ಸಿದ್ದರಾಮಯ್ಯಗೆ ಕಳಂಕ ತರುವ ಪ್ರಯತ್ನ ಅಹಿಂದ ಜನ ಸಂಘ ಸಹಿಸಲ್ಲ ಅಯ್ಯಪ್ಪಗೌಡ ಎಚ್ಚರಿಕೆ

ಬೆಂಗಳೂರು : ಸಲ್ಲದ ನೆಪಗಳನ್ನಿಟ್ಟುಕೊಂಡು ಅಹಿಂದ ನಾಯಕರಾಗಿರುವ ಸಿಎಂ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವ ಕುತಂತ್ರವನ್ನು ಬಿಜೆಪಿ, ಜೆಡಿಎಸ್‌ ನಾಯಕರು ಈ ಕೂಡಲೇ ನಿಲ್ಲಿಸಬೇಕು. ಒಂದು ವೇಳೆ ಹೀಗೇ ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರುವ ಯತ್ನವನ್ನು ಮುಂದುವರಿಸಿದರೆ ದಂಗೆ ಏಳಬೇಕಾಗುತ್ತದೆ ಎಂದು ಕರ್ನಾಟಕ ಅಹಿಂದ ಜನ ಸಂಘ (ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಯ್ಯಪ್ಪಗೌಡ ಎಚ್ಚರಿಕೆ ನೀಡಿದರು.

ಪತ್ರಿಕಾ ಹೇಳಿಕೆ ನೀಡಿದ ಅವರು, ಬಿಜೆಪಿ ಜೆಡಿಎಸ್ ಪಕ್ಷದವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ಹೀಗಾಗಿ ಮುಡಾ ಹಾಗೂ ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಖಾಸುಮ್ಮನೆ ಸಿದ್ದರಾಮಯ್ಯ ಅವರ ಹೆಸರನ್ನು ತಳಕು ಹಾಕುತ್ತಿದ್ದಾರೆ. ಈ ಹಿಂದೆಯೂ ಹಿಂದುಳಿದ ವರ್ಗದ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮಸಿಂಗ್ ಅಧಿಕಾರದಲ್ಲಿದ್ದಾಗಲೂ ಅವರ ವಿರುದ್ದ ಇಂತಹದೇ ಷಡ್ಯಂತ್ರ ರೂಪಿಸಲಾಗಿತ್ತು. ಆದರೆ ಈಗ ಅಹಿಂದ ಸಮುದಾಯ ಜಾಗೃತವಾಗಿದೆ. ಬಿಜೆಪಿ-ಜೆಡಿಎಸ್ ನಾಯಕರು ಕುತಂತ್ರ ನಿಲ್ಲಿಸದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಸಂದೇಶ ರವಾನಿಸಿದರು.

ಬಿಜೆಪಿ-ಜೆಡಿಎಸ್‌ ನವರ ಮೆದುಳು ಖಾಲಿಯಾಗಿದೆ. ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಅದಕ್ಕಾಗಿ ತಲೆಬುಡವಿಲ್ಲದ ಹಗರಣಗಳಲ್ಲಿ ಯಾವುದೇ ದಾಖಲೆಗಳಿಲ್ಲದ ಪ್ರಕರಣದಲ್ಲಿ ಅನಗತ್ಯವಾಗಿ ಸಿಎಂ ಸಿದ್ದರಾಮಯ್ಯನವರ ಹೆಸರು ಬಳಸಿಕೊಂಡು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

About The Author