ಬಸವಣ್ಣನವರ ಶಿವದರ್ಶನ —೦೨ :: ಶಿವಧರ್ಮ ಸ್ಥಾಪನೆಗಾಗಿ ಯುಗಯುಗಗಳಲ್ಲಿ ಅವತರಿಸುವ ಶಿವವಿಭೂತಿ ಬಸವಣ್ಣನವರು :: ಮುಕ್ಕಣ್ಣ ಕರಿಗಾರ

ಬಸವಣ್ಣನವರ ಶಿವದರ್ಶನ —೦೨

ಶಿವಧರ್ಮ ಸ್ಥಾಪನೆಗಾಗಿ ಯುಗಯುಗಗಳಲ್ಲಿ ಅವತರಿಸುವ ಶಿವವಿಭೂತಿ ಬಸವಣ್ಣನವರು

ಮುಕ್ಕಣ್ಣ ಕರಿಗಾರ

ಅಯ್ಯಾ,ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ
ಬಾರದಿರ್ದೊಡೆ ನಿಮ್ಮಾಣೆ,ನಿಮ್ಮ ಪ್ರಮಥರಾಣೆ !
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ ದೆರೆಯನಯ್ಯಾ .
ಪ್ರಥಮ ಭವಾಂತರದಲ್ಲಿ ಶಿಲಾದನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಭೃತ್ಯನಮಾಡಿಯೆನ್ನನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟುಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಅಯ್ದನೆಯ ಭವಾಂತರದಲ್ಲಿ ಕಾಲಲೋಚನನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ ವೃಷಭನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ ಬಸವನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮಿಕ್ಕುದ ಮಿಕ್ಕುದಕ್ಕೆ
ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ,ಕೂಡಲ ಸಂಗಮದೇವಾ
ನೀವು ಬರಿಸಿದ ಭವಾಂತರದಲ್ಲಿ
ನಾನು ಬರುತಿರ್ದೆನಯ್ಯಾ.

ಶಿವಧರ್ಮವನ್ನು ಎತ್ತಿಹಿಡಿಯಲು ಯುಗಯುಗದಲ್ಲಿ ತಾವು ಅವತರಿಸುತ್ತಿರುವುದಾಗಿ ಉದ್ಘೋಷಿಸಿಕೊಂಡಿರುವ ಬಸವಣ್ಣನವರು ತಾವು ಶಿವಭಕ್ತನಾಗಿ ಹುಟ್ಟದೆ ಮತ್ತೊಂದು ದೇವರ ಭಕ್ತನಾಗಿ ಹುಟ್ಟಲಾರೆ,ಅದಕ್ಕೆ ಶಿವನೇ ಸಾಕ್ಷಿ ಎಂದು ಪ್ರಮಾಣಮಾಡಿ ಹೇಳಿದ್ದಾರೆ.ಶಿವನ ಅನುಗ್ರಹಪ್ರಸಾದವನ್ನು ಬೇಡುವುದಲ್ಲದೆ ಮತ್ತೊಂದು ದೇವರ ಮುಂದೆ ಕೈಯೊಡ್ಡಿ ಬೇಡಲಾರೆ ಎಂದು ಸ್ಪಷ್ಟಪಡಿಸಿರುವ ಬಸವಣ್ಣನವರು ಶಿವ ಮತ್ತು ತಮ್ಮ ನಡುವಿನ ಭಗವಂತ ಮತ್ತು ಭಕ್ತನ ಆದ್ಯಂತರಹಿತ, ಅವಿನಾಭಾವ ಸಂಬಂಧವನ್ನು ಪ್ರಸ್ತಾಪಿಸಿದ್ದಾರೆ ಈ ವಚನದಲ್ಲಿ.

ಧರೆಯಲ್ಲಿ ಧರ್ಮವು ಅವನತಿಯ ಹಾದಿಯಲ್ಲಿದ್ದ ಕಾಲದಲ್ಲೆಲ್ಲ ಬಸವಣ್ಣನವರು ಶಿವಗಣೇಶ್ವರರಾಗಿ ಭೂಮಿಗೆ ಅವತರಿಸಿ ಶಿವಸರ್ವೋತ್ತಮ ತತ್ತ್ವವನ್ನು,ಶಿವ ಧರ್ಮದ ಆಧಿಕ್ಯವನ್ನು ಎತ್ತಿ ಹಿಡಿದಿದ್ದಾರೆ.ಪರಶಿವನು ಹುಟ್ಟು ಸಾವುಗಳಿಲ್ಲದ ಪರವಸ್ತುವು ಆದ್ದರಿಂದ ತನ್ನಿಂದ ಸೃಷ್ಟಿಗೊಂಡ ಜಗತ್ತಿನ ನಿಯತಿ ವ್ಯವಹಾರವು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳಲು ಕೈಲಾಸದ ತನ್ನ ಗಣಾಧೀಶ್ವರರನ್ನು ಆಗಾಗ ಭೂಮಿಯಲ್ಲಿ ಅವತರಿಸುವಂತೆ ಮಾಡುತ್ತಾನೆ.ಗಣಾಧೀಶ್ವರರು ಭೂಮಿಯಲ್ಲಿ ಅವತರಿಸಿ ದಾರಿತಪ್ಪಿದ ಜನರಿಗೆ ದಾರಿತೋರಿಸುತ್ತ,ಶಿವಪಥದಲ್ಲಿ ನಡೆಯುವಂತೆ ಜನರನ್ನು ಪ್ರೇರೇಪಿಸುತ್ತಾರೆ.

ಬಸವಣ್ಣನವರ ಬಸವನೆಂಬ ಶಿವಗಣೇಶ್ವರ ಅವತಾರವು ತಮ್ಮ ಏಳನೆಯ ಅವತಾರವಾಗಿದೆ ಎನ್ನುವ ಅವರು ತಮ್ಮ ಹಿಂದಣ ಅವತಾರಗಳಲ್ಲಿ ತಾವು ಯಾವ ಗಣೇಶ್ವರನ ರೂಪದಲ್ಲಿ ಶಿವಪಾರಮ್ಯವನ್ನು ಪ್ರತಿಷ್ಠಾಪಿಸಿದೆ ಎಂದು ವಿವರಿಸಿದ್ದಾರೆ ಈ ವಚನದಲ್ಲಿ.ಮೊದಲು ಅವರು ಶಿಲಾದನೆಂಬ ಮಹರ್ಷಿಯಾಗಿ ಹುಟ್ಟಿ ಶಿವಧರ್ಮವನ್ನು ಎತ್ತಿಹಿಡಿದರು.ಎರಡನೆಯ ಅವತಾರದಲ್ಲಿ ಸ್ಕಂದನೆಂಬ ಗಣೇಶ್ವರನಾಗಿ ತೋರ್ದು ಶಿವಮಹಿಮಾಧಿಕ್ಯವನ್ನು ಪ್ರಸಾರಮಾಡಿದರು.ಮೂರನೆಯ ಅವತಾರದಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿ ಹುಟ್ಟಿ ಶಿವನ ಲೀಲಾ ವಿನೋದಗಳನ್ನಾಡುತ್ತ ಶಿವಧರ್ಮವನ್ನು ಎತ್ತಿಹಿಡಿದರು.ನಾಲ್ಕನೆಯ ಅವತಾರದಲ್ಲಿ ಮನೋಹರನೆಂಬ ಗಣೇಶ್ವರನಾಗಿ ಹುಟ್ಟಿ ಶಿವನ ಮನಃಪ್ರೇರಕರಾಗಿ ಕಾರ್ಯನಿರ್ವಹಿಸಿದರು.ಐದನೆಯ ಅವತಾರದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿ ಹುಟ್ಟಿ ಪ್ರಪಂಚವಾದಿ ಸಕಲ ಚರಾಚರ ಸಂಹಾರಕಾರ್ಯ ಗೈದರು.ಆರನೆಯ ಅವತಾರದಲ್ಲಿ ಬಸವಣ್ಣನವರು ವೃಷಭನಾಗಿ ಹುಟ್ಟಿ ಶಿವನ ವಾಹನವಾದರು.ಏಳನೆಯ ಅವತಾರವಾದ ಬಸವಾವತಾರವು ಒಕ್ಕುಮಿಕ್ಕ ಪ್ರಸಾದದ ಮಹಿಮೆಯನ್ನು ಪ್ರಸಾರಮಾಡುವ ಕಾರಣದಿಂದಾಯಿತ್ತು ಎನ್ನುವ ಬಸವಣ್ಣನವರು ತಾವು ಶಿವಧರ್ಮ ಪ್ರತಿಷ್ಠಾಪನೆಗೆ ಭೂಮಿಯಲ್ಲಿ ಅವತರಿಸುವುದಾಗಿ ಹೇಳಿದ್ದಾರೆ ಈ ವಚನದಲ್ಲಿ.

ಬಸವಣ್ಣನವರ ಈ ವಚನವನ್ನು ಅರ್ಥೈಸಿಕೊಂಡರೆ ಅವರು ಶಿವಧರ್ಮ ಪ್ರತಿಷ್ಠಾಪನೆಗಾಗಿ ಯುಗಯುಗದಲ್ಲಿ ಅವತರಿಸುವ ಶಿವವಿಭೂತಿಗಳು ಎನ್ನುವುದು ಸ್ಪಷ್ಟವಾಗುತ್ತದೆ.ಸ್ವಯಂ ಬಸವಣ್ಣನವರೇ ನಾನು ಶಿವಭಕ್ತ,ಶಿವಮತ ಪ್ರಸಾರಕ್ಕಾಗಿ ಯುಗಯುಗದಲ್ಲಿ ಹುಟ್ಟಿಬರುವೆ ಎಂದು ಘೋಷಿಸಿಕೊಂಡಿರುವಾಗ ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತ ‘ ಶಿವ ವೈದಿಕರ ದೇವರು,ನಾವು ಶಿವನನ್ನು ಪೂಜಿಸುವುದಿಲ್ಲ’ ಎನ್ನುವವರ ಅಜ್ಞಾನಕ್ಕೆ ಏನು ಹೇಳಬೇಕು?ಬಸವಣ್ಣನವರ ವ್ಯಕ್ತಿತ್ವದ ಹಿರಿಮೆ ಇರುವುದು ಅವರ ಶಿವಭಕ್ತಿ,ಶಿವನಿಷ್ಠೆಯಲ್ಲಿ.ಶಿವನಿಂದಾಗಿಯೇ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಹಿಮಾಧಿಕ್ಯಪ್ರಾಪ್ತವಾಗಿದೆ,ಶಿವನಿಲ್ಲದೆ ಬಸವಣ್ಣನವರು ಇಲ್ಲ,ಶಿವನ ಹೊರತಾಗಿ ಬಸವಣ್ಣನವರಿಗೆ ಪ್ರತ್ಯೇಕ ಅಸ್ತಿತ್ವ ಇಲ್ಲ.ಶಿವ ಬಸವರು ಒಂದೇ.ಶಿವ ಬಸವರಲ್ಲಿ ಪ್ರತ್ಯೇಕತೆಯನ್ನರಸುವುದು,ಶಿವ ನಮ್ಮ ದೇವರಲ್ಲ ಎನ್ನುವುದು ಅಜ್ಞಾನದ ಪರಾಕಾಷ್ಠೆ ! ಬಸವಣ್ಣನವರು ಜಗದಾರಾಧ್ಯರಾದ ವಿಶ್ವಗುರುಗಳು,ವಿಶ್ವವಿಭೂತಿಗಳು.ಬಸವಣ್ಣನವರು ವಿಶ್ವಗುರುವಾಗಿ ಪೂಜೆ,ಗೌರವಗಳನ್ನು ಸ್ವೀಕರಿಸುವ ವಿಶ್ವಮಾನ್ಯತೆಯನ್ನು ಪಡೆಯಲು ಬಸವಣ್ಣನವರ ಶಿವಭಕ್ತಿ,ಶಿವನಿಷ್ಠೆಗಳೇ ಕಾರಣ.ಶಿವನನ್ನು ಪೂಜಿಸದೆ ಬಸವಣ್ಣನವರನ್ನು ಮಾತ್ರ ಒಪ್ಪುತ್ತೇವೆ ಎನ್ನುವುದು ಶಿವದ್ರೋಹ ಮಾತ್ರವಲ್ಲ,ಬಸವಣ್ಣನವರಿಗೆ ಎಸಗುವ ಅಪಚಾರ ಕೂಡ.

‌‌ ‌ ೦೬.೦೮.೨೦೨೪

About The Author