ದಿನಾಚರಣೆ : ಮಹರ್ಷಿ ಭಗೀರಥ

ದಿನಾಚರಣೆ : ಮಹರ್ಷಿ ಭಗೀರಥ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷರಾಗಿರುವ ಗುರುಬಸವ ಹುರಕಡ್ಲಿಯವರು ಮೇ 14 ರ ಇಂದು ಭಗೀರಥ ಜಯಂತಿ ಇದ್ದು ತಮ್ಮ ಓಣಿಯಲ್ಲಿ ಭಗೀರಥ ಜಯಂತಿಯನ್ನು ಆಚರಿಸಲಾಗುತ್ತಿದ್ದು ಪ್ರಯುಕ್ತ ಮಹರ್ಷಿ ಭಗೀರಥರ ಬಗ್ಗೆ ಲೇಖನ ಒಂದನ್ನು ಬರೆಯಲು ಕೇಳಿದ್ದಾರೆ.ಇಂದು ನಾನು‌ ಕಲ್ಬುರ್ಗಿಯಲ್ಲಿದ್ದು ಇಲ್ಲಿಂದಲೇ ಗುರುಬಸವ ಹುರಕಡ್ಲಿಯವರಿಗಾಗಿ ಮಹರ್ಷಿ ಭಗೀರಥರ ಕುರಿತಾದ ಲೇಖನ ಒಂದನ್ನು ಬರೆದು ಕಳುಹಿಸುತ್ತಿದ್ದೇನೆ.

ಯಾರಾದರೂ ಹಠಬಿಡದೆ ಆತ್ಮವಿಶ್ವಾಸದಿಂದ ಕಾರ್ಯವನ್ನು ಸಾಧಿಸುತ್ತಿದ್ದರೆ ನಾವು ಅದನ್ನು ‘ಭಗೀರಥ ಪ್ರಯತ್ನ’ ಎನ್ನುತ್ತೇವೆ.ದೇವಗಂಗೆಯನ್ನು ಭೂಮಿಗೆ ತರಲು ಭಗೀರಥನು ನಡೆಸಿದ ಎದೆಗುಂದದ,ನಿರಂತರ ಪ್ರಯತ್ನವನ್ನು ‘ ಭಗೀರಥ ಪ್ರಯತ್ನ’ ಎಂದು ಸ್ಮರಿಸಲಾಗುತ್ತದೆ.ಭಗೀರಥನ ಪ್ರಯತ್ನವಾದರೂ ಎಂತಹದ್ದು ?

ಸೂರ್ಯವಂಶದ ಸಗರ ಚಕ್ರವರ್ತಿಯು ( ಭಗೀರಥನ ಮುತ್ತಾತ) ಅಶ್ವಮೇಧ ಯಾಗವನ್ನು ಮಾಡಲು ಸಂಕಲ್ಪಿಸಿ ಅಶ್ವಮೇಧದ ಕುದುರೆಯ ಹಿಂದೆ ತನ್ನ 60,000 ಮಕ್ಕಳನ್ನು ಕಳುಹಿಸುತ್ತಾನೆ.ಅಶ್ವಮೇಧದ ಕುದುರೆಯು ಅಲ್ಲಲ್ಲಿ ಸಂಚರಿಸುತ್ತ ಸಾಗುತ್ತದೆ.ಕುದುರೆಯು ಮುಂದೆ ಹೋದಂತೆ ಅದರ ಎಡ ಬಲ ಮತ್ತು ಹಿಂಭಾಗದಲ್ಲಿ ಅನುಸರಿಸಿ ಸಾಗುತ್ತಾರೆ ಸಗರ ಚಕ್ರವರ್ತಿಯ 60,000 ಮಕ್ಕಳು.ಕುದುರೆಯು ಕಪಿಲ ಮಹರ್ಷಿ ಆಶ್ರಮದ ಸಮೀಪ ಬರುತ್ತದೆ.ಸಗರನು ಆಚರಿಸುತ್ತಿರುವ ಅಶ್ವಮೇಧಯಾಗದ ಸಂಗತಿಯನ್ನು ಕೇಳಿ ಬೆದರಿದ ಇಂದ್ರನು ಅಶ್ವಮೇಧದ ಕುದುರೆಯನ್ನು ಅಪಹರಿಸುತ್ತಾನೆ.ಕುದುರೆಯನ್ನು ಕಾಣದಾದ ಸಗರನ ಮಕ್ಕಳು ಕುದುರೆಯನ್ನು ಕಾಣದೆ ಸುತ್ತಲೂ ಹುಡುಕುತ್ತಾರೆ.

ಇಂದ್ರನು ಸಗರನ ಅಶ್ವಮೇಧದ ಕುದುರೆಯನ್ನು ಕಪಿಲ ಮಹರ್ಷಿಯು ತಪಸ್ಸು ಮಾಡುತ್ತಿದ್ದ ತಪೋಭೂಮಿಯ ಒಂದು ಮರಕ್ಕೆ ಕಟ್ಟಿಹೋಗುತ್ತಾನೆ.ಕುದುರೆಯನ್ನು ಹುಡುಕುತ್ತ ಬಂದ ಸಗರನ ಮಕ್ಕಳು ಕಪಿಲಮಹರ್ಷಿಯ ಆಶ್ರಮದ ಮರ ಒಂದಕ್ಕೆ ಯೋಗಾಶ್ವ ಕಟ್ಟಿದ್ದನ್ನು ಕಂಡು ತಪೋನಿರತರಾಗಿದ್ದ ಕಪಿಲರೇ ಕುದುರೆಯನ್ನು ಕದ್ದಿದ್ದಾರೆ ಎಂದು ಭಾವಿಸಿ ಧ್ಯಾನಮಗ್ನರಾಗಿದ್ದ ಕಪಿಲರನ್ನು ನಿಂದಿಸುತ್ತಾರೆ,ಬಾಣಗಳಿಂದ ಅವರ ದೇಹವನ್ನು ಘಾಸಿಗೊಳಿಸುತ್ತಾರೆ,ಕುದುರೆಯನ್ನು ಕಟ್ಟಿದ್ದ ಹಗ್ಗದಿಂದ ಹೊಡೆಯುತ್ತಾರೆ.ಪೆಟ್ಟುತಿಂದ ಕಪಿಲರು ತಪೋಭಂಗಿತರಾಗಿ ಸಿಟ್ಟಿನಿಂದ ಕಣ್ಣು ತೆರೆಯುತ್ತಾರೆ.ಕಪಿಲರ ಕೆಂಗೆಣ್ಣುಗಳಿಂದ ಹೊರಬಂದ ಅಗ್ನಿಜ್ವಾಲೆಗಳಿಗೆ ಸಿಕ್ಕು ಸಗರ ಚಕ್ರವರ್ತಿಯ 60,000 ಮಕ್ಕಳು ಸುಟ್ಟುಬೂದಿಯಾಗುತ್ತಾರೆ.ಸಗರನ ಅಶ್ವಮೇಧ ಯಾಗವವು ನಿಲ್ಲುತ್ತದೆ. ಸಗರನ 60,000 ಮಕ್ಕಳು ಕಪಿಲಮಹರ್ಷಿಯ ಕೋಪಾಗ್ನಿಗೆ ಸಿಕ್ಕು ಸತ್ತುಬೂದಿಯಾದ್ದರಿಂದ ಅವರಿಗೆ ದುರ್ಗತಿ ಪ್ರಾಪ್ತವಾಗಿ ನರಕಸೇರಿದರು.ಅವರನ್ನು ನರಕದಿಂದ ಹೊರತಂದು ಸದ್ಗತಿದೊರಕಿಸುವ ಪ್ರಯತ್ನವನ್ನು ಸಗರನ ವಂಶಸ್ಥರು ಮಾಡತೊಡಗಿದರು.

ಸಗರನ 60,000 ಮಕ್ಕಳಿಗೆ ಸದ್ಗತಿ ಪ್ರಾಪ್ತವಾಗಬೇಕಿದ್ದರೆ ದೇವಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಕರೆತಂದು ಅವರು ಸುಟ್ಟುಬೂದಿಯಾದ ಸ್ಥಳದಲ್ಲಿ ಗಂಗೆಯು ಹರಿಯುವಂತೆ ಮಾಡಬೇಕಿತ್ತು.ಇದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ.ಈ ಪ್ರಯತ್ನದಲ್ಲಿ ಸಫಲನಾಗದ ದಿಲೀಪನು ತನ್ನ ಮಗ ಭಗೀರಥನ ಹೆಗಲಿಗೆ‌ ಈ ಕಾರ್ಯಭಾರದ ಹೊಣೆಯನ್ನು ವಹಿಸುವನು.ಪಟ್ಟಾಭಿಷಿಕ್ತನಾದ ಕೆಲವು ವರ್ಷಗಳಲ್ಲಿಯೇ ಭಗೀರಥನು ತನ್ನ 60,000 ಪೂರ್ವಿಕರಿಗೆ ಸದ್ಗತಿ ಕರುಣಿಸುವ ಮಾರ್ಗೋಪಾಯವನ್ನು ಚಿಂತಿಸುವನು,ಕಾರ್ಯಪ್ರವೃತ್ತನಾಗುವನು.ದೇವಗಂಗೆಯ ಪ್ರವಾಹದಿಂದ ಮಾತ್ರ ತನ್ನ ಪೂರ್ವಿಕರಿಗೆ ಸದ್ಗತಿ ಸಿಗುವುದೆಂದರಿತ ಭಗೀರಥನು ದೇವಗಂಗೆಯನ್ನು ಕುರಿತು ತಪಸ್ಸು ಮಾಡುವನು.ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗೆಯು ತಾನು ಸ್ವರ್ಗದಿಂದ ಭೂಮಿಗೆ ಇಳಿದು ಬರಬೇಕಾದರೆ ತನ್ನ ಪ್ರವಾಹದ ಹೊಡೆತವನ್ನು ಭೂಮಿಯಾಗಲಿ,ಪರ್ವತಗಳಾಗಲಿ ಅಥವಾ ದೇವತೆಗಳಾಗಲಿ ಸಹಿಸಲಾರರು.ಶಿವನೊಬ್ಬನೇ ತನ್ನ ಅವತರಣದ ಹೊಡೆತವನ್ನು ಸಹಿಸಬಲ್ಲನು.ಆದ್ದರಿಂದ ನೀನು ಶಿವನನ್ನು ಕುರಿತು ತಪಸ್ಸುಮಾಡಿ ಒಲಿಸಿಕೊ ಎಂದಳು.ಭಗೀರಥನು ಶಿವನನ್ನು ಕುರಿತು ಉಗ್ರವಾದ ತಪಸ್ಸನ್ನು ಆಚರಿಸುವನು.ಭಗೀರಥನ ತಪಸ್ಸಿಗೆ ಮೆಚ್ಚಿದ ಶಿವನು ತಾನು ದೇವಗಂಗೆಯನ್ನು ಧರಿಸುವುದಾಗಿ ವರನೀಡುವನು.ಹಿಮಾಲಯ ಪರ್ವತಶ್ರೇಣಿಯ ಒಂದೆಡೆ ವಿಶಿಷ್ಟ ಭಂಗಿಯಲ್ಲಿ ತನ್ನ ಜಟೆಯನ್ನು ಹರಡಿ ನಿಲ್ಲುವನು ಶಿವನು.ದಿಕ್ಕುಗಳು ಕಂಪಿಸುವಂತೆ ಸ್ವರ್ಗದಿಂದ ಆರ್ಭಟಿಸುತ್ತ ಇಳಿಯುತ್ತಿದ್ದ ಗಂಗೆಯನ್ನು ತನ್ನ ಜಟೆಯಲ್ಲಿಟ್ಟುಕೊಂಡು ಬಂಧಿಸುವನು.ಶಿವನ ಜಟಾಬಂಧನಕ್ಕೊಳಗಾದ ದೇವಗಂಗೆಯು ಅಲ್ಲಿಯೇ ಸ್ತಬ್ಧಳಾಗುವಳು.ಚಿಂತಿತನಾದ ಭಗೀರಥನು ಪರಶಿವನನ್ನು ಪರಿಯಾಗಿ ಪ್ರಾರ್ಥಿಸಿ ಗಂಗೆಯು ಶಿವನ ಜಟೆಯಿಂದ ಹೊರಬರುವಂತೆ ಮಾಡುವನು.

ಭಗೀರಥನು ಮುಂದೆ ಸಾಗಿದಂತೆ ಅವನ ಹಿಂದೆ ನಡೆಯುತ್ತಿದ್ದಳು ಗಂಗೆ.ಭಗೀರಥನು ನಡೆಯುತ್ತಿದ್ದ ಆ ಮಾರ್ಗದಲ್ಲಿ ಜಹ್ನು ಮಹರ್ಷಿಯ ಆಶ್ರಮವಿತ್ತು.ಜಹ್ನು ಮಹರ್ಷಿಗಳು ತಪೋನಿರತರಾಗಿದ್ದರು.ಅಟ್ಟಹಾಸದೊಂದಿಗೆ ಹರಿದು ಬರುತ್ತಿದ್ದ ಗಂಗೆಯು ಜಹ್ನು ಮಹರ್ಷಿಗಳ ಆಶ್ರಮವನ್ನು ಮುಳುಗಿಸಿ ಕೊಚ್ಚಿಹೋಗುವಳು.ಸಿಟ್ಟಿಗೆದ್ದ ಜಹ್ನು ಮಹರ್ಷಿಗಳು ಗಂಗೆಯನ್ನು ಒಂದೇ ಗುಟುಕಿನಲ್ಲಿ ಕುಡಿಯುವರು.ಮತ್ತೆ ಗಂಗೆಯನ್ನು ಕಾಣದಾದ ಭಗೀರಥನು ಜಹ್ನು ಮಹರ್ಷಿಗಳನ್ನು ತಪಿಸಿ,ಧ್ಯಾನಿಸಿ,ಸೇವಿಸಿ ತನ್ನ ಉದ್ದೇಶ ಸಾಧನೆಗಾಗಿ ಗಂಗೆಯನ್ನು ಹೊರಬಿಡುವಂತೆ ಪ್ರಾರ್ಥಿಸಿದನು.ಭಗೀರಥನ ಪ್ರಾರ್ಥನೆಗೆ ಕರಗಿದ ಜಹ್ನು ಮಹರ್ಷಿಗಳು ಪ್ರಸನ್ನರಾಗಿ ಗಂಗೆಯನ್ನು ತಮ್ಮ ಕಿವಿಯ ಮೂಲಕ ಹೊರಬಿಡುವರು.ಭಗೀರಥನನ್ನು ಹಿಂಬಾಲಿಸಿ ನಡೆದ ಗಂಗೆಯ ಸಗರ ಚಕ್ರವರ್ತಿಯ 60,000 ಮಕ್ಕಳು ಸುಟ್ಟು ಬೂದಿಯಾಗಿದ್ದ ನೆಲದಲ್ಲಿ ಪ್ರವಹಿಸಿ ಅವರಿಗೆ ಸದ್ಗತಿಯನ್ನುಂಟು ಮಾಡಿದಳು.ಇದು ಭಗೀರಥನ ಪ್ರಯತ್ನದ ಫಲವಾಗಿ ದೇವಗಂಗೆಯು ಭೂಮಿಗೆ ಅವತರಿಸಿದ ಕಾರಣ,ಕಥೆ.ಸ್ವರ್ಗದಿಂದ ಇಳಿಯುತ್ತಿದ್ದ ಗಂಗೆಯನ್ನು ತನ್ನ ಜಟೆಯಲ್ಲಿ ಧರಿಸಿದ್ದರಿಂದ ಶಿವನು ‘ಗಂಗಾಧರ’ ಎನ್ನುವ ಹೆಸರನ್ನು ಧರಿಸಿದನು.ಗಂಗೆಯು ಜಹ್ನು ಮಹರ್ಷಿಯ ಕಿವಿಯಿಂದ ಹೊರಬಂದಿದ್ದರಿಂದ ‘ಜಾಹ್ನವಿ’ ಎಂದು ಹೆಸರುಗೊಂಡಳು.ಸಗರ ಚಕ್ರವರ್ತಿಯ ಮಕ್ಕಳಿಗೆ ಸದ್ಗತಿಯನ್ನು ಕರುಣಿಸುವ ಉದ್ದೇಶದಿಂದ ಭಗೀರಥನೊಂದಿಗೆ ಬಂದ ಗಂಗೆಯು’ ಭಾಗೀರಥಿ ‘ಎಂದು ಕರೆಯಲ್ಪಡುವಳು.

ಭಗೀರಥನಿಂದಾಗಿ ಸಗರನ 60,000 ಮಕ್ಕಳು ಸದ್ಗತಿ ಪಡೆದರು.ತನ್ನ ಪೂರ್ವಿಕರ ಸದ್ಗತಿಗಾಗಿ ಭಗೀರಥನು ಕೈಗೊಂಡ ಈ ಮಹಾ ಸಾಹಸ ಗಾಥೆಯೇ ಭಗೀರಥ ಪ್ರಯತ್ನ ಎಂದು ಗುರುತಿಸಲ್ಪಟ್ಟಿದೆ.ಭಗೀರಥನ ಪ್ರಯತ್ನದಿಂದಾಗಿ ಸ್ವರ್ಗದಲ್ಲಿದ್ದ ಗಂಗೆಯು ಭೂಮಿಗೆ ಬಂದಿದ್ದರಿಂದ ಲೋಕಕಲ್ಯಾಣವಾಯಿತು.ಈ ಲೋಕಕಲ್ಯಾಣದ ಮಹಾನ್ ಕಾರ್ಯಸಿದ್ಧಿಯ ಯಶಸ್ಸು ಮಹರ್ಷಿ ಭಗೀರಥರದ್ದಾಯಿತು.ಹಿಂದುಳಿದ ವರ್ಗಗಳಿಗೆ ಸೇರಿದ ಗಂಗಾಮತಸ್ಥರು,ಅಂಬಿಗರು,ಕಬ್ಬಲಿಗರು( ಕಬ್ಬೇರು) ಜನಾಂಗದವರನ್ನು ಗಂಗೆಯ ಮಕ್ಕಳೆಂದು ಅವರನ್ನು ‘ ಗಂಗಾ ಮತಸ್ಥರು’ ಎಂದು ಕರೆಯುತ್ತಾರೆ.ಗಂಗಾ ಮತಸ್ಥರು ಭಗೀರಥ ಚಕ್ರವರ್ತಿಯನ್ನು ತಮ್ಮ ಪೂರ್ವಿಕನೆಂದು ಗೌರವಿಸಿ ಸ್ಮರಿಸಿ ಆಚರಿಸುವ ಜಯಂತಿಯೇ ಮಹರ್ಷಿ ಭಗೀರಥ ಜಯಂತಿ.

೧೪.೦೫.೨೦೨೪

About The Author