ರಾಜಕಾರಣ ಮತ್ತು ವೈಯಕ್ತಿಕ ಸಂಬಂಧಗಳು:ಮುಕ್ಕಣ್ಣ ಕರಿಗಾರ

ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ರಾಜಕಾರಣ ಮತ್ತು ವೈಯಕ್ತಿಕ ಸಂಬಂಧಗಳ ಪ್ರಶ್ನೆ ಈಗ ಚರ್ಚಿಸಲ್ಪಡುತ್ತಿದೆ.ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಅವರು ಉನ್ನತಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ ಬಿ ಪಾಟೀಲ್ ಅವರನ್ನು ರಹಸ್ಯವಾಗಿ ಭೇಟಿ ಆಗಿದ್ದಾರೆ ಎಂದು ಪತ್ರಕರ್ತರ ಮುಂದೆ ಹೇಳಿದ್ದು ವಿವಾದವನ್ನು ಸೃಷ್ಟಿಸಿದೆ.ಡಾ.ಸಿ.ಎನ್ ಅಶ್ವತ್ಥನಾರಾಯಣ ಮತ್ತು ಎಂ ಬಿ ಪಾಟೀಲ್ ಅವರಿಬ್ಬರು ಈ ರಹಸ್ಯಭೇಟಿಯನ್ನು ಅಲ್ಲಗಳೆದಿದ್ದಾರಾದರೂ ಎಂ ಬಿ ಪಾಟೀಲ್ ಅವರು ಡಾ.ಅಶ್ವತ್ಥನಾರಾಯಣ ಅವರ ಮತ್ತು ತಮ್ಮ ನಡುವೆ ವೈಯಕ್ತಿಕ ಸ್ನೇಹ,ಬಾಂಧವ್ಯ ಇದೆ,ಭೇಟಿ ಆದರೆ ತಪ್ಪೇನು ಎಂದೂ ಪ್ರಶ್ನಿಸಿದ್ದಾರೆ.

ಎಂ ಬಿ ಪಾಟೀಲ್ ಅವರು ಹೇಳಿದ್ದು ಸರಿ.ರಾಜಕಾರಣಿಗಳು ಎಲ್ಲರಂತೆ ಮನುಷ್ಯರೆ! ರಾಜಕೀಯ ಒಲವು- ನಿಲುವುಗಳು,ಪ್ರತಿನಿಧಿಸುವ ಪಕ್ಷಗಳು ಬೇರೆ ಆಗಿರಬಹುದಾದರೂ ಮೂಲತಃ ಅವರೂ ಮನುಷ್ಯರೆ,ಮನುಷ್ಯ ಸಂಬಂಧಗಳನ್ನು ಇಟ್ಟುಕೊಳ್ಳಬೇಕಾದವರೆ.ರಾಜಕಾರಣವೆ ಬೇರೆ,ಮನುಷ್ಯ ಸಂಬಂಧಗಳೇ ಬೇರೆ.

ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ ಅವರ 75 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭಾಗವಹಿಸಿದ್ದಲ್ಲದೆ ಯಡಿಯೂರಪ್ಪನವರ ಹೋರಾಟದ ಬದುಕಿನ ಮಹಾಗಾಥೆಯನ್ನು ಹೊಗಳಿದ್ದರು.ಇದು ಬಹಳಷ್ಟು ಜನರ ಅಚ್ಚರಿಗೆ ಕಾರಣವಾಗಿತ್ತು.ವೇದಿಕೆಯಲ್ಲೇ ಸಿದ್ರಾಮಯ್ಯನವರು ಸ್ಪಷ್ಟನೆ ನೀಡಿದ್ದರು ‘ ರಾಜಕೀಯವೇ ಬೇರೆ,ವೈಯಕ್ತಿಕ ಸಂಬಂಧಗಳೇ ಬೇರೆ.ವೈಯಕ್ತಿಕ ಸಂಬಂಧಗಳ ಸೆಳೆತದಿಂದ ನಾನು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ’ ಎಂದು.ಸಿದ್ರಾಮಯ್ಯನವರ ನಿಲುವು ಸರಿಯಾಗಿತ್ತು ಮತ್ತು ಅವರು ಒಬ್ಬ ಪ್ರಬುದ್ಧ ರಾಜಕಾರಣಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.ಪ್ರಧಾನಮಂತ್ರಿಗಳಾದ ನರೇಂದ್ರಮೋದಿ ಅವರು ರಾಜ್ಯಸಭಾ ಸದಸ್ಯರಾಗಿದ್ದ ಗುಲಾಂನಬಿ ಆಜಾದ ಅವರು ನಿವೃತ್ತರಾದಾಗ ಭಾವುಕರಾಗಿ ಮಾತನಾಡಿ,ಆಜಾದ ಅವರ ಹಿರಿಮೆಯನ್ನು ಕೊಂಡಾಡಿದ್ದರು.ನಮ್ಮ ರಾಜ್ಯದ ಹಿರಿಯ ರಾಜಕಾರಣಿಗಳಾದ ದೇವೇಗೌಡರ ಸಲಹೆಯನ್ನು ಎಲ್ಲ ಪಕ್ಷದ ರಾಜಕಾರಣಿಗಳು ಪಡೆಯುತ್ತಾರೆ ಸಂದರ್ಭಾನುಸಾರ.ಸ್ವತಃ ಡಿ ಕೆ ಶಿವಕುಮಾರ ಅವರು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ,ಇತ್ತೀಚೆಗೆ ಎಸ್ ಎಂ ಕೃಷ್ಣ ಅವರ ಹುಟ್ಟುಹಬ್ಬದಂದು ಡಿ ಕೆ ಶಿವಕುಮಾರ ಅವರು ಎಸ್ ಎಂ ಕೃಷ್ಣ ಅವರ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದರು.

‌ ಎಲ್ಲ ರಾಜಕಾರಣಿಗಳ ನಡುವೆ ಒಂದಿಲ್ಲ ಒಂದು ರೀತಿಯಲ್ಲಿ ಸ್ನೇಹ,ಬಾಂಧವ್ಯ ಇರುತ್ತದೆ.ಕೆಲವರ ನಡುವೆ ಸ್ನೇಹ ಇದ್ದರೆ,ಕೆಲವರ ನಡುವೆ ಕುಲಸಂಬಂಧ ಇರುತ್ತದೆ; ಸಮಾನಮನಸ್ಕರಾಗಿರುವ ಕಾರಣದಿಂದಲೂ ಕೆಲವರು ಆತ್ಮೀಯರಾಗುತ್ತಾರೆ.ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಬೇಕು.ವಿಧಾನಸಭೆ,ಸಂಸತ್ತಿನಲ್ಲಿ ತಾವು ಪ್ರತಿನಿಧಿಸುತ್ತಿರುವ ಪಕ್ಷದ ಪರವಾಗಿ ನಿಲ್ಲಬೇಕು.ರಾಜಕೀಯ ವೇದಿಕೆಗಳಲ್ಲಿ ಒಬ್ಬರು ಮತ್ತೊಬ್ಬರನ್ನು ವಿರೋಧಿಸಬಹುದು.ಆದರೆ ವೈಯಕ್ತಿಕ ಜೀವನದಲ್ಲೂ ವಿರೋಧಿಗಳು ಆಗಿರಬೇಕು ಎಂದರೆ ಹೇಗೆ ?ಮದುವೆ,ಮಕ್ಕಳ ಜನನ,ಹುಟ್ಟುಹಬ್ಬ,ಹಿರಿಯರ ಸಾವು ಮುಂತಾದ ಸಂದರ್ಭಗಳಲ್ಲಿ ಪರಸ್ಪರ ಒಂದುಗೂಡಬೇಕಾಗುತ್ತದೆ.ಇದನ್ನು ತಪ್ಪು ಎನ್ನಲಾದೀತೆ? ರಾಜಕಾರಣ ಬದುಕಿನ ಒಂದು ಅಂಗ,ಅಂಶ; ಇಡೀ ಬದುಕೇ ರಾಜಕಾರಣವಲ್ಲ.ಬದುಕು ರಾಜಕಾರಣಕ್ಕಿಂತ ದೊಡ್ಡದು.ಸಾಮಾಜಿಕ ಸಂಬಂಧಗಳು ರಾಜಕಾರಣಕ್ಕಿಂತ ದೊಡ್ಡವು,ಬಿಗಿಯಾದ ಅಂಟಿಕೆ- ನೆಂಟಸ್ತಿಕೆಗಳಿಂದ ಬಂಧಿಸಲ್ಪಟ್ಟವುಗಳು.

ದಿವಂಗತ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ‘ ಅಜಾತಶತ್ರು’ ಎನ್ನುವ ಬಿರುದಿಗೆ ಪಾತ್ರರಾಗಿದ್ದರು.ಅವರಿಗೆ ರಾಜಕೀಯದಲ್ಲಿ ವಿರೋಧಿಗಳೇ ಇರಲಿಲ್ಲ.ಸಂಸತ್ತಿನಲ್ಲಿ ಅವರ ಕಾವ್ಯಾತ್ಮಕವಾದ ಭಾಷಣವನ್ನು ವಿರೋಧಪಕ್ಷದವರೂ ಮೆಚ್ಚುತ್ತಿದ್ದರು.ಒಳ್ಳೆಯತನವನ್ನು ಮೆಚ್ಚುವುದು ಸಂಸ್ಕೃತಿ ಮತ್ತು ಸದ್ಗುಣ.ಕರ್ನಾಟಕದ ರಾಜಕಾರಣದಲ್ಲಿ ಸಿದ್ರಾಮಯ್ಯ ಮತ್ತು ಯಡಿಯೂರಪ್ಪ ಅವರಿಬ್ಬರ ಜೊತೆ ಎಲ್ಲ ಪಕ್ಷಗಳ ರಾಜಕಾರಣಿಗಳು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅಂದರೆ ಅವರಿಬ್ಬರು ರಾಜಕಾರಣದಾಚೆ ವಿಸ್ತರಿಸಿಕೊಂಡಿದ್ದಾರೆ ತಮ್ಮ ವರ್ಛಸ್ಸಿನ ಪ್ರಭಾವಶಾಲಿ ವ್ಯಕ್ತಿತ್ವವನ್ನು.ರಾಜಕಾರಣಕ್ಕೆ ಕಟ್ಟುಬೀಳದೆ ಮನುಷ್ಯಸಂಬಂಧಗಳ ಪಾವಿತ್ರ್ಯತೆಯನ್ನು ಎತ್ತಿಹಿಡಿಯಬೇಕು.

ರಾಜಕಾರಣಿಗಳು ಐಎಎಸ್ ಅಧಿಕಾರಿಗಳನ್ನು ನೋಡಿ ಕಲಿಯಬೇಕು.ಐಎಎಸ್ ಅಧಿಕಾರಿಗಳು ಒಬ್ಬರು ಮತ್ತೊಬ್ಬರನ್ನು ಬಿಟ್ಟುಕೊಡುವುದಿಲ್ಲ.ಐಎಎಸ್ ಎನ್ನುವ ಪದನಾಮವೇ ಅವರೆಲ್ಲರಲ್ಲಿ ಗಟ್ಟಿ ಬಾಂಧವ್ಯದ ಬೆಸುಗೆಯ ಕಾರಣವಾಗುತ್ತದೆ.ಅದೇ ಆಗ ಸೇವೆ ಆರಂಭಿಸಿದ ಎ. ಸಿ ಕೇಡರಿನ ಜೂನಿಯರ್ ಐ ಎ ಎಸ್ ಅಧಿಕಾರಿಯ ಯೋಗಕ್ಷೇಮವನ್ನು ಚೀಫ್ ಸೆಕ್ರೆಟರಿ ವಿಚಾರಿಸುತ್ತಾರೆ,ನೇರವಾಗಿ ಚೀಫ್ ಸೆಕ್ರೆಟರಿ ಅವರ ಜೊತೆ ಮಾತನಾಡುವ ಅವಕಾಶವೂ ಜೂನಿಯರ್ ಐಎಎಸ್ ಅಧಿಕಾರಿಗೆ ಇದೆ.ಐಎಎಸ್ ಅಧಿಕಾರಿಗಳು ಒಬ್ಬರ ಹಿತವನ್ನು ಮತ್ತೊಬ್ಬರು ಕಾಪಾಡುತ್ತಾರೆ.ರಾಜಕಾರಣಿಗಳು ಯಾಕೆ ಹೀಗೆ ಮಾಡಬಾರದು? ರಾಜಕಾರಣಿಗಳು ಒಬ್ಬರ ಹಿತವನ್ನು ಮತ್ತೊಬ್ಬರು ಕಾಪಾಡಬೇಕು ಎಂದರೆ ಅವ್ಯವಹಾರಗಳು,ಅಕ್ರಮಗಳಲ್ಲಿ ಸಹಕರಿಸಬೇಕು ಎಂದರ್ಥವಲ್ಲ.ಸಾರ್ವಜನಿಕ ಸಂಪತ್ತಿನ ದುರ್ಬಳಕೆ ಮಾಡಿಕೊಳ್ಳುವ ಯಾರನ್ನೂ ಕ್ಷಮಿಸಬಾರದು.ಆದರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಲಿ ‘ನಾವೆಲ್ಲ ಒಂದೇ,ರಾಜಕಾರಣಿಗಳು’ ಎಂದು ಭಾವಿಸಬಾರದೇಕೆ ?

ಸಕಾರಾತ್ಮಕ ರಾಜಕಾರಣ ( positive politics) ಇಂದು ಅಗತ್ಯವಾಗಿದೆ.ಸಕಾರಾತ್ಮಕ ರಾಜಕಾರಣವೆಂದರೆ ರಾಜಕಾರಣದಾಚೆಯ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು,ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಬಂದಾಗ ಪಕ್ಷಾತೀತವಾಗಿ ಒಂದಾಗುವುದು,ಜನೋಪಯೋಗಿ ಕೆಲಸ ಕಾರ್ಯಗಳನ್ನು ಮೆಚ್ಚಿ,ಪ್ರೋತ್ಸಾಹಿಸುವುದು,ಜನಪರವಾದ ಕೆಲಸ ಕಾರ್ಯಗಳನ್ನು ಯಾವುದೇ ರಾಜಕಾರಣಿ ಮಾಡಿರಲಿ ಅಧಿಕಾರಸ್ಥ ರಾಜಕಾರಣಿ ಅಂತಹ ಒಳ್ಳೆಯ ಕೆಲಸ- ಕಾರ್ಯಗಳನ್ನು ಮುಂದುವರೆಸುವುದು. ಚುನಾವಣೆಗಳನ್ನು ಸಹ ಕ್ರೀಡಾಮನೋಭಾವದಿಂದ ತೆಗೆದುಕೊಳ್ಳಬೇಕು.ಚುನಾವಣೆಯಲ್ಲಿ ಗೆಲ್ಲುವುದು ಜನರ ಒಲವು ನಿಲುವುಗಳನ್ನು ಅವಲಂಬಿಸಿರುತ್ತದೆ.ಗೆದ್ದವರು ಸೋತವರನ್ನು ಶತ್ರುಗಳು ಎಂದು ಭಾವಿಸಬಾರದು; ಸೋತವರು ಗೆದ್ದವರನ್ನು ಆಜನ್ಮವೈರಿ ಎಂದು ಬಗೆಯಬಾರದು.ಗೆದ್ದವರು ಸೋತವರನ್ನು ಸಂತೈಸಬೇಕು,ಸೋತವರು ಗೆದ್ದವರನ್ನು ಅಭಿನಂದಿಸಬೇಕು.ಇದೇ ಮನುಷ್ಯತ್ವ.ರಾಜಕಾರಣದಾಚೆಯ ಬಾಂಧವ್ಯದ ಅಮರತ್ವ.ಮತದಾರರು ಕೂಡ ಚುನಾವಣೆಯ ಬಳಿಕ ಬದ್ಧವೈರಿಗಳು ಎಂದು ಭಾವಿಸದೆ ಚುನಾವಣೆ ಒಂದು ಆಟ ಎಂದು ತಿಳಿದುಕೊಳ್ಳಬೇಕು.ಗೆದ್ದ ರಾಜಕಾರಣಿ ಸದಾ ತಮ್ಮೊಂದಿಗೆ ಇರುವುದಿಲ್ಲ; ಸೋತ ರಾಜಕಾರಣಿ ಬಳಿ ಬರುವುದಿಲ್ಲ.ಆದರೆ ಹಳ್ಳಿಗಳಲ್ಲಿ ಜನರು ದಿನ ಬೆಳಗಾದರೆ ಪರಸ್ಪರ ಮುಖ ನೋಡಬೇಕಾಗುತ್ತದೆ,ಒಂದಿಲ್ಲ ಒಂದು ಕಾರಣಕ್ಕೆ ಒಬ್ಬರ ನೆರವು ಮತ್ತೊಬ್ಬರಿಗೆ ಬೇಕಾಗುತ್ತದೆ.ಹೀಗಿರುವಾಗ ಚುನಾವಣೆಯ ಕಾರಣದಿಂದ ಹಳ್ಳಿಗಳ ಜನರು ಹಾವು- ಮುಂಗುಸಿಗಳಂತಾಗುವುದು ಏಕೆ ?ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಗಳಿಗಾಗಿ ಐವತ್ತು ವರ್ಷಗಳ ಬಾಂಧವ್ಯ ಹಾಳು ಮಾಡಿಕೊಳ್ಳಬಾರದು.

ರಾಜಕಾರಣದಾಚೆಯ ಮನುಷ್ಯ ಸಂಬಂಧಗಳ ಬೀಜಬಿತ್ತನೆ ಹಳ್ಳಿಗಳಿಂದಲೇ ಆರಂಭವಾಗಬೇಕು.ರಾಜಕಾರಣವನ್ನು ಮೀರಿ ಆಲೋಚಿಸಿದಾಗಲೇ ಸಮಷ್ಟಿ ಕಲ್ಯಾಣದ ಆಶಯ ಸಾಕಾರವಾಗುವುದು.

12.05.2022

About The Author