ಗೌರಿ ಗಣೇಶ ಹಬ್ಬದ ಆಧ್ಯಾತ್ಮಿಕ ಮಹತ್ವ

ಅನುಭಾವ ಚಿಂತನೆ

ಗೌರಿ ಗಣೇಶ ಹಬ್ಬದ ಆಧ್ಯಾತ್ಮಿಕ ಮಹತ್ವ

ಮುಕ್ಕಣ್ಣ ಕರಿಗಾರ 

ಗೌರಿ ಗಣೇಶ ಹಬ್ಬವು ಭಾರತದ ಅತಿಮಹತ್ವದ ಹಬ್ಬಗಳಲ್ಲೊಂದು . ಭಾರತದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲ್ಪಡುತ್ತಿರುವ ಈ ಹಬ್ಬಕ್ಕೆ ವಿಶಿಷ್ಟ ಸಾಂಸ್ಕೃತಿಕ ಮಹತ್ವ ಇರುವಂತೆಯೇ ಆಧ್ಯಾತ್ಮಿಕ ಮಹತ್ವವೂ ಇದೆ.ಮನುಷ್ಯ ಬಾಂಧವ್ಯದ ಮಹತ್ವವನ್ನು ಸಾರುವ ಈ ಹಬ್ಬ ಮರ್ತ್ಯ ಮತ್ತು ಕೈಲಾಸಗಳ ನಡುವಿನ ಬೆಸುಗೆಯ ಅರ್ಥಹೊಂದಿದೆ.

ಭಾದ್ರಪದ ಮಾಸದ ತದಿಗೆ ಇಲ್ಲವೆ ತೃತೀಯಾವು ಗೌರಿಯ ಹಬ್ಬವಾದರೆ ಭಾದ್ರಪದ ಮಾಸದ ಚೌತಿ ಅಥವಾ ಚತುರ್ಥಿಯು ಗಣೇಶನ ಹಬ್ಬ.ಈ ಎರಡು ಹಬ್ಬಗಳು ಜೊತೆಯಾಗಿಯೇ ಬರುವುದರಿಂದ ಗೌರಿಗಣೇಶ ಹಬ್ಬವು ಜೋಡಿಹಬ್ಬ ಎಂದುಕೂಡ ಕರೆಯಿಸಿಕೊಳ್ಳುತ್ತದೆ.ಜನಪದರ ನಂಬಿಕೆಯಂತೆ ಗೌರಿಯು ಭಾದ್ರಪದ ಮಾಸದ ತದಿಗೆಯಂದು ತನ್ನ ತವರೂರಾದ ಭೂಲೋಕಕ್ಕೆ ಬರುತ್ತಾಳೆ; ಚೌತಿಯಂದು ಗೌರಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಗಣಪತಿಯು ಬರುತ್ತಾನೆ.ಚೌತಿಯ ದಿನದಂದು ತವರೂರವರು ಗೌರಿ ಗಣೇಶರನ್ನು ಕೈಲಾಸಕ್ಕೆ ಬೀಳ್ಕೊಡುತ್ತಾರೆ.ಇದು ಜನಪದರ ವೈವಾಹಿಕ ಬಾಂಧವ್ಯಗಳನ್ನು ಸಂಕೇತಿಸುತ್ತದೆ.ಹಿಂದೆ ಮದುವೆಯಾದ ಹೆಣ್ಣನ್ನು ಕರೆಯಲು ಗಂಡನ ಮನೆಯಿಂದ ಗಂಡನೋ ಮತ್ತಾರೋ ಕರೆಯಲು ಬರುತ್ತಿದ್ದರು.ಹಾಗೆಯೇ ಹಬ್ಬ ಉತ್ಸವಾದಿಗಳ ದಿನಗಳಲ್ಲಿ ತವರು ಮನೆಯವರು ಮಗಳನ್ನು ಕರೆಯಲು ಆಕೆಯ ಗಂಡನ ಮನೆಗೆ ಬರುತ್ತಿದ್ದರು.ತವರು ಮನೆಯವರು ಗಂಡನ ಮನೆಗೆ ಬರುವುದು,ಗಂಡನ ಮನೆಯವರು ತವರು ಮನೆಗೆ ಬರುವುದು –ಈ ಎರಡನ್ನು ಸಂಭ್ರಮದಿಂದ ಹಬ್ಬದಂತೆ ಆಚರಿಸುತ್ತಿದ್ದರು.ಈಗ ನಾಗರಿಕ ಪ್ರಪಂಚದಲ್ಲಿ ಇಂತಹ ಸಾಮಾಜಿಕ,ಸಾಂಸ್ಕೃತಿಕ ಅರ್ಥವನ್ನು ಹೊರಹೊಮ್ಮಿಸುವ ಹಬ್ಬಗಳು ತಮ್ಮ ಅರ್ಥ ಮತ್ತು ಮಹತ್ವವನ್ನು ಕಳೆದುಕೊಳ್ಳುತ್ತಿವೆ.

ಭಾದ್ರಪದ ಮಾಸದ ಚತುರ್ಥಿಯನ್ನು ಗಣೇಶನ ಹುಟ್ಟುಹಬ್ಬವನ್ನಾಗಿಯೂ ಆಚರಿಸಲಾಗುತ್ತಿದೆ.ಅಂದು ಮಧ್ಯಾಹ್ನ ಎರಡು ಘಂಟೆಯ ಸಮಯಕ್ಕೆ ಗಣೇಶನ ಜನನವಾಗುತ್ತದೆ ಪುರಾಣಗಳಂತೆ.ಪಾರ್ವತಿಯು ಏಕಾಂಕಿತನದ ಬೇಸರವನ್ನು ಕಳೆಯಲು ತನ್ನ ಬೆನ್ನಿನ ಮಣ್ಣಿನಿಂದ ಗಣಪತಿಯನ್ನು ಹುಟ್ಟಿಸುತ್ತಾಳೆ.ತಾನು ಸ್ನಾನಕ್ಕೆ ಹೋಗುವುದಾಗಿಯೂ ಯಾರನ್ನು ಒಳಬಿಡದಂತೆ ಆಜ್ಞಾಪಿಸಿ ಪುಟ್ಟ ಕುವರನ ಕೈಯಲ್ಲಿ ಒಂದು ಸಣ್ಣ ಕೋಲನ್ನಿತ್ತು ಸ್ನಾನಕ್ಕೆ ಹೋಗುತ್ತಾಳೆ ಜಗನ್ಮಾತೆ ಪಾರ್ವತಿ. ತಾಯಿಯ ಆಜ್ಞೆಯಂತೆ ಹೊಸ್ತಿಲಲ್ಲಿ ನಿಂತಿದ್ದ ಗಣಪತಿಯು ಶಿವನನ್ನೇ ಒಳಬಿಡದೆ ಶಿವನೊಂದಿಗೆ ವಾದಿಸಿ,ಹೋರಾಡಿ ಶಿವನ ಕೋಪಕ್ಕೆ ತುತ್ತಾಗಿ ಪಾರ್ವತಿಪತಿಯ ಎಡಗೈಯ ಕಿರುಬೆರಳ ಪ್ರಹಾರಕ್ಕೆ ಸಿಕ್ಕು ಅಸುನೀಗುತ್ತಾನೆ.ಸಿಟ್ಟಿಗೆದ್ದ ಪಾರ್ವತಿಯು ರೌದ್ರಾವತಾರ ತಾಳಲು ಬ್ರಹ್ಮ,ವಿಷ್ಣು ಮತ್ತು ಇಂದ್ರಾದಿ ದೇವತೆಗಳ ಮೊರೆಯಂತೆ ಶಿವನು ಕುಮಾರನನ್ನು ಬದುಕಿಸಿ ಗಜಮುಖನನ್ನಾಗಿಸುವುದಲ್ಲದೆ ಅವನನ್ನು ಎಲ್ಲ ದೇವತೆಗಳಿಗೂ ಮಿಗಿಲಾದ ‘ ಪ್ರಥಮಪೂಜಿತ’ ನಾಗುವ ವರವನ್ನಿತ್ತು ಅನುಗ್ರಹಿಸುತ್ತಾನೆ.ಬ್ರಹ್ಮ ವಿಷ್ಣು ಮೊದಲ್ಗೊಂಡು ಎಲ್ಲ ದೇವತೆಗಳು ಗಷಪತಿಗೆ ಒಂದೊಂದು ವರವನ್ನಿತ್ತು ಗಣಪತಿಯ ಮಹಿಮಾಧಿಕ್ಯವನ್ನು ಪ್ರತಿಷ್ಠಾಪಿಸುತ್ತಾರೆ.ಗಣಪತಿಯ ಹುಟ್ಟಿನ ಪ್ರಸಂಗವೂ ಮಹತ್ವದ ಅರ್ಥ ಒಂದನ್ನು ಸಾರುತ್ತಿದೆ.

ಗಣಪತಿಯು ಬಾಲಕನಾದುದರಿಂದ ಮತ್ತು ಹುಟ್ಟಿನಿಂದ ಅವನು ತಾಯಿಯ ಮುಖವನ್ನು ಮಾತ್ರಕಂಡಿದ್ದರಿಂದ ಶಿವನನ್ನು ತಂದೆ ಎಂದು ಗುರುತಿಸದೆ ಅವನನ್ನು ಒಳಬಿಡದೆ ತಡೆದಿರಬಹುದು.ಆದರೆ ಸರ್ವಜ್ಞನಾದ ಶಿವನಿಗೆ ಇದು ಗೊತ್ತಿರಲಿಲ್ಲವೆ ? ಶಿವನು ಗಣಪತಿಯನ್ನು ಕೊಂದದ್ದು ಎಷ್ಟು ಸರಿ ಎಂದು ವಾದಿಸುವವರಿದ್ದಾರೆ.ಶಿವನು ಗಣಪತಿಯನ್ನು ಕೊಂದ ಪ್ರಸಂಗದಲ್ಲಿ ಎರಡು ಸಂದೇಶಗಳಿವೆ ಶಿವನೊಬ್ಬನೇ ನಿಗ್ರಹಾನುಗ್ರಹ ಸಮರ್ಥನಿರುವ ಪರಮೇಶ್ವರನು ಎನ್ನುವುದು ಒಂದು ಸಂದೇಶವಾದರೆ ತಾನು ಸಂಕಲ್ಪಿಸಿ ಸೃಷ್ಟಿಸಿದ ಪ್ರಪಂಚ ವ್ಯವಹಾರದಲ್ಲಿ ತನ್ನ ವಿಶ್ವನಿಯತಿಗೆ ಧಕ್ಕೆ ಬರುವುದನ್ನು ಸಹಿಸಲಾರ ಎನ್ನುವುದು ಎರಡನೆಯ ಸಂದೇಶ.ಪಾರ್ವತಿಯು ತನ್ನ ಹೆಂಡತಿಯೇ ಆದರೂ ಅವಳು ಕುಮಾರನನ್ನು ಸೃಷ್ಟಿಸಿದ್ದು ಶಿವನಿಗೆ ಒಪ್ಪಿಗೆಯಾಗಲಿಲ್ಲ.ಪರಶಿವನಾದ ತಾನು ತನ್ನ ನಿಯತಿನಿಯಮದಂತೆ ಬ್ರಹ್ಮನಿಗೆ ಸೃಷ್ಟಿಯ ಅಧಿಕಾರವನ್ನು,ವಿಷ್ಣುವಿಗೆ ಸ್ಥಿತಿಯ ಅಧಿಕಾರವನ್ನು ಮತ್ತು ರುದ್ರನಿಗೆ ಪ್ರಪಂಚ ಪ್ರಳಯದ ಅಧಿಕಾರವನ್ನು ಅನುಗ್ರಹಿಸಿ ಆ ಮೂವರನ್ನು ತನ್ನ ವಿಭೂತಿಗಳು ಎಂದು ಕರೆದಿದ್ದಾನೆ.ಪರಶಿವನ ವಿಶ್ವನಿಯಂತೆ ಸೃಷ್ಟಿಯ ಕಾರ್ಯ ಬ್ರಹ್ಮನದು ಮಾತ್ರ.ಅದರಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ.ಆದರೆ ಪಾರ್ವತಿಯು ತನ್ನ ಅರ್ಧಾಂಗಿನಿಯೇ ಆದರೂ ತನ್ನ ಬೆನ್ನ ಮಣ್ಣಿನಿಂದ ಕುಮಾರನನ್ನು ಹುಟ್ಟಿಸಿದ್ದು ಸೃಷ್ಟಿಕಾರ್ಯದಲ್ಲಿ ಹಸ್ತಕ್ಷೇಪ ಮಾಡಿದಂತೆಯೇ ! ಇದು ಶಿವನ ಸಿಟ್ಟಿನ,ಪಾರ್ವತಿನಂದನನ ಸಾವಿನ ಕಾರಣ.ಇದು ಪರಶಿವನು ತನ್ನ ನಿಯತಿನಿಯಮ ಉಲ್ಲಂಘಿಸಿದ ಯಾರನ್ನೂ ಸಹಿಸಲಾರೆ ಎನ್ನುವ ಸಂದೇಶಸಾರಿದ ತನ್ನ ನಿಯತಿನಿಷ್ಠೆ ಮೆರೆದ ಲೀಲಾಪ್ರಸಂಗವು.ಶಿವನೊಬ್ಬನೇ ಪರಮೇಶ್ವರನು,ಏಕಮೇವಾದ್ವಿತೀಯ ಪರಬ್ರಹ್ಮನು ಎನ್ನುವುದರತ್ತ ಗಮನಸೆಳೆಯುವ ಪ್ರಸಂಗವು.

ಬುದ್ಧಿಜೀವಿಗಳು ಎಂದು ಸ್ವಯಂ ಘೋಷಿಸಿಕೊಂಡವರು ಗಣಪತಿಯ ಹುಟ್ಟನ್ನು ಪ್ರಶ್ನಿಸುವುದುಂಟು.ಗಣಪತಿಯು ಪಾರ್ವತಿಯ ಬೆನ್ನಿನ ಮಣ್ಣಿನಿಂದ ಹುಟ್ಟಬೇಕಾದರೆ ಪಾರ್ವತಿಯ ಮೈಯಲ್ಲಿ ಅದೆಷ್ಟು ಮಣ್ಣು ಇತ್ತು? ಅದೆಷ್ಟು ವರ್ಷಗಳಿಂದ ಪಾರ್ವತಿಯು ಸ್ನಾನ ಮಾಡದೆ ಇದ್ದಳು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ ಸ್ವಯಂಘೋಷಿತ ಬುದ್ಧಿಜೀವಿಗಳು.ಗಣಪತಿಯ ಜನನದಲ್ಲಿ ತಾತ್ತ್ವಿಕ ಅರ್ಥ ಕಾಣಬೇಕೇ ಹೊರತು ವೈಚಾರಿಕ ನೆಲೆಯಲ್ಲಿ ಅದನ್ನು ಅರ್ಥೈಸಲಾಗದು.ಪಾರ್ವತಿಯು ಸ್ವಯಂ ಪರಬ್ರಹ್ಮೆಯು,ಪರಾಶಕ್ತಿಯು. ಮಣ್ಣಿನ ಒಂದು ಕಣದಿಂದ ಅವಳು ತನ್ನ ಕುವರನನ್ನು ಹುಟ್ಟಿಸಿದ್ದಾಳೆ.ಪ್ರಪಂಚದಲ್ಲಿ ಜನನಕ್ರಿಯೆಯನ್ನು ಪರಿಶೀಲಿಸಿದರೆ ಇದರ ರಹಸ್ಯ ಮನದಟ್ಟಾಗುತ್ತದೆ.ಮದುವೆಯಾದ ಸತಿಪತಿಗಳು ವರ್ಷಾನುಗಟ್ಟಲೆ ಸಂಸಾರಸುಖವನ್ನು ಅನುಭವಿಸಿದರೂ ಗರ್ಭಧಾರಣೆಗೆ ಒಂದು ಹನಿ ವೀರ್ಯವೇ ಕಾರಣವಾಗುತ್ತದೆ.ಒಂದು ಹನಿವೀರ್ಯದಲ್ಲಿ ಹುಟ್ಟಲಿರುವ ಪುರುಷ ಅಥವಾ ಸ್ತ್ರೀಯ ಇಡೀ ವ್ಯಕ್ತಿತ್ವವೇ ಅಡಗಿದೆ ಎನ್ನುವುದನ್ನು ಆರೈದು ನೋಡಿದರೆ ಗಣಪತಿಯು ಕೇವಲ ಒಂದು ಮಣ್ಣಿನ ಕಣದಿಂದ ಹುಟ್ಟಿದ ಸೃಷ್ಟಿರಹಸ್ಯವನ್ನು ಭೇದಿಸಬಹುದು.

ಗಣಪತಿಯ ಹಬ್ಬವಾದ ಗಣೇಶ ಚತುರ್ಥಿ ಮತ್ತು ಗೌರಿ ಗಣೇಶ ಹಬ್ಬ ಈ ಎರಡು ಹಬ್ಬಗಳ ಆಚರಣೆಯಲ್ಲಿ ಕಥೆಗಿಂತ ತತ್ತ್ವ ಪ್ರಧಾನವಾಗಿದೆ.ಅನುಭವಕ್ಕಿಂತ ಅನುಭಾವದ ಸೊಗಡೇ ಹೆಚ್ಚಿದೆ.ಲೌಕಿಕಕ್ಕಿಂತ ಅಧ್ಯಾತ್ಮಿಕ ಅರ್ಥಕ್ಕೆ ಮಹತ್ವವಿದೆ.ಶಿವನು ಗೌರಿಪುತ್ರನನ್ನು ಕೊಲ್ಲುವ ಪ್ರಸಂಗದ ಅಧ್ಯಾತ್ಮಿಕ ಅರ್ಥವನ್ನು ಮೊದಲು ವಿಚಾರಿಸೋಣ.ಭಕ್ತನು ಪರಶಿವನ ಅನುಗ್ರಹವನ್ನು ಪಡೆಯಲು ಯೋಗಮಾರ್ಗದಲ್ಲಿ ಪಥಕ್ರಮಿಸುವನು.ಯೋಗಶಕ್ತಿಯು ಕುಂಡಲಿನೀಶಕ್ತಿಯ ರೂಪದಲ್ಲಿ ಮೂಲಾಧಾರ ಚಕ್ರದಲ್ಲಿ ಸುಪ್ತವಾಗಿದೆ.ಕುಂಡಲಿನಿ ಶಕ್ತಿಯು ಜಾಗ್ರತವಾಗದ ಹೊರತು ಯೋಗಸಿದ್ಧಿ ಲಭಿಸದು.ಯೋಗಸಾಧನೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿವಾರಿಸುವ ಭಗವದನುಗ್ರಹಪ್ರಸಂಗವೇ ಗೌರಿಪುತ್ರನ ಸಂಹಾರ ಕ್ರಿಯೆ.ಗಣಪತಿಯು ವಿಘ್ನಕಾರಕನು ಹೌದು,ವಿಘ್ನನಿವಾರಕನೂ ಹೌದು.ಭಕ್ತನಿಗೆ ಕಾಡುವ ಯೋಗಮಾಯೆ ಅಥವಾ ಅವಿದ್ಯೆಯು ವಿಘ್ನವಾಗಿದ್ದು ಅದನ್ನು ದಾಟಿಬಾರದ ಹೊರತು ಭಕ್ತನಿಗೆ ಪರಶಿವನ ಅನುಗ್ರಹವಾಗದು.ತನ್ನ ಭಕ್ತರ ಮೇಲಿನ ವಿಶೇಷ ಪ್ರೀತಿಯಿಂದ ಪರಶಿವನು ಸ್ವಯಂ ತಾನೇ ಕಾರ್ಯಪ್ರವೃತ್ತನಾಗಿ ಭಕ್ತನ ಯೋಗವಿಘ್ನನಿವಾರಿಸುತ್ತಾನೆ; ಅದುವೇ ವಿಘ್ನಕಾರಕನಾದ ಗಣಪತಿಯ ಸಂಹಾರ ಲೀಲೆ.ಪಾರ್ವತಿಯು ತನ್ನ ಮಗನನ್ನು ಹುಟ್ಟಿಸುವುದು ತನ್ನ ಬೆನ್ನಿನ ಮಣ್ಣಿನಿಂದ.ಯೋಗಶಕ್ತಿಕೇಂದ್ರಗಳಾದ ಷಟ್ಚಕ್ರಗಳಿರುವುದು ಬೆನ್ನಹುರಿಯಿಂದ ಶಿರೋಭಾಗದವರೆಗಿನ ಬೆನ್ನಿನಲ್ಲೆ.ಯೋಗವಿದ್ಯೆಗೆ ಬೆನ್ನುಮೂಲ,ಮುಖ್ಯ.ಪರಾಶಕ್ತಿಯಾದ ಗೌರಿಯು ಹುಟ್ಟಿಸಿದ್ದು ಯೋಗಸಂತಾನವನ್ನು,ಯೋಗಿಗಳ ಪ್ರಮುಖನನ್ನು,ಲೌಕಿಕ ಸಂತಾನವನ್ನಲ್ಲ.ವಿನಾಯಕನನ್ನು ‘ ಗಣಪತಿ’ ಎಂದು ಕರೆಯುವುದು ಆತ ಷಟ್ಚಕ್ರಗಳೆಂಬ ಯೋಗಕಣಗಳು ಇಲ್ಲವೆ ಗಣಗಳ ಒಡೆಯ ಎನ್ನುವ ಅರ್ಥದಲ್ಲಿ.ಷಟ್ಚಕ್ರಗಳಲ್ಲಿ ಪ್ರತಿಯೊಂದು ಚಕ್ರಕ್ಕೆ ನಿರ್ದಿಷ್ಟ ದಳ,ಬಣ್ಣ,ಆಕಾರ,ಅಧಿದೇವತೆಗಳಿದ್ದಾರೆ.ಆ ದೇವತೆಗಳು,ವರ್ಣ ಮತ್ತು ಶಕ್ತಿಗಳೇ ಗಣಗಳಾಗಿದ್ದು ಅವುಗಳಿಗೆ ಒಡೆಯನಾದುದರಿಂದ ಗೌರಿತನಯನು ಗಣಪತಿ ಇಲ್ಲವೆ ಗಣಗಳ ಒಡೆಯನು.ಗಣಪತಿಯ ಅನುಗ್ರಹದಿಂದ ಯೋಗಸಿದ್ಧಿಯನ್ನು ಪಡೆಯಬಹುದು.ಗಾಣಪತೇಯ ಯೋಗದಂತೆ ಗಣಪತಿಯು ಮೂಲಾಧಾರ ಚಕ್ರದಲ್ಲಿ ಸ್ಥಿತನಿರುವ ಆದಿದೇವನು,ಪ್ರಥಮಪೂಜಿತನು.

ಇನ್ನು ಗಣಪತಿಯು ಗೌರಿಯನ್ನು ಕೈಲಾಸಕ್ಕೆ ಕರೆದೊಯ್ಯುವ ಹಬ್ಬದ ಅರ್ಥವನ್ನು ಒಂದಿಷ್ಟು ವಿಚಾರಿಸೋಣ.ಕುಂಡಲಿನೀಯೋಗದಲ್ಲಿ ಮೂಲಾಧಾರ ಚಕ್ರದಲ್ಲಿ ಊರ್ಧ್ವಮುಖವಾಗಿ ಮಲಗಿರುವ ಸರ್ಪಶಕ್ತಿಯನ್ನು ಯೋಗಿಯು ಜಾಗ್ರತಗೊಳಿಸಬೇಕಾಗುತ್ತದೆ.ಎಚ್ಚೆತ್ತ ಕುಂಡಲಿನಿ ಶಕ್ತಿಯು ಸ್ವಾಧಿಷ್ಟಾನ,ಮಣಿಪುರ,ಅನಾಹತ,ವಿಶುದ್ಧಿ,ಆಜ್ಞಾಚಕ್ರಗಳ ಮೂಲಕ ಕೊನೆಯದಾದ ಯೋಗಸಿದ್ಧಿಕೇಂದ್ರವಾದ ಸಹಸ್ರಾರವನ್ನು ತಲುಪಬೇಕು.ಇದು ಅತ್ಯಂತ ಕಠಿಣಕಾರ್ಯ.ಸಮರ್ಥಗುರುವಿನ ಅನುಗ್ರಹದಿಂದ ಮಾತ್ರಸಾಧ್ಯವಾಗುತ್ತದೆ ಕುಂಡಲಿನಿಭೇದನ,ಷಟ್ಚಕ್ರಗಳ ಆರೋಹಣ.ಪರಶಿವನ ಧಾಮವಾದ ಸಹಸ್ರಾರಚಕ್ರವನ್ನು ಸೇರಿದರೂ ಕುಂಡಲಿನಿಯು ಬಹುಹೊತ್ತು ಅಲ್ಲಿ ನೆಲೆ ನಿಲ್ಲದೆ ಮತ್ತೆ ಕೆಳಗಿಳಿದು ಮೂಲಾಧಾರಚಕ್ರಕ್ಕೆ ಬರುತ್ತದೆ.ಬಾರಿ ಬಾರಿ ಹೀಗೆ ಕೆಳಗಿಳಿದು ಮೂಲಾಧಾರ ಚಕ್ರವನ್ನು ಸೇರುವ ಕುಂಡಲಿನಿಶಕ್ತಿಯನ್ನು ಯೋಗಿಯು ದೀರ್ಘಕಾಲದವರೆಗೆ ಸಹಸ್ರಾರಚಕ್ರದಲ್ಲಿ ನೆಲೆನಿಲ್ಲುವಂತೆ ಮಾಡಬೇಕಾಗುತ್ತದೆ.ಹೆಣ್ಣಿಗೆ ಗಂಡನಿಗಿಂತ ಮಕ್ಕಳಲ್ಲಿ ಹೆಚ್ಚು ಮಮತೆ,ವಾತ್ಸಲ್ಯವಿರುತ್ತದೆ.ಸಹಸ್ರಾರವು ಕೈಲಾಸವಾಗಿದ್ದು ಮೂಲಾಧಾರಚಕ್ರವು ಭೂಲೋಕವಾಗಿದೆ.ಗೌರಿಗೆ ಗಂಡನಮನೆಯಾದ ಕೈಲಾಸಕ್ಕಿಂತ ತವರು ಮನೆಯಾದ ಭೂಲೋಕದಲ್ಲಿಯೇ ಹೆಚ್ಚು ಪ್ರೀತಿ,ಆಸಕ್ತಿ,ಅಭಿಮಾನಗಳು.ಮಕ್ಕಳಾದಾಗ ಹೆಣ್ಣಿಗೆ ತವರು ಮನೆಯ ವ್ಯಾಮೋಹ ಕಡಿಮೆಯಾಗುತ್ತದೆ.ಗೌರಿಗೆ ಈಗ ಗಣೇಶನೆಂಬ ಮಗನು ಹುಟ್ಟಿದ್ದಾನೆ.ಆತನೇ ಗೌರಿಯನ್ನು ಕೈಲಾಸಕ್ಕೆ ಕರೆದೊಯ್ಯಲು ಬಂದಿದ್ದಾನೆ.ಮಗನ ವ್ಯಾಮೋಹದ ಕಾರಣದಿಂದ ಕೈಲಾಸಕ್ಕೆ ತೆರಳುವ ಗೌರಿಯು ಕೈಲಾಸದಲ್ಲಿ ದೀರ್ಘಕಾಲ ನೆಲೆ ನಿಲ್ಲುತ್ತಾಳೆ.ಗಣಪತಿಯ ಅನುಗ್ರಹದಿಂದ ಯೋಗಿಯು ಕುಂಡಲಿನೀಶಕ್ತಿಯನ್ನು ಸಹಸ್ರಾರ ಚಕ್ರದಲ್ಲಿ ದೀರ್ಘಕಾಲದಲ್ಲಿ ನಿಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಿ ಸಹಸ್ರದಳ ಕಮಲಮಧ್ಯದಲ್ಲಿರ್ಪ ಪರಶಿವನನ್ನು ಕಾಣಲು ಸಮರ್ಥನಾಗುತ್ತಾನೆ.ಶಿಷ್ಯನಿಗೆ ಗುರುವೇ ಯೋಗವಿದ್ಯೆಯನ್ನರುಹಿ,ಯೋಗವಿಘ್ನಗಳನ್ನು ನಿವಾರಿಸಿ ಪರಶಿವನ ದರ್ಶನ ಮಾಡಿಸುತ್ತಾನೆ.ಶಿವಶಕ್ತಿ ಸಂಗಮದ ಯೋಗವಿದ್ಯೆಗೆ ಗಣಪತಿಯೇ ಆದಿಗುರುವು,ಮೂಲಪುರುಷನು.ಇದುವೇ ಗಣಪತಿಯು ತನ್ನ ತಾಯಿ ಗೌರಿಯನ್ನು ಕೈಲಾಸಕ್ಕೆ ಕರೆದೊಯ್ಯಲು ಬರುವ ಗೌರಿಗಣೇಶ ಹಬ್ಬದ ರಹಸ್ಯವು.ಗೌರಿಗಣೇಶ ಹಬ್ಬವೆಂದರೆ ಕುಂಡಲಿನಿಯೋಗ ಸಾಧನೆಯೆ !

೦೭.೦೯.೨೦೨೪

About The Author