ಶ್ರಾವಣ ಮಾಸ ೨೦೨೪ : ಬಸವಣ್ಣನವರ ಶಿವದರ್ಶನ

ಶ್ರಾವಣ ಮಾಸ ೨೦೨೪ 

ಬಸವಣ್ಣನವರ ಶಿವದರ್ಶನ : ಮುಕ್ಕಣ್ಣ ಕರಿಗಾರ

ದರ್ಶನದ ಭೂಮಿಕೆ

‘ ಕರ್ನಾಟಕದ ಸಾಂಸ್ಕೃತಿಕ ನಾಯಕ’ರೆಂದು ಕರ್ನಾಟಕ ಸರಕಾರದಿಂದ ಗುರುತಿಸಿ,ಗೌರವಿಸಲ್ಪಟ್ಟ ಬಸವಣ್ಣನವರು ವಿಶ್ವವಿಭೂತಿ ಪುರುಷರಾದ ಕರ್ನಾಟಕದ ಸಾರ್ವಕಾಲಿಕ ಹೆಮ್ಮೆಯಾದ ಮಹೋನ್ನತ ಚೇತನರು.ಆದರೆ ಬಸವಣ್ಣನವರನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಜನರು ಬಸವಣ್ಣನವರನ್ನು ತಮತಮಗೆ ತಿಳಿದಂತೆ ಅರ್ಥೈಸಿಕೊಂಡು ತಮ್ಮ ಅಜ್ಞಾನ,ಅವಿವೇಕತನವೇ ಪ್ರಮಾಣವೆಂದು ಭ್ರಮಿಸಿ,ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ.ಬಸವಣ್ಣನವರು ವೀರಶೈವ ಮತಸ್ಥಾಪಕರಲ್ಲ ಎನ್ನುವವರು ಒಂದು ತೆರನಾಗಿ ವಾದಿಸಿದರೆ ಬಸವಣ್ಣನವರನ್ನು ಲಿಂಗಾಯತಮತಸ್ಥಾಪಕರನ್ನಾಗಿ ಕಾಣಬಯಸುವ ಜನರು ಬಸವಣ್ಣನವರನ್ನು ಮತ್ತೊಂದು ತೆರನಾಗಿ ಅರ್ಥೈಸಿಕೊಂಡಿದ್ದಾರೆ.ಪಂಚಾಚಾರ್ಯ ಪರಂಪರೆಯ ವೀರಶೈವರಿಗಿಂತ ಹೆಚ್ಚಿನ ಬಸವಾಪಚಾರ,ಬಸವದ್ರೋಹ ಘಟಿಸುತ್ತಿರುವುದು ಬಸವಾನುಯಾಯಿಗಳು ಎಂದು ಹಣೆಪಟ್ಟಿಕಟ್ಟಿಕೊಂಡು ಓಡಾಡುವ ಮಂದಿಯಿಂದ. ವಿಶ್ವವಿಭೂತಿ ಪುರುಷರಾದ ಬಸವಣ್ಣನವರನ್ನು ಪೆಟೆಂಟ್ ಪಡೆದು ಅವರನ್ನು ಕೇವಲ ಲಿಂಗಾಯತ ಧರ್ಮಕ್ಕೆ ಸೀಮಿತಗೊಳಿಸುವ ಮಂದಿ ಬಸವಣ್ಣನವರನ್ನು ಶಿವನಿಂದ ದೂರ ಇಡುವ ಪ್ರಯತ್ನ ಮಾಡುತ್ತಿದ್ದಾರೆ.ಬಸವಣ್ಣನವರು ವೀರಶೈವ ಮತಸ್ಥಾಪಕರಲ್ಲದಿರಬಹುದು,ಲಿಂಗಾಯತ ಧರ್ಮದ ಸ್ಥಾಪನೆಯೂ ಅವರ ಉದ್ದೇಶ ಅಲ್ಲದೆ ಇರಬಹುದು ; ಆದರೆ ಬಸವಣ್ಣನವರು ಮಹಾನ್ ಶಿವಭಕ್ತರು,ಶಿವಕಾರಣ,ಶಿವಕಾರ್ಯ ಸಂಭವರು.ಶೈವ ಧರ್ಮ,ಸಂಸ್ಕೃತಿಯ ಪುನರುತ್ಥರಣವೇ ಬಸವಣ್ಣನವರ ಜೀವನದ ಗುರಿಯಾಗಿತ್ತು.ಬಸವಣ್ಣನವರ ಸಮಾಜಸುಧಾರಣೆಯ ಕಾರ್ಯವು ಅವರ ಶಿವಭಕ್ತಿ,ಶಿವನಿಷ್ಠೆಯ ವಿಸ್ತೃತಭಾಗವೇ ಹೊರತು ಮತ್ತೇನಲ್ಲ.

ಬಸವಣ್ಣನವರ ಬಗ್ಗೆ ಬರೆಯಲು,ಬಸವಣ್ಣನವರನ್ನು ಅರ್ಥೈಸಿಕೊಳ್ಳಲು ಅವರ ವಚನಗಳೇ ಪ್ರಮುಖ ಆಧಾರಗಳು,ಪ್ರಮಾಣಿತ ಸಾಹಿತ್ಯ.ಬಸವಣ್ಣನವರ ಬಗ್ಗೆ ಕಲ್ಪಿಸಿಕೊಂಡು ಬರೆದವರಿಗಿಂತ ಬಸವಣ್ಣನವರ ವಚನಗಳಲ್ಲಿಯೇ ಬಸವಣ್ಣನವರನ್ನು ಕಾಣಬೇಕು.ಬಸವಣ್ಣನವರ ಉಪಲಬ್ಧ ಮೂಲವಚನಗಳು ೯೬೧.ಇತ್ತೀಚಿನ ಕೆಲವು ಜನ ಸಂಪಾದಕರುಗಳು ಕೆಲವು ಜನ ವೀರಶೈವ ಕವಿಗಳ ಕೃತಿಗಳಲ್ಲಿನ ವಚನಗಳನ್ನು ಸೇರಿಸಿ ಬಸವಣ್ಣನವರ ಹೆಚ್ಚಿನ ಸಂಖ್ಯೆಯ ವಚನಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಬಸವಣ್ಣನವರ ಮೂಲ ವಚನಗಳಲ್ಲಿ ಬಸವಣ್ಣನವರ ಶಿವವಿಭೂತಿ ವ್ಯಕ್ತಿತ್ವ ಪ್ರಕಟಗೊಂಡ ನೂರಾರು ವಚನಗಳಿವೆ.ಆ ವಚನಗಳನ್ನು ಆಧರಿಸಿ ನಾವಿಲ್ಲಿ ತಮ್ಮ ವಿಕಲಾಂಗಬುದ್ಧಿಯ ವಿತಂಡವಾದದಿಂದ ಜನಸಾಮಾನ್ಯರನ್ನು ಗೊಂದಲಕ್ಕೆ ಕೆಡಹುವ ಕುತ್ಸಿತಮತಿಗಳಿಂದ ಗೊಂದಲಕ್ಕೀಡಾದ ಬಸವಣ್ಣನವರ ನಿಜ ಭಕ್ತರು,ಅನುಯಾಯಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ೨೦೨೪ ರ ಈ ಶ್ರಾವಣ ಮಾಸವನ್ನು ‘ ಬಸವಣ್ಣನವರ ಶಿವದರ್ಶನ ‘ ಮಾಸವನ್ನಾಗಿ ಬಸವಣ್ಣನವರು ಕಂಡುಂಡ ಶಿವದರ್ಶನವನ್ನು ಪರಿಚಯಿಸುತ್ತಿದ್ದೇವೆ.ನಾವು ಪ್ರೊ.ಬಸವನಾಳ ಶಿವಲಿಂಗಪ್ಪನವರು ಸಂಪಾದಿಸಿದ ‘ ಬಸವಣ್ಣನವರ ಷಟ್ ಸ್ಥಳದ ವಚನಗಳು’ ಕೃತಿಯನ್ನು ಆಧರಿಸಿ ‘ ಬಸವಣ್ಣನವರ ಶಿವದರ್ಶನ ಮಾಡಿಸುತ್ತಿದ್ದೇವೆ ಬಸವಣ್ಣನವರ ನಿಜ ಭಕ್ತರುಗಳಿಗೆ.

About The Author