ಶೂದ್ರ ಸಂಸ್ಕೃತಿ ಚಿಂತನೆ : ಬ್ರಾಹ್ಮಣರ ಹೊರತಾಗಿ ಇಲ್ಲಿ ಇರುವವರೆಲ್ಲರೂ ಶೂದ್ರರೆ ! : ಮುಕ್ಕಣ್ಣ‌ ಕರಿಗಾರ

ನಾನು ‘ ಶೂದ್ರ ಭಾರತ ಪಕ್ಷ’ ಎನ್ನುವ ಕರ್ನಾಟಕ ರಾಜ್ಯವ್ಯಾಪ್ತಿಯ ಪ್ರಾದೇಶಿಕ ರಾಜಕೀಯ ಪಕ್ಷ ಒಂದನ್ನು ಸ್ಥಾಪಿಸಿದಾಗ ಬಹಳಷ್ಟು ಜನರು ‘ ಶೂದ್ರ’ ಪದದ ಬಗ್ಗೆ ಆಕ್ಷೇಪಿಸಿದರು.’ಶೂದ್ರ ‘ಎನ್ನುವುದು ಕೆಳಜಾತಿಗಳ ಸೂಚಕ ಪದವಾದ್ದರಿಂದ ಮೇಲ್ಜಾತಿಯವರ ಬೆಂಬಲ ಸಿಗುವುದಿಲ್ಲ ಹಾಗೆ ಹೀಗೆ ಅಂತ.ಅಂಥವರಿಗೆ ವಾಸ್ತವಿಕತೆಯ ಅರಿವಾಗಲಿ ಇಲ್ಲವೆ ಇತಿಹಾಸದ ಪ್ರಜ್ಞೆಯಾಗಲಿ ಇಲ್ಲವಾದ್ದರಿಂದ ನಾನು ಅಂಥವರ ಮಾತುಗಳಿಗೆ ಮಹತ್ವನೀಡಲಿಲ್ಲ.

ಶೂದ್ರರು ಭಾರತದ ಮೂಲನಿವಾಸಿಗಳಾದ್ದರಿಂದ ಶೂದ್ರರ ಹಿರಿಮೆ ಗರಿಮೆಗಳನ್ನು ಪುನರ್ ಪ್ರತಿಷ್ಠಾಪಿಸಲು ನಾನು ‘ ಶೂದ್ರ ಭಾರತ ಪಕ್ಷ’ ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪಿಸಿದೆ.ಇಂದು ಭಾರತದಲ್ಲಿ ವಾಸುಸುತ್ತಿರುವ ಬ್ರಾಹ್ಮಣರನ್ನು ಬಿಟ್ಟರೆ ಉಳಿದವರೆಲ್ಲರೂ ಶೂದ್ರರೆ! ಪುರುಷಸೂಕ್ತ ರಚನೆಯ ಕಾಲಕ್ಕೆ ಬೌದ್ಧ ಮತ್ತು ಜೈನ ಧರ್ಮಗಳು ಹುಟ್ಟಿರಲಿಲ್ಲವಾದ್ದರಿಂದ ಬೌದ್ಧರು ಮತ್ತು ಜೈನರು ಸಹ ಶೂದ್ರರೆ.ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಭಾರತಕ್ಕೆ ಹೊರಗಿನಿಂದ ಬಂದ ಧರ್ಮಗಳಾದರೂ ಭಾರತೀಯ ಸಮಾಜದ ತಳಸಮುದಾಯಗಳನ್ನು ತಮ್ಮ ಮತಗಳಿಗೆ ಸೆಳೆದುಕೊಂಡು ಇಲ್ಲಿ ಬೆಳೆದದ್ದರಿಂದ ಕ್ರೈಸ್ತ ಮತ್ತು ಇಸ್ಲಾಂ ಧರ್ಮಾನುಯಾಯಿಗಳೂ ಶೂದ್ರರೆ.

‌‌ ‌ಸ್ವಾರಸ್ಯಕರ ಸಂಗತಿ ಎಂದರೆ ನಮ್ಮಲ್ಲಿ ತಮ್ಮನ್ನು ತಾವು ‘ಜಂಗಮರು’ ಎಂದು ಕರೆದುಕೊಳ್ಳುತ್ತಿರುವ ಅಯ್ಯಗಳು ಇಲ್ಲವೆ ಸ್ವಾಮಿಗಳ ಜಾತಿಯವರು ಮತ್ತು ಅವರನ್ನು ಗುರುಗಳು ಎಂದು ಒಪ್ಪಿಕೊಂಡಿರುವ ವೀರಶೈವ ಲಿಂಗಾಯತರು,ಗೌಡ, ಪಟೇಲ ಸಾಹುಕಾರರಾದಿ ಜಾತಿಗಳ ಜನರು ತಾವು ಶೂದ್ರರಲ್ಲ,ಮೇಲ್ವರ್ಗದವರು ಎಂದು ಕೊಚ್ಚಿಕೊಳ್ಳುತ್ತಿದ್ದಾರೆ ! ಬ್ರಾಹ್ಮಣರು ಪ್ರತಿಷ್ಠೆ ಮೆರೆಯಲು ಅವರಿಗೆ ಪುರುಷಸೂಕ್ತದ ಆಧಾರವಿದೆ.ಆದರೆ ವೀರಶೈವರು,ಜಂಗಮರು ಮತ್ತು ಲಿಂಗಾಯತರು ತಾವು ಮೇಲ್ವರ್ಗದವರು,ಮೇಲ್ಜಾತಿಯವರು ಎಂದು ಹೇಳಿಕೊಳ್ಳಲು ಯಾವ ಆಧಾರವೂ ಇಲ್ಲ.ಪುರುಷಸೂಕ್ತದಲ್ಲಿ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎನ್ನುವ ನಾಲ್ಕು ವರ್ಣಗಳ ಪ್ರಸ್ತಾಪ ಇದೆಯೇ ಹೊರತು ಅಲ್ಲಿ ಯಾವ ಜಾತಿಯ ಹೆಸರೂ ಪ್ರಸ್ತಾಪವಾಗಿಲ್ಲ.ಅಂದರೆ ಪುರುಷಸೂಕ್ತ ರಚನೆಯ ಕಾಲದ ಭಾರತೀಯ ಸಮಾಜ ವರ್ಣಾಧಾರಿತ ಸಮಾಜವಾಗಿತ್ತು,ಜಾತಿಯಾಧಾರಿತ ಸಮಾಜವಾಗಿರಲಿಲ್ಲ.ಅಂದು ಇದ್ದದ್ದು ಬ್ರಾಹ್ಮಣರು,ಕ್ಷತ್ರಿಯರು,ವೈಶ್ಯರು ಮತ್ತು ಶೂದ್ರರು ಎನ್ನುವ ವರ್ಣಾಧಾರಿತ ಸಾಮಾಜಿಕ ವ್ಯವಸ್ಥೆ ಮಾತ್ರ.ಭಾರತದ ಇತಿಹಾಸದಲ್ಲಿ ದಲಿತರು ‘ ಅಂತ್ಯಜರು’ ಇಲ್ಲವೆ ಪಂಚಮರು ಎಂದು ಕಾಣಿಸಿಕೊಳ್ಳುವುದು ಕ್ರಿಸ್ತಪೂರ್ವ ಒಂದನೇ ಶತಮಾನದ ವೇಳೆಗೆ.ಅದಕ್ಕೂ ಮುಂಚೆ ದಲಿತರು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಪುರುಷಸೂಕ್ತವನ್ನು ಬಿಟ್ಟರೆ ವರ್ಣಾಶ್ರಮ ವ್ಯವಸ್ಥೆಯ ಬೇರುಗಳು ಗಟ್ಟಿಗೊಂಡುದುದು ಮನುವಿನಿಂದ.ಮನುಸ್ಮೃತಿಯಲ್ಲಿ ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ವರ್ಣಗಳ ಸ್ವಭಾವ,ಗುಣ ವಿಶೇಷ,ಸಾಮಾಜಿಕ ರೀತಿ ನೀತಿಗಳು ಪಾಲಿಸಲೇಬೇಕಾದ ವಿಧಿ ನಿಯಮಗಳ ಕಟ್ಟುಕಟ್ಟಲೆಗಳಿವೆ.ಮನು ಬ್ರಾಹ್ಮಣರ ‘ಭೂಸುರತ್ವ’ ವನ್ನು ಪ್ರತಿಪಾದಿಸಿದ.ಮನುವಿನಂತೆ ಶೂದ್ರರು ನಿಕೃಷ್ಟರು,ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲದವರು.ಮನು ನಾಲ್ಕು ವರ್ಣಗಳೊಂದಿಗೆ ಅಂದಿನ ಸಮಾಜದಲ್ಲಿ ರೂಢಿಯಲ್ಲಿದ ಕಸುಬು ಆಧಾರಿತ ಕುಲ ಇಲ್ಲವೆ ಜಾತಿಗಳನ್ನು ಪ್ರಸ್ತಾಪಿಸಿದ್ದಾನೆ.ತೈಲಿಗರು ( ಗಾಣಿಗರು) ನೇಕಾರರು,ರಥಿಕರು,ಬಡಗಿಗಳು,ಕುಂಬಾರರು ಇವೇ ಮೊದಲಾದ ಕಸುಬು ಆಧಾರಿತ ಕುಲಗಳನ್ನು ಮನುಪ್ರಸ್ತಾಪಿಸಿದ್ದಾನೆ.ಆದರೆ ಮನುಸ್ಮೃತಿಯಲ್ಲಿ ಜಂಗಮರಾಗಲಿ,ವೀರಶೈವರಾಗಲಿ,ಲಿಂಗಾಯತರಾಗಲಿ ಇಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.ನಮ್ಮಲ್ಲಿ ಜಂಗಮರು- ಲಿಂಗಾಯತರು ಕಾಣಿಸಿಕೊಳ್ಳುವುದು ಬಸವಣ್ಣನವರ ಕಾಲದಿಂದಲೇ ಹೊರತು ಅದಕ್ಕೂ ಪೂರ್ವದಲ್ಲಿ ಅಲ್ಲ ! ಇತಿಹಾಸ ಅರಿಯದವರ ಅಜ್ಞಾನಕ್ಕೆ ಮನ್ನಣೆ ನೀಡುವ ಅಗತ್ಯವಿಲ್ಲ.ಶಿವಾಗಮಗಳಲ್ಲಿ ವೀರಶೈವ,ಜಂಗಮ ಪದಗಳ ಉಲ್ಲೇಖವಿದೆಯಾದರೂ ಅವು ತತ್ತ್ವಸೂಚಕ ಪದಗಳೇ ಹೊರತು ಜಾತಿಸೂಚಕ ಪದಗಳಲ್ಲ.ಅಲ್ಲದೆ ಆಗಮಗಳು ಪುರುಷಸೂಕ್ತ ಮತ್ತು ಮನುಸ್ಮೃತಿಯ ಕಾಲದ ನಂತರದ ಕಾಲಘಟ್ಟದಲ್ಲಿ ರಚನೆಯಾದ ಶಾಸ್ತ್ರಕೃತಿಗಳು.ಹಾಗಾಗಿ ವೀರಶೈವ,ಜಂಗಮ ಮತ್ತು ಲಿಂಗಾಯತರಿಗೆ ಪುರಾತನ ಇತಿಹಾಸವಾಗಲಿ,ಪರಂಪರೆಯಾಗಲಿ ಇಲ್ಲ.ಇಂದಿನ ನಮ್ಮ ಲಿಂಗಾಯತರು ಬಸವಣ್ಣನವರಿಗೆ ಋಣಿಯಾಗಿರಬೇಕು.ಬಸವಣ್ಣನವರು ಕುಲಹದಿನೆಂಟು ಜಾತಿಯ ಜನರಿಗೆ ಲಿಂಗ ಕಟ್ಟಿದರೆಂದೇ ಇಂದು ನಮ್ಮಲ್ಲಿ ಲಿಂಗಾಯತರು ಇದ್ದಾರೆ,ಜಂಗಮರು ಇದ್ದಾರೆ.ಜಂಗಮ ಜಾತಿಯವರು ತಮ್ಮ ಪುರಾತನತೆಯನ್ನು ಪ್ರತಿಷ್ಠಾಪಿಸಲು ‘ ಸಿದ್ಧಾಂತ ಶಿಖಾಮಣಿ’ ಯ ಹೆಸರನ್ನು ಪ್ರಸ್ತಾಪಿಸಬಹುದು.ಆದರೆ ಸಿದ್ಧಾಂತ ಶಿಖಾಮಣಿಯು ಹದಿನಾಲ್ಕು ಹದಿನೈದನೇ ಶತಮಾನದಲ್ಲಿ ಬರೆಯಲ್ಪಟ್ಟ ಗ್ರಂಥ ಎನ್ನುವುದು ಅದರಲ್ಲಿ ಬಳಸಿದ ಸಂಸ್ಕೃತ ಭಾಷೆಯಿಂದಲೇ ಗೊತ್ತಾಗುತ್ತದೆ.ಸಂಸ್ಕೃತ ಭಾಷಾಜ್ಞಾನ ಇಲ್ಲದವರು,ವೇದವಾಙ್ಮಯವನ್ನು ಅಧ್ಯಯನ ಮಾಡದವರು ಮಾತ್ರ ‘ ಸಿದ್ಧಾಂತ ಶಿಖಾಮಣಿ’ ಯು ಪುರಾತನ ಗ್ರಂಥ ಎನ್ನಬಹುದಷ್ಟೆ.ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿರುವ ನಾನು ವೇದಸಾಹಿತ್ಯ,ಉಪನಿಷತ್ತು ಸಾಹಿತ್ಯ ಮತ್ತು ಅಷ್ಟಾದಶ ಪುರಾಣಗಳು ಹಾಗೂ ರಾಮಾಯಣ ಮತ್ತು ಮಹಾಭಾರತಗಳನ್ನು ಸಂಸ್ಕೃತದಲ್ಲಿಯೇ ಓದಿದ್ದೇನೆ.ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಮಾಡಿದ್ದೇನೆ.ಹಾಗಾಗಿ ಸಿದ್ಧಾಂತ ಶಿಖಾಮಣಿಯು ಅರ್ವಾಚೀನ ಗ್ರಂಥವೇ ಹೊರತು ಪ್ರಾಚೀನ ಗ್ರಂಥವಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ.ಬಸವಣ್ಣನವರ ಪೂರ್ವದಲ್ಲಿದ್ದ ಶೂದ್ರ ದಲಿತ ಸಮುದಾಯದ ಜನರೇ ಇಂದು ಲಿಂಗಾಯತರು,ವೀರಶೈವರು ಮತ್ತು ಜಂಗಮರು ಆಗಿ ಪರಿವರ್ತನೆ ಹೊಂದಿದ್ದಾರೆಯೇ ಹೊರತು ಅವು ಮೂಲಜಾತಿಗಳಲ್ಲ,ಪುರಾತನ ಜಾತಿಗಳಲ್ಲ.ಮನುಸ್ಮೃತಿ,ಪರಾಶರ ಸ್ಮೃತಿ ಸೇರಿದಂತೆ ಯಾವುದೇ ಸ್ಮೃತಿಗಳಲ್ಲಿ ಜಂಗಮರು,ಲಿಂಗಾಯತರ ಉಲ್ಲೇಖವಿಲ್ಲ ಎಂದ ಬಳಿಕ ಅವರು ಇತ್ತೀಚೆಗೆ ಕಾಣಿಸಿಕೊಂಡವರು ಎನ್ನುವುದು ಸ್ಪಷ್ಟ.ಹಾಗಾಗಿ ಜಂಗಮರು,ವೀರಶೈವರು ಮತ್ತು ಲಿಂಗಾಯತರುಗಳು ನಾವು ಶೂದ್ರರಲ್ಲ ಎನ್ನುವುದು ಅವರ ತಪ್ಪು ತಿಳಿವಳಿಕೆ ಅಷ್ಟೆ.ವೀರಶೈವ ಜಂಗಮ ಲಿಂಗಾಯತರೆಲ್ಲರೂ ಶೂದ್ರರೆ.

ಇಂದು ಗೌಡ ಪಟೇಲ್ ಎಂದುಕೊಳ್ಳುವ ಲಿಂಗಾಯತರು ಮೂಲತಃ ಕುರುಬರು ಎನ್ನುವ ಸಂಗತಿಯನ್ನು ನಾನಿಲ್ಲಿ ಪ್ರಸ್ತಾಪಿಸಬಯಸುವೆ.ಇಂದಿನ ಬಹಳಷ್ಟು ಲಿಂಗಾಯತ ಸಮುದಾಯದವರಿಗೆ ಮೈಲಾಪುರ ಮಲ್ಲಯ್ಯ ಮನೆದೇವರು,ಕುಲದೇವರು ಆಗಿದ್ದಾನೆ.ಕೆಲವು ಜನ ಬ್ರಾಹ್ಮಣರಿಗೂ ಮೈಲಾಪುರ ಮಲ್ಲಯ್ಯ ಮನೆದೇವರು ಆಗಿದ್ದಾನೆ.ಮೈಲಾಪುರ ಮಲ್ಲಯ್ಯ ಮಾರ್ತಾಂಡ ಭೈರವನೆಂಬ ಕುರುಬರ ಐತಿಹಾಸಿಕ ವೀರ,ಕುರುಬರ ಏಳುಜನ ಮೂಲಗೋತ್ರಪುರುಷರಲ್ಲಿ ಒಬ್ಬನು.ಕುಲದ ಮೂಲ ವ್ಯಕ್ತಿಯೇ ಕುಲದೇವರು,ಮನೆದೇವರು ಆಗುತ್ತಾನೆ.ಮೈಲಾಪುರ ಮಲ್ಲಯ್ಯನನ್ನು ಕುಲದೇವರು ಆಗಿ ಹೊಂದಿರುವ ಬ್ರಾಹ್ಮಣರು ಮತ್ತು ಲಿಂಗಾಯತರು ಮೂಲತಃ ಕುರುಬರೆ ! ಬಸವಣ್ಣನವರ ಕಾಲದಲ್ಲಿ ಲಿಂಗ ಕಟ್ಟಿಕೊಂಡು ಲಿಂಗಾಯತರು ಆಗಿದ್ದಾರೆ.

ಕೆಲವು ಜನ ವೀರಶೈವ ಲಿಂಗಾಯತರು ಶ್ರೀಶೈಲ ಮಲ್ಲಿಕಾರ್ಜುನನ್ನು ಕುಲದೇವರು,ಮನೆದೇವರನ್ನಾಗಿ ಪಡೆದು ಆತನಿಗೆ ನಡೆದುಕೊಳ್ಳುತ್ತಿದ್ದಾರೆ.ಮಲ್ಲಯ್ಯನೂ ಮೂಲತಃ ಕುರುಬರ ಕುಲದೇವನೆ ! ಮಲ್ಲಯ್ಯನ ಸಂಸ್ಕೃತೀಕರಣ ರೂಪವು ಮಲ್ಲಿಕಾರ್ಜುನ ಎನ್ನುವುದು.ಮಹಾರಾಷ್ಟ್ರದ ಪ್ರಸಿದ್ಧ ಸಂಶೋಧಕ ಚಿಂತಾಮಣ ಢೇರೆಯವರು ಶ್ರೀಶೈಲ ಮಲ್ಲಿಕಾರ್ಜುನನ ಮೂಲವು ಮಹಾರಾಷ್ಟ್ರದ ಶಿಖರ ಸಿಂಗಣಾಪುರವೆಂದೂ ಶಿಖರಸಿಂಗಣಾಪುರ ಶಂಭುಮಹಾದೇವನೇ ಶ್ರೀಶೈಲದ ಮಲ್ಲಿಕಾರ್ಜುನನೆಂದೂ ಆತನು ಕುರುಬರಿಂದ ಪೂಜಿಸಲ್ಪಡುತ್ತಿದ್ದ,ಕುರುಬರ ಕುಲದೇವರು ಎಂದು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿದ್ದಾರೆ.ಚಿಂತಾಮಣ ಢೇರೆಯವರ ಸಂಶೋಧನೆಯನ್ನು ಅಲ್ಲಗಳೆಯುವ ಧೈರ್ಯವನ್ನು ಇದುವರೆಗೂ ಯಾವ ಇತಿಹಾಸಕಾರ,ಸಂಶೋಧಕರು ಮಾಡಿಲ್ಲವೆನ್ನುವುದು ಚಿಂತಾಮಣ ಢೇರೆಯವರ ಪ್ರಕಾಂಡ ಪಾಂಡಿತ್ಯ,ತಲಸ್ಪರ್ಶಿಯಾದ ಐತಿಹಾಸಿಕ ಅಧ್ಯಯನಕ್ಕೆ ಸ್ಪಷ್ಟ ನಿದರ್ಶನ.ಹಾಗಾಗಿ ಜಂಗಮರು,ವೀರಶೈವರು,ಲಿಂಗಾಯತರು ತಾವು ಶೂದ್ರರಲ್ಲ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ,ಐತಿಹಾಸಿಕ ಸಮರ್ಥನೆಯೂ ಇಲ್ಲ.

ವೀರಶೈವ ಲಿಂಗಾಯತರು ತಾವು ಶೂದ್ರರಲ್ಲ ಎನ್ನುವುದು ಅವರ ಜಾತಿಶ್ರೇಷ್ಠತೆಯ ವ್ಯಸನವೇ ಹೊರತು ಸತ್ಯವಲ್ಲ.ಅದನ್ನು ಇನ್ನೊಂದು ಉದಾಹರಣೆಯ ಮೂಲಕವೂ ಸ್ಪಷ್ಟಪಡಿಸುವೆ.ಕುರುಬರು ಭಾರತದ ಮೂಲ ನಿವಾಸಿಗಳಾದ ಶೂದ್ರರು.ಕುರುಬರಲ್ಲಿ ನೂರಾರು ಬೆಡಗುಗಳು,ಗೋತ್ರಗಳಿವೆಯಾದರೂ ಅವರಲ್ಲಿ ಉಣ್ಣೆಕಂಕಣದವರು,ಹತ್ತಿ ಕಂಕಣದವರು ಎನ್ನುವ ಎರಡು ಪ್ರಭೇದಗಳು ಮಾತ್ರ ಮುಖ್ಯವಾಗಿವೆ.ಮದುವೆಯಲ್ಲಿ ಉಣ್ಣೆಯ ಕಂಕಣವನ್ನು ಕಟ್ಟುವವರು ಉಣ್ಣೆ ಕುರುಬರಾದರೆ,ಹತ್ತಿಕಂಕಣ ಕಟ್ಟುವವರು ಹತ್ತಿಕಂಕಣದ ಕುರುಬರು.ಕುರುಬರಲ್ಲಿ ಉಣ್ಣೆ ಕಂಕಣದ ಕುರುಬರೇ ಮೂಲಕುರುಬರು ಮತ್ತು ಅವರೇ ದೇಶದ ಮೂಲನಿವಾಸಿ ಕುರುಬರು.ಹೀಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಹತ್ತಿಕಂಕಣದ ಕುರುಬರು ತಾವೇ ಕುರುಬರಲ್ಲಿ ಶ್ರೇಷ್ಠರು,ಹಿರೇಕುರುಬರು ಎಂದು ಹೇಳಿಕೊಳ್ಳುತ್ತಿದ್ದಾರೆ ! ಪಶುಪಾಲನೆಯ ಕಾಲಕ್ಕೆ ಇದ್ದದ್ದು ಉಣ್ಣೆ,ವ್ಯಾಪಾರ ವಹಿವಾಟಿನ ಆಧುನಿಕ ಕಾಲದಲ್ಲಿ ಕಾಣಿಸಿಕೊಂಡಿದ್ದು ಹತ್ತಿ.ಹೀಗಾಗಿ ಉಣ್ಣೆಕುರುಬರು ಹಿರಿಯರೊ ಹತ್ತಿಕಂಕಣ ಕಟ್ಟುವವರು ಹಿರಿಯರೊ? ಕವಿಕುಲಗುರು ಕಾಳಿದಾಸ, ಕುರುಬರ ಕುಲಗುರು ರೇವಣಸಿದ್ಧ,ಬೀರಪ್ಪ ಅಷ್ಟೆ ಏಕೆ ಇತ್ತೀಚಿನವರಾದ ಕನಕದಾಸರು ಸಹ ಉಣ್ಣೆಕಂಕಣದ ಕುರುಬರೆ ! ಶಹಾಪುರ ತಾಲೂಕಿನ ಸಗರ ಶಿಲಾಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ವಚನಕಾರ ರೇವಣಸಿದ್ಧನ ಆರಾಧಕರಾದ ಶಾಂತಮುತ್ತಯ್ಯನ ಕಾಲದಿಂದ ಹತ್ತಿಕಂಕಣದ ಕುರುಬರು ಕಾಣಿಸಿಕೊಳ್ಳುತ್ತಾರೆಯೇ ಹೊರತು ಅದಕ್ಕೂ ಪೂರ್ವದಲ್ಲಿ ಇದ್ದವರು ಉಣ್ಣೆ ಕಂಕಣದ ಕುರುಬರು ಮಾತ್ರ.ಕುರುಬರಲ್ಲಿಯೇ ಕೆಲವರಿಗೆ ಹಿರೇಕುರುಬರು,ಒಡೆಯರು,ಗುರುಗಳು ಎನ್ನುವ ಶ್ರೇಷ್ಠತೆಯ ವ್ಯಸನವ್ಯಾಧಿಯು ಬಾಧಿಸುತ್ತಿರಬೇಕಾದರೆ ಲಿಂಗಾಯತರು,ವೀರಶೈವರಲ್ಲಿ ಈ ವ್ಯಸನ ಸ್ವಲ್ಪ ಹೆಚ್ಚಿಗೇ ಇದ್ದರೆ ಅದು ಸಹಜ ತಾನೆ ?

ಭಾರತದ ಮೂಲನಿವಾಸಿಗಳಾಗಿ ಇದ್ದವರು ಪಶುಪಾಲಕ ಸಂಸ್ಕೃತಿಯ ಕುರುಬರು ಅವರದೆ ಮತ್ತೊಂದು ಪಂಗಡವಾದ ಗೊಲ್ಲರು,ಅಡವಿ ಚೆಂಚರು,ಇಂದಿನ ನಾಯಕರ ಪೂರ್ವಿಕರಾದ ಬೇಡರು ಮತ್ತು ದಲಿತರು ಮಾತ್ರ.ಇವರೆಲ್ಲರೂ ಶೂದ್ರರು.ಬ್ರಾಹ್ಮಣರು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಸಹ ಕೀಳುಕುಲದವರು ಎಂದು ಹೀಗಳೆಯುತ್ತಿರುವುದರಿಂದ ಮೂಲಭಾರತೀಯರಲ್ಲದಿದ್ದರೂ ವರ್ತಮಾನ ಭಾರತದ ಕ್ರೈಸ್ತರು,ಮುಸಲ್ಮಾನರು ಶೂದ್ರರೆ.ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಜಾತಿ- ಧರ್ಮಗಳ ಜನರೆಲ್ಲರೂ ಶೂದ್ರರು.ಶ್ರಮಿಕ ವರ್ಗದ ದುಡಿಯುವ ವರ್ಗದ ಜನರೆಲ್ಲರೂ ಶೂದ್ರರು.ಎಲ್ಲ ರೀತಿಯ ಅವಕಾಶ ವಂಚಿತರೆಲ್ಲರೂ ಶೂದ್ರರೆ.ಇದು ನನ್ನ ಶೂದ್ರಭಾರತದ ವ್ಯಾಖ್ಯಾನ ಮತ್ತು ವ್ಯಾಪ್ತಿ.

೨೯.೦೪.೨೦೨೪
ಕರೆಕ್ಷನ್ — ಇಲ್ಲಿ ಉಲ್ಲೇಖಿಸಲ್ಪಟ್ಟ ಶಾಸನ ಶಹಾಪುರ ತಾಲೂಕಿನ ಶಿರವಾಳ ಶಾಸನ.ಸಗರ ಶಾಸನ ಎಂದು ತಪ್ಪಾಗಿ ಟೈಪ್ ಆಗಿದೆ

About The Author