ಗಬ್ಬೂರು ಉತ್ಸವ’ ಕ್ಕೆ ಪ್ರೇರಣೆ ನೀಡಿದ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿ

ನಮ್ಮೂರ ಹಿರಿಮೆ : ಗಬ್ಬೂರು ಉತ್ಸವ’ ಕ್ಕೆ ಪ್ರೇರಣೆ ನೀಡಿದ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿ

ಮುಕ್ಕಣ್ಣ ಕರಿಗಾರ

ಇಂದು ಸ್ವಲ್ಪ ಬಿಡುವಿದ್ದುದರಿಂದ ಮಹಾಶೈವ ಧರ್ಮಪೀಠದ ಮಹಾಕಾಳಿ ಸನ್ನಿಧಿಯಲ್ಲಿ ಶ್ರೀಕ್ಷೇತ್ರ ಕೈಲಾಸದ ಭಕ್ತರುಗಳೊಂದಿಗೆ ಮಾತನಾಡುತ್ತ ಕುಳಿತಿದ್ದೆ.ಅಳಿಯ ತ್ರಯಂಬಕೇಶ ‘ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿಯವರು ಮಾತನಾಬೇಕಂತೆ’ ಎಂದ.’ ಆಯಿತು,ಮಾತನಾಡಲು ಹೇಳು’ ಎಂದೆ.ಒಂದೇ ನಿಮಿಷದಲ್ಲಿ ಡಾಕ್ಟರ್ ಚನ್ನಬಸ್ಸಪ್ಪ ಮಲ್ಕಂದಿನ್ನಿಯವರ ಫೋನ್ ಬಂದಿತು.ಅವರು ನಮ್ಮೂರಿನ ಐತಿಹಾಸಿಕ ಸಂಗತಿಯೊಂದರ ಬಗ್ಗೆ ಮಾತನಾಡಿದರು.ನಾಡಿನ ಖ್ಯಾತ ಇತಿಹಾಸಕಾರ,ಸಂಶೋಧಕ ದೇವರ ಕೊಂಡಾರೆಡ್ಡಿಯವರು ಕಳೆದ ಕೆಲವು ದಿನಗಳಿಂದ ನನ್ನನ್ನು ಸಂಪರ್ಕಿಸಲು ಬಯಸುತ್ತಿರುವುದಾಗಿ ಸಂಪರ್ಕ ಸಾಧ್ಯವಾಗುತ್ತಿಲ್ಲದ ಬಗ್ಗೆ ವಿವರಿಸುತ್ತ ದೇವರ ಕೊಂಡಾರೆಡ್ಡಿಯವರ ಮಗಳು ಈಗ ರಾಜ್ಯಪುರಾತತ್ವ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ಗಬ್ಬೂರಿನ ಬಗ್ಗೆ ಆಸಕ್ತಿವಹಿಸಿದ್ದು ನನ್ನನ್ನು ಸಂಪರ್ಕಿಸಲು ಇಚ್ಛಿಸಿರುವುದಾಗಿಯೂ ತಿಳಿಸಿದರು.ಈ ಹಿಂದೆ ಗಬ್ಬೂರನ್ನು ಯುನೆಸ್ಕೊ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸುವ ಅಗತ್ಯದ ಕುರಿತು ನಾನು ಬರೆದಿದ್ದ ಲೇಖನಗಳ ಬಗ್ಗೆ ಡಾ.ಚನ್ನಬಸ್ಸಪ್ಪ ವಲ್ಕಂದಿನ್ನಿಯವರಿಗೆ ಮಾಹಿತಿ ನೀಡಿದೆ.ಆಗ ಅವರು ಹೇಳಿದ ವಿಷಯ ರೋಮಾಂಚನವನ್ನುಂಟುಮಾಡಿತು,ನನಗೆ ಅತೀವ ಸಂತೋಷವೂ ಆಯಿತು.’ಸರ್,ಗಬ್ಬೂರು ಉತ್ಸವ ಮಾಡಿದರೆ ಗಬ್ಬೂರಿನ ಐತಿಹಾಸಿಕ ಹಿರಿಮೆ ಗರಿಮೆಗಳು ಬೆಳಕಿಗೆ ಬರುತ್ತವೆ’ ಎಂದರು.’ ಓ ಹೌದಲ್ಲ ಡಾಕ್ಟರ್.ಎಂತಹ ಅದ್ಭುತ ವಿಷಯ ಪ್ರಸ್ತಾಪಿಸಿದಿರಿ’ ಎಂದು ಉದ್ಗರಿಸಿದೆ.’ ಹಿಂದೊಮ್ಮೆ ಗಬ್ಬೂರು ಉತ್ಸವ ಆಚರಿಸುವ ಅಗತ್ಯದ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದೆ.ಅದು ನಿಮ್ಮ ಗಮನಕ್ಕೆ ಬಂದಂತಿಲ್ಲ ಸರ್’ ಎಂದರು.’ ಹೌದು ಡಾಕ್ಟರ್,ಆ ವಿಷಯ ನನ್ನ ಗಮನಕ್ಕೆ ಬಂದಿದ್ದರೆ ಇಷ್ಟು ಹೊತ್ತಿಗಾಗಲೆ ನಾವು ಗಬ್ಬೂರು ಉತ್ಸವ ಆಚರಿಸಿಬಿಡುತ್ತಿದ್ದೆವು’ ಎಂದೆ.’ಮೊನ್ನೆ ಆನೆಗುಂದಿ ಉತ್ಸವ ನೋಡಿದ ಬಳಿಕ ಮತ್ತೆ ಗಬ್ಬೂರು ಉತ್ಸವ ನೆನಪಾಯಿತು ಸರ್’ ಎಂದರು.’ಆಗಲಿ ಡಾಕ್ಟರ್ ಈ ವರ್ಷವೇ ಗಬ್ಬೂರು ಉತ್ಸವ ಮಾಡೋಣ.ಲೋಕಸಭಾ ಚುನಾವಣಾ ಮುಗಿದ ನಂತರ ಉತ್ಸವ ಆಯೋಜಿಸೋಣ’ ಎಂದೆ.

ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿಯವರು ‘ ಗಬ್ಬೂರು ಉತ್ಸವ’ ದ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡಿತು.ಸರಕಾರದ ಅನುದಾನ ಸಿಗಲಿ ಬಿಡಲಿ, ಈ ವರ್ಷ ಗಬ್ಬೂರಿನ ಜನತೆಯ ಸಹಕಾರದಿಂದಲೇ ಗಬ್ಬೂರು ಉತ್ಸವ ಆಚರಿಸಿದರಾಯಿತು ಎಂದು ಆಲೋಚಿಸಿದೆ.ನಮ್ಮೂರಿನಲ್ಲಿ ಊರಿನ ಶ್ರೀಮಂತ ಇತಿಹಾಸ- ಪರಂಪರೆಯ ಬಗ್ಗೆ ಆಸಕ್ತಿಯುಳ್ಳ ಬಹಳಷ್ಟು ಜನರಿದ್ದಾರೆ.ಆದರೆ ಇಂತಹದ್ದೊಂದು ಅವಕಾಶ ಒದಗಿ ಬಂದಿರಲಿಲ್ಲ.ಗಬ್ಬೂರಿನ ಇತಿಹಾಸದ ಬಗ್ಗೆ ಸರಕಾರದ ವಿವಿಧ ಇಲಾಖೆಗಳೊಂದಿಗೆ ಸಂಪರ್ಕಿಸುತ್ತಿರುವ ನನಗೂ ಕೂಡ ‘ಗಬ್ಬೂರು ಉತ್ಸವ’ ದ ಆಲೋಚನೆ ಹೊಳೆದಿರಲಿಲ್ಲ.ಗಬ್ಬೂರಿನ ಐತಿಹಾಸಿಕ ಸತ್ಯವು ಪ್ರಕಟಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಕಾಣಿಸುತ್ತದೆ.ಹಾಗಾಗಿ ನಮ್ಮ‌ನಿರೀಕ್ಷೆಗೂ ಮೀರಿ ಎಲ್ಲಿ ಎಲ್ಲಿಂದಲೋ ವಿಚಾರಗಳು ಆಗಮಿಸಿ,ಸ್ಫೂರ್ತಿಯನ್ನುಂಟು ಮಾಡುತ್ತವೆ.

ನನ್ನ ಖುಷಿಯ ಮತ್ತೊಂದು ಕಾರಣ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿಯವರು ನನ್ನ ತಾಲೂಕು ದೇವದುರ್ಗದವರೇ ಎನ್ನುವುದು.ದೇವದುರ್ಗ ತಾಲೂಕಿನ ಹೆಮ್ಮೆಯ ಪ್ರತಿಭಾವಂತರಲ್ಲಿ ಅವರೂ ಒಬ್ಬರು.ಹಿಂದೆ ಎರಡುಮೂರುಬಾರಿ ಅವರೊಂದಿಗೆ ಮಾತನಾಡಿದ್ದೆನಾದರೂ ಈಗ ಸಂಪರ್ಕಿಸದೆ ಬಹುವರ್ಷಗಳಾಗಿದ್ದರಿಂದ ಅವರ ಬಗ್ಗೆ ತಿಳಿಯಲು ನನ್ನ ಆತ್ಮೀಯರೂ ಕಥೆಗಾರ- ಪತ್ರಕರ್ತರೂ ಆಗಿರುವ ಮಾನ್ವಿಯ ಬಸವರಾಜ ಭೋಗಾವತಿಯವರಿಗೆ ಫೋನ್ ಮಾಡಿದೆ.ಮಲ್ಕಂದಿನ್ನಿಯವರ ಸಂಕ್ಷಿಪ್ತ ಪರಿಚಯ ಮಾಡಿದ ಭೋಗಾವತಿಯವರು ಡಾ.ಚನ್ನಬಸ್ಸಪ್ಪ ವಲ್ಕಂದಿನ್ನಿಯರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ಪ್ರಜಾವಾಣಿಗಾಗಿ ಬರೆದಿದ್ದ ” ಅಪರೂಪದ ಸಂಶೋಧಕ ಪ್ರಾಮಾಣಿಕ ಬೋಧಕ,ಪುರಾತನ ಶಿಲಾಶಾಸನಗಳ ತಜ್ಞ ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿ ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ’ ಎನ್ನುವ ಲೇಖನವನ್ನು ಸಹ ಕಳಿಸಿದರು.ಬಸವರಾಜ ಭೋಗಾವತಿಯವರು ‘ ಸರ್,ಡಾ.ಚನ್ನಬಸ್ಸಪ್ಪ ಮಲ್ಕಂದಿನ್ನಿಯವರು ಪ್ರತಿಭಾವಂತ ಸಂಶೋಧಕರಾಗಿದ್ದರೂ ಅವರಿಗೆ ಸಿಗಬೇಕಾದ ಸ್ಥಾನಮಾನಗಳು ಸಿಗುತ್ತಿಲ್ಲ.ಜಿಲ್ಲಾ ಸಾಹಿತ್ಯ ಸಮ್ಮೇಳನ,ತಾಲೂಕಾ ಸಾಹಿತ್ಯ ಸಮ್ಮೇಳನಗಳಲ್ಲಿ ಇತಿಹಾಸ ಸಂಶೋಧನೆಯ ಪ್ರಬಂಧ ಮಂಡನೆಗೂ ಅವಕಾಶ ನೀಡುತ್ತಿಲ್ಲ ಎನ್ನುವ ಕೊರಗು ಅವರನ್ನು ಬಾಧಿಸುತ್ತಿದೆ’ ಎಂದ ಮಾತು ನನ್ನಲ್ಲಿ ಸ್ವಲ್ಪ ನೋವನ್ನುಂಟು ಮಾಡಿತು.ಸಾಹಿತಿಗಳಲ್ಲದವರೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳಾಗುತ್ತಿರುವ,ರಾಜಕಾರಣಿಗಳ ಬಾಲಂಗೋಚಿಗಳೇ ಕವಿ ಸಾಹಿತಿಗಳೆಂದು ಪೋಸುಕೊಡುತ್ತಿರುವ,ಸಾಹಿತ್ಯದಸತ್ತ್ವ ಇಲ್ಲದೆ ಇದ್ದರೂ ಮಹಾನ್ ಸಾಹಿತಿಗಳು ಎಂದು ಬಿಂಬಿಸಿಕೊಳ್ಳುತ್ತಿರುವ ರಾಯಚೂರಿನ ಸಾಹಿತ್ಯಕ ವಲಯದಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ ? ಈ ಕಾರಣದಿಂದಲೇ ನಾನು ನಮ್ಮ ಮಹಾಶೈವ ಧರ್ಮಪೀಠದಲ್ಲಿ ಈ ಹಿಂದೆ ಮುವ್ವತ್ತಾರು ಅನುಭಾವ ಕವಿಗೋಷ್ಠಿಗಳನ್ನು ಆಯೋಜಿಸಿದ್ದಲ್ಲದೆ ಈಗ ಪ್ರತಿವರ್ಷ ಎರಡು ರಾಜ್ಯಮಟ್ಟದ ಪ್ರಶಸ್ತಿಪ್ರದಾನ ಸಮಾರಂಭಗಳನ್ನು ಏರ್ಪಡಿಸಿ ನಾಡಿನ ಖ್ಯಾತನಾಮ ಸಾಹಿತಿಗಳೊಂದಿಗೆ ಜಿಲ್ಲೆಯ ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ,ಗೌರವಿಸುತ್ತಿದ್ದೇನೆ.ಪ್ರಸ್ತುತ ಸಿಂಧನೂರಿನ ಸರಕಾರಿ ಪದವಿಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿರುವ ಡಾ.ಚನ್ನಬಸ್ಸಪ್ಪ ವಲ್ಕಂದಿನ್ನಿಯವರು ಇಪ್ಪತ್ತೈದು ವರ್ಷಗಳ ಸೇವಾ ಅನುಭವ ಹೊಂದಿದ ಜಿಲ್ಲೆಯ ಅಪರೂಪದ ಸಂಶೋಧಕರು.ಪ್ರಚಾರ ಪ್ರಿಯರಲ್ಲದ ಅವರು ತಮ್ಮ ಶಿಷ್ಯರೊಂದಿಗೆ ಶಿಲಾಶಾಸನಗಳು,ಐತಿಹಾಸಿಕ ಸ್ಮಾರಕಗಳ ಬೆನ್ನುಹತ್ತಿ ಕಾಡು ಗುಡ್ಡ ಹೊಲಗಳಲ್ಲಿ ಸಂಚರಿಸಿ,ಸಂಶೋಧನೆಯನ್ನು ಹೊರಗೆಡಹುತ್ತಿದ್ದುದನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ.ಜಿಲ್ಲೆಯ ಇತಿಹಾಸವು ಪರಿಸ್ಫುಟವಾಗಿ ಪ್ರಕಟಗೊಳ್ಳುವಲ್ಲಿ ಡಾ.ಚನ್ನಬಸ್ಸಪ್ಪ ವಲ್ಕಂದಿನ್ನಿಯವರು ಮಹತ್ವದ ಕೊಡುಗೆಯನ್ನು ನೀಡಿದ ಸಂಶೋಧಕರು.ಈಗ ಅವರೇ ಮುಂದೆ ಬಂದಿರುವುದರಿಂದ ನಮ್ಮೂರು ಗಬ್ಬೂರಿನ ಭವ್ಯ ಇತಿಹಾಸ ಬೆಳಕಿಗೆ ಬರಲು ಕಾರಣವಾದಂತಾಯಿತು.

ನಮ್ಮೂರು ಗಬ್ಬೂರು ಐತಿಹಾಸಿಕ ನಗರ ಮಾತ್ರವಲ್ಲ ಧಾರ್ಮಿಕ ಸಾಂಸ್ಕೃತಿಕ ಮಹತ್ವದ ನೆಲೆ ಕೂಡ.ಕ್ರಿಶ ಒಂಬತ್ತನೇ ಶತಮಾನದಿಂದ ಗಬ್ಬೂರಿನ ಇತಿಹಾಸ ಉಪಲಬ್ಧವಿದ್ದರೂ ಗಬ್ಬೂರಿನ ಇತಿಹಾಸ ಅದಕ್ಕಿಂತ ಸಾವಿರಾರು ವರ್ಷಗಳ ಹಿಂದಣ ಭೂಗರ್ಭದಲ್ಲಿದೆ.ಈಗ ಅದನ್ನು ಹೆಕ್ಕಿ ತೆಗೆಯುವ ಕೆಲಸ ಮಾಡಬೇಕಿದೆ.ಚಾಲುಕ್ಯರ ಕಾಲದಲ್ಲಿ ‘ ಹಿರಿಯ ಗೊಬ್ಬೂರು’ ಎನ್ನುವ ಅಗ್ರಹಾರವಾಗಿ ಸಂಸ್ಕೃತವಿದ್ಯಾಪೀಠವಾಗಿದ್ದ ಗಬ್ಬೂರು ಕಾಳಾಮುಖ ಸಿದ್ಧರ ನೆಲೆಯೂ ಅಹುದು.ಕನ್ನಡದ ಮೊದಲ ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ ಗಬ್ಬೂರಿನವಳು.ವಚನಸಾಹಿತ್ಯದ ಚಳವಳಿಯ ಸಂದರ್ಭದ ಮಹತ್ವದ ವಚನಕಾರರಲ್ಲೊಬ್ಬರಾದ ಬಿಬ್ಬಿಬಾಚರಸರು ಗಬ್ಬೂರಿನವರು.ಕಲೆ,ಸಾಹಿತ್ಯ,ಸಂಸ್ಕೃತಿಯನ್ನೇ ಉಸಿರಾಡಿ ಬೆಳೆದ ಗಬ್ಬೂರಿನ ಸಾಂಸ್ಕೃತಿಕ ಹಿರಿಮೆ ಇನ್ನಷ್ಟೆ ಬೆಳಕಿಗೆ ಬರಬೇಕಿದೆ.ನೂರಾರು ದೇವಾಲಯಗಳು,ಐತಿಹಾಸಿಕ ಸ್ಮಾರಕಗಳನ್ನು ಹೊಂದಿ ‘ ಎರಡನೇ ಹಂಪೆ’ ಎನ್ನುವ ಹೆಸರನ್ನು ಹೊಂದಿದ್ದ ಗಬ್ಬೂರಿನಲ್ಲಿ ವಿಜಯನಗರದ ಅರಸರ ಕೋಶಾಗಾರ ಇತ್ತಂತೆ.ಏಳುಬಾವಿಯ ಸಮೀಪ ಇರುವ ಸುರಂಗಮಾರ್ಗವು ಹಂಪೆಯನ್ನು ಸಂಪರ್ಕಿಸುವ ರಹಸ್ಯ ಮಾರ್ಗವಾಗಿತ್ತಂತೆ.ಜಿಲ್ಲೆಯ ಅನುಭಾವ ಸಾಹಿತ್ಯ ಪರಂಪರೆಗೂ ತನ್ನ ಕೊಡುಗೆಯನ್ನು ನೀಡಿದೆ ಗಬ್ಬೂರು ಹಂಪಣ್ಣಪ್ಪ ಮತ್ತು ಮಾರ್ತಂಡಪ್ಪ ಎನ್ನುವ ಇಬ್ಬರು ಅನುಭಾವ ಕವಿಗಳನ್ನು ನೀಡುವ ಮೂಲಕ.ನಾನು ಹಂಪಣ್ಣಪ್ಪ ಮತ್ತು ಮಾರ್ತಂಡಪ್ಪನವರನ್ನು ‘ ಗಬ್ಬೂರಿನ ನಿಜಗುಣಶಿವಯೋಗಿ ಮತ್ತು ಸರ್ಪಭೂಷಣ ಶಿವಯೋಗಿ’ ಎಂದು ಕರೆಯುತ್ತೇನೆ.ಶತಮಾನಗಳಿಂದ ಪ್ರವಹಿಸುತ್ತ ಬಂದಿದ್ದ ಗಬ್ಬೂರಿನ ಆಧ್ಯಾತ್ಮಿಕಶಕ್ತಿಯ ಆಧುನಿಕ ಕಾಲದ ಮೂರ್ತರೂಪರು ಸೂಗಣ್ಣತಾತನವರು.ಸೂಗಣ್ಣತಾತನವರು ಗಬ್ಬೂರಿನ ರಾಮಕೃಷ್ಣ ಪರಮಹಂಸರು.ರಾಮಕೃಷ್ಣ ಪರಮಹಂಸರು ಮಹಾಕಾಳಿಯೊಂದಿಗೆ ಮಾತನಾಡುತ್ತಿದ್ದಂತೆ ಸೂಗಣ್ಣ ತಾತನವರು ದೇವಿ ದ್ಯಾವಮ್ಮನೊಂದಿಗೆ ಯಾವಾಗ ಬೇಕು ಆಗ ಮಾತನಾಡುತ್ತಿದ್ದರು.ಹೇಳಬೇಕು ಎಂದರೆ ಒಂದು ಬೃಹತ್ ಗ್ರಂಥವೇ ಆಗುವಷ್ಟು ವಿಷಯವಿದೆ ಗಬ್ಬೂರಿನ ಬಗ್ಗೆ.ಗಬ್ಬೂರು ಉತ್ಸವದ ಮೂಲಕ ಗಬ್ಬೂರಿನ ವೈಭವವು ಮಾರ್ದನಿಸುವ ದಿನಗಳು ಸಮೀಪಿಸಿವೆ.ಇಂತಹದ್ದೊಂದು ಅದ್ಭುತ ಸಲಹೆ ನೀಡಿದ ಡಾಕ್ಟರ್ ಚನ್ನಬಸ್ಸಪ್ಪ ಮಲ್ಕಂದಿನ್ನಿಯವರಿಗೆ ಕೃತಜ್ಞತೆಯನ್ನರ್ಪಿಸಿ ಈ ಲೇಖನ ಮುಗಿಸುವೆ.

About The Author