ಅಧ್ಯಾತ್ಮ ಮತ್ತು ಆಹಾರ

ಚಿಂತನೆ : ಅಧ್ಯಾತ್ಮ ಮತ್ತು ಆಹಾರ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ಸಮಾಜೋ ಧಾರ್ಮಿಕ ಕಾರ್ಯಗಳಿಂದ ಪ್ರಭಾವಿತರಾದ ಶ್ರೀನಿವಾಸ ರಾಠೋಡ ಎನ್ನುವ ತರುಣರೊಬ್ಬರು ವಿಜಯಪುರದಿಂದ ಅಧ್ಯಾತ್ಮಿಕ ಸಾಧನೆಗೆ ಮಾಂಸಹಾರ ನಿಷಿದ್ಧವೆ ಎನ್ನುವ ಅರ್ಥದ ಪ್ರಶ್ನೆಯನ್ನು ಕೇಳಿದ್ದಾರೆ.ರಾಯಚೂರು ಜಿಲ್ಲೆಯ ಅರಕೇರಾ ತಾಲ್ಲೂಕಿನ ಬಂಡೆಗುಡ್ಡ ಗ್ರಾಮವ್ಯಾಪ್ತಿಯ ಸೀತಮ್ಮ ತಾಂಡದವರಾಗಿದ್ದು ಪ್ರಸ್ತುತ ವಿಜಯಪುರದ ಪ್ರಕಾಶ ಸಿ ಎನ್ ಮಹಾವಿದ್ಯಾಲಯದಲ್ಲಿ ಬಿ.ಕಾಂ 4 ನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಶ್ರೀನಿವಾಸ ರಾಠೋಡ ಬಾಲ್ಯದಲ್ಲಿಯೇ ದೇವರು- ಧರ್ಮ,ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಂಡಿರುವುದು ಮೆಚ್ಚುವ ಸಂಗತಿ.ಅವರ ತಾಂಡಾನಿವಾಸಿಗಳೊಂದಿಗೆ ಒಮ್ಮೆ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ಆದಿತ್ಯವಾರ ನಡೆಯುತ್ತಿರುವ ‘ ಶಿವೋಪಶಮನ ಕಾರ್ಯ’ ದಲ್ಲಿ ಪಾಲ್ಗೊಂಡು ಮಹಾಶೈವ ಧರ್ಮಪೀಠದ ಲೋಕೋದ್ಧಾರ ಬದ್ಧತೆ,ಸರ್ವೋದಯಭಾವ,ಸಮನ್ವಯ ತತ್ತ್ವಾನುಷ್ಠಾನದಿಂದ ಪ್ರಭಾವಿತರಾಗಿದ್ದಾರೆ.’ಶಿವೋಪಶಮನ ಕಾರ್ಯ’ ದಲ್ಲಿ ಸಂತಾನಾಪೇಕ್ಷೆ ಮತ್ತು ವ್ಯಾಧಿಪೀಡಿತ ಭಕ್ತರುಗಳಿಗೆ ನಾನು ಇಪ್ಪತ್ತೊಂದು ದಿನಗಳ ಕಾಲ ಕಡ್ಡಾಯವಾಗಿ ಮಾಂಸಹಾರ ಮತ್ತು ಮದ್ಯಪಾನ ಬಿಡಬೇಕು ಎನ್ನುವ ನಿರ್ಬಂಧನೆ ವಿಧಿಸುತ್ತಿರುವುದನ್ನು ಕಂಡೋ ಏನೋ ಶ್ರೀನಿವಾಸ ಅವರಲ್ಲಿ ಮಾಂಸಹಾರ ಬಿಡುವುದು ಅನಿವಾರ್ಯವೆ ಎನ್ನುವ ಪ್ರಶ್ನೆ ಕಾಡಿರಬೇಕು.ಅದಕ್ಕಾಗಿ ‘ ಸರ್,ಶಿವನು ಬೇಡರ ಕಣ್ಣಪ್ಪನಿತ್ತ ಮಾಂಸವನ್ನು ತಿಂದನಲ್ಲ.ಹುಲಿ ಚರ್ಮವನ್ನು ಧರಿಸುತ್ತಿದ್ದಾನಲ್ಲ.ಅಘೋರಿಗಳು ಮಾಂಸ ಭಕ್ಷಣೆ ಮಾಡುವುದರ ಜೊತೆಗೆ ಸುಟ್ಟ ಹೆಣದ ಬೂದಿಯನ್ನು ಮೈಗೆ ಬಡಿದುಕೊಳ್ಳುತ್ತಿದ್ದಾರಲ್ಲ? ಉಜ್ಜಯನಿಯ ಮಹಾಕಾಲ ಶಿವನಿಗೆ ಸುಟ್ಟ ಹೆಣದ ಬೂದಿಯನ್ನು ಬಳಿಯುತ್ತಾರಂತೆ. ಶಿವಭಕ್ತರಾದವರು ಮಾಂಸಾಹಾರ ತ್ಯಜಿಸುವುದು ಅನಿವಾರ್ಯವೆ?’ ಎಂದು ಪ್ರಶ್ನಿಸಿದ್ದಾರೆ.

ಶ್ರೀನಿವಾಸ ರಾಠೋಡ ಅವರ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆಯೂ ಹೌದು.ಆಹಾರಪದ್ಧತಿಯ ಬಗೆಗೆ ಈಗ ವಿವಿಧ ರೀತಿಯ ವ್ಯಾಖ್ಯಾನ- ಅಪವ್ಯಾಖ್ಯಾನ,ವಾದ- ವಿವಾದಗಳು ನಡೆಯುತ್ತಿವೆ.ಆಹಾರಪದ್ಧತಿಯು ಅವರವರ ಆಯ್ಕೆಗೆ ಸಂಬಂಧಿಸಿದ್ದು ಎನ್ನುವ ವಿಚಾರವನ್ನು ನಾನೂ ಸಮರ್ಥಿಸುತ್ತೇನೆ ಆದರೂ ಅಧ್ಯಾತ್ಮ ಸಾಧಕರುಗಳು ಮತ್ತು ಯೋಗಿಗಳಿಗೆ ಸಸ್ಯಹಾರವೇ ಶ್ರೇಷ್ಠ ಎಂದು ಹೇಳುತ್ತೇನೆ.ನಮ್ಮ ಆಹಾರಕ್ಕೂ ನಮ್ಮ ವ್ಯಕ್ತಿತ್ವಕ್ಕೂ ನೇರ ಸಂಬಂಧ ಇದೆ.ನಾವು ಎಂತಹ ಆಹಾರವನ್ನು ಸೇವಿಸುತ್ತೇವೆಯೋ ಅಂತಹ ವ್ಯಕ್ತಿತ್ವ ನಮ್ಮದಾಗುತ್ತದೆ.ನಾವು ಉತ್ತಮ ವ್ಯಕ್ತಿಗಳಾಗಬೇಕು,ಸತ್ಪುರುಷರಾಗಬೇಕು ಎಂದರೆ ಸಸ್ಯಹಾರವನ್ನೇ ಸೇವಿಸಬೇಕು.ಮಹತ್ಕಾರ್ಯಗಳನ್ನು ಸಾಧಿಸಬೇಕು,ರೋಗಮುಕ್ತರಾಗಿ ದೀರ್ಘಕಾಲ ಬದುಕಬೇಕು ಎಂದರೆ ಸಸ್ಯಹಾರಿಗಳಾಗಬೇಕು.ಮುಖದಲ್ಲಿ ದೈವಿಕ ತೇಜಸ್ಸು,ಮೈಯಲ್ಲಿ ದಿವ್ಯಕಾಂತಿ ಪ್ರಕಟಗೊಳ್ಳಬೇಕು ಎಂದರೆ ಸಸ್ಯಹಾರಿಗಳಾಗಬೇಕು.

ಮನುಷ್ಯರಲ್ಲಿ ಸತ್ತ್ವ,ತಮ,ರಜೋಗುಣಗಳೆಂಬ ಸ್ವಭಾವಗಳ ಜನರು ಇರುವಂತೆ ಆಹಾರದಲ್ಲಿಯೂ ಕೂಡ ಸಾತ್ತ್ವಿಕ ಆಹಾರ,ರಾಜಸ ಆಹಾರ ಮತ್ತು ತಾಮಸ ಆಹಾರಗಳಿವೆ.ಸಾತ್ತ್ವಿಕ ಆಹಾರ ಸೇವನೆಯಿಂದ ಸಾತ್ತ್ವಿಕ ವ್ಯಕ್ತಿಗಳಾದರೆ ರಾಜಸ ಆಹಾರ ಸೇವನೆಯಿಂದ ಗೊಂದಲದ ವ್ಯಕ್ತಿತ್ವ ರಜೋಗುಣಪ್ರಭಾವಿತ ವ್ಯಕ್ತಿಗಳಾಗುತ್ತಾರೆ ಮತ್ತು ತಾಮಸ ಆಹಾರ ಸೇವಿಸುವವರು ತಾಮಸಗುಣಪೀಡಿತ ವ್ಯಕ್ತಿಗಳಾಗುತ್ತಾರೆ.ಹಾಲು, ತುಪ್ಪ,ಹಣ್ಣುಗಳು,ತರಕಾರಿಗಳು,ಬಿಸಿಯಾದ ಅಡುಗೆ ಮೊದಲಾದವು ಸಾತ್ತ್ವಿಕ ಆಹಾರವಾದರೆ,ಮೊಸರು,ಮಜ್ಜಿಗೆ,ಬೇಯಿಸಿ ಆರು ತಾಸುಗಳ ನಂತರ ಸೇವಿಸುವ ಆಹಾರ ಮೊದಲಾದವುಗಳು ರಾಜಸ ಆಹಾರವಾದರೆ ಮಾಂಸಾಹಾರವು ತಾಮಸ ಆಹಾರವಾಗುತ್ತದೆ.ಬರಿ ಮಾಂಸಾಹಾರವಷ್ಟೇ ಅಲ್ಲ,ಹಳಸಿದ ಆಹಾರ,ಈರುಳ್ಳಿ,ಬೆಳ್ಳುಳ್ಳಿಗಳು ಸಹ ತಾಮಸ ಆಹಾರವೆ! ಮೂರು ವಿಧದ ಆಹಾರಗಳ ಪಟ್ಟಿ ದೊಡ್ಡದಿದೆ,ಈ ಲೇಖನದ ವಸ್ತು ಅದೇ ಅಲ್ಲವಾದ್ದರಿಂದ ಕೆಲವೇ ಆಹಾರಗಳನ್ನು ಮಾತ್ರ ಇಲ್ಲಿ ಹೆಸರಿಸಿದ್ದೇನೆ.ಬ್ರಾಹ್ಮಣರ ಜೀವನ ಶೈಲಿಗೂ ಅವರ ಆಹಾರ ಪದ್ಧತಿಗೂ ಸಂಬಂಧವಿದೆ.ಬ್ರಾಹ್ಮಣರು ಶುದ್ಧ ಸಸ್ಯಹಾರಿಗಳು ( ಈಗ ಕಾಲಮಾನವಿಪರೀತ ಎಂಬಂತೆ ಬ್ರಾಹ್ಮಣರಲ್ಲಿಯೂ ಮಾಂಸಭಕ್ಷಣೆಯ ಪ್ರವೃತ್ತಿ ಹೆಚ್ಚುತ್ತಿದೆ).ಅಲ್ಲದೆ ಬ್ರಾಹ್ಮಣರು ಸತ್ತ್ವಯುತ ಆಹಾರವನ್ನೇ ಸೇವಿಸುತ್ತಾರೆ.ಹೀಗಾಗಿ ಬ್ರಾಹ್ಮಣರಲ್ಲಿ ಸಿಟ್ಟಿನ ಸ್ವಭಾವ ವಿರಳ ಎಂಬಷ್ಟಿದೆ.ಆದರೆ ಉಪ್ಪು ಹುಳಿ ಖಾರಗಳನ್ನು ತಿನ್ನುವ ಶೂದ್ರರು ಮತ್ತು ತಳಸಮುದಾಯಗಳಲ್ಲಿ ಜನರಲ್ಲಿ ಸಿಟ್ಟು- ಸೆಡವು,ದ್ವೇಷಾಸೂಯೆಯ ಗುಣ ಸ್ವಭಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಕಾರಣ ಇಷ್ಟೆ,ಉಪ್ಪು,ಹುಳಿ,ಖಾರ ತಿನ್ನುವುದರಿಂದ ಮೈ ಮತ್ತು ಮನಸ್ಸುಗಳು ಕೆರಳಿ,ಉದ್ವೇಗಪ್ರವೃತ್ತಿ ಉಂಟಾಗುತ್ತದೆ.ಜಗಳ ಪ್ರವೃತ್ತಿ,ಹೊಡೆದಾಟ,ಕಚ್ಚಾಟಗಳೆಲ್ಲ ಕೆಳವರ್ಗದ ಜನರಲ್ಲಿಯೇ ಹೆಚ್ಚು ಎನ್ನುವುದಕ್ಕೆ ಅವರ ಆಹಾರಪದ್ಧತಿಯೇ ಕಾರಣ.ಬ್ರಾಹ್ಮಣರು ತುಪ್ಪ ಇಲ್ಲದೆ ಊಟ ಮಾಡುವುದಿಲ್ಲ.ಅಲ್ಲದೆ ಅವರು ಸೇವಿಸುವ ಬೂದುಗುಂಬಳ ಕಾಯಿ ಅತ್ಯಂತ ಪೌಷ್ಟಿಕ ಆಹಾರ.ಅಡುಗೆಯಲ್ಲಿ ಬಳಸುವ ಇಂಗು ರಕ್ತವನ್ನು ಶುದ್ಧಿಗೊಳಿಸುವುದಲ್ಲದೆ ಕಾಮೋದ್ರೇಕವನ್ನು ಅದುಮುವ,ಅಡ್ಡದಾರಿ ಹಿಡಿಯದಂತೆ ಕಾಪಾಡುವ ಸಾಂಬಾರ ಪದಾರ್ಥ.ಬ್ರಾಹ್ಮಣರು ಉಪ್ಪು ಹುಳಿ ಖಾರವನ್ನು ಮಿತವಾದ ಪ್ರಮಾಣದಲ್ಲಿ ಮಾತ್ರ ಬಳಸುತ್ತಾರೆ.ನಮ್ಮಲ್ಲಿ ವೇದ,ಉಪನಿಷತ್ತು ಮತ್ತು ಶಾಸ್ತ್ರಗಳು ಹತ್ತಾರು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿದ್ದೇ ಬ್ರಾಹ್ಮಣರಿಂದ.ಶ್ರುತಿ ಮತ್ತು ಸ್ಮೃತಿಗಳೆನ್ನುವ ವೈದಿಕ ಸಾಹಿತ್ಯವನ್ನು ಬ್ರಾಹ್ಮಣರು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿದ್ದಾರೆ.ಅದಕ್ಕೆ ಬಹುಮುಖ್ಯ ಕಾರಣ ಅವರ ಆಹಾರ ಪದ್ಧತಿಯೆ.ಹಾಲು,ತುಪ್ಪ,ಬೂದುಗುಂಬಳ ಕಾಯಿಯಂತಹ ಪೌಷ್ಟಿಕಾಂಶ ಭರಿತ ಆಹಾರಸೇವನೆಯಿಂದ ಬ್ರಾಹ್ಮಣರ ಸ್ಮರಣಶಕ್ತಿಯು ವೃದ್ಧಿಯಾಗಿ ಅವರು ವೇದ,ಉಪನಿಷತ್ತುಗಳನ್ನು ಕಂಠಪಾಠ ಮಾಡಿಕೊಂಡಿರಲು ಸಾಧ್ಯವಾಗಿದೆ.ಹಿಂದೆ ಪುಸ್ತಕಗಳು ಇಲ್ಲದೆ ಇದ್ದಕಾಲದಲ್ಲಿ ವೇದಮಂತ್ರಗಳನ್ನು ಕಂಠಪಾಠ ಮಾಡುವ ಮತ್ತು ಆ ಪದ್ಧತಿಯನ್ನು ಮುಂದುವರೆಸುವ ಮೂಲಕ ಬ್ರಾಹ್ಮಣರು ಇಂದಿಗೂ ವೈದಿಕವಾಙ್ಮಯವು ಜೀವಂತವಾಗಿರಲು ಕಾರಣರಾಗಿದ್ದಾರೆ.ತಾಳೆಯೋಲೆಯ ಆವಿಷ್ಕಾರವಾಗುವ ಪೂರ್ವದಲ್ಲಿಯೇ ಈ ಮಾನವ ಕಂಪ್ಯೂಟರ್ ಗಳು ತಮ್ಮ ತಲೆಯಲ್ಲಿ ವೇದ ಭಂಡಾರವನ್ನು ಸುರಕ್ಷಿತವಾಗಿ ಸಂರಕ್ಷಿಸಿ ಇಟ್ಟುಕೊಂಡಿದ್ದರು.ವೇದದಲ್ಲಿ ಹಲವು ಶಾಖೆಗಳಿರಲು ಇದೇ ಕಾರಣ.ಒಂದೊಂದು ಬ್ರಾಹ್ಮಣ ಕುಟುಂಬವು ವೇದದ ಒಂದೊಂದು ಶಾಖೆಯನ್ನು ಕಂಠಪಾಠ ಮಾಡುತ್ತ,ಅದನ್ನು ಪಠಿಸುತ್ತ ಹೋದರು.ಏಕವೇದಿ,ದ್ವಿವೇದಿ,ತ್ರಿವೇದಿ ಮತ್ತು ಚತುರ್ವೇದಿ ಬ್ರಾಹ್ಮಣ ಮನೆತನಗಳು ವೇದವನ್ನು ಕಂಠಪಾಠ ಮಾಡಿಕೊಂಡಿದ್ದ ಅವರ ಅಗಾಧಸ್ಮರಣಶಕ್ತಿಯ ಕುರುಹು.ಇದು ಸಾಧ್ಯವಾದದ್ದು ಶುದ್ಧ ಸಾತ್ತ್ವಿಕ ಆಹಾರದಿಂದ.ಇಂತಹ ಮೇಧೋಶಕ್ತಿ,ಪ್ರತಿಭಾಶಕ್ತಿ ಸಂಪನ್ನರಾಗಬೇಕಾದರೆ ಸಸ್ಯಹಾರಿಗಳಾಗಬೇಕು.ಭಾರತದ ನಿರ್ಮಾತೃಗಳಲ್ಲೊಬ್ಬರಾಗಿದ್ದ ಮಹಾನ್ ಇಂಜನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರಂತಹ ಪ್ರತಿಭಾವಂತ ಇಂಜನಿಯರುಗಳ ಸಂಖ್ಯೆ ತೀರ ಕಡಿಮೆ.ವಿಶ್ವೇಶ್ವರಯ್ಯನವರು ಸಸ್ಯಾಹಾರಿಗಳಾಗಿದ್ದರು,ಮಿತ ಭೋಜನ ಮಾಡುತ್ತಿದ್ದರು.ನಮ್ಮಲ್ಲಿ ಮೇಧಾಶಕ್ತಿಯನ್ನು ಹೆಚ್ಚಿಸುವ ಗಾಯತ್ರಿ ಮಂತ್ರ ಮತ್ತು ದಕ್ಷಿಣಾಮೂರ್ತಿಯ ಉಪಾಸನೆಗೆ ಸಸ್ಯಹಾರ ಕಡ್ಡಾಯ ಎಂದು ವಿಧಿಸಲಾಗಿದೆ.

ಮಾಂಸಾಹಾರಿಗಳು ತಮ್ಮ ಮಾಂಸಾಹಾರ ಸೇವನೆಯನ್ನು ಸಮರ್ಥಿಸಲು ಶಿವನು ಬೇಡರ ಕಣ್ಣಪ್ಪ ಇತ್ತ ಮಾಂಸದ ತುಂಡುಗಳನ್ನು ಸೇವಿಸಿದನು ಎನ್ನುವ ಸಮರ್ಥನೆ ನೀಡಬಹುದು.ಆದರೆ ಅದು ಅಪಕ್ವ ಹಾಗೂ ಅರ್ಥಹೀನವಾದ ವಾದ. ಪರಮ‌ಕರುಣಾಮಯಿಯಾದ ಶಿವನು ಕಣ್ಣಪ್ಪನನ್ನು ಉದ್ಧರಿಸಲು ಕಣ್ಣಪ್ಪನ ಮುಗ್ಧಭಕ್ತಿಯನ್ನು ಮೆಚ್ಚಿ,ಕಣ್ಣಪ್ಪನಿತ್ತ ಮಾಂಸದ ತುಣುಕುಗಳನ್ನು ಸೇವಿಸಿದನೇ ಹೊರತು ಮಾಂಸಾಹಾರದ ಹವ್ಯಾಸದಿಂದಲ್ಲ.ಶಿವನು ಬೇಡರ ಕಣ್ಣಪ್ಪನಿತ್ತ ಮಾಂಸದ ತುಂಡುಗಳನ್ನು ಸೇವಿಸಿದಂತೆಯೇ ಮಾದಾರ ಚೆನ್ನಯ್ಯನ ಮನೆಯ ಅಂಬಲಿಯನ್ನು ಸವಿದ.ಅರಸ ಕರಿಕಾಳ ಚೋಳನ ಷಡ್ರಸಭರಿತ ಭಕ್ಷ್ಯ ಭೋಜ್ಯಗಳಲ್ಲಿ ರುಚಿಯನ್ನು ಕಾಣದ ಶಿವನು ಮಾದಾರಚೆನ್ನಯ್ಯನ ಅಂಬಲಿಯಲ್ಲಿ ಸ್ವಾದಿಷ್ಟ ಸವಿಯನ್ನು ಉಂಡ.ಬೇಡರ ಕಣ್ಣಪ್ಪ ಮತ್ತು ಮಾದಾರ ಚೆನ್ನಯ್ಯನವರನ್ನು ಉದ್ಧರಿಸಲು ಶಿವನು ಅವರಿತ್ತ ಆಹಾರಸೇವಿಸುವ ಲೀಲೆಯನ್ನಾಡಿ ಅವರಿಬ್ಬರ ಮಹಿಮೆ ಜಗತ್ಪ್ರಸಿದ್ಧವಾಗುವಂತೆ ಮಾಡಿದ.ಒಡಲೇ ಇಲ್ಲದ ಶಿವನಿಗೆ ಹಸಿವಾಗುವುದುಂಟೆ ? ಶಿವನು ಉಣ್ಣುವುದುಂಟೆ ? ಒಡಲಿಲ್ಲದ ಶಿವನಿಗೆ ಹಸಿವು ತೃಷೆಗಳುಂಟೆ? ಇವೆಲ್ಲ ಶಿವನ ಭಕ್ತೋದ್ಧಾರದ ಲೀಲೆಗಳು.ಮನುಷ್ಯರು ತಮ್ಮ ಮಾಂಸಾಹಾರದ ತೆವಲಿಗೆ ಶಿವನ ನೆಪ ನೀಡಬಾರದು.ಅಘೋರಿಗಳು ನರಮಾಂಸಭಕ್ಷರಾಗಿರಬಹುದು.ಆದರೆ ಅಧ್ಯಾತ್ಮಪಥದಲ್ಲಿ ಅವರಿಗೆ ಎಂದು ಮನ್ನಣೆ ದೊರೆತಿಲ್ಲ.ಶಂಕರಾಚಾರ್ಯರು ಅಘೋರಿಗಳ ನೀತಿ ನಡತೆಯನ್ನು ಖಂಡಿಸಿದ್ದಾರೆ.ಬಸವಾದಿ ಶರಣರು ಸಹ ಅಘೋರಿಗಳ ಪರಂಪರೆಯವರೇ ಆದ ಕಾಪಾಲಿಕರು ಮತ್ತು ಭೈರವಾರಾಧಕರುಗಳನ್ನು ಖಂಡಿಸಿದ್ದಾರೆ.ಮಹಾಕಾಲ ಶಿವನಿಗೆ ಚಿತಾಭಸ್ಮದಿಂದ ಪೂಜಿಸುವುದು ಅವನು ಪ್ರಪಂಚವೆಂಬ ಮಹಾಸ್ಮಶಾನ ತತ್ತ್ವದ ಪ್ರತೀಕ ಮತ್ತು ಪ್ರಪಂಚವು ಪ್ರಳಯವಾದಾಗ ಶಿವನು ಆ ಬೂದಿಯನ್ನು ಶೇಖರಿಸಿಟ್ಟುಕೊಂಡು ಮುಂದೆ ಅದೇ ಬೂದಿಯಿಂದ ಪ್ರಪಂಚದ ಉತ್ಪತ್ತಿ ಮಾಡುತ್ತಾನೆ ಎನ್ನುವ ಸೃಷ್ಟಿತತ್ತ್ವದ ಸಂದೇಶವನ್ನು ಎತ್ತಿಹಿಡಿಯಲು.

ಜನರು ತಮಗೆ ಇಷ್ಟಬಂದ ಆಹಾರವನ್ನು ಸೇವಿಸುವ ಹಕ್ಕು- ಆಯ್ಕೆಯ ಅವಕಾಶವನ್ನು ಹೊಂದಿದ್ದಾರೆ.ಸ್ವತಂತ್ರ ಭಾರತದಲ್ಲಿ ಇಂತಹದ್ದೆ ಆಹಾರ ಸೇವಿಸಿ ಎಂದು ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ.ಅವರವರ ಇಷ್ಟದ ಆಹಾರವನ್ನು ಅವರವರು ಸೇವಿಸಬಹುದು.ಜನಸಾಮಾನ್ಯರು ಮತ್ತು ದುಡಿಯುವ ಶ್ರಮಿಕ ವರ್ಗದ ಜನರಿಗೆ ಬಾಹುಬಲದ ಅವಶ್ಯಕತೆ ಇರುವುದರಿಂದ ಅವರು ಮಾಂಸಾಹಾರ ಸೇವಿಸಬಹುದು.ಬುದ್ಧಿಬಲದಿಂದ ನಿರ್ವಹಿಸುವ ಕೆಲಸ ಕಾರ್ಯಗಳನ್ನು ಮಾಡುವವರು ಸಸ್ಯಹಾರಿಗಳಾಗಬೇಕು.ಯಾರು ಯಾವ ಆಹಾರವನ್ನಾದರೂ ಸೇವಿಸಲಿ ಆದರೆ ಯೋಗ,ಅಧ್ಯಾತ್ಮಸಾಧನೆ ಮಾಡಬಯಸುವವರು ಶುದ್ಧ ಸಸ್ಯಹಾರಿಗಳಾಗಿರಲೇಬೇಕು.

About The Author