ಕಥೆಯೇ ತತ್ತ್ವವಲ್ಲ !

ಗ್ರಹತತ್ತ್ವ : ಕಥೆಯೇ ತತ್ತ್ವವಲ್ಲ !  ::  ಮುಕ್ಕಣ್ಣ ಕರಿಗಾರ

ಇಂದು ( ಮೇ ೧೪,೨೦೨೪) ಬೆಳಿಗ್ಗೆ ನಾನು ಬರೆದು ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿದ್ದ ‘ ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ’ ಎನ್ನುವ ಲೇಖನವನ್ನು ಓದಿದ ಮಹಾಶೈವ ಧರ್ಮಪೀಠದ ನಿಷ್ಠಾವಂತ ಕಾರ್ಯಕರ್ತರಲ್ಲೊಬ್ಬರಾಗಿರುವ ಉದಯಕುಮಾರ ಮಡಿವಾಳ ಬೆಂಗಳೂರಿನಿಂದ ಎರಡು ಸಂದೇಹ ವ್ಯಕ್ತಪಡಿಸಿದ್ದಾರೆ ; ೧. ಶನಿಯು ಶಿವನನ್ನು ಬಿಡದೆ ಶಿವನ ಹೆಗಲು ಏರಿ ಕಾಡಿದನಂತೆ. ಇದು ನಿಜವೆ?೨. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ಜ್ಯೋತಿರ್ಲಿಂಗವನ್ನು ಚಂದ್ರನು ಸ್ಥಾಪಿಸಿದನಂತೆ.ಈ ಲೇಖನದಲ್ಲಿ ನೀವು ಸೂರ್ಯಚಂದ್ರರು ಹುಟ್ಟುವ ಮೊದಲೇ ಜ್ಯೋತಿರ್ಲಿಂಗಗಳಿದ್ದವು ಎಂದಿದ್ದೀರಿ.ಈ ಪ್ರಶ್ನೆಗಳು ಉದಯಕುಮಾರ ಒಬ್ಬರಿಗೆ ಮಾತ್ರವಲ್ಲ ಇತರರಿಗೂ ಕಾಡಿವೆ.ಅವರೂ ಮೆಸೇಜ್ ಗಳನ್ನು ಕಳಿಸಿದ್ದಾರೆ .ಉದಯಕುಮಾರ ಮತ್ತೆ ಇತರರು ಜ್ಯೋತಿರ್ಲಿಂಗಗಳ ಕುರಿತಾದ ಕಥೆಗಳನ್ನು ಓದಿ ಇಂತಹ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನುವುದು ಸ್ಪಷ್ಟ.ಆದರೆ ಕಥೆಗಳೇ ತತ್ತ್ವವಲ್ಲ ; ತತ್ತ್ವವನ್ನು ಜನಸಾಮಾನ್ಯರಿಗೆ ನಿರೂಪಿಸುವ ಕಾರಣದಿಂದ ತತ್ತ್ವಕ್ಕೆ ಒಂದು ಕಥನರೂಪವನ್ನು ನೀಡಲಾಗುತ್ತದೆ.ಕಥೆಗಾರನ ಕಲ್ಪನೆ,ಸೃಷ್ಟಿಶೀಲ ಸಾಮರ್ಥ್ಯ ಅಧಿಕವಾಗಿದ್ದಷ್ಟೂ ಕಥೆ ರೋಚಕವಾಗುತ್ತದೆ,ಆಕರ್ಷಕವಾಗುತ್ತದೆ.ತತ್ತ್ವವನ್ನು ಗ್ರಹಿಸಲಾಗದ ಜನತೆ ಕಥೆಯನ್ನು ಇಷ್ಟಪಡುತ್ತಾರೆ.ತತ್ತ್ವವು ಕಥನರೂಪಕ್ಕೆ ಇಳಿಯುತ್ತ ರೂಪಾಂತರ ಪಡೆಯುತ್ತದೆ,ಮಾರ್ಪಾಡು ಹೊಂದುತ್ತದೆ.ಒಮ್ಮೊಮ್ಮೆ ಮೂಲ ತತ್ತ್ವಕ್ಕೆ ಅಪಚಾರ ಆಗುವಷ್ಟು ಕಥನಕೌಶಲ ಎದ್ದು ಮೆರೆಯುತ್ತದೆ.

ಶನಿ ಒಂದು ಗ್ರಹವಷ್ಟೆ ವಿಶ್ವನಿಯಾಮಕನಲ್ಲ.

ಶನಿಯು ಯಾರನ್ನೂ ಬಿಡದೆ ಕಾಡುತ್ತಾನೆ,ಕೊನೆಗೆ ಶಿವನ ಹೆಗಲೂ ಹೇರಿದ ಎಂದು ಕಥೆ ಕಟ್ಟಿದ ಜನರು — ಕೈಲಾಸಕ್ಕೆ ಆಗಮಿಸಿದ ಶನಿಯು ‘ ಒಂದು ದಿನದ ಮಟ್ಟಿಗೆ ಆದರೂ ತಮ್ಮ ಮೇಲೆ ನನ್ನ ಪ್ರಭಾವ ಬೀರಲು ಅವಕಾಶ ನೀಡಬೇಕು’ ಎಂದು ಶಿವನನ್ನು ಕೇಳಿದನಂತೆ.ಶಿವನು ‘ ನಾಳೆ ಬಾ’ ಎಂದು ಹೇಳಿ ಕಳುಹಿಸಿದನಂತೆ.ಮರುದಿನ ಶನಿಯು ಕೈಲಾಸವನ್ನು ತಲುಪುವ ಹೊತ್ತಿಗೆ ಶಿವನು ಕೈಲಾಸವನ್ನು ತೊರೆದು ಯಾವುದೋ ಮರದ ಬುಡದಲ್ಲಿ ಇರುವೆಯಾಗಿ ಕುಳಿತಿದ್ದನಂತೆ ಎನ್ನುವ ಕಥೆಯನ್ನು ಹೇಳುತ್ತಾರೆ.ಇದು ಕೇವಲ ಕಥೆಯೇ ಹೊರತು ಸತ್ಯವಲ್ಲ.

ಪರಶಿವನು ವಿಶ್ವ,ಬ್ರಹ್ಮಾಂಡದ ಸೃಷ್ಟಿ,ಸ್ಥಿತಿ ಮತ್ತು ಪ್ರಳಯಗಳಿಗೆ ಕಾರಣನಾದ ಪರಬ್ರಹ್ಮ ಮತ್ತು ಪರಮೇಶ್ವರನಿರುವನು.ಬ್ರಹ್ಮ,ವಿಷ್ಣು ಮತ್ತು ರುದ್ರರುಗಳು ಪರಶಿವನ ಆಣತಿಯಂತೆ ವಿಶ್ವದ ಸೃಷ್ಟಿ ಸ್ಥಿತಿ ಲಯ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.ಪಂಚಭೂತಗಳು,ಅಷ್ಟದಿಕ್ಕುಗಳು ಮತ್ತು ನವಗ್ರಹಗಳೆಲ್ಲವೂ ಪರಶಿವನ ಸಂಕಲ್ಪದಂತೆ ಸೃಷ್ಟಿಗೊಂಡವು.ಸೂರ್ಯ- ಚಂದ್ರರಿಂದ ಹಿಡಿದು ಶನಿ,ರಾಹು ಕೇತುಗಳವರೆಗಿನ ಎಲ್ಲ ಗ್ರಹದೇವತೆಗಳು ಪರಶಿವನ ಆಜ್ಞಾನುಸಾರ,ಪರಶಿವನ ವಿಶ್ವನಿಯಾಮಕ ತತ್ತ್ವಕ್ಕೆ ಅನುಸಾರವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.ಸೂರ್ಯನಾಗಲಿ ಶನಿಯಾಗಲಿ ಪರಶಿವನ ವಿಶ್ವನಿಯಾಮಕ ನಿಯತಿಯ ಅನುಲ್ಲಂಘನೀಯ ಶಾಸನವನ್ನು ಮೀರಲಾರರು.ಶಿವನ ಆಜ್ಞಾಪಾಲಕನಾದ ಶನಿಯು ಶಿವನನ್ನು ಕಾಡಬಹುದೆ? ತನ್ನ ಪ್ರಭಾವವನ್ನು ಶಿವನ ತೋರಿಸಬಹುದೆ?

ಪರಶಿವನ ತತ್ತ್ವವನ್ನು ಬ್ರಹ್ಮ,ವಿಷ್ಣು,ರುದ್ರರುಗಳೇ ಸರಿಯಾಗಿ ಅರ್ಥೈಸಿಕೊಳ್ಳಲಾರರು ಎಂದ ಬಳಿಕ ಕೇವಲ ಗ್ರಹಮಾತ್ರನಾದ ಶನಿಯು ಪರಶಿವತತ್ತ್ವವನ್ನು ಅರ್ಥೈಸಿಕೊಳ್ಳಬಲ್ಲನೆ ? ಶಿವನ ಸತಿಯಾದ ಶಕ್ತಿ ಇಲ್ಲವೆ ಪಾರ್ವತಿದೇವಿಯು ಮಾತ್ರ ಪರಶಿವ ತತ್ತ್ವದ ಅರ್ಧದಷ್ಟನ್ನು ಮಾತ್ರ ಗ್ರಹಿಸಲು ಸಮರ್ಥಳಾಗಿದ್ದಾಳೆ.ಪರಶಿವತತ್ತ್ವದ ಅರ್ಧದಷ್ಟು ಅರ್ಥಗ್ರಹಿಸಿಕೊಂಡಿದ್ದರಿಂದ ಪಾರ್ವತಿಯು ಶಿವನ ಅರ್ಧಾಂಗಿನಿ ಎನ್ನಿಸಿಕೊಂಡಿರುವಳು‌.ಅಲ್ಲದೆ ಪರಶಿವನ ಧಾಮವಾದ ಕೈಲಾಸವು ಬ್ರಹ್ಮಾಂಡದ ತುಟ್ಟತುದಿಯಲ್ಲಿರುವ ಅಮರಾವತಿ,ಅಲಕಾವತಿ ವೈಕುಂಠ,ಸತ್ಯಲೋಕ ಮೊದಲಾದ ಲೋಕಗಳಿಂದ ಬಹುದೂರದ ಎತ್ತರದಲ್ಲಿರುವ ಪರಮಾನಂದದ ನೆಲೆ,ಸಚ್ಚಿದಾನಂದನ ಆವಾಸ‌.ಕೈಲಾಸದಲ್ಲಿ ಸೂರ್ಯ ಚಂದ್ರರು ಬೆಳಗುವುದಿಲ್ಲ.ವಾಯು ಸಂಚರಿಸುವುದಿಲ್ಲ.ಶಿವನ ಸ್ವಯಂಪ್ರಕಾಶವೇ ಕೈಲಾಸವನ್ನು ಬೆಳಗುತ್ತದೆ,ಶಿವನ ಶ್ವಾಸೋಚ್ಛಾಸ ಕ್ರಿಯೆಯಿಂದ ಅಲ್ಲಿ ಗಾಳಿಯಾಡುತ್ತದೆ.ಪರಶಿವನ‌ಧಾಮವಾದ ಕೈಲಾಸವನ್ನು ಬ್ರಹ್ಮ ವಿಷ್ಣು ರುದ್ರರಗಳನ್ನು ಹೊರತುಪಡಿಸಿ ಶಿವಾನುಗ್ರಹವನ್ನು ಪಡೆದ ಅತ್ಯುನ್ನತ ಸಿದ್ಧಿಸಂಪಾದಿಸಿದ ಯೋಗಿಗಳು ಮಾತ್ರ ಪ್ರವೇಶಿಸಲು ಸಾಧ್ಯ.ಸೂರ್ಯನಾಗಲಿ,ಶನಿಯಾಗಲಿ ಕೈಲಾಸವನ್ನು ಪ್ರವೇಶಿಸಲಾರರು.ಪರಶಿವನು ತನ್ನ ಮೂರನೇ ಕಣ್ಣನ್ನು ತೆರೆದರೆ ಪ್ರಪಂಚವು ಕ್ಷಣಾರ್ಧದಲ್ಲಿ ಸುಟ್ಟುಬೂದಿಯಾಗುತ್ತದೆ.ಮನ್ಮಥನು ಶಿವನ ಕೋಪಕ್ಕೆ ಸಿಕ್ಕು ಸಿಟ್ಟುಬೂದಿಯಾದನಷ್ಟೆ.ಇಂತಹ ಪರಶಿವನ ಬಳಿ ಶನಿ ಹೋಗಲು ಸಾಧ್ಯವೆ ? ಶನಿಯು ಪರಶಿವನ ಹೆಗಲೇರಲು ಸಾಧ್ಯವೆ ? ಲೋಕದ ಎಂತೆಂತಹ ಸಮರ್ಥ ಅರಸುರುಗಳು,ಚಕ್ರವರ್ತಿಗಳು,ಋಷಿಗಳು ,ಸಿದ್ಧರುಗಳನ್ನು ಬಿಡದೆ ಶನಿಯು ಕಾಡಿದ್ದಾನೆ ಎನ್ನುವ ಅನುಭವದಲ್ಲಿ ‘ ಶನಿಯು ಯಾರನ್ನೂ ಕಾಡದೆ ಬಿಡನು,ಕೊನೆಗೆ ಶಿವನನ್ನು ಕೂಡ’ ಎನ್ನುವ ಮಾತು ಹುಟ್ಟಿಕೊಂಡಿರಬೇಕು.ಆದರೆ ಅದು ಸತ್ಯವಲ್ಲ,ಶನಿಯು ಶಿವನ ಸಮೀಪವೇ ಸುಳಿಯನು ಎಂದಾಗ ಶಿವನನ್ನು ಕಾಡಬಹುದೆ?

ಶನಿಯೂ ಶಿವಭಕ್ತನೆ

ಶನಿಯೂ ಶಿವಭಕ್ತನು ಎನ್ನುವುದನ್ನು ಹಲವು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.ಸೂರ್ಯನ ಪತ್ನಿಯು ಸಂಜ್ಞಾದೇವಿಯು ( ಸುವರ್ಚಲಾ ಎಂದು ಕರೆಯಲ್ಪಡುತ್ತಾಳೆ) ಸೂರ್ಯನ ಬಿಸಿಲಿನ ಪ್ರಖರತೆಯನ್ನು ಸಹಿಸಲಾಗದೆ ತನ್ನ ನೆರಳಿಗೆ ತನ್ನ ರೂಪಕೊಟ್ಟು ಛಾಯಾ ಎಂದು ಹೆಸರಿಟ್ಟು ಕಾಡಿಗೆ ಹೋಗುವಳು.ಸಂಜ್ಞಾದೇವಿಯಿಂದ ಯಮ,ಯಮುನಾ ಎನ್ನುವ ಪುತ್ರ ಮತ್ತು ಪುತ್ರಿಯನ್ನು ಪಡೆದಿದ್ದ ಸೂರ್ಯನು ಛಾಯಾಳನ್ನು ಸಂಜ್ಞಾ ಎಂದೇ ತಿಳಿದು ಸಂಸಾರ ಸಾಗಿಸುವನು.ಛಾಯಾಳಲ್ಲಿ ಶನಿಯು ಹುಟ್ಟುವನು.ಆದರೆ ಶನಿಯು ಯಮ ಯಮುನಾರಂತೆ ದರ್ಮಿಷ್ಟನಾಗಿರದೆ ದರ್ಪಿಷ್ಟನಾಗಿರುತ್ತಾನೆ.ಅವನ ನಡೆ ನುಡಿ ಎಲ್ಲವೂ ಯಮನಿಗೆ ತದ್ವಿರುದ್ಧವಾಗಿರುತ್ತದೆ.ತಂದೆಯೊಡನೆ ಒಂದು ಸಾರಿ ಜಗಳಕ್ಕಿಳಿಯುತ್ತಾನೆ.ಸಿಟ್ಟಿಗೆದ್ದ ಸೂರ್ಯನು ಶನಿಯನ್ನು ತನ್ನ ಕಾಲಿನಿಂದ ಜೋರಾಗಿ ಒದೆಯುವನು.ಆ ಒದೆತದ ಪೆಟ್ಟಿಗೆ ಶನಿಯ ಕಾಲು ಮುರಿಯುವುದು.ಆ ಕಾರಣದಿಂದಲೇ ಶನಿಯು ನಿಧಾನವಾಗಿ ನಡೆಯುತ್ತಿದ್ದು ನವಗ್ರಹಗಳಲ್ಲಿ ‘ ಮಂದಗ್ರಹ’ ಎನ್ನಿಸಿಕೊಂಡಿದ್ದಾನೆ.ಕೆಲವು ರಾಶಿಗಳು ತಮ್ಮ ಪರಿಭ್ರಮಣಕ್ಕೆ ತಿಂಗಳು,ಕೆಲವು ತಿಂಗಳು ಇಲ್ಲವೆ ವರ್ಷದ ಅವಧಿ ತೆಗೆದುಕೊಂಡರೆ ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡುವರೆವರ್ಷ ತೆಗೆದುಕೊಳ್ಳುತ್ತಾನೆ.

ತಂದೆ ಸೂರ್ಯನಿಂದ ಒದೆ ತಿಂದು ಅವಮಾನಿತನಾದ ಶನಿಯು ಶಿವನನ್ನು ಕುರಿತು ತಪಸ್ಸು ಮಾಡುವನು.ಶನಿಯ ತಪಸ್ಸಿಗೆ ಒಲಿದ ಶಿವನು ಪ್ರತ್ಯಕ್ಷನಾಗಿ ‘ ಏನು ವರಬೇಕು?’ ಎಂದು ಕೇಳಲಾಗಿ ಶನಿಯು ‘ ತಾನು ತನ್ನ ತಂದೆ ಸೂರ್ಯನಿಗಿಂತಲೂ ಬಲಶಾಲಿಯಾಗಬೇಕೆಂದೂ ತನ್ನ ತಂದೆ ಸೂರ್ಯನನ್ನೂ ಸೇರಿದಂತೆ ಭೂಮಂಡಲದ ಸಮಸ್ತರನ್ನು ಕಾಡುವ ಶಕ್ತಿ ನೀಡಬೇಕೆಂಬ’ ವರ ಬೇಡುವನು.’ತಥಾಸ್ತು’ ಎಂದು ಶನಿಗೆ ವರ ಪ್ರದಾನಿಸುತ್ತಾನೆ ಪರಶಿವನು.ಶಿವನ ವರದಿಂದ ಅತ್ಯಂತ ಬಲಶಾಲಿ ಗ್ರಹವಾದ ಶನಿಯು ಶಿವಭಕ್ತರನ್ನು ಕಾಡುವುದಿಲ್ಲ.ಒಂದೊಮ್ಮೆ ಶಿವಭಕ್ತರನ್ನು ಶನಿಯು ಕಾಡುತ್ತಿದ್ದರೆ ಭಕ್ತರು ಶಿವನನ್ನು ಪೂಜಿಸಿದರೆ ಶನಿಯು ಅವರಲ್ಲಿ ಪ್ರಸನ್ನನಾಗಿ ತನ್ನ ಉಪದ್ರವದಿಂದ ಮುಕ್ತರನ್ನಾಗಿಸುತ್ತಾನೆ.

ಸೋಮನಾಥ ಜ್ಯೋತಿರ್ಲಿಂಗದ ಕಥೆ

ಸೋಮೇಶ್ವರ ಜ್ಯೋತಿರ್ಲಿಂಗವನ್ನು ಚಂದ್ರನು ಸ್ಥಾಪಿಸಲಿಲ್ಲ,ಚಂದ್ರನ ಪೂರ್ವದಲ್ಲಿಯೇ ಸೋಮೇಶ್ವರ ಜ್ಯೋತಿರ್ಲಿಂಗವಿತ್ತು.ದಕ್ಷಾಪ್ರಜಾಪತಿಯು ತನ್ನ ಇಪ್ಪತ್ತೇಳು ಜನ ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿಕೊಟ್ಟಿರುತ್ತಾನೆ.ಆ ಇಪ್ಪತ್ತೇಳು ಜನ ದಕ್ಷ ಪುತ್ರಿಯರಲ್ಲಿ ರೋಹಿಣಿಯು ಅತಿಶಯಸುಂದರಿಯಾಗಿದ್ದುದರಿಂದ ಚಂದ್ರನು ಇತರ ಇಪ್ಪತ್ತಾರು ಜನ ಪತ್ನಿಯರನ್ನು ಕಡೆಗಣಿಸಿ ರೋಹಿಣಿಯಲ್ಲೇ ಅನುರಕ್ತನಾಗುತ್ತಾನೆ,ಅವಳೊಬ್ಬಳೊಂದಿಗೆ ಇರುತ್ತಾನೆ.ಇತರ ದಕ್ಷಪುತ್ರಿಯರು ತಂದೆ ದಕ್ಷನಿಗೆ ದೂರು ನೀಡಲು ದಕ್ಷನು ಅಳಿಯ ಚಂದ್ರನಿಗೆ ‘ ಎಲ್ಲ ಪತ್ನಿಯರಲ್ಲಿಯೂ ಸಮಾನ ಅನುರಕ್ತನಾಗಿರು’ ಎಂದು ಬೋಧಿಸುವನು.ಆದರೂ ಚಂದ್ರನು ರೋಹಿಣಿಯ ಮಾದಕಸೌಂದರ್ಯಕ್ಕೆ ಮರುಳಾಗಿ ಅವಳೊಬ್ಬಳಲ್ಲಿಯೇ ಅನುರಕ್ತನಾಗಿ ಇತರ ಪತ್ನಿಯರನ್ನು ಉಪೇಕ್ಷಿಸುವನು.ಪುತ್ರಿಯರು ಪುನಃ ದೂರು ನೀಡಲು ಸಿಟ್ಟಿಗೆದ್ದ ದಕ್ಷನು ಚಂದ್ರನಿಗೆ ‘ ಕುಷ್ಟರೋಗಿಯಾಗು ‘ ಎಂದು ಶಪಿಸುವನು.ಕುಷ್ಟರೋಗಕ್ಕೆ ತುತ್ತಾದ ಚಂದ್ರನು ಕಳೆಯನ್ನು ಕಳೆದುಕೊಳ್ಳುವನು.ಅವನ ದಯನೀಯ ಪರಿಸ್ಥಿತಿಯಿಂದ ಅವನನ್ನು ಪಾರು ಮಾಡಲು ದೇವತೆಗಳಾಗಲಿ,ಋಷಿಗಳಾಗಲಿ ಮುಂದೆ ಬರಲಿಲ್ಲ ದಕ್ಷನ ಆಗ್ರಹಕ್ಕೆ ತುತ್ತಾಗಬೇಕು ಎನ್ನವ ಭಯದಿಂದ.ಕೊನೆಗೆ ಚಂದ್ರನು ಬ್ರಹನನ್ನು ಮೊರೆಯಲು ಬ್ರಹ್ಮದೇವನು ‘ ಪ್ರಭಾಸಕ್ಷೇತ್ರಕ್ಕೆ ತೆರಳಿ ಅಲ್ಲಿರುವ ಶಿವಲಿಂಗವನ್ನು ಪೂಜಿಸಿ,ಸೇವಿಸಲು’ ಸೂಚಿಸುವನು.ಬ್ರಹ್ಮನ ಸೂಚನೆಯಂತೆ ಪ್ರಭಾಸಕ್ಷೇತ್ರ ( ಸೌರಾಷ್ಟ್ರ) ಕ್ಕೆ ತೆರಳಿ ಶಿವನನ್ನು ಪೂಜಿಸುವನು ಚಂದ್ರನ ಭಕ್ತಿಗೆ ಮೆಚ್ಚಿದ ಶಿವನು ಅಲ್ಲಿದ್ದ ಲಿಂಗದಲ್ಲಿ ಪ್ರಕಟಗೊಂಡು ಚಂದ್ರನಿಗೆ ವರನೀಡಿ ಅವನಲ್ಲಿ ಹದಿನೈದು ಕಲೆಗಳು ಪ್ರಕಟಗೊಳ್ಳುವಂತೆ ಮಾಡಿ ಒಂದು ಕಲೆಯನ್ನು ತನ್ನ ಬಳಿ ಇಟ್ಟುಕೊಳ್ಳುವನು.ಚಂದ್ರನನ್ನು ತನ್ನ ತಲೆಯಲ್ಲಿ ಧರಿಸುವ ಮೂಲಕ ಚಂದ್ರಶೇಖರ,ಸೋಮಶೇಖರ ಎನ್ನುವ ಬಿರುದನ್ನು ಧರಿಸುವ ಶಿವನು ಅತ್ತ ದಕ್ಷನ ಶಾಪಕ್ಕೂ ಚ್ಯುತಿ ಬಾರದಂತೆ ಇತ್ತ ತನ್ನ ಭಕ್ತವತ್ಸಲನ ಬಿರುದಿಗೂ ಧಕ್ಕೆಯೊದಗದಂತೆ ಚಂದ್ರನನ್ನು ವೃದ್ಧಿ ಕ್ಷಯಗಳನ್ನುಳ್ಳವನಾಗುವಂತೆ ವರ ಪ್ರದಾನಿಸುವನು.ಶಿವನ ವರಪ್ರಭಾವದಿಂದ ಶುಕ್ಲ ಪಕ್ಷದ ಹದಿನೈದು ದಿನಗಳಲ್ಲಿ ವೃದ್ಧಿಯಾಗುವ ಚಂದ್ರನು ಕೃಷ್ಣಪಕ್ಷದ ಹದಿನೈದು ದಿನಗಳಲ್ಲಿ ಕ್ಷಯ ಹೊಂದುವನು.ಚಂದ್ರನು ಸೋಮದ ಅಧಿಪತಿಯಾದ್ದರಿಂದ ಅವನನ್ನು ಸೋಮ ಎಂದು ಕರೆಯುತ್ತಾರೆ.ಅಂತಹ ಅಮೃತಮಯ ಸೋಮನಿಂದ ಪೂಜಿಸಲ್ಪಟ್ಟಿದ್ದರಿಂದ ಸೌರಾಷ್ಟ್ರದಲ್ಲಿದ್ದ ಶಿವನ ಜ್ಯೋತಿರ್ಲಿಂಗವು ಸೋಮೇಶ್ವರ,ಸೋಮನಾಥ ಎಂದು ಪ್ರಸಿದ್ಧಿಯಾಯಿತು.

೧೪.೦೫.೨೦೨೪

About The Author