ಬಸವಣ್ಣನವರ ಫೋಟೋ ಇಡದ ಸ್ವಾಮಿ -ಸಂತರುಗಳು ಬಸವಣ್ಣನವರಿಗಿಂತ ದೊಡ್ಡವರಾಗುವುದಿಲ್ಲ !

ಮೂರನೇ‌ಕಣ್ಣು : ಬಸವಣ್ಣನವರ ಫೋಟೋ ಇಡದ ಸ್ವಾಮಿ -ಸಂತರುಗಳು ಬಸವಣ್ಣನವರಿಗಿಂತ ದೊಡ್ಡವರಾಗುವುದಿಲ್ಲ ! : ಮುಕ್ಕಣ್ಣ ಕರಿಗಾರ

ಕುಟುಂಬ ಸಮೇತ ಹುಬ್ಬಳ್ಳಿಗೆ ಬೇಸಿಗೆ ರಜೆಯ ನಿಮಿತ್ತವಾಗಿ ತೆರಳಿರುವ ನಮ್ಮ ಆತ್ಮೀಯರಾದ ಮಲ್ಲಿಕಾರ್ಜುನ ಬಾಗಲವಾಡ ಅವರು ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ ಫೋನ್ ಮಾಡಿ’ ಸರ್,ನಾನು ಒಂದು ಪ್ರಸಿದ್ಧಮಠ ( ಆ ಮಠದ ಹೆಸರನ್ನು ಬೇಕೆಂದೇ ಉಲ್ಲೇಖಿಸುತ್ತಿಲ್ಲ ನಾನು) ಕ್ಕೆ ಹೋಗಿದ್ದೆ ಅಲ್ಲಿ ಬಸವಣ್ಣನವರ ಫೋಟೋ ಇರಲಿಲ್ಲ.ಆ ಮಠ ಪರಂಪರೆಯ ಯಾವ ಶಾಖಾ ಮಠಗಳಲ್ಲಿಯೂ ಬಸವಣ್ಣನವರ ಫೋಟೋಗಳನ್ನು ಹಾಕುವುದಿಲ್ಲ’.ಮಲ್ಲಿಕಾರ್ಜುನ ಬಾಗಲವಾಡ ಅವರ ಮಾತುಗಳನ್ನು ಕೇಳಿ ನನಗೆ ಸ್ವಲ್ಪ ಬೇಸರವಾಯಿತು.ಆ ಮಠವು ಪ್ರಸಿದ್ಧ ಶಿವಯೋಗಿಗಳ ಮಠ.ಅಂತಹ ಮಠದಲ್ಲೇ ಬಸವಣ್ಣನವರ ಫೋಟೋ ಹಾಕುವುದಿಲ್ಲ ಎಂದರೆ ಹೇಗೆ ? ಆ ಶಿವಯೋಗಿಗಳು ಎತ್ತರದ ಯೋಗಸಾಧಕರಿರಬಹುದು ಆದರೆ ಅವರು ಬಸವಣ್ಣನವರು ಆಗಲು ಸಾಧ್ಯವಿಲ್ಲ ಎನ್ನುವುದು ಆ ಮಠಪರಂಪರೆಯ ಜನತೆ ಅರ್ಥಮಾಡಿಕೊಳ್ಳಬೇಕು.

ನಮ್ಮಲ್ಲಿ ಬಹಳಷ್ಟು ಜನರಿಗೆ ಬಸವಣ್ಣನವರ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ.ಕೆಲವು ಮಠ ಪೀಠಗಳ ಪರಂಪರೆಯವರು ತಮ್ಮ ಮಠ ಪೀಠಗಳ ಪೂರ್ವಿಕರಾದ ಶರಣರು,ಸಂತರುಗಳೇ ದೊಡ್ಡವರು,ಅವರಿಗಿಂತ ದೊಡ್ಡವರು ಯಾರೂ ಇಲ್ಲ ಎನ್ನುವ ಅಜ್ಞಾನವನ್ನು ಮೈಗೂಡಿಸಿಕೊಂಡಿದ್ದಾರೆ.ಕೇವಲ ಶರಣರು,ಸಂತರು,ಯೋಗಿಗಳು ಆದ ಮಾತ್ರಕ್ಕೆ ಅವರಿಗೆ ಎಲ್ಲವೂ ತಿಳಿದಿರುತ್ತದೆ ಎಂದರ್ಥವಲ್ಲ.ಕರ್ನಾಟಕದಲ್ಲಿ ಲಕ್ಷಾಂತರ ಶರಣರು,ಸಂತರುಗಳು ಆಗಿ ಹೋಗಿದ್ದಾರೆ.ಆದರೆ ಅವರು ಬಸವಣ್ಣನಾಗಬಲ್ಲರೆ ? ಬಸವಣ್ಣನವರಿಗೆ ಬಸವಣ್ಣನವರೇ ಸಮನಾಗಬಲ್ಲರೇ ಹೊರತು ಮತ್ತಾರೂ ಸಮರಾಗರು.ಆ ಕಾರಣದಿಂದ ಕರ್ನಾಟಕದ ಜನತೆ ಬಸವಣ್ಣನವರನ್ನು ‘ದ್ವಿತೀಯಶಂಭು’ ಅಂದರೆ ಎರಡನೆಯ ಶಿವ ಎಂದು ಕರೆದುಗೌರವಿಸಿದ್ದಾರೆ.ಈ ಗೌರವ ಬೇರೆ ಯಾರಿಗೂ ಸಿಕ್ಕಿಲ್ಲ,ಸಿಗುವುದೂ ಇಲ್ಲ ಎನ್ನುವುದು ಬಸವಣ್ಣನವರ ವಿಶೇಷ.

ಸಾಕ್ಷಾತ್ ಶಿವಾಂಶರಾಗಿದ್ದ ಅಲ್ಲಮ ಪ್ರಭುದೇವರೇ ಶರಣಗಣಕ್ಕೆ ‘ಬಸವಣ್ಣ ನಿಮಗೂ ಪೂಜ್ಯ,ನನಗೂ ಪೂಜ್ಯ ಮಾತ್ರವಲ್ಲ ಎಲ್ಲರಿಗೂ ಪೂಜ್ಯರಾದವರು.ಅಂಥಹ ಬಸವಣ್ಣನವರ ಶ್ರೀಪಾದಗಳಿಗೆ ನಮೋ ನಮಃ’ ಎಂದು ಬಸವಣ್ಣನವರನ್ನು ಪರಿಚಯಿಸಿದ್ದಾರೆ, ಕೊಂಡಾಡಿದ್ದಾರೆ ಎಂದರೆ ಬಸವಣ್ಣನವರ ವ್ಯಕ್ತಿತ್ವ ಎಷ್ಟು ಉನ್ನತವಾಗಿತ್ತು ಎಂದು ಅರ್ಥಮಾಡಕೊಳ್ಳಬಹುದು.ಅನುಭವ ಮಂಟಪದಲ್ಲಿದ್ದ ಶರಣರೆಲ್ಲರೂ ಬಸವಣ್ಣನವರನ್ನು ಸ್ತುತಿಸಿದ್ದಾರೆ ಆದರೆ ಅವರೆಲ್ಲರಿಗಿಂತ ಮಹತ್ವದ್ದು ಅಲ್ಲಮಪ್ರಭುದೇವರು ಬಸವಣ್ಣನವರ ವ್ಯಕ್ತಿತ್ವದ ಮಹಿಮಾತಿಶಯವನ್ನು ಕೊಂಡಾಡುವುದು.ಅಲ್ಲಮ ಪ್ರಭುಗಳು ಸಾಮಾನ್ಯರಲ್ಲ ಅದ್ವಿತೀಯ ಯೋಗಿಗಳು,ವ್ಯೋಮಕಾಯಸಿದ್ಧಿಪಡೆದಿದ್ದ ಯೋಗಿಗಳು.ಲೋಕದ ಜನರ ನಡೆ ನುಡಿಗಳನ್ನು ನಿಷ್ಠುರವಾಗಿ ಖಂಡಿಸುತ್ತಿದ್ದ ಅಲ್ಲಮಪ್ರಭುದೇವರು ‘ ಬಸವಣ್ಣನವರ ಶ್ರೀಪಾದಕ್ಕೆ ನಮೋನಮಃ’ ಎನ್ನಬೇಕಾದರೆ ಅದೆಷ್ಟು ಶುದ್ಧವಾಗಿರಬೇಕು,ಅದೆಷ್ಟು ಲೋಕಕಾರುಣ್ಯಗುಣವನ್ನು ಹೊಂದಿರಬೇಕು ಬಸವಣ್ಣನವರ ವ್ಯಕ್ತಿತ್ವ? ಬಸವಣ್ಣನವರು ಅಲ್ಲಮ ಪ್ರಭುದೇವರಿಂದ ಹೊಗಳಿಸಿಕೊಂಡರು ಎಂದರೆ ಅವರು ಶಿವನಪ್ರೀತಿಯನ್ನುಂಡಿದ್ದರು ಎಂದೇ ಅರ್ಥ‌.ಕರ್ನಾಟಕದಲ್ಲಿ ಲೆಕ್ಕವಿಲ್ಲದಷ್ಟು ಶರಣರು,ಯೋಗಿಗಳು ಆಗಿ ಹೋಗಿದ್ದಾರೆ.ಆದರೆ ಅವರಾರೂ ಬಸವಣ್ಣನವರು ಮಾಡಿದ ಮಹಾನ್ ಸಮಾಜೋ ಧಾರ್ಮಿಕ ಸುಧಾರಣಾ ಕಾರ್ಯವನ್ನು ಮಾಡಿಲ್ಲ ಎನ್ನುವುದನ್ನು ಮರೆಯಬಾರದು.ಇತರ ಶರಣರು ಸಂತರುಗಳು ತಾವು ಶುದ್ಧರಾಗಿ,ತಮ್ಮ ಬಳಿ ಬಂದವರನ್ನು ಉದ್ಧರಿಸುವ ಕಾರ್ಯ ಮಾಡಿದರೇ ಹೊರತು ಸಮಷ್ಟಿಯ ಬದುಕನ್ನು ಹಸನುಗೊಳಿಸುವ,ತಿದ್ದುವ,ಉದ್ಧಾರ ಮಾಡುವ ಪ್ರಯತ್ನ ಮಾಡಲಿಲ್ಲ.ತಮ್ಮ ಶಿಷ್ಯರನ್ನು ಉದ್ಧರಿಸಿದ್ದು,ತಮ್ಮ ಬಳಿ ಬಂದವರನ್ನು ಉದ್ಧರಿಸಿದ್ದನ್ನು ಬಿಟ್ಟರೆ ಒಂದು ಗ್ರಾಮ ಇಲ್ಲವೆ ಹಲವು ಗ್ರಾಮಗಳ ಉದ್ಧಾರಕ್ಕೆ ಸೀಮಿತವಾಗಿದೆ ಇತರ ಶರಣರು ಸಂತರುಗಳ ಕಾರ್ಯ.ಆದರೆ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಇಡೀ ಜನಸಮುದಾಯವನ್ನೇ ಉದ್ಧರಿಸುವ ಮಹಾನ್ ಕಾರ್ಯ ಮಾಡಿದ ಮಹಾತ್ಮರು.

ಶರಣರು,ಯೋಗಿಗಳ ಜೀವನದ ಗುರಿ ಮೋಕ್ಷಸಂಪಾದನೆ.ಅದು ದೊಡ್ಡ ಸಾಧನೆ ನಿಜವಾದರೂ ಅದೂ ಸ್ವಾರ್ಥವೆ ! ತನಗಾಗಿ ತನ್ನ ಆತ್ಮೋದ್ಧಾರಕ್ಕಾಗಿ ಪ್ರಯತ್ನಿಸುವುದು ಸ್ವಾರ್ಥವಲ್ಲವೆ ? ನಮ್ಮಲ್ಲಿ ಶರಣರು,ಯೋಗಿಗಳು ಎಂದು ಪೂಜೆಗೊಳ್ಳುತ್ತಿರುವ ಬಹುಪಾಲು ವ್ಯಕ್ತಿಗಳು ಇದೇ ಸಾಲಿಗೆ ಸೇರಿದ ವೈಯಕ್ತಿಕ ಮೋಕ್ಷಕ್ಕೆ ಮಹತ್ವ ನೀಡಿದವರು.ಆದರೆ ಬಸವಣ್ಣನವರು ತಮ್ಮ ವೈಯಕ್ತಿಕ ಮೋಕ್ಷಕ್ಕೆ ಹಂಬಲಿಸದೆ ‘ ಯುಗಯುದಲ್ಲೂ ಶಿವನ ಲೋಕಕಾರುಣ್ಯತತ್ತ್ವವನ್ನು ಎತ್ತಿಹಿಡಿಯಲು ಅವತ್ತರಿಸುತ್ತೇನೆ ಎಂದು ಉದ್ಘೋಷಿಸಿ ಅಂದಿನ ಕಲ್ಯಾಣಮಾತ್ರವಲ್ಲ, ಕರ್ನಾಟಕದ ಜನಜೀವನವನ್ನೇ ಸುಧಾರಿಸಿದ ಸಮಾಜ ಸುಧಾರಕರು.ಉಳ್ಳವರು ಮತ್ತು ಪಟ್ಟಭದ್ರರು ಆಡಿದ್ದೇ ವೇದ,ಮಾಡಿದ್ದೇ ಶಾಸ್ತ್ರ ಎನ್ನುವಂತಹ ವಿಷಮಪರಿಸ್ಥಿತಿಯ ದಿನಗಳಲ್ಲಿ ಜನಸಾಮಾನ್ಯರಲ್ಲಿ ಪ್ರಶ್ನಿಸುವ ಮನೋಸಾಮರ್ಥ್ಯವನ್ನುಂಟು ಮಾಡಿದರು ಬಸವಣ್ಣನವರು.ಮಠ ಮಂದಿರಗಳಲ್ಲಿ ಶೂದ್ರರು,ದಲಿತರು ಮತ್ತು ಮಹಿಳೆಯರಿಗೆ ಆಗುತ್ತಿದ್ದ ಅವಮಾನದಿಂದ ಅವರನ್ನು ಮೇಲಕ್ಕೆತ್ತಲು ಎಲ್ಲರ ಕೊರಳಲ್ಲಿ ಇಷ್ಟಲಿಂಗವನ್ನು ಕಟ್ಟಿ,ಎಲ್ಲರ ಕೈಯ್ಗಳಲ್ಲಿ ಪರಶಿವನನ್ನು ಚುಳುಕುಗೊಳಿಸಿದ ಯೋಗಾಚಾರ್ಯರು,ವಿಶ್ವಯೋಗಿಗಳು ಬಸವಣ್ಣನವರು.ಶೂದ್ರರು,ದಲಿತರು,ಮಹಿಳೆಯರುಗಳಿಗೆ ಲಿಂಗದೀಕ್ಷೆಯನ್ನಿತ್ತು ಅವರನ್ನು ಲಿಂಗಾಯತರನ್ನಾಗಿ ಮಾಡಿದರು,ಗೌರವದ ಬದುಕನ್ನು ಸಾಗಿಸಲು ಅವಕಾಶ ಮಾಡಿಕೊಟ್ಟರು.ಈ ಕೆಲಸವನ್ನು ಇತರರು ಎಷ್ಟು ಮಾಡಿದ್ದಾರೆ? ಯಾವ ಪ್ರಮಾಣದಲ್ಲಿದೆ ಅವರ ಸಮಾಜ ಸುಧಾರಣೆಯ ಕಾರ್ಯ ?

ವಿಶ್ವಮಾನ್ಯತೆಯನ್ನು ಗಳಿಸಿದ ಪ್ರಬುದ್ಧ ಸಂವಿಧಾನದಡಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಕಾನೂನು ವ್ಯವಸ್ಥೆಯ ಪ್ರಜಾಪ್ರಭುತ್ವ ಭಾರತದಲ್ಲಿ ಅಂತರ್ಜಾತೀಯ ವಿವಾಹ,ಪ್ರೇಮವಿವಾಹಗಳು ಕಷ್ಟಸಾಧ್ಯವಾಗಿರುವಾಗ,ಅರಸೊತ್ತಿಗೆಯ ಕಾಲದಲ್ಲಿ ಬಿಜ್ಜಳನ ಪ್ರಧಾನಿಯಾಗಿದ್ದುಕೊಂಡೇ ಎಲ್ಲ ಪ್ರತಿಕೂಲ ಪರಿಸ್ಥಿತಿ ಮತ್ತು ಪ್ರತಿರೋಧಗಳ ನಡುವೆಯೇ ಬಸವಣ್ಣನವರು ಮಾದಾರ ಹರಳಯ್ಯನ ಮಗನಿಗೆ ಬ್ರಾಹ್ಮಣ ಮಧುವರಸನ ಮಗಳೊಂದಿಗೆ ಸಂಬಂಧ ಕೂಡಿಸಿ ಮದುವೆ ಮಾಡಿಸಿದರು ಎಂದರೆ ಅದು ಸಾಮಾನ್ಯರಿಂದ ಸಾಧ್ಯವಾಗಬಹುದಾದ ಕಾರ್ಯವೆ ? ಬಿಜ್ಜಳನ ಪ್ರಧಾನಿಯಾಗಿದ್ದುಕೊಂಡೇ ಸಂಭೋಳಿ ನಾಗಿದೇವ ಸೇರಿದಂತೆ ಇತರ ದಲಿತ ಶರಣರ ಮನೆಗಳಲ್ಲಿ ಬಸವಣ್ಣನವರು ಪ್ರಸಾದ ಸ್ವೀಕರಿಸುತ್ತಿದ್ದರು ಎನ್ನುವುದು ಸಾಮಾನ್ಯ ಸಂಗತಿಯಲ್ಲ.ನಮ್ಮಲ್ಲಿ ಬಹಳಷ್ಟು ಶರಣರು ಮಡಿ ಮಡಿ ಎಂದು ಎಗರಾಡಿದ ಮಡಿವಂತರುಗಳು ಎಂಬುದು ಗುಟ್ಟಿನ ಸಂಗತಿಯೇನಲ್ಲ.ಆದರೆ ಯಾವುದು ಮಡಿ? ತೊಳೆಯಬೇಕಾದದ್ದು ಮೈಯನ್ನಲ್ಲ,ಮನಸ್ಸನ್ನು.ಮನಸ್ಸನ್ನು ತೊಳೆದುಕೊಂಡವನೇ ನಿತ್ಯಮುಕ್ತನಾದ ಮಹಾಂತ.ನಮ್ಮಲ್ಲಿ ಇಂದು ದೇವರಂತೆ ಪೂಜೆಗೊಳ್ಳುತ್ತಿರುವ ಶರಣರುಗಳೇನಕರು ಅರ್ಥಹೀನ ಮಡಿಗೆ ಕಟ್ಟುಬಿದ್ದಿದ್ದರು.ಇಂತಹ ಶರಣರುಗಳು ಶಿವಯೋಗ,ಶಿವನಾಮ ಸ್ಮರಣೆಯ ಬಲದಿಂದ ಜನರಿಂದ ಪೂಜಿಸಿಕೊಳ್ಳುವ ಅರ್ಹತೆ ಪಡೆದಿದ್ದಾರೆಯೇ ಹೊರತು ತಮ್ಮ ವ್ಯಕ್ತಿತ್ವವನ್ನು ಶುದ್ಧೀಕರಿಸಿಕೊಂಡು,ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡು ದೊಡ್ಡವರಾದವರಲ್ಲ.ಶಿವನು ತನ್ನನ್ನು ಪೂಜಿಸಿದವರಿಗೆ ‘ ಈಶ್ವರತ್ವ’ ವನ್ನು ಅನುಗ್ರಹಿಸುವ ಕಾರಣದಿಂದ ಬಹಳಷ್ಟು ಜನ ಶಿವೋಪಾಸಕರುಗಳು ಇಂದು ಶರಣರಾಗಿ,ದೇವರಾಗಿ ಪೂಜೆಗೊಳ್ಳುತ್ತಿದ್ದಾರೆ.ಆದರೆ ಬಸವಣ್ಣನವರು ತಮ್ಮ ಅಂತರಂಗ ಬಹಿರಂಗಗಳೆರಡನ್ನೂ ಶುದ್ಧೀಕರಿಸಿಕೊಂಡು ಸಮಾಜದ ಸಮಸ್ತರ ಶುದ್ಧೀಕರಣಕ್ಕೆ ಪ್ರಯತ್ನಿಸಿದರು.ತಮ್ಮ ಬಳಿ ಬಂದ ಯಾರನ್ನೂ ‘ ಇವನಾರವ?’ ಎಂದು ವಿಚಾರಿಸದೆ ಎಲ್ಲರನ್ನೂ ‘ ಇವ ನಮ್ಮವ’ ನೆಂದು ಒಪ್ಪಿ,ಅಪ್ಪಿಕೊಂಡು ಉದ್ಧರಿಸಿದ ಎಲ್ಲರಲ್ಲಿಯೂ ಶಿವಚೈತನ್ಯವನ್ನೇ ಗುರುತಿಸಿದ ಅನುಪಮ ಶಿವಸಿದ್ಧರವರು,ಪರಮಪರಿಶುದ್ಧರವರು.

ತಮ್ಮ ವೈಯಕ್ತಿಕ ಮೋಕ್ಷಕ್ಕಾಗಿ ಹಂಬಲಿಸಿ,ಹಾತೊರೆದವರು ಸಮಷ್ಟಿಕಲ್ಯಾಣವನ್ನೇ ಜೀವನಧ್ಯೇಯವನ್ನಾಗಿ ಸ್ವೀಕರಿಸಿ ಬದುಕಿದ್ದ ಬಸವಣ್ಣನವರಿಗೆ ಸಮಾನರಾಗಬಲ್ಲರೆ? ನಾಲ್ಕೈದು ಜನ ಬೆರಳೆಣಿಕೆಯ ಜನರಿಗೆ ಬೋಧಿಸಿ,ಉದ್ಧರಿಸಿದವರು ಕುಲಹದಿನೆಂಟು ಜಾತಿಗಳ ಜನರಿಗೆ ಲಿಂಗದೀಕ್ಷೆಯನ್ನಿತ್ತು ಉದ್ಧರಿಸಿದ ವಿಶ್ವಗುರು ಬಸವಣ್ಣನವರಿಗೆ ಸಮನಾಗಬಲ್ಲರೆ? ಬಸವ ಇದ್ದಲ್ಲಿಗೆ ಶಿವ ಬರುತ್ತಾನೆ ಎಂದ ಬಳಿಕ ಬಸವಣ್ಣನವರನ್ನು ಒಪ್ಪದೆ ಶಿವನನ್ನು ಒಲಿಸಿಕೊಳ್ಳುತ್ತೇನೆ ಎನ್ನುವವರು ಅಪಕ್ವಮತಿಗಳಲ್ಲವೆ ? ಶಿವಬಸವರೊಂದಾದುದೇ ಶಿವಬಸವಾದ್ವೈತತ್ತ್ವ ಎಂದರಿಯದೆ ಬಸವನನ್ನು ಬಿಟ್ಟು ಶಿವಯೋಗವನ್ನಾಚರಿಸುವವರು ಸಂಪಾದಿಸುವುದಾದರೂ ಏನನ್ನು ? ಶಿವ ಪಥಕ್ಕೆ ಬಸವಪಥವೇ ಮಹಾಪಥವಾಗಿರಲು ಬಸವಣ್ಣನವರನ್ನು ಗೌರವಿಸದೆ ಶಿವಾನುಗ್ರಹವನ್ನು ಪಡೆಯಬಹುದೆ ? ಹಾಗಾಗಿ ಯಾವುದೇ ಮಠ ಮಂದಿರಗಳಲ್ಲಿ ಬಸವಣ್ಣನವರ ಫೋಟೋ ಇಲ್ಲ,ಬಸವಣ್ಣನವರ ಫೋಟೋ ಇಡಲು ಆಕ್ಷೇಪಿಸುತ್ತಾರೆ ಎಂದರೆ ಅದು ಅವರ ಸಣ್ಣತನ,ಅಜ್ಞಾನ ಎಂದು ಅವರನ್ನು ಕಡೆಗಣಿಸಬೇಕೇ ಹೊರತು ಅಂಥವರ ಅಜ್ಞಾನಕ್ಕೆ ಬೆಲೆಕೊಡಬಾರದು. ಬಸವಣ್ಣನವರನ್ನು ಗೌರವಿಸದ ಯಾರನ್ನೂ ನಾವು ಗೌರವಿಸಬಾರದು.ಈ ನಿಲುವು ನಮ್ಮದಾದರೆ ತಾವೇ ಬದಲಾಗುತ್ತಾರೆ ಬಸವಣ್ಣನವರ ಫೊಟೋ ಇಡಲು ಆಕ್ಷೇಪಿಸುವ ಜನರು.

About The Author