ತಾಯಿ ದುರ್ಗಾದೇವಿಯ ಅನುಗ್ರಹ ,ಗುರುಗಳಾಗಿ ದೊರೆತರು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು

ತಾಯಿ ದುರ್ಗಾದೇವಿಯ ಅನುಗ್ರಹ ,ಗುರುಗಳಾಗಿ ದೊರೆತರು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು
ಮುಕ್ಕಣ್ಣ ಕರಿಗಾರ
        ಶ್ರೀದೇವಿ ಪುರಾಣವನ್ನು ಓದುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.ಇದು ಒಳ್ಳೆಯದೆ.ನಾನಂತೂ ಯಾರಾದರೂ’ ದೇವಿಪುರಾಣ ಓದುತ್ತೇನೆ’ ಎಂದು ನನ್ನನ್ನು ಕೇಳಿದರೆ ‘ಅವಶ್ಯವಾಗಿ ಓದಿ’ ಎನ್ನುತ್ತೇನಲ್ಲದೆ ಶ್ರೀದೇವಿಪುರಾಣ ಪಾರಾಯಣದ ವಿಧಿ ವಿಧಾನಗಳನ್ನು ವಿವರಿಸುತ್ತೇನೆ.ಶಿವಶಕ್ತ್ಯಾನುಗ್ರಹದ ಹಕ್ಕು ಎಲ್ಲರಿಗೂ ಇರುವುದರಿಂದ ಶ್ರೀದೇವಿ ಅನುಗ್ರಹಪ್ರಾಪ್ತಿ ಎಲ್ಲರಿಗೂ ಲಭಿಸಲಿ ಎಂದು ದೇವಿಪುರಾಣ ಪಾರಾಯಾಣಸಕ್ತರಿಗೆ ಅನುಮತಿಸುತ್ತೇನೆ,ಆಶೀರ್ವದಿಸುತ್ತೇನೆ.ನಾನು ಶ್ರೀದೇವಿ ಪುರಾಣ ಪಾರಾಯಣ ಮಾಡುವಾಗ ಪರಿಸ್ಥಿತಿ ಹೀಗೆ ಇರಲಿಲ್ಲ.ನಾನು ಯಾರ ಅನುಮತಿಯನ್ನಾಗಲಿ,ಆಶೀರ್ವಾದವನ್ನಾಗಲಿ ಪಡೆಯದೆ ಸ್ವಯಂ ತಾಯಿ ದುರ್ಗಾದೇವಿಯ ಅನುಗ್ರಹದಂತೆ ಶ್ರೀದೇವಿ ಪಾರಾಯಣ ಪ್ರಾರಂಭಿಸಿದ್ದೆ.ನಾನು ದೇವಿಪುರಾಣ ಪಾರಾಯಣ ಪ್ರಾರಂಭಿಸಿದ್ದು ಪಿಯುಸಿ ಮೊದಲ ವರ್ಷದಲ್ಲಿದ್ದಾಗ.ಆಗ ನಮ್ಮೂರು ಗಬ್ಬೂರಿನಲ್ಲಿ ನಾಲ್ಕೈದು ಜನ ಮಾತ್ರ ಶ್ರೀದೇವಿ ಪುರಾಣ ಓದುತ್ತಿದ್ದರು.ಅದೂ ನವರಾತ್ರಿಯ ದಿನಗಳಲ್ಲಿ ಮಾತ್ರ.ನಾನು ಶ್ರೀದೇವಿ ಪುರಾಣ ಓದುತ್ತಿದ್ದೇನೆ ಎಂದು ನಮ್ಮ ತಂದೆ ನಾಗಪ್ಪ ಕರಿಗಾರ ಅವರಿಂದ ತಿಳಿದ ಕೆಲವರು ನನಗೆ ದೇವಿಪುರಾಣ ಓದಬಾರದು,ಹಾಗಾಗುತ್ತದೆ,ಹೀಗಾಗುತ್ತದೆ ಎಂದು ಹೆದರಿಸಿದ್ದರು.ಏನಾದರಾಗಲಿ ನಾನು ಓದಿಯೇ ಓದುತ್ತೇನೆ ಎಂದು ಶ್ರೀದೇವಿ ಪುರಾಣ ಪಾರಾಯಣ ಪ್ರಾರಂಭಿಸಿದ್ದ ನಾನು ಪಿಯುಸಿ ಎರಡನೇ ವರ್ಷದ ಹೊತ್ತಿಗೆ ಶ್ರೀದೇವಿಪುರಾಣದ ಅಖಂಡ ಪಾರಾಯಣ ಮಾಡುತ್ತಿದ್ದೆ.ಶ್ರೀದೇವಿ ಪುರಾಣದ ಹದಿನೆಂಟು ಅಧ್ಯಾಯಗಳನ್ನು ಕುಳಿತ ಸ್ಥಳಬಿಡದಂತೆ ಓದುವುದೇ ಅಖಂಡ ಪಾರಾಯಣ.
        ಎರಡು ವರ್ಷಗಳ ಕಡಿಮೆ ಅವಧಿಯಲ್ಲಿಯೇ ನಾನು ತಾಯಿ ದುರ್ಗಾದೇವಿಯ ಅನುಗ್ರಹಕ್ಕೆ ಪಾತ್ರನಾಗಿದ್ದೆ.ಆ ದಿನಗಳಲ್ಲಿ ನಾನು ಕುಳಿತಲ್ಲಿ,ನಿಂತಲ್ಲಿ,ಮಲಗಿದಲ್ಲಿ,ನಡೆದಾಡುವಲ್ಲಿ ಎಲ್ಲೆಲ್ಲೂ ದೇವಿ ದುರ್ಗೆಯೇ ಕಾಣುತ್ತಿದ್ದಳು.ಪರಾಶಕ್ತಿಯು ನನ್ನ ಮೈಯಲ್ಲಿ ಆವೇಶಗೊಳ್ಳುತ್ತಿದ್ದಳು.ಧ್ಯಾನ ಪೂಜೆಗೆ ಕುಳಿತಾಗ ತನ್ನ ವಾತ್ಸಲ್ಯಮಯ ಮಾತೃಸ್ವರೂಪದೊಂದಿಗೆ ಭಯಾನಕವಾದ ತನ್ನ ವಿರಾಟ್ ವಿಶ್ವರೂಪವನ್ನು ತೋರಿಸುತ್ತಿದ್ದಳು.ನನಗೆ ದೇವಿ ಪುರಾಣ ಓದಬೇಡ ಎಂದವರ ಎದುರೇ ನಾನು ಶ್ರೀದೇವಿಯನುಗ್ರಹ ಪಡೆದು ದುರ್ಗಾದೇವಿಯ ವರಪುತ್ರ ಎನ್ನಿಸಿಕೊಂಡಿದ್ದೆ.ತಾಯಿ ದುರ್ಗಾದೇವಿಯ ಅನುಗ್ರಹದಿಂದಲೇ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ನನಗೆ ಗುರುಗಳಾಗಿ ದೊರೆತಿದ್ದು.ಶತಮಾನದ ಸಂತ,ಮಹಾನ್ ಯೋಗಿ ಎಂದು ವಿಶ್ವವಿಖ್ಯಾತರಾಗಿದ್ದ ಧಾರವಾಡದ ತಪೋವನದ ಪರಮಪೂಜ್ಯ ಶ್ರೀಕುಮಾರಸ್ವಾಮಿಗಳವರು ಗಣ್ಯಾತಿಗಣ್ಯರಿಗೆ ದುರ್ಲಭರಾಗಿದ್ದ ಅಪರೂಪದ ಯೋಗಿಗಳು,ದಾರ್ಶನಿಕರು.ದೇಶದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರಿಗೆ ದರ್ಶನ ನಿರಾಕರಿಸಿದ್ದ ಕೆಚ್ಚೆದೆಯ ಯೋಗಿಗಳವರು.ಅವರ ದರ್ಶನವನ್ನಾಶಿಸಿ ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು ತಪೋವನಕ್ಕೆ ಬರುತ್ತಿದ್ದರು.ಕ್ರೈಸ್ತಧರ್ಮದ ಜಗದ್ಗುರು ಜಾನ್ ಪೋಪ್ ಪಾಲರು ಮತ್ತು ಬೌದ್ಧಧರ್ಮದ ಜಗದ್ಗುರು ದಲೈಲಾಮಾ ಅವರು ಶ್ರೀಕುಮಾರಸ್ವಾಮಿಗಳವರ ಅದ್ಭುತ ಯೌಗಿಕ ವ್ಯಕ್ತಿತ್ವದ ಸೆಳೆತಕ್ಕೆ ಒಳಗಾಗಿದ್ದ ಮಹಾನ್ ಧಾರ್ಮಿಕ ನಾಯಕರುಗಳು.ಆರು ಬಾರಿ ವಿದೇಶಪರ್ಯಟನೆ ಮಾಡಿ ಧರ್ಮೋಪದೇಶ ಮಾಡಿದ ಮಹಾತಪಸ್ವಿಗಳೆದುರು ವಿದೇಶಗಳ ರಾಷ್ಟ್ರಪತಿಗಳು,ಪ್ರಧಾನಮಂತ್ರಿಗಳು,ಛಾನ್ಸಲರ್ಗಳು,ಗವರ್ನಗಳು ನತಮಸ್ತಕರಾಗಿದ್ದರು.ಇಂತಹ ಮಹಾಯೋಗಿ ಎಲ್ಲಿ? ಅನಾಮಧೇಯ ಹಳ್ಳಿ ಹುಡುಗನಾಗಿದ್ದ ನಾನೆಲ್ಲಿ ? ಇಂತಹ ಮಹಾಗುರುವನ್ನು ಅನುಗ್ರಹಿಸಿದ್ದಳು ತಾಯಿ ದುರ್ಗಾದೇವಿ ನನಗೆ.
        ‘ ನನಗೊಬ್ಬ ಮಹಾಗುರುವನ್ನು ಕರುಣಿಸು ತಾಯೆ’ ಎಂದು ಪ್ರತಿನಿತ್ಯ ಬೇಡುತ್ತಿದೆ ನಾನು ಆ ದಿನಗಳಲ್ಲಿ.ನಮ್ಮ ಮನೆತನವು ಧಾರ್ಮಿಕ ಪರಂಪರೆಯ ಗುರುಬೋಧೆ ಪರಂಪರೆಯ ಮನೆತನವಾಗಿದ್ದು ನಮ್ಮ ಅಪ್ಪ,ಚಿಕ್ಕಪ್ಪ ಮತ್ತು ದೊಡ್ಡಪ್ಪ ಸೇರಿದಂತೆ ಎಲ್ಲರೂ ಗುರುಬೋಧೆ ಪಡೆದು ಗುರುಪುತ್ರರಾಗಿದ್ದರು.ನಮ್ಮ ಮನೆಯಲ್ಲಿ ಗುರುಪುತ್ರರ ಬಳಗದ ಸಮಾವೇಶವೇ ನಡೆಯುತ್ತಿತ್ತು ಆಗಾಗ.ಅಂತಹ ಗುರುಗಳು,ಶಿಷ್ಯರುಗಳನ್ನು ಕಂಡು ನನಗೆ ಅಂತಹವರ ಬಗ್ಗೆ ಬೇಸರ ಉಂಟಾಗಿತ್ತು.ಏನೂ ಸಾಧನೆ ಮಾಡುವುದಿಲ್ಲ,ಸುಮ್ಮನೆ ಗುರುಪುತ್ರರು ಎಂದು ಹೇಳಿಕೊಂಡು ತಿರುಗುತ್ತಾರೆ.ಶಿಷ್ಯರೂ ಅಷ್ಟೆ,ಅವರಿಗೆ ಬೋಧೆ ಕೊಟ್ಟ ಗುರುಗಳು ಅಷ್ಟೆ.ಒಬ್ಬ ಕುರುಡನ ಕೈಯನ್ನು ಹತ್ತಾರು ಕುರುಡರು ಹಿಡಿದುಕೊಂಡಂತೆ.ಈ ಡಾಂಭಿಕ ಗುರು ಶಿಷ್ಯರುಗಳನ್ನು ಕಂಡರೆ ನನಗೆ ಆಗುತ್ತಿರಲಿಲ್ಲ.
         ನಮ್ಮ ತಂದೆ ಮತ್ತು ಚಿಕ್ಕಪ್ಪನವರ ಗುರುಗಳಾಗಿದ್ದ ಶ್ರೀ ಸೂಗಣ್ಣ ತಾತನವರು ಬಹುದೊಡ್ಡಯೋಗಿಗಳು,ಶಕ್ತಿ ಉಪಾಸಕರು.ಜಾತಿಯಿಂದ ವಿಶ್ವಕರ್ಮರಾಗಿದ್ದರೂ ಅವರು ಯಾವ ಕುಲಭೇದ ನೋಡದೆ ತಮಗೆ ಸರಿಕಂಡವರನ್ನು ಶಿಷ್ಯರನ್ನಾಗಿ ಮಾಡಿಕೊಂಡು ಉದ್ಧರಿಸಿದ ಪುಣ್ಯಪುರುಷರವರು.ಶ್ರೀದೇವಿಪುರಾಣ ಮತ್ತು ಬಗಳಾಶತಕ ಪಾರಾಯಣ ಮಾಡುತ್ತಿದ್ದ ಸೂಗಣ್ಣ ತಾತನವರು ನಮ್ಮೂರ ಗ್ರಾಮದೇವಿ ದ್ಯಾವಮ್ಮದೇವಿಯೊಂದಿಗೆ ಯಾವಾಗ ಬೇಕು ಆವಾಗ ಮಾತನಾಡುತ್ತಿದ್ದರು.ನಾನು ಸೂಗಣ್ಣ ತಾತನವರನ್ನು ನಮ್ಮೂರಿನ ರಾಮಕೃಷ್ಣ ಪರಮಹಂಸರು ಎನ್ನುತ್ತೇನೆ.ನಾನು ಏಳನೆಯ ತರಗತಿಯಲ್ಲಿದ್ದಾಗ ಅವರು ಶಿವೈಕ್ಯರಾದರು.ಮೂರನೇ ತರಗತಿಯಿಂದ ಏಳನೇ ತರಗತಿಯವರೆಗೆ ನಾನು ಅವರನ್ನು ನೋಡಿದ್ದೆ.ನಮ್ಮ ಮನೆಯ ಅಟ್ಟದಲ್ಲಿ ನಮ್ಮ ತಂದೆ ನಾಗಪ್ಪ ಕರಿಗಾರ ಅವರನ್ನು ಕೂಡಿಸಿಕೊಂಡು ಯೋಗಸಾಧನೆ ಮಾಡುತ್ತಿರುವುದನ್ನು ನೋಡಿದ್ದೆ.ಹಾಗಾಗಿ ಆ ದಿನಗಳಲ್ಲಿ ನನಗೆ ಸೂಗಣ್ಣ ತಾತನವರ ಬಗ್ಗೆ ಮಾತ್ರ ಗೌರವಭಾವನೆ ಇತ್ತು.
       ‘ಮಹಾಗುರುವನ್ನು ಅನುಗ್ರಹಿಸು ತಾಯಿ’ ಎಂದು ಪ್ರಾರ್ಥಿಸುತ್ತಿದ್ದ ನನ್ನ ಮೊರೆಯನ್ನು ಕೇಳಿದ ತಾಯಿ ನನಗೆ ಮಹಾತಪಸ್ವಿಗಳನ್ನೇ ಗುರುಗಳನ್ನಾಗಿ ಅನುಗ್ರಹಿಸಿದಳು.ಪಿಯುಸಿ ಎರಡನೇ ವರ್ಷದವರೆಗೆ ನಮ್ಮೂರು ಗಬ್ಬೂರಿನ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಓದಿದ್ದ ನಾನು ಬಿ ಎ ಪದವಿಗಾಗಿ ರಾಯಚೂರಿನ ಎಲ್ ವಿ ಡಿ ಕಾಲೇಜಿನ ಓದುತ್ತಿದ್ದೆ.ಆ ವೇಳೆಗಾಗಲೇ ತೀವ್ರ ಅಧ್ಯಾತ್ಮಿಕ ಸೆಳೆತಕ್ಕೆ ಒಳಗಾಗಿದ್ದರಿಂದ ಪ್ರತಿದಿನ ಸಂಜೆ ನಮ್ಮ ಹೊಲದಲ್ಲಿ ಧ್ಯಾನನಿರತನಾಗುತ್ತಿದ್ದೆ.ನನ್ನ ಬಾಲ್ಯದ ಗೆಳೆಯ ಇಂದು ಗಬ್ಬೂರು ಗ್ರಾಮ ಪಂಚಾಯತಿ ಗ್ರಂಥಾಲಯದ ಗ್ರಂಥಪಾಲಕರಾಗಿರುವ ಬಸವರಾಜ ಕರಿಗಾರ ಮತ್ತು ನಾನು ಇಬ್ಬರೂ ಸಂಜೆ ವಾಯುವಿಹಾರಕ್ಕೆಂದು ನಮ್ಮ‌ಹೊಲಕ್ಕೆ ತೆರಳಿ ಇಂದು ಮಹಾಶೈವ ಧರ್ಮಪೀಠವಾಗಿ ಬೆಳೆದಿರುವ ನಮ್ಮ ಹೊಲದ ಎರೆಹೊಲದಲ್ಲಿ ಘಂಟೆಗಟ್ಟಲೆ ಧ್ಯಾನಿಸುತ್ತಿದ್ದೆ.ಹಾಗೆ ಧ್ಯಾನಿಸುತ್ತಿರುವಾಗ ಜ್ವಲಲಿಂಗದ ಮಧ್ಯದಿಂದ ಓರ್ವಯೋಗಿ ಕಾಣಿಸಿಕೊಳ್ಳುತ್ತಿದ್ದರು.ಅವರು ಯಾರು ಎಂದು ನನಗೆ ಗೊತ್ತಿರಲಿಲ್ಲ.ನನ್ನ ತಾಯಿ ದುರ್ಗಾದೇವಿ ಯಾರನ್ನೋ ನನ್ನ ಗುರುಗಳು ಎಂದು ನಿರ್ದೇಶಿಸುತ್ತಾಳೆ ಎಂದು ಮಾತ್ರ ಭಾವಿಸಿದ್ದೆ.
       ಒಂದು ದಿನ ಸಂಜೆ ನನ್ನ ವಿದ್ಯಾಗುರುಗಳಾಗಿದ್ದ ಮನೋಹರ ಬಡಿಗೇರ ಅವರು ನನ್ನನ್ನು ಹುಡುಕಿಕೊಂಡು ನಮ್ಮ ಹೊಲಕ್ಕೆ ಬಂದರು.ನಾನು ಗಬ್ಬೂರಿನ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ನಮಗೆ ಕನ್ನಡ ಉಪನ್ಯಾಸಕರಾಗಿದ್ದ ಮನೋಹರ ಬಡಿಗೇರ ಅವರು ನನ್ನ ಮೆಚ್ಚಿನ ಗುರುಗಳಾಗಿದ್ದರು.ಪಿಯುಸಿ ದಿನಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಮನೋಹರ ಬಡಿಗೇರ,ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದ ಟಿ.ಬಿ.ಅಣ್ಣಪ್ಪನವರು ಮತ್ತು ಇಂಗ್ಲಿಷ್ ಉಪನ್ಯಾಸಕರಾಗಿದ್ದ ವಿ.ವಿ.ಕುಲಕರ್ಣಿಯವರು ನನ್ನ ಮೇಲೆ ಪ್ರಭಾವ ಬೀರಿದ್ದ ನನ್ನ ಮೆಚ್ಚಿನ ‘ಗುರುತ್ರಯರು’ ಗಳಾಗಿದ್ದರು.ಈ ಮೂವರು ತಮ್ಮ ತಮ್ಮ ವಿಷಯಗಳಲ್ಲಿ ಪ್ರಕಾಂಡ ಪಾಂಡಿತ್ಯ ಪಡೆದಿದ್ದರು.ಪ್ರೌಢಶಾಲೆಯ ಎಂಟನೇ ತರಗತಿಯಲ್ಲಿದ್ದಾಗಲೇ ಕವನಗಳನ್ನು ಬರೆಯುತ್ತಿದ್ದ ನನ್ನ ಬಗ್ಗೆ ವಿಶೇಷ ಅಭಿಮಾನಗಳಿದ್ದವು ಕನ್ನಡ ಉಪನ್ಯಾಸಕ ಮನೋಹರ ಬಡಿಗೇರ ಅವರಲ್ಲಿ.ನನ್ನನ್ನು ಒಬ್ಬ‌ಮಹಾನ್ ಕವಿಯಾಗಿ,ಮಹಾನ್ ಸಾಹಿತಿಯಾಗಿ ರೂಪಿಸುವ ಕನಸು ಕಂಡಿದ್ದ ಮನೋಹರ ಬಡಿಗೇರ ಅವರು ಸಂಜೆ ನನಗೆ ಘಂಟೆಗಟ್ಟಲೆ ಕನ್ನಡ ಸಾಹಿತ್ಯ,ವ್ಯಾಕರಣ,ಛಂದಸ್ಸುಗಳ ಪಾಠ ಮಾಡುತ್ತಿದ್ದರು.
       ಆ ದಿನ ಸಂಜೆ ಹೊಲಕ್ಕೆ ಬಂದವರೆ ಮನೋಹರ ಬಡಿಗೇರ ಅವರು  ನನ್ನನ್ನು ಪ್ರೀತಿಯಿಂದ ತಬ್ಬಿಕೊಂಡು ‘ ಮಗು ಮುಕ್ಕಣ್ಣ,ನೀನೆಂಥ ಅದೃಷ್ಟವಂತನಪ್ಪ’ ಎಂದು ತಲೆನೇವರಿಸಿದರು.ನನಗೇನೂ ಅರ್ಥವಾಗಲಿಲ್ಲ.’ಏನು ಸರ್?’ ಎಂದು ಪ್ರಶ್ನಿಸಿದೆ.’ ಮಗು,ನನಗೆ ಅತ್ಯಾನಂದವಾಗಿದೆಯಪ್ಪ ನಿನ್ನ ಅದೃಷ್ಟವನ್ನು ಕಂಡು’ ಅಂದರು.ಕುತೂಹಲ ಇಮ್ಮಡಿಗೊಂಡು ‘ಏನು ಸರ್ ವಿಶೇಷ ?’ ಎಂದೆ.’ ನೀನು ಮಹಾಭಾಗ್ಯಶಾಲಿಯಪ್ಪ,ನಿನಗೊಬ್ಬ ಮಹಾನ್ ಗುರುಗಳು ದೊರೆತಿದ್ದಾರೆ’ ಎಂದರು.’ ಗುರುಗಳು’ ಎಂದೊಡನೆ ನನ್ನ ಕಿವಿ ನಿಮಿರಿದವು.’ ಗುರುಗಳೆ,ಯಾರು ಸರ್ ಅವರು ? ಎಲ್ಲಿದ್ದಾರೆ?’ ಪ್ರಶ್ನಿಸಿದೆ ನಾನು.’ ಅವರು ಯುಗಯೋಗಿಗಳಪ್ಪ,ಮಹಾನ್ ದಾರ್ಶನಿಕರು.ಧಾರವಾಡದ ತಪೋವನದಲ್ಲಿದ್ದಾರೆ. ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳು ಅಂತ ಅವರ ಹೆಸರು.ನಾನು ಅಂತಹ ಯೋಗಿಯನ್ನು ಇದುವರೆಗೂ ನೋಡಿಲ್ಲ’ ಎನ್ನುತ್ತ ಹರ್ಷಪುಳಕಿತರಾದರು ಗುರು ಮನೋಹರ ಬಡಿಗೇರ ಅವರು.’ ಸರಿ ಸರ್ ಅಂತಹ ಮಹಾತ್ಮರು ನನಗೆ ಹೇಗೆ ಗುರುಗಳಾಗುತ್ತಾರೆ? ನಾನೊ ಸಾಮಾನ್ಯ ಯುವಕ ‘ ಎಂದೆ.’ ಅದಕ್ಕೆ ಕಣಪ್ಪ ನಿನ್ನನ್ನು ಮಹಾ ಅದೃಷ್ಟವಂತ ಅಂತ ಕರೆದಿದ್ದು’ ಅಂದ ಗುರುಗಳು ಸ್ವಲ್ಪ ಹೊತ್ತಿನ ನಂತರ ‘ ಮಹಾತಪಸ್ವಿಗಳೆ ಸ್ವಯಂ ನಿನ್ನನ್ನು ಕಾಣಲು ಉತ್ಸುಕರಾಗಿದ್ದಾರೆ’ ಎಂದರು.ನನಗೆ ಆಶ್ಚರ್ಯವಾಯಿತು.ಪರಿಚಯವಿಲ್ಲದ ದೂರದ ಗಬ್ಬೂರಿನ ಹುಡುಗನೊಬ್ಬನನ್ನು ಮಹಾನ್ ದಾರ್ಶನಿಕರು ಕಾಣಲು ಇಷ್ಟಪಡುತ್ತಾರೆಯೆ ?’ ‘ ಅದು ಹೇಗೆ ಸರ್?’ ಮರುಪ್ರಶ್ನಿಸಿದೆ ಮನೋಹರ ಬಡಿಗೇರ ಅವರನ್ನು ನಾನು.’ ಹೌದಪ್ಪ ಅದೇ ವಿಶೇಷ.ನಾನು ಮೊನ್ನೆ ಪೂಜ್ಯರ ದರ್ಶನಕ್ಕೆಂದು ತಪೋವನಕ್ಕೆ ಹೋಗಿದ್ದೆ.( ಮನೋಹರ ಬಡಿಗೇರ ಅವರು ಮಹಾ ತಪಸ್ವಿ ಶ್ರೀಕುಮಾರಸ್ವಾಮಿಗಳವರಲ್ಲಿ ಅನನ್ಯ ಭಕ್ತಿ,ಶ್ರದ್ಧೆಗಳನ್ನು ಹೊಂದಿದ್ದ ಅವರ ಅನುಯಾಯಿಗಳು) ಮಹಾತಪಸ್ವಿಗಳು ನನ್ನನ್ನು ಕರೆದು ‘ ಮನೋಹರ, ನಿಮ್ಮ ಶಿಷ್ಯ‌ ಮುಕ್ಕಣ್ಣ ಇದ್ದಾನಲ್ಲ,ಅವನನ್ನು‌ಇಲ್ಲಿಗೆ‌ಕರೆಯಿಸಿ,ನಾವು ಅವನನ್ನು ಅನುಗ್ರಹಿಸಿ,ಉದ್ಧರಿಸಬೇಕಿದೆ’ ಎಂದರು.ಅವರು ನಿನ್ನನ್ನು ಮುಖತಃ ನೋಡಿಲ್ಲ.ಆದರೂ ನಿನ್ನ ಹೆಸರು ಹೇಳಿ ಕರೆದರು.ತ್ರಿಕಾಲ ಜ್ಞಾನಿಗಳಾದ ಅವರ ಅಲೌಕಿಕ ದಿವ್ಯದೃಷ್ಟಿಗೆ ಬಿದ್ದಿರುವ ನೀನು ಮಹಾನ್ ಭಾಗ್ಯಶಾಲಿಯೇ ಸರಿ’ ಎಂದ ಗುರು ಮನೋಹರ ಬಡಿಗೇರ ಅವರು ‘ ಯಾವಾಗ ಹೋಗೋಣ ತಪೋವನಕ್ಕೆ’ ಎಂದು ಪ್ರಶ್ನಿಸಿದ್ದರು.ನನ್ನ ಗುರು ಮನೋಹರ ಬಡಿಗೇರ ಅವರ‌ ಪ್ರಾಮಾಣಿಕತೆ,ಸತ್ಯನಿಷ್ಠತೆಗಳಲ್ಲಿ ನನಗೆ ಎಳ್ಳಷ್ಟೂ ಸಂಶಯ ಇಲ್ಲದೆ ಇದ್ದರೂ ನನಗೆ ಮಹಾತಪಸ್ವಿಗಳ ಬಗ್ಗೆ ಇನ್ನೂ ನಂಬಿಕೆ ಮೂಡಿರಲಿಲ್ಲ ! ದುರ್ಗಾದೇವಿಯ ಉಪಾಸನೆ ಮಾಡುತ್ತಿದ್ದರೂ ಡಾಂಭಿಕ ಮಠಾಧೀಶರುಗಳು,ಗುರುಗಳ ಬಗ್ಗೆ ನನ್ನಲ್ಲಿ ಆಸಕ್ತಿ ಇರಲಿಲ್ಲ.ಪರೀಕ್ಷಿಸದೆ ಯಾರನ್ನೂ ಒಪ್ಪುವ ಸ್ಥಿತಿಯಲ್ಲಿ ನಾನಿರಲಿಲ್ಲ.’ ಕೆಲವು ದಿನಗಳ ನಂತರ ಹೋಗೋಣ ಸರ್’ ಎಂದು ಗುರು ಮನೋಹರ ಬಡಿಗೇರ ಅವರನ್ನು ಒಪ್ಪಿಸಿದೆ.
         ನನ್ನಲ್ಲಿಯೂ ಕುತೂಹಲ ಉಂಟಾಗಿತ್ತು.ನನ್ನ ತಾಯಿ ದುರ್ಗಾದೇವಿಯ ಅನುಗ್ರಹವಿಶೇಷದಿಂದಲೇ ನನ್ನಲ್ಲಿ ಮಹಾತಪಸ್ವಿಗಳು ಪ್ರಸನ್ನರಾಗಿರಬೇಕು ಎಂದುಕೊಂಡೆ.ಆದರೂ ಯಾವುದಕ್ಕೂ ಅವಸರಿಸಬಾರದು ಎಂದು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ತಪೋವನದ ವಿಳಾಸಕ್ಕೆ ಒಂದು ಪತ್ರಬರೆದೆ ನನ್ನ ವಿದ್ಯಾಗುರುಗಳಾದ ಮನೋಹರ ಬಡಿಗೇರ ಅವರ ಇಚ್ಛೆಯಂತೆ ತಮ್ಮನ್ನು ಕಾಣಲು ಇಚ್ಛಿಸಿದ್ದೇನೆ,ದಯವಿಟ್ಟು ದರ್ಶನಕ್ಕೆ ಅವಕಾಶಕೊಡಿ ಎಂದು.ಮರುವಾರವೇ ತಪೋವನದಿಂದ ‘ ಪೂಜ್ಯರು ಇಂತಹ ದಿನದಂದು ಭೇಟಿಯಾಗಲು ತಿಳಿಸಿದ್ದಾರೆ’ ಎನ್ನುವ ಪತ್ರ ತಲುಪಿತು ತಪೋವನದ ಕಾರ್ಯದರ್ಶಿಗಳಾಗಿದ್ದ ಶ್ರೀ ಶಿ.ಚ.ಅನಾಡ ಅವರಿಂದ.ಅಷ್ಟು ಹೊತ್ತಿಗಾಗಲೇ  ವಿದ್ಯಾಗುರುಗಳಾಗಿದ್ದ ಮನೋಹರ ಬಡಿಗೇರ ಅವರು  ಗಬ್ಬೂರಿನಿಂದ ವಿಜಯಪುರದ ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜಿಗೆ ವರ್ಗಾವಣೆಗೊಂಡಿದ್ದರು.’ ಸರಿ,ನಾನೊಬ್ಬನೇ ಹೋದರಾಯಿತು’ ಎಂದು ನಿರ್ಧರಿಸಿದೆ.
         ಮನೆಯಲ್ಲಿ ಅಪ್ಪ ನಾಗಪ್ಪ ಕರಿಗಾರ ಅಮ್ಮ ಮಲ್ಲಮ್ಮನವರಿಗೆ ಧಾರವಾಡಕ್ಕೆ‌ಪುಸ್ತಕಗಳನ್ನು ತರಲು ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ಐದುನೂರು ರೂಪಾಯಿಗಳನ್ನು ಪಡೆದು ಧಾರವಾಡಕ್ಕೆ ಹೊರಟೆ.ರಾಯಚೂರು- ಹುಬ್ಬಳ್ಳಿ ಬಸ್ಸಿನಲ್ಲಿ ರಾತ್ರಿ ಪ್ರಯಾಣಿಸಿದೆ.ಹುಬ್ಬಳ್ಳಿಯನ್ನಾಗಲಿ,ಧಾರವಾಡವನ್ನಾಗಲಿ ಅದುವರೆಗೂ ನೋಡಿರಲಿಲ್ಲ.ಬೆಳಿಗ್ಗೆ ಐದು ಘಂಟೆಗೆ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿದ್ದೆ.ಅಲ್ಲಿಂದ ತಪೋವನಕ್ಕೆ ಹೋಗುವ ಬಗ್ಗೆ ಒಬ್ಬಿಬ್ಬರನ್ನು ವಿಚಾರಿಸಿದೆ.ತಪೋವನ ಎಂದೊಡನೆ ಅವರು ಅಲ್ಲಿಗೆ ತಲುಪುವ ಎಲ್ಲ ವಿವರಗಳನ್ನು ನೀಡಿದರು.ಧಾರವಾಡಕ್ಕೆ ತೆರಳಿ ಅಲ್ಲಿಂದ ಸಿಟಿ ಬಸ್ಸಿನಲ್ಲಿ ತಪೋವನಕ್ಕೆ ತೆರಳಿದೆ.ನಾನು ತಪೋವನಕ್ಕೆ ಹೋದಾಗ ಬೆಳಗಿನ ಆರುವರೆ ಘಂಟೆಯ ಸಮಯ.ಅಲ್ಲಿನ ಬ್ರಹ್ಮವಿಹಾರದ ಮುಂಭಾಗದಲ್ಲಿದ್ದ ನಲ್ಲಿನೀರಿನಿಂದ ಕೈಕಾಲು ಮುಖ ತೊಳೆದುಕೊಂಡು ಬ್ರಹ್ಮವಿಹಾರದಲ್ಲಿದ್ದ ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿ ಫೌಂಡೇಶನ್ನಿನ ಕಾರ್ಯದರ್ಶಿಗಳಾಗಿದ್ದ ಶಿ.ಚ.ಅನಾಡ ಅವರನ್ನು ಕಂಡು ‘ ನಾನು ಮಹಾತಪಸ್ವಿಗಳನ್ನು ಕಾಣಬೇಕಿತ್ತು’ ಎಂದೆ.ಒಂದು ಬಾರಿ ನನ್ನನ್ನು ಅಡಿಯಿಂದ ಮುಡಿಯವರೆಗೆ ಆಶ್ಚರ್ಯಭಾವದಿಂದ ನೋಡಿದ ಶಿ.ಚ.ಅನಾಡ ಅವರು ಜೋರಾಗಿ ನಕ್ಕರು.’ ಯಾಕೆ ನಗುತ್ತಿದ್ದೀರಿ ?’ ಎಂದೆ.’ ಮಹಾತಪಸ್ವಿಗಳನ್ನು ಹೇಗೆ ಕಾಣುತ್ತೀರಿ? ಅವರು‌ ಈಗ ಅನುಷ್ಠಾನ ನಿರತರಾಗಿದ್ದಾರೆ’ ಎಂದರು ಅನಾಡ ಅವರು.’ ಅನುಷ್ಠಾನದಿಂದ ಯಾವಾಗ ಹೊರ ಬರುತ್ತಾರೆ?’ ಮರುಪ್ರಶ್ನಿಸಿದೆ.’ ಯಾವಾಗ ಬರುತ್ತಾರೆ ಎಂದು ಹೇಗೆ ಹೇಳುವುದು ? ಅವರ ಅನುಷ್ಠಾನ ಕಡಿಮೆ ಎಂದರೂ ಮೂರು ತಿಂಗಳ ಅವಧಿಯದ್ದಾಗಿರುತ್ತದೆ.ಒಮ್ಮೊಮ್ಮೆ ಒಂಬತ್ತು ತಿಂಗಳು ಆಗುವುದುಂಟು.ಅವರು ಹೊರಬಂದಾಗಲೇ ನಮಗೆ ಗೊತ್ತಾಗುವುದು ‘. ನನಗೆ ಎಲ್ಲಿಲ್ಲದ ಸಿಟ್ಟು ಬಂದಿತು.ತಪೋವನದಿಂದ ಬಂದಿದ್ದ ಕಾರ್ಡನ್ನು ಅವರಿಗೆ ತೋರಿಸುತ್ತ ‘ ಹಾಗಿದ್ದರೆ ನನಗೆ ಇಂದು ಬರಲು ಯಾಕೆ ತಿಳಿಸಿದ್ದರು ? ಕಪಟಿ ಸಂನ್ಯಾಸಿಗಳೊ ಇವರು? ಸುಮ್ಮನೆ ಅನುಷ್ಠಾನ ಹಾಗೆ ಹೀಗೆ ಹೇಳಿ ಭೇಟಿ ನಿರಾಕರಿಸುತ್ತಾರೋ ?’ ಎಂದು ರೇಗಾಡಿದೆ.ಆ ಕಾರ್ಡನ್ನು ನೋಡಿದ ಅನಾಡರು ‘ ಈ ಕಾರ್ಡನ್ನು ನಾನೇ ಬರೆದಿದ್ದೇನೆ.ನಿಮ್ಮ ಪತ್ರದ ವಿಷಯವನ್ನು ಪೂಜ್ಯರಲ್ಲಿ ನಿವೇದಿಸಿಕೊಂಡು ಅವರು ಸೂಚಿಸಿದ ದಿನಾಂಕವನ್ನೇ ನಿಮಗೆ ತಿಳಿಸಿದ್ದೆ’ ಎಂದರು.’ ಹಾಗಿದ್ದರೆ ಮತ್ತೆ ಏಕೆ ಸಿಗುತ್ತಿಲ್ಲ ನನಗೆ?’ ಎಂದು ಪ್ರಶ್ನಿಸಿದೆ.ಶಿ.ಚ.ಅನಾಡ ಅವರು ಶಾಂತ ಚಿತ್ತದಿಂದ ‘ಬನ್ನಿ ಇಲ್ಲಿ’ ಎಂದು ಹೊರಗೆ ಕರೆದುಕೊಂಡು ಬಂದು ಅಲ್ಲಿದ್ದ ನೋಟೀಸ್ ಬೋರ್ಡಿನಲ್ಲಿದ್ದ ದರ್ಶನಾಕಾಂಕ್ಷಿಗಳ ಬಹುದೊಡ್ಡ ಪಟ್ಟಿಯನ್ನು ತೋರಿಸುತ್ತ ಇವರೆಲ್ಲರಿಗೂ ಅಪಾಯಿಂಟ್ ಮೆಂಟ್ ಕೊಟ್ಟಿದ್ದರು.ಆದರೆ ಪೂಜ್ಯರಿಗೆ ಯಾವಾಗ ಅಂತರ್ ಪ್ರೇರಣೆ ಆಗುತ್ತದೆಯೋ ಆಗ ಅವರು ಅನುಷ್ಠಾನಕ್ಕೆ ತೆರಳುತ್ತಾರೆ’ ಎಂದರು.ಆ ನೋಟೀಸ್ ಬೋರ್ಡಿನಲ್ಲಿ ಭಾರತೀಯ ಗಣ್ಯರುಗಳು,ವಿದೇಶಿ ಗಣ್ಯರುಗಳು ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಬಗ್ಗೆ ವ್ಯಕ್ತಪಡಿಸಿದ್ದ ಪ್ರಶಂಸನೀಯ ಮಾತುಗಳ ಕನ್ನಡ,ಇಂಗ್ಲಿಷ್ ,ಹಿಂದಿ ಮತ್ತು ಮರಾಠಿ ಭಾಷೆಗಳ ಪತ್ರಿಕಾ ತುಣುಕುಗಳಿದ್ದವು.ಅವುಗಳನ್ನು‌ಓದಿ ‘ ನನ್ನ ಗುರು ಮನೋಹರ ಬಡಿಗೇರ ಅವರು ಹೇಳಿದಂತೆ ಇವರೂ ನಿಜಕ್ಕೂ ದೊಡ್ಡಯೋಗಿಗಳಿರಬೇಕು’ ಎನ್ನುವ ಭಾವನೆ ಮೂಡಿತು ನನ್ನಲ್ಲಿ.ಶಿ.ಚ.ಅನಾಡ ಅವರು ನನ್ನನ್ನು ಕರೆದುಕೊಂಡು ಹೋಗಿ ತಪೋವನದ ಅಡುಗೆಕೋಣೆಯಲ್ಲಿ ಬಿಸಿಬಿಸಿಯಾದ ಉಪ್ಪಿಟ್ಟು ಮತ್ತು ಚಹಾ ಕೊಡಿಸಿದರು.ಉಪಹಾರ ಮತ್ತು ಚಹಾ ಸೇವನೆ ಬಳಿಕ ನಾನು  ಆಲೋಚನಾ ಮಗ್ನನಾಗಿ ಬ್ರಹ್ಮವಿಹಾರದ ಬದಿಯಿದ್ದ ಕಟ್ಟೆಯ ಮೇಲೆ ಕುಳಿತೆ.ಈಗ ಬ್ರಹ್ಮ ವಿಹಾರದ ಬದಿಯಲ್ಲಿ ಕಟ್ಟೆ ಇಲ್ಲ.ದಿವ್ಯದೇವಾಲಯವನ್ನು‌ ಕಟ್ಟಿದ್ದರಿಂದ ಆ ಕಟ್ಟೆಯನ್ನು‌ ಕೆಡವಿದ್ದಾರೆ.
        ಕಟ್ಟೆಯ ಮೇಲೆ‌ಕುಳಿತಿದ್ದ ನನ್ನಮನಸ್ಸು  ಗೊಂದಲದ ಗೂಡಾಗಿತ್ತು.’ ಈಗೇನು ಮಾಡುವುದು ?’ ‘ ಏನು ಮಾಡುವುದು ?’ ಎಂದು ಆಲೋಚಿಸುತ್ತಿದ್ದೆ.ಇಷ್ಟು ದೂರ ಬಂದು ತಪಸ್ವಿಗಳನ್ನು ಕಾಣದೆ ಹೋದರೆ ಹೇಗೆ ? ನನ್ನ ವಿದ್ಯಾಗುರುಗಳಾದ ಮನೋಹರ ಬಡಿಗೇರ ಅವರು ಸುಳ್ಳು ಹೇಳುವವರಲ್ಲ.ಅವರು ತಪಸ್ವಿಗಳನ್ನು ಕಂಡು ಬಲ್ಲವರು.ಅವರ ಇಚ್ಛೆಯಂತೆ ನನಗೆ ತಪೋವನಕ್ಕೆ ಹೋಗ ಹೇಳಿದ್ದರು.ಇಲ್ಲಿ ನೋಟೀಸ್ ಬೋರ್ಡಿನಲ್ಲಿಯಲ್ಲಿಯೂ ಮಹಾ ತಪಸ್ವಿಗಳ ಮಹಿಮೆಯ ಬಗ್ಗೆ ಮುಕ್ತಪ್ರಶಂಸೆಯ ಮಾತುಗಳಿವೆ.ತಪಸ್ವಿಗಳು ತ್ರಿಕಾಲಜ್ಞಾನಿಗಳಾದ ಮಹಾತ್ಮರೇ ಇರಬೇಕು.ಹಾಗಿದ್ದರೂ ನನಗೆ ಹೀಗೇಕೆ ಮಾಡಿದರು ?’ ಎಂದು ತಳಮಳಿಸುತ್ತಿತ್ತು ಮನಸ್ಸು.ಸಮಯ ಬೆಳಗಿನ ಒಂಬತ್ತು ಘಂಟೆ.ನಾನು ಕುಳಿತ ಕಟ್ಟೆಯಿಂದ ಸ್ವಲ್ಪ ದೂರದಲ್ಲಿದ್ದ ಧ್ಯಾನಮಂದಿರದಲ್ಲಿ ಶಾಲಾಘಂಟೆಯಂತಹ ಘಂಟೆಯೊಂದು ಬಾರಿಸಿತು.ಶಿ.ಚ.ಅನಾಡ ಅವರು ಸೇರಿದಂತೆ ಹತ್ತಾರು ಜನಭಕ್ತರು ಅತ್ತ ಓಡಿ ಹೋದರು.ಕೌತುಕದಿಂದ ನೋಡುತ್ತಿದ್ದೆ ಅವರತ್ತ ನಾನು.
        ಸ್ವಲ್ಪ ಹೊತ್ತಿನಲ್ಲೇ ಶಿ.ಚ.ಅನಾಡ ಮತ್ತಿತರರು ನನ್ನ ಬಳಿ ಬಂದು ‘ ನೀವು ಎಂಥಹ ಪುಣ್ಯಾತ್ಮರಪ್ಪ! ತಪಸ್ವಿಗಳು ನಿಮಗೋಸ್ಕರ ಅನುಷ್ಠಾನಕ್ಕೆ ವಿರಾಮ ನೀಡಿ ನಿಮ್ಮನ್ನು ಕಾಣಬಯಸಿದ್ದಾರೆ’ ಎನ್ನುತ್ತಿದ್ದಂತೆಯೇ ಅವರ‌ಜೊತೆಗೆ ಮಹಾರಾಷ್ಟ್ರದ ಭಕ್ತರು ನನಗೆ‌ಜಯಕಾರ ಕೂಗುತ್ತ ನನ್ನನ್ನು ಎತ್ತಿಕೊಂಡು ಧ್ಯಾನ ಮಂದಿರದತ್ತ ಹೊರಟರು.ನನಗೆ ಆಶ್ಚರ್ಯವೋ ಆಶ್ಚರ್ಯ ! ಧ್ಯಾನ ಮಂದಿರದ ಒಳ ಭಾಗದಲ್ಲಿ ಪುಷ್ಪಾಲಂಕೃತವಾದ ಒಂದು ಖುರ್ಚಿಯಲ್ಲಿ ಕುಳಿತಿದ್ದರು ತಪಸ್ವಿಗಳು.ಅವರನ್ನು ನೋಡಿದೆ.ಏನದ್ಭುತ ವ್ಯಕ್ತಿತ್ವ ! ದಿವ್ಯ ತೇಜಸ್ಸು ಓಜಸ್ಸುಗಳಿಂದ ಬೆಳಗುತ್ತಿದ್ದ ಮುಖ.ಸೂರ್ಯನ ಕಾಂತಿಯಂತೆ ಹೊಳೆಯುತ್ತಿದ್ದ ದೇಹ.ಮೀನಿನ ಕಣ್ಣುಗಳಂತೆ ಸಣ್ಣನೆಯ ಕಣ್ಣುಗಳು. ಅಲೌಕಿಕತೇಜಸ್ಸನ್ನು ಹೊರಸೂಸುತ್ತಿದ್ದ ಕಣ್ಣುಗಳು ! ಅನುಭವ ಮಂಟಪದ ಶೂನ್ಯಸಿಂಹಾಸನದಲ್ಲಿ ಕುಳಿತಿದ್ದ ಅಲ್ಲಮಪ್ರಭುದೇವರನ್ನು ಕಂಡ ಅನುಭವ ! ಕೈಲಾಸದಲ್ಲಿ‌ಕುಳಿತ ಪರಶಿವನನ್ನುಕಂಡ ಅನುಭವ!ಕಣ್ಣುಗಳಿಂದ ನೋಡಬಹುದಿತ್ತೆ ಹೊರತು ಆ ದಿವ್ಯೋಜ್ವಲ ವ್ಯಕ್ತಿತ್ವವನ್ನು ಬಣ್ಣಿಸಲು ಸಾಧ್ಯವಿರಲಿಲ್ಲ.ಭಕ್ತಿ ಪರವಶವಾದವು ಮೈ ಮನಗಳು.ಅದುವರೆಗೂ ಯಾವುದೇ ಸ್ವಾಮಿಗಳಿಗೆ ನಮಸ್ಕರಿಸಿದೆ ಇದ್ದ ನಾನು ನನಗರಿವೆ ಇಲ್ಲದಂತೆಯೇ ಆ ಮಹೋಜ್ವಲವ್ಯಕ್ತಿತ್ವದ ಯೋಗಿಗಳೆದುರು ಸಾಸ್ಟಾಂಗ ಎರಗಿದೆ.’ ಶುಭವಾಗಲಿ,ಮಂಗಳವಾಗಲಿ,ಕಲ್ಯಾಣವಾಗಲಿ,ಶಿವಾನುಗ್ರಹವಾಗಲಿ’ ಎಂದು ಮಧುರ ಸ್ವರದಲ್ಲಿ ಹರಸಿದ ಮಹಾತಪಸ್ವಿಗಳು ‘ ಏಳು ಮಗು’ ಎಂದರು.ಕಲ್ಲುಸಕ್ಕರೆಯನ್ನು ಕೊಟ್ಟರು.ಅಲ್ಲಿದ್ದವರಿಗೆ ಜ್ಯೂಸ್  ತರಲು ಹೇಳಿದರು.ಮಹಾರಾಷ್ಟ್ರದ ಭಕ್ತರು ಮೂಕವಿಸ್ಮಿತರಾಗಿ ನೋಡುತ್ತಿದ್ದರು.ಅವರನ್ನು ಹೊರ ಕಳುಹಿಸಿದ ಮಹಾತಪಸ್ವಿಗಳು ನನ್ನೊಡನೆ ಮಾತನಾಡಲಾರಂಭಿಸಿದರು.
   ‘ ಚೆನ್ನಾಗಿರುವೆಯಾ ? ಅಭ್ಯಾಸ ಹೇಗೆ ನಡೆದಿದೆ ? ಮನೋಹರ ಬಡಿಗೇರ ಹೇಗಿದ್ದಾರೆ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಯಾದ ಬಳಿಕ ಮಹಾತಪಸ್ವಿಗಳು ಆಡಿದ ಮಾತುಗಳು ನನಗಿಂದಿಗೂ ಬೆಡಗಿನ ನುಡಿಗಳಾಗಿಯೇ ಕಾಣಿಸುತ್ತವೆ.’ ಮಗು ಮುಕ್ಕಣ್ಣ,ನಿನಗೆ ಇದೆಲ್ಲ ವಿಚಿತ್ರವಾಗಿ ಕಾಣುತ್ತಿದೆ.ಆದರೆ ಇದೆಲ್ಲವೂ ಶಿವಪ್ರೇರಣೆಯಂತೆ ನಡೆಯುತ್ತಿದೆ.ನಾವು ಯಾರು ಎಂದು ನಿನಗೆ ಗೊತ್ತಿಲ್ಲ ಆದರೆ ನೀನು ಯಾರು ಎಂದು ನನಗೆ ಗೊತ್ತಿದೆ.ಶಿವಕಾರಣಸಂಭವನಾದ ನೀನು ಮಹಾತ್ಕಾರ್ಯಗಳನ್ನು ಸಾಧಿಸಲೆಂದೇ ಹುಟ್ಟಿದವನು. ನಾವು ನಿನ್ನನ್ನು ಅನುಗ್ರಹಿಸಿ ಉದ್ಧರಿಸಬೇಕೆಂಬುದು ಶಿವನಿಚ್ಛೆ.ಆ ಕಾರಣದಿಂದಲೇ ನಿನ್ನ ತಾಯಿ ದುರ್ಗಾದೇವಿಯು ನನಗೆ ಸಂದೇಶ ಕಳಿಸಿದ್ದಳು’.ಹೀಗೆಂದು ಮಾತಿಗಾರಂಭಿಸಿದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ನನ್ನ ಮೊದಲ ಭೇಟಿಯ ಆ ದಿನದಂದೇ ಶಿವಮಂತ್ರೋಪದೇಶದೊಂದಿಗೆ ಅಷ್ಟಾಂಗ ಮಾರ್ಗವನ್ನು ಉಪದೇಶಿಸಿ,ನನ್ನನ್ನು ಉದ್ಧರಿಸಿದರು.ಮೂರು ವರ್ಷಗಳ ಕಾಲ ತಮ್ಮ ಸನ್ನಿಧಿಯಲ್ಲಿಟ್ಟುಕೊಂಡು‌ಕುಂಡಲಿನೀ ಯೋಗ ಸೇರಿದಂತೆ ಎಲ್ಲ ಯೋಗಗಳಲ್ಲಿ ನನ್ನನ್ನು ನಿಪುಣನನ್ನಾಗಿಸಿದರು.ಮಹಾತಪಸ್ವಿ ಶ್ರೀ‌ಕುಮಾರಸ್ವಾಮಿಗಳವರ‌ಕೃಪಾದೃಷ್ಟಿ ವಿಶೇಷದಿಂದ ನಾನು ಅಧ್ಯಾತ್ಮಪಥದಲ್ಲಿ ಅದ್ಭುತವಾದ ಯೋಗಸಿದ್ಧಿಗಳನ್ನು ಸಂಪಾದಿಸಲು ಸಾಧ್ಯವಾಯಿತು.ಇಂದು ನಾನು‌ ಈ ಎತ್ತರಕ್ಕೆ ಏರಿ ಬೆಳೆಯಲು ಮತ್ತು ಮುಂದೆ ಜಗತ್ತು ಸೋಜಿಗ ಪಡುವ  ಮಹಾನ್ ಕಾರ್ಯಗಳನ್ನು ಸಾಧಿಸಲು ಕಾರಣವಾಗಲಿರುವ ನನ್ನ ಸ್ಫೂರ್ತಿ,ಚೈತನ್ಯದ ಎರಡು ಶಕ್ತಿಗಳೆಂದರೆ ನನ್ನ ತಾಯಿ ದುರ್ಗಾದೇವಿಯ ಆಶೀರ್ವಾದ ಮತ್ತು ತಾಯ್ಗರುಳಿನ ತಂದೆ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಅನುಗ್ರಹ.ರಾಮಕೃಷ್ಣ ಪರಮಹಂಸರು,ವಿವೇಕಾನಂದರು,ಮಹರ್ಷಿ ಅರವಿಂದರು ಮತ್ತು ರಮಣಮಹರ್ಷಿಗಳ ಸಾಲಿನಲ್ಲಿ ಒಬ್ಬರಾಗಿ ಆಧುನಿಕ ಭಾರತದ ಪಂಚಾಚಾರ್ಯರಲ್ಲಿ ಒಬ್ಬರು ಎಂದು ವಿಶ್ವಪ್ರಸಿದ್ಧರಾಗಿರುವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ನನಗೆ ಗುರುಗಳಾಗಿ ದೊರೆತದ್ದು ತಾಯಿ ದುರ್ಗಾದೇವಿಯ ಆಶೀರ್ವಾದ ಎಂದ ಬಳಿಕ ದೇವಿಯ ಉಪಾಸನೆಯಿಂದ ಕೆಟ್ಟದ್ದು ಆಗುತ್ತದೆಯೆ ? ವಿಶೇಷವೆಂದರೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ನನ್ನನ್ನು ಶಿಷ್ಯನೆಂದು ಸ್ವೀಕರಿಸಿ,ಶಿವಾನುಗ್ರಹ ಕರುಣಿಸಿದ್ದು ನಾನು ಹುಟ್ಟಿದ ದಿನವಾದ ಗೌರಿಹುಣ್ಣಿಮೆಯಂದು.ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಲೋಕೋದ್ಧಾರದ ಲೀಲೆಯನ್ನಾಡುತ್ತಿರುವ ವಿಶ್ವೇಶ್ವರ ಶಿವನನ್ನು ನಾನು ಕಾಶಿಯಲ್ಲಿ ಮೊದಲ ಬಾರಿಗೆ ದರ್ಶನ ಪಡೆದದ್ದೂ ಗೌರಿಹುಣ್ಣಿಮೆಯಂದೇ ! ನನ್ನ ಬದುಕಿನಲ್ಲಿ ಗೌರಿಹುಣ್ಣಿಮೆಗೆ ವಿಶೇಷ ಅರ್ಥ,ಮಹತ್ವವಿದೆ ಎನ್ನಿಸುತ್ತಿದೆ.ಗೌರಿ ಹುಣ್ಣಿಮೆಯು ದೇವಿ‌ಪರಾಶಕ್ತಿಯು ಲೋಕೋದ್ಧಾರಕ್ಕೆ ಭುವಿಗೆ ಇಳಿದು ಬಂದ ಪುಣ್ಯದಿನ. ದುರಿತನಿವಾರಕಿಯೂ ಅಶುಭನಿವಾರಕಿಯೂ ಆಗಿರುವ ತಾಯಿ ದುರ್ಗಾದೇವಿಯು ಸರ್ವಮಂಗಳೆಯು.ಶ್ರೀದೇವಿಯ ಪೂಜೆ- ಉಪಾಸನೆಗಳಿಂದ‌ಕೆಡುಕುಗಳು ಅಳಿದು,ಸರ್ವಶುಭಗಳೂ ಮೇಳೈಸುತ್ತವೆ.ಜೈ ಜಗದಂಬಾ! ಜೈ ದುರ್ಗಾಂಬಾ ! ಶರಣು ತಾಯಿ ದುರ್ಗಾಪರಮೇಶ್ವರಿ !
           ೦೫.೦೭.೨೦೨೪

About The Author