ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನತೆಯ ಹಿತಚಿಂತಕರಾಗುವುದು ಯಾವಾಗ ?

ಮೂರನೇ ಕಣ್ಣು
ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನತೆಯ ಹಿತಚಿಂತಕರಾಗುವುದು ಯಾವಾಗ ?
ಮುಕ್ಕಣ್ಣ ಕರಿಗಾರ
       ನಮ್ಮ ಬಹುತೇಕ ಸರಕಾರಿ ಅಧಿಕಾರಿಗಳು ಇಂದಿಗೂ ತಾವು ಬ್ರಿಟಿಷರ ಪ್ರತಿನಿಧಿಗಳು ಎನ್ನುವಂತೆ ಹುಸಿ ಪೊಗರಿನಿಂದ ವರ್ತಿಸುತ್ತಿದ್ದಾರೆ.ಪ್ರಜೆಗಳೇ ಪ್ರಭುಗಳಾದ ಸ್ವತಂತ್ರ ಭಾರತದಲ್ಲಿ ತಾವು ಪ್ರಜಾಸೇವೆಗಾಗಿಯೇ ಸರಕಾರಿ ಅಧಿಕಾರಿಗಳಾಗಿದ್ದೇವೆ ಎನ್ನುವುದನ್ನು ಮರೆತು ತಾವು ಜನರನ್ನು ಆಳಲೆಂದೇ ಹುಟ್ಟಿದವರು ಎಂಬಂತೆ ವರ್ತಿಸುತ್ತಿದ್ದಾರೆ.ಶಾಸಕರು,ಸಚಿವರುಗಳ ಎದುರು ಮಂಡಿಯೂರಿ ಕುಳಿತುಕೊಳ್ಳುವ ಸರಕಾರಿ ಅಧಿಕಾರಿಗಳು ಜನಸಾಮಾನ್ಯರನ್ನು ಬಹಳ ಲಘುವಾಗಿ ಕಾಣುತ್ತಾರೆ.ಜನಸಾಮಾನ್ಯರು ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಲು ಸರಕಾರಿ ಕಛೇರಿಗೆ ಬಂದಾಗ ಅವರಿಗೆ ಭೇಟಿ ನಿರಾಕರಿಸುತ್ತಾರೆ ಇಲ್ಲವೆ ಸಾಹೇಬರು ಬ್ಯುಸಿಯಾಗಿದ್ದಾರೆ ಎಂದು ಹೇಳಿ ಕಳಿಸುತ್ತಾರೆ.ನಮ್ಮಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಯಾವಾಗಲೂ ಬ್ಯುಸಿಯೆ ! ಸರಕಾರಿ ಅಧಿಕಾರಿಗಳು ಅಷ್ಟೊಂದು ಕಾರ್ಯದಕ್ಷತೆಯಿಂದ ಕರ್ತವ್ಯನಿರ್ವಹಿಸುತ್ತಿದ್ದರೆ ಯಾವ ಇಲಾಖೆಯಲ್ಲೂ ಕಡತಗಳು,ಸಮಸ್ಯೆಗಳು ಪೆಂಡಿಂಗ್ ಇರುತ್ತಿರಲಿಲ್ಲ!
        ಸರಕಾರಿ ಅಧಿಕಾರಿಗಳು ತಾವು ಸಾರ್ವಜನಿಕರ ತೆರಿಗೆಯ ಹಣದಿಂದ ತಮ್ಮ ಸಂಬಳ ಸವಲತ್ತುಗಳನ್ನು ಪಡೆಯುತ್ತಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಂಡು ಸಾರ್ವಜನಿಕರ ಬಗೆಗಿನ ತಮ್ಮ ಉದಾಸೀನ ಇಲ್ಲವೆ ಉಡಾಫೆಯ ಧೋರಣೆಯನ್ನು ಬದಲಿಸಿಕೊಳ್ಳಬೇಕು.ತಮ್ಮ ಭೇಟಿಗೆ ದೂರದ ಹಳ್ಳಿಗಳಿಂದ ಜನರು ಬಂದಾಗ ಐದ್ಹತ್ತು ನಿಮಿಷಗಳ ಕಾಲ ಅವರ ಕುಂದುಕೊರತೆಯನ್ನು ಕೇಳಿದರೆ ಏನೂ ತೊಂದರೆ ಆಗುವುದಿಲ್ಲ.ಆದರೆ ಅಧಿಕಾರಿಗಳಲ್ಲಿ ಜನರಿಗೆ ಸ್ಪಂದಿಸುವ ಮನಸ್ಸು ಇರುವುದಿಲ್ಲ.ದಿನವಿಡೀ ಸಾರ್ವಜನಿಕರನ್ನು ಭೇಟಿಯಾಗದೆ ಇದ್ದರೂ ಪರವಾಯಿಲ್ಲ,ದಿನದ ಒಂದಷ್ಟು ಸಮಯವಾದರೂ ಸಾರ್ವಜನಿಕರ ಭೇಟಿಗೆ ಅವಕಾಶನೀಡಬಹುದಲ್ಲ.ಸರಕಾರವೂ ಹಾಗೆಯೇ.ಸರಕಾರದ ವಿಧಾನಸೌಧ,ಸಚಿವಾಲಯಗಳಲ್ಲೇ ಸಾರ್ವಜನಿಕರ ಭೇಟಿಯ ಸಮಯ ಮಧ್ಯಾಹ್ನ 3.00 ರಿಂದ 5.00 ಘಂಟೆ ಎಂದು ಬೋರ್ಡ್ ತಗುಲಿಸಿರುತ್ತಾರೆ.ಬೆಂಗಳೂರಿನ ಕಛೇರಿಗಳನ್ನೇನೋ ಒಪ್ಪಬಹುದು.ಗ್ರಾಮ,ಹೋಬಳಿ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಈ ಬೋರ್ಡ್ಗಳನ್ನು ತಗುಲಿಹಾಕಿಕೊಂಡರೆ ಹೇಗೆ ? ತಾಲೂಕಾ ಕಛೇರಿಗಳಿಗೆ ಬರುವವರು ಹಳ್ಳಿಯ ಜನತೆ.ಅವರು ತಮ್ಮ‌ಕೆಲಸ ಕಾರ್ಯಗಳನ್ನು ಬಿಟ್ಟು ಬೆಳ್ಳಂಬೆಳಿಗ್ಗೆ ತಾಲೂಕಾ ಕಛೇರಿಗಳಿಗೆ ಬಂದರೆ ನವಾಬಗಿರಿಯ ಈ ಸಾಹೇಬರುಗಳ ದರ್ಶನಭಾಗ್ಯವೇ ಲಭಿಸುವುದಿಲ್ಲ.ಆ ಸಭೆ,ಈ ಮೀಟಿಂಗ್ ಅಂತ ದಿನಕ್ಕೆ ಹತ್ತಾರು ಸಭೆಗಳನ್ನು ಏರ್ಪಡಿಸಿಕೊಂಡು ಹೊತ್ತುಗಳೆಯುವ ಅಧಿಕಾರಿಗಳಿಗೆ ಜನರ ಕಷ್ಟ ಕಾರ್ಪಣ್ಯಗಳು ಅರ್ಥವಾಗುವುದಿಲ್ಲ.ಬಾಯಿಸತ್ತ ಬಡಜನರ ಸಮಸ್ಯೆಗಳು ತಲುಪುವುದೇ ಇಲ್ಲ ಸರಕಾರಿ ಅಧಿಕಾರಿಗಳ ಜಡದೇಹಗಳಿಗೆ.ಮಧ್ಯಾಹ್ನ 12 ರಿಂದ 1.30ರವರೆಗೆ ಗ್ರಾಮ,ಹೋಬಳಿ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಬೇಕು.
          ಸಾರ್ವಜನಿಕರು ಒಂದೊಮ್ಮೆ ತಮ್ಮ ಛೇಂಬರ್ ನಲ್ಲಿ ಬಂದಾಗಲೂ ಅವರನ್ನು ಕುಳಿತುಕೊಳ್ಳಿ ಎಂದು ಹೇಳುವ ಸೌಜನ್ಯವೂ ಇಲ್ಲದಂತೆ ಅವರು ನಿಂತುಕೊಂಡು ಮಾತನಾಡುವ ಹಾಗೆ ಮಾಡುತ್ತಾರೆ ಸರಕಾರಿ ಅಧಿಕಾರಿಗಳು.ಕೆಲವು ಜನ ಸರಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವವರೂ ಇದ್ದಾರೆ.ಆದರೆ ಬಹುತೇಕ ಜನ ಸರಕಾರಿ ಅಧಿಕಾರಿಗಳು ಸಾರ್ವಜನಿಕರು ತಮ್ಮೆದುರು ನಿಂತೇ ಮಾತನಾಡಬೇಕು ಎನ್ನುವ ನಿಜಾಮಗಿರಿಯ ಮನೋಸ್ಥಿತಿಯಲ್ಲೇ ಇದ್ದಾರೆ.ಕೆಲವು ಮಹಾನುಭಾವ ಅಧಿಕಾರಿಗಳಂತೂ ತಮ್ಮ ಮುಂದೆ ಖುರ್ಚಿಯನ್ನೇ ಇಟ್ಟಿರುವುದಿಲ್ಲ ಜನರು ತಮ್ಮೆದುರು ಕುಳಿತುಕೊಂಡರೆ ತಮ್ಮ ಪ್ರತಿಷ್ಠೆ ಏನಾಗಬೇಡ ಎನ್ನುವ ಅಹಮಿಕೆಯಿಂದ.ಭಾರತವು ಸ್ವತಂತ್ರಗೊಂಡು ಏಳುದಶಕಗಳು ಮುಗಿಯುತ್ತ ಬಂದಿದ್ದರೂ ನಮ್ಮ ಸರಕಾರಿ ಅಧಿಕಾರಿಗಳಲ್ಲಿ ಈ ಪ್ರವೃತ್ತಿ ಇದೆ ಎನ್ನುವುದು ಬೇಸರದ ಸಂಗತಿ.
         ಸರಕಾರಿ ಅಧಿಕಾರಿಗಳ ಜನವಿರೋಧಿ ನೀತಿ ನಿಲುವುಗಳನ್ನು ಸರಿಪಡಿಸಬೇಕಾದವರು ಯಾರು ? ಮಂತ್ರಿಗಳು,ಮುಖ್ಯಮಂತ್ರಿಗಳು ತಾನೆ ? ಅಪರೂಪಕ್ಕೊಮ್ಮೆ ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ಎರಡುಮೂರು ಘಂಟೆಗಳ ಕಾಲ ಕಾಟಾಚಾರಕ್ಕೆ ಪಾಲ್ಗೊಳ್ಳುವ ಯಾವ ಸಚಿವರೂ ಜನರ ಸಮಸ್ಯೆಗಳಿಗೆ ಕಿವಿಯಾಗಿಲ್ಲ.ಸರಕಾರಿ ಅಧಿಕಾರಿಗಳು ಒಪ್ಪಿಸುವ ಪ್ರಗತಿವರದಿಗಳನ್ನೇ ಕಣ್ಣಾಡಿಸಿ ಹ್ಞೂಂಗುಟ್ಟುವ ಮಂತ್ರಿಮಹಾನುಭಾವರುಗಳಿಗೆ ಯಾವ ಅಧಿಕಾರಿ ಹೇಗಿದ್ದಾರೆ ಎಂದು ತಿಳಿದುಕೊಳ್ಳುವಷ್ಟು ವ್ಯವಧಾನವೇ ಇರುವುದಿಲ್ಲ.ಕೆಡಿಪಿ ಸಭೆಯ ಹಿಂದಿನ ದಿನ ರೈಲ್ವೆ ಟಿಕೆಟ್ ಬುಕ್ ಮಾಡುವ ಮಂತ್ರಿಗಳು ಅದೇ ದಿನ ಸಂಜೆ ಬೆಂಗಳೂರಿಗೆ ಮರುಪ್ರಯಾಣದ ಟಿಕೆಟನ್ನೂ ಬುಕ್ ಮಾಡಿರುತ್ತಾರೆ !ತಾವು ಉಸ್ತುವಾರಿ ಸಚಿವರುಗಳಾದ ಜಿಲ್ಲೆಯ ಜನರ ಸಮಸ್ಯೆಗಳೇನು,ಅವುಗಳ ಪರಿಹಾರಕ್ಕೆ ಏನು ಮಾಡಬೇಕು ಎನ್ನುವ ಆಲೋಚನೆ ಮಂತ್ರಿ ಮಹೋದಯರುಗಳಲ್ಲಿ ಇರುವುದಿಲ್ಲ.ವಿಧಾನಸೌಧದ ತಮ್ಮ ಖುರ್ಚಿಯನ್ನು  ಯಾರಾದರೂ ಕಬಳಿಸುವರೋ ಎನ್ನುವ ಆತಂಕದಲ್ಲಿದ್ದಂತೆ ಬೆಂಗಳೂರಿಗೆ ಮರುಪ್ರಯಾಣ ಹೊರಡುವ ಸಚಿವರುಗಳೇ ಹೆಚ್ಚು ಇದ್ದಾರೆ.ಹೆಚ್ಚೆಂದರೆ ಸರಕಾರಿ ಯೋಜನೆಗಳ ಉದ್ಘಾಟನೆ,ಶಂಕುಸ್ಥಾಪನೆ ,ಫಲಾನುಭವಿಗಳಿಗೆ ಪ್ರಯೋಜನಗಳ ವಿತರಣೆಯಂತಹ ಸರಕಾರಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಚಿವ ಮಹಾನುಭಾವರುಗಳು ಸಾರ್ವಜನಿಕರನ್ನು ಭೇಟಿಯಾಗುವುದೇ ಇಲ್ಲ ! ಜಿಲ್ಲಾ ಉಸ್ತುವಾರಿ ಸಚಿವರುಗಳು ತಮ್ಮ ಜಿಲ್ಲಾ ಭೇಟಿಯ ದಿನಗಳಂದು ಕನಿಷ್ಟ ಎರಡು ತಾಸುಗಳ ಅವಧಿಯನ್ನಾದರೂ ಸಾರ್ವಜನಿಕರ  ಭೇಟಿಗೆ ಮೀಸಲಿಡಬೇಕು.ಪಕ್ಷಗಳ ಜಿಲ್ಲಾ ಕಛೇರಿಗಳಿಗೆ ಭೇಟಿ ನೀಡುವ,ಪಕ್ಷದ ಕಾರ್ಯಕರ್ತರುಗಳಿಗೆ ಭೇಟಿಗೆ ಸಮಯ ನೀಡುವ ಸಚಿವರುಗಳಿಗೆ ಸಾರ್ವಜನಿಕರ ಭೇಟಿಗೆ ಸಮಯ ಇರುವುದಿಲ್ಲ ! ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲ ಸಚಿವರುಗಳಿಗೆ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯಮಾಡಿ ಆದೇಶ ಹೊರಡಿಸಿದ್ದಾರೇನೋ ನಿಜ.ಆದರೆ ಅದು ಎಷ್ಟು ಫಲಪ್ರದವಾಗುತ್ತಿದೆ ಎಂದು ಪರಾಮರ್ಶೆ ಮಾಡುವ ಗೋಜಿಗೆ ಮುಖ್ಯಮಂತ್ರಿಯವರೂ ಹೋಗಿಲ್ಲ.ಹಾಗಾಗಿ ಎಲ್ಲ ಸರಕಾರಿ ಸಭೆ,ಕಾರ್ಯಕ್ರಮಗಳಂತೆ ಇದೊಂದು ಕಾಟಾಚಾರದ ಕಾರ್ಯಕ್ರಮವಾಗಿದೆಯೇ ಹೊರತು ನಿರೀಕ್ಷಿತ ಪ್ರಯೋಜನ ನೀಡಿಲ್ಲ.ಜನಸಂಪರ್ಕ ಸಭೆಗಳಲ್ಲಿ ಪಾಲ್ಗೊಳ್ಳುವ ಎಷ್ಟುಜನ ಜಿಲ್ಲಾ ಉಸ್ತುವಾರಿ ಸಚಿವರುಗಳು ಜನಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ? ಜನಸಂಪರ್ಕ ಸಭೆಯಲ್ಲಿ ನೀಡಲ್ಪಟ್ಟ ಮನವಿಗಳನ್ನು ಜಿಲ್ಲಾಧಿಕಾರಿಗಳಿಗೋ,ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೋ ಇಲ್ಲವೋ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೋ ವರ್ಗಾಯಿಸಿ ಕೈ ತೊಳೆದುಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವರುಗಳು ಎಂದಾದರೂ ಸ್ವಯಂಸ್ಫೂರ್ತಿಯಿಂದ ಜನರ ಮನವಿಗಳತ್ತ ಕಣ್ಣಾಡಿಸಿದ್ದಾರೆಯೆ ?ಚುನಾವಣೆಗಳಲ್ಲಿ ಗೆಲ್ಲಲು ಸಚಿವರುಗಳಿಗೆ ಉಸ್ತುವಾರಿ ನೀಡಿ ಅವರಿಂದ ಪಕ್ಷದ ಅಭ್ಯರ್ಥಿಗಳ ಗೆಲುವು ನಿರೀಕ್ಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಂದ ಜನಸಾಮಾನ್ಯರ ಸಮಸ್ಯೆಗಳ ಪರಿಹಾರವನ್ನು ನಿರೀಕ್ಷಿಸಬಾರದೇಕೆ ? ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ‌ ಜನತೆಯ ಸಮಸ್ಯೆಯನ್ನು ಪರಿಹರಿಸುವ ‘ ಟಾರ್ಗೆಟ್’ ನೀಡಬಾರದೇಕೆ ? ಆದರೆ ಅದನ್ನು ಮಾಡುವವರು ಯಾರು ? ನಮ್ಮ ಜನಸಾಮಾನ್ಯರಂತೂ ಅಷ್ಟು ಧೈರ್ಯ ತೋರಲಾರರು. ಪ್ರಗತಿಪರರು,ಪ್ರಬುದ್ಧರೆಂದುಕೊಳ್ಳುವವರಿಗೆ ಅವರದ್ದೇ ಆದ ಸಮಸ್ಯೆಗಳಿವೆ.ಜನತೆಯ ಗೋಳನ್ನು ಕೇಳುವರಾರು ?
             ೦೫.೦೭.೨೦೨೪

About The Author