ಬಸವಣ್ಣನವರ ಶಿವದರ್ಶನ –೦೪ :: ಭಕ್ತನ ಬದುಕು ಶಿವನಿಚ್ಛೆಯಂತಲ್ಲದೆ ಸ್ವತಂತ್ರವಲ್ಲ :: ಮುಕ್ಕಣ್ಣ ಕರಿಗಾರ

ಬಸವಣ್ಣನವರ ಶಿವದರ್ಶನ –೦೪

ಭಕ್ತನ ಬದುಕು ಶಿವನಿಚ್ಛೆಯಂತಲ್ಲದೆ ಸ್ವತಂತ್ರವಲ್ಲ

ಮುಕ್ಕಣ್ಣ ಕರಿಗಾರ

ನೀ ಹುಟ್ಟಿಸಿದಲ್ಲಿ ಹುಟ್ಟದೆ ನೀ ಕೊಂದಲ್ಲಿ ಸಾಯದೆ
ಎನ್ನ ವಶವೆ,ಅಯ್ಯಾ ?
ನೀವಿರಿಸಿದಲ್ಲಿರದೆ ಎನ್ನ ವಶವೆ ಅಯ್ಯಾ ?
ಅಕಟಕಟಾ ! ‘ ಎನ್ನವನೆನ್ನವನೆ’ ನ್ನಯ್ಯಾ,
ಕೂಡಲ ಸಂಗಮದೇವಾ.

ಪರಶಿವನು ವಿಶ್ವನಿಯಾಮಕನು,ಪರಶಿವನ‌ಇಚ್ಛೆಯಂತೆ ಜಗತ್ತಿನ ವ್ಯವಹಾರ ನಡೆಯುತ್ತಿದೆ ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ.ಭಕ್ತನಾಗಲಿ,ಯೋಗಿಯಾಗಲಿ,ಸಂತನಾಗಲಿ ಅವರು ಯಾರೇ ಆಗಿರಲಿ ತಮ್ಮ ಬಾಳ ಗತಿಯನ್ನು ನಿರ್ಧರಿಸಲು ಸಮರ್ಥರಲ್ಲ.ಪರಮಾತ್ಮನ ಪ್ರೇರಣೆಯಂತೆ ಹುಟ್ಟಿ ಪರಮಾತ್ಮನ ಸಂಕಲ್ಪಕ್ಕನುಸರಿಸಿ ಕೆಲಸ ಮಾಡಬೇಕಲ್ಲದೆ ಯೋಗಿ,ಮಹಾತ್ಮ ಎಂದು ತಮ್ಮಿಚ್ಛೆಯಂತೆ ವರ್ತಿಸುವಂತಿಲ್ಲ.ಹುಟ್ಟು ಸಾವುಗಳ ಪ್ರಪಂಚ ನಿಯತಿಯ ಮೇಲೆ ಪರಮಾತ್ಮನ ನಿಯಂತ್ರಣ ಮಾತ್ರವಿದೆಯಾಗಲಿ ಮತ್ತಾರೂ ಆ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.ಅದನ್ನೇ ಬಸವಣ್ಣನವರು ಈ ವಚನದಲ್ಲಿ ನೀ ಹುಟ್ಟಿಸಿದಲ್ಲಿ ಹುಟ್ಟಿ,ನೀ ನಿಯಮಿಸಿದ ಸ್ಥಳದಲ್ಲಿ ಸಾಯಬೇಕಲ್ಲದೆ ನಮಗೆ ಯಾವ ಸ್ವಾತಂತ್ರ್ಯವೂ ಇಲ್ಲ,ನನ್ನ ಬದುಕಿನ ನಿರ್ಧಾರಕನು ನೀನೆ ತಂದೆ ಶಿವನೆ ಎಂದು ಮೊರೆಯುತ್ತ ನಿನ್ನ ಭಕ್ತನಾದ ನನ್ನನ್ನು ಅನ್ಯವ್ಯಕ್ತಿ ಎಂದು ಬಗೆಯದೆ ನನ್ನವನು,ನನ್ನಭಕ್ತನು ಎಂದು ತಿಳಿದು ಉದ್ಧರಿಸುವಂತೆ ಮೊರೆಯುತ್ತಾರೆ.

ಜಗದೋದ್ಧಾರಕ್ಕಾಗಿ ಕಾಲಕಾಲಕ್ಕೆ ಅವತರಿಸುವ ಪರಮಾತ್ಮನ ವಿಭೂತಿಗಳು ಪರಮಾತ್ಮನ ಪ್ರೇರಣೆಯಂತೆ ಕೆಲಸ ಮಾಡುತ್ತಾರೆಯೇ ಹೊರತು ಅವರೇ ಪರಮಾತ್ಮರಲ್ಲ ಎನ್ನುವುದನ್ನು ನಾವು ಲಕ್ಷ್ಯದಲ್ಲಿರಿಸಿಕೊಳ್ಳಬೇಕು.ಪರಮಾತ್ಮನು ಹುಟ್ಟುವುದೂ ಇಲ್ಲ,ಸಾಯುವುದೂ ಇಲ್ಲ.ಆದರೆ ಪರಮಾತ್ಮನ ಪ್ರೇರಣೆಯಂತೆ ಹುಟ್ಟುವ ಪರಮಾತ್ಮನ ವಿಭೂತಿಗಳು ಈ ಲೋಕದಲ್ಲಿ ತಮ್ಮ ಕಾರ್ಯಮುಗಿದೊಡನೆ ಸಾಯಲೇಬೇಕು.ಪರಮಾತ್ಮನ ವಿಭೂತಿಗಳಾದರೂ ಅವರು ಎಲ್ಲಿಯೋ ಒಂದು ಕಡೆ ಹುಟ್ಟಿ ಜನ್ಮದತ್ತವಾಗಿ ಬಂದ ಪರಮಾತ್ಮನ ಅನುಗ್ರಹಕಾರ್ಯವನ್ನು ನಿರ್ವಹಿಸಿ ಕೊನೆಗೊಂದು ದಿನ ಬಂದಿದ್ದ ಮೂಲದಲ್ಲಿಯೇ ಒಂದಾಗಬೇಕು.ತನ್ನ ವಿಭೂತಿಗಳು,ಯೋಗಿಗಳು,ಭಕ್ತರು ಎಂದು ಪರಮಾತ್ಮನು ಕಾಲಚಕ್ರದ ಮೇಲಣ ತನ್ನ ಪ್ರಭುತ್ವವನ್ನು ಯಾರಿಗೂ ಬಿಟ್ಟುಕೊಡಲಾರ.ಶಿವಭಕ್ತರು,ಶಿವಯೋಗಿಗಳ ಮಹಿಮೆ ಅವರ ಶಿವಭಕ್ತಿ,ಶಿವನಿಷ್ಠೆಯಲ್ಲಿರುತ್ತದೆಯೇ ಹೊರತು ಅವರ ಸ್ವಂತಶಕ್ತಿ ಸಾಮರ್ಥ್ಯ ಎನ್ನುವುದು ಏನೂ ಇರುವುದಿಲ್ಲ.

ನಾವು ಅವತಾರಿಗಳು,ದೇವಮಾನವರು,ನಡೆದಾಡುವ ದೇವರುಗಳು ಎಂದು ಉಬ್ಬಿಕೊಬ್ಬುವ ಹುಲುಮಾನವರುಗಳು ಬಸವಣ್ಣನವರ ಈ ವಚನವನ್ನು ಅರ್ಥಮಾಡಿಕೊಳ್ಳಬೇಕು.ಶಿವನೊಬ್ಬನೇ ಜಗದಕರ್ತಾರನಲ್ಲದೆ ಮತ್ತೊಬ್ಬರು ಕರ್ತಾರರಿಲ್ಲ ಈ ಜಗತ್ತಿಗೆ,ಶಿವ ವಿಭೂತಿಗಳು ಶಿವನ‌ಪ್ರತಿನಿಧಿಗಳಾಗಿ ಶಿವಕಾರ್ಯವನ್ನು ನಿರ್ವಹಿಸುತ್ತಾರೆಯೇ ಹೊರತು ಅವರೇ ಸರ್ವಸ್ವತಂತ್ರರಾದ ಪರಮಾತ್ಮರಲ್ಲ.ವ್ಯಕ್ತಿಪೂಜೆಯ ಅನಿಷ್ಟಕ್ಕೆ ಸಿಕ್ಕು ನರರನ್ನು ಹರರೆಂದು ಕೊಂಡಾಡುವುದು ಪಾಪಕಾರ್ಯ.ಮನುಷ್ಯ ಮನುಷನೆ! ಮಹಾದೇವ ಮಹಾದೇವನೆ.ಮಹಾದೇವ ಶಿವನ ಪ್ರೇರಣೆಯಂತೆ ಹುಟ್ಟಿ,ಶಿವಕಾರ್ಯವನ್ನು ಮಾಡುವ ಶಿವವಿಭೂತಿಗಳು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಆದರೆ ಪ್ರತಿಶಿವ ಆಗಲು ಸಾಧ್ಯವಿಲ್ಲ.ಶಿವ ಶಿವನೆ,ಭಕ್ತ ಭಕ್ತನೆ.ಧರೆಯಲ್ಲಿ ಹುಟ್ಟಿದ ಎಲ್ಲರೂ ಅವರು ಯಾರೇ ಆಗಿರಲಿ ಭಕ್ತರೇ ಹೊರತು ಭಗವಂತನಲ್ಲ,ಪರಮಾತ್ಮರಲ್ಲ.

‌೦೮.೦೮.೨೦೨೪

About The Author