ಕಲ್ಯಾಣ ಕಾವ್ಯ : ಆತ್ಮಜ್ಞಾನಿ  : ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ
  ಆತ್ಮಜ್ಞಾನಿ
        ಮುಕ್ಕಣ್ಣ ಕರಿಗಾರ
      ಧೀರನವನು ಆತ್ಮಜ್ಞಾನಿಯು
      ಮೀರಿಹನು ಎಲ್ಲವನು
      ಸಿಲುಕದಿಹನಾವುದಕು
      ನಿಲುಕದಿಹನಾರಿಗು.
      ತನ್ನಿಚ್ಛೆಯಂತೆ ತಾನಾಡುವನು
      ಅನ್ಯರಿಚ್ಛೆಯಂತೆ ನಡೆಯನೆಂದೂ
     ಲೋಕಜನರ ಸ್ತುತಿನಿಂದೆಗಳಿಗೆ ನಿರ್ಲಿಪ್ತನಿಹನು
  ಕಾಕುಜನರ ಕುಹಕ ಕುತ್ಸಿತಗಳ ಲಕ್ಷಿಸನು.
      ಲೋಕಾತೀತನಿಹನಾತನಾತ್ಮಜ್ಞಾನಿಯು
 ಬೇಕಿಲ್ಲವವನಿಗೆ ಆವ ಸದ್ದುಗದ್ದಲ ಸಡಗರ ಸಂಭ್ರಮಗಳು
 ಬೇಕೇನು ಆತ್ಮಜ್ಞಾನಿಗೆ ಮರುಳರಾಡುವ ಆಟ ನಾಟಕಗಳು ?
 ಲೋಕೇಶ್ವರನಪಥದಿ ನಡೆದವನಿಗೆ ಲೋಕದಹಂಗೇಕೆ ?
    ವ್ರತನಿಯಮಗಳ ಆಚರಿಸನಾತನು
 ಮತಿಗೇಡಿಗಳ ಪರ್ವ ಉತ್ಸವಗಳಲ್ಲಿ ಅನಾಸಕ್ತನು
 ಗತಿಗೆ ಪಥವಾಗಿ ನಡೆದ ಮಹಾಪಥಿಕನವನು
ಅತಿಭ್ರಮಿತಮರುಳೆರೆಣಿಕೆಗೆ ಸಿಲುಕನು.
    ಜ್ಯೋತಿಯಾಗಿ ಬೆಳಗುವನು ಆತ್ಮಜ್ಞಾನಿಯು
  ಕೋತಿಮಾಣಿಕ್ಯದ ಬೆಲೆಯನರಿಯದಂದದಿ
 ಜಾತಿಮತಧರ್ಮಗಳೆಣಿಸುವಲ್ಪರ ಧಿಕ್ಕರಿಸಿ
  ಜ್ಯೋತಿಯಾಗಿ ಬೆಳಗುತಿಹನು ಭುವನವನು.
   ಸಕಲ ಚರಾಚರಗಳಿಗೆ ಹಿರಿಯನವನು
  ವಿಕಲಮತಿಗಳರಿಯರು ಆತ್ಮಜ್ಞಾನಿಯನು
  ಅಖಿಲಲೋಕದೊಳುತ್ತಮನು ಆತ್ಮಜ್ಞಾನಿಯು
 ಬಕುಲದ ಹೂವಂತೆ ಬೇರಿಹುದಾತ್ಮಜ್ಞಾನಿಯ ನಿಲವು.
    ಆತನಿಗೆ ಶರಣೆನ್ನಿ
    ಆತನಿಗೆ ಜಯವೆನ್ನಿ
    ಮಾತುಮನಗಳಿಗೆ ಸಿಲುಕದ ಮಹಿಮಗೆ
  ಜ್ಯೋತಿತತ್ತ್ವದಿ ಜಗವ ಬೆಳಗುವ ಮುಕ್ಕಣ್ಣ ಶಿವನಣುಗಗೆ.
       ‌‌೦೪.೦೭.೨೦೨೪

About The Author