ಬಸವಣ್ಣನವರ ಶಿವದರ್ಶನ –೩ :: ಸಂಸಾರವೆಂಬ ಸರ್ಪವಿಷದಿಂದ ಮುಕ್ತರಾಗುವ ದಿವ್ಯೌಷಧ ಶಿವ ಮಹಾಮಂತ್ರ

ಬಸವಣ್ಣನವರ ಶಿವದರ್ಶನ –೩

ಸಂಸಾರವೆಂಬ ಸರ್ಪವಿಷದಿಂದ ಮುಕ್ತರಾಗುವ ದಿವ್ಯೌಷಧ ಶಿವ ಮಹಾಮಂತ್ರ

ಮುಕ್ಕಣ್ಣ ಕರಿಗಾರ

ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ ವಿಷದಿಂದೆ
ಆನು ಮುಂದುಗೆಟ್ಟೆನಯ್ಯಾ ;
ಆನು ಹೊರಳಿ ಬೀಳುತಿರ್ದೆನಯ್ಯಾ.
‘ ಓಂ ನಮಃ ಶಿವಾಯ’ ಎಂಬ
ಮಂತ್ರವ ಜಪಿಸುತ್ತಿರ್ದೆನಯ್ಯಾ,
ಕೂಡಲ ಸಂಗಮದೇವಾ.

ಸಂಸಾರಸಾಗರದಿಂದ ಮುಕ್ತರಾಗಲು ಶಿವಮಂತ್ರಸ್ಮರಣೆಯೇ ಪಥವೆಂಬುದನ್ನು ಬಸವಣ್ಣನವರು ಈ ವಚನದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ.ಮಡದಿ ಮಕ್ಕಳು ಬಂಧು- ಬಾಂಧವರು ಎನ್ನುವ ಮೋಹಕ ಪ್ರಪಂಚವು ವಿಷಸರ್ಪ ಇದ್ದಂತೆ.ಆ ಸರ್ಪ ಕಚ್ಚಲು ಪಂಚೇಂದ್ರಿಯಗಳ ಪ್ರಭಾವದಿಂದುಂಟಾದ ವಿಷಯವೆಂಬ ವಿಷವು ಮೈಯನ್ನೆಲ್ಲ ಆವರಿಸುತ್ತದೆ.ವಿಷದ ಪ್ರಭಾವ ಮೈ ಮನಗಳನ್ನೆಲ್ಲ ವ್ಯಾಪಿಸಿ,ಏನು ಮಾಡಬೇಕೆಂದರಿಯದೆ ‘ ಓಂ ನಮಃ ಶಿವಾಯ’ ಎನ್ನುವ ಶಿವಮಹಾಮಂತ್ರವನ್ನು ಜಪಿಸುತ್ತಿದ್ದೇನೆ ಎನ್ನುವ ಮೂಲಕ ಬಸವಣ್ಣನವರು ಭವಬಂಧನದಿಂದ ಮುಕ್ತರಾಗಲು ಭವಹರಶಿವನ ಷಡಕ್ಷರಿ ಮಹಾಮಂತ್ರವನ್ನು ಜಪಿಸಬೇಕು ಎನ್ನುತ್ತಾರೆ.

ಈ ವಚನದಲ್ಲಿ ಬಸವಣ್ಣನವರು ಸಂಸಾರವು ಪರಶಿವನ ಸಂಕಲ್ಪವಾಗಿದ್ದು ಸಂಸಾರಬಂಧನದಿಂದ ಹೊರಬಂದು ಮೋಕ್ಷವನ್ನು ಹೊಂದಬೇಕು ಎಂದರೆ ‘ ಓಂ ನಮಃ ಶಿವಾಯ’ ಎನ್ನುವ ಶಿವ ಮಹಾಮಂತ್ರವನ್ನು ಜಪಿಸಬೇಕು ಎನ್ನುತ್ತಾರೆ.ಸಂಸಾರ ಚಕ್ರದಿಂದ ಪಾರಾಗಬೇಕು ಎಂದರೆ ಆ ಸಂಸಾರ ಚಕ್ರಕ್ಕೆ ಕಾರಣನಾದ ಪರಶಿವನನ್ನು ಮೊರೆದಲ್ಲದೆ ಬೇರೆ ದಾರಿಗಳಿಲ್ಲ.ಬಸವಣ್ಣನವರು ಇಲ್ಲಿ ಸಂಸಾರವನ್ನು ವಿಷ ಸರ್ಪಕ್ಕೆ ಹೋಲಿಸಿ,ಕಣ್ಣು,ಕಿವಿ,ಮೂಗು,ನಾಲಗೆ ಮತ್ತು ಚರ್ಮಗಳೆಂಬ ಪಂಚೇಂದ್ರಿಯಗಳ ಆಸಕ್ತಿ- ಅಭಿರುಚಿಗಳೆಂಬ ವಿಷಯವು ವಿಷವಾಗಿ ಮೈ ಮನಗಳನ್ನೆಲ್ಲ ವ್ಯಾಪಿಸಿ ಅಸ್ವಸ್ಥನನ್ನಾಗಿಸುತ್ತದೆ.ಮರಣರೂಪಿ ಸರ್ಪವಿಷದಿಂದ ಮುಕ್ತರಾಗಲು ಅಮೃತಮಯವಾದ ಶಿವ ಮಂತ್ರವನ್ನು ಜಪಿಸಬೇಕು.ಶಿವಮಹಾಮಂತ್ರ ಜಪದಿಂದ ಮೈಮನಗಳನ್ನು ಆವರಿಸಿ ಕವಿದಿದ್ದ ಸಂಸಾರವೆಂಬ ಸರ್ಪದ ವಿಷವು ಇಳಿಯುತ್ತದೆ.

‌ ಬೇಕು ಬೇಡಿಕೆಗಳ,ಬೇಕು- ಬೇಡಗಳ ಈ ವಿಷಯ ಪ್ರಪಂಚದಲ್ಲಿ ಆಸಕ್ತರಾದರೆ ಮುಗಿಯಿತು ಅದರಿಂದ ಹೊರಬರಲು ಸಾಧ್ಯವೇ ಇಲ್ಲ.ಮೋಹ ವ್ಯಾಮೋಹ,ರಾಗ- ದ್ವೇಷ,ಇಷ್ಟ ಅನಿಷ್ಟಗಳೆಂಬಿತ್ಯಾದಿ ದ್ವಂದ್ವ ದಂದುಗದ ಪ್ರಪಂಚ ವಿಷವು ಮನುಷ್ಯರನ್ನು ಸ್ವರೂಪಜ್ಞಾನವಂಚಿತರನ್ನಾಗಿಸಿ ಹುಟ್ಟು ಸಾವುಗಳ ಪರಿಭ್ರಮಣಚಕ್ರದಡಿ ಸಿಲುಕಿಸಿ ಮುಂದುಗಾಣದಂತೆ ಮಾಡುತ್ತದೆ.ಭಕ್ತರಾದವರು ಈ ವಿಷಯವಿಷ ಪ್ರಪಂಚದಿಂದ ಪಾರಾಗಲು ಪರಶಿವನನ್ನು‌ ಮೊರೆಹೋಗಬೇಕು ; ಓಂ ನಮಃ ಶಿವಾಯ ಎನ್ನುವ ಮಹಾಮಂತ್ರವನ್ನು ಜಪಿಸಬೇಕು.ಶಿವ ಮಹಾಮಂತ್ರವು ರಕ್ಷಾಮಂತ್ರದಂತೆ ಕಾರ್ಯನಿರ್ವಹಿಸಿ ತನ್ನ ಭಕ್ತನನ್ನು ಭವಸಾಗರದಿಂದ ಪಾರುಮಾಡುತ್ತದೆ.

‌ ‌೦೭.೦೮.೨೦೨೪

About The Author