ಸರಕಾರಿ ಶಾಲೆಗಳಲ್ಲಿ ಹೋಮ – ಸಲ್ಲದ ನಡೆ:ಮುಕ್ಕಣ್ಣ ಕರಿಗಾರ

ಸರಕಾರಿ ಶಾಲೆಗಳ ಪ್ರಾರಂಭೋತ್ಸವದ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಹೋಮ ನಡೆಸಿದ ಘಟನೆಗಳು ವರದಿಯಾಗಿವೆ.ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಪಡಿಬಾಗಿಲು ,ಸುಳ್ಯ ತಾಲೂಕಿನ ಹರಿಹರ ಪಳ್ಕತ್ತಡ,ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಸರ್ಕಾರಿ ಶಾಲೆಗಳಲ್ಲಿ ಶಾಲೆಗಳ ಪ್ರಾರಂಭೋತ್ಸವ ದಿನವಾದ ಸೋಮವಾರದಂದು ಶಾಲಾ ಶಿಕ್ಷಕರ ಸಮ್ಮುಖದಲ್ಲೇ ಹೋಮಗಳು ನಡೆದ ವರದಿಗಳು ಪ್ರಕಟಗೊಂಡಿವೆ.ಇದು ಆಕ್ಷೇಪಾರ್ಹ ಸಂಗತಿ.ಶಾಲಾ ಶಿಕ್ಷಕರ ಸಮ್ಮುಖದಲ್ಲೇ ನಡೆದಿದೆ ಎಂದರೆ ಒಂದೋ ಆ ಶಿಕ್ಷಕರುಗಳು ಹೋಮವನ್ನು ಬೆಂಬಲಿಸುವ ವರ್ಗಕ್ಕೆ ಸೇರಿರಬೇಕು ಇಲ್ಲವೆ ಯಾರದೋ ಒತ್ತಡಕ್ಕೆ ಮಣಿದ ಅಸಹಾಯಕತೆಯೂ ಅವರದಾಗಿರಬಹುದು.ಆದರೆ ಶಾಲೆಯ ಆವರಣದಲ್ಲೇ ನಡೆದ ಹೋಮದಲ್ಲಿ ಶಿಕ್ಷಕರುಗಳು ಪಾಲ್ಗೊಂಡಿದ್ದು ಸರಿಯಲ್ಲ.ಸರಕಾರಿ ಶಾಲೆಗಳ ಶಿಕ್ಷಕರು ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕಾದವರು,ಖಾಸಗಿ ಸಂಪ್ರದಾಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಆಚರಿಸಲು ಅವಕಾಶಕೊಡಬಾರದ ಸಾಂವಿಧಾನಿಕ ಹೊಣೆಗಾರಿಕೆ ಹೊತ್ತವರು.

ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ವೈಭವೀಕರಣದ ಹೆಸರಿನಲ್ಲಿ ರಾಷ್ಟ್ರದ ಜಾತ್ಯಾತೀತ ಮೌಲ್ಯಗಳಿಗೆ ಧಕ್ಕೆಯನ್ನುಂಟುಮಾಡುವ ಕೃತ್ಯಗಳು ನಡೆಯುತ್ತಿವೆ.ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧರ್ಮದ ಆಚರಣೆಗಳು ಸಲ್ಲದು.ಖಾಸಗಿ ಜೀವನದಲ್ಲಿ ಯಾರು,ಯಾವುದೇ ಆಚರಣೆಗಳನ್ನು ಕೈಗೊಳ್ಳಬಹುದು.ಆದರೆ ಸಾರ್ವಜನಿಕ ಜೀವನದಲ್ಲಿ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕಾದದ್ದು ಕರ್ತವ್ಯ; ಅದರಲ್ಲೂ ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳು ಪಡೆಯುವ ಸರಕಾರಿ ನೌಕರರು ಮತ್ತು ಅಧಿಕಾರಿಗಳು ಸಂವಿಧಾನಬದ್ಧರಾಗಿಯೇ ನಡೆದುಕೊಳ್ಳಬೇಕು.ಸರಕಾರಿ ಶಾಲೆಗಳು ಸಂವಿಧಾನದ ವಿಧಿ ನಿಯಮಗಳಂತೆ ಸ್ಥಾಪಿಸಲ್ಪಟ್ಟ ಶೈಕ್ಷಣಿಕ ಕೇಂದ್ರಗಳು.ಅಲ್ಲಿ ಯಾವುದೇ ತಾರತಮ್ಯ,ಯಾವುದೇ ಮತ- ಧರ್ಮಗಳ ಆಚರಣೆಗೆ ಅವಕಾಶ ಇರಕೂಡದು.ಇದು ಹಿಂದೂ ಮುಸ್ಲಿಂ,ಕ್ರೈಸ್ತ ಧರ್ಮೀಯರೆಲ್ಲರಿಗೂ ಅನ್ವಯಿಸುತ್ತದೆ.

ನಮ್ಮ ಸಂವಿಧಾನವು ಮೂಢನಂಬಿಕೆಗಳನ್ನು ಕೈಬಿಟ್ಟು ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಳ್ಳುವಂತೆ ದೇಶದ ನಾಗರಿಕರನ್ನು ಒತ್ತಾಯಿಸುತ್ತದೆ.ಯಜ್ಞ ಹೋಮ ಹವನಗಳನ್ನು ಬೇಕಿದ್ದರೆ ವೈಯಕ್ತಿಕವಾಗಿ ಮನೆ,ಮಠ- ಮಂದಿರಗಳಲ್ಲಿ ನಡೆಸಲಿ,ಅದಕ್ಕೆ ಯಾರ ತಕರಾರೂ ಇಲ್ಲ.ಸಾರ್ವಜನಿಕ ಸ್ಥಳಗಳಾದ ಸರಕಾರಿ ಶಾಲೆಗಳಲ್ಲಿ ಹೋಮವನ್ನು ಯಾಕೆ ನಡೆಸಬೇಕು? ಹೋಮವನ್ನು ನಡೆಸಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕಲಿಸುವ ಪಾಠವಾದರೂ ಏನು ? ಅಷ್ಟಕ್ಕೂ ಹೋಮಕ್ಕೆ ವೈಜ್ಞಾನಿಕ ಮಹತ್ವ ಏನಾದರೂ ಇದೆಯಾ? ಸರಕಾರಿ ಶಾಲೆಗಳು ಎಲ್ಲ ಜಾತಿ,ಜನಾಂಗ,ಧರ್ಮದ ಮಕ್ಕಳಿಗೆ ಮುಕ್ತವಾಗಿರುವ ಸಾರ್ವಜನಿಕ ಸ್ಥಳಗಳು.ಇಂತಹ ಪವಿತ್ರ ಶಾಲೆಗಳಲ್ಲಿ ಯಾವುದೋ ಒಂದು ಮತ ಇಲ್ಲವೇ ಪಂಥದ ಆಚರಣೆಯನ್ನು ಕೈಗೊಳ್ಳುವುದು ಮತ್ತು ಅದನ್ನು ಬೆಂಬಲಿಸುವುದು ಉಚಿತವಲ್ಲ.

ಸ್ವಾತಂತ್ರ್ಯೋತ್ತರ ಭಾರತವು ಜಾತ್ಯತೀತರಾಷ್ಟ್ರವಾಗಿರುವಂತೆಯೇ ಭಾರತವು ಅನಾದಿಕಾಲದಿಂದಲೂ ಭಕ್ತಿಸಂಸ್ಕೃತಿಯ ನಾಡೇ ಹೊರತು ಹೋಮಸಂಸ್ಕೃತಿಯ ನೆಲೆಯಲ್ಲ.ವೀರಭದ್ರನು ದಕ್ಷಯಜ್ಞವನ್ನು ಧ್ವಂಸಮಾಡುವ ಮೂಲಕ ಭಾರತವು ಶಿವಭಕ್ತಿಯ ಪುಣ್ಯಭೂಮಿಯೇ ಹೊರತು ಯಜ್ಞಸಂಸ್ಕೃತಿಯ ನೆಲವಲ್ಲ ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದ್ದಾನೆ.ವೀರಭದ್ರನ ದಕ್ಷಯಜ್ಞ ಪ್ರಸಂಗದ ಇತಿಹಾಸ ಮತ್ತು ಡಾ. ಬಿ ಆರ್ ಅಂಬೇಡ್ಕರ ಅವರ ಸಂವಿಧಾನ ಇವೆರಡೇ ನಮ್ಮ ಆದರ್ಶವಾಗಬೇಕು.ವೀರಭದ್ರನು ಯಜ್ಞಸಂಸ್ಕೃತಿಯನ್ನು ಧ್ವಂಸಗೊಳಿಸಿ ನೆಲಮೂಲ ಜನಪದ ಸಂಸ್ಕೃತಿಯ‌ನ್ನು ಎತ್ತಿಹಿಡಿದರೆ ಅಂಬೇಡ್ಕರ ಅವರು ವ್ಯಕ್ತಿತ್ವದ ಘನತೆಗೆ ಧಕ್ಕೆಯನ್ನುಂಟು ಮಾಡುವ ಮೂಢನಂಬಿಕೆ,ಕಂದಾಚಾರಗಳನ್ನು ವಿರೋಧಿಸಿದ್ದರು.ಹೀಗಾಗಿ ಯಜ್ಞಸಂಸ್ಕೃತಿ ಪವಿತ್ರವಾದುದು,ಹೋಮಗಳು ದೇವತೆಗಳನ್ನು ತೃಪ್ತಿಪಡಿಸುತ್ತವೆ ಎನ್ನುವ ಮಾತುಗಳು ಅರ್ಥಹೀನ.

ಸರ್ಕಾರಿ ಶಾಲೆಗಳು ಸರ್ವಸಂಸ್ಕೃತಿಗಳ ಸಂಗಮ ತೋಟಗಳು.ಅಲ್ಲಿ ಅರಳುವ ಕುಸುಮಗಳಿರುತ್ತವೆ.ಅರಳಿ ಸೌರಭಸೂಸುವ ಕುಸುಮಗಳಿಗೆ ಸತ್ತ್ವವನ್ನುಣಿಸಬೇಕೇ ಹೊರತು ಕಂದಾಚಾರದ ಕಟ್ಟುಪಾಡುಗಳಲ್ಲಿ ಅವರುಗಳನ್ನು ಬಂಧಿಸಬಾರದು.ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣಚಳುವಳಿ ಯಜ್ಞ,ಹೋಮಾದಿ ಪುರೋಹಿತರ ಸಂಸ್ಕೃತಿಯನ್ನು ಅಲ್ಲಗಳೆದ ಸರ್ವೋದಯ ತತ್ತ್ವದ ಸರ್ವಸಮತೆಯ ಶಿವಸಮಾಜ ನಿರ್ಮಾಣದ ಗುರಿಯನ್ನು ಹೊಂದಿತ್ತು.ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಪ್ರದೇಶದ ಬಡವರ ಮಕ್ಕಳುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಾರೆ.ದಲಿತ ಹಿಂದುಳಿದ ವರ್ಗಗಳಿಂದ ಬಂದ ಮಕ್ಕಳುಗಳ ಬಾಳಿಗೆ ಬೆಳಕಾಗುವ,ಅವರಿಗೆ ಉದ್ಯೋಗ- ಉನ್ನತಿಯನ್ನು ನೀಡುವ ವೈಜ್ಞಾನಿಕ ಮನೋಭಾವದ ಶಿಕ್ಷಣ ನೀಡಬೇಕು,ಅದಕ್ಕೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು.ಹೋಮಗಳನ್ನು ಆಚರಿಸಿ,ಧಾರ್ಮಿಕ ಆಚರಣೆಗಳಿಂದ ಅರಳುವ ಮನಸ್ಸುಗಳನ್ನು ಕುಬ್ಜಗೊಳಿಸಬಾರದು.ವಿದ್ಯಾರ್ಥಿಗಳು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಹಿಡಿಸಿತು ಎಂದರೆ ಹೋಮ ಹವನಾದಿ ಪೂಜೆ ಪುರಸ್ಕಾರಗಳು ಕೈಗೊಳ್ಳಲಿ.ಈಗ ಎಳೆಯ ಮನಸ್ಸುಗಳ ಮೇಲೆ ಪ್ರಭಾವಬೀರುವಂತೆ ವೈಜ್ಞಾನಿಕ ಆಧಾರವಿಲ್ಲದ ಹೋಮಗಳನ್ನು ಸರಕಾರಿ ಶಾಲೆಗಳಲ್ಲಿ ಆಚರಿಸಿ ನಾಳಿನ ನಾಡಿನ ಪ್ರಜೆಗಳಾಗಲಿರುವ ಮಕ್ಕಳುಗಳನ್ನು ಸಂಪ್ರದಾಯಶರಣರನ್ನಾಗಿಸುವುದು ಬೇಡ.ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡವರು,ಹಿಂದುಳಿದವರು ಮತ್ತು ದಲಿತರ ಮಕ್ಕಳನ್ನು ವಿಚಾರಶೂನ್ಯರನ್ನಾಗಿಸದೆ ಅವರ ಸರ್ವತೋಮುಖ ವಿಕಸನಕ್ಕೆ ನೆರವಾಗುವುದು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಜವಾಬ್ದಾರಿ.ಅದು ಶಿಕ್ಷಣ ಇಲಾಖೆಯ ಸಾಂವಿಧಾನಿಕ ಹೊಣೆಗಾರಿಕೆ ಕೂಡ.

About The Author