ಮದುವೆಗೆ ವಧು ವರರು ಪರಸ್ಪರ ಅರ್ಥೈಸಿಕೊಳ್ಳುವುದು ಮುಖ್ಯವೇ ಹೊರತು ಗ್ರಹಬಲವಲ್ಲ !

ಅನುಭಾವ ಚಿಂತನೆ : ಮದುವೆಗೆ ವಧು ವರರು ಪರಸ್ಪರ ಅರ್ಥೈಸಿಕೊಳ್ಳುವುದು ಮುಖ್ಯವೇ ಹೊರತು ಗ್ರಹಬಲವಲ್ಲ !  :  ಮುಕ್ಕಣ್ಣ ಕರಿಗಾರ

‘ ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ’ ಎನ್ನುವ ಲೇಖನವನ್ನು ಓದಿ ತಮ್ಮ ಸಂದೇಹ ವ್ಯಕ್ತಪಡಿಸಿದ್ದ ಉದಯಕುಮಾರ ಪಂಚಾಳ ಅವರಿಗೆ ನಾನು ನೀಡಿದ ಉತ್ತರರೂಪದ ‘ಆತ್ಮಬಲ ಒಂದಿದ್ದರೆ ಸಾಕು,ಯಾವ ಗ್ರಹಬಲವೂ ಬೇಕಿಲ್ಲ!’ ಲೇಖನವನ್ನು ಓದಿ ನಮ್ಮ ಆತ್ಮೀಯರಲ್ಲೊಬ್ಬರಾಗಿರುವ ಪ್ರಗತಿಪರ ಚಿಂತಕ, ಇಂಡಿ ತಾಲೂಕಿನ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ ಅವರು ಲೇಖನವನ್ನು ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಕೊನೆಗೆ ಒಂದು ಪ್ರಶ್ನೆ ಕೇಳಿದ್ದಾರೆ –‘ ಮದುವೆ ಶುಭ ಸಮಾರಂಭಗಳಲ್ಲಿ ಗ್ರಹಬಲ ನೋಡಬಾರದೆನ್ನುವುದು ತಮ್ಮಗಳ ಅಭಿಪ್ರಾಯವೇ ಹೇಗೆ ಎಂಬುದನ್ನೂ ತಿಳಿಸಿ ಸರ್’

ಮದುವೆಯಾದಿ ಯಾವುದೇ‌ ಮಂಗಲ ಕಾರ್ಯಗಳಿಗೆ ಗ್ರಹಬಲ ನೋಡುವ ಅಗತ್ಯವಿಲ್ಲ ಎನ್ನುವುದೇ ನನ್ನ ಸ್ಪಷ್ಟ ಉತ್ತರ.ಈ ಪ್ರಪಂಚವು ಪರಮಾತ್ಮನಿಂದ ಸೃಷ್ಟಿಗೊಂಡಿದೆ.ಪರಮಾತ್ಮನ ವಿಶ್ವನಿಯಮಗಳು ಜಗತ್ತನ್ನು ಆಳುತ್ತಿವೆ,ನಿಯಂತ್ರಿಸುತ್ತಿವೆ.ಪರಮಾತ್ಮನು ಯಾವುದೇ ಧಾರ್ಮಿಕ ಗ್ರಂಥವನ್ನಾಗಲಿ,ಜ್ಯೋತಿಷ ಶಾಸ್ತ್ರವನ್ನಾಗಲಿ ಬರೆದಿಲ್ಲ ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.ಪರಮಾತ್ಮನ ಸಂಕಲ್ಪದಂತೆ ಹುಟ್ಟಿದ ಈ ಪ್ರಕೃತಿ ಮತ್ತು ಪ್ರಪಂಚ ಎರಡೂ ಪರಿಪೂರ್ಣವಾಗಿವೆ.ಪರಿಪೂರ್ಣವಾಗಿರುವ ಪ್ರಪಂಚದಲ್ಲಿ ಅಪರಿಪೂರ್ಣತೆಯನ್ನು ಅರಸುವುದಾದರೂ ಹೇಗೆ?

ಜಗತ್ತು ಜಗದೀಶ್ವರನಾದ ಪರಮಾತ್ಮನಿಂದ ಸೃಷ್ಟಿಯಾದ ಬಳಿಕ ಇಲ್ಲಿ ಎಲ್ಲವೂ ಒಳ್ಳೆಯದೆ.ಯಾವುದೂ ಕೆಟ್ಟದ್ದು ಇಲ್ಲ.ಅಂದರೆ ಪ್ರತಿ ದಿನ,ಪ್ರತಿಕ್ಷಣವೂ ಶುಭವೆ.ಅಶುಭ ಕ್ಷಣವಾಗಲಿ,ಅಶುಭ ಘಳಿಗೆಯಾಗಲು ಇರಲು ಸಾಧ್ಯವಿಲ್ಲ.ಶಿವ ಎನ್ನುವ ಶಬ್ದಕ್ಕೆ ಮಂಗಳ,ಕಲ್ಯಾಣ,ಅಶುಭ ನಿವಾರಕ ಎನ್ನುವ ಅರ್ಥಗಳಿದ್ದು ಇಂತಹ ಸರ್ವಮಂಗಳಕರನಾದ,ಶುಭಕರನಾದ ಶಿವನಿಂದ ಅಶುಭದಿನ,ಅಶುಭ ಘಳಿಗೆ ಹುಟ್ಟಲು ಸಾಧ್ಯವೆ? ಆದ್ದರಿಂದ ಶಿವನಾಮವನ್ನು ಸ್ಮರಿಸುತ್ತ ಎಲ್ಲ ದಿನಗಳಲ್ಲಿಯೂ ಮದುವೆಯಾದಿ ಮಂಗಲ ಕಾರ್ಯಗಳನ್ನು ಮಾಡಬಹುದು.

ಮದುವೆಯಂತಹ ಮಂಗಲಕಾರ್ಯಕ್ಕೆ ಶುಭದಿನ,ಶುಭಘಳಿಗೆ ನೋಡುವ ಬದಲು ಶಿವ ಶಕ್ತಿಯರ ನಾಮ ಸ್ಮರಣೆ ಮಾಡುತ್ತ ಎಲ್ಲ ದಿನಗಳಲ್ಲಿಯೂ ಶುಭ ಕಾರ್ಯಗಳನ್ನು ಮಾಡಬಹುದು.ಶಿವನ ಅನುಗ್ರಹ ಬಲ ಇದ್ದರೆ ಯಾವ ಗ್ರಹಬಲದ ಅಗತ್ಯವೂ ಇಲ್ಲ.ಮದುವೆ ಮಾಡುವವರು ಜ್ಯೋತಿಷಿಗಳನ್ನು ಕರೆದು ಅವರಿಂದ ಮಂತ್ರಪಠಿಸಬೇಕಿಲ್ಲ.ಮದುವೆಯ ಮುನ್ನ ವಧುವರರ ಕಡೆಯವರು ವಧುವರರನ್ನು ಕೂಡಿಸಿಕೊಂಡು ಗಂಡಿನ ಕಡೆಯವರು ಶಿವ ಸಹಸ್ರನಾಮವನ್ನು ಹೆಣ್ಣಿನ ಕಡೆಯವರು ದುರ್ಗಾ ಸಹಸ್ರನಾಮವನ್ನು ಪಠಿಸಿ ನಂತರ ಮಾಂಗಲ್ಯ ಕಟ್ಟಿಸಬೇಕು.ಹೀಗೆ ಮಾಡುವುದರಿಂದ ಯಾವ ದೋಷವೂ ಸಂಭವಿಸುವುದಿಲ್ಲ,ಯಾವ ಅಹಿತಕರ ಘಟನೆಯೂ ಸಂಭವಿಸುವುದಿಲ್ಲ.ವಧುವರರ ಸಂಬಂಧಿಕರುಗಳು ಅನಕ್ಷರಸ್ಥರಾಗಿದ್ದು ಶಿವ ಸಹಸ್ರನಾಮ,ದುರ್ಗಾಸಹಸ್ರನಾಮವನ್ನು ಪಠಿಸಲು ಆಗದಿದ್ದರೆ ” ಓಂ ನಮಃ ಶಿವಾಯ ಓಂ” ಮಹಾಮಂತ್ರವನ್ನು ಗಂಡಿನಕಡೆಯವರು 1080 ಮತ್ತು ಹೆಣ್ಣಿನ ಕಡೆಯವರು 1080 ಸಾರೆ ಜಪಿಸಿ ಮದುವೆ ಮಾಡಬಹುದು.

ಮದುವೆಯ ಮಹೂರ್ತನಿಗದಿಯ ಹಿಂದೆ ಪ್ರಾಕೃತಿಕ ಕಾರಣ ಇರುತ್ತದೆಯೇ ಹೊರತು ಯಾವುದೇ ವಿಶೇಷ ಕಾರಣ ಇರುವುದಿಲ್ಲ.ಸಾಮಾನ್ಯವಾಗಿ ಯುಗಾದಿಯ ನಂತರ ಅಂದರೆ ಚೈತ್ರ- ವೈಶಾಖ ಮಾಸಗಳು ಮದುವೆಯ ತಿಂಗಳುಗಳಾಗಿರುತ್ತವೆ.ಭಾರತವು ಕೃಷಿಪ್ರಧಾನ ದೇಶವಾಗಿದ್ದು ರೈತರು ಮತ್ತು ದುಡಿಯುವವರು ಆ ದಿನಗಳಲ್ಲಿ ಬಿಡುವಾಗಿ ಇರುತ್ತಾರೆ.ವಸಂತ ಮಾಸದಲ್ಲಿ ಪ್ರಕೃತಿಯಲ್ಲಿ ಗಿಡಮರಗಳು ಚಿಗುರೊಡೆದು ನಳನಳಿಸುವ ಹರ್ಷದಾಯಕ ದಿನಗಳ ಕಾಲವಾದ್ದರಿಂದ ಸಡಗರ ಸಂಭ್ರಮಗಳಿಂದ ಮದುವೆಯನ್ನು ಮಾಡಬಹುದು.ಮುಂದೆ ಶ್ರಾವಣ ಮಾಸದಲ್ಲಿ ಮಳೆಬೀಳುವುದರಿಂದ ಭೂಮಿಯ ಫಲವಂತಿಕೆಯ ಕಾಲವಾಗಿರುವಂತೆ ಮದುವೆಯಾದ ದಂಪತಿಗಳಿಗೂ ಸಂತಾನಪಡೆಯುವ ಸುದಿನಗಳಾಗಿರುತ್ತವೆ.ಇಂತಹ ಪ್ರಾಕೃತಿಕ ಕಾರಣಗಳಿಂದ ಮದುವೆಯ ಮಾಸಗಳು ನಿಗದಿಯಾಗಿರುತ್ತವಲ್ಲದೆ ಅವುಗಳಿಗೆ ಬೇರೆ ಯಾವ ವಿಶೇಷ ಅರ್ಥವೂ ಇಲ್ಲ.

ನಾನು ಕೂಡ ಮದುವೆಯ ಮುಹೂರ್ತ ತಪ್ಪಿಸಿಯೇ ಮದುವೆಯಾಗಿದ್ದೇನೆ.ನನ್ನ‌ ಮದುವೆ ನಡೆದದ್ದು ಮೇ 21,2004 ರಲ್ಲಿ.ಅಂದು ಮಧ್ಯಾಹ್ನ ಅಭಿಜಿನ್ ಲಗ್ನ ಮುಹೂರ್ತದಲ್ಲಿ ನನ್ನ‌ಮದುವೆ ನಿಶ್ಚಿತವಾಗಿತ್ತು.ನನಗೆ ಶಿವಾನುಗ್ರಹವನ್ನು ಕರುಣಿಸಿ ನನ್ನನ್ನು ಉದ್ಧರಿಸಿದ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳು ಸ್ವಪ್ನದಲ್ಲಿ ದರ್ಶನ ನೀಡಿ ‘ ಮಗು,ನೀನು ಮದುವೆ ಮುಹೂರ್ತ ತಪ್ಪಿಸಿ ಮದುವೆಯಾಗು.ಮದುವೆ ಮುಹೂರ್ತದಲ್ಲಿ ಗಂಡಾಂತರವಿದೆ’ ಎಂದರು.ಕೂಡಲೆ ನಾನು ನನ್ನ ಅಪ್ಪ ಅಮ್ಮ,ಮಾವ ಅತ್ತಿಗೆಯರನ್ನು ಒಪ್ಪಿಸಿ ಬೆಳಗಿನ ಐದುಘಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ನನ್ನ ಪೂಜಾಗೃಹದಲ್ಲಿ ಶಿವ ದುರ್ಗಾದೇವಿಯರ ಸನ್ನಿಧಿಯಲ್ಲಿ ಸಾಧನಾಳನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದೆ.ಗುರುದೇವ ಕುಮಾರಸ್ವಾಮಿಯವರು ಸೂಚಿಸಿದ್ದಂತೆ ಅಂದು ನಿಗದಿಯಾಗಿದ್ದ ಮದುವೆ ಮುಹೂರ್ತದಲ್ಲಿ ಒಂದು ಸಣ್ಣ ಅವಘಡವೂ ನಡೆಯಿತು.ಇಪ್ಪತ್ತುಸಾವಿರಕ್ಕೂ ಹೆಚ್ಚುಜನಸೇರಿ,ಜನಜಾತ್ರೆಯೋ ಎಂಬಂತೆ ನಡೆದ ನನ್ನ ಮದುವೆಯಂದು ಮಧ್ಯಾಹ್ನ ಹನ್ನೆರಡರ ಸುಮಾರು ವಿದ್ಯುತ್ ಶಾಟ್ ಸರ್ಕ್ಯೂಟ್ ಆಗಿ ಹಿರೇದಿನ್ನಿಯಿಂದ ನನ್ನ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಒಬ್ಬರ ಮೇಲೆ ವಿದ್ಯುತ್ ತಂತಿ ಹರಿದು ಅವರು ಪ್ರಜ್ಞೆ ತಪ್ಪಿ ಬಿದ್ದರು.ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಅನುಗ್ರಹದಿಂದ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡರು.ಒಂದು ವೇಳೆ ನಾನು ಜ್ಯೋತಿಷಿಗಳು ನಿಗದಿಪಡಿಸಿದ್ದ ಅವಧಿಯಲ್ಲಿ ಮದುವೆಯಾಗಿದ್ದರೆ ಸಹಸ್ರ ಸಹಸ್ರ ಸಂಖ್ಯೆಲ್ಲಿದ್ದ ಜನರನ್ನು ನಿಯಂತ್ರಿಸಲಾಗದೆ ನೂಕು ನುಗ್ಗಲು ಉಂಟಾಗಿ ವಿದ್ಯುತ್ ತಂತಿಯು ಹರಿದು ಬಿದ್ದು ಕನಿಷ್ಠ ಐದಾರು ಜನ ಸಾಯುವ ಸಂಭವವೂ ಇತ್ತು.ಗುರುವಾನುಗ್ರಹ ನನ್ನನ್ನು ಕಾಪಾಡಿತು.ಆದ್ದರಿಂದ ಮದುವೆಗೆ ಗ್ರಹಬಲ, ಮುಹೂರ್ತಕ್ಕಿಂತ ಗುರುವಾನುಗ್ರಹ ಇಲ್ಲವೆ ದೈವಾನುಗ್ರಹ ಇದ್ದರೆ ಸಾಕು.

೧೪.೦೫.೨೦೨೪

About The Author