ಕನ್ನಡದ ವಿಶಿಷ್ಟಕೃತಿ, ಕನ್ನಡ ನಾಡಗೀತೆ ನಡೆದುಬಂದ ರೀತಿ

ವಿಮರ್ಶೆ : ಕನ್ನಡದ ವಿಶಿಷ್ಟಕೃತಿ, ಕನ್ನಡ ನಾಡಗೀತೆ ನಡೆದುಬಂದ ರೀತಿ : ಮುಕ್ಕಣ್ಣ ಕರಿಗಾರ

ಸದಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರದ್ದು ದಣಿವರಿಯದ ಮನಸ್ಸು,ಜಡತೆಯನ್ನು ಮೀರಿದ ‘ ಚೇತನ’.ಈ ಇಳಿವಯಸ್ಸಿನಲ್ಲೂ ಅವರು ಬರೆಯುತ್ತಿರುವ ಕೃತಿಗಳ ವಿಭಿನ್ನ ಶೀರ್ಷಿಕೆಗಳನ್ನು ಗಮನಿಸಿದರೆ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ದೇಹಕ್ಕೆ‌ಮುಪ್ಪಡರಿಲ್ಲವೇನೋ ಎನ್ನುವಷ್ಟು ಸ್ಫೂರ್ತಿದಾಯಕ ವ್ಯಕ್ತಿತ್ವ ಅವರದ್ದು.ಈಗಲೂ ಅವರಲ್ಲಿ ಸಂಶೋಧನಾಸಕ್ತಿ ತಗ್ಗಿಲ್ಲ,ಪರಾಮರ್ಶನ ಸಾಮರ್ಥ್ಯ ಕುಂದಿಲ್ಲ.ಯಾರೋ ಶರಣರೋ,ಅವಧೂತರ ಬಗ್ಗೆ ಕೇಳಿದೊಡನೆ ಅವರ ಅಧ್ಯಯನಕ್ಕೆ ಹೊರಟೇಬಿಡುತ್ತಾರೆ,ಊರೂರು ಸುತ್ತಿ ಮಾಹಿತಿ ಸಂಗ್ರಹಿಸುತ್ತಾರೆ; ತಿಂಗಳೊಪ್ಪತ್ತಿನಲ್ಲಿ ಪುಸ್ತಕವೂ ಹೊರಬರುತ್ತದೆ.

ರಾಯಚೂರು ಜಿಲ್ಲೆಯ ಹಿರಿಯ ಸಾಹಿತಿಗಳಾಗಿರುವ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ರಾಜ್ಯದ ಹಿರಿಯಸಾಹಿತಿಗಳಲ್ಲೂ ಒಬ್ಬರು.ವಯಸ್ಸಿನ ಕಾರಣದಿಂದಲ್ಲದೆ ಸಾಹಿತ್ಯದ ಸತ್ತ್ವದಿಂದಲೂ ಅವರು ಹಿರಿಯರು.ಕನ್ನಡ ಸಾಹಿತ್ಯಲೋಕದಲ್ಲಿ ಅವರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗಲಿಲ್ಲ.’ರಾಜ್ಯೋತ್ಸವ ಪ್ರಶಸ್ತಿ’ ಯನ್ನೂ ನೀಡಿ ಗೌರವಿಸದಂಥಹ ಜಡತ್ವವನ್ನು ಮೈಗೂಡಿಸಿಕೊಂಡಿದ್ದಾರೆ ನಮ್ಮ ರಾಜಕಾರಣಿಗಳು.ತಮ್ಮ ಬಾಲಬಡುಕರುಗಳಿಗೆ ರಾಜ್ಯೋತ್ಸವಪ್ರಶಸ್ತಿ ಕೊಡಿಸುವುದು ತಮ್ಮ ಜೀವನದ ಸಾರ್ಥಕತೆ ಎಂದು ಭಾವಿಸುವ ಹೃದಯಶೂನ್ಯ ರಾಜಕಾರಣಿಗಳಿಂದ ಸಾಹಿತ್ಯಲೋಕದ ನಿಜವಾದ ಪ್ರತಿಭಾವಂತರುಗಳಿಗೆ ಅನ್ಯಾಯವಾಗುತ್ತಿದೆ,ಸಾಹಿತ್ಯದ ಸತ್ತ್ವ ತತ್ತ್ವಗಳಿಗೆ ಅಪಚಾರವಾಗುತ್ತಿದೆ.ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರಿಗೆ ಎಂದೋ ರಾಜ್ಯೋತ್ಸವಪ್ರಶಸ್ತಿ ಸಿಗಬೇಕಿತ್ತು.ಸಂವೇದನಾಶೂನ್ಯ ರಾಜಕಾರಣಿಗಳು ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ವ್ಯಕ್ತಿತ್ವವನ್ನು ಗುರುತಿಸಲಿಲ್ಲ,ಗೌರವಿಸಲಿಲ್ಲ.ಆದರೇನಂತೆ ಮುಕ್ಕುಂದಿಮಠ ಅವರಿಗೆ ಅಪಾರವಾದ ಶಿಷ್ಯಬಳಗ ಇದೆ,ದೊಡ್ಡ ಆತ್ಮೀಯ ಬಳಗ ಇದೆ.ಅವರೆಲ್ಲರ ‘ಪ್ರೀತಿಯ ಮೇಷ್ಟ್ರು’ , ‘ ಬಾಳುಗಳನ್ನು ರೂಪಿಸಿದ ಭಾಗ್ಯವಿಧಾತರೆಂ’ ಬ ಗೌರವಕ್ಕೆ ಪಾತ್ರರಾಗಿದ್ದಾರೆ ಮುಕ್ಕುಂದಿಮಠ ಅವರು.

‘ ಕನ್ನಡ ನಾಡಗೀತೆ ನಡೆದು ಬಂದ ರೀತಿ’ ಎನ್ನುವ ಇತ್ತೀಚಿನ ಅವರ ಹೊಸಪುಸ್ತಕವು ಇವೊತ್ತಿನ ಕನ್ನಡ ಸಾಹಿತ್ಯದ ಸಂದರ್ಭದ ಒಂದು ವಿಶಿಷ್ಟಕೃತಿಯಾಗಿ ನಿಲ್ಲುತ್ತದೆ.ಮಹಾಕವಿ ಕುವೆಂಪು ಅವರ ನಾಡಗೀತೆಯನ್ನು ಹಾಡುವ ಸಂದರ್ಭದಲ್ಲಿ ಉಂಟಾದ ಗೊಂದಲ,ಅನಗತ್ಯವಾದಗಳ ಸಂದರ್ಭವನ್ನು ನೆಪವಾಗಿಟ್ಟುಕೊಂಡು ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಕನ್ನಡದಲ್ಲಿ ತಾಯಿ ಕನ್ನಡತಿಯ ಮಹಿಮೆಯನ್ನು ಎದೆತುಂಬಿ ಹಾಡಿದ ಹಿರಿಯಕವಿಗಳೆಲ್ಲರ ನಾಡಗೌರವದ ಗೀತೆಗಳನ್ನು ಅವಲೋಕಿಸುತ್ತ ರಚಿಸಿದ್ದಾರೆ ‘ ಕನ್ನಡ ನಾಡಗೀತೆ ನಡೆದುಬಂದ ರೀತಿ’ ಎನ್ನುವ ಕೃತಿಯನ್ನು.ಕರ್ನಾಟಕದ ಹಿರಿಮೆ- ಗರಿಮೆ,ಕನ್ನಡ ಭಾಷೆಯ ಸೊಗಸು- ಚೆಲ್ವಿಕೆಗಳನ್ನು ಹೃದಯಂಗಮವಾಗಿ ಬಣ್ಣಿಸಿದ,ನಾಡ ಒಲವನ್ನು ಅಕ್ಷರರೂಪದಲ್ಲಿ ಹಿಡಿದಿಟ್ಟ 70 ಕವನಗಳು ಈ ಕೃತಿಯಲ್ಲಿವೆ ಎನ್ನುವುದು ಮಹತ್ವದ ಸಂಗತಿ.ಆ ಎಲ್ಲ ಗೀತೆಗಳು ನಾಡಗೀತೆಗಳಲ್ಲವಾದರೂ ಶಾಶ್ವತಸ್ವಾಮಿ ಮುಕ್ಕುಂದಿಮಠರು ಅವೆಲ್ಲವುಗಳಿಗೂ ನಾಡಗೀತೆಯ ಸ್ಥಾನವನ್ನು ನೀಡಿ ಗೌರವಸಲ್ಲಿಸಿದ್ದಾರೆ.ಕುವೆಂಪು ಅವರು ‘ ಜಯಹೇ ಕರ್ನಾಟಕ ಮಾತೆ’ ನಾಡಗೀತೆಯನ್ನು ರಚಿಸಲು ಸ್ಫೂರ್ತಿ,ಪ್ರೇರಣೆ ಒದಗಿಸಿದ ನಾಡುನುಡಿಗೌರವದ ಗೀತೆಗಳಿವು ಎನ್ನುವುದು ಲೇಖಕರ ಅಭಿಪ್ರಾಯವಿದ್ದಂತೆ ಇದೆ. ಬಿ.ಎಂ.ಶ್ರೀ,ಮಾಸ್ತಿ ವೆಂಕಟೇಶ ಅಯ್ಯಂಗಾರ,ತೀನಂಶ್ರೀ,ಕಡೆಂಗೊಡ್ಲು ಶಂಕರಭಟ್ಟ,ಸಾಲಿ ರಾಮಚಂದ್ರರಾಯ,ಜಿ.ಪಿ.ರಾಜರತ್ನಂ,ದ.ರಾ.ಬೇಂದ್ರೆ,ಸಿದ್ಧಯ್ಯಪುರಾಣಿಕ,ಕಯ್ಯಾರ ಕಿಇ್ಞಣ್ಣ ರೈ,ಗೋಪಾಲಕೃಷ್ಣ ಅಡಿಗ,ಜಿ.ಎಸ್.ಶಿವರುದ್ರಪ್ಪ,ದಿನಕರದೇಸಾಯಿ,ಕೆ.ಎಸ್.ನಿಸ್ಸಾರ ಅಹಮ್ಮದ್,ಸುರಂ ಎಕ್ಕುಂಡಿ,ಚಂದ್ರಶೇಖರ ಕಂಬಾರ,ಎನ್ ಎಸ್.ಲಕ್ಷ್ಮೀನಾರಾಯಣ ಭಟ್ಟ ಮೊದಲಾದ ಕನ್ನಡದ ಹಿರಿಯ ಕವಿಗಳು ಬರೆದ ಕನ್ನಡನಾಡಿನ ಮಹಿಮೆಯ ಕವನಗಳು ಈ ಕೃತಿಯಲ್ಲಿ ಸಮಾವೇಶಗೊಂಡು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.ಆದರೆ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಭಾವಿಸಿದಂತೆ ಅವೆಲ್ಲವೂ ನಾಡಗೀತೆಗಳಲ್ಲ.ಕುವೆಂಪು ಅವರ ‘ ಜಯಹೇ ಕರ್ನಾಟಕ ಮಾತೆ’ಕವನಕ್ಕಿಂತಲೂ ಇಲ್ಲಿಯ ಕೆಲವು ಕವನಗಳು ಉತ್ಕೃಷ್ಟವಾಗಿರಬಹುದಾದರೂ ಕುವೆಂಪು ಅವರ ಕವನದ ಸಮಗ್ರತೆ,ಪರಿಪೂರ್ಣತೆ ಈ ಕವನಗಳಿಗಿಲ್ಲ.

ಹಾಡಲು ಕಷ್ಟವಾಗುತ್ತದೆ ಎನ್ನುವ ಗೊಣಗಾಟ ಬಿಟ್ಟರೆ ಕುವೆಂಪು ಅವರ ‘ ಜಯ ಹೇ ಕರ್ನಾಟಕ ಮಾತೆ’ ಕವನದ ಅರ್ಥ,ಭಾವೈಕ್ಯತೆ,ದೇಶದ ಅಖಂಡತೆಯನ್ನು ಎತ್ತಿಹಿಡಿಯುವ ಪ್ರಯತ್ನ ಇತರ ಕವಿಗಳಲ್ಲಿಲ್ಲ.
‘ ಯೆಂಡ ಓಗ್ಲಿ! ಹೆಂಡ್ತಿ ಓಗ್ಲಿ !
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋತನಕ ಮುಂದೆ
ಕನ್ನಡ ಪದ್ಗೊಳ್ ನುಗ್ಲಿ’
ಎನ್ನುವ ಜಿ.ಪಿ.ರಾಜರತ್ನಂ ಅವರ ಕನ್ನಡಭಾಷೆಯ ಗೌರವ ಕಡಿಮೆಯಾದದ್ದೇನಲ್ಲ,ಆದರೆ ಅದರಲ್ಲಿ ನಾಡಗೀತೆಯಾಗುವ ಸತ್ತ್ವ ಇಲ್ಲ !ಗ್ರಾಮಗಳ ಸ್ಥಳನಾಮಗಳನ್ನು ವಿವರಿಸುವ ಮಾಸ್ತಿಯವರ ಕವನದಲ್ಲಿ ಸತ್ತ್ವವೇ ಇಲ್ಲ ,ಅದೊಂದು ನಾಡಭಿಮಾನದ ಕವನ ಎನ್ನುವುದನ್ನು ಬಿಟ್ಟರೆ ! ಕಡೆಂಗೋಡ್ಲು ಶಂಕರಭಟ್ಟರ ‘ ಪಡುವಣ ತೀರದ..’ ಕವನವು ಪಡುವಣ ತೀರದ ಕಾರ್ಗಾಲದ ಮಳೆ ಮತ್ತು ಅಲ್ಲಿನ ಪರಿಸರವನ್ನು ಬಣ್ಣಿಸುವುದಕ್ಕಷ್ಟೇ ಸೀಮಿತವಾಗುವುದಲ್ಲದೆ ಅದು ನಾಡಗೀತೆಯಾಗುವ ಅರ್ಹತೆ ಪಡೆಯುವುದಿಲ್ಲ.ವಿ.ಕೃ.ಗೋಕಾಕರ ‘ತಾರೆಗಳು ಮೇಳಯಿಸಿ ಬಂದು ಬಿಟ್ಟಿಹ…’ ಕವನವು ಕನ್ನಡದ ಗತಕಾಲದ ವೈಭವವನ್ನು ಇಂದಿನ ದುಸ್ಥಿತಿಯನ್ನು ಬಣ್ಣಿಸುವ ವಿಷಾದಗೀತೆಯೇ ಹೊರತು ಅದರಲ್ಲಿ ನಾಡಗೀತೆಯಾಗುವ ಅಂತಃಸತ್ತ್ವವಿಲ್ಲ! ಗತವೈಭವವನ್ನು ಕಳೆದುಕೊಂಡ ನತದೃಷ್ಟ ಕನ್ನಡರಾಜರಾಜೇಶ್ವರಿ ಮತ್ತು ಅವಳ ಮಗ ನಿರೂಪಕ ಇಲ್ಲವೆ ಕವಿ ಇಬ್ಬರ ನಡುವಿನ ಸಂಭಾಷಣೆ ರೂಪದಲ್ಲಿರುವ ಬೇಂದ್ರೆಯವರ ಕವನದಲ್ಲಿ ಅತ್ತ ಗೇಯಗುಣವೂ ಇಲ್ಲ ,ಇತ್ತ ನಾಡಗೀತೆಯಾಗುವ ಸತ್ತ್ವವೂ ಇಲ್ಲ.ಹುಯಲಿಗೋಳ ನಾರಾಯಣರ ‘ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಪರಶುರಾಮ,ಹನುಮ,ವೀರನಾರಾಯಣರ ಮಹಿಮೆಗಷ್ಟೇ ಸೀಮಿತವಾದ ವೈಷ್ಣವಗೀತೆಯೇ ಹೊರತು ಅದರಲ್ಲಿ ಸರ್ವೋದಯಸಂಸ್ಕೃತಿಯ,ಸಮನ್ವಯ ಸಂಸ್ಕೃತಿಯ ಸತ್ತ್ವ ತತ್ತ್ವಗಳಿಲ್ಲ.ಹೀಗೆ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ನಾಡಗೀತೆಗಳು ಎಂದು ಭಾವಿಸಿರುವ ಕನ್ನಡದ ಹಿರಿಯಕವಿಗಳ ರಚನೆಗಳು ನಾಡಗೀತೆಗಳಲ್ಲ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಕವಿಪ್ರೀತಿಯ ಔದಾರ್ಯವನ್ನು ಮೆಚ್ಚಬಹುದು ಆದರೆ ಅದೇ ವೇಳೆಗೆ ಈ ಎಲ್ಲ ಹಿರಿಯರ ರಚನೆಗಳು ಕುವೆಂಪು ಅವರ ‘ಜಯ ಹೇ ಕರ್ನಾಟಕ ಮಾತೆ’ ಗೀತೆಗೆ ಪ್ರತಿಸ್ಪರ್ಧಿ ಗೀತೆಗಳು ಎನ್ನುವ ಭಾವನೆ ಉಂಟಾಗದಿರಲಿ ಎನ್ನುವ ಕಾರಣದಿಂದ ಕುವೆಂಪು ಅವರ ಕವನದ ಜೊತೆಗಿಟ್ಟು ಹಿರಿಯ ಕವಿಗಳ ಕವನಗಳನ್ನು ವಿಮರ್ಶಿಸಿದ್ದೇನೆ.

ಕುವೆಂಪು ಅವರ’ ಜಯಹೇ ಕರ್ನಾಟಕ ಮಾತೆ’ ನಾಡಗೀತೆಯಲ್ಲಿ ಭಾರತಕ್ಕೆ ಸಂಬಂಧಿಸಿದ ಅನೇಕ ಅಂಶಗಳು ಸೇರಿರುವುದರಿಂದ ಕವನವು ದೀರ್ಘವಾಗಿ ಹಾಡಲು ತೊಂದರೆಯಾಗುತ್ತದೆ ಎನ್ನುವ ವಾದಕ್ಕೆ ಧ್ವನಿಗೂಡಿಸಿರುವ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಕುವೆಂಪು ಅವರ ನಾಡಗೀತೆಯಲ್ಲಿನ ಭಾರತಕ್ಕೆ ಸಂಬಂಧಿಸಿದ ಚರಣಗಳನ್ನು ತೆಗೆದು ಇಪ್ಪತ್ನಾಲ್ಕುಸಾಲುಗಳ ಗೇಯಗೀತೆಯನ್ನು ರೂಪಿಸಿರುವ ಸ್ತುತ್ಯಪ್ರಯತ್ನವನ್ನು ಮಾಡಿದ್ದಾರೆ.ಆದರೆ ‘ ಜಯ್ ಭಾರತ ಜನನಿಯ ತನುಜಾತೆ’ ಮೊದಲಾದ ಚರಣಗಳನ್ನು ಹಾಡುವ ಕಷ್ಟದಿಂದ ಕೈಬಿಟ್ಟಿದ್ದಾರೆಯೇ ಹೊರತು ಕುವೆಂಪು ಅವರ ಉದ್ದೇಶವಾಗಿದ್ದ ಭಾರತದ ಅಖಂಡತೆ,ಸಾರ್ವಭೌಮತೆ ಮತ್ತು ಸರ್ವೋದಯ ತತ್ತ್ವದ ಹಿನ್ನಲೆಯನ್ನು ಗಮನಿಸಿಲ್ಲ.ಕುವೆಂಪು ಅವರ ನಾಡಗೀತೆಯು ಸ್ವಲ್ಪ ಉದ್ದವಾಗಿರಬಹುದು,ವೇದಿಕೆಗಳಲ್ಲಿ ಹಾಡುವಾಗ ಎದ್ದುನಿಲ್ಲುಕೊಳ್ಳಬೇಕಾದ ರಾಜಕಾರಣಿಗಳು,ಸರಕಾರಿ ಅಧಿಕಾರಿಗಳಿಗೆ ಸ್ವಲ್ಪ ಕಷ್ಟವಾಗಬಹುದು.ಆದರೆ ಕುವೆಂಪುಅವರ ‘ ಜಯ ಹೇ ಕರ್ನಾಟಕ ಮಾತೆ’ ಯು ತಾಯಿ ಕನ್ನಡತಿಯು ಭಾರತಾಂಬೆಯ ಹೆಮ್ಮೆಯ ಮಗಳು,ಭಾರತದ ಸಂಸ್ಕೃತಿಯ ಸಿರಿಯಲ್ಲಿ ಅರಳಿದವಳು ಎನ್ನುವ ಆಶಯವನ್ನು ಧ್ವನಿಸುವ ಕವನವಾಗಿದ್ದು ಅಂಥಹ ನಾಡಭಿಮಾನದಿಂದ ದೇಶಾಭಿಮಾನವನ್ನು ಬಡಿದೆಬ್ಬಿಸುವ ಕವನವನ್ನು ನಮ್ಮ ಹಿರಿಯರಾರೂ ಬರೆದಿಲ್ಲ ! ಆಂಧ್ರಪ್ರದೇಶದ ನಾಡಗೀತೆಯಾಗಿರುವ ಶಂಕರಪಾಡಿ ಸುಂದರಚಾರಿ ಅವರ ‘ಮಾ ತೆಲುಗು ತಲ್ಲಿ’ ಯ ಕವನವನ್ನು ಉಲ್ಲೇಖಿಸುತ್ತ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ನಾಡಗೀತೆಯನ್ನಾಗಿ ಪರಿಗಣಿಸಬಹುದು ಎಂದು ಸೂಚಿಸಿರುವ ಶಾಂತಕವಿಗಳ ‘ ರಕ್ಷಿಸು ಕರ್ನಾಟಕ ದೇವಿ’ ಕವನವು ಸಂಸ್ಕೃತ ಪದಗಳ ಭಾರದಿಂದ ತತ್ತರಿಸಿರುವ ಕವನವಾಗಿದ್ದು ಪ್ರಾಥಮಿಕ ಶಾಲಾ ಮಕ್ಕಳು ಅದನ್ನು ಸುಶ್ರಾವ್ಯವಾಗಿ ಹಾಡಲಾರರು.ಜೊತೆಗೆ ‘ಜಯ ಹೇ ಕರ್ನಾಟಕ ಮಾತೆ’ ಯು ಹೊರಹೊಮ್ಮಿಸುವ ನಾಡಭಿಮಾನದ ಜಯಘೋಷಕ್ಕೂ ಶಾಂತಕವಿಗಳ ‘ ರಕ್ಷಿಸು ಕರ್ನಾಟಕ ದೇವಿ’ ಎನ್ನುವ ಮೊರೆಗೂ ಭಾವ- ಭಾಷೆಯಲ್ಲಿ ವ್ಯತ್ಯಾಸವಿದೆ.ಶಾಂತಕವಿಗಳ ಗೀತೆ ದೇವಿಸ್ವರೂಪವನ್ನು ಪಡೆದು ಭಾರತದ ಜಾತ್ಯಾತೀತ ಸ್ವರೂಪಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.ರಕ್ಷಿಸಬೇಕಾದವಳು ಚಂಡಿ- ಚಾಮುಂಡಿಯಾದ ದೇವಿ ! ಆದರೆ ನಾವು ನಾಡಗೀತೆಯಲ್ಲಿ ಮನದುಂಬಿ ಹಾಡುತ್ತಿರುವುದು ಭಾರತಾಂಬೆಯ ಸುತೆಯೂ ಸತ್ಪುತ್ರಿಯೂ ಆದ ಸರ್ವಜನಾಂಗದ ಶಾಂತಿಯ ತೋಟವನ್ನುಂಟು ಮಾಡಿದ ತಾಯಿ ಕನ್ನಡತಿಯನ್ನು.ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಹಾಕವಿ ಕುವೆಂಪು ಅವರಿಗೆ ಸರಿದೊರೆಯಾಗಬಲ್ಲ ಕವಿಗಳು ಹೇಗೆ ಇಲ್ಲವೋ ಹಾಗೆ ಕುವೆಂಪು ಅವರ ನಾಡಗೀತೆಗೆ ಸರಿಮಿಗಿಲಾದ,ಸರ್ವೋತ್ಕೃಷ್ಟವಾದ ಕನ್ನಡ ನಾಡಗೀತೆಯೊಂದು ಮೂಡಿಬಂದಿಲ್ಲ ಎನ್ನುವ ನಿರ್ಣಾಯತ್ಮಕ ಮಾತಿನಿಂದ ಈ ವಿಮರ್ಶೆಯನ್ನು ಮುಕ್ತಾಯಗೊಳಿಸಬಹುದು.

ಹಾಗಂತ ನಾನು ಇದು ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಮಿತಿ ಎಂದು ಖಂಡಿತ ಹೇಳಲಾರೆ.ಅವರದು ನಾಡಗೀತೆ ನಡೆದುಬಂದ ದಾರಿಯ ಅವಲೋಕನದ ಪ್ರಾಮಾಣಿಕ ಪ್ರಯತ್ನ.ಅವರ ಅವಿರತ ಅಧ್ಯಯನ,ನಾಡುನುಡಿಗಳ ಮೇಲಿನ ಪ್ರೀತಿ,ಅಭಿಮಾನಗಳಿಂದ ಮೂಡಿಬಂದ ” ಕನ್ನಡ ನಾಡಗೀತೆ ನಡೆದು ಬಂದ ರೀತಿ” ಕೃತಿಯು ಒಂದು ವಿಶಿಷ್ಟ ಮತ್ತು ಸಂಗ್ರಹಯೋಗ್ಯಕೃತಿ ಎನ್ನುವುದನ್ನು ಒತ್ತುಕೊಟ್ಟು ಹೇಳಬಯಸುವೆ.

About The Author