ಬಸವಣ್ಣನವರ ಶಿವದರ್ಶನ –೦೮ : ಅನವರತ ಶಿವಧ್ಯಾನ ಶಿವಪೂಜೆಯೊಳಿರುವ ಭಕ್ತನೇ ಶ್ರೇಷ್ಠನು

ಬಸವಣ್ಣನವರ ಶಿವದರ್ಶನ –೦೮ : ಅನವರತ ಶಿವಧ್ಯಾನ ಶಿವಪೂಜೆಯೊಳಿರುವ ಭಕ್ತನೇ ಶ್ರೇಷ್ಠನು 

ಮುಕ್ಕಣ್ಣ ಕರಿಗಾರ

ಹಸ್ತಕಡಗ ಕೈಗಧಿಕ,ನೋಡಾ ;
ಕೊಡಲಹುದು ಕೊಳ್ಳಲಹುದು.
ಬಾಹುಬಳೆ ತೋಳಿಂದಧಿಕ ನೋಡಾ ;
ಪರವಧುವನಪ್ಪಲಾಗದು.
ಕರ್ಣಕ್ಕೆ ರುದ್ರಾಕ್ಷಿ ಅಧಿಕ ನೋಡಾ ;
ಶಿವನಿಂದೆಯ ಕೇಳಲಾಗದು.
ಕಂಠಮಾಲೆ ಕೊರಳಿಂದಧಿಕ,ನೋಡಾ ;
ಅನ್ಯದೈವಕ್ಕೆ ತಲೆಬಾಗಲಾಗದು.
ಆವಾಗಳೂ ನಿಮ್ಮುವನೆ ನೆನೆದು,ನಿಮ್ಮುವನೇ ಪೂಜಿಸಿ,
ಕೂಡಲ ಸಂಗಯ್ಯನ ಪದಸನ್ನಿಹಿತವಾಗಿಪ್ಪಡೆ
ಲಿಂಗ ಶಿಖಾಮಣಿಯಯ್ಯಾ !

ರುದ್ರಾಕ್ಷಿ ಧರಿಸಿದವರನ್ನು ಸಾಕ್ಷಾತ್ ಶಿವನೆಂದೇ ನಂಬುವ ಬಸವಣ್ಣನವರು ರುದ್ರಾಕ್ಷಿ ಧರಿಸುವ ಶಿವಭಕ್ತರು ಹೇಗಿರಬೇಕು ಎನ್ನುವುದನ್ನು ಈ ವಚನದಲ್ಲಿ ನಿರೂಪಿಸಿದ್ದಾರೆ‌.ರುದ್ರಾಕ್ಷಿಯನ್ನು ದೇಹದ ವಿವಿಧ ಭಾಗದಲ್ಲಿ ಧರಿಸುವುದು ಜನರನ್ನು ಮೆಚ್ಚಿಸಲೆಂದೋ ಅಥವಾ ಡಂಬಾಚಾರಕ್ಕೆಂದೋ ಅಲ್ಲ,ಶಿವಗುಣಗಳನ್ನು ಅಳವಡಿಸಿಕೊಂಡು ಶಿವಸ್ವರೂಪರಾಗುವುದೇ ರುದ್ರಾಕ್ಷಿ ಧಾರಣೆಯ ಉದ್ದೇಶ.

ಮುಂಗೈಗಳಿಗೆ ರುದ್ರಾಕ್ಷಿಮಾಲೆಯನ್ನು ಧರಿಸಿದವರು ಸೂತಕ ಪಾತಕ ಮುಕ್ತರಾಗುವುದರಿಂದ ಅಂಥವರಲ್ಲಿ ಕುಲಗೋತ್ರಗಳನ್ನೆಣಿಸಿದೆ ಹೆಣ್ಣು ಕೊಡುವ ,ತರುವ ವೈವಾಹಿಕ ಸಂಬಂಧಗಳನ್ನು ಏರ್ಪಡಿಸಬಹುದು.ಜೊತೆಗೆ ಅಂಥವರೊಂದಿಗೆ ವ್ಯಾಪಾರ ವ್ಯವಹಾರಗಳನ್ನು ಕೂಡ ಮಾಡಬಹುದು.ಭುಜಗಳಲ್ಲಿ ಧರಿಸುವ ರುದ್ರಾಕ್ಷಿ ಮಾಲೆಯು ಭುಜಬಲಕ್ಕಿಂತ ಮಿಗಿಲಾದುದು.ಬಾಹುವಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿದವನು ಪರಸ್ತ್ರೀಯರನ್ನು ಬಾಹುಗಳಲ್ಲಿ ಅಪ್ಪಿಕೊಳ್ಳಬಾರದು.ಎರಡು ಕಿವಿಗಳಲ್ಲಿ ರುದ್ರಾಕ್ಷಿ ಧರಿಸಿದವರು ಶಿವನಿಂದನೆಯನ್ನು ಕೇಳಬಾರದು.ಕರ್ಣದಲ್ಲಿ ರುದ್ರಾಕ್ಷಿ ಧರಿಸುವ ಶಿವಭಕ್ತರು ಶಿವನಿಂದಕರನ್ನು ನಿಗ್ರಹಿಸಲು ಹಿಂದೆ ಮುಂದೆ ನೋಡಬಾರದು.ಶಿವನಿಂದಕರ ವಿಷಯದಲ್ಲಿ ಶಿವಭಕ್ತರು ರುದ್ರಸ್ವರೂಪರೇ ಆಗಬೇಕು.ಕಂಠದಲ್ಲಿ ರುದ್ರಾಕ್ಷಿ ಧರಿಸುವುದರಿಂದ ಕಂಠದ ಮೌಲ್ಯವು ಹೆಚ್ಚುತ್ತದೆ.ಆದರೆ ಕಂಠದಲ್ಲಿ ರುದ್ರಾಕ್ಷಿ ಧರಿಸುವ ಭಕ್ತರು ನೀಲಕಂಠ ಶಿವನನ್ನಲ್ಲದೆ ಮತ್ತೊಂದು ದೈವಕ್ಕೆ ನಮಸ್ಕರಿಸಬಾರದು.ಸದಾಕಾಲವೂ ಶಿವಧ್ಯಾನ ಮಾಡುತ್ತ, ಶಿವಪೂಜೆ-ಶಿವಸೇವೆಯೊಳಿರುತ್ತ ಮನದಲ್ಲಿ ಮಹಾದೇವಶಿವನನ್ನು ಸ್ಥಾಪಿಸಿಕೊಂಡು ಪೂಜಿಸುವ ಭಕ್ತನೇ ಶ್ರೇಷ್ಠ ಲಿಂಗಭಕ್ತನು,ಲಿಂಗವಂತನು ಎನ್ನುತ್ತಾರೆ ಬಸವಣ್ಣನವರು.

ಶಿವಲಾಂಛನಧಾರಿಗಳಾಗುವ ಶಿವಭಕ್ತರು ಶಿವಸ್ವರೂಪರೇ ಆಗಬೇಕಲ್ಲದೆ ಜನರನ್ನು ಮೆಚ್ಚಿಸಲು ಶಿವ ಲಾಂಛನಗಳನ್ನು ಧರಿಸಬಾರದು.ರುದ್ರಾಕ್ಷವು ಶಿವನಿಗೆ ಪ್ರಿಯವಾದ ಆಭರಣವಾಗಿದೆ.ಶಿವಭಕ್ತರಾದವರು ಶಿವಭಕ್ತರಲ್ಲದವರೊಡನೆ ವ್ಯವಹರಿಸುವಾಗ ರುದ್ರಾಕ್ಷಿಯಂತೆ ಕಠಿಣ ಮನಸ್ಕರಾಗಿರಬೇಕು.ರುದ್ರಾಕ್ಷಿ ಧಾರಣೆಯು ಶಿವಾನುಗ್ರಹಪ್ರಾಪ್ತಿಯ ಸಾಧನವಾಗಿರುವುದರಿಂದ ಶಿವಭಕ್ತರು ಅವಗುಣಗಳನ್ನು ನಿಗ್ರಹಿಸಲು ಸಮರ್ಥರಿರಬೇಕು.ನಿಜನಿಷ್ಠೆಯ ಶಿವಭಕ್ತರು ಶಿವನಿಂದೆಯನ್ನು ಕೇಳಬಾರದು,ಶಿವನಿಂದಕರನ್ನು ಶಿಕ್ಷಿಸದೆ ಬಿಡಬಾರದು. ಕಿವಿಗಳಲ್ಲಿ ರುದ್ರಾಕ್ಷಿಯನ್ನು ಧರಿಸುವವರು ಸದಾ ಕಾಲವು ಶಿವನಾಮ,ಶಿವಸ್ತುತಿಯನ್ನೇ ಕೇಳುತ್ತಿರಬೇಕಲ್ಲದೆ ಅನ್ಯದೈವಗಳ ಭಜನೆ ,ಸ್ತೋತ್ರಗಳನ್ನು ಕೇಳಬಾರದು.ಲೋಕಕಲ್ಯಾಣಾರ್ಥವಾಗಿ ವಿಷವನ್ನು ಕುಡಿದು ನೀಲಕಂಠನಾದ ಶಿವನು ಸರ್ವಸಮರ್ಥನಾದ ಪರಮೇಶ್ವರನಿರುವುದರಿಂದ ಕಂಠದಲ್ಲಿ ರುದ್ರಾಕ್ಷಿ ಧರಿಸುವ ಶಿವಭಕ್ತರು ಶಿವನ ಹೊರತುಪಡಿಸಿ ಬೇರೆ ದೇವರುಗಳಿಗೆ ಬಾಗಿ ನಮಿಸಬಾರದು.ಹೀಗೆ ನಿಂತಲ್ಲಿ- ಕುಂತಲ್ಲಿ,ನಡೆವಲ್ಲಿ- ಎಡಹಿದಲ್ಲಿ,ಉಂಬುವಲ್ಲಿ- ಕೊಂಬುವಲ್ಲಿ ಸದಾ ಶಿವನನ್ನು ಸ್ಮರಿಸುತ್ತಾ ಇರುವ ಭಕ್ತನು ಸಾಕ್ಷಾತ್ ಲಿಂಗಸ್ವರೂಪಿಯೇ ಆಗುತ್ತಾನೆ,ಶ್ರೇಷ್ಠ ಲಿಂಗಾಯತನೆನ್ನಿಸಿಕೊಳ್ಳುತ್ತಾನೆ ಎನ್ನುವ ಬಸವಣ್ಣನವರು ಲಿಂಗಾಯತರು ಶಿವಸರ್ವೋತ್ತಮ ತತ್ತ್ವವನ್ನು ಎತ್ತಿಹಿಡಿಯಬೇಕು ಎಂದು ಪ್ರತಿಪಾದಿಸಿದ್ದಾರೆ ಈ ವಚನದಲ್ಲಿ.

ಶಿವಭಕ್ತರಿಗೆ ನೀತಿಸಂಹಿತೆಯಂತೆ ಇರುವ ಬಸವಣ್ಣನವರ ಈ ವಚನವು ಸಾಮಾಜಿಕ ಆಚಾರ- ಅನಾಚಾರಗಳನ್ನು ಪ್ರಸ್ತಾಪಿಸುತ್ತ ಶಿವಸದ್ಧರ್ಮದ ಸದಾಚಾರವನ್ನು ಕೂಡ ಎತ್ತಿಹಿಡಿದಿದೆ.ಕೈಗಳಲ್ಲಿ ರುದ್ರಾಕ್ಷಿ ಧರಿಸುವ ಶಿವಭಕ್ತನು ಅಂಗಶುದ್ಧನಾಗುವುದರಿಂದ ಅವನ ಕುಲಗೋತ್ರಗಳನ್ನರಸದೆ ಅವನ ಕುಟುಂಬದೊಂದಿಗೆ ವೈವಾಹಿಕ ಮತ್ತು ವ್ಯಾವಹಾರಿಕ ಸಂಬಂಧಗಳನ್ನು ಇಟ್ಟುಕೊಳ್ಳಬಹುದು.ಶಿವಭಕ್ತರು ಶಿವನಿಂದನೆಯನ್ನು ಕೇಳಬಾರದು ಮತ್ತು ಶಿವನ ಹೊರತು ಅನ್ಯದೈವಗಳಿಗೆ ನಮಸ್ಕರಿಸಬಾರದು,ಇಂಥಹ ಸದಾಚಾರ- ಶಿವಾಚಾರ ಸಂಪನ್ನನೇ ನಿಜವಾದ ಲಿಂಗಾಯತ,ಲಿಂಗಭಕ್ತ ಎನ್ನುತ್ತಾರೆ ಬಸವಣ್ಣನವರು.ಇಷ್ಟಲಿಂಗಪೂಜಕರು,ರುದ್ರಾಕ್ಷಿಗಳನ್ನು ಧರಿಸುವವರು ಶಿವಸರ್ವೋತ್ತಮ ತತ್ತ್ವವನ್ನು ಎತ್ತಿಹಿಡಿಯಬೇಕಲ್ಲದೆ ಮರ್ತ್ಯದ ಹತ್ತು ಹಲವು ದೈವಗಳನ್ನು ಮೊರೆಯತಕ್ಕದ್ದಲ್ಲ,ಪೂಜಿಸತಕ್ಕದ್ದಲ್ಲ.ಶಿವಭಕ್ತರ ಮಾತು ಮನಸ್ಸುಗಳಲ್ಲಿ,ಕರಣೇಂದ್ರಿಗಳ ಸರ್ವವ್ಯವಹಾರದಲ್ಲಿ ಸದಾ ಶಿವನೇ ತುಂಬಿಕೊಂಡಿರಬೇಕು ; ಶಿವಮಯವಾಗಿರಬೇಕು ಶಿವಭಕ್ತರ ಬದುಕು.ರುದ್ರಾಕ್ಷಿ ಧರಿಸುತ್ತ,ಲಿಂಗವನ್ನು ಪೂಜಿಸುತ್ತ ಕಂಡಕಂಡ ದೇವರುಗಳಿಗೆ ಶರಣಾಗುವುದು ಶಿವದ್ರೋಹ,ಇಂತಹ ಶಿವದ್ರೋಹಿಗಳಿಗೆ ಸದ್ಗತಿ ಇಲ್ಲ.ಲಿಂಗ ಮತ್ತು ಜಂಗಮರೂಪಿ ಶಿವನಲ್ಲಿ ಮಾತ್ರ ನಿಷ್ಠೆಯುಳ್ಳವರೇ ಲಿಂಗಾಯತರಲ್ಲದೆ ಲಿಂಗನಿಷ್ಠೆಯಿಲ್ಲದ ಬಾಯಿಮಾತಿನ ಮಂದಿ ಲಿಂಗಾಯತರಲ್ಲ .ನಾವು ಲಿಂಗಾಯತರು,ಬಸವಣ್ಣನವರ ಅನುಯಾಯಿಗಳು ಎನ್ನುವವರು ಬಸವಣ್ಣನವರ ಈ ವಚನವನ್ನು ಅರ್ಥಮಾಡಿಕೊಳ್ಳಬೇಕು.

೧೫.೦೮.೨೦೨೪

About The Author