ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ‘ ಧರ್ಮದರ್ಶಿತ್ವ ತತ್ತ್ವ’ ವನ್ನು ಸರಕಾರಿ ಅಧಿಕಾರಿಗಳೂ ಅಳವಡಿಸಿಕೊಳ್ಳಬಾರದೆ ?

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ‘ ಧರ್ಮದರ್ಶಿತ್ವ ತತ್ತ್ವ’ ವನ್ನು ಸರಕಾರಿ ಅಧಿಕಾರಿಗಳೂ ಅಳವಡಿಸಿಕೊಳ್ಳಬಾರದೆ ? : ಮುಕ್ಕಣ್ಣ ಕರಿಗಾರ

ಎಪ್ರಿಲ್ 22 ರ Deccan Herald ಇಂಗ್ಲಿಷ್ ದಿನಪತ್ರಿಕೆಯ Comment Page ನಲ್ಲಿ ಕರ್ನಾಟಕದ ನಿವೃತ್ತ ಮುಖ್ಯಕಾರ್ಯದರ್ಶಿ ಎ.ರವೀಂದ್ರ ಅವರ ‘ Trusteeship in Politics’ ಎನ್ನುವ ವಿಚಾರ ಪ್ರಬೋಧಕ ಲೇಖನ ಒಂದು ಪ್ರಕಟವಾಗಿದೆ.ಸದ್ಯ ದೇಶದಲ್ಲಿ ನಡೆಯುತ್ತಿರುವ 14 ನೇ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮತ್ತು ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿರುವ ಚುನಾವಣಾ ಭ್ರಷ್ಟಾಚಾರಗಳ ನಿಯಂತ್ರಣದ ಕುರಿತು ಅವರು ಮೆಲುದನಿಯಲ್ಲಿ ಆದರೂ ಕೆಲವು ಚಿಂತಿಸಬೇಕಾದ ಸಲಹೆಗಳನ್ನು ನೀಡಿದ್ದಾರೆ.ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಚುನಾವಣೆಗಳ ಪಾತ್ರವನ್ನು ಒತ್ತಿಹೇಳುತ್ತ ಎ.ರವೀಂದ್ರ ಅವರು ಚುನಾವಣಾ ಆಯೋಗ,ರಾಜಕಾರಣಿಗಳು ಮತ್ತು ಮತದಾರರು ಈ ಎಲ್ಲರ ಹೊಣೆಗಾರಿಕೆಯ ಬಗ್ಗೆ ಚರ್ಚಿಸಿದ್ದಲ್ಲದೆ ಮಹಾತ್ಮಗಾಂಧೀಜಿಯವರ ಧರ್ಮದರ್ಶಿತ್ವ ( Trusteeship) ತತ್ತ್ವವನ್ನು ರಾಜಕಾರಣಿಗಳು ಮತ್ತು ಮತದಾರರು ಅಳವಡಿಸಿಕೊಂಡರೆ ಚುನಾವಣಾ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು ಮತ್ತು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಬಹುದು ಎಂದಿದ್ದಾರೆ.

ಎ.ರವೀಂದ್ರ ಅವರು ನಿವೃತ್ತ ಮುಖ್ಯಕಾರ್ಯದರ್ಶಿ ಆಗಿದ್ದು ಅಧಿಕಾರಿಶಾಹಿ ವ್ಯವಸ್ಥೆಗೆ ಸೇರಿದವರಾಗಿದ್ದರಿಂದ ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಚುನಾವಣಾ ಆಯೋಗವೂ ಸಹ ಐ ಎ ಎಸ್ ಅಧಿಕಾರಿಗಳಿಂದಲೇ ನಡೆಯುವ ಸಂಸ್ಥೆಯಾದ್ದರಿಂದ! ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸುಧಾರಣೆಗಳ ಬಗ್ಗೆ ಮಾತನಾಡುವ,ಚರ್ಚಿಸುವ ಬಹುತೇಕ ಜನರಲ್ಲಿ ಒಂದು ಸಿನಿಕತನ ಮನೆಮಾಡಿದೆ,ಜನರು ಅಂದರೆ ಮತದಾರರು ಭ್ರಷ್ಟರಾಗಿದ್ದಾರೆ ಎನ್ನುವ ಸರಳೀಕೃತ ಹೇಳಿಕೆಯನ್ನು ನೀಡುವ ಸಿನಿಕತನ.ಮತದಾರರು ಭ್ರಷ್ಟರಾಗಲು ಯಾರು ಕಾರಣ ? ರಾಜಕಾರಣಿಗಳು ತಾನೆ ? ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಳು ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಣದಹೊಳೆ ಹರಿಸುವುದನ್ನು ತಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆಯೆ ? ಚುನಾವಣಾ ಆಯೋಗ ನಿಜಕ್ಕೂ ನಿಷ್ಪಕ್ಷಪಾತನಡೆಯನ್ನು ಅಳವಡಿಸಿಕೊಂಡಿದೆಯೆ ? ಚುನಾವಣಾ ಆಯೋಗ ಭೀತಿ ಅಥವಾ ಪ್ರೀತಿ ರಹಿತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆಯೆ ? ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಮತದಾರರಲ್ಲಿ ಅನುಮಾನ ಹೆಚ್ಚುತ್ತಲೇ ಇದೆ.ಮತದಾರರ ಮತ್ತು ದೇಶದ ಜನತೆಯ ಸಂಶಯನಿವಾರಿಸುವಲ್ಲಿ ಚುನಾವಣಾ ಆಯೋಗ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದೆಯೆ ?ಮುಕ್ತ,ನ್ಯಾಯ ಸಮ್ಮತ ಚುನಾವಣೆ ನಡೆಸಲು ಬದ್ಧವಾಗಿರುವ ಚುನಾವಣಾ ಆಯೋಗ ಬರಿ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳುವುದು,ಮತದಾನ ಮಾಡುವಂತೆ ಮತದಾರರನ್ನು ಪ್ರೇರೇಪಿಸುವ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಮತದಾರರ ವಿಶ್ವಾಸವನ್ನು ಗಳಿಸುವ ಪಾರದರ್ಶಕ ಕ್ರಮಗಳತ್ತ ನೀಡುತ್ತಿಲ್ಲ ಎನ್ನುವುದು ಎಲ್ಲರೂ ಬಲ್ಲ ಸಂಗತಿ.ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ಎಷ್ಟು ತ್ವರಿತ ಕ್ರಮಗಳನ್ನು ಕೈಗೊಂಡಿದೆ ? ಈಗೀಗಲಂತೂ ಬಿಜೆಪಿಯೇತರ ಪಕ್ಷಗಳ ಮೇಲಷ್ಟೇ ಹದ್ದಿನ ಕಣ್ಣನ್ನು ಇಟ್ಟಂತೆ ವರ್ತಿಸುತ್ತಿರುವ ಚುನಾವಣಾ ಆಯೋಗ,ಆದಾಯ ತೆರಿಗೆ ಇಲಾಖೆ,ಜಾರಿ ನಿರ್ದೇಶನಾಲಯಗಳ ಬಗ್ಗೆ ದೇಶದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ.ಈ ಸಂಸ್ಥೆಗಳೆಲ್ಲವೂ ಬ್ಯೂರಾಕ್ರಟಿಕ ಜನರಿಂದ ನಡೆಯುತ್ತಿರುವ ಸಂಸ್ಥೆಗಳಾಗಿದ್ದರಿಂದ ಎ. ರವೀಂದ್ರ ಅವರು ಇಂತಹ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ಚರ್ಚಿಸುವುದಿಲ್ಲ.

ನಾನು ಈ ವಿಷಯವನ್ನು ಒತ್ತುಕೊಟ್ಟು ಪ್ರಸ್ತಾಪಿಸುವ ಕಾರಣ ಎ. ರವೀಂದ್ರ ಅವರು ಮಹಾತ್ಮಗಾಂಧೀಜಿಯವರ ಧರ್ಮದರ್ಶಿತ್ವದ ಮಾತುಗಳನ್ನು ವಿವರಿಸುತ್ತ ,ಜೆ.ಆರ್.ಡಿ ಟಾ.ಟಾ ಅವರು ಗಾಂಧೀಜಿಯವರ Trusteeship ತತ್ತ್ವವನ್ನು ತಮ್ಮ ಉದ್ಯಮದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳುತ್ತಾ ನಮ್ಮ ಸಂಸದರು ಮತ್ತು ವಿಧಾನಸಭೆಯ ಸದಸ್ಯರುಗಳು ತಮ್ಮ ಸಂಬಳ,ಸೌಲಭ್ಯಗಳ ಹಣದಲ್ಲಿ ತಮ್ಮ ಅವಶ್ಯಕತೆಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದುದನ್ನು ಮತದಾರರ ಕಲ್ಯಾಣಕ್ಕೆ ಏಕೆ ಬಳಸಬಾರದು ಎಂದು ಪ್ರಶ್ನಿಸಿದ್ದಾರೆ.ಸಲಹೆಯೇನೋ ಅದ್ಭುತವಾದದ್ದು ನಿಜ.ಆದರೆ ರಾಷ್ಟ್ರನಿರ್ಮಾಣದ ಬದ್ಧತೆ ಬರೀ ರಾಜಕಾರಣಿಗಳಿಗೆ ಮಾತ್ರ ಇರಬೇಕೆ ? ಐಎಎಸ್,ಐಪಿಎಸ್ ಸೇರಿದಂತೆ ಭಾರತೀಯ ಸೇವೆಗಳು ಹಾಗೂ ರಾಜ್ಯಗಳ ಸೇವೆಗಳಿಗೆ ಸೇರಿದ ಸರಕಾರಿ ಅಧಿಕಾರಿಗಳು ಪಡೆಯುವ ಸಂಬಳ,ಸವಲತ್ತುಗಳು ಕಡಿಮೆ ಏನಲ್ಲವಲ್ಲ ? ಶಾಸಕರು,ಸಂಸದರು ಅದೃಷ್ಟವಂತರಾಗಿದ್ದರೆ ಮಾತ್ರ ಹಲವು ಅವಧಿಗೆ ಆಯ್ಕೆಯಾಗಬಹುದು ; ಬಹಳಷ್ಟು ಜನ ರಾಜಕಾರಣಿಗಳ ರಾಜಕೀಯ ಭವಿಷ್ಯ ಒಂದೇ ಅವಧಿಗೆ ಸೀಮಿತಗೊಂಡಿದೆ.ಕೇವಲ ಐದುವರ್ಷದ ರಾಜಕೀಯ ಅಧಿಕಾರವನ್ನು ಅನುಭವಿಸುವ ಸಂಸದರು,ಶಾಸಕರುಗಳ ಸಂಬಳವನ್ನು ಮತದಾರರು,ಪ್ರಜಾಸಮುದಾಯದ ಒಳಿತಿಗೆ ಬಳಸಬೇಕು ಎನ್ನುವ ಎ.ರವೀಂದ್ರ ಅವರು ಸಾರ್ವಜನಿಕರ ತೆರಿಗೆಯ ಹಣದಲ್ಲಿ ಕನಿಷ್ಟ 25–30 ವರ್ಷಗಳ ದೀರ್ಘಕಾಲ ಸಂಬಳ,ಭತ್ತೆಗಳು,ರಿಯಾಯತಿ- ವಿನಾಯತಿಗಳು ಅನುಭವಿಸುತ್ತಿರುವ ಐಎಎಸ್,ಐಪಿಎಸ್ ಸೇರಿದಂತೆ ಭಾರತೀಯ ಸೇವೆಯ ಅಧಿಕಾರಿಗಳು ಹಾಗೂ ರಾಜ್ಯಸೇವೆಯ ಅಧಿಕಾರಿಗಳಿಂದ ರಾಷ್ಟ್ರಬದ್ಧತೆಯ ನಿಧಿಯನ್ನಾಗಿ ಪಡೆಯುವ ಬಗ್ಗೆ ಏಕೆ ಆಲೋಚಿಸುತ್ತಿಲ್ಲ ? ನೆರೆ ಬರಲಿ,ಬರ ಬೀಳಲಿ ನಮ್ಮ ಸರಕಾರಿ ಅಧಿಕಾರಿಗಳಂತೂ ತಿಂಗಳು ಮುಗಿದೊಡನೆ ಸಂಬಳ ಎಣಿಸಿ ನೆಮ್ಮದಿಯ ಜೀವನ ಸಾಗಿಸುತ್ತಾರಲ್ಲವೆ ? ಬರಪೀಡಿತರ ಬವಣೆಯ ಬಗ್ಗೆ ನಮ್ಮ ಸರಕಾರಿ ಅಧಿಕಾರಿಗಳಲ್ಲಿ ಎಷ್ಟು ಜನರು ಸಂವೇದನಾಶೀಲರು ? ಎಷ್ಟು ಜನ ಸರಕಾರಿ ಅಧಿಕಾರಿಗಳು ಬಡವರು,ನಿರ್ಗತಿಕರ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡಿದ್ದಾರೆ ?ರಾಜಕಾರಣಿಗಳು ಉದ್ಯಮ ಸಂಸ್ಥೆಗಳ CSR ಮಾದರಿಯಲ್ಲಿ Political social responsibility — PSR ಯನ್ನು ನೀಡುವಂತಾಗಬೇಕು ಎಂದು ನಿರೀಕ್ಷಿಸುವ ಎ. ರವೀಂದ್ರ ಅವರು ಸರಕಾರಿ ಅಧಿಕಾರಿಗಳಿಂದ Civil Servants Social Responsibility — CSSR ಬಗ್ಗೆ ಯಾಕೆ ಪ್ರಸ್ತಾಪಿಸುವುದಿಲ್ಲ ? ಸರಕಾರಿ ಅಧಿಕಾರಿಗಳು ರಾಷ್ಟ್ರೀಯ ವಿಪತ್ತು ನಿಧಿಗೆ ಕೊಡುಗೆ ನೀಡಬಹುದಲ್ಲ ? ಹಾಗೆ ನೋಡಿದರೆ ಭಾರತೀಯ ಸೇವೆ ಮತ್ತು ರಾಜ್ಯ ಸೇವೆಗಳಿಗೆ ಸೇರಿದ ಅಧಿಕಾರಿಗಳು ಪಡೆಯುತ್ತಿರುವ ಸಂಬಳ ಅವರ ಅವಶ್ಯಕತೆಗಿಂತ ನೂರಾರು ಪಟ್ಟು ಹೆಚ್ಚೇ ಇದೆ.ಅಲ್ಲದೆ ಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಸಂಖ್ಯೆಯೇನು ದಂಡಿಯಾಗಿಲ್ಲವಲ್ಲ ! ಶಾಸಕರು,ಸಂಸದರುಗಳು ಸಂಖ್ಯೆಗಿಂತ ದೇಶದಲ್ಲಿ ಭಾರತೀಯ ಸೇವೆ ಮತ್ತು ರಾಜ್ಯಸೇವೆಗಳಿಗೆ ಸೇರಿದ ಅಧಿಕಾರಿಗಳ ಸಂಖ್ಯೆಯೇ ದೊಡ್ಡದಿದೆ.ಸರಕಾರಿ ಸೇವೆಯ ಎ ಮತ್ತು ಬಿ ದರ್ಜೆಯ ಅಧಿಕಾರಿಗಳಿಂದ 5% ನಷ್ಟಾದರೂ ರಾಷ್ಟ್ರಬದ್ಧತೆಯ ನಿಧಿ ಪಡೆದರೆ ಬೃಹತ್ ಮೊತ್ತವೇ ಆಗುತ್ತದೆ.ಸಾರ್ವಜನಿಕರ ತೆರಿಗೆಯ ಹಣದಿಂದ ನೆಮ್ಮದಿಯನ್ನನುಭವಿಸುತ್ತಿರುವ ಸರಕಾರಿ ಅಧಿಕಾರಿಗಳಿಂದ ಇಷ್ಟುಕಡಿಮೆ ಮೊತ್ತದ ಕೊಡುಗೆಯಿಂದಲೇ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿ,ಅನುಷ್ಠಾನಗೊಳಿಸಬಹುದು.

ಮತದಾರರು ಭ್ರಷ್ಟರಾಗಲು ರಾಜಕಾರಣಿಗಳೇ ನೇರ ಕಾರಣ.ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯ ಹೊಣೆ ಹೊತ್ತಿರುವ ಚುನಾವಣಾ ಆಯೋಗ ಬಗ್ಗೆ ಎಷ್ಟು ಗಂಭೀರವಾಗಿದೆ ? ಟಿ.ಎನ್.ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಏಕವ್ಯಕ್ತಿಮುಖ್ಯಸ್ಥ ಆಯೋಗದ ಮುಖ್ಯಸ್ಥರಾಗಿ ಅವರು ಕೈಗೊಂಡ ದಿಟ್ಟ ಕ್ರಮಗಳನ್ನು‌ ಈಗ ಒಬ್ಬ ಮುಖ್ಯ ಚುನಾವಣಾ ಆಯುಕ್ತರ ಜೊತೆ ಇಬ್ಬರು ಚುನಾವಣಾ ಆಯುಕ್ತರುಗಳನ್ನು ಹೊಂದಿರುವ ಚುನಾವಣಾ ಆಯೋಗ ಯಾಕೆ ಕೈಗೊಳ್ಳುತ್ತಿಲ್ಲ ? ತೀರ ಇತ್ತೀಚೆಗಷ್ಟೇ ಕರ್ನಾಟಕ ಸರಕಾರದ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಬಿಜೆಪಿ ಪಕ್ಷಕ್ಕೆ ಸೇರಿದ್ದ ಎರಡು ಕೋಟಿ ಹಣವನ್ನು ವಶಪಡಿಸಿಕೊಂಡ ಐದಾರು ಘಂಟೆಗಳಲ್ಲಿಯೇ ಅದು ಸಕ್ರಮಹಣ ಎಂದು ಆದಾಯ ತೆರಿಗೆ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಮಾಣಪತ್ರ ನೀಡಿದ್ದಾರೆ ಎಂದು ಸಾರ್ವಜನಿಕವಾಗಿ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರಲ್ಲ !. ಇದು ಸಾರ್ವಜನಿಕರಲ್ಲಿ ಸಂಶಯದ ತರಂಗಗಳನ್ನೆಬ್ಬಿಸಿದೆ.ಆದಾಯ ತೆರಿಗೆ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಬಿಜೆಪಿ ಪಕ್ಷಕ್ಕೆ ಸೇರಿದ ಹಣವನ್ನು ಅದರ ಮಾಲಕರಿಗೆ ಮರಳಿಸಿದ ಬದ್ಧತೆಯನ್ನೇ ಇತರ ಪಕ್ಷಗಳಿಗೆ ಸೇರಿದ ಹಣವನ್ನು ಮರಳಿಸುವಲ್ಲಿ ತೋರಿಸುತ್ತಿದ್ದಾರೆಯೆ ? ಇದೊಂದೇ ಉದಾಹರಣೆ ಸಾಕಲ್ಲವೆ ನಮ್ಮ ಸರಕಾರಿ ಅಧಿಕಾರಿಗಳು ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ತೋರಿಸಲು ? ಬರಿ ರಾಜಕಾರಣಿಗಳು ಮತದಾರರು ಮಾತ್ರವಲ್ಲ ಚುನಾವಣಾ ಆಯೋಗ,ಆದಾಯ ತೆರಿಗೆ ಇಲಾಖೆ,ಜಾರಿ ನಿರ್ದೇಶನಾಲಯ ಮತ್ತು ಸಿ ಬಿ ಐ ನಂತಹ ಸಂಸ್ಥೆಗಳು ಕೂಡ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.ಎ. ರವೀಂದ್ರ ಅವರು ಮತದಾರರು ಮತ್ತು ರಾಜಕಾರಣಿಗಳ ಬಗ್ಗೆ ಸಲಹೆ ನೀಡುವಷ್ಟೇ ಆಸಕ್ತಿಯನ್ನು ಅಧಿಕಾರಿಶಾಹಿ ವ್ಯವಸ್ಥೆಯ ಸುಧಾರಣೆಯ ಬಗ್ಗೆಯೂ ನೀಡಬೇಕಲ್ಲವೆ ?

About The Author