ಶೂದ್ರ ಸಂಸ್ಕೃತಿ ಚಿಂತನೆ : ಅಡಿ ಶೂದ್ರಸಂಸ್ಕೃತಿಯ ಸತ್ತ್ವ- ಹಿರಿಮೆ : ಮುಕ್ಕಣ್ಣ ಕರಿಗಾರ

ಜನರು ಮಾತನಾಡುವಾಗ ‘ ಅಡಿಯಿಂದ ಮುಡಿಯವರೆಗೆ’ ಎನ್ನುವ ಪದಪುಂಜವನ್ನು ಬಳಸುತ್ತಾರೆ.’ದೇವರ ವಿಗ್ರಹವು ಅಡಿಯಿಂದ ಮುಡಿಯವರೆಗೆ ಸುಲಕ್ಷಣವಾಗಿದೆ’ ಎಂದೂ ‘ ಅವಳು ಅಡಿಯಿಂದ ಮುಡಿಯವರೆಗೆ ಚಿತ್ತಾಕರ್ಷಕ ಸೌಂದರ್ಯವನ್ನು ಹೊಂದಿದ್ದಾಳೆ’ ಎಂದೂ ಹೇಳುವಂತಹ ಮಾತುಗಳನ್ನು ಕೇಳುತ್ತಿರುತ್ತೇವೆ.ಪಾದದಿಂದ ಶಿರಸ್ಸಿನವರೆಗೆ ಎನ್ನುವುದು ಅಡಿಯಿಂದ ಮುಡಿಯವರೆಗಿನ ಎನ್ನುವ ಪದಪುಂಜದ ಅರ್ಥ.’ಕಾಲಿನಿಂದ ತಲೆಯವರೆಗೆ’ ಎಂದು ಸುಲಭವಾಗಿ ಅರ್ಥೈಸಿಕೊಳ್ಳಬಹುದು.ದೇವರನ್ನೋ,ಮನುಷ್ಯರನ್ನೋ ಉದ್ದೇಶಿಸಿ ಹೇಳುವ ಸಂದರ್ಭದಲ್ಲಿ ‘ ಅಡಿಯಿಂದ ಮುಡಿಯವರೆಗೆ’ ಎಂದು ಬಳಸುವ ಮಾತು ಗಮನಾರ್ಹವಾದುದು.

ನಮ್ಮದು ಶಿರಪ್ರಧಾನ ಸಂಸ್ಕೃತಿ.ಅಂದರೆ ತಲೆಗೆ ಮಹತ್ವನೀಡಿದ ಸಂಸ್ಕೃತಿ . ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಸ್ತಾಪಿಸುವ ಪುರುಷಸೂಕ್ತವು ವಿರಾಟ್ ಪುರುಷನ ಶಿರಸ್ಸಿನಿಂದ ಬ್ರಾಹ್ಮಣನು,ಬಾಹುಗಳಿಂದ ಕ್ಷತ್ರಿಯನು, ಹೊಟ್ಟೆಯಿಂದ ವೈಶ್ಯನು ಮತ್ತು ಪಾದಗಳಿಂದ ಶೂದ್ರನು ಉದಯಿಸಿದನು ಎನ್ನುತ್ತದೆ.ಮನುಷ್ಯದೇಹದಲ್ಲಿ ತಲೆಯು ಮಹತ್ವದ ಅಂಗ ಇಲ್ಲವೆ ಅವಯವವಾದ್ದರಿಂದ ಶಿರಕ್ಕೆ ಮಹತ್ವವಿದೆ.ಭಾರತೀಯ ಸಮಾಜದಲ್ಲಿ ಶಿರೋಭಾಗದ ಪ್ರತಿನಿಧಿಗಳಾದ ಬ್ರಾಹ್ಮಣರು ತಮ್ಮ ಪ್ರತಿಷ್ಠೆಯನ್ನು ಸ್ವಯಂ ಪ್ರತಿಷ್ಠಾಪಿಸಿಕೊಂಡಿದ್ದಾರೆ.ಪುರುಷಸೂಕ್ತವೇ ಬ್ರಾಹ್ಮಣರ ಜಾತಿಪ್ರತಿಷ್ಠೆಯ ಮೂಲ.ಪುರುಷ ಸೂಕ್ತವು ಜಾತಿ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸದೆ ವರ್ಣವ್ಯವಸ್ಥೆಯ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತದೆ.ಪುರುಷಸೂಕ್ತದ ಬಹುಕಾಲದ ನಂತರ ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಕಾಣಿಸಿಕೊಂಡು ಶೂದ್ರಸಮುದಾಯಲ್ಲಿ ಸಾವಿರಾರು ಜಾತಿಗಳು ಕಾಣಿಸಿಕೊಂಡರೂ ವರ್ಣವಾಗಿದ್ದ ಬ್ರಾಹ್ಮಣ್ಯವೂ ಜಾತಿ ಯಾಗಿಯೂ ಮುಂದುವರೆದಿದೆ.

ಶಿರಪ್ರಧಾನ ಸಂಸ್ಕೃತಿ ಎಂದರೆ ಬ್ರಾಹ್ಮಣರಿಗೆ ಮಹತ್ವ ಇರುವ ಸಂಸ್ಕೃತಿ.ನಮ್ಮ ದೇಶದಲ್ಲಿ ಇಂದಿಗೂ ಬ್ರಾಹ್ಮಣರು ಭಾರತೀಯ ಸಮಾಜ ವ್ಯವಸ್ಥೆಯ ಮೇಲೆ ಹಿಡಿತಹೊಂದಿದ್ದಾರೆ.ಭಾರತೀಯ ಸಂಸ್ಕೃತಿಯ ಮೇಲಿನ ಬ್ರಾಹ್ಮಣರ ಹಿಡಿತವು ಪ್ರಶ್ನಾತೀತವೇನಲ್ಲ.ಕಾಲಕಾಲಕ್ಕೆ ಶರಣರು,ಸಂತರು,ಸಮಾಜ ಸುಧಾರಕರುಗಳು ಬ್ರಾಹ್ಮಣರ ಹುಸಿ ಪ್ರತಿಷ್ಠೆಯನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ.ಜನಸಾಮಾನ್ಯರೂ ಕೂಡ ಬ್ರಾಹ್ಮಣರ ಸುಳ್ಳು ಪೊಗರನ್ನು ಪ್ರಶ್ನಿಸಿದ್ದರು ಎನ್ನುವ ಸಂಗತಿಯನ್ನು ‘ ಅಡಿಯಿಂದ ಮುಡಿಯವರೆಗೆ’ ಮಾತಿನಲ್ಲಿ ಗಮನಿಸಬಹುದು.ದೇಹವನ್ನು ಬಣ್ಣಿಸುವಾಗ ‘ತಲೆಯಿಂದ ಕಾಲಿನವರೆಗೆ’ ಎಂದು ಬಣ್ಣಿಸುವ ಬದಲು ‘ ಕಾಲಿನಿಂದ ತಲೆಯವರೆಗೆ’ ಎಂದು ವಿವರಿಸಿದ್ದು ವಿಶೇಷವಾಗಿದೆ.ಮನುಷ್ಯರು ಬುದ್ಧಿವಂತರಿರಬಹುದು,ಸ್ಫುರದ್ರೂಪಿಗಳಿರಬಹುದು,ವ್ಯವಹಾರ ಚತುರರಿರಬಹುದು ಆದರೆ ಅವರ ವ್ಯಕ್ತಿತ್ವಕ್ಕೆ ಬೆಲೆ ಬರುವುದು ಪಾದಗಳಿಂದ ! ಕಾಲುಗಳು ಚಲಿಸಿದಾಗ ತಾನೆ ವ್ತಕ್ತಿತ್ವಕ್ಕೆ ಜಂಗಮತ್ವ ಪ್ರಾಪ್ತವಾಗುವುದು ? ಒಬ್ಬ ವ್ಯಕ್ತಿ ಎಷ್ಟೇ ಬುದ್ಧಿವಂತನಿದ್ದು ಅವನಿಗೆ ಕಾಲುಗಳೇ ಇರದಿದ್ದರೆ ಏನು ಪ್ರಯೋಜನ ? ನಡೆದಾಡುವುದರಿಂದ ಮಾತ್ರ ವ್ಯಕ್ತಿತ್ವಕ್ಕೆ ಸೊಬಗು,ಸಿದ್ಧಿಯು ಉಂಟಾಗುತ್ತದೆ.ಒಬ್ಬ ಮನುಷ್ಯ ಬುದ್ಧಿವಂತನಿದ್ದರೂ ಅವನು ನಾಲ್ಕುಜನರ ನಡುವೆ ನಡೆದಾಡಿ ತನ್ನ ವಿದ್ವತ್ತನ್ನು ಪ್ರದರ್ಶಿಸಿದರೆ ಮಾತ್ರ ಅವನು ಜನರಿಂದ ಮನ್ನಣೆಗಳಿಸಲು ಸಾಧ್ಯ.ನಡೆದಾಡಿ ಬೆಲೆಯನ್ನು ಪಡೆಯಬಹುದಲ್ಲದೆ ಕುಳಿತಲ್ಲೇ ಕುಳಿತು ಹಿರಿಮೆ ಸಂಪಾದಿಸಲಾಗದು.ನಡೆದಾಡಲು ಕಾಲುಗಳು ಅಥವಾ ಪಾದಗಳು ಬೇಕು.ಪಾದಗಳ ಸಂಸ್ಕೃತಿಯೇ ಶೂದ್ರಸಂಸ್ಕೃತಿಯಾಗಿದ್ದು ಸಮಾಜ ವ್ಯವಸ್ಥೆ ಸಮತೋಲನದಲ್ಲಿರಬೇಕಾದರೆ,ಸಂತುಲಿತವಾಗಿರಬೇಕಾದರೆ ಪಾದಗಳನ್ನು ಪ್ರತಿನಿಧಿಸುವ ಶೂದ್ರಸಮಾಜವು ಬಲಿಷ್ಠವಾಗಿರಬೇಕು,ಆರೋಗ್ಯವಂತವಾಗಿರಬೇಕು,ಮಾನ್ಯತೆಯನ್ನು ಪಡೆದಿರಬೇಕು.ಬ್ರಾಹ್ಮಣರ ಹಿರಿಮೆ ಗರಿಮೆಯನ್ನು ಒಪ್ಪುತ್ತಲೇ ಬಂದ ಭಾರತೀಯ ಸಮಾಜವು ಶೂದ್ರರನ್ನು ಕಡೆಗಣಿಸಿದ್ದರಿಂದಲೇ ಭಾರತೀಯ ಸಮಾಜವು ಪೂರ್ಣಪ್ರಗತಿಯನ್ನು ಸಾಧಿಸದೆ ,ಏಳು -ಬೀಳುಗಳನ್ನು ಅನುಭವಿಸುತ್ತ ಸಾಗಿದೆ.

‌ಕೃಷಿಕರು ಮತ್ತು ಶ್ರಮಿಕ ವರ್ಗವನ್ನು ಪ್ರತಿನಿಧಿಸುತ್ತಿರುವ ಶೂದ್ರಸಮುದಾಯವೇ ರಾಷ್ಟ್ರದ ನಿಜವಾದ ಆಸ್ತಿ ಮತ್ತು ಉನ್ನತಿಯ ಮೂಲ.ದುಡಿಯುವ ವರ್ಗದಿಂದಲೆ ತಾನೆ ಇತರ ವರ್ಗಗಳು ಬಾಳುತ್ತಿರುವುದು ? ರೈತರೇ ತಾನೆ ನಾಡು- ದೇಶಗಳಿಗೆ ಅನ್ನ ನೀಡಿ ಸಲಹುತ್ತಿರುವವರು ? ಕಾರ್ಮಿಕರು ಮನೆ ಮಂದಿರ,ಆಸ್ಪತ್ರೆ,ಶಾಲೆ,ರಸ್ತೆಗಳನ್ನು ನಿರ್ಮಿಸಿದರೆ ತಾನೆ ರಾಷ್ಟ್ರವು ಚಲನಶೀಲವಾಗುವುದು ? ಅದನ್ನು ಬಿಟ್ಟು ಬರಿ ವೇದ,ಶಾಸ್ತ್ರಗಳನ್ನು ಓದುತ್ತ ಕುಳಿತರೆ ಹೊಟ್ಟೆ ತುಂಬುತ್ತದೆಯೆ? ಶ್ರಮಸಂಸ್ಕೃತಿಯ ಜನರ ಪರಿಶ್ರಮದಿಂದಲೇ ದೇಶವು ಅಭಿವೃದ್ಧಿಯನ್ನು ಹೊಂದುತ್ತದೆ.ಹೀಗಿರುವಾಗ ಶ್ರಮಸಂಸ್ಕೃತಿಯನ್ನು ಕಡೆಗಣಿಸಿ ಶಿರಸಂಸ್ಕೃತಿಯನ್ನು ಗೌರವಿಸುವುದು ಎಷ್ಟು ಸರಿ?

ಮನುಷ್ಯರು ಕಾಲಮೇಲೆಯೇ ನಿಲ್ಲುತ್ತಾರೆಯೇ ಹೊರತು ತಲೆಯನ್ನು ಬಳಸಿ ನಿಲ್ಲುವುದಿಲ್ಲ,ನಡೆಯುವುದಿಲ್ಲ.ಮನುಷ್ಯರ ದೇಹದ ಪ್ರತಿ ಅಂಗಾಂಗಕ್ಕೂ ಅದರದ್ದೇಮಹತ್ವವಿದೆ.ಯಾರೋ ತಲೆಯಿಲ್ಲದವರು ತಲೆಗೆಮಾತ್ರ ಮಹತ್ವ ಕಲ್ಪಿಸಿದರು ! ಆ ತಲೆಯಿಲ್ಲದವರ ತಿರುಳಿಲ್ಲದ ಮಾತಿಗೆ ಬಲಿಯಾಗಿ ಬಳಲುತ್ತಿದೆ ಭಾರತೀಯ ಸಮಾಜ.ಸ್ವಾವಲಂಬಿ ಮನುಷ್ಯನನ್ನು ‘ ತನ್ನ ಕಾಲ ಮೇಲೆ ತಾನು ನಿಂತವನು’ ಎನ್ನುತ್ತಾರೆಯೇ ಹೊರತು ‘ ತನ್ನ ತಲೆಯ ಮೇಲೆ ತಾನು ನಿಂತವನು’ ಎನ್ನುವುದಿಲ್ಲ ! ನಿಲ್ಲಬೇಕಾದದ್ದು ಕಾಲಮೇಲೆಯೇ ಹೊರತು ತಲೆಯ ಮೇಲಲ್ಲ.ಆದರೆ ಬ್ರಾಹ್ಮಣರು ನೆಲದಲ್ಲಿ ನಡೆಯದೆ ಎಲ್ಲರ ತಲೆಗಳ ಮೇಲೆ ಕಾಲುಗಳನ್ನಿಟ್ಟು ನಡೆಯುತ್ತಿದ್ದಾರೆ ಎನ್ನುವುದು ಸಾಮಾಜಿಕ ವ್ಯಂಗ್ಯ.ಜನಸಾಮಾನ್ಯರು ಬ್ರಾಹ್ಮಣರ ಹುಸಿ ಪೊಗರು ಪ್ರತಿಷ್ಠೆಯನ್ನು ‘ ಅಡಿಯಿಂದ ಮುಡಿಯವರೆಗೆ’ ಎನ್ನುವ ಶಬ್ದಗಳನ್ನು ಬಳಸುವ ಮೂಲಕ ಪ್ರಶ್ನಿಸಿದ್ದಾರೆ.ಸೌಂದರ್ಯವನ್ನಾಗಲಿ,ದೇಹಪುಷ್ಟಿಯನ್ನಾಗಲಿ ಪಾದಗಳಿಂದ ನೋಡಬೇಕು ಎನ್ನುವ ವಿಚಾರವು ಒಂದು ದೇಶದಲ್ಲಿ ತಳಸಮುದಾಯಗಳ ಸಾಮಾಜಿಕ ಸ್ಥಿತಿಗತಿಯನ್ನು ಅಭಿವ್ಯಕ್ತಿಸುತ್ತದೆ.ಕಾಲುಗಳು ಗಟ್ಟಿಯಾಗಿ,ಪಾದಗಳು ಸ್ವಸ್ಥವಾಗಿದ್ದರೆ ಇಡೀ ದೇಹದ ಭಾರವನ್ನು ನಿರಾಯಾಸವಾಗಿ ಹೊರಬಹುದು.ಹಾಗೆಯೇ ತಳಸಮುದಾಯಗಳ ಜನತೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉನ್ನತಿಯನ್ನು ಸಾಧಿಸಿದ್ದರೆ ಮಾತ್ರ ಒಂದು ದೇಶವು ಅಭಿವೃದ್ಧಿಯನ್ನು ಹೊಂದಲು ಸಾಧ್ಯ.ನಾವು ಪೊರೆದು ಪೋಷಿಸಬೇಕಾದದ್ದು ಕಾಲುಗಳನ್ನು,ತಲೆಯನ್ನಲ್ಲ ! ಈ ತಿಳಿವಳಿಕೆ ಆಳುವ ಪ್ರಭುಗಳಿಗೆ ಇರಬೇಕು.ಬಹುಸಂಖ್ಯಾತರಾದ ಶೂದ್ರ ಸಮುದಾಯವನ್ನು ಕಡೆಗಣಿಸಿ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣರು ಮತ್ತು ಮೇಲ್ವರ್ಗದವರ ಕಲ್ಯಾಣ ಸಾಧಿಸುವುದು ರಾಷ್ಟ್ರಹಿತಕ್ಕೆ ಮಾರಕವಾದುದು.

ಅಡಿಯು ದಷ್ಟಪುಷ್ಟವಾಗಿದ್ದರೆ ಮಾತ್ರ ಮುಡಿಯು ಸ್ವಸ್ಥವಾಗಿರುತ್ತದೆ.ಒಂದು ದೇಶದಲ್ಲಿ ಬಹುಸಂಖ್ಯಾತರಾದ ಶ್ರಮಿಕವರ್ಗವಾದ ಶೂದ್ರಸಮುದಾಯವು ಅಶನ ವಸನಗಳ ಕೊರತೆಯಿಲ್ಲದೆ ನೆಮ್ಮದಿಯಿಂದ ಬದುಕುತ್ತಿದ್ದರೆ ಮಾತ್ರ ಆ ರಾಷ್ಟ್ರವು ಸಮೃದ್ಧಿಹೊಂದಿದ,ಅಭಿವೃದ್ಧಿ ಹೊಂದಿದ ದೇಶ ಎಂದು ಹೇಳಬಹುದು.ಕೆಲವೆ ಸಾವಿರ,ಲಕ್ಷಗಳ ಸಂಖ್ಯೆಯಲ್ಲಿರುವ ಸಮುದಾಯಗಳ ಏಳ್ಗೆ ರಾಷ್ಟ್ರದ ಏಳ್ಗೆಯಲ್ಲ.ಒಬ್ಬ ಮನುಷ್ಯನ ಅಂಗಸೌಷ್ಠವನ್ನು ನೋಡಬೇಕಾದರೆ ಅವನ ಪಾದಗಳನ್ನು ನೋಡಬೇಕಂತೆ.ಹಾಗೆಯೇ ರಾಷ್ಟ್ರದ ಪ್ರಗತಿಯನ್ನು ಅಳೆಯಬೇಕಾದರೆ ದೇಶದ ತಳಸಮುದಾಯಗಳಾದ ಶೂದ್ರಸಮುದಾಯದ ಜೀವನಮಟ್ಟವನ್ನು ನಿಷ್ಕರ್ಷಿಸಬೇಕು.ಅಡಿಯಿಂದ ಮುಡಿಯವರೆಗೆ ನೋಡುವ ನೋಟಸೂತ್ರವು ನಮ್ಮ ಆರ್ಥಿಕ ಸಿದ್ಧಾಂತವಾಗಬೇಕು,ರಾಜಕೀಯ ನೀತಿಯಾಗಬೇಕು.

About The Author