ಗಬ್ಬೂರು ಉತ್ಸವ’ ದ ಪ್ರಾರಂಭಿಕ ಚರ್ಚೆ

ಗಬ್ಬೂರು ,29 ಮಾರ್ಚ್ 2024 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಮಾರ್ಚ್ 29 ರಂದು ‘ ಗಬ್ಬೂರು ಉತ್ಸವ’ ಆಚರಿಸುವ ಕುರಿತ ಪ್ರಾಥಮಿಕ ಸಭೆ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಯಚೂರು ಜಿಲ್ಲೆಯ ಖ್ಯಾತ ಇತಿಹಾಸಕಾರ,ಸಂಶೋಧಕ ಡಾ.ಚನ್ನಬಸವ ಮಲ್ಕಂದಿನ್ನಿಯವರು ‘ ಗಬ್ಬೂರು ಉತ್ಸವ’ ದ ರೂಪುರೇಷೆಯ ವಿವರಗಳನ್ನು ಮಂಡಿಸಿದರು.

ಮುಕ್ಕಣ್ಣ ಕರಿಗಾರ ಅವರು ಮಾತನಾಡಿ ‘ ಗಬ್ಬೂರು ಉತ್ಸವ’ದ ಆಲೋಚನೆಯು ಉತ್ತಮ ಆಲೋಚನೆಯಾಗಿದ್ದು ಲೋಕಸಭಾ ಚುನಾವಣೆಗಳು ಮುಗಿದ ನಂತರ ಗಬ್ಬೂರಿನ ಜನರೊಂದಿಗೆ ನಾಲ್ಕಾರು ಸಭೆಗಳನ್ನು ನಡೆಯಿಸಿ ಎಲ್ಲರ ಅಭಿಪ್ರಾಯ – ಸಲಹೆಗಳನ್ನು ಪಡೆದು ಮುಂದುವರೆಯೋಣ.ಇದು ಗಬ್ಬೂರಿನ ಪ್ರಥಮ‌ ಉತ್ಸವವಾಗಲಿರುವುದರಿಂದ ಎಲ್ಲರನ್ನು ಒಳಗೊಂಡು ಉತ್ಸವನ್ನಾಚರಿಸೋಣ.ಅಲ್ಲಿಯವರೆಗೆ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿಯವರು ಗಬ್ಬೂರು ಉತ್ಸವದ ಕಾರ್ಯಕ್ರಮ ಆಯೋಜನೆ,ಕರೆಯಿಸಬೇಕಾದ ವಿಷಯ ತಜ್ಞರುಗಳು,ಆಹ್ವಾನಿಸಬೇಕಾದ ಇತಿಹಾಸಕ್ಷೇತ್ರದ ಪ್ರಮುಖರು ಈ ಮೊದಲಾದ ಸಂಗತಿಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಿ.ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ ಸೂಕ್ತದಿನಗಳಂದು ಎರಡು ದಿನಗಳ ಕಾಲ ಉತ್ಸವ ಆಚರಿಸೋಣ.ಈ ಉತ್ಸವವು ಗಬ್ಬೂರಿನ ಶ್ರೀಮಂತ ಇತಿಹಾಸ,ಸಂಸ್ಕೃತಿ ಮತ್ತು ಪರಂಪರೆಗಳನ್ನು ಬಿಂಬಿಸುವಂತೆ ಇರಬೇಕು’ ಎಂದರು.ಮಹಾಶೈವ ಧರ್ಮಪೀಠಕ್ಕೆ ಮೊದಲಬಾರಿಗೆ ಆಗಮಿಸಿದ ಡಾ.ಚನ್ನಬಸವ ವಲ್ಕಂದಿನ್ನಿಯವರನ್ನು ಪೀಠಾಧ್ಯಕ್ಷರು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಪತ್ರಕರ್ತರುಗಳಾದ ಏಳುಬಾವೆಪ್ಪಗೌಡ,ರಮೇಶ ಖಾನಾಪುರ, ಕಾರ್ಯಕರ್ತರುಗಳಾದ ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ರಂಗನಾಥ ಮಸೀದಪುರ,ಬಸವರಾಜ ಜಿ ಕರಿಗಾರ,ಮೌನೇಶ ಮಲ್ಕಾಪುರ,ವೆಂಕಟೇಶ ಮಸೀದಪುರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author