ಶಿವಚಿಂತನೆ : ಶಿವರಾತ್ರಿಯ ‘ ಉಪವಾಸ’ ಮತ್ತು ‘ ಜಾಗರಣೆ’ ಯ ಅರ್ಥ ಮತ್ತು ಮಹತ್ವ: ಮುಕ್ಕಣ್ಣ ಕರಿಗಾರ
ನಾಳೆ ಅಂದರೆ ಮಾರ್ಚ 08 ರ ಮಾಘಮಾಸದ ಚತುರ್ದಶಿಯಂದು ಮಹಾಶಿವರಾತ್ರಿಯನ್ನು ದೇಶದಾದ್ಯಂತ ಭಕ್ತಿ,ಶ್ರದ್ಧಾಪೂರ್ವಕವಾಗಿ ಆಚರಿಸಲಾಗುತ್ತದೆ.ಶಿವದೇವಾಲಯಗಳಲ್ಲಿ ವಿಶೇಷ ಪೂಜೆ ಸೇವೆಗಳು ಸಲ್ಲಿಸಲ್ಪಡುತ್ತವೆ,ವಿವಿಧ ಬಗೆಯ ಧಾರ್ಮಿಕ ಉತ್ಸವಗಳು ಆಚರಿಸಲ್ಪಡುತ್ತಿವೆ.ಮಹಾಶಿವರಾತ್ರಿಯ ಅಂಗವಾಗಿ ಭಕ್ತರು ಉಪವಾಸ ಮತ್ತು ಜಾಗರಣೆ ವ್ರತಕೈಗೊಳ್ಳುತ್ತಾರೆ.
ಶಿವನ ಪ್ರೀತ್ಯರ್ಥವಾಗಿ ಉಪವಾಸವಿರುವುದು ಒಳ್ಳೆಯದು.ವರ್ಷದಲ್ಲಿ ಒಂದು ದಿನವಾದರೂ ಉಪವಾಸವಿದ್ದರೆ ದೇಹದ ಆರೋಗ್ಯಕ್ಕೂ ಉತ್ತಮ.ಮುದುಕರು,ರೋಗಿಗಳು ,ಗರ್ಭಿಣಿಯರು,ಅಶಕ್ತರುಗಳಿಗೆ ಉಪವಾಸವ್ರತದಿಂದ ವಿನಾಯತಿ ಇದೆ.ಆದರೆ ‘ಉಪವಾಸ’ ದ ನಿಜಾರ್ಥವು ಅನ್ನ -ಆಹಾರಗಳನ್ನು ಬಿಡುವುದಿಲ್ಲ.ಅನ್ನ ಆಹಾರಗಳನ್ನು ತೊರೆಯುವುದು ಬಾಹ್ಯ ಆಚರಣೆಯಷ್ಟೆ.ನಿಜವಾದ ಉಪವಾಸವೆಂದರೆ ಶಿವನಸನ್ನಿಧಿಯಲ್ಲಿರುವುದು,ದೇಹಮನಸ್ಸುಗಳಲ್ಲಿ ಶಿವಭಾವವನ್ನಳವಡಿಸಿಕೊಳ್ಳುವುದು.ಉಪವಾಸ ಪದವನ್ನು ಬಿಡಿಸಿ ಬರೆದಾಗ ಉಪ+ ವಾಸ ಎಂದಾಗುತ್ತದೆ.’ಉಪ’ ಬಳಿ,ಸಮೀಪ ಎನ್ನುವ ಅರ್ಥವಿದ್ದು ‘ವಾಸ’ ಎಂದರೆ ಇರುವುದು.ಶಿವನ ಬಳಿ ಇರುವುದು,ಶಿವನ ಸಮೀಪ ಇರುವುದು ಉಪವಾಸ ಎನ್ನಿಸಿಕೊಳ್ಳುವುದು.ಶಿವಭಕ್ತರಾದವರು ಶಿವರಾತ್ರಿಯಂದು ಶಿವನ ದೇವಸ್ಥಾನ,ಶಿವಲಿಂಗಗಳ ಎಡೆಯಲ್ಲಿ ಶಿವಪೂಜೆ,ಶಿವಧ್ಯಾನ ಮಾಡುತ್ತಿರಬೇಕು ಎನ್ನುವುದೇ ಶಿವರಾತ್ರಿಯ ಉಪವಾಸದ ನಿಜಾರ್ಥವು.ದೇವಾಲಯಗಳಿಗೆ ಹೋಗಲು ಆಗದವರು ತಮ್ಮ ಮನೆಗಳಲ್ಲಿಯೇ ಶಿವನ ಪೂಜೆ- ಧ್ಯಾನಗಳನ್ನು ಮಾಡಬಹುದು.ಮನೆಯಲ್ಲಿದ್ದುಕೊಂಡೇ ಮನಸ್ಸನ್ನು ಮಹಾದೇವನ ಬಳಿ ಇಟ್ಟರೆ ಅದೂ ಉಪವಾಸವೆ.ಶಿವರಾತ್ರಿಯಂದು ಉಪವಾಸವೆಂದರೆ ವಿಷಯಸುಖಗಳನ್ನು ಮೇಯಲಪೇಕ್ಷಿಸುವ ಮನಸ್ಸನ್ನು ನಿಗ್ರಹಿಸಿ,ನಿಯಂತ್ರಣದಲ್ಲಿಟ್ಟುಕೊಳ್ಳುವುದು.ವಿಷಯಗಳತ್ತ ಹರಿಯುವ ಮನಸ್ಸನ್ನು ಪಶುಪತಿಯತ್ತ ತಿರುಗಿಸುವುದೇ ನಿಜವಾದ ಉಪವಾಸವು.ಒಂದು ದಿನವಾದರೂ ನಮ್ಮ ಮನಸ್ಸನ್ನು ಕಾಮ ಕ್ರೋಧಾದಿ ಅರಿಷಡ್ವರ್ಗಗಳಿಂದ ಮುಕ್ತಗೊಳಿಸಿಕೊಳ್ಳಬೇಕು ಎನ್ನುವುದೇ ಉಪವಾಸದ ಅರ್ಥವು.ಅವಗುಣಗಳನ್ನು ಮೆಟ್ಟಿನಿಂತು ಶಿವಗುಣಗಳನ್ನು ಅಂಗಯಿಸಿಕೊಳ್ಳುವುದೇ ಉಪವಾಸವು.ಮತ್ತೊಬ್ಬರಿಗೆ ಕೆಡುಕನ್ನೆಸಗುವುದು,ಮತ್ತೊಬ್ಬರ ದ್ರವ್ಯವನ್ನು ದೋಚುವುದು,ಪರಸ್ತ್ರೀಯರನ್ನು ಕಾಮಿಸುವುದು,ಸುಳ್ಳು ಸಾಕ್ಷಿ ನುಡಿಯುವುದು,ವ್ಯವಹಾರದಲ್ಲಿ ಮೋಸಮಾಡುವುದು,ಕರ್ತವ್ಯದಲ್ಲಿ ಅದಕ್ಷತೆಯಿಂದಿರುವುದು ಇವೇ ಮೊದಲಾದವುಗಳು ಅವಗುಣಗಳು ಎನ್ನಿಸಿಕೊಳ್ಳುತ್ತವೆ.ಈ ಅವಗುಣಗಳನ್ನು ಬಿಡುವುದು ಕಷ್ಟವಾದರೂ ಶಿವರಾತ್ರಿಯ ಒಂದುದಿನವಾದರೂ ಈ ಅವಗುಣಗಳನ್ನು ನಿಯಂತ್ರಿಸಬಹುದಲ್ಲ.ಅದಕ್ಕಾಗಿಯೇ ಶಿವದೇವಾಲಯ,ಮನೆಯ ಏಕಾಂತದಲ್ಲಿ ಕುಳಿತು ಶಿವಮಂತ್ರೋಚ್ಚಾರಣೆ ಮಾಡುವುದು.ಶಿವಮಂತ್ರಪಠಣೆಯಲ್ಲಿ ಮನಸ್ಸನ್ನು ತೊಡಗಿಸುವುದರಿಂದ ಮನಸ್ಸು ಕೆಟ್ಟವಿಚಾರಗಳತ್ತ ಹರಿಯುವುದಿಲ್ಲ.ಕೆಟ್ಟವಿಚಾರಗಳತ್ತ ಹರಿಯುವ ಮನಸ್ಸನ್ನು ಶಿವನಲ್ಲಿ ಕೇಂದ್ರೀಕರಿಸುವುದೇ ಉಪವಾಸವು.
‘ ಜಾಗರಣೆ’ ಎಂದರೆ ಎಚ್ಚರದಿಂದ ಇರುವುದು.ಶಿವರಾತ್ರಿಯಂದು ಎಚ್ಚರ ಇರಬೇಕು ಎಂದು ಇಸ್ಪೀಟ್ ಆಡುತ್ತ,ಮೋಜು ಮಸ್ತಿ ಮಾಡುವುದು ಜಾಗರಣೆಯಲ್ಲ.ಶಿವರಾತ್ರಿಯಂದು ಪರಶಿವನು ಭೂಮಿಯಲ್ಲಿನ ತನ್ನ ಭಕ್ತರುಗಳನ್ನು ಉದ್ಧರಿಸಲು ಬರುತ್ತಿರುವುದರಿಂದ ಶಿವನ ಆಗಮನದ ಮಂಗಳಕರ ಕ್ಷಣಗಳಿಗಾಗಿ ಕಾತುರತೆಯಿಂದ ಕಾಯುವುದೇ ಜಾಗರಣೆಯು.ಹಸಿವು- ತೃಷೆ,ಮೋಹ- ಮಮಕಾರ,ರಾಗ- ದ್ವೇಷಗಳೆಂಬ ಕಳೆಗಳು ಆವರಿಸಿಕೊಂಡಿರುವ ಮೈ ಮನಗಳಲ್ಲಿ ಶಿವನ ಬೆಳಕನ್ನು ಆವಾಹಿಸಿಕೊಳ್ಳುವುದೇ ಜಾಗರಣೆಯು.ನಮ್ಮ ಕಣ್ಣುಗಳು ಏನು ಏನನ್ನೋ ನೋಡಿ ಮಲಿನವಾಗಿರುತ್ತವೆ.ಅಂತಹ ಮಲಿನ ಕಣ್ಣುಗಳನ್ನು ತೊಳೆದುಕೊಂಡು ತದೇಕಚಿತ್ತರಾಗಿ ಶಿವನನ್ನು ನೋಡುವುದೇ ಶಿವಯೋಗವು,ಶಿವರಾತ್ರಿಯ ಜಾಗರಣೆಯು.ಶಿವಭಕ್ತರು ಶಿವನ ಲಿಂಗ,ಮೂರ್ತಿ ಇಲ್ಲವೆ ಮನೆಗಳಲ್ಲಿ ಶಿವನ ಚಿತ್ರಪಟವನ್ನು ತದೇಕಚಿತ್ತರಾಗಿ ನೋಡುತ್ತಿರಬೇಕು.ಶಿವಾನುಗ್ರಹಕ್ಕೆ ಅರ್ಹರಾದವರಿಗೆ ಶಿವರಾತ್ರಿಯ ಪುಣ್ಯದಿನದಂದು ಶಿವನ ದರ್ಶನ ಲಭಿಸುತ್ತದೆ.ಪ್ರತಿವರ್ಷ ಶಿವರಾತ್ರಿಯಂದು ಪರಶಿವನು ಕನಿಷ್ಟ ಒಬ್ಬ ಭಕ್ತನಿಗಾದರೂ ದರ್ಶನ ನೀಡುತ್ತಾನಂತೆ.ಶಿವ ಸಾಕ್ಷಾತ್ಕಾರವನ್ನು ಅನುಭವಿಸುವ ಅಂತಹ ಪುಣ್ಯ ನಮ್ಮ ನಿಮ್ಮದು ಏಕಾಗಬಾರದು ?
ಶಿವರಾತ್ರಿಯಂದು ‘ ನಮಃ ಶಿವಾಯ’ ಎನ್ನುವ ಪಂಚಾಕ್ಷರಿ ಮಂತ್ರವನ್ನು ಸದಾ ಜಪಿಸುತ್ತಿರಬೇಕು.’ನಮಃಶಿವಾಯ’ ಮಂತ್ರವನ್ನು ಯಾರು ಬೇಕಾದರೂ ಜಪಿಸಬಹುದು.ಆದರೆ ‘ ಓಂ ನಮಃ ಶಿವಾಯ’ ಎನ್ನುವ ಷಡಕ್ಷರಿ ಮಂತ್ರವನ್ನಾಗಲಿ ಇಲ್ಲವೆ ‘ ಓಂ ನಮಃ ಶಿವಾಯ ಓಂ’ ಎನ್ನುವ ಮಹಾಶೈವ ಶಿವಸಪ್ತಾಕ್ಷರಿ ಮಂತ್ರವನ್ನಾಗಲಿ ಜಪಿಸಲು ಗುರುದೀಕ್ಷೆ ಪಡೆದಿರಬೇಕಾಗುತ್ತದೆ.’ ನಮಃ ಶಿವಾಯ’ ಮಂತ್ರ ಜಪಕ್ಕೆ ಗುರುದೀಕ್ಷೆಯ ಅಗತ್ಯವಿಲ್ಲವಾದ್ದರಿಂದ ಮಕ್ಕಳು,ಮುದುಕರು,ಮಹಿಳೆಯರು,ವಿಧವೆಯರು ಹೀಗೆ ಯಾರು ಬೇಕಾದರೂ ಈ ಮಂತ್ರವನ್ನು ಜಪಿಸಬಹುದು.ಆ ಮಂತ್ರ ಜಪಿಸಬಲು ಬಾರದವರು’ ಶಿವ’ ‘ ಶಿವ’ ಎನ್ನುತ್ತ ಶಿವಧ್ಯಾನ ಮಾಡಬಹುದು.ಶಿವಪುರಾಣ,ಶಿವಸಂಕೀರ್ತನೆಗಳಲ್ಲಿ ಕಾಲ ಕಳೆಯಬಹುದು.ಶಿವಭಜನೆ,ಶಿವಗಾಯನ ಗೋಷ್ಠಿಗಳಲ್ಲಿರಬಹುದು.ಒಟ್ಟಿನಲ್ಲಿ ಶಿವರಾತ್ರಿಯನ್ನು ಶಿವಮಯವಾದದಿನವನ್ನಾಗಿಸಬೇಕು ಎನ್ನುವುದೇ ಶಿವರಾತ್ರಿಯ ಉಪವಾಸ,ಜಾಗರಣೆಗಳ ಉದ್ದೇಶ.
07.03.2024