ಮೊದಲ ಬಾರಿಗೆ ಕುಟುಂಬ ಸಮೇತನಾಗಿ ಬೆಂಗಳೂರಿನಲ್ಲಿ

ಸ್ವಗತ : ಮೊದಲ ಬಾರಿಗೆ ಕುಟುಂಬ ಸಮೇತನಾಗಿ ಬೆಂಗಳೂರಿನಲ್ಲಿ : ಮುಕ್ಕಣ್ಣ ಕರಿಗಾರ

ನಾನು ನೂರಾರು ಸಾರೆ ಬೆಂಗಳೂರಿಗೆ ಹೋಗಿದ್ದೆನಾದರೂ ಕುಟುಂಬ ಸಮೇತನಾಗಿ ಇದೇ ಮೊದಲ ಬಾರಿಗೆ ಬೆಂಗಳೂರು ಪ್ರಯಾಣ ಕೈಗೊಂಡೆ.ಮಡದಿ ಸಾಧನಾಳಿಗೆ‌ ಪಿತ್ತಕೋಶದಲ್ಲಿ ಹರಳು‌ ಇದ್ದುದರಿಂದ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು.ರಾಯಚೂರು ಮತ್ತು ಕಲ್ಬುರ್ಗಿಗಳ ವೈದ್ಯರಲ್ಲಿ ತೋರಿಸಿಯಾದ ಬಳಿಕ ಕೊನೆಗೆ ಬೆಂಗಳೂರಿನಲ್ಲೇ ಶಸ್ತ್ರಚಿಕಿತ್ಸೆ ಮಾಡಿಸುವುದು ಒಳಿತು ಎನ್ನುವ ಆತ್ಮೀಯ ವೈದ್ಯರುಗಳ ಸಲಹೆಯ ಮೇರೆಗೆ ಬೆಂಗಳೂರಿನತ್ತ ಹೊರಟೆವು.ಮೇ ೧೨ ರ ಭಾನುವಾರ ಸಂಜೆಯೇ ಗಬ್ಬೂರಿನಿಂದ ಕಲ್ಬುರ್ಗಿಯತ್ತ ಪ್ರಯಾಣಿಸಿದ್ದ ನಾವು ಅಲ್ಲಿಂದ ಮೇ ೧೫ ರ ಬುಧವಾರದಂದು ಬೆಳಿಗ್ಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆವು ಕಾರಿನಲ್ಲಿ.ನನ್ನ ಮಕ್ಕಳಿಬ್ಬರಾದ ವಿಂಧ್ಯಾ ಮತ್ತು ನಿತ್ಯಾ ಇಬ್ಬರಿಗೂ ಕಾರಿನ ಪ್ರಯಾಣ ತುಂಬ ಇಷ್ಟವಾದ್ದರಿಂದ ಕಾರಿನಲ್ಲೇ ಪ್ರಯಾಣಿಸಲು ನಿರ್ಧರಿಸಿದೆವು.ನಮ್ಮ ಶಿಷ್ಯ ಬಿಬ್ಬಣ್ಣನೇ ಡ್ರೈವರ್ ಆಗಿದ್ದುದರಿಂದ ಯಾವ ಸಮಸ್ಯೆಯೂ ಇರಲಿಲ್ಲ.ಮಕ್ಕಳಿಬ್ಬರು ದಾರಿಯುದ್ದಕ್ಕೂ ಊರು,ಕೇರಿ,ದೇವಸ್ಥಾನ,ತೋಟಗಳು ಗಿಡಮರಗಳನ್ನು ನೋಡುತ್ತ ಆನಂದಿಸುತ್ತಿದ್ದರು.ಕಲ್ಬುರ್ಗಿಯಿಂದ ಬೆಂಗಳೂರು ೬೨೫ ಕಿಲೋ ಮೀಟರುಗಳ ಅಂತರದಲ್ಲಿದೆ.ಇಷ್ಟು ದೂರದ ಪ್ರಯಾಣದಲ್ಲಿಯೂ ಮಕ್ಕಳಿಬ್ಬರು ತಮ್ಮ ಉತ್ಸಾಹ ಕಳೆದುಕೊಳ್ಳಲಿಲ್ಲ.

 

ಮೇ ೧೭ ರಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಮಡದಿ ಸಾಧನಾಳ ವೈದ್ಯಕೀಯ ಪರೀಕ್ಷೆ ಮಾಡಿಸಿದೆವು.ಅಲ್ಲಿ ಸಮಾಲೋಚಕ ವೈದ್ಯರಾಗಿದ್ದ ಮಾರುತೇಶಗೌಡರಿಗೆ ಮುವ್ವತ್ತು ವರ್ಷಗಳ ವೈದ್ಯಕೀಯ ಅನುಭವ ಇದ್ದುದಲ್ಲದೆ ಅವರು ಲಂಡನ್ ನಲ್ಲಿ ವೈದ್ಯಕೀಯ ವಿಜ್ಞಾನ ಓದಿ, ಎಂ ಡಿ ಪದವಿ ಪಡೆದದ್ದಲ್ಲದೆ ಹತ್ತುವರ್ಷಗಳ ಕಾಲ ಲಂಡನ್ ನಲ್ಲಿಯೇ ಪ್ರಾಕ್ಟೀಸ್ ಮಾಡಿದ್ದ ಮೇಧಾವಿ ಮತ್ತು ಅನುಭವಿ ವೈದ್ಯರಾಗಿದ್ದರು.ಅವರ ಸಲಹೆಯಂತೆ ಅವರು‌ ಸಮಾಲೋಚಕ ವೈದ್ಯರಾಗಿರುವ ಬೆಂಗಳೂರಿನ ಮತ್ತೊಂದು ಹೆಸರಾಂತ ಆಸ್ಪತ್ರೆ ಕೋಶಿಸ್ ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧರಿಸಲಾಯಿತು.ಮೇ ೧೮ ರ ಬೆಳಿಗ್ಗೆ ೬ ಘಂಟೆಗೆ ಬೆಂಗಳೂರಿನಲ್ಲಿ ನಾವು ತಂಗಿದ್ದ ಶಿವನಗರದ ಅಳಿಯ ಸುನಿಲ್ ಕುಮಾರನ ಮನೆಯಿಂದ ರಾಮಮೂರ್ತಿ ನಗರದಲ್ಲಿರುವ ಕೋಶಿಸ್ ಆಸ್ಪತ್ರೆಗೆ ತೆರಳಿದೆವು.ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಾಗಿರುವ ಕೋಶಿಸ್ ಆಸ್ಪತ್ರೆಯು ಲಿಟಲ್ ಫ್ಲವರ್ ಸಮೂಹ ಆಸ್ಪತ್ರೆಗಳಲ್ಲಿ ಒಂದಾಗಿದ್ದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದು.ಆಸ್ಪತ್ರೆ ತುಂಬ ವಿಸ್ತಾರವಾಗಿತ್ತು.ಕೈಗೆ ಒಬ್ಬರು ಕಾಲಿಗೊಬ್ಬರಂತೆ ವೈದ್ಯಕೀಯ ಸಿಬ್ಬಂದಿ ಇರುವ ಆಸ್ಪತ್ರೆ ಅದಾಗಿದ್ದರಿಂದ ಖುಷಿ ಎನಿಸಿತು.ನಮಗೆ ಪ್ರತ್ಯೇಕ ರೂಮ್ ವ್ಯವಸ್ಥೆ ಮಾಡಲಾಗಿತ್ತು.ವೈದ್ಯಕೀಯ ವಿದ್ಯಾರ್ಥಿನಿಯರು,ನರ್ಸ್ಗಳು,ಡಾಕ್ಟರ್ ಗಳು ಮೇಲಿಂದ ಮೇಲೆ ಬಂದು ವಿಚಾರಿಸುತ್ತಿದ್ದರು. ಹಾಸನದ ಡಾಕ್ಟರ್ ಮಾರುತೇಶಗೌಡಅವರೇ ಬೆಳಿಗ್ಗೆ ೮.೪೫ ಕ್ಕೆ ಮಡದಿ ಸಾಧನಾಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಪಿತ್ತಕೋಶದಲ್ಲಿದ್ದ ಎರಡು ಹರಳುಗಳನ್ನು ಹೊರತೆಗೆದರು.ಅಳಿಯ ಸುನಿಲ್ ಕುಮಾರನು ಎರಡು ದಿನಗಳ ಕಾಲ ರಜೆ ಹಾಕಿ ತನ್ನಕ್ಕನ ಯೋಗಕ್ಷೇಮವನ್ನು ತುಂಬ ಕಾಳಜಿಯಿಂದ ನಿರ್ವಹಿಸಿದ.ಆತನ ಮಡದಿ ಶ್ರೀಮತಿ ಜ್ಯೋತಿ ತನ್ನ ವರ್ಷದ ಮಗು ಕೃತ್ವಿಕ್ ನ ಜೊತೆ ನನ್ನ ಇಬ್ಬರು ತುಂಟ ಮಕ್ಕಳನ್ನು ಚೆನ್ನಾಗಿಯೇ ನಿಭಾಯಿಸಿದರು.

 

ಮಡದಿ ಸಾಧನಾಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಮಕ್ಕಳನ್ನು ಆಕೆಯ ಬಳಿ ಬಿಡುವಂತಿರಲಿಲ್ಲವಾದ್ದರಿಂದ ನಾನೇ ಮಕ್ಕಳನ್ನು ಕರೆದುಕೊಂಡು ಅವರಿಗೆ ಬೆಂಗಳೂರಿನ ಪರಿಚಯ ಮಾಡಿಸಿದೆ.ಮಕ್ಕಳು ಬೆಂಗಳೂರನ್ನು ಕಣ್ಣಾರೆ ಕಂಡು ಆನಂದಿಸಲಿ ಎಂದು ಕಾರಿನಲ್ಲಿ ಹೋಗದೆ ಪವನಕುಮಾರ್ ಬುಕ್ ಮಾಡಿದ್ದ ಆಟೋದಲ್ಲಿ ಒರಿಯನ್ ಮಾಲ್ ಗೆ ಹೋದೆವು.ಒರಿಯನ್ ಮಾಲ್ ಬೆಂಗಳೂರಿನ ಅತಿದೊಡ್ಡ ಮಾಲ್ ಗಳಲ್ಲಿ ಒಂದು.ನಾನು ಬೆಂಗಳೂರಿಗೆ ಹೋದಾಗಲೆಲ್ಲ ಮಂತ್ರಿ ಮಾಲ್ ಗೆ ಹೋಗುತ್ತಿದ್ದೆ.ಈ ಬಾರಿ ಬಿ ಬಿ ಎಂ ಪಿ ಗೆ ಕಟ್ಟಬೇಕಾಗಿದ್ದ ಆಸ್ತಿತೆರಿಗೆಯನ್ನು ಕಟ್ಟದೆ ಇದ್ದ ಕಾರಣದಿಂದ ಬಿ ಬಿ ಎಂ ಪಿ ಯ ಅಧಿಕಾರಿಗಳು ಮಂತ್ರಿಮಾಲ್ ಗೆ ಬೀಗ ಜಡಿದಿದ್ದರು.ಬಿ ಬಿ ಎಂ ಪಿ ಗೆ ಮಂತ್ರಿಮಾಲಿನ ಮಾಲಕರು ನೂರಾರು ಕೋಟಿಗಳ ಆಸ್ತಿತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು ಕೇಳಿ ನನ್ನಲ್ಲಿ ಬೇಸರ ಉಂಟಾಯಿತು.

ಓರಿಯನ್ ಮಾಲ್ ನಲ್ಲಿ ಸುತ್ತಾಡುತ್ತ ಆರು ವರ್ಷದ ಮಗಳು ವಿಂಧ್ಯಾ ಮತ್ತು ಮೂರು ವರ್ಷದ ಮಗಳು ನಿತ್ಯಾ ಕುಣಿದು ಕುಪ್ಪಳಿಸಿದರು.ಅವರ ಸಂತೋಷ,ಸಂಭ್ರಮ ಮೇರೆ ಮೀರಿತ್ತು.ಅವರು ಇಷ್ಟಪಟ್ಟ ಆಟಿಕೆಗಳನ್ನು ಕೊಡಿಸಿದ್ದಾಯಿತು.ಬೆಂಗಳೂರಿನ ಫುಟ್ ಪಾತಿನಲ್ಲಿ ನೂರು ರೂಪಾಯಿಗೆ ಸಿಗುತ್ತಿದ್ದ ಪ್ಲಾಸ್ಟಿಕ್ ಬೊಂಬೆಯ ಬೆಲೆ ಒರಿಯನ್ ಮಾಲ್ ನಲ್ಲಿ ಐದುನೂರು ರೂಪಾಯಿಗಳು! ದೊಡ್ಡದೊಡ್ಡ ಉದ್ಯಮಿಗಳು,ವ್ಯಾಪಾರಿಗಳು ಮಾಲ್ ಗಳನ್ನು ಕಟ್ಟಿಸಿ ಶ್ರೀಮಂತರಾಗುವುದು ಹೀಗೆ ತಾನೆ ? ತಲೆಯ ಮೇಲೆ ಹೊತ್ತು ಮಾರಲು ಬರುವ ಹಳ್ಳಿಯ ಹೆಣ್ಣುಮಕ್ಕಳಲ್ಲಿ ತರಕಾರಿ ಖರೀದಿಸುವಾಗ ಚೌಕಾಸಿ ಮಾಡುವ ಜನರು ಒರಿಯನ್ ಮಾಲ್ ನಂತಹ ಮಾಲ್ ಗಳಲ್ಲಿ ವ್ಯಾಪಾರಿಗಳು ನಿಗದಿಪಡಿಸಿದ ದರಕ್ಕೆ ಸಾಮಾನು ಸರಕುಗಳನ್ನು ಕೊಳ್ಳುವುದು ತಮ್ಮ ಪ್ರತಿಷ್ಠೆ ಎಂದೇ ಬಗೆಯುತ್ತಾರೆ.

ಒರಿಯನ್ ಮಾಲ್ ನ ಆವರಣದಲ್ಲಿದ್ದ ಮಕ್ಕಳ ಟ್ರೇನ್ ನಲ್ಲಿ ವಿಂಧ್ಯಾ ನಿತ್ಯಾರೊಂದಿಗೆ ಟ್ರೇನ್ ಸಂಚಾರ ಮಾಡಿದೆ.ಅಳಿಯ ಪವನ್ ಕುಮಾರ ನೊಂದಿಗೆ ಒರಿಯನ್ ಮಾಲ್ ಆವರಣದಲ್ಲಿದ್ದ ಹಟ್ಟಿ ಕಾಪಿ ಚಹಾದ ಹೊಟೆಲ್ ನಲ್ಲಿ ನನ್ನ ಪ್ರೀತಿಯ ಕಾಫಿ ಸೇವಿಸಿದೆವು.ಒಂದು ಕಾಫಿಯ ಬೆಲೆ ಒಂದು ನೂರಾ ಹತ್ತು ರೂಪಾಯಿ ! ಮಕ್ಕಳಿಗೆ ಕೊಡಿಸಿದ ಒಂದು ಬಾದಾಮಿ ಹಾಲಿನ ಬೆಲೆಯೂ ಒಂದು ನೂರಾ ಹತ್ತು ರೂಪಾಯಿಯೆ ! ಆಗ ನನಗೆ ನೆನಪಾದದ್ದು ನಮ್ಮ ಸರಕಾರಿ ಅಧಿಕಾರಿಗಳು ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಬೆವರಿನ ಶ್ರಮಕ್ಕೆ ಮುನ್ನೂರು ಚಿಲ್ಲರೆ ಹಣ ಕೊಡಲು ಏನೆಲ್ಲ ತಂತ್ರಜ್ಞಾನ,ನೀತಿ ನಿಯಮಾವಳಿಗಳನ್ನು ರೂಪಿಸುತ್ತಿದ್ದಾರೆ,ಕೇಂದ್ರ ಸರಕಾರವು ಉದ್ಯೋಗಖಾತ್ರಿ ಯೋಜನೆಯ ಕೂಲಿಕಾರರ ಕೂಲಿ ದರವನ್ನು ಹೆಚ್ಚಿಸಲು ಎಷ್ಟೊಂದು ಉದಾಸೀನ ಮನೋಭಾವ ತೋರುತ್ತಿದೆಯಲ್ಲ ಎನ್ನುವ ಬೇಸರದ ಸಂಗತಿ.ಸರಕಾರಿ ಅಧಿಕಾರಿಗಳು ನನ್ನಂತೆಯೇ ತಮ್ಮ ಮಡದಿ ಮಕ್ಕಳುಗಳೊಂದಿಗೆ ಬೆಂಗಳೂರು ಮುಂಬೈ ದೆಹಲಿ ಚನ್ನೈ ನಗರಗಳ ಪ್ರತಿಷ್ಠಿತ ಮಾಲ್ ಗಳಿಗೆ ತೆರಳಿ ಲಕ್ಷಾಂತರ ರೂಪಾಯಿಗಳ ವ್ಯಾಪಾರ ಮಾಡುತ್ತಾರೆ.ಆದರೆ ಅದೇ ಸರಕಾರಿ ಅಧಿಕಾರಿಗಳು ಮಹಾತ್ಮಗಾಂಧಿ ನರೆಗಾ ಯೋಜನೆಯಡಿ ಯೋಜನೆಯಲ್ಲಿಯೇ ಅವಕಾಶ ಕಲ್ಪಿಸಿದ್ದರೂ ಹೊಟ್ಟೆಪಾಡಿಗಾಗಿ ಬಿರುಬಿಸಿಲಲ್ಲಿ ದುಡಿಯುವ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು,ನೆರಳಿನ ವ್ಯವಸ್ಥೆ ಮಾಡದೆ ಕ್ರೌರ್ಯ ಮೆರೆಯುತ್ತಾರೆ.ದುಡಿಯುವ ಕುಟುಂಬಗಳ ಚಿಕ್ಕಮಕ್ಕಳಿಗೆ ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿಯೇ ದಾದಿಯರ ವ್ಯವಸ್ಥೆ ಮಾಡಬೇಕು ಎನ್ನುವ ನಿಯಮ ಇದ್ದರೂ ತಮ್ಮ ಮಡದಿ ಮಕ್ಕಳೊಂದಿಗೆ ವಿಲಾಸಿ ಜೀವನ ನಡೆಸುವ ಸಂವೇದನಾಶೂನ್ಯ ಸರಕಾರಿ ಅಧಿಕಾರಿಗಳು ಬಡಮಕ್ಕಳ ಬದುಕು ಭವಿಷ್ಯದ ಬಗ್ಗೆ ದಿವ್ಯನಿರ್ಲಕ್ಷ್ಯ ತಳೆಯುತ್ತಾರೆ.ಬಡಕುಟುಂಬಗಳಿಂದಲೇ ಬಂದು ಸರಕಾರಿ ಅಧಿಕಾರಿಗಳಾದವರೂ ಸರಕಾರಿ ಅಧಿಕಾರ ದೊರೆತೊಡನೆ ಇಂಗ್ಲಿಷರ ಮೊಮ್ಮಕ್ಕಳಂತೆ ವೈಭವೋಪಯುತ ಐ ಫೈ ಜೀವನ ನಡೆಸಬಯಸುತ್ತಾರೆ.

ಮಾರನೇ ದಿನ ಜ್ಯೋತಿಯವರು ನನ್ನಿಬ್ಬರು ಮಕ್ಕಳು ಅಳಿಯನ ಮನೆ ಇದ್ದ ಶಿವನಗರದ ದೊಡ್ಡಮದೇವಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು.ನಾನು ಪದವಿಮುಗಿಯುವವರೆಗೆ ಬೆಂಗಳೂರನ್ನು ನೋಡಿರಲಿಲ್ಲ.ಆದರೆ ನನ್ನ ಮಕ್ಕಳಾದ ವಿಂಧ್ಯಾ ಮತ್ತು ನಿತ್ಯಾರಿಗೆ ಅವರ ಎಳವೆಯಲ್ಲೇ ಬೆಂಗಳೂರು ನೋಡುವ ಅವಕಾಶ ಸಿಕ್ಕಿದೆ.ಇದು ಅವರವರು ಪಡೆದುಕೊಂಡು ಬರುವ ಅದೃಷ್ಟವೂ ಹೌದು.

About The Author