ಶಿವನನ್ನು ಪೂಜಿಸಿ ಶಿವನೇ ಆಗಬಹುದು

ಶಿವಚಿಂತನೆ ::ಶಿವನನ್ನು ಪೂಜಿಸಿ ಶಿವನೇ ಆಗಬಹುದು:ಮುಕ್ಕಣ್ಣ ಕರಿಗಾರ

ಶಿವನನ್ನು ಪೂಜಿಸುವ ಮೂಲಕ ಭಕ್ತರು ಶಿವನೇ ಆಗಬಹುದು ಎನ್ನುವುದು ಶಿವೋಪಾಸನೆಯ‌ ರಹಸ್ಯ ಮತ್ತು ಮಹತ್ವ.ಶಿವನೊಬ್ಬನೇ ತನ್ನ ಭಕ್ತರನ್ನು ತನ್ನಂತೆ ಮಾಡಿಕೊಳ್ಳಬಲ್ಲನು,ತನ್ನೊಳಗು ಮಾಡಿಕೊಳ್ಳಬಲ್ಲನ್ನು.ವಿಶ್ವನಿಯಾಮಕ ಪರಮಾತ್ಮನೂ ಪರಬ್ರಹ್ಮನೂ ಆಗಿರುವ ಪರಶಿವನು ಸೃಷ್ಟಿ,ಸ್ಥಿತಿ,ಪ್ರಳಯ,ತಿರೋದಾನ ಮತ್ತು ಅನುಗ್ರಹಗಳೆಂಬ ಪಂಚಕಾರ್ಯಗಳ ಮೂಲಕ ಪ್ರಕೃತಿ ವ್ಯವಹಾರವನ್ನು ನಿರ್ವಹಿಸುತ್ತಿದ್ದು,ಈ ಪಂಚಕಾರ್ಯಗಳಲ್ಲಿ ಸೃಷ್ಟಿಕಾರ್ಯವನ್ನು ಬ್ರಹ್ಮನಿಗೆ,ಸ್ಥಿತಿಕಾರ್ಯವನ್ನು ವಿಷ್ಣುವಿಗೆ,ಪ್ರಳಯಕಾರ್ಯವನ್ನು ರುದ್ರನಿಗೆ,ತಿರೋದಾನ ಕಾರ್ಯವನ್ನು ಮಹೇಶ್ವರನಿಗೆ ವಹಿಸಿಕೊಟ್ಟಿರುವನಾದರೂ ಕೊನೆಯದು ಮತ್ತು ಶ್ರೇಷ್ಠವಾದ ಅನುಗ್ರಹಕಾರ್ಯವನ್ನು ಯಾರಿಗೂ ಅನುಗ್ರಹಿಸದೆ ತನ್ನ ಬಳಿಯೇ ಇಟ್ಟುಕೊಂಡಿರುವನು.ಅನುಗ್ರಹಕಾರ್ಯವೆಂದರೆ ಮೋಕ್ಷಕಾರ್ಯ.ಜೀವರುಗಳಿಗೆ ಮೋಕ್ಷವನ್ನು ಕರುಣಿಸುವ ವಿಶೇಷ ಸಾಮರ್ಥ್ಯವು ಶಿವನೊಬ್ಬನಲ್ಲಿ ಮಾತ್ರವಿದೆ.ಬೇರೆ ಯಾವ ದೇವರೂ ಮೋಕ್ಷವನ್ನು ಕರುಣಿಸಲಾರರು.ಇತರ ದೇವದೇವಿಯರು ದುರಿತಗಳನ್ನು ನಿವಾರಿಸಬಹುದು,ಭೋಗ ಭಾಗ್ಯಗಳನ್ನು ಕರುಣಿಸಬಹುದು,ಪುತ್ರಪೌತ್ರಕಳತ್ರಬಂಧುಮಿತ್ರರುಗಳನ್ನುಂಟು ಮಾಡಬಹುದು,ಆದರೆ ಮೋಕ್ಷವನ್ನು ಕರುಣಿಸಲಾರರು.ಆಂಜನೇಯನ ಪ್ರಸಂಗದಿಂದ ಇದನ್ನು ಅರ್ಥಮಾಡಿಕೊಳ್ಳಬಹುದು.ರಾವಣನನ್ನು ಸಂಹರಿಸಿ,ಸೀತೆಯೊಂದಿಗೆ ಮರಳಿ ರಾಮನು ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾದ ಸಂದರ್ಭ.ತನಗೆ ಸಹಾಯಮಾಡಿದ ಕಪಿವೀರರುಗಳನ್ನೆಲ್ಲ ಸತ್ಕರಿಸಲು ಅಪೇಕ್ಷಿಸಿದ ರಾಮನು ಎಲ್ಲ ಕಪಿವೀರರನ್ನು ಒಬ್ಬೊಬ್ಬರನ್ನಾಗಿ ಕರೆದು ಅವರು ಬೇಡಿದ ಪಡಿಪದಾರ್ಥ,ಮಣಿ ಮಾಣಿಕ್ಯಗಳನ್ನಿತ್ತು ಸತ್ಕರಿಸುವನು.ಕೊನೆಗೆ ಆಂಜನೇಯನ ಸರದಿ.ಆಂಜನೇಯನು ರಾಮನಿಗೆ ವಿನೀತಭಾವದಿಂದ ಕೈಮುಗಿದು ‘ ಪ್ರಭು ರಾಮಚಂದ್ರ,ಈ ಮುತ್ತು ಮಾಣಿಕ್ಯಗಳಿಂದ ನನಗೆ ಆಗಬೇಕಾದುದು ಏನು ? ವಜ್ರ ವೈಢೂರ್ಯಗಳು ನನಗೆ ಕಲ್ಲಿನ ಸಮಾನ.ನನಗೆ ಮೋಕ್ಷವನ್ನು ಕರುಣಿಸು’ ಎಂದು ಬೇಡುವನು.ಅದಕ್ಕೆ ರಾಮನು ‘ ಓ ನನ್ನ ಪ್ರೀತಿಪಾತ್ರ ಹನುಮನೆ,ನಾನು ಏನೆಲ್ಲವನ್ನೂ ಕೊಡಬಲ್ಲೆ,ಆದರೆ ಮೋಕ್ಷವನ್ನು ಮಾತ್ರ ಕರುಣಿಸಲಾರೆ.ಪರಶಿವನೊಬ್ಬನೇ ಮೋಕ್ಷಕ್ಕೆ ಅಧಿಪತಿ.ಆದ್ದರಿಂದ ನೀನು ಪರಮೇಶ್ವರನನ್ನು ಧ್ಯಾನಿಸಿ ಮೋಕ್ಷವನ್ನು ಪಡೆ’ ಎನ್ನುತ್ತಾನೆ.ಆಂಜನೇಯನು ‘ ಹಾಗಾದರೆ ಪರಶಿವನ ಧ್ಯಾನ ಪೂಜೆಗಳ ತಪೋಮಾರ್ಗವನ್ನು ಉಪದೇಶಿಸುವವರು ಯಾರು?’ ಎಂದು ಕೇಳುವನು.ರಾಮನು ‘ ಶ್ರೀವೀರಭದ್ರನು ನಿನಗೆ ಶಿವಸಾಕ್ಷಾತ್ಕಾರದ ಪಥವನ್ನು ತೋರುವನು.ನೀನು ವೀರಭದ್ರನನ್ನು ಆರಾಧಿಸಿ ಅವನ ಅನುಗ್ರಹವನ್ನು ಪಡೆ’ ಎಂದು ಉತ್ತರಿಸುವನು.ಅದರಂತೆ ಆಂಜನೇಯನು ವೀರಭದ್ರನನ್ನು ಕುರಿತು ತಪಸ್ಸು ಮಾಡಿ ವೀರಭದ್ರನಿಂದ ಶಿವಮಂತ್ರೋಪದೇಶ ಪಡೆದು ಶಿವನನ್ನು ಕುರಿತು ಘೋರತಪಸ್ಸಾನ್ನಚರಿಸಿ ಮೋಕ್ಷವನ್ನು,ಚಿರಂಜೀವಿ ಪದವಿಯನ್ನು ಪಡೆಯುವನು.

ಶಿವನು ತನ್ನ ಭಗವಂತನ ಸ್ವರೂಪವಾದ ‘ ಈಶ್ವರತ್ವ’ ವನ್ನು ತನ್ನ ಭಕ್ತರುಗಳಿಗೆ ಕರುಣಿಸುವ ಮೂಲಕ ಅವರನ್ನು ತನ್ನಂತೆ ದೇವರನ್ನಾಗಿ ಮಾಡುವನು,ಪೂಜಾರ್ಹರನ್ನಾಗಿ ಮಾಡುವನು.ವೀರಭದ್ರನು ವೀರಭದ್ರೇಶ್ವರನಾದುದು,ಬ್ರಹ್ಮನು ಬ್ರಹ್ಮೇಶ್ವರನಾದುದು,ಇಂದ್ರನು ಇಂದ್ರೇಶ್ವರನಾದುದು,ಶನಿಯು ಶನೀಶ್ಚರನಾದುದು,ಕುಬೇರನು ಯಕ್ಷೇಶ್ವರನಾದುದು ಇವೇ ಮೊದಲಾದವುಗಳು ಬಹುಪುರಾತನ ಕಾಲದ ಈಶ್ವರತ್ವವನ್ನು ಪಡೆದ ಶಿವಭಕ್ತರ ಕಥೆಗಳಾದರೆ ರೇವಣಸಿದ್ಧನು ರೇವಣಸಿದ್ಧೇಶ್ವರನಾದುದು,ಬೀರಪ್ಪನು ಬೀರಲಿಂಗೇಶ್ವರನಾದುದು,ವೀರಗೊಲ್ಲಾಳನು ಗೊಲ್ಲಾಳೇಶ್ವರನಾದುದು,ಬಸವಣ್ಣನು ಬಸವೇಶ್ವರನಾದುದು,ಸಿದ್ಧರಾಮನು ಸಿದ್ಧರಾಮೇಶ್ವರನಾದುದು,ಚೆನ್ನಬಸವಣ್ಣನು ಚೆನ್ನಬಸವೇಶ್ವರನಾದುದು ಇವರೇ ಮುಂತಾದ ಶರಣರು ಈಶ್ವರತ್ವವನ್ನು ಹೊಂದಿದ ಇತ್ತೀಚಿನ ಕಾಲದ ಉದಾಹರಣೆಗಳು.ಶಿವನು ತನ್ನ ಈಶ್ವರತ್ವವನ್ನು ತನ್ನ ಭಕ್ತರಿಗೆ ಪ್ರದಾನಿಸುವ ಮೂಲಕ ಅವರನ್ನು ಲೋಕಪೂಜ್ಯರನ್ನಾಗಿ ಮಾಡುವನು.ಕಲ್ಲಪ್ಪ ಎನ್ನುವ ಭಕ್ತನು ಕಲ್ಲೇಶ್ವರನಾಗುವುದು,ಮಲ್ಲಪ್ಪ ಎನ್ನುವ ಭಕ್ತನು ಮಲ್ಲೇಶ್ವರನಾಗುವುದು,ಸಿದ್ದಪ್ಪ ಎನ್ನುವ ಭಕ್ತನು ಸಿದ್ಧೇಶ್ವರನಾಗುವುದು,ಗವಿಯಪ್ಪ ಎನ್ನುವ ಭಕ್ತನು ಗವಿಸಿದ್ಧೇಶ್ವರನಾಗುವುದು,ಅಚಲಪ್ಪ ಎನ್ನುವ ಭಕ್ತನು ಅಚಲೇಶ್ವರನಾಗುವುದು,ಮಾರಪ್ಪ ಎನ್ನುವ ಭಕ್ತನು ಮಾರೇಶ್ವರನಾಗುವುದು ಇಂತಹ ಉದಾಹರಣೆಗಳು ಶಿವಭಕ್ತರುಗಳು ಈಶ್ವರತ್ವವನ್ನು ಪಡೆದು ಪೂಜೆಗೊಳ್ಳುತ್ತಿರುವ ನಿದರ್ಶನಗಳು.ಈಶ್ವರತ್ವವನ್ನು ಪಡೆಯಬಯಸುವವರು ಶಿವನನ್ನು ಪೂಜಿಸಿ,ಆರಾಧಿಸಬೇಕು.ಶಿವನನ್ನು ಪೂಜಿಸುವ ಭಕ್ತನು ಶಿವನೇ ಆಗಬಹುದು.

ಪರಶಿವನು ಸ್ವಯಂಪರಿಪೂರ್ಣನಿದ್ದು ತನ್ನ ಭಕ್ತರನ್ನು ಪೂರ್ಣರನ್ನಾಗಿಸುವನು.ಪೂರ್ಣರಾಗುವುದೇ ಮೋಕ್ಷವನ್ನು ಹೊಂದುವ ಲಕ್ಷಣ.ಜೀವಿಯು ತಾನು ಜೀವಿಯಲ್ಲ ಶಿವನು ಎಂದರಿತು ಶಿವತ್ವವನ್ನು ಅಳವಡಿಸಿಕೊಳ್ಳಬಹುದು.

೦೮.೦೩.೨೦೨೪

About The Author