ಬೆಂಗಳೂರಿನ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಐಎಎಸ್,ಐಪಿಎಸ್ ಅಧಿಕಾರಿಗಳ ಮೇಲೆ ಸರಕಾರ ಕ್ರಮಕೈಗೊಳ್ಳಬೇಕು

ಮೂರನೇ ಕಣ್ಣು : ಬೆಂಗಳೂರಿನ ಸಾರ್ವಜನಿಕರಿಗೆ ತೊಂದರೆ ಕೊಟ್ಟ ಐಎಎಸ್,ಐಪಿಎಸ್ ಅಧಿಕಾರಿಗಳ ಮೇಲೆ ಸರಕಾರ ಕ್ರಮಕೈಗೊಳ್ಳಬೇಕು : ಮುಕ್ಕಣ್ಣ ಕರಿಗಾರ

‌ಟಿ.ವಿ‌ 9 ನಲ್ಲಿ ಒಂದು ಆಶ್ಚರ್ಯಕರ ಹಾಗೂ ಆಘಾತಕಾರಿ ವರದಿ ನೋಡಿದೆ.ಇದು ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮಾತ್ರ ಸಂಭವಿಸಬಹುದಾದ ಘಟನೆ.ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನ ಆರನೇ ಸೆಕ್ಟರ್ ನಲ್ಲಿ ವಾಸಿಸುವ ನಿವೃತ್ತ ಹಾಗೂ ಹಾಲಿ ಐಎಎಸ್,ಐಪಿಎಸ್ ಅಧಿಕಾರಿಗಳು ತಮ್ಮ ವಾಯುವಿಹಾರಕ್ಕೆ ತೊಂದರೆ ಆಗುತ್ತದೆ ಎಂದು ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿದ್ದಾರೆ!ಆ ರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಪ್ರಯಾಣಿಕರುಗಳು ಈಗ ನಾಲ್ಕು ಕಿಲೋ ಮೀಟರ್ ಗಳಷ್ಟು ದೂರ ಸುತ್ತಿಬಳಸಿ ಹೋಗಬೇಕಂತೆ.ಈ ಐ ಎ ಎಸ್,ಐಪಿಎಸ್ ಅಧಿಕಾರಿಗಳೇನು ರಾಜ ಮಹಾರಾಜರುಗಳೆ ಅಥವಾ ಬ್ರಿಟಿಷ್ ಅರಸೊತ್ತಿಗೆಯ ವಂಶಸ್ಥರುಗಳೆ ? ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಕರ್ನಾಟಕದ ರಾಜಧಾನಿಯಲ್ಲಿಯೇ ಐಎಎಸ್,ಐಪಿಎಸ್ ಅಧಿಕಾರಿಗಳು ಸಾರ್ವಜನಿಕರಿಗೆ ಉಪದ್ರವಕಾರಕ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ ಎನ್ನುವುದು ಪ್ರಜಾಪ್ರಭುತ್ವಕ್ಕೆ ಅಪಮಾನಕರ ಸಂಗತಿ.

ಸರಕಾರ ಈ ಕೂಡಲೆ ಹೆಚ್ ಎಸ್ ಆರ್ ಲೇಔಟ್ ನ ಆರನೇ ಸೆಕ್ಟರ್ ನ ಆ ರಸ್ತೆಗೆ ಹಾಕಿರುವ ಅಡೆತಡೆಗಳನ್ನು ತೆಗೆಯಿಸಿ ಹಾಕಿ,ಅದನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಬೇಕು.ಅಲ್ಲಿ ರಸ್ತೆಯ ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಆ ಸೆಕ್ಟೆರ್ ನಲ್ಲಿ ವಾಸಿಸುವ ಐಎಎಸ್,ಐಪಿಎಸ್ ಅಧಿಕಾರಿಗಳಿಂದಲೇ ವಸೂಲು ಮಾಡಿ ಅವರಿಗೆ ಬಿಸಿ ಮುಟ್ಟಿಸಬೇಕು.ಈ ಅಧಿಕಾರಿಗಳು ರಾಜ್ಯಸರ್ಕಾರದಿಂದಾಗಲಿ ಇಲ್ಲವೆ ಬಿ ಬಿ ಎಂಪಿಯಿಂದಾಗಲಿ ಅನುಮತಿ ಪಡೆಯದೆ ಸಾರ್ವಜನಿಕರ ರಸ್ತೆ ಬಂದ್ ಮಾಡಿದ್ದಾರೆ ಎಂದರೆ ಅದು ಆ ಏರಿಯಾದಲ್ಲಿ ವಾಸಿಸುವ ಅಧಿಕಾರಿಗಳ ಉದ್ಧಟತನ.ಐಎಎಸ್,ಐಪಿಎಸ್ ಅಧಿಕಾರಿಗಳಾದ ಮಾತ್ರಕ್ಕೆ ಅವರೇನು ಸ್ವರ್ಗದಿಂದ ಇಳಿದು ಬಂದವರಲ್ಲ,ಸಂವಿಧಾನ, ಸರ್ಕಾರಕ್ಕಿಂತ ದೊಡ್ಡವರಲ್ಲ.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ ಸವಲತ್ತುಗಳನ್ನು ಅನುಭವಿಸುವ ಐಎಎಸ್,ಐಪಿಎಸ್ ಅಧಿಕಾರಿಗಳು ಸಾರ್ವಜನಿಕರ ಬಗ್ಗೆ ಗೌರವಾದರಗಳನ್ನು ಹೊಂದಿರಬೇಕೇ ಹೊರತು ಸಾರ್ವಜನಿಕರಿಗೆ ಉಪದ್ರವಕೊಡುವಷ್ಟು ಅಹಂಬೆಳೆಸಿಕೊಳ್ಳಬಾರದು.

ಹೆಚ್ ಎಸ್ ಆರ್ ಲೇ ಔಟಿನ ಈ ಪ್ರಕರಣವನ್ನು ಸರಕಾರ ಮತ್ತು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು.ಐಎಎಸ್,ಐಪಿಎಸ್ ಅಧಿಕಾರಿಗಳ ಬಗೆಗಿನ ನಮ್ಮ ಧೋರಣೆ ಬದಲಾಗಬೇಕು.ಇಂದಿಗೂ ಐಎಎಸ್,ಐಪಿಎಸ್ ಅಧಿಕಾರಿಗಳು’ ತಾವು ಎಲ್ಲರಿಗಿಂತ ಶ್ರೇಷ್ಠರು’ , ‘ ಯಾರನ್ನೂ ಕೇರ್ ಮಾಡಲಾರೆವು’ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ.ಭಾರತದ ಪ್ರಜೆಗಳೇನು ಈಗ ಬ್ರಿಟಿಷರ ಆಡಳಿತದಲ್ಲಿ ಇಲ್ಲ,ಈ ಐಎಎಸ್,ಐಪಿಎಸ್ ಅಧಿಕಾರಿಗಳು ಸ್ವೇಚ್ಛೆಯಾಗಿ ವರ್ತಿಸಲು.ಐಎಎಸ್,ಐಪಿಎಸ್ ಸೇರಿದಂತೆ ಎಲ್ಲ ಸೇವೆಗಳು ಇರುವುದು ಜನರ ಒಳಿತನ್ನು ಸಾಧಿಸಲೇ ಹೊರತು ಜನರ ಹಕ್ಕುಗಳ ಮೇಲೆ ಸವಾರಿ ಮಾಡಲು ಅಲ್ಲ.ಸಂವಿಧಾನವು ಭಾರತೀಯ ಸೇವೆಗೆ ಸೇರಿದ ಹಾಗೂ ರಾಜ್ಯಸೇವೆಗಳಿಗೆ ಸೇರಿದ ಅಧಿಕಾರಿಗಳಿಗೆ ರಕ್ಷಣೆ ಒದಗಿಸಿರುವುದು ಅವರು ರಾಜಕಾರಣಿಗಳ ಲಂಗುಲಗಾಮಿಲ್ಲದ ಸ್ವೇಚ್ಛಾಚಾರದ ಪ್ರವೃತ್ತಿಗೆ ಬಲಿಯಾಗಿ ತೊಂದರೆಗೆ ಈಡಾಗಲಿ ಎನ್ನುವ ಕಾರಣದಿಂದಲೇ ಹೊರತು ಈ ಅಧಿಕಾರಿಗಳೇ ಪ್ರಜಾಪೀಡಕರುಗಳಾಗಲಿ ಎನ್ನುವ ಉದ್ದೇಶದಿಂದ ಅಲ್ಲ.ಐಎಎಸ್,ಐಪಿಎಸ್ ಅಧಿಕಾರಿಗಳು ಸಂವಿಧಾನಕ್ಕಿಂತ ದೊಡ್ಡವರಲ್ಲ,ನೆಲದ ಕಾನೂನಿಗಿಂತ ಹಿರಿಯರಲ್ಲ.ಸಾರ್ವಜನಿಕ ಸೇವಕರು ಎನ್ನುವ ಕಾರಣದಿಂದ ಕೆಲವು ವಿಶೇಷ ಸೌಲಭ್ಯ,ವಿನಾಯತಿ ರಿಯಾಯತಿಗಳನ್ನು ಪಡೆದಿದ್ದಾರಷ್ಟೆ.

ಬೆಂಗಳೂರಿನಲ್ಲಿ ಅತಿಪ್ರಮುಖ ಸ್ಥಳಗಳಲ್ಲಿ ಸರಕಾರದಿಂದ ಪುಕ್ಕಟೆಯಾಗಿ ಇಲ್ಲವೆ ನಾಮಮಾತ್ರ ಶುಲ್ಕ ಪಾವತಿಸಿ ಲೇಔಟ್ ಗಳನ್ನು ಮಾಡಿಕೊಂಡು ತಮ್ಮ ವಸತಿಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ ಐಎಎಸ್ ,ಐಪಿಎಸ್ ಅಧಿಕಾರಿಗಳು.ಸರಕಾರಿ ವಸತಿಗೃಹಗಳು,ಸರಕಾರಿ ಬಂಗಲೆಗಳು,ಸರಕಾರಿ ಗೆಸ್ಟ್ ಹೌಸ್ ಗಳೆಲ್ಲ ಈ ಐಎಎಸ್,ಐಪಿಎಸ್ ಮಹಾನುಭಾವರಗಳಿಗಾಗಿಯೇ ನಿರ್ಮಿಸಲ್ಪಟ್ಟಿವೆ ಎಂಬಂತೆ ಅವುಗಳ ಮೇಲೆ ಅಧಿಪತ್ಯಸ್ಥಾಪಿಸಿದ್ದಾರೆ.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಮತ್ತು ಕಾರ್ಯಪಾಲಕ ಅಭಿಯಂತರರುಗಳು ಐಎಎಸ್ ಅಧಿಕಾರಿಗಳ ಸೇವೆಯಲ್ಲಿಯೇ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.ಐಎಎಸ್ ಸಾಹೇಬರುಗಳು ಹೊಸದಾಗಿ ಜಿಲ್ಲೆಗೋ ತಾಲೂಕಿಗೋ ಬಂದಾಗ ಅವರಿಗೆ ಸರಕಾರಿ ಐ ಬಿ,ಗೆಸ್ಟ್ ಹೌಸ್ ಗಳನ್ನು ಒಪ್ಪ ಓರಣವಾಗಿಸುವುದು,ಅವರಿಗೆ ರಾಜೋಪಚಾರದ ವ್ಯವಸ್ಥೆ ಮಾಡುವುದು,ಅವರು ತಮ್ಮ ಅಧಿಕೃತ ಸರಕಾರಿ ನಿವಾಸಗಳಿಗೆ ಸ್ಥಳಾಂತರಗೊಂಡಾಗ ಸಾಹೇಬರುಗಳ ಅಭಿರುಚಿಗೆ ತಕ್ಕಂತೆ ವಸತಿಗೃಹದ ದುರಸ್ತಿ,ವಿನ್ಯಾಸ ಇತ್ಯಾದಿಗಳಲ್ಲಿಯೇ ಖುಷಿಪಡುವ ದೈನೇಸಿ ಸ್ಥಿತಿಗೆ ತಲುಪಿದ್ದಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು.ಐಎಎಸ್ ಅಧಿಕಾರಿಗಳು ತಮ್ಮ ಆಧೀನದ ಅಧಿಕಾರಿಗಳು,ಸಿಬ್ಬಂದಿಗಳನ್ನು ಮತ್ತು ಇಲಾಖೆಯ ಅಧಿಕಾರಿಗಳನ್ನು ಕೀಳಾಗಿ ಇಲ್ಲವೆ ಅಸಡ್ಡೆಯಿಂದ ಕಾಣುವ ಪ್ರವೃತ್ತಿ ಇಂದಿಗೂ ಮುಂದುವರೆದಿದೆ.ಅದೇ ಆಗ ತಾನೇ ಸೇವೆ ಪ್ರಾರಂಭಿಸಿದ ಜೂನಿಯರ್ ಐಎಎಸ್ ಅಧಿಕಾರಿ ಎ ಸಿ ಆಗಿದ್ದು ಜಿಲ್ಲೆಯ ಹಿರಿಯ ಅಧಿಕಾರಿಯಾಗಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಕುಳಿತುಕೊಳ್ಳಿ ಎನ್ನದೆ ತನ್ನೆದುರು ನಿಂತುಕೊಂಡೇ ಮಾತನಾಡುವಂತೆ ವರ್ತಿಸುತ್ತಾನೆಂದರೆ ? ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಡಿ ಸಿ,ಸಿಇಒ ಆದವರುಗಳು ಮನಸ್ವಿ ಬಯ್ಯುತ್ತಾರೆ,ಅಪಮಾನಿಸುತ್ತಾರೆ ಎಂದರೆ ಏನರ್ಥ ? ರಾಜ್ಯಸೇವೆಯ ಅಧಿಕಾರಿಗಳ ಅಜ್ಞಾನ,ಪುಕ್ಕಲುತನ ಒಂದು ಕಡೆಯಾದರೆ ಐಎಎಸ್ ಅಧಿಕಾರಿಗಳನ್ನು ಸಾರ್ವಜನಿಕರ ಇಚ್ಛೆಗೆ ವಿರುದ್ಧವಾಗಿ ವಿಪರೀತವಾಗಿ ಪೊರೆದು,ಪೋಷಿಸುವ ನಮ್ಮ ಸರ್ಕಾರಿ ವ್ಯವಸ್ಥೆಯ ಲೋಪವೂ ಐಎಎಸ್ ಅಧಿಕಾರಿಗಳು ಉಬ್ಬಿ ಕೊಬ್ಬಲು ಕಾರಣ.ಒಬ್ಬ ಸಿಇಒ ಜಬಾಬ್ದಾರಿಯುತ ಒಬ್ಬ ಶಾಸಕರನ್ನು ಭೇಟಿಯಾಗಲು ಕಾಯಿಸುತ್ತಾರೆ ಇಲ್ಲವೆ ನಿರಾಕರಿಸುತ್ತಾರೆ ಎಂದರೆ ಪ್ರಜಾಪ್ರಭುತ್ವಕ್ಕೆ ಏನು ಬೆಲೆ ? ಕೇವಲ ನಾಲ್ಕೈದು ವರ್ಷಗಳ ಸೇವಾ ಅನುಭವ ಇರುವ ಸಿಇಒ ಜಿಲ್ಲಾ ಪಂಚಾಯತಿಯ ಅಧ್ಯಕ್ಷರನ್ನು ಭೇಟಿಯಾಗುವುದಿಲ್ಲ,ಅವರೇ ಬೇಕಿದ್ದರೆ ನನ್ನ ಛೇಂಬರ್ ಗೆ ಬರಲಿ ಎನ್ನುತ್ತಾರೆ ಅಂದರೆ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಏನು ಮಹತ್ವವಿದೆ ? ಮೊದಲು ನಮ್ಮ ರಾಜಕಾರಣಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು.ವಿಧಾನಸೌಧದಲ್ಲಿ ಆಡಳಿತ ಮಾಡುವ ಪಕ್ಷ ಯಾವುದೇ ಇರಲಿ ಒಬ್ಬ ಶಾಸಕ ಒಬ್ಬ ಐಎಎಸ್ ಅಧಿಕಾರಿಯ ಅವಜ್ಞೆಗೆ ಗುರಿಯಾಗಿದ್ದಾನೆ,ಐಎಎಸ್ ಅಧಿಕಾರಿಯಿಂದ ಅವಮಾನಿಸಲ್ಪಟ್ಟಿದ್ದಾನೆ ಎಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಆ ಅಧಿಕಾರಿಯ ಮೇಲೆ ಶಿಸ್ತುಕ್ರಮ ಜರುಗಿಸಬೇಕು.ಹಕ್ಕುಚ್ಯುತಿ ಪ್ರಕರಣ ದಾಖಲಿಸಿಕೊಂಡು ಆ ಅಧಿಕಾರಿಯನ್ನು ಸದನದ ಕಟಕಟೆಯಲ್ಲಿ ನಿಲ್ಲಿಸಿ ಛೀಮಾರಿ ಹಾಕಬೇಕು.ಇಂತಹ ಪ್ರಕರಣಗಳು ಮೇಲಿಂದ ಮೇಲೆ ಘಟಿಸುತ್ತಿದ್ದರೆ ಐಎಎಸ್ ಅಧಿಕಾರಿಗಳು ತಮ್ಮ ಇತಿಮಿತಿಯಲ್ಲೇ ವರ್ತಿಸುತ್ತಾರೆ.ಆಡಳಿತದಲ್ಲಿರುವ ಪಕ್ಷ ವಿರೋಧಪಕ್ಷದ ಶಾಸಕನಿಗೆ ಐಎಎಸ್ ಅಧಿಕಾರಿಯಿಂದ ಆದ ತೇಜೋವಧೆಯನ್ನು ಸಹಿಸಿಕೊಳ್ಳುವುದು ಮತ್ತು ಆ ಅಧಿಕಾರಿಯನ್ನು ಸಮರ್ಥಿಸುವಂತಹ ಕಾರ್ಯಗಳು ನಡೆದೇ ಇವೆ.ಪ್ರಬುದ್ಧವ್ಯಕ್ತಿತ್ವ ಉಳ್ಳ ಯಾರೇ ಮುಖ್ಯಮಂತ್ರಿ ಇಂತಹ ಘಟನೆಗಳನ್ನು ಸಹಿಸಬಾರದು.ಆದರೆ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸೇರಿದಂತೆ ಕರ್ನಾಟಕವನ್ನಾಳಿದ ಎಲ್ಲ ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳು ಕಿವಿ ಊದಿದ್ದನ್ನೇ ಸಾರ್ವಜನಿಕ ಆಡಳಿತನೀತಿಯನ್ನಾಗಿ ರೂಪಿಸಿಕೊಂಡರೇ ಹೊರತು ಐಎಎಸ್,ಐಪಿಎಸ್ ಅಧಿಕಾರಿಗಳ ಮೇಲೆ ತಮ್ಮ ಪ್ರಭುತ್ವ ಪ್ರತಿಷ್ಠಾಪಿಸಲೇ ಇಲ್ಲ ! ನಮ್ಮ ರಾಜಕಾರಣಿಗಳ ದಡ್ಡತನ ಐಎಎಸ್ ಅಧಿಕಾರಿಗಳ ಅಹಂಕಾರ ನೂರ್ಮಡಿಯಾಗಲು ಕಾರಣವಾಯಿತು.ಐಎಎಸ್ ಅಧಿಕಾರಿಗಳ ಭ್ರಷ್ಟಾಚಾರದ ಪ್ರಕರಣಗಳನ್ನು ಲೋಕಾಯುಕ್ತರಿಗೆ ವಹಿಸಲು ಇಲ್ಲವೆ ಅವರ ವಿರುದ್ಧ ಕೋರ್ಟ್ ಗಳಲ್ಲಿ ಕ್ರಿಮಿನಲ್ ಕೇಸುಗಳನ್ನು ದಾಖಲಿಸಲು ಅನುಮತಿ ನೀಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಇದೆ.ಆದರೆ ಇದುವರೆಗೆ ಯಾವ ಮುಖ್ಯಮಂತ್ರಿ ಐಎಎಸ್ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದಾರೆ? ಎಷ್ಟು ಜನ ಭ್ರಷ್ಟ ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸುಗಳನ್ನು ದಾಖಲಿಸಿದ್ದಾರೆ ? ಐಎಎಸ್ ಅಧಿಕಾರಿಗಳೆಲ್ಲರೂ ಸಚ್ಚರಿತ್ರರೆ? ಭ್ರಷ್ಟ ಐಎಎಸ್ ಅಧಿಕಾರಿಗಳ ಸಂಖ್ಯೆ ದೊಡ್ಡದಿದೆ.ಇದು ಗೊತ್ತಿದ್ದೂ ಯಾವ ಮುಖ್ಯಮಂತ್ರಿಯೂ ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎನ್ನುವುದು ರಾಜಕಾರಣಿಗಳ ಅಸಾಮರ್ಥ್ಯ ಮತ್ತು ಹೊಂದಾಣಿಕೆ ರಾಜಕಾರಣ ಪ್ರವೃತ್ತಿಗೆ ಸಾಕ್ಷಿ,ನಿದರ್ಶನ.ಐಎಎಸ್ ಅಧಿಕಾರಿಗಳ ಸಂಬಳ,ಭತ್ತೆಗಳ ಹೆಚ್ಚಳದ ಕುರಿತು ಕಾಲಕಾಲಕ್ಕೆ ಕಡತ ಬಂದೊಡನೆ ಅನುಮೋದಿಸುವ ಮುಖ್ಯಮಂತ್ರಿಗಳು ಎಂದಾದರೂ ಐಎಎಸ್ ಅಧಿಕಾರಿಗಳ ವೇತನ,ಬಡ್ತಿ ಮುಂತಾದವುಗಳಿಂದ ರಾಜ್ಯದ ಬೊಕ್ಕಸದ ಮೇಲೆ ಏನಾದರೂ ಪರಿಣಾಮ ಆಗುತ್ತದೆಯೆ ಎಂದು ವಿಚಾರಿಸಿದ್ದಾರೆಯೆ ? ರಾಜ್ಯಸೇವೆಯ ಸರಕಾರಿ ಅಧಿಕಾರಿಗಳ ಪದೋನ್ನತಿ,ವೇತನಶ್ರೇಣಿಯ ಹೆಚ್ಚಳಗಳಂತಹ ವಿಷಯಗಳಲ್ಲಿ ಬಹಳಷ್ಟು ಆಲೋಚಿಸುವ ನಮ್ಮ ರಾಜಕಾರಣಿಗಳು ಐಎಎಸ್ ಅಧಿಕಾರಿಗಳ ಬಡ್ತಿ,ವೇತನ ಶ್ರೇಣಿಗಳ ಕುರಿತ ಕಡತಗಳನ್ನು ಕಣ್ಮುಚ್ಚಿ ಸಹಿ ಮಾಡುತ್ತಾರೆ.ಐಎಎಸ್ ಅಧಿಕಾರಿಗಳ ಎಲ್ಲ ಖರ್ಚು ವೆಚ್ಚವೂ ಸರಕಾರಿ ವೆಚ್ಚವೆ ! ಐಎಎಸ್ ಅಧಿಕಾರಿಗಳು ಬೆಂಗಳೂರಿನಿಂದ ಜಿಲ್ಲಾ,ತಾಲೂಕಾ ಪ್ರವಾಸ ಹೊರಟರೆ ಅವರ ಪ್ರಯಾಣದ ಟಿಕೆಟ್ಟುಗಳನ್ನು ಬುಕ್ ಮಾಡುವುದು,ಪ್ರವಾಸದ ದಿನಗಳಲ್ಲಿ ಅವರ ತಂಗುವಿಕೆ,ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳುವುದು ಅವರ ಪಿ ಎ ಮತ್ತು ಪಿ ಎಸ್ಗಳು.ಅವರು ಹೇಗೆ ವ್ಯವಸ್ಥೆ ಮಾಡುತ್ತಾರೆ ಎನ್ನುವುದು ಸರಕಾರಿ ಅಧಿಕಾರಿಗಳಾದವರಿಗೆ ಗೊತ್ತಿಲ್ಲದ ಸಂಗತಿ ಏನಲ್ಲ.ಒಂದು ನಯಾಪೈಸೆಯ ಖರ್ಚು ಮಾಡದೆ ಜೀವನ ಸಾಗಿಸುವ ಐಎಎಸ್ ಅಧಿಕಾರಿಗಳು ಪೂರ್ತಿ ಸಂಬಳವನ್ನು ಉಳಿಸುತ್ತಾರೆ.ಇದಕ್ಕೆ ಹೊರತಾಗಿ ಟಿ.ಎಂ ವಿಜಯಭಾಸ್ಕರ್ ಅವರಂತಹ ಕೆಲವು ಐಎಎಸ್ ಅಧಿಕಾರಿಗಳಿದ್ದರು.ಟಿ ಎಂ ವಿಜಯಭಾಸ್ಕರ್ ಅವರು ತಾವು ತಂಗಿದ ಐ ಬಿ ಗಳಲ್ಲಿ ಊಟ ಮಾಡಿದರೆ ನೂರು ರೂಪಾಯಿ ಕೊಡುತ್ತಿದ್ದರು ಅವರ ಶಿಷ್ಟಾಚಾರ ನಿರ್ವಹಿಸಿದ ಅಧಿಕಾರಿಗೆ.ನೂರು ರೂಪಾಯಿ ಏನೂ ಸಾಲದು ಎನ್ನುವುದು ಬೇರೆಯೇ ಮಾತಾದರೂ ಟಿ ಎಂ ವಿಜಯಭಾಸ್ಕರ್ ಅವರು ಅಷ್ಟನ್ನಾದರೂ ಕೊಡುತ್ತಿದ್ದರು . ಎಷ್ಟು ಜನ ಐಎಎಸ್ ಅಧಿಕಾರಿಗಳು ಟಿ ಎಂ ವಿಜಯಭಾಸ್ಕರ್ ಅವರಂತೆ ತಮ್ಮ ಊಟೋಪಚಾರದ ವೆಚ್ಚ ಪಾವತಿಸುತ್ತಾರೆ ? ಚಿರಂಜೀವಿ ಸಿಂಗ್ ಅವರು ರಾಜ್ಯದ ಅಭಿವೃದ್ಧಿ ಆಯುಕ್ತರಾಗಿ ನಿವೃತ್ತರಾದರೂ ಅತ್ಯಂತ ಸರಳ ಜೀವನ ನಡೆಸುತ್ತಿರುವ ಅಪರೂಪದ ಐಎಎಸ್ ಅಧಿಕಾರಿ.ಅವರು ಬೆಂಗಳೂರಿನಲ್ಲಿ ತಮ್ಮ ಮೋಟಾರ್ ಸೈಕಲ್ಲಿನಲ್ಲಿಯೇ ಸಂಚರಿಸುತ್ತಾರೆ ಎನ್ನುವ ವಿಷಯ ಬಹಳ ಜನಕ್ಕೆ ಗೊತ್ತಿಲ್ಲ.ಇಂತಹ ಶುದ್ಧಅಪರಂಜಿ ಚಿನ್ನದಂತಹ ಕೆಲವು ಐಎಎಸ್ ಅಧಿಕಾರಿಗಳೂ ಇದ್ದಾರೆ.ಇಂಥವರ ಬಗ್ಗೆ ಹೆಮ್ಮೆ,ಅಭಿಮಾನ ಪಡಬಹುದು.ಆದರೆ ಐಎಎಸ್ ಅಧಿಕಾರಿಯಾದ ಮಾತ್ರಕ್ಕೆ ಅವರು ಮಹಾನ್ ಬುದ್ಧಿವಂತರೆಂದೋ ಇಲ್ಲವೆ ವಿಶೇಷವ್ಯಕ್ತಿಗಳೆಂದೋ ತಲೆಯಮೇಲೆ ಹೊತ್ತು ತಿರುಗುವ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕುದಲ್ಲ.ನಮ್ಮ ರಾಜಕಾರಣಿಗಳು ಈಗಲಾದರೂ ಐಎಎಸ್ ಅಧಿಕಾರಿಗಳು ಹದ್ದುಬಸ್ತಿನಲ್ಲಿಡುವುದನ್ನು ರೂಢಿಸಿಕೊಳ್ಳಬೇಕು.

 

About The Author