ಬೀದರ : ಭಾರತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಿಶೇಷ ಹಾಗೂ ಮಹತ್ವದ ಸ್ಥಾನವಿದೆ.ಮಹಾತ್ಮಗಾಂಧಿಯವರ ಆಶಯದಂತೆ ಗ್ರಾಮಸ್ವರಾಜ್ ನಿರ್ಮಾಣವಾಗಬೇಕಾದರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕಾಗುತ್ತದೆ.ಗಾಂಧೀಜಿಯವರು ‘ ಭಾರತವು ಗ್ರಾಮಗಳಲ್ಲಿದೆ’ ಎನ್ನುತ್ತಿದ್ದರು. ಗಾಂಧೀಜಿಯವರ ಆಶಯವನ್ನು ನಮ್ಮ ಸಂವಿಧಾನದ ರಾಜನಿರ್ದೇಶಕ ತತ್ತ್ವಗಳಲ್ಲಿ ಅಡಕಗೊಳಿಸಿದ್ದು ಸಂವಿಧಾನದ 73ನೆಯ ತಿದ್ದುಪಡಿಯಂತೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪರಮಾಧಿಕಾರ ನೀಡಲಾಗಿದೆ’. ಎಂದು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ದಿಲೀಪ್ ಬದೋಲೆಯವರು ಅಭಿಪ್ರಾಯಿಸಿದರು.ಅವರಿಂದು ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ,ಮಾತನಾಡುತ್ತಿದ್ದರು.
ತಮ್ಮ ಮಾತುಗಳನ್ನು ಮುಂದುವರೆಸಿದ ದಿಲೀಪ್ ಬದೋಲೆಯವರು’ ನಮ್ಮ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳು ಪಂಚಾಯತ್ ರಾಜ್ ಮತ್ತು ನಗರಸ್ಥಳೀಯ ಸಂಸ್ಥೆಗಳಿಗೆ ಬಲತುಂಬಿದ್ದು 73 ನೇ ತಿದ್ದುಪಡಿಯಂತೆ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಿದ್ದು ಪ್ರತಿಹಂತದ ಪಂಚಾಯತ್ ರಾಜ್ ಸಂಸ್ಥೆಗೆ ಅದರದ್ದೆ ಆದ ಜವಾಬ್ದಾರಿ ನಕ್ಷೆಯನ್ನು ನೀಡಲಾಗಿದೆ. ಗ್ರಾಮಪಂಚಾಯತಿಗಳು ತಳಮಟ್ಟದ ಗ್ರಾಮರಾಜ್ ಸಂಸ್ಥೆಗಳಾಗಿದ್ದರೆ ತಾಲೂಕಾ ಪಂಚಾಯತಿಗಳು ಗ್ರಾಮ ಪಂಚಾಯತಿಗಳೊಂದಿಗೆ ಸಮನ್ವಯಕಾರ್ಯ ನಿರ್ವಹಿಸಿದರೆ ಜಿಲ್ಲಾ ಪಂಚಾಯತಿಗಳು ಗ್ರಾಮಪಂಚಾಯತಿಗಳು ಮತ್ತು ತಾಲೂಕಾ ಪಂಚಾಯತಿಗಳಿಗೆ ಅಗತ್ಯ ಮಾರ್ಗದರ್ಶನ, ನಿರ್ದೇಶನ ಮಾಡುವ ಕಾರ್ಯ ಮಾಡುತ್ತಿವೆ’
‘ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಗ್ರಾಮ ಪಂಚಾಯತಿಗಳು ಅತಿಮಹತ್ವದ ಪಾತ್ರವಹಿಸುವ ಸ್ಥಳೀಯ ಗ್ರಾಮಸರ್ಕಾರಗಳಾಗಿದ್ದು ಗ್ರಾಮಸಭೆಗೆ ಸಾಂವಿಧಾನಿಕ ಮಾನ್ಯತೆ ಇದೆ.ಗ್ರಾಮಸಭೆಯು ಗ್ರಾಮದ ಸಂಸತ್ತು ಇದ್ದಂತೆ.ಗ್ರಾಮ ಪಂಚಾಯತಿಯ ಎಲ್ಲ ಕಾರ್ಯ,ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಗಳು ಗ್ರಾಮಸಭೆಯಲ್ಲಿ ಚರ್ಚಿಸಿ ಅನುಮೋದನೆಗೊಳ್ಳುತ್ತಿರುವುದರಿಂದ ಗ್ರಾಮದ ಧ್ವನಿ ಅಲ್ಲಿ ಕೇಳುತ್ತದೆ.ಗ್ರಾಮೀಣಪ್ರದೇಶದ ಜನತೆಯ ಆಶೋತ್ತರಗಳು ಗ್ರಾಮಸಭೆಯ ಮೂಲಕ ಅಭಿವ್ಯಕ್ತಿಗೊಂಡು ಯೋಜನೆಯ ರೂಪ ತಾಳುತ್ತವೆ.ಇಂತಹ ಮಹತ್ವದ ಪಾತ್ರವಹಿಸುವ ಗ್ರಾಮಸಭೆ ಮತ್ತು ಗ್ರಾಮ ಪಂಚಾಯತಿಗಳನ್ನು ಚುನಾಯಿತ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಸೇರಿ ಬಲಬಡಿಸಬೇಕಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಪಂಚಾಯತ್ ರಾಜ್ ವ್ಯವಸ್ಥೆಯೆಂಬ ರಥದ ಎರಡು ಚಕ್ರಗಳಿದ್ದಂತೆ, ಅವರಿಬ್ಬರು ಪರಸ್ಪರ ಪೂರಕವಾಗಿ ನಡೆಯಬೇಕು’ ಎಂದರು.
ತಮ್ಮ ಮಾತುಗಳನ್ನು ಮುಂದುವರೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೀದರ ಜಿಲ್ಲಾ ಪಂಚಾಯತಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಂಡವು ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಮೂಲಕ ಬೀದರ ಜಿಲ್ಲೆಯು ನರೆಗಾ,ವಸತಿ,ಎಸ್ ಬಿ ಎಮ್ ಮತ್ತು ತೆರಿಗೆ ವಸೂಲಾತಿಯಲ್ಲಿ ರಾಜ್ಯದ ಅಗ್ರಜಿಲ್ಲೆಗಳಲ್ಲಿ ಒಂದಾಗಿದ್ದು ಒಂದರಿಂದ ಐದನೇ ಸ್ಥಾನದಲ್ಲಿದೆ. ಇದೇ ರೀತಿ ಮುಂದುವರೆಯೋಣ ‘ ಎಂದು ಆಶಿಸಿ,ಪಂಚಾಯತ್ ರಾಜ್ ದಿನಾಚರಣೆಯ ಪ್ರಯುಕ್ತ ಕೇಕ್ ಕತ್ತರಿಸಿ ಜಿಪಂಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕೇಕ್ ನೀಡುವ ಮೂಲಕ ದಿನಾಚರಣೆಗೆ ಮೆರುಗು ನೀಡಿದರು.
ಪಿಡಿಒ ಸ್ವರೂಪಾರಾಣಿ ಮಾತನಾಡಿ ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮಸಭೆಗಳು,ವಾರ್ಡ್ ಸಭೆಗಳ ಮಹತ್ವವನ್ನು ಒತ್ತಿ ಹೇಳಿದರು.ಯೋಜನಾಶಾಖೆಯ ಸಹಾಯಕ ಸಾಂಖಿಕ ಅಧಿಕಾರಿ ರತಿಕಾಂತ ಮಾತನಾಡಿ ಪಂಚಾಯತ್ ರಾಜ್ ಸಂಸ್ಥೆಗಳು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಯೋಜನಾನಿರ್ದೇಶಕ ಜಗನ್ನಾಥ ಮೂರ್ತಿ ,ಪಿಆರ್ಇಡಿ ಮತ್ತು ಗ್ರಾಮೀಣಕುಡಿಯುವ ನೀರು ಯೋಜನೆಯ ಕಾರ್ಯಪಾಲಕ ಅಭಿಯಂತರರು ಗಳಾದ ಶಿವಾಜಿ ಡೋಣಿ,ರಾಮಲಿಂಗ ಬಿರಾದರ,ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ ಸೇರಿದಂತೆ ಜಿಪಂಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು. ಅಭಿವೃದ್ಧಿ ಶಾಖೆಯ ಅಧೀಕ್ಷಕ ಮಹ್ಮದ್ ಬಶೀರ್ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಶ್ಮೀರದ ಪಹಲ್ ಗಾಂವ್ ನಲ್ಲಿ ಉಗ್ರಗಾಮಿಗಳ ಗುಂಡೇಟಿಗೆ ಬಲಿಯಾಗಿ ಮೃತಪಟ್ಟವರ ಆತ್ಮಗಳಿಗೆ ಒಂದು ನಿಮಿಷ ಮೌನಾಚರಿಸುವ ಮೂಲಕ ಶಾಂತಿ ಕೋರಲಾಯಿತು.