೌರಿಯು ಮಹಾಕಾಳಿ ರೂಪವನ್ನು ತಾಳಿ ಪ್ರಳಯ ಭಯಂಕರಳಾಗಿ ನರ್ತಿಸುತ್ತ,ಅಕಾಲದಲ್ಲಿ ಪ್ರಪಂಚ ಪ್ರಳಯವನ್ನುಂಟು ಮಾಡುತ್ತಿರಲು ಬ್ರಹ್ಮ- ವಿಷ್ಣು ಮತ್ತು ದೇವತೆಗಳ ಸಲಹೆಯಂತೆ ಶಿವನು ದೇವಿಯ ಕ್ರೋಧವನ್ನು ತಣಿಸಲು ಆ ಕೂಡಲೆ ಕಾರ್ಯತತ್ಪರನಾಗಬೇಕಿತ್ತು.ದೂರದಲ್ಲಿ ಎಲ್ಲೋ ಬಿದ್ದ ತಲೆಯನ್ನು ಹುಡುಕಿಕೊಂಡು ಬರುವಷ್ಟು ಸಮಯ ಇರಲಿಲ್ಲ ಆದಿಶಕ್ತಿಯ ಕ್ರೋಧದಿಂದ ವಿನಾಶಹೊಂದುತ್ತಿದ್ದ ಪ್ರಪಂಚವನ್ನು ರಕ್ಷಿಸಲು.ಆ ಕಾರಣದಿಂದ ಅಲ್ಲಿ ಸಮೀಪದಲ್ಲಿಯೇ ಉತ್ತರಕ್ಕೆ ಮುಖಮಾಡಿ ಮಲಗಿದ್ದ ಆನೆಯ ಸೊಂಡಿಲನ್ನು ತರಿದು ತಂದು ಬಾಲಕನಿಗೆ ಕೂಡಿಸಲಾಯಿತು,ಗಜಮುಖನಾಗಿ‌ಮರುಜೀವ ಪಡೆದ ಗಣಪತಿ.ಇದು ಕಥೆ ಮಾತ್ರ,ಇದರ ಹಿಂದಿರುವ ತತ್ತ್ವಬೇರೆ ಇದೆ.

ಗೌರಿಪುತ್ರನು ಶಿವ ತನ್ನ ತಂದೆ ಎಂದು ಅರಿಯದಾದ ತನ್ನ ಅಜ್ಞಾನದಿಂದ.ಜ್ಞಾನೋದಯವಾಗಬೇಕಾದರೆ ಅಜ್ಞಾನವನ್ನು ಕಳೆದುಕೊಳ್ಳಲೇಬೇಕು.ಅಲ್ಲದೆ ಗೌರಿಯು ಮಣ್ಣಿನಿಂದ ಮಗನನ್ನು ಹುಟ್ಟಿಸಿದ್ದಳು.ಮಣ್ಣು ಮರ್ತ್ಯದ ಸಂಕೇತವಾಗಿ ಮರ್ತ್ಯದಲ್ಲಿ ಹುಟ್ಟಿದ ಎಲ್ಲರೂ ಸಾಯಲೇಬೇಕು.ಗೌರಿಯ ಮಗನಾದರೇನು ಮಣ್ಣಿನಿಂದ ಹುಟ್ಟಿದವನಾದ್ದರಿಂದ ಗೌರಿಪುತ್ರ ಸಾಯಬೇಕಿತ್ತು ಅದೇ ವೇಳೆಗೆ ಪರಾಶಕ್ತಿಯ ಪ್ರೀತಿಯ ಮಗನಾದ್ದರಿಂದ ಬಾಲಕನು ದಿವ್ಯಶರೀರಿಯಾಗಿ ದೇವನಾಗಬೇಕಿತ್ತು.ಶಿವನು ಬಾಲಕನ ಅಜ್ಞಾನದ ತಲೆಯನ್ನು ಕತ್ತರಿಸಿ ಜ್ಞಾನದ ಸಂಕೇತವಾದ ಆನೆಯ ಶಿರಸ್ಸನ್ನು ಜೋಡಿಸುವನು ಅಂದರೆ ಗಣಪತಿಯನ್ನು ಜ್ಞಾನಿಯನ್ನಾಗಿಸುವನು.ಗಣಪತಿ ಸೂಕ್ತವು ಗಣಪತಿಯನ್ನು ‘ ಕವಿಗಳಲ್ಲಿ ಶ್ರೇಷ್ಠನಾದ ಕವಿ’ ಎಂದು ಸ್ತುತಿಸುತ್ತದೆ.’ಕವಿ’ ಎಂದರೆ ಋಷಿ ಮತ್ತು ದಾರ್ಶನಿಕ ಎನ್ನುವ ಅರ್ಥಗಳಿವೆ.ಹಾಗಾಗಿ ಶಿವನಿಂದ ಗಜಮುಖನಾದ ಬಾಲಕನು ಜ್ಞಾನಿಯಾದ,ಜ್ಞಾನಕ್ಕೆ ಅಧಿಪತಿಯಾದ.

ಶಿವಸಂಸ್ಕಾರಗಳಲ್ಲಿ ಗುರುದೀಕ್ಷೆ ಅಥವಾ ಗುರುಬೋಧೆಗೆ ಮಹತ್ವದ ಸ್ಥಾನವಿದೆ.ಗುರುವಾನುಗ್ರಹದಿಂದ ತಂದೆತಾಯರಿಂದ ಪ್ರಾಪ್ತವಾದ ಜನ್ಮದ ಹಂಗು ಅಭಿಮಾನ ಹರಿದುಕೊಂಡ ಶಿಷ್ಯನು ಮರುಹುಟ್ಟುಪಡೆಯುತ್ತಾನೆ,ಪುನರ್ಜಾತನಾಗುತ್ತಾನೆ.’ ದ್ವಿಜ’ ಶಬ್ದದ ಅರ್ಥವು ಇದುವೆ,ಎರಡನೆಯ ಬಾರಿ ಹುಟ್ಟಿದವನು ಎಂದು.ತಂದೆಯಿಂದ ಹುಟ್ಟಿದ ಜನ್ಮವು ಮೊದಲನೆಯ ಜನ್ಮವಾದರೆ ಗುರುವಿನಿಂದ ಹುಟ್ಟುವುದು ಎರಡನೆಯ ಜನ್ಮ.ಅದಕ್ಕಾಗಿ ಗುರುದೀಕ್ಷೆ ಪಡೆದವರನು ‘ ಶ್ರೀಗುರುಕರಕಮಲಸಂಜಾತ’ ಎನ್ನುತ್ತಾರೆ.ಮೊದಲಜನ್ಮ ತಾಯಿಯ ಯೋನಿಯ ಮೂಲಕವಾದರೆ ಎರಡನೆಯ ಜನ್ಮ ಗುರುವಿನ ಕರದಲ್ಲಿ ಅಂದರೆ ಕೈಯಲ್ಲಿ ಆಗುತ್ತದೆ.ಶ್ರೀಗುರುವಿನ ಕರವು ವರದಹಸ್ತವಾದುದರಿಂದ ವರದಹಸ್ತಸ್ಪರ್ಶದಿಂದ ತನ್ನ ಪೂರ್ವಾಶ್ರಮದ ಸಂಸ್ಕಾರಕಳೆದುಕೊಂಡು ಗುರುಪುತ್ರನಾಗುತ್ತಾನೆ,ಶಿವಾನುಗ್ರಹಕ್ಕೆ ಪಾತ್ರನಾಗುತ್ತಾನೆ ಶಿಷ್ಯ.ಬ್ರಾಹ್ಮಣರು ‘ ಉಪನಯನ’ ಸಂಸ್ಕಾರದಿಂದ ದ್ವಿಜತ್ವ ಪ್ರಾಪ್ತಿಯಾಗುತ್ತದೆ ಎಂದು ನಂಬುತ್ತಾರೆ.ಯಜ್ಞೋಪವೀತಧಾರಣೆಯು ದ್ವಿಜತ್ವದ ಕುರುಹು.ಬ್ರಾಹ್ಮಣರಲ್ಲಿ ಮಗುವಿನ ತಂದೆಯೇ ಮಗುವಿಗೆ ಗಾಯತ್ರಿ ಮಂತ್ರೋಪದೇಶ ಮಾಡಿ ಯಜ್ಞೋಪವೀತ ಧಾರಣೆ ಮಾಡುವ ಮೂಲಕ ಮಗನ ಗುರುವಾಗುತ್ತಾನೆ.ಎರಡನೇ ಹುಟ್ಟು ಎನ್ನುವುದು ಸಂಸ್ಕಾರವಾಗುತ್ತದೆ.

‌ಗೌರಿಪುತ್ರನು ಮಣ್ಣಿನಿಂದಾದ ಮೈಯ ತಲೆಯನ್ನು ಕತ್ತರಿಸಿಕೊಂಡು ಅಮೃತೇಶ್ವರನಾದ ಶಿವನ ಅಮೃತಹಸ್ತಸ್ಪರ್ಶದಿಂದ ಆನೆಯತಲೆಯೊಂದಿಗೆ ಮರುಹುಟ್ಟು ಪಡೆಯುವ ಮೂಲಕ ಶಿವಸಂಸ್ಕಾರ ಪಡೆಯುತ್ತಾನೆ,ಶಿವಾನುಗ್ರಹಕ್ಕೆ ಪಾತ್ರನಾಗಿ ಗಣಗಳಿಗೆ ಒಡೆಯನಾಗುವುದು ಮಾತ್ರವಲ್ಲ,ಪ್ರಥಮ ಪೂಜ್ಯನೂ ಆಗುತ್ತಾನೆ.ಅಜ್ಞಾನವನ್ನು ಕಳೆದುಕೊಂಡ ಜ್ಞಾನಿಯು ಲೋಕಪೂಜ್ಯನಾಗುತ್ತಾನಷ್ಟೆ.ಗಣಪತಿಯು ತನ್ನ ಅಜ್ಞಾನದ ತಲೆಯನ್ನು ಕತ್ತರಿಸಿಕೊಂಡು ಜ್ಞಾನಿಯಾದುದೇ ಕರಿವದನನ ರಹಸ್ಯವು.

‌ ‌ ೦೮.೦೯.೨೦೨೪

About The Author