ಬಸವಣ್ಣನವರು ಶಿವಮತೋದ್ಧಾರಕರು,ಶೈವಸಂಸ್ಕೃತಿಯ ಪ್ರವರ್ಧನಾಚಾರ್ಯರು.

೦೧ : ಬಸವಣ್ಣನವರು ಶಿವಮತೋದ್ಧಾರಕರು,ಶೈವಸಂಸ್ಕೃತಿಯ ಪ್ರವರ್ಧನಾಚಾರ್ಯರು : ಮುಕ್ಕಣ್ಣ ಕರಿಗಾರ 

ಪರಶಿವನ ಪಾರಮ್ಯವನ್ನು ಭೂಮಿಯಲ್ಲಿ ಸ್ಥಾಪಿಸಿ,ಎತ್ತಿಹಿಡಿಯುವುದೇ ಬಸವಣ್ಣನವರ ಬದುಕಿನ ಮಹಾನ್ ಧ್ಯೇಯವಾಗಿತ್ತು.ಬಸವಪೂರ್ವದ ಸಹಸ್ರಾರು ವರ್ಷಗಳಿಂದ ಪ್ರವಹಿಸುತ್ತಿದ್ದ ಶೈವ ಧರ್ಮ,ಶೈವ ಸಂಸ್ಕೃತಿಯಲ್ಲಿ ಒಂದುಗೂಡಿ ಹರಿಯುತ್ತಿದ್ದ ಕಸ,ಕೊಳೆಗಳಿಂದ ಶಿವಪ್ರವಾಹವನ್ನು ಶುಚಿಗೊಳಿಸಿ,ಸ್ವಚ್ಛವಾಗಿಸಿ ಶಿವತೀರ್ಥವನ್ನಾಗಿಸಿದ ಶ್ರೇಯಸ್ಸು- ಪ್ರೇಯಸ್ಸುಗಳು ಬಸವಣ್ಣನವರಿಗೆ ಸಲ್ಲುತ್ತವೆ.ಪರಶಿವನು ಜಗತ್ತಿನ ಆಧಾರವಾದ ಜಗತ್ತಿನ ಆಚೆಗೆ ಇರುವ ಮೂಲ ಪರಬ್ರಹ್ಮನಾದುದರಿಂದ ಪರಶಿವನಿಗೆ ಹುಟ್ಟು-ಸಾವುಗಳಿಲ್ಲ.ಪರಶಿವನು ತನ್ನ ವಿಭೂತಿಪುರುಷರುಗಳಿಂದ ಜಗದೋದ್ಧಾರ ಕಾರ್ಯವನ್ನೆಸಗುವನು.ಅಂತಹ ಅಸಂಖ್ಯಾತ ಶಿವ ವಿಭೂತಿಗಳು ಆಗಿ ಹೋಗಿದ್ದಾರೆ.ಬಸವಣ್ಣನವರು ತಾವು ಕೂಡ ಅಂತಹ ಶಿವ ವಿಭೂತಿಗಳಲ್ಲಿ ಒಬ್ಬರಾಗಿದ್ದು ಶಿವಧರ್ಮವನ್ನು ಎತ್ತಿಹಿಡಿಯುವ ಕಾರ್ಯಕ್ಕಾಗಿ ನಾನು ಭವಭವಾಂತರಗಳನ್ನು ಎತ್ತುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

‌ಅಯ್ಯಾ,ನೀನು ನಿರಾಕಾರವಾಗಿರ್ದಲ್ಲಿ
ನಾನು ಜ್ಞಾನವೆಂಬ ವಾಹನವಾಗಿರ್ದೆ,ಕಾಣಾ.
ಅಯ್ಯಾ,ನೀನು ನಾಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿರ್ದೆ,ಕಾಣಾ.
ಅಯ್ಯಾ,ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆಂಬ ವಾಹನವಾಗಿರ್ದೆ,ಕಾಣಾ.
ಅಯ್ಯಾ,ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನನಾಗಿ ಬಂದಲ್ಲಿ,
ನಾನು ಭಕ್ತನೆಂಬ ವಾಹನವಾಗಿರ್ದೆ,ಕಾಣಾ
ಕೂಡಲ ಸಂಗಮದೇವಾ.

ಮೂಲತಃ ನಿರಾಕಾರ ಪರಬ್ರಹ್ಮನಾಗಿರುವ ಶಿವನು ಜಗದುತ್ಪತ್ತಿಯ ಸಂಕಲ್ಪದಿಂದ ಸಾಕಾರರೂಪ ತಳೆಯುವನು.ನಿರಾಕಾರ ಮತ್ತು ಸಾಕಾರ ಎನ್ನುವ ಎರಡು ರೂಪಗಳನ್ನು ಧರಿಸಿಯೂ ಶಿವನು ಜಗತ್ತಿನ ಆಗು ಚೇಗುಗಳಿಗೆ ಅಂಟಿಕೊಳ್ಳುವವನಲ್ಲ.ಇಂತಹ ನಿರಾಕಾರ ಶಿವ ಮತ್ತು ಸಾಕಾರ ಶಿವ ಎನ್ನುವ ಎರಡು ಶಿವಾವಸ್ಥೆಗಳನ್ನು ಬಲ್ಲ ಬಸವಣ್ಣನವರು ಶಿವ ಮತ್ತು ತಮಗೆ ಆದ್ಯಂತವಿಲ್ಲದ ಭಗವಂತ ಮತ್ತು ಭಕ್ತರ ಸಂಬಂಧವಿದೆ ಎನ್ನುತ್ತಾರೆ ಈ ವಚನದಲ್ಲಿ.ಶಿವನು ತನ್ನ ಮೂಲಾವಸ್ಥೆಯಾದ ನಿರಾಕಾರಪರಶಿವನಾಗಿ ತನ್ನ ಸ್ವರೂಪಾನಂದಲ್ಲಿ ಲೀನನಾಗಿದ್ದಾಗ ಶಿವಜ್ಞಾನವನ್ನು ಜಗತ್ತಿಗೆ ಪರಿಚಯಿಸುವ ಕಾರಣದಿಂದ ಬಸವಣ್ಣನವರು ಜ್ಞಾನರೂಪಿ ವಾಹನವಾಗಿದ್ದರು.ಜಗತ್ತಿನ ಸೃಷ್ಟಿಯ ಸಂಕಲ್ಪದಿಂದ ಶಿವನು ನಟರಾಜನಾಗಿ ನಾಟ್ಯಕ್ಕೆ ನಿಂತಾಗ ಬಸವಣ್ಣನವರು ಶಿವನಾಟ್ಯಕ್ಕೆ ಪೂರಕವಾದ ಚೈತನ್ಯವೆಂಬ ವಾಹನವಾಗಿದ್ದರು.ಶಿವನು ಹರನಾಗಿ ತೋರ್ದು ಜಗದೋದ್ಧಾರದ ಲೀಲೆಯನ್ನಾಡುವ ಸಂದರ್ಭದಲ್ಲಿ ಬಸವಣ್ಣನವರು ಶಿವನನ್ನು ಹೊತ್ತು ತಿರುಗುವ ವೃಷಭನೆಂಬ ವಾಹನವಾಗಿದ್ದರು.ತನ್ನ ಕಾರಣದಿಂದ ಬಸವಣ್ಣನವರು ಹತ್ತು ಹಲವು ಭವಗಳನ್ನು ಎತ್ತುತ್ತಿರುವುದು ಸಾಕು,ಭಕ್ತ ಬಸವಣ್ಣನವರಿಗೆ ಮೋಕ್ಷ ಕೊಡಬೇಕು ಎಂದು ಸಂಕಲ್ಪಿಸಿ ಶಿವನು ಜಂಗಮನಾದಾಗ ಬಸವಣ್ಣನವರು ಭಕ್ತನೆಂಬ ವಾಹನವಾದೆ ಎಂದು ಹೇಳಿಕೊಂಡಿದ್ದಾರೆ.ಇದು ಬಸವಣ್ಣನವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ವಚನವಾಗಿದ್ದು ಅವರು ಬಸವಣ್ಣನಾಗಿ ಕರುನಾಡಿನಲ್ಲಿ ಶಿವಕಾರಣ ಸಂಭವರಾಗಿ ಅವತರಿಸಿದಾಗ ಶಿವನು ಅಲ್ಲಮ ಪ್ರಭು ಎನ್ನುವ ಜಂಗಮ ಲೀಲೆ ನಟಿಸುತ್ತಾನೆ.

ಈ ವಚನದಲ್ಲಿ ಬಸವಣ್ಣನವರು ಶಿವಧರ್ಮ ಸ್ಥಾಪನೆ,ಶಿವಮತಪಾರಮ್ಯದ ಪ್ರತಿಷ್ಠಾಪನೆ ತಮ್ಮ ಜೀವಿತೋದ್ದೇಶ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ‘ವಾಹನ ‘ಎಂದರೆ ಮಾಧ್ಯಮ ಎಂದರ್ಥ.ಶಿವತತ್ತ್ವಪ್ರಚಾರಕ್ಕಾಗಿ ಬಸವಣ್ಣನವರು ಎತ್ತಿದ ಅವತಾರವೇ ಅವರ ವಾಹನ ತತ್ತ್ವ.ವಾಹನವು ಹೇಗೆ ಅದರಲ್ಲಿ ಕುಳಿತವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವುದೋ ಹಾಗೆಯೇ ಬಸವಣ್ಣನವರು ಶಿವತತ್ತ್ವ ಪ್ರಚಾರಕರಾಗಿ ಶಿವಧರ್ಮವನ್ನು ಭೂಮಿಯಲ್ಲಿ ಎತ್ತಿಹಿಡಿದರು.ಶಿವನಿಗು ಬಸವನಿಗೂ ಜಗದಾದಿ ಸಂಬಂಧವಿದೆ.ಶಿವನಿದ್ದಲ್ಲಿ ಬಸವನಿದ್ದಾನೆ ; ಬಸವ ಇದ್ದಲ್ಲಿ ಶಿವ ಬಂದಿದ್ದಾನೆ.ಬಸವಣ್ಣನವರು ಇತರ ಧಾರ್ಮಿಕ ಪುರುಷರುಗಳು,ಮತೋದ್ಧಾರಕರುಗಳು ಹೇಳಿಕೊಂಡಂತೆ ತಮ್ಮನ್ನು ತಾವು ಜಗದೋದ್ಧಾರಕರಾದ ಅವತಾರಿ ಎಂದು ಕರೆದುಕೊಂಡಿಲ್ಲ,ಬದಲಿಗೆ ಶಿವವಾಹನನಾಗಿ ಶಿವಧರ್ಮದ ಹಿರಿಮೆ ಗರಿಮೆಗಳ ಪ್ರಸಾರ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದು ಕೂಡ ಅವರ ವಿನಯಸಂಪನ್ನ ವ್ಯಕ್ತಿತ್ವಮಹತಿಯ ಕುರುಹು.

About The Author