ಆತ್ಮಬಲ ಒಂದಿದ್ದರೆ ಸಾಕು,ಯಾವ ಗ್ರಹಬಲವೂ ಬೇಕಿಲ್ಲ !

ಅನುಭಾವ ಚಿಂತನೆ : ಆತ್ಮಬಲ ಒಂದಿದ್ದರೆ ಸಾಕು,ಯಾವ ಗ್ರಹಬಲವೂ ಬೇಕಿಲ್ಲ !   ::  ಮುಕ್ಕಣ್ಣ ಕರಿಗಾರ

ಇಂದಿನ ‘ ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ’ ಎನ್ನುವ ಲೇಖನ ಬಹಳಷ್ಟು ಪ್ರಶ್ನೆ- ಸಂದೇಹಗಳನ್ನು ಹುಟ್ಟುಹಾಕಿದೆ.ಪ್ರಶ್ನೆಗಳನ್ನು ಹೊತ್ತ ಸಂದೇಶಗಳು ನಿರಂತರವಾಗಿ ಆಗಮಿಸುತ್ತಿವೆ.ಮಹಾಶೈವ ಧರ್ಮಪೀಠದ ನಿಕಟವರ್ತಿಗಳೂ ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರೂ ಆಗಿರುವ ಶಾಂಭವಿಯೋಗಾನುಷ್ಠಾನ ನಿರತರಾದ ಉದಯಕುಮಾರ ಪಂಚಾಳ ಅವರು ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.ಎರಡು ಪ್ರಶ್ನೆಗಳು ಪ್ರತ್ಯೇಕ ಉತ್ತರವನ್ನು ನಿರೀಕ್ಷಿಸುತ್ತಿದ್ದು ಈಗ ಅವರ ಮೊದಲ ಪ್ರಶ್ನೆಗೆ ಉತ್ತರಿಸುವೆ.’ ಗ್ರಹಬಲ ಚೆನ್ನಾಗಿ ಇರಬೇಕು ಅಂತಾರೆ.ಜ್ಯೋತಿಷವು ಗ್ರಹಗಳ ಆಧಾರದಲ್ಲಿ ನಿರ್ಧಾರವಾಗುತ್ತದೆಯಲ್ಲವೆ?’ ಎನ್ನುವುದು ಅವರ ಮೊದಲ ಪ್ರಶ್ನೆ.

ಗ್ರಹಬಲ ಚೆನ್ನಾಗಿ ಇರಬೇಕು ಶುಭ ಶೋಭನಾದಿ ಕಾರ್ಯಗಳಿಗೆ ಎನ್ನುವುದು ಜನರಲ್ಲಿ ರೂಢಿಗತವಾಗಿರುವ ನಂಬಿಕೆ.ಮದುವೆಮಾಡಲು,ಮಹತ್ವದ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ಜನರು ‘ ಗ್ರಹಬಲ’ ನೋಡುವುದುಂಟು.ಜನರಲ್ಲಿ ಇಂತಹ ನಂಬಿಕೆಯನ್ನು ಜ್ಯೋತಿಷಿಗಳೇ ಹುಟ್ಟುಹಾಕಿದ್ದಾರೆ ಎಂದು ಬೇರೆ ಹೇಳಬೇಕಿಲ್ಲ.

ನಾವು ಗ್ರಹಬಲದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.ಗ್ರಹಬಲ ಚೆನ್ನಾಗಿದ್ದರೇನು,ಚೆನ್ನಾಗಿ ಇರದಿದ್ದರೇನು ಪ್ರಪಂಚ ವ್ಯವಹಾರದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ.ಗ್ರಹಬಲಕ್ಕೆ ಒತ್ತುಕೊಡುವ ಜ್ಯೋತಿಷಿಗಳು ಮದುವೆಯ ಸಂದರ್ಭದಲ್ಲಿ ನೂತನ ದಂಪತಿಗಳಿಗೆ ಹರಸುವದು ‘ ತಾರಾಬಲಂ ಚಂದ್ರಬಲಂ’ ಎಂದೇ ಅಲ್ಲವೆ ? ತಾರಾಬಲ ಮತ್ತು ಚಂದ್ರಬಲಗಳೆರಡೂ ಸರ್ವೋನ್ನತವಾಗಿದ್ದರೆ,ಸರ್ವೋತ್ತಮವಾಗಿದ್ದರೆ ದಾಂಪತ್ಯಜೀವನವು ಸುಖಮಯವಾಗುತ್ತದೆಯಂತೆ.ಒಂದು ಕ್ಷಣ ಆಲೋಚಿಸಿ.ಈ ತಾರೆ ಯಾರು ? ಆಕೆ ಗುರುವಿನ ಪತ್ನಿ.ಚಂದ್ರ ಅವಳನ್ನು ಮೋಹಿಸುತ್ತಾನೆ ! ಗುರುಪತ್ನೀಗಮನ ನಿಷಿದ್ಧ ಎನ್ನುವ ಶಾಸ್ತ್ರಬರೆದವರೇ ಇಲ್ಲಿ ಗುರುವಿನ ಪತ್ನಿಯಾಗಿ ಹಾದಿ ತಪ್ಪಿ ಚಂದ್ರನಲ್ಲಿ ಅನುರಕ್ತಳಾದ ತಾರೆಯ ಮತ್ತು ಮಾತೃಸಮಾನಳಾದ ಗುರುಪತ್ನಿಯನ್ನು ಮೋಹಿಸಿದ ಚಂದ್ರನ ಬಲವನ್ನು ಹಾರೈಸುತ್ತಾರೆ ನೂತನ ದಂಪತಿಗಳಿಗೆ ! ಬೇಕೆ ಹಾದಿತಪ್ಪಿದ ಹಾದರದವರ ಬಲ ನವಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳಿಗೆ ? ಇದು ಎಂತಹ ಗ್ರಹಬಲ?

ಇನ್ನು ಗ್ರಹಗಳು ಬಹಳ ಬಲಿಷ್ಟ,ಅವುಗಳ ಬಲಬೇಕು ಎನ್ನುವ ಜ್ಯೋತಿಷಿಗಳು ಅವರ ಬಲಿಷ್ಟ ಗ್ರಹಗಳಾದ ಸೂರ್ಯ ಮತ್ತು ಚಂದ್ರರನ್ನು ಛಾಯಾಗ್ರಹಗಳಾದ ರಾಹು ಕೇತುಗಳು ನುಂಗುತ್ತಾರಲ್ಲ,ಇದಕ್ಕೇನು ಹೇಳುತ್ತಾರೆ?( ಇದು ಕೇವಲ ಜ್ಯೋತಿಷದ ನಂಬಿಕೆ.ಇದಕ್ಕೆ ವಿಜ್ಞಾನದ ಆಧಾರವಿಲ್ಲ.) ರಾಹು ಕೇತುಗಳಿಂದ ಪೀಡಿತರಾಗುವ ಸೂರ್ಯ ಚಂದ್ರರು ಎಂತಹ ಬಲವನ್ನು ನೀಡಬಲ್ಲರು ? ಇವೆಲ್ಲ ಕೇವಲ ಕಾಲ್ಪನಿಕ ಸಂಗತಿಗಳಷ್ಟೆ.

ನಮಗೆ ನಮ್ಮ ‘ ಆತ್ಮಬಲ’ ದಲ್ಲಿ ನಂಬಿಕೆ ಇರಬೇಕು.ಯಾವ ಗ್ರಹದ ಬಲ ಇದ್ದರೇನು,ಇರದಿದ್ದರೇನು ನಮ್ಮ ಆತ್ಮಬಲ ( Will Power) ಒಂದು Strong ಇದ್ದರೆ ಸಾಕು.ಆತ್ಮಬಲವೇ ಎಲ್ಲ ಕಾರ್ಯಸಿದ್ಧಿಯ ಮೂಲ.ಆತ್ಮಬಲವೇ ಯಶಸ್ಸಿನ ಮೂಲ.ಆತ್ಮಬಲ ಗಟ್ಟಿಯಾದಷ್ಟೂ ದೊಡ್ಡ ದೊಡ್ಡ ಕಾರ್ಯಗಳನ್ನು ಸಾಧಿಸಬಹುದು.ದುರ್ಬಲರಿಗೆ ಗ್ರಹ ನಕ್ಷತ್ರಗಳ ಬಲದ ಅವಶ್ಯಕತೆ ಇರಬಹುದು,ಪುರುಷಸಿಂಹರುಗಳಿಗೆ ಆತ್ಮಬಲವೊಂದೇ ಸಾಕು.ಇಂಗ್ಲಿಷಿನ ಒಂದು ಗಾದೆ Where there is Will, there is a way ‘ ಎನ್ನುತ್ತದೆ.ಅಂದರೆ ಆತ್ಮಬಲವಿದ್ದಲ್ಲಿ ಮಹತ್ಕಾರ್ಯಸಿದ್ಧಿಯೂ ಅಡಗಿರುತ್ತದೆ ಎಂದರ್ಥ.’ಮನಸ್ಸಿದ್ದರೆ ಮಾರ್ಗ’ ಎಂದು ನಾವು ಅದನ್ನು ಸುಲಭವಾಗಿ ಅನುವಾದಿಸಬಹುದಾದರೂ ಮನಸ್ಸು ಆತ್ಮನ ಛಾಯೆಯೇ ಹೊರತು ಆತ್ಮನಲ್ಲ ಎಂಬ ಸಂಗತಿಯನ್ನು ಮರೆಯಬಾರದು.ಆತ್ಮವು ಪರಮಾತ್ಮಸ್ವರೂಪಿಯಾದುದು.ಪರಮಾತ್ಮನು ಹೇಗೆ ಗ್ರಹಗಳ ಬಾಧೆಗೆ ಸಿಲುಕಲಾರನೋ ಹಾಗೆಯೇ ಆತ್ಮನು ಗ್ರಹಗಳ ಬಾಧೆಗೆ ಈಡಾಗನು.ನಿತ್ಯಮುಕ್ತನೂ ನಿತ್ಯಶುದ್ಧನೂ ನಿತ್ಯ ಪರಿಪೂರ್ಣನೂ ಅವಿನಾಶಿಯೂ ಆಗಿರುವ ಆತ್ಮನು ಗ್ರಹಗಳ ಪೀಡೆಗೆ ಒಳಗಾಗುತ್ತಾನೆಯೆ ? ಖಂಡಿತವಾಗಿಯೂ ಇಲ್ಲ.ನಾವು ನಮ್ಮಲ್ಲಿ ಸುಪ್ತವಾಗಿರುವ ಪರಮಾತ್ಮನ ಚೈತನ್ಯಸ್ವರೂಪನಾಗಿರುವ ನಮ್ಮ ಆತ್ಮನನ್ನು ಎಚ್ಚರಿಸಿಕೊಂಡು ಆ ಆತ್ಮನಬಲದಲ್ಲಿ ನಡೆದರೆ ನಮಗೆ ಹೊರಗಿನ ಯಾವ ಬಲದ ಅಗತ್ಯವೂ ಇರುವುದಿಲ್ಲ.ಯಾರಲ್ಲಿ ಆತ್ಮಶಕ್ತಿ ಇಲ್ಲವೋ ಅವರಿಗೆ ಹೊರಗಿನ ನೂರಾರು ಶಕ್ತಿಗಳ ಆಸರೆ ಬೇಕಾಗುತ್ತದೆ.

ಜ್ಯೋತಿಷವು ಗ್ರಹಗಳ ಗತಿಯನ್ನಾಧರಿಸಿದ ಶಾಸ್ತ್ರ.ಜ್ಯೋತಿಷವು ದುರ್ಬಲರಿಗೆ,ಆತ್ಮಬಲ ಹೀನರಿಗೆ ಬೇಕಾಗುವ ಶಾಸ್ತ್ರವೇ ಹೊರತು ಯೋಗಿಗಳು,ಆತ್ಮಜ್ಞಾನಿಗಳಿಗೆ ಜ್ಯೋತಿಷದ ಅಗತ್ಯವಿಲ್ಲ.ಅರವತ್ತುಮೂರು ಜನ ಪುರಾತನರಲ್ಲಿ ಒಬ್ಬ ಪುರಾತನರು ಸೂರ್ಯನ ಗತಿಯನ್ನೇ ಸ್ತಂಭಿಸುತ್ತಾರೆ ! ಅದು ಆತ್ಮನ ಶಕ್ತಿ,ಪರಮಾತ್ಮನ ಅನುಗ್ರಹಬಲ.ಆತ್ಮಬಲ ಮತ್ತು ಪರಮಾತ್ಮನ ಅನುಗ್ರಹ ಇದ್ದರೆ ಯಾವ ಗ್ರಹ ಅಥವಾ ದೇವ ದೇವತೆಗಳ ಬಲದ ಅಗತ್ಯ ಇಲ್ಲ.

೧೪.೦೫.೨೦೨೪

About The Author