ಬಡಭಕ್ತನ ಹತ್ತುರೂಪಾಯಿ ಕಾಣಿಕೆಯ ಮೌಲ್ಯ ಕಟ್ಟಲಾಗದು

ಸ್ವಗತ

ಬಡಭಕ್ತನ ಹತ್ತುರೂಪಾಯಿ ಕಾಣಿಕೆಯ ಮೌಲ್ಯ ಕಟ್ಟಲಾಗದು

‌ ಮುಕ್ಕಣ್ಣ ಕರಿಗಾರ

ನಮ್ಮ ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರಲ್ಲೊಬ್ಬರಾದ ಮಸೀದಪುರದ ಗೋಪಾಲ ಅವರ ಸಹೋದರ ರಂಗನಾಥ ಅವರ ಮಗ ಶ್ರೀನಿವಾಸನ ಮದುವೆ ಎಪ್ರಿಲ್ 18 ರ ಶುಕ್ರವಾರದಂದು ಮಸೀದಪುರದಲ್ಲಿ ನಡೆಯಿತು. ಮಸೀದಪುರದ ಗೋಪಾಲ ನಮ್ಮ ಮಠದ ಮೂಲಕಾರ್ಯಕರ್ತರಲ್ಲೊಬ್ಬರಾಗಿದ್ದರಿಂದ ಮತ್ತು ಅವರ ಇಡೀ ಕುಟುಂಬ ನಮ್ಮ ಮಠಕ್ಕೆ ಅತ್ಯಂತ ನಿಷ್ಠೆ,ಶ್ರದ್ಧೆಗಳಿಂದ ನಡೆದುಕೊಳ್ಳುತ್ತಿರುವುದರಿಂದ ನಾನು ಅವರ ಕುಟುಂಬದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ.ಎಷ್ಟೇ ಕೆಲಸ ಕಾರ್ಯಗಳ ಒತ್ತಡ ಇದ್ದಾಗಲೂ ನಾನು ನಮ್ಮಮಠದ ನಿಷ್ಠಾವಂತ ಭಕ್ತರುಗಳ ಮನೆಗಳ ಮದುವೆ ಮತ್ತಿತರ ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವೆ.

ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳಾದ ಬಾಬುಗೌಡ ಯಾದವ , ಶಿವರಾಜ ಪವಾರ,ಅಳಿಯ ಅನಿಲಕುಮಾರ್ ಮತ್ತು ಸದಾ ನನಗೆ ಅಂಟಿಕೊಂಡೇ ಇರುವ ಪುಟ್ಟ ಪುತ್ರಿಯರಾದ ವಿಂಧ್ಯಾ ಮತ್ತು ನಿತ್ಯಾರನ್ನು ಕರೆದುಕೊಂಡು ಬೆಳಿಗ್ಗೆ ಮಸೀದಪುರಕ್ಕೆ ಹೋಗಿದ್ದೆ.ಮಸೀದಪುರ ಗ್ರಾಮವು ನಮ್ಮೂರು ಗಬ್ಬೂರಿಗೆ ಐದುಕಿಲೋಮೀಟರ್ ದೂರದಲ್ಲಿರುವ ಊರು.ಆ ಗ್ರಾಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ ನನ್ನ ಭಕ್ತರುಗಳು,ಅನುಯಾಯಿಗಳು. ನಾನು ಬರುವ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನನ್ನ ದರ್ಶನಕ್ಕಾಗಿ ಕಾಯ್ದಿದ್ದರು. ನವದಂತಿಗಳಿಗೆ ಅಕ್ಷತೆ ಹಾಕಿ ಆಶೀರ್ವದಿಸುವ ಮುಂಚೆ ಭಕ್ತರ ನಮಸ್ಕಾರ,ಕಾಣಿಕೆಗಳನ್ನು ಸ್ವೀಕರಿಸಿಯೇ ಹೋಗುವ ಅನಿವಾರ್ಯತೆ!

ಹಲವಾರು ಜನ ಭಕ್ತಿಯಿಂದ ನಮಸ್ಕರಿಸಿ ಅವರವರ ಶಕ್ತ್ಯಾನುಸಾರ ಗುರುಕಾಣಿಕೆ ಸಮರ್ಪಿಸುತ್ತಿದ್ದರು.ವಿಶ್ವೇಶ್ವರ ಶಿವನ‌ಪ್ರತಿನಿಧಿಯಾಗಿರುವ ನನ್ನಲ್ಲಿ ಭಕ್ತ ಜನರು ಶಿವನನ್ನೇ ಕಾಣುತ್ತಾರೆ.ಹಾಗಾಗಿ ಶಿವನಿಗೆ ಸಲ್ಲಿಸುವಂತೆ ನನಗೆ ಭಕ್ತಿಯಿಂದ ಪೂಜೆ,ಸೇವೆಗಳನ್ನು ಸಲ್ಲಿಸುತ್ತಾರೆ.ವೈಯಕ್ತಿಕವಾಗಿ ವ್ಯಕ್ತಿಪೂಜೆಯ ವಿರೋಧಿಯಾಗಿರುವ ನಾನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾಗಿ ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕಿರುವುದರಿಂದ ಭಕ್ತರಿಂದ ನಮಸ್ಕಾರಸ್ವೀಕರಿಸುತ್ತೇನೆ.ಹಣೆಮಣಿದು ನಮಸ್ಕರಿಸುವ ಭಕ್ತರಿಗೆ ‘ಶಿವಾರ್ಪಣಮಸ್ತು’ ಎಂದು ಶಿವಾನುಗ್ರಹವನ್ನು ಕರುಣಿಸುತ್ತೇನೆ.

‌ಮಸೀದಪುರದ ಗ್ರಾಮಸ್ಥರಲ್ಲಿ ಒಬ್ಬ ಭಕ್ತ,ಪಾದಗಳಿಗೆ ನಮಸ್ಕರಿಸಿಯಾದ ಬಳಿಕ ಹತ್ತುರೂಪಾಯಿಗಳ ಕಾಣಿಕೆ ಸಲ್ಲಿಸಿದ ನನಗೆ.ನಮ್ಮ ಮಹಾಶೈವ ಧರ್ಮಪೀಠದ ಭಕ್ತರು, ಗ್ರಾಮಸ್ಥರುಗಳು ‘ಏಯ್’ ‘ಏಯ್ ‘ಎಂದು ಆತನನ್ನು ತಡೆಯಲು ಯತ್ನಿಸಿದರು, ಅತ್ತ ಸರಿಸಲು ಪ್ರಯತ್ನಿಸಿದರು ಹತ್ತುರೂಪಾಯಿ ಕಾಣಿಕೆ ಆಗಿದ್ದರಿಂದ ಅವರಿಗೆ ಅದು ಕಡಿಮೆ ಮೊತ್ತ ಎಂದು ಕಂಡಿರಬೇಕು. ನಾನು ಆತನನ್ನು ಬಳಿ ಕರೆದು ಆತನಿತ್ತ ಹತ್ತುರೂಪಾಯಿಗಳ ಕಾಣಿಕೆಯನ್ನು ಸಂತೋಷದಿಂದ ಸ್ವೀಕರಿಸಿದೆ.ನನಗೆ‌ ಲಕ್ಷಾಂತರ ರೂಪಾಯಿಗಳ‌ ಕಾಣಿಕೆ ಕೊಡುವ ಭಕ್ತರಿದ್ದಾರೆ.ನಾನು ಕೇಳಿದರೆ ಹೊಲ ಮನೆ ಆಸ್ತಿ ಮೊದಲಾದ ದೇಣಿಗೆ ಕಾಣಿಕೆ ಸಮರ್ಪಿಸುವ ಸಾಕಷ್ಟು ಸಂಖ್ಯೆಯ ಭಕ್ತರುಗಳಿದ್ದಾರೆ.ಶ್ರೀಮಂತ ಭಕ್ತರುಗಳು ಹತ್ತುಸಾವಿರ,ಲಕ್ಷಗಳ ಕಾಣಿಕೆ ಕೊಡಬಹುದು.ಆದರೆ ಬಡಭಕ್ತರಿಂದ ಅದನ್ನು ನಿರೀಕ್ಷಿಸಲಾದೀತೆ? ಬಡವರ ಭಕ್ತಿಯನ್ನು ಹಣದಿಂದ ಅಳೆಯಲಾಗದು.ಹಣವಲ್ಲ ಬಡವರ ಮನಸ್ಸಿನ ಪರಿಶುದ್ಧತೆ ಮುಖ್ಯ.ಶ್ರೀಮಂತರಿಗೆ ಹತ್ತುಸಾವಿರ,ಲಕ್ಷಗಳ ಕಾಣಿಕೆ ಕೊಡುವುದು ದೊಡ್ಡಸಂಗತಿಯಲ್ಲ.ಅವರೇನು ಮೈಬೆವರು ಸುರಿಸಿ ಆ ಹಣ ಸಂಪಾದಿಸಿರುವುದಿಲ್ಲ.ಅಲ್ಲದೆ ಇಷ್ಟು ಹಣಕೊಟ್ಟೆ ಎಂದು ಕೊಚ್ಚಿಕೊಳ್ಳುವ ಪ್ರತಿಷ್ಠಾಪ್ರಿಯತೆಯು ಅವರದ್ದಾಗಿರುತ್ತದೆ.ಆದರೆ ಈ ಬಡವ ಕೊಟ್ಟಿದ್ದು ಆತನ ಪರಿಶ್ರಮದ ಸಂಪಾದನೆಯ ಫಲವಾಗಿದ್ದರಿಂದ ಅದು ನನಗೆ ಅತ್ಯಂತ ಪ್ರೀತಿಯಕಾಣಿಕೆಯಾಗಿತ್ತು,ಶಿವನಿಗೆ ಸಲ್ಲುವ ಕಾಣಿಕೆಯಾಗಿತ್ತು.ಪ್ರೀತಿಯಿಂದ ಸ್ವೀಕರಿಸಿದೆ ನಾನು ಬಡಭಕ್ತನ ಹತ್ತುರೂಪಾಯಿಗಳ ಕಾಣಿಕೆಯನ್ನು.

ನಮ್ಮ ಮಹಾಶೈವ ಧರ್ಮಪೀಠ ಬೆಳೆದದ್ದೇ ಇಂತಹ ಬಡಭಕ್ತರುಗಳಿಂದ.ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರನಾಥ ವಿಶ್ವೇಶ್ವರ ಶಿವನು ಬಡವರ ಶಿವ,ದೀನ ದುರ್ಬಲರ ಶಿವ.ನಮ್ಮ ಮಠಕ್ಕೆ ನಡೆದುಕೊಳ್ಳುವ ಭಕ್ತರಲ್ಲಿ ಬಹುಪಾಲು ಜನ ಬಡವರು.ಹನ್ನೆರಡು ಹದಿಮೂರು ವರ್ಷಗಳ ಕಡಿಮೆ ಅವಧಿಯಲ್ಲಿ ಮಹಾಶೈವ ಧರ್ಮಪೀಠವು ನಾಡಿನ ಹೆಸರಾಂತ ಜಾಗೃತ ಶಕ್ತಿಕೇಂದ್ರವಾಗಿ ಬೆಳೆದಿದೆ.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬರುವ ಭಕ್ತರ ಸಂಖ್ಯೆಯು ಸಾಕಷ್ಟು ದೊಡ್ಡದಿದೆ.ರಾಜ್ಯದ ಉದ್ದಗಲದಿಂದಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ನಮ್ಮ ಮಠಕ್ಕೆ ಬರುತ್ತಿದ್ದಾರೆ. ನಾನು ಪೀಠಾಧ್ಯಕ್ಷನಾಗಿ ಹನ್ನೆರಡು ವರ್ಷಗಳಾದರೂ ಜನರನ್ನು ನೋಡುವ ‘ ಶಿವೋಪಶಮನ ಕಾರ್ಯ’ ಪ್ರಾರಂಭಿಸಿದ್ದು ಎರಡುವರ್ಷಗಳ ಹಿಂದಷ್ಟೆ.ಈ ಅತ್ಯಲ್ಪ ಅವಧಿಯಲ್ಲೇ ನಾಡಿನುದ್ದಗಲದಿಂದ ಜನರು ಮಹಾಶೈವ ಧರ್ಮಪೀಠದತ್ತ ಹರಿದು ಬರುತ್ತಿರಲು‌ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನ‌ ಲೋಕಾನುಗ್ರಹ ಗುಣವೇ ಕಾರಣ.ತನ್ನ ಸನ್ನಿಧಿಯನ್ನಾಶ್ರಯಿಸಿ ಬರುವ ಭಕ್ತರ ಸರ್ವಮನೋಕಾಮನೆಗಳನ್ನು ಪೂರೈಸುತ್ತಿರುವುದರಿಂದ ವಿಶ್ವೇಶ್ವರ ಶಿವನು ‘ ಮಾತನಾಡುವ ಮಹಾದೇವ’ ಎಂದು ‌ಪ್ರಸಿದ್ಧನಾಗಿದ್ದಾನೆ.

‌ಮಹಾಶೈವ ಧರ್ಮಪೀಠದ ನಿರ್ಮಾಣ ,ಇಲ್ಲಿ ನಡೆಯುತ್ತಿರುವ ಎಲ್ಲ ಕಾರ್ಯ,ಕಾರ್ಯಕ್ರಮಗಳ ಹಿಂದೆ ಭಕ್ತರೇ ಇದ್ದಾರೆ.ಭಕ್ತರಿಂದಲೇ ಬೆಳೆಯುತ್ತಿದೆ ನಮ್ಮ ಮಠ.ನಾವು ಇತರ ಮಠಗಳ ಸ್ವಾಮಿಗಳಂತೆ ರಾಜಕಾರಣಿಗಳನ್ನು ಆಶ್ರಯಿಸುವುದಿಲ್ಲ,ಸರಕಾರದ ಅನುದಾನದ ಹಂಗೂ ಬೇಡ ನಮಗೆ. ನಾವು ರಾಜಕಾರಣಿಗಳನ್ನು ಆಶೀರ್ವದಿಸುತ್ತೇವೆಯೇ ಹೊರತು ಅವರ ಮುಂದೆ ಹಣ- ಅನುದಾನಕ್ಕಾಗಿ ಅಂಗಲಾಚಿ ಬೇಡುವುದಿಲ್ಲ.ರಾಜಕಾರಣಿಗಳು ಕೊಡುವ ಹಣಕ್ಕಾಗಿ ಭಿಕ್ಷುಕರಂತೆ ಅಂಗಲಾಚುವ,ರಾಜಕಾರಣಿಗಳನ್ನು ದೇವಸ್ಥಾನ ಮಠ ಮಂದಿರಗಳಿಗೆ ಕರೆಸಿ ಸತ್ಕರಿಸಿ ಬೇಡುವ ‘ಭಿಕ್ಷುಕ ಮಠಾಧೀಶರುಗಳ’ ಬಗ್ಗೆ ನನ್ನಲ್ಲಿ ತಿರಸ್ಕಾರ ಮನೋಭಾವವಿದೆ.ಮಠ ಪೀಠಗಳು ಅಲ್ಲಿ ಕುಳಿತವರ ಆಧ್ಯಾತ್ಮಿಕ ಶಕ್ತಿ ಸಾಮರ್ಥ್ಯದಿಂದ ಬೆಳೆಯಬೇಕೇ ಹೊರತು ರಾಜಕಾರಣಿಗಳನ್ನು ಬೇಡಿ ಬೆಳೆಯಬಾರದು.ಆಧ್ಯಾತ್ಮಿಕಶಕ್ತಿ ಇಲ್ಲದವರಿಗೆ ರಾಜಕಾರಣಿಗಳೇ ದೊಡ್ಡವರು.ನಮ್ಮ‌ಮಹಾಶೈವ ಧರ್ಮಪೀಠದಲ್ಲಿ ರಾಜಕಾರಣಿಗಳು – ಅವರು ಯಾರೇ ಆಗಿರಲಿ– ಎಲ್ಲರಂತೆ ಸಾಮಾನ್ಯ ಭಕ್ತರೆ! ಲಕ್ಷಾಂತರ ಬಡಭಕ್ತರುಗಳೇ ನಮ್ಮ ಮಠದ ಆಸ್ತಿ,ಅವರೇ ಕಟ್ಟಿ ಬೆಳೆಸುತ್ತಿದ್ದಾರೆ ಮಹಾಶೈವ ಧರ್ಮಪೀಠವನ್ನು.ಮಸೀದಪುರದ ಬಡಭಕ್ತ ನೀಡಿದ ಹತ್ತು ರೂಪಾಯಿಗಳ ಕಾಣಿಕೆಯನ್ನು ವಿಶ್ವೇಶ್ವರನ ಕಾಣಿಕೆ ಪೆಟ್ಟಿಗೆಯಲ್ಲಿ ಸಮರ್ಪಿಸಿದೆ.ವಿಶ್ವೇಶ್ವರ ಶಿವನೂ ಈ ಕಾಣಿಕೆ ನನಗೆ ಸಲ್ಲಿತು ಎನ್ನುವಂತೆ ಸಂತೃಪ್ತಿಯ ನಗೆಬೀರಿದ.

೧೮.೦೪.೨೦೨೫